‘ಇಲ್ಲಿ ಯಾವುದೂ ಶಾಶ್ವತ ಅಲ್ಲ; ದ್ವೇಷ ಕೂಡ’: ಓಲ್ಡ್ ಮ್ಯಾನ್ & ಫ್ಯಾಟ್ ಮ್ಯಾನ್  ಸಮಾಗಮದ ಕತೆ!
COVER STORY

‘ಇಲ್ಲಿ ಯಾವುದೂ ಶಾಶ್ವತ ಅಲ್ಲ; ದ್ವೇಷ ಕೂಡ’: ಓಲ್ಡ್ ಮ್ಯಾನ್ & ಫ್ಯಾಟ್ ಮ್ಯಾನ್ ಸಮಾಗಮದ ಕತೆ!

ಸಿಂಗಾಪುರದ ಸೆಂತೋಸಾ ದ್ವೀಪದಲ್ಲಿರುವ ಕೆಪೆಲ್ಲಾ ಹೋಟೆಲ್‌ನಲ್ಲಿ ಪರಸ್ಪರ ಕೈಕುಲುಕುವ ಮೂಲಕ ಜಗತ್ತಿನ ಮೇಲೆ ಆವರಿಸಿದ್ದ ಪರಮಾಣು ಯುದ್ಧದ ಭೀತಿಗೆ ತೆರೆ ಎಳೆದಿದ್ದಾರೆ. 

“ಅಮೆರಿಕ ನನ್ನ ದೇಶದ ಮೇಲೆ ಯುದ್ಧ ಸಾರಲು ಸಾಧ್ಯವಿಲ್ಲ.. ನ್ಯೂಕ್ಲಿಯರ್ ಬಾಂಬಿನ ಬಟನ್ ಯಾವಾಗ್ಲೂ ನನ್ನ ಟೇಬಲ್ ಮೇಲೆ ಇರುತ್ತೆ”: ಕಿಮ್.

“ನನ್ನ ಬಳಿಯಿರೋ ನ್ಯೂಕ್ಲಿಯರ್ ಬಾಂಬಿನ ಬಟನ್ ದೊಡ್ಡದು ಮತ್ತು ಬಲಿಷ್ಠವಾದದ್ದು.. ಅದು ಕೆಲಸ ಮಾಡುತ್ತೆ.”: ಟ್ರಂಪ್.

2018ರ ಆರಂಭದಲ್ಲಿಯೇ ಉತ್ತರ ಕೋರಿಯ ಮುಖ್ಯಸ್ಥ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಪರಸ್ಪರ ವಾಕ್ಸಮರ ನಡೆಸಿದ ಪರಿ ಇದು. ಅಣ್ವಸ್ತ್ರಗಳನ್ನ ಹೊಂದಿರೋ ಎರಡು ರಾಷ್ಟ್ರಗಳ ನಾಯಕರ ಈ ಕೀಳುಮಟ್ಟದ ವಾಗ್ಯುದ್ಧ, ಜಗತ್ತಿನಲ್ಲಿ ಪರಮಾಣು ಯುದ್ಧದ ಭೀತಿ ಸೃಷ್ಟಿಸಿತ್ತು. ಆದರೆ, ಮಂಗಳವಾರ ಟ್ರಂಪ್ ಮತ್ತು ಕಿಮ್, ಸಿಂಗಾಪುರದ ಸೆಂತೋಸಾ ದ್ವೀಪದಲ್ಲಿರುವ ಕೆಪೆಲ್ಲಾ ಹೋಟೆಲ್‌ನಲ್ಲಿ ಪರಸ್ಪರ ಕೈಕುಲುಕುವ ಮೂಲಕ ಜಗತ್ತಿನ ಮೇಲೆ ಆವರಿಸಿದ್ದ ಪರಮಾಣು ಯುದ್ಧದ ಭೀತಿಗೆ ತೆರೆ ಎಳೆದಿದ್ದಾರೆ. ಆ ಮೂಲಕ ಹೊಸ ಪ್ರಶ್ನೆಗಳಿಗೂ ಈ ಉಬಯ ದೇಶದ ನಾಯಕರ ನಡೆ ಕಾರಣವಾಗಿದೆ.

ಸೆಂತೋಸಾ ದ್ವೀಪ ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಕಳೆದ ಎರಡು ವರ್ಷಗಳಿಂದ ಹಾದಿಬೀದಿಯಲ್ಲಿ ಜಗಳವಾಡುವವರ ಮಟ್ಟದಲ್ಲಿ ಪರಸ್ಪರ ಬೈದಾಡಿಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೋರಿಯ ಮುಖ್ಯಸ್ಥ ಕಿಮ್ ಜಾಂಗ್ ಉನ್, ಹಳೆಯದನ್ನು ಬಿಟ್ಟು ಹೊಸ ಭವಿಷ್ಯದ ಕಡೆಗೆ ಮುಖಮಾಡಿದ್ದಾರೆ. ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಕುರಿತು ಮಹತ್ವದ ಚರ್ಚೆಗೆ ಭೂಮಿಕೆ ಸಿದ್ಧಮಾಡಿದ್ದಾರೆ.

ಬೆಳಗ್ಗೆ ಟ್ರಂಪ್, ಉತ್ತರ ಕೋರಿಯಾ ಮುಖ್ಯಸ್ಥ ಕಿಮ್‌ ಕೈಕುಲುಕುವ ಮೂಲಕ ಸ್ವಾಗತಿಸಿದರು. ಕಿಮ್ ಏನು ಮಾತನಾಡದೆ ಕೈ ಕುಲುಕಿ ಮುಗುಳು ನಗೆ ಬೀರಿದರು. ಬಳಿಕ ಟ್ರಂಪ್ ಸನ್ನೆಯಂತೆ ಶೃಂಗ ಸಭೆಯತ್ತ ಹೆಜ್ಜೆಹಾಕಿದರು. ಬದ್ಧವೈರಿಗಳಂತೆ ಬೈದಾಡಿಕೊಂಡ ಇಬ್ಬರು ನಾಯಕರ ಸಮಾಗಮ ಕುತೂಹಲ ಕೆರಳಿಸಿತ್ತು. 50 ನಿಮಿಷಗಳ ಕಾಲ ನಡೆದ ಶೃಂಗ ಸಭೆಯಲ್ಲಿ ಉಭಯ ನಾಯಕರು ಮತ್ತು ಎರಡು ದೇಶಗಳ ನಿಯೋಗಗಳು, ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಬಗ್ಗೆ ತಾರ್ಕಿಕ ಅಂತ್ಯಕ್ಕೆ ಬರದೇ ಹೋದ್ರು ಮಹತ್ವದ ಸಮಗ್ರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

‘ಇಲ್ಲಿ ಯಾವುದೂ ಶಾಶ್ವತ ಅಲ್ಲ; ದ್ವೇಷ ಕೂಡ’: ಓಲ್ಡ್ ಮ್ಯಾನ್ & ಫ್ಯಾಟ್ ಮ್ಯಾನ್  ಸಮಾಗಮದ ಕತೆ!

ಕಿಮ್-ಟ್ರಂಪ್ ಒಪ್ಪಂದದಲ್ಲಿ ಏನಿದೆ?:

ಮಹತ್ವದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ಉತ್ತರ ಕೊರಿಯಾ ಮೇಲೆ ವಿಧಿಸಲಾಗಿರೋ ನಿರ್ಬಂಧವನ್ನು ಹಿಂತೆಗೆದುಕೊಳ್ಳುವ ಸುಳಿವು ನೀಡಿದರು. ಜೊತೆಗೆ ಉತ್ತರ ಕೋರಿಯ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಪ್ರಕ್ರಿಯೆಗಳು ಸುಗಮವಾಗಿ ನಡೆಸಲು ಅಮೆರಿಕ ಸೇನೆ, ದಕ್ಷಿಣ ಕೋರಿಯಾ ಜತೆಗೆ ನಡೆಸುತ್ತಿರೋ ಜಂಟಿ ಸಮರಾಭ್ಯಾಸ ನಿಲ್ಲಿಸುವುದಾಗಿ ಹೇಳಿದರು. ಅದರೆ, ಇಬ್ಬರು ನಾಯಕರು ಸಹಿ ಹಾಕಿದ ಸಮಗ್ರ ಒಪ್ಪಂದದಲ್ಲಿ ಏನಿದೆ ಅಂತಾ ಟ್ರಂಪ್ ಹೇಳಲಿಲ್ಲ. ಒಪ್ಪಂದದ ಪ್ರತಿಯಲ್ಲಿ ಈ ಕೆಳಗಿನ ನಾಲ್ಕು ಮಹತ್ವದ ಅಂಶಗಳು ಅಡಕವಾಗಿವೆ ಅಂತಾ ವರದಿಗಳು ಹೇಳುತ್ತಿವೆ:

ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್. 
ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್. 

೧) ಕೋರಿಯ ದ್ವೀಪದಲ್ಲಿ ಸಂಪೂರ್ಣ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಸಾಧಿಸಲು ಉತ್ತರ ಕೋರಿಯಾ ಬದ್ಧವಾಗಿರುವುದು.

೨) ಶಾಂತಿ ಮತ್ತು ಸಮೃದ್ಧಿಗಾಗಿ ಎರಡು ದೇಶಗಳ ಜನರ ಆಶಯದಂತೆ ಹೊಸ ದ್ವಿ ಪಕ್ಷೀಯ ಸಂಬಂಧ ಸ್ಥಾಪಿಸಲು ಎರಡು ದೇಶಗಳು ಶ್ರಮಿಸುವುದು.

೩) ಕೋರಿಯಾ ದ್ವೀಪದಲ್ಲಿ ಶಾಂತಿ ಮತ್ತು ಸ್ಥೀರತೆ ಸ್ಥಾಪಿಸಲು ಎರಡು ದೇಶಗಳು ಪ್ರಯತ್ನಿಸುವುದು.

೪) ಕೋರಿಯಾ ಯುದ್ಧದಲ್ಲಿ ಮೃತಪಟ್ಟ ಅಮೆರಿಕದ ಸೈನಿಕರ ಕಳೇಬರಗಳನ್ನು ಅಮೆರಿಕಕ್ಕೆ ನೀಡುವುದು.

ಈ ನಾಲ್ಕು ಅಂಶಗಳು ಟ್ರಂಪ್ ಮತ್ತು ಕಿಮ್ ಸಹಿ ಹಾಕಿರೋ ಒಪ್ಪಂದಲ್ಲಿ ಇವೆ. “ಉತ್ತರ ಕೋರಿಯಾ ದೈತ್ಯ ಸಾಮರ್ಥ್ಯ ಹೊಂದಿದೆ. ಕಿಮ್ ಜಾಂಗ್ ಉನ್ ಉತ್ತಮ ಕೆಲಸಗಳನ್ನ ಮಾಡಲಿ ಎಂದು ನಾನು ಬಯಸುತ್ತೇನೆ. ನನ್ನ ಮಾತುಗಳನ್ನ ಕಿಮ್ ಅರ್ಥ ಮಾಡಿಕೊಳ್ಳುತ್ತಾರೆ ಅಂತಾ ನಾನು ಭಾವಿಸಿದ್ದೇನೆ” ಎಂದು ಟ್ರಂಪ್ ಹೇಳಿದ್ರು. ಆದ್ರೆ ಒಪ್ಪಂದದ ಬಗ್ಗೆ ಹೆಚ್ಚಿಗೆ ಮಾತನಾಡಲಿಲ್ಲ.

ದಕ್ಷಿಣ ಕೋರಿಯಾ ಮತ್ತು ಉತ್ತರ ಕೋರಿಯಾದ ರಾಜತಾಂತ್ರಿಕರು ಪರಸ್ಪರ ವೈರತ್ವ ಬದಿಗಿಟ್ಟು ಸಿಯೋಲ್‌ನಲ್ಲಿ ಸಭೆ ನಡೆಸಿದ್ದಾಗಲೇ ಇಂತಹದೊಂದು ಸಭೆಯ ಸುಳಿವು ನೀಡಿದ್ದರು. ಆದರೆ, ಈ ಐತಿಹಾಸಿಕ ಒಪ್ಪಂದದ ಹಿಂದೆ ಸಾಕಷ್ಟು ಪ್ರಶ್ನೆಗಳು ಹಾಗೇ ಉಳಿದಿವೆ. ಯಾವಾಗ ಮತ್ತು ಹೇಗೆ ಉತ್ತರ ಕೋರಿಯಾ ತನ್ನಲ್ಲಿರುವ ಅಣ್ವಸ್ತ್ರಗಳನ್ನ ನಾಶ ಮಾಡಲಿದೆ ಎನ್ನುವ ಅಂಶ ಒಪ್ಪಂದದಲ್ಲಿಲ್ಲ. ಉತ್ತರ ಕೋರಿಯಾದ ಅಣ್ವಸ್ತ್ರಗಳ ನಾಶವನ್ನು ಅಮೆರಿಕ ಹೇಗೆ ಪರಿಶೀಲಿಸುತ್ತೆ ಅನ್ನೋ ಅಂಶವೂ ಉಲ್ಲೇಖವಾಗಿಲ್ಲ. ಆದರೆ ಕೋರಿಯಾ ದ್ವೀಪದಲ್ಲಿ ನಡೆದುಕೊಂಡು ಬಂದ 70 ವರ್ಷಗಳ ಅನಿಶ್ಚಿತ ಆಡಳಿತಾತ್ಮ ಪರಿಸ್ಥಿತಿಗಳಿಗೆ ಪೂರ್ಣ ವಿರಾಮ ಹಾಕುವ ಮುನ್ಸೂಚನೆಯಂತೂ ಈ ಒಪ್ಪಂದದಿಂದ ಸಿಕ್ಕಿದೆ.

ಸದ್ಯ, ಎಲ್ಲವೂ ಶಾಂತಿಯುತ ಅಂತ್ಯಕ್ಕೆ ಬಂದಂತೆ ಭಾಸವಾಗುತ್ತಿದೆ. ಉತ್ತರ ಕೋರಿಯಾವನ್ನು ತನ್ನ ದೈತ್ಯ ಮಿಲಿಟರಿ ಶಕ್ತಿಯಿಂದ ಬೆದರಿಸುವಲ್ಲಿ ಸೋತ ಟ್ರಂಪ್, ಅಮೆರಿಕವನ್ನು ಪರಮಾಣು ಮತ್ತು ಕ್ಷೀಪಣಿ ಪರೀಕ್ಷೆ ಮೂಲಕ ಬೆದರಿಸಲು ಆಗದ ಕಿಮ್ ಪರಸ್ಪರ ಮಾಡಿಕೊಂಡ ರಾಜೀ ಕಬೂಲಿ ಇದು. ಆಡಳಿತ ವಿಚಾರ ಬಂದಾಗ ಹೆಚ್ಚು ಕಡಿಮೆ ಸರ್ವಾಧಿಕಾರಿ ನಡೆವಳಿಕೆಗಳನ್ನು ಈ ಇಬ್ಬರೂ ನಾಯಕರು ಪ್ರದರ್ಶಿಸಿಕೊಂಡು ಬಂದಿದ್ದಾರೆ. ಹೀಗಾಗಿ ಇಂತಹ ವ್ಯಕ್ತಿಗತ ನೆಲೆಯ ರಾಜಕಾರಣಿಗಳು ನಡೆಸಿದ ಈ ಶಾಂತಿ ಒಪ್ಪಂದದ ಸಾರ್ಥಕತೆ ಹಾಗೂ ಆಯುಷ್ಯವನ್ನು ಗಮನಿಸಬೇಕಿದೆ.