ನಿಖಿಲ್ ಜೆಡಿಎಸ್‌ ಅಭ್ಯರ್ಥಿ: ರಾಮನಗರದ  ಮಣ್ಣಲ್ಲಿ ಮುಂದುವರಿದ ‘ಕುಟುಂಬ ಭಿತ್ತನೆ’
COVER STORY

ನಿಖಿಲ್ ಜೆಡಿಎಸ್‌ ಅಭ್ಯರ್ಥಿ: ರಾಮನಗರದ ಮಣ್ಣಲ್ಲಿ ಮುಂದುವರಿದ ‘ಕುಟುಂಬ ಭಿತ್ತನೆ’

ಜೆಡಿಎಸ್‌ ಎಂದರೆ ದೇವೇಗೌಡ ಅಂಡ್ ಸನ್ಸ್ ಅನ್ನುವ ಆರೋಪಗಳಿದ್ದವು. ಈಗ ಆ ಸಾಲಿಗೆ ಮೊಮ್ಮಕ್ಕಳ ಸೇರ್ಪಡೆಯೂ ಆಗಲಿದೆ. ಲಭ್ಯ ಮಾಹಿತಿ ಪ್ರಕಾರ, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ. 

ಮುಂಗಾರಿನ ಮಳೆಯಲ್ಲಿ ಹಸಿಗೊಂಡ ರಾಮನಗರ ಕ್ಷೇತ್ರದಲ್ಲಿ ಕುಟುಂಬ ಭಿತ್ತನೆ ಮುಂದುವರಿಸಲು ಜೆಡಿಎಸ್ 'ಹೈಕಮಾಂಡ್’ ತೀರ್ಮಾನ ಮಾಡಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ತೆರವಾಗುವ ರಾಮನಗರಕ್ಕೆ ನಟ, ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಹೆಚ್ಚಿವೆ. ಈ ಮೂಲಕ ‘ತವರು ಕ್ಷೇತ್ರ’ವನ್ನು ಕುಟುಂಬದ ಮಡಿಲಲ್ಲಿಯೇ ಉಳಿಸಿಕೊಳ್ಳಲು ಗೌಡರ ಕುಟುಂಬ ತೀರ್ಮಾನಿಸಿದೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ, "ನನ್ನ ಮತ್ತು ನಿಖಿಲ್ ಕುಮಾರಸ್ವಾಮಿ ಹೆಸರು ಅಭ್ಯರ್ಥಿಗಳಾಗಿ ಕೇಳಿಬರುತ್ತಿದೆ,’’ ಎಂದು ತಿಳಿಸಿದ್ದಾರೆ. ಈ ಮೂಲಕ ಪಕ್ಷದ ಮುಂದೆ ಕುಟುಂಬದ ಹೊರಗಿನ ಅಭ್ಯರ್ಥಿಗಳ ಹೆಸರುಗಳಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

“ಜೆಡಿಎಸ್‌ನಲ್ಲಿ ಮೊದಲು ಸೊರಬ ಕ್ಷೇತ್ರದಲ್ಲಿ ಸೋತ ಮಧು ಬಂಗಾರಪ್ಪ ಹೆಸರು ಕೇಳಿಬಂದಿತ್ತು. ಈ ಮೂಲಕ ಪ್ರಬಲ ಸಮುದಾಯ ಈಡಿಗರನ್ನು ಖುಷಿ ಪಡಿಸುವ ಲೆಕ್ಕಾಚಾರಗಳೂ ಕೇಳಿಬಂದಿದ್ದವು. ಆದರೆ ಒಂದು ಬಾರಿ ಹೊರಗಿನವರಿಗೆ ಕ್ಷೇತ್ರವನ್ನು ಬಿಟ್ಟು ಕೊಟ್ಟರೆ ಮತ್ತೆ ಮರಳಿ ಪಡೆಯುವುದು ಕಷ್ಟ ಎಂಬ ಚರ್ಚೆ ಕುಟುಂಬದಲ್ಲಿ ನಡೆದಿದೆ. ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.’’ ಎಂದು ಬಲ್ಲ ಮೂಲಗಳು ಹೇಳುತ್ತವೆ.

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಜಿಲ್ಲಾ ಕೇಂದ್ರ ರಾಮನಗರ. ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ರಾಮನಗರ, ಕನಕಪುರ, ಮಾಗಡಿ ಹಾಗೂ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿದೆ. ಇದರಲ್ಲಿ ಎರಡು ಕ್ಷೇತ್ರಗಳಲ್ಲಿ (ರಾಮನಗರ, ಚೆನ್ನಪಟ್ಟಣ) ಸ್ಪರ್ಧಿಸಿದ್ದ ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ಮೇ. 19ರಂದೇ ರಾಜೀನಾಮೆ ನೀಡಿದ್ದಾರೆ. ಅದಕ್ಕಾಗಿ ಉಪಚುನಾವಣೆಯೊಂದು ಇಲ್ಲಿ ನಡೆಯಲಿದ್ದು, ದಿನಾಂಕ ಘೋಷಣೆ ಎದುರು ನೋಡಲಾಗುತ್ತಿದೆ.

3ನೇ ತಲೆಮಾರು ವಿಧಾನಸಭೆ ಪ್ರವೇಶ:

ನಿಖಿಲ್ ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ. 
ನಿಖಿಲ್ ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ. 

ಜೆಡಿಎಸ್ ಪಾಲಿಗೆ ರಾಮನಗರ ಗೆಲ್ಲುವ ವಿಶ್ವಾಸ ಇರುವ ಕ್ಷೇತ್ರ. ಇತ್ತಿಚಿನ ಚುನಾವಣೆಯಲ್ಲಿ ತಂದೆ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗಿದ್ದ ನಿಖಿಲ್, "ನಮ್ಮ ಕುಟುಂಬಕ್ಕೆ ರಾಮನಗರ ಕ್ಷೇತ್ರ ತಾಯಿ ಸಮಾನ,” ಎಂದು ಹೇಳಿಕೊಂಡಿದ್ದರು. ಇವತ್ತು ಅದೇ ತಾಯಿ ಮಡಿಲಿಗೆ ಕುಟುಂಬದ ಮೊಮ್ಮಗನನ್ನು ಹಾಕುವ ತೀರ್ಮಾನವನ್ನು ದೇವೇಗೌಡರು ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ, ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ ಟಿಕೆಟ್ ಪಡೆದು ರಾಮನಗರದಲ್ಲಿ ಚುನಾವಣೆ ಎದುರಿ ವಿಧಾನಸಭೆ ಪ್ರವೇಶಿಸಿದರೆ, ದೇವೇಗೌಡರ ಕುಟುಂಬದ ಮೂರನೇ ತಲೆಮಾರು ಕೂಡ ವಿದ್ಯುಕ್ತವಾಗಿ ರಾಜಕಾರಣಕ್ಕೆ ಪ್ರವೇಶ ಪಡೆದಂತೆ ಆಗುತ್ತದೆ.

ನಿಖಿಲ್ ಗೌಡ ಎಂದು ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿಗೆ ಸದ್ಯ 28 ವರ್ಷ. ಈತನನ್ನು ‘ಉದ್ಯಮಿ’ ಎಂದು ವಿಕಿಪೀಡಿಯಾ ಪ್ರೊಪೈಲ್‌ ಗುರುತಿಸುತ್ತದೆ. ನಟಿಸಿರುವ ಒಂದೆರಡು ಸಿನೆಮಾಗಳಿಂದಾಗಿ ಪ್ರಚಾರ ಸಿಕ್ಕಿದೆ. ಇವುಗಳ ಆಚೆಗೆ ನಿಖಿಲ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ವಿಧಾನಸಭೆ ಪ್ರವೇಶಕ್ಕೆ ಇರುವ ಅರ್ಹತೆ ‘ದೇವೇಗೌಡರ ಮೊಮ್ಮಗ’ ಎಂಬುದು.

ಎಚ್. ಡಿ. ರೇವಣ್ಣ ಮಗ ಪ್ರಜ್ವಲ್ ರೇವಣ್ಣ ಕೂಡ ವಿಧಾನಸಭೆ ಪ್ರವೇಶ ಬಯಸಿದ ಕುಟುಂಬದ ಮೂರನೇ ತಲೆಮಾರಿನ ಯುವಕ. ಪ್ರಜ್ವಲ್ ರೇವಣ್ಣಗೆ ಲೋಕಸಭೆಗೆ ಸ್ಪರ್ಧಿಸಲು ಅನುವು ಮಾಡಿಕೊಡುವ ಒಪ್ಪಂದ ನಡೆದಿದೆ ಎನ್ನುತ್ತವೆ ಮೂಲಗಳು. ಹಾಗೇನಾದರೂ ಆದರೆ, ಮುಂದಿನ ವರ್ಷ ಗೌಡರ ಕುಟುಂಬದ ಮೂರನೇ ತಲೆಮಾರಿನ ಬೀಜವನ್ನು ಲೋಕಸಭೆಯಲ್ಲೂ ಭಿತ್ತುವ ಕೆಲಸ ಆಗಲಿದೆ. ಸದ್ಯ ಮುಂಗಾರಿನ ಈ ಸಮಯದಲ್ಲಿ ಹಸಿಗೊಂಡ ರಾಮನಗರದ ನೆಲದಲ್ಲಿ ಅಂತೂ ಭಿತ್ತನೆ ಕಾರ್ಯ ನಡೆಯಲಿದೆ.