samachara
www.samachara.com
ಜನಪ್ರತಿನಿಧಿಗಳ ಶಿಕ್ಷಣದ ಹಂಗು: ಅರ್ಹತೆ, ಸಾಧ್ಯತೆ, ಅಗತ್ಯತೆಗಳ ಸುತ್ತ...
COVER STORY

ಜನಪ್ರತಿನಿಧಿಗಳ ಶಿಕ್ಷಣದ ಹಂಗು: ಅರ್ಹತೆ, ಸಾಧ್ಯತೆ, ಅಗತ್ಯತೆಗಳ ಸುತ್ತ...

ಚುನಾವಣೆಗೆ ಸ್ಪರ್ಧಿಸುವವರಿಗೆ ಶೈಕ್ಷಣಿಕ ಅರ್ಹತೆ ನಿಗದಿಪಡಿಸಬೇಕೆನ್ನುವ ವಾದ, ಶಿಕ್ಷಿತರೆಲ್ಲರೂ ಒಳ್ಳೆಯವರು ಎಂಬ ಆದರ್ಶದ ಆಧಾರದ್ದು. ಆದರೆ, ಭಾರತದ ವಾಸ್ತವ ಆ ಆದರ್ಶಕ್ಕಿಂತ ತುಂಬಾ ಭಿನ್ನವಾಗಿದೆ.

ದಯಾನಂದ

ದಯಾನಂದ

ಜನಪ್ರತಿನಿಧಿಗಳಿಗೆ ಶಿಕ್ಷಣ ಬೇಕೋ, ಬೇಡವೋ ಎಂಬ ಚರ್ಚೆಯೊಂದು ಈಗ ಮುನ್ನೆಲೆಗೆ ಬಂದಿದೆ. ಶಿಕ್ಷಿತರು ಜನರ ಪ್ರತಿನಿಧಿಗಳಾದರೆ ಆಡಳಿತ ಯಂತ್ರ ಸಮರ್ಥವಾಗಿ ನಡೆಯುತ್ತದೆ ಎಂಬ ವಾದವೊಂದು ಹರಿದಾಡುತ್ತಿದೆ. ಆದರೆ ನಿಜಕ್ಕೂ ಶಿಕ್ಷಿತರ ಕೈಗೆ ಅಧಿಕಾರ ಸಿಕ್ಕಾಗೆಲ್ಲಾ ಉತ್ತಮ ಆಡಳಿತ ಸಿಕ್ಕಿದೆಯೇ ಎಂಬ ಪ್ರಶ್ನೆಯೂ ಈ ವಾದದ ಬೆನ್ನಲ್ಲೇ ಎದ್ದಿದೆ.

ಜನಪ್ರತಿನಿಧಿಗಳಿಗೆ ಕನಿಷ್ಠ ಶಿಕ್ಷಣ ಬೇಕು ಎಂಬ ವಾದದ ಹಿಂದೆ ಶಿಕ್ಷಿತರೆಲ್ಲರೂ ಒಳ್ಳೆಯದನ್ನೇ ಹಾಗೂ ಶ್ರೇಷ್ಠವಾದುದನ್ನೇ ಮಾಡುತ್ತಾರೆ ಎಂಬ ಆದರ್ಶಭರಿತ ಭ್ರಮೆಯೊಂದಿದೆ. ಜನರಿಂದ ಆರಿಸಿಹೋಗುವವರಿಗೆ ಕನಿಷ್ಠ ಶಿಕ್ಷಣ ಇರಬೇಕೆಂದರೆ, ಅವರನ್ನು ಆಯ್ಕೆ ಮಾಡಿ ಕಳಿಸುವವರಿಗೂ ಕನಿಷ್ಠ ಶಿಕ್ಷಣ ಇರಬೇಕು ಎಂಬ ತರ್ಕಕ್ಕೂ ಈ ವಾದ ಅವಕಾಶ ಮಾಡಿಕೊಟ್ಟಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನು ಪ್ರತಿನಿಧಿಸುವವರಿಗೆ ಶೈಕ್ಷಣಿಕ ಅರ್ಹತೆಯನ್ನು ಮಾನದಂಡವಾಗಿಸಿಲ್ಲ. ‘ಕನಿಷ್ಠ ವಯೋಮಿತಿಯ ಜತೆಗೆ ಮಾನಸಿಕವಾಗಿ ಶಕ್ತರಾಗಿದ್ದು, ಅಪರಾಧಿಗಳಾಗಿಲ್ಲದವರು ಜನರನ್ನು ಪ್ರತಿನಿಧಿಸಬಹುದು’ ಎನ್ನುತ್ತದೆ ಭಾರತದ ಪ್ರಜಾಪ್ರತಿನಿಧಿ ಕಾಯ್ದೆ.

ಚುನಾವಣಾ ಸುಧಾರಣೆಯ ಶಿಫಾರಸುಗಳಲ್ಲೂ ಈವರೆಗೆ ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಇರಬೇಕು ಎಂಬುದನ್ನು ಹೇಳಲಾಗಿಲ್ಲ. ಭಾರತದ ಚುನಾವಣಾ ಆಯೋಗ ಕೇಂದ್ರ ಸರಕಾರ ಸಲ್ಲಿಸಿರುವ ಚುನಾವಣಾ ಸುಧಾರಣೆಯ ಶಿಫಾರಸುಗಳಲ್ಲಿ ಕೂಡಾ ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಬೇಕು ಎಂಬುದನ್ನು ಹೇಳಿಲ್ಲ.

ಭಾರತದಲ್ಲಿ ವಿಧಾನಸಭಾ/ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಇರಬೇಕಾದ ಪ್ರಮುಖ ಅರ್ಹತೆಗಳು ಇವು:

  • ಭಾರತೀಯ ಪ್ರಜೆಯಾಗಿರಬೇಕು
  • 25 ವರ್ಷ ವಯಸ್ಸಾಗಿರಬೇಕು
  • ಭಾರತದ ಮತದಾರನಾಗಿರಬೇಕು
  • 3 ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗಿರಬಾರದು
  • ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಾರದು

ಚುನಾವಣೆಗೆ ಸ್ಪರ್ಧಿಸಲು ಶೈಕ್ಷಣಿಕ ಅರ್ಹತೆಯನ್ನು ವಿಧಿಸುವುದರಲ್ಲಿ ಅರ್ಥವಿಲ್ಲ, ಭಾರತದಂಥ ದೇಶದ ಪ್ರಸ್ತುತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ಬೇಕು ಎಂಬ ವಾದವೇ ಸರಿಯಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

“ಜನರನ್ನು ಪ್ರತಿನಿಧಿಸಲು ಮತ್ತು ಆಡಳಿತ ನಿರ್ವಹಣೆ ಮಾಡಲು ನೈತಿಕ ಹಾಗೂ ಸೈದ್ಧಾಂತಿಕ ಅರ್ಹತೆ ಇದ್ದರೆ ಸಾಕು. ಶೈಕ್ಷಣಿಕ ಅರ್ಹತೆ ಬೇಕು ಎಂಬುದು ಅರ್ಥಹೀನ. ಇಷ್ಟಕ್ಕೂ ಜನಪ್ರತಿನಿಧಿಗಳಿಗೆ ಪ್ರಸ್ತುತ ವ್ಯವಸ್ಥೆಯ ಔಪಚಾರಿಕ ಶಿಕ್ಷಣ ಅಗತ್ಯವೇ ಅಥವಾ ನೈತಿಕ, ಸೈದ್ಧಾಂತಿಕ ಶಿಕ್ಷಣ ಇದ್ದರೆ ಸಾಕೇ ಎಂಬ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಹರೀಶ್‌ ರಾಮಸ್ವಾಮಿ.

“ಶಿಕ್ಷಿತರೆಲ್ಲರೂ ಅಥವಾ ಉನ್ನತ ಶಿಕ್ಷಣ ಪಡೆದವರೆಲ್ಲರೂ ಉನ್ನತವಾದುದನ್ನೇ ಮಾಡುತ್ತಾರೆ ಎನ್ನುವ ಮಾತು ಸರಿಯಲ್ಲ. ಆ ವಾದ ನಿಜವೇ ಆಗಿದ್ದಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳೂ ಅಭಿವೃದ್ಧಿಯಾಗಬೇಕಿತ್ತು. ಏಕೆಂದರೆ ಕುಲಪತಿ ಹುದ್ದೆಗೆ ಏರುವವರೆಲ್ಲರೂ ಅತ್ಯುನ್ನತ ಶಿಕ್ಷಣ ಪಡೆದವರೇ ಆಗಿರುತ್ತಾರೆ. ಆದರೆ, ವ್ಯವಸ್ಥೆಯೊಳಗೆ ಶೈಕ್ಷಣಿಕ ಅರ್ಹತೆಯೇ ಮುಖ್ಯವಾಗುವುದಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಬೇಕು ಎಂಬ ಚರ್ಚೆಯೇ ಅನಗತ್ಯ” ಎಂಬುದು ಅವರ ಅಭಿಪ್ರಾಯ.

ಪ್ರಜಾಪ್ರಭುತ್ವದಲ್ಲಿ ನಾಗರಿಕರು ಸರಕಾರದ ಮೇಲೆ ಕಣ್ಣಿಟ್ಟು ಕಾಯುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಬೇಕು ಎಂದು ವಾದಿಸುವುದರಲ್ಲಿ ಅರ್ಥವಿಲ್ಲ.
- ಡಾ. ಹರೀಶ್ ರಾಮಸ್ವಾಮಿ, ಹಿರಿಯ ರಾಜಕೀಯ ವಿಶ್ಲೇಷಕ

“ತಮಿಳುನಾಡಿನ ರಾಜಕಾರಣವನ್ನು ನೋಡಿದರೆ ಶಿಕ್ಷಿತರಲ್ಲದವರು ಉತ್ತಮ ಆಡಳಿತ ನೀಡಿರುವ ಉದಾಹರಣೆಗಳಿವೆ. ಅದೇ ರೀತಿ ಉನ್ನತ ಶಿಕ್ಷಣ ಪಡೆದು ಜನಪ್ರತಿನಿಧಿಗಳಾದವರು ಅಸಮರ್ಪಕ ಆಡಳಿತ ನೀಡಿರುವ ಹಾಗೂ ಕಡು ಭ್ರಷ್ಟರಾಗಿರುವ ಉದಾಹರಣೆಗಳೂ ಇವೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಶೈಕ್ಷಣಿಕ ಅರ್ಹತೆಯ ಅಗತ್ಯವಿಲ್ಲ” ಎನ್ನುತ್ತಾರೆ ಅವರು.

“ಶಿಕ್ಷಿತರೆಲ್ಲರೂ ಉತ್ತಮವಾದುದನ್ನೇ ಮಾಡುತ್ತಾರೆ ಎಂಬ ಅಪನಂಬಿಕೆ ಮೊದಲು ಸಮಾಜದಿಂದ ಹೋಗಬೇಕು. ಏಕೆಂದರೆ ಇಂದು ಅತಿ ಹೆಚ್ಚು ಭ್ರಷ್ಟಾಚಾರ ನಡೆಸುತ್ತಿರುವುದು ಶಿಕ್ಷಿತರೇ ಹೊರತು ಅನಕ್ಷರಸ್ಥರಲ್ಲ. ವೈಟ್‌ ಕಾಲರ್‌ ವಂಚಕರು ಈಗ ಹೆಚ್ಚಾಗುತ್ತಿದ್ದಾರೆ. ಸಚಿವರಿಗೆ ಯಾವ ಯೋಜನೆಗಳಲ್ಲಿ ಹೇಗೆಲ್ಲಾ ಭ್ರಷ್ಟಾಚಾರ ಮಾಡಬಹುದು ಎಂಬ ಸಲಹೆ ಕೊಡುವ ಅಧಿಕಾರಿಗಳು ಶಿಕ್ಷಿತರಲ್ಲವೇ?” ಎಂಬುದು ಅವರ ಪ್ರಶ್ನೆ.

“ಶಿಕ್ಷಣ ಎಂಬುದು ನಮ್ಮ ವೈಚಾರಿಕತೆಯನ್ನು ಸೂಕ್ಷ್ಮಗೊಳಿಸುವಂತಿರಬೇಕು. ಆದರೆ, ಪ್ರಸ್ತುತ ಶೈಕ್ಷಣಿಕ ಸ್ಥಿತಿಯನ್ನು ನೋಡಿದರೆ ಶಿಕ್ಷಣ ನಮ್ಮ ವೈಚಾರಿಕತೆಯನ್ನು ಸೂಕ್ಷ್ಮಗೊಳಿಸುತ್ತದೆ ಎನಿಸುವುದಿಲ್ಲ. ಅಲ್ಲದೆ, ಚುನಾವಣೆಗೆ ಸ್ಪರ್ಧಿಸುವವರಿಗೆ ಶೈಕ್ಷಣಿಕ ಅರ್ಹತೆ ವಿಧಿಸಬೇಕೆಂದರೆ, ಮತದಾನ ಮಾಡುವವರಿಗೂ ಶೈಕ್ಷಣಿಕ ಅರ್ಹತೆ ವಿಧಿಸಬೇಕು. ಆದರೆ, ಎಷ್ಟು ಜನ ಶಿಕ್ಷಿತರು ಮತದಾನ ಮಾಡುತ್ತಾರೆ ಎಂಬ ಪ್ರಶ್ನೆಯೂ ಮುಖ್ಯ” ಎನ್ನುತ್ತಾರೆ ರಾಮಸ್ವಾಮಿ.

“ಜನಪ್ರತಿನಿಧಿಗಳು ಶೈಕ್ಷಣಿಕ ಅರ್ಹತೆ ಪಡೆಯದಿದ್ದರೂ ಆಡಳಿತಕ್ಕೆ ಅದು ತೊಡಕಾಗಬಾರದೆಂಬ ಉದ್ದೇಶದಿಂದಲೇ ಕಾರ್ಯಾಂಗ ವ್ಯವಸ್ಥೆ ಬಂದಿದ್ದು. ಕಾರ್ಯಾಂಗದಲ್ಲಿರುವವರು ಉನ್ನತ ಶಿಕ್ಷಣ ಪಡೆದವರು. ಆದರೂ ಇನ್ನೂ ಆಡಳಿತ ವ್ಯವಸ್ಥೆ ಪೂರ್ತಿಯಾಗಿ ಸುಧಾರಿಸಿಲ್ಲ, ಭ್ರಷ್ಟಾಚಾರ ಹೆಚ್ಚುತ್ತಲೇ ಇದೆ. ಹೀಗಿರುವಾಗ ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಬೇಕು ಎಂಬ ವಾದವನ್ನು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ” ಎಂಬುದು ಅವರ ಅಭಿಪ್ರಾಯ.

‘ತಳ ಸಮುದಾಯಗಳ ಪ್ರಾತಿನಿಧ್ಯವೂ ಮುಖ್ಯ’: ಚುನಾವಣಾ ವ್ಯವಸ್ಥೆ ಎಂಬುದು ಕೇವಲ ಮೇಲ್ವರ್ಗದ ಅಥವಾ ಹಣಬಲ, ತೋಳ್ಬಲ ಇರುವವರ ಸ್ವತ್ತಾಗಬಾರದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳ ಸಮುದಾಯಗಳ ಪ್ರಾತಿನಿಧ್ಯವೂ ಮುಖ್ಯ ಎಂಬುದು ರಾಜಕಾರಣಿಗಳ ಮಾತು.

“ಜನಪ್ರತಿನಿಧಿಗಳಿಗೆ ಶೈಕ್ಷಣಿಕ ಅರ್ಹತೆ ಕಡ್ಡಾಯಗೊಳಿಸಬೇಕೆನ್ನುವ ವಾದ ಸರಿಯಲ್ಲ. ಒಂದೊಮ್ಮೆ ಅಂತಹ ನಿಮಯ ಜಾರಿಗೆ ಬಂದರೆ ಅದರಿಂದ ತಳ ಸಮುದಾಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗುತ್ತದೆ. ಶಿಕ್ಷಣ ವಂಚಿತ ಸಮುದಾಯಗಳ ಜನರ ಸಮಸ್ಯೆಗಳನ್ನು ಸರಕಾರದ ಹಂತಕ್ಕೆ ಮುಟ್ಟಿಸುವ ತಳ ಸಮುದಾಯಗಳ ಜನಪ್ರತಿನಿಧಿಗಳಿಗೂ ಪ್ರಾತಿನಿಧ್ಯ ದೊರಕಬೇಕು” ಎನ್ನುತ್ತಾರೆ ರಾಜ್ಯಸಭಾ ಸದಸ್ಯ ಡಾ. ಎಲ್‌ ಹನುಮಂತಯ್ಯ.

“ತಳ ಸಮುದಾಯಗಳ ಶಿಕ್ಷಿತರಿಗೆ ಚುನಾವಣೆಯಲ್ಲಿ ಆದ್ಯತೆ ಕೊಡುವುದು ಒಂದು ರೀತಿ ಸರಿ. ಆದರೆ, ಶಿಕ್ಷಣವೇ ಮಾನದಂಡವಾಗಿ ಚುನಾವಣೆಯನ್ನು ಎದುರಿಸಬೇಕೆನ್ನುವುದರಲ್ಲಿ ಅರ್ಥವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೇರಿ ಈ ಅವಕಾಶಕ್ಕೆ ಕಡಿವಾಣ ಹಾಕುವುದು ಸರಿಯಲ್ಲ” ಎಂಬುದು ಅವರ ಅಭಿಮತ.

ಸಮುದಾಯದಿಂದ ಜ್ಞಾನ, ಜೀವನದ ಅನುಭವ ಹಾಗೂ ನೈತಿಕ ಸಾಮರ್ಥ್ಯ ಇದ್ದರೆ ಸಾಕು ಸಮರ್ಥವಾಗಿ ಆಡಳಿತ ನಡೆಸಬಹುದು. ಆಡಳಿತ ನಡೆಸಲು ವಿದ್ಯಾರ್ಹತೆ ಮಾನದಂಡವಲ್ಲ. 
- ಡಾ. ಎಲ್‌. ಹನುಮಂತಯ್ಯ, ರಾಜ್ಯಸಭಾ ಸದಸ್ಯ

“ಖಾತೆ ಹಂಚಿಕೆ ಮಾಡಿದ್ದ ಸಂದರ್ಭದಲ್ಲಿ ಸಚಿವರು ತಮಗೆ ನೀಡಿರುವ ಖಾತೆಯನ್ನು ನಿರ್ವಹಿಸುವ ಸಾಮರ್ಥ್ಯ ಇಲ್ಲ ಎಂದು ಹೇಳಿಕೊಂಡಾಗ ಬೇರೆ ಖಾತೆ ಕೊಡುವುದು ಸೂಕ್ತ. ಆದರೆ, ಸಚಿವ ಸ್ಥಾನಕ್ಕೆ ಆಯ್ಕೆಯಾದವರಿಗೆ ಸಲಹೆ, ಸೂಚನೆ ಕೊಡಲು ಸಾಕಷ್ಟು ಶೈಕ್ಷಣಿಕ ಅರ್ಹತೆ ಪಡೆದುಕೊಂಡ ಅಧಿಕಾರಿ ವರ್ಗವಿರುತ್ತದೆ. ಹೀಗಾಗಿ ಜನಪ್ರತಿನಿಧಿಗಳ ವಿಷಯದಲ್ಲಿ ಶೈಕ್ಷಣಿಕ ಅರ್ಹತೆ ತುಂಬಾ ಮುಖ್ಯವಲ್ಲ” ಎನ್ನುತ್ತಾರೆ ಅವರು.

ಶತಶತಮಾನಗಳ ಕಾಲ ತಳ ವರ್ಗದಿಂದ ಅಕ್ಷರವನ್ನು ದೂರ ಇಟ್ಟಿದ್ದ ಮನಸ್ಥಿತಿಯೂ ಚುನಾವಣೆಗೆ ಶೈಕ್ಷಣಿಕ ಅರ್ಹತೆ ಬೇಕೆಂಬ ಈ ವಾದದ ಹಿಂದಿರಬಹುದು. ಈ ಮೂಲಕ ತಳ ವರ್ಗವನ್ನು ತಳಮಟ್ಟದಲ್ಲೇ ಉಳಿಸಿ ಆಡಳಿತದ ಅಧಿಕಾರವನ್ನು ಅಕ್ಷರಸ್ಥ ಮೇಲ್ವರ್ಗ ಮಾತ್ರ ಅನುಭವಿಸಬೇಕೆನ್ನುವ ಹುನ್ನಾರವೂ ಅಡಗಿರಬಹುದು.

ಜನರನ್ನು ಪ್ರತಿನಿಧಿಸಲು ಸೈದ್ಧಾಂತಿಕ ಆಲೋಚನೆ, ಜೀವನಾನುಭವ ಹಾಗೂ ನೈತಿಕ ಸಾಮರ್ಥ್ಯ ಇದ್ದರೆ ಸಾಕು. ಅದರ ಹೊರತಾಗಿ ಶಿಕ್ಷಣವನ್ನು ಮಾನದಂಡವಾಗಿಸಬೇಕೆಂಬ ವಾದ ಅರ್ಥಹೀನ. ಶಿಕ್ಷಣ ಇಡೀ ಸಮಾಜವನ್ನು ಉತ್ತಮಗೊಳಿಸುತ್ತದೆ ಎಂಬುದು ಒಂದು ಆದರ್ಶ ಮಾತ್ರ. ಆದರೆ, ಅದು ವಾಸ್ತವವಲ್ಲ.