‘ಸಿಲಿಕಾನ್ ಸಿಟಿ ಚರಂಡಿ ನೀರು ಕುಡಿಯಲು ಯೋಗ್ಯನಾ?’: ಕೆಸಿ ವ್ಯಾಲಿಯಿಂದ ಆತಂಕದ ಪತ್ರ
COVER STORY

‘ಸಿಲಿಕಾನ್ ಸಿಟಿ ಚರಂಡಿ ನೀರು ಕುಡಿಯಲು ಯೋಗ್ಯನಾ?’: ಕೆಸಿ ವ್ಯಾಲಿಯಿಂದ ಆತಂಕದ ಪತ್ರ

ಈಗಾಗಲೇ ಕೆಸಿ ವ್ಯಾಲಿಯ ನೀರು ಕುಡಿಯುತ್ತಿರುವ ಫೋಟೋಗಳು ಹರಿದಾಡುತ್ತಿದ್ದು, ಮುಂದಾಗಬಹುದಾದ ಪರಿಣಾಮಗಳ ಎಚ್ಚರಿಕೆಯ ಗಂಟೆಯಂತಿದೆ ಈ ಬಹಿರಂಗ ಪತ್ರ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಕನಸು ಇತ್ತೀಚೆಗೆ ನನಸಾಗಿದೆ. ಕೆಸಿ ವ್ಯಾಲಿ ಮೂಲಕ ಬರಪೀಡಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ನೀರು ಹರಿಸುವ ಕನಸಿನ ಯೋಜನೆಯ ಪ್ರಾಯೋಗಿಕ ಉದ್ಘಾಟನೆ ಮೊನ್ನೆ ತಾನೇ ನೆರವೇರಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಮಂತ್ರಿ ಈಗಿನ ಸ್ಪೀಕರ್ ರಮೇಶ್ ಕುಮಾರ್ ತಮ್ಮ ತವರು ಜಿಲ್ಲೆಗೆ ಕೆಸಿ ವ್ಯಾಲಿಯಿಂದ ನೀರು ಬಂದಾಗ ಭಾವುಕರಾಗಿ ಕಣ್ಣೀರಿಟ್ಟರು. ಸಾರ್ಥಕ್ಯ ಭಾವವೊಂದು ಅವರಲ್ಲಿ ಮೂಡಿತ್ತು. ಜನ ಅಂತೂ ತಮ್ಮ ಹಳ್ಳಿಗೆ ನೀರು ಬಂತು, ತಮ್ಮ ಬವಣೆ ನೀಗಲಿದೆ ಎಂಬ ಸಂತೋಷದಲ್ಲಿದ್ದಾರೆ.

ಇದರ ನಡುವೆ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ, ಸಾರ್ವಜನಿಕವಾಗಿ ಕೋಲಾರ ಜಿಲ್ಲಾಧಿಕಾರಿ ಸತ್ಯವತಿ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ಕೆಸಿ ವ್ಯಾಲಿಯಿಂದ ಪ್ರಾಯೋಗಿಕವಾಗಿ ಹರಿಸಲಾಗುತ್ತಿರುವ ನೀರು ಕುಡಿಯಲು ಯೋಗ್ಯವೋ ಇಲ್ಲವೋ ಎಂಬುದನ್ನು ಪ್ರಮಾಣೀಕರಿಸಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈಗಾಗಲೇ ಕೆಸಿ ವ್ಯಾಲಿಯ ನೀರು ಕುಡಿಯುತ್ತಿರುವ ಫೋಟೋಗಳು ಹರಿದಾಡುತ್ತಿದ್ದು, ಮುಂದಾಗಬಹುದಾದ ಪರಿಣಾಮಗಳ ಎಚ್ಚರಿಕೆಯ ಗಂಟೆಯಂತಿದೆ ಈ ಬಹಿರಂಗ ಪತ್ರ.

ಕೆಸಿ ವ್ಯಾಲಿ ಪ್ರಾಜೆಕ್ಟ್‌ನ ಒಂದು ನೋಟ. 
ಕೆಸಿ ವ್ಯಾಲಿ ಪ್ರಾಜೆಕ್ಟ್‌ನ ಒಂದು ನೋಟ. 

ಯೋಜನೆಯ ಮೊದಲ ಹಂತದಲ್ಲಿ ಲಕ್ಷ್ಮೀಸಾಗರ ಕೆರೆಗೆ ನೀರು ಹರಿಸಲಾಗಿದ್ದು, “ಈ ನೀರನ್ನು ಜನ ಜಾನುವಾರುಗಳ ಬಳಕೆಗೆ ಉಪಯೋಗಿಸಬಹುದಾಗಿದೆ,” ಎನ್ನುತ್ತಾರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು. ಕೆರೆಗೆ ನೀರು ತುಂಬುತ್ತಿರುವುದರಿಂದ ಅಂತರ್ಜಲದ ಮಟ್ಟವೂ ಹೆಚ್ಚಾಗಲಿದೆ ಎಂಬ ವಿಶ್ವಾಸ ಇದೆ.

ಪ್ರಸ್ತುತ ಈ ಭಾಗದಲ್ಲಿ ಒಂದೂವರೆ ಸಾವಿರ ಮೀಟರನಷ್ಟು ಆಳ ತೋಡಿದರೂ ಕುಡಿಯಲು ನೀರು ಸಿಗುತ್ತಿಲ್ಲ. ಕಳೆದ ವರ್ಷ ಸುರಿದ ಮಳೆ ಹಲವು ವರ್ಷಗಳಿಂದ ಬತ್ತಿದ್ದ ಕೆರೆಗಳನ್ನು ಭರ್ತಿ ಮಾಡಿತ್ತು. ಆದಾಗ್ಯೂ ಮಳೆಯನ್ನು ಆಶ್ರಯಿಸಿ ಬದುಕುವ ಪರಿಸ್ಥಿತಿ ಇಲ್ಲಿಲ್ಲ. ಹೀಗಾಗಿಯೇ ಕೆಸಿ ವ್ಯಾಲಿ ಯೋಜನೆ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇತ್ತು. ಅಥವಾ ಅಂತಾ ನಿರೀಕ್ಷೆಯನ್ನು ಸರ್ಕಾರ ಮೂಡಿಸಿತ್ತು.

ಆದರೆ ಈ ಯೋಜನೆಗೆ ಮೊದಲಿಂದಲೂ ಕೆಲವು ಹೋರಾಟಗಾರು ವಿರೋಧಿಸುತ್ತಲೇ ಬಂದಿದ್ದರು. ಮತ್ತು ಯೋಜನೆಯ ನೀರು ಕೆರೆ ತುಂಬಿದರೆ ಏನಾಗಬಹುದು ಎಂಬುದರ ಪ್ರಾತಕ್ಷೆಕೆಗಳನ್ನು ನೀಡುತ್ತಲೇ ಬಂದಿದ್ದಾರೆ.

ಸದ್ಯ ಲಕ್ಷ್ಮೀಸಾಗರ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಯುತ್ತಿದ್ದು ಈ ನೀರನ್ನು ಜನ ಕುಡಿಯಲು ಬಳಸುತ್ತಿದ್ದಾರೆ.

ಈ ನೀರು ಕುಡಿಯಲು ಯೋಗ್ಯವೋ ಇಲ್ಲವೋ ಎಂಬುದು ಮಾತ್ರ ಗೊತ್ತಿಲ್ಲ. ಜಿಲ್ಲಾಧಿಕಾರಿಗಳು ಈ ಕೂಡಲೇ ನೀರನ್ನು ಕುಡಿಯಬೇಕೋ? ಬೇಡವೋ? ಎಂಬುದನ್ನು ಸ್ಪಷ್ಟಪಡಿಸಬೇಕು.
ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಹೋರಾಟಗಾರ. 

‘ಸಮಾಚಾರ’ದ ಜೊತೆ ಮಾತಾನಾಡಿದ ಆಂಜನೇಯ ರೆಡ್ಡಿ, “ಬೆಂಗಳೂರಿನ ಒಳಚರಂಡಿ ನೀರನ್ನು ಸಂಸ್ಕರಿಸಿ ಕೆರೆಗೆ ಬಿಡುತ್ತಿರುವುದರ ಬಗ್ಗೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ ಆ ನೀರು ಕುಡಿಯಲು ಯೋಗ್ಯವೋ,ಇಲ್ಲವೋ ಎಂಬುದನ್ನು ತಿಳಿಸಬೇಕು, ಜನರ ಜೀವದ ಜೊತೆ ಚೆಲ್ಲಾಟ ಆಡಬಾರದು. ಬೆಂಗಳೂರು ಒಳಚರಂಡಿ ನೀರಿನಲ್ಲಿ ಕೈಗಾರಿಕೆಗಳ ರಾಸಾಯನಿಕಗಳು, ಮತ್ತು ಅವು ಶೇಖರಣೆ ಆಗುವ ಜಾಗದಲ್ಲಿ ಉಂಟಾಗುವ ಅನಾಹುತಗಳನ್ನು ಕಣ್ಣಾರೇ ಕಂಡಿದ್ದೀವೆ. ಒಳಚರಂಡಿ ನೀರು ಸೇರಿ ಬೆಳ್ಳಂದೂರು ಕೆರೆ ಅನೇಕ ಬಾರಿ ಹೊತ್ತಿ ಉರಿದಿದೆ. ಉರಿಯುತ್ತಲೇ ಇದೆ. ಒಳಚರಂಡಿ ನೀರಿನಲ್ಲಿ ಕೈಗಾರಿಕೆಗಳ ರಾಸಾಯನಿಕಗಳು ಸೇರಿರುವುದು ಇದಕ್ಕೆ ಕಾರಣ. ಇದೇ ನೀರನ್ನು ಟ್ರೀಟ್ ಮಾಡಿ ವ್ಯಾಲಿ ಮೂಲಕ ಕೆರೆಗಳಿಗೆ ಹರಿಸುವುದರಿಂದ ಹೆಚ್ಚು ಎಚ್ಚರಿಕೆ ಇರಬೇಕಾಗುತ್ತದೆ,” ಎಂದರು.

ಎಚ್ಚರಿಗೆ ಗಂಟೆ!
ಒಳಚರಂಡಿ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಹರಿಸುತ್ತಿರುವ ಬಗ್ಗೆ IASE ವರದಿಯೊಂದನ್ನು ಸಿದ್ದಪಡಿಸಿದ್ದು, ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುದಾಗಿ ತಿಳಿಸಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ, ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳಿಗೆ ಅನುಗುಣವಾಗಿದೆ ಎಂಬ ಹಾರಿಕೆಯ ಉತ್ತರ ಸಿಗುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

"ವ್ಯಾಲಿಯಿಂದ ಹರಿಯುತ್ತಿರುವ ನೀರು ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜನರಿಗೆ ತಿಳುವಳಿಕೆ ನೀಡುವುದರ ಜೊತೆ ತಿಳುವಳಿಕೆ ಫಲಕವನ್ನು ಕೆರೆ ಬಳಿ ಹಾಕಬೇಕಿದೆ,” ಎನ್ನುತ್ತಾರೆ ನೀರಾವರಿ ತಜ್ಞ, ಕ್ಯಾಪ್ಟನ್ ಎಸ್. ರಾಜಾರಾವ್.

“ಪ್ರಸ್ತುತ ಬೆಂಗಳೂರು ಬೆಳೆಯುತ್ತಿರುವ ರೀತಿ ಮತ್ತು ಕಾವೇರಿ ಅಂತಿಮ ತೀರ್ಪಿನಲ್ಲಿ ಹಂಚಿಕೆಯಾಗಿರುವ ಕಾವೇರಿಯಿಂದ ಬೆಂಗಳೂರಿಗೆ ಸಿಗುವ ಕುಡಿಯುವ ನೀರು ಬೆಂಗಳೂರಿಗೆ ಸಾಕಾಗುವುದಿಲ್ಲ. ಬೆಂಗಳೂರಿನ ಬೆಳವಣಿಗೆಯನ್ನು ತಡೆಯಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಇಡೀ ಬೆಂಗಳೂರಿಗೆ ಕಾವೇರಿ ನೀರೇ ಮೂಲ. ಈ ನೀರನ್ನು ನಾವು ಬಳಸಿ ಅದನ್ನು ಸಂಸ್ಕರಿಸಿ ವ್ಯಾಲಿಯ ಮೂಲಕ ಹರಿಸುತ್ತಿರುವುದರಿಂದ ಈ ನೀರನ್ನು ಕುಡಿಯುವ ಮುನ್ನ ಹಲವು ಪರೀಕ್ಷೆಗಳು ಅವಶ್ಯಕ,” ಎಂದು ಹೇಳುತ್ತಾರೆ.

“ಸಂಸ್ಕರಿಸಲ್ಪಟ್ಟ ಒಳಚರಂಡಿ ನೀರು ಕುಡಿಯಲು, ಯೋಗ್ಯವೋ ಇಲ್ಲವೋ ತಿಳಿಸುವುದರ ಜೊತೆ ಮೊದಲ ಪ್ರಯೋಗಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಒಳಪಡಬೇಕು. ರಾಜಕಾರಣಿಗಳು ಮತ್ತು ಅಧಿಕಾರಿಗಳು ನಡೆಸುವ ಮೀಟಿಂಗ್ ಗಳಲ್ಲಿ ಬಳಕೆಯಾಗುವ ಮಿನರಲ್ ವಾಟರ್ ಬಾಟಲಿಗಳ ಜಾಗವನ್ನು ಸಂಸ್ಕರಿಸಲ್ಪಟ್ಟ ಈ ನೀರು ತುಂಬಬೇಕು. ಮೊದಲು ಇವರು ಬಳಸಿ ನಂತರ ಜನರಿಗೆ ಕುಡಿಯಲು ತಿಳಿಸಬೇಕು.’’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಕ್ಯಾ. ಎಸ್ ರಾಜಾರಾವ್.

ಕೆಸಿ ವ್ಯಾಲಿ ಯೋಜನೆಯ ಇನ್ನೊಂದು ನೋಟ. ಇದೇ ನೀರನ್ನು ಜನ ಈಗ ಕುಡಿಯಲೂ ಬಳಸುತ್ತಿದ್ದಾರೆ. 
ಕೆಸಿ ವ್ಯಾಲಿ ಯೋಜನೆಯ ಇನ್ನೊಂದು ನೋಟ. ಇದೇ ನೀರನ್ನು ಜನ ಈಗ ಕುಡಿಯಲೂ ಬಳಸುತ್ತಿದ್ದಾರೆ. 

ಕೆ.ಸಿ ವ್ಯಾಲಿ ಯೋಜನೆ ಎಂದರೇನು?

ಬೆಂಗಳೂರಿನ ಒಳಚರಂಡಿ ನೀರನ್ನು ಸಂಸ್ಕರಿಸಿ ಅದನ್ನು ಕೋರಮಂಗಲ- ಚಲ್ಲಘಟ್ಟ ವ್ಯಾಲಿ ಮೂಲಕ ಕೋಲಾರದ ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ಕೆಸಿ ವ್ಯಾಲಿ ಯೋಜನೆ ಎಂದು ಕರೆಯಲಾಗಿದೆ. ಕೋರಮಂಗಲ, ಚಲ್ಲಘಟ್ಟ ವ್ಯಾಲಿ ಮೂಲಕ ಕೋಲಾರದ ೧೨೬ ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ೨೦೧೬ರಲ್ಲಿ ಕೈಗೆತ್ತಿಕೊಳ್ಳಲಾಯಿತು. ೧೨೮೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಈ ಯೋಜನೆಯಡಿ ಕೋಲಾರ ಜಿಲ್ಲೆಯ ೧೨೧ ಮತ್ತು ಚಿಂತಾಮಣಿ ತಾಲ್ಲೂಕಿನ ೫ ಕೆರೆಗಳಿಗೆ ಒಳಚರಂಡಿ ನೀರನ್ನು ಸಂಸ್ಕರಿಸಿ ತುಂಬಿಸುವ ನೀಲನಕ್ಷೆ ಸಿದ್ದವಾಗಿತ್ತು.

ಒಂದೇ ವರ್ಷದಲ್ಲೇ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಯೋಜನೆಯ ಕಾಮಗಾರಿ ಆರಂಭವಾಗಿ ೨ ವರ್ಷಗಳ ನಂತರ ಒಂದು ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಯುತ್ತಿದೆ. ಹೈದರಾಬಾದ್‌ ಮೂಲದ ಮೇಘ ಎಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿ. ಗುತ್ತಿಗೆ ಪಡೆದುಕೊಂಡಿದೆ.

ಯೋಜನೆಯ ಯಶಸ್ಸಿನ ಬಗ್ಗೆ ಕಣ್ಣೀರಾಗುವ ಜೊತೆ ಜನರ ಜೀವನದ ಮೇಲಾಗುವ ಪರಿಣಾಮಗಳ ಬಗ್ಗೆಯೂ ಕಣ್ಣಾಗಿರಬೇಕಾದ ಸಮಯ ಇದು. ಈ ಬಗ್ಗೆ ‘ಸಮಾಚಾರ’ ಸತ್ಯವತಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಸಂಪರ್ಕ ಸಾಧ್ಯವಾಗಲಿಲ್ಲ. ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.