ಅಂಬೇಡ್ಕರ್‌ ನೆನಪಿಸಿಕೊಂಡ ಸಚಿವ ಎನ್. ಮಹೇಶ್ ಗಮನಕ್ಕೆ ‘ಶಿಕ್ಷಣ ಸಬಲೀಕರಣ ವರದಿ’!
COVER STORY

ಅಂಬೇಡ್ಕರ್‌ ನೆನಪಿಸಿಕೊಂಡ ಸಚಿವ ಎನ್. ಮಹೇಶ್ ಗಮನಕ್ಕೆ ‘ಶಿಕ್ಷಣ ಸಬಲೀಕರಣ ವರದಿ’!

ಬಿಎಸ್‌ಪಿಯ ಎನ್.ಮಹೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಂತ ಮಹತ್ವದ ಖಾತೆಯೂ ಸಿಕ್ಕಿದೆ. ಇದು ತಳ ಸಮುದಾಯಗಳ ವಲಯದಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 

ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದಲ್ಲಿರುವ ಭಿನ್ನ ಹಿನ್ನೆಲೆಯ ಕೆಲವೇ ಸಚಿವರಲ್ಲಿ ಎನ್. ಮಹೇಶ್ ಕೂಡ ಒಬ್ಬರು. ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಆರಂಭದಲ್ಲಿಯೇ ಪ್ರಗತಿಪರ ವಲಯದ ಗಮನ ಸೆಳೆದವರು ಅವರು. ಈಗ ತಮಗೆ ಮತ ನೀಡಿದ ಜನತೆಗೆ ಅವರು ಅಡ್ಡ ಬಿದ್ದು ನಮಸ್ಕರಿಸಿದ್ದಾರೆ.

ಚುನಾವಣಾ ರಾಜಕೀಯದಲ್ಲಿ ಜನರಿಂದ ಆಯ್ಕೆಯಾಗುವ ಶಾಸಕರು, ಸಂಸದರು ಮತದಾರರಿಗೆ ಅಭಿನಂದನೆ ಸಲ್ಲಿಸುವುದು ಸಾಮಾನ್ಯ ಪ್ರಕ್ರಿಯೆ. ಕೆಲವರು ಬಾಡೂಟಗಳ ಮೂಲಕ ಧನ್ಯವಾದಗಳನ್ನು ಹೇಳುವ ಪರಿಪಾಠ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಸಮಾರಂಭ ಮಾಡಿ ಭಾಷಣ ಮಾಡುವ ಮೂಲಕ ಅಭಿನಂದನೆ ಸಲ್ಲಿಸುತ್ತಾರೆ. ಬಿಎಸ್‌ಪಿ ಎಂಬ ಹೋರಾಟದ ಹಿನ್ನೆಲೆಯ ದಲಿತ ಅಸ್ಮಿತೆಯನ್ನು ಪ್ರತಿಪಾದಿಸುವ ಪಕ್ಷದಿಂದ ಬಂದ ಎನ್. ಮಹೇಶ್ ಕಾಲಿಗೆ ಬೀಳುವ ಶೈಲಿಯಲ್ಲಿ ನಮಸ್ಕಾರ ಮಾಡಿದ್ದಾರೆ.

ಕೊಳ್ಳೆಗಾಲದ ಜನರ ಮುಂದಿನ ಐದು ವರ್ಷಗಳಿಗೆ ವಿಧಾನಸಭೆ ತಮ್ಮ ಪ್ರತಿನಿಧಿಯಾಗಿ ಎನ್. ಮಹೇರ್‌ರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಸಂಪುಟ ದರ್ಜೆಯ ಸಚಿವರಾಗಿಯೂ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಖಾತೆಯೂ ಅವರ ಹೆಗಲಿಗೆ ಬಂದಿದೆ. ಹಿಂದೆ ಸಜ್ಜನ ರಾಜಕಾರಣಿ ಅನ್ನಿಸಿಕೊಂಡಿದ್ದ ಗೋವಿಂದೇಗೌಡ, ಕಿಮ್ಮನೆ ರತ್ನಾಕರ್ ತರದವರು ನಿರ್ವಹಿಸಿದ ಖಾತೆ ಇದು. ಸಾಮಾಜಿಕ ಅರಿವು ಇರುವವರು ಮುತುವರ್ಜಿಯಿಂದ ನೋಡುವ ಶಿಕ್ಷಣ ಇಲಾಖೆಯತ್ತ ನಿರೀಕ್ಷೆಗಳು ಹೆಚ್ಚಾಗಿವೆ. ಹೀಗಾಗಿ, ಗೆಲುವಿಗೆ ಸಹಕರಿಸಿದ ಜನರಿಗೆ ಅಭಿನಂದನೆ ಸಲ್ಲಿಸುವ ಜತೆಗೆ, ಹೊಸ ಸಾಧ್ಯತೆಗಳತ್ತಲೂ ಎನ್. ಮಹೇಶ್ ಮುಖ ಮಾಡಬೇಕಿದೆ.

ಈ ಹಿನ್ನೆಲೆಯಲ್ಲಿ, ‘ಸಮಾಚಾರ’ ನೂತನ ಪ್ರಾಥಮಿಕ ಶಿಕ್ಷಣ ಸಚಿವ ಎನ್. ಮಹೇಶ್ ಅವರೆಡೆಗೆ ಕ್ಷೇತ್ರದ ತಜ್ಞರ ಆಶಯಗಳೇನಿವೆ ಎಂಬುದನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.

ಪ್ರಾಥಮಿಕ ಶಿಕ್ಷಣ:

ಪ್ರಾಥಮಿಕ ಶಿಕ್ಷಣದಲ್ಲಿ ಹತ್ತಾರು ಸಮಸ್ಯೆಗಳಿವೆ. ಸುಮಾರು 55 ಸಾವಿರ ಸರ್ಕಾರಿ ಶಾಲೆಗಳು, 2 ಲಕ್ಷದ 53 ಸಾವಿರ ಶಿಕ್ಷಕ ಶಿಕ್ಷಕಿಯರು, 84 ಲಕ್ಷ ಮಕ್ಕಳನ್ನು ಹೊಂದಿರುವ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯಿಂದ ಹಿಡಿದು ಫಲಿತಾಂಶದವರೆಗೆ ನಾನಾ ಸಮಸ್ಯೆಗಳನ್ನು ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಲೇ ಇರುತ್ತವೆ. ಆಳದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ, ಡೊನೇಶನ್ ಪಿಡುಗು ಜೋರಾಗಿಯೇ ಇದೆ.10 ಸಾವಿರ ಶಾಲೆಗಳಲ್ಲಿ ಮಕ್ಕಳ ಕೊರತೆ ಕಾರಣವೊಡ್ಡಿ ಮುಚ್ಚುವ ಯತ್ನ ಕಳೆದ ಹಲವು ವರ್ಷಗಳಿಂದ ನಡೆಯುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ 2017-18ರಲ್ಲಿ ನಡೆಸಿರುವ ಅಧ್ಯಯನಲ್ಲಿ ರಾಜ್ಯದಲ್ಲಿ ಸುಮಾರು 17 ಲಕ್ಷ 6-17ರ ವಯಸ್ಸಿನ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಹೀಗೆ ಸಾಕಷ್ಟು ನ್ಯೂನತೆಗಳು ರಾಜ್ಯದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿಯೇ, ತಜ್ಞರ ಸಮಿತಿಯೊಂದು ಹಿಂದಿನ ಸರಕಾರಕ್ಕೆ ಅದ್ಯಯನ ವರದಿಯೊಂದನ್ನು ನೀಡಿತ್ತು. “ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಾಥಮಿಕ ಶಿಕ್ಷಣವನ್ನು ಅಭಿವೃದ್ದಿ ಪಡಿಸಲು ಎಸ್. ಜಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಿಕ್ಷಣ ಸಬಲೀಕರಣ ಎಂಬ ವರದಿ ನೀಡಲಾಗಿದೆ. ಇದಕ್ಕೆ ಕ್ರೀಯಾ ಯೋಜನೆಯನ್ನು ತಯಾರಿಸುವ ಕೆಲಸ ಆಗಬೇಕಿದೆ,’’ ಎನ್ನುತ್ತಾರೆ ಶಿಕ್ಷಣ ತಜ್ಞ ನಿರಂಜನಾರಾಧ್ಯ.

ಏನಿದು ವರದಿ?:

ಅಂಬೇಡ್ಕರ್‌ ನೆನಪಿಸಿಕೊಂಡ ಸಚಿವ ಎನ್. ಮಹೇಶ್ ಗಮನಕ್ಕೆ ‘ಶಿಕ್ಷಣ ಸಬಲೀಕರಣ ವರದಿ’!

ರಾಜ್ಯದ ಶಾಲೆಗಳನ್ನು ಸದೃಢಗೊಳಿಸಿ, ಗುಣಮಟ್ಟದ ಶಿಕ್ಷಣ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಕ್ಷಣ ಸಬಲೀಕರಣ ವರದಿ ಬೆಳಕು ಚೆಲ್ಲಿತ್ತು. 2017ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಮಿತಿಯ ಅಧ್ಯಕ್ಷ ಎಸ್. ಜಿ. ಸಿದ್ದರಾಮಯ್ಯ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದರು. ವರದಿ ಒಟ್ಟು 21 ಶಿಫಾರಸುಗಳನ್ನು ಹೊಂದಿತ್ತು.

“ಪ್ರಾಥಮಿಕ ಶಿಕ್ಷಣಕ್ಕೆ 18 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಆದರೂ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಒದಗಿಸಲು ಆಗಿಲ್ಲ. ಶಾಸಕರು, ಇತರರು ಸರಕಾರಿ ಶಾಲೆಗಳ ಬಗ್ಗೆ ಮಾತಾಡ್ತಾರೆ. ಆದರೆಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಎಲ್ಲರೂ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು.,” ಎಂದು ವರದಿ ಸ್ವೀಕರಿಸಿದ ನಂತರ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಈಗ ವರದಿಯನ್ನು ಅನುಷ್ಠಾನಕ್ಕೆ ತರುವ ಜಾಗದಲ್ಲಿ ಎನ್. ಮಹೇಶ್ ಕುಳಿತಿದ್ದಾರೆ. ಅವರಿಗೆ ಹಾಗೂ ಸಾವರ್ಜನಿಕ ಅವಗಾಹನೆಗಾಗಿ ವರದಿಯ ಪ್ರತಿಯನ್ನು ‘ಸಮಾಚಾರ’ ಇಲ್ಲಿ ಪ್ರಕಟಿಸಿದೆ.

watermarked_Governament school Strengthening Committee submitted to CM on 4th Sept 2017.pdf
download