‘ಪ್ರಸ್ತಾವ ವಾಪಸ್ ಕಳಿಸಿದರೆ ಸುಪ್ರೀಂಗೆ ಮೊರೆ’: ಜಾಗತಿಕ ಲಿಂಗಾಯತ ಮಹಾಸಭಾ
COVER STORY

‘ಪ್ರಸ್ತಾವ ವಾಪಸ್ ಕಳಿಸಿದರೆ ಸುಪ್ರೀಂಗೆ ಮೊರೆ’: ಜಾಗತಿಕ ಲಿಂಗಾಯತ ಮಹಾಸಭಾ

ಲಿಂಗಾಯತ ಸ್ವತಂತ್ರದ ಧರ್ಮದ ಪ್ರಸ್ತಾವವನ್ನ ಕೇಂದ್ರ ಸರಕಾರ ರಾಜ್ಯಕ್ಕೆ ವಾಪಸ್‌ ಕಳಿಸಿದ್ದೇ ಆದರೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಲಿಂಗಾಯತ ಮಹಾಸಭಾ ಹೇಳಿದೆ.

ಕೇಂದ್ರ ಸರಕಾರ ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳಿಸಿದರೆ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಜಾಗತಿಕ ಲಿಂಗಾಯತ ಮಹಾಸಭಾ ಹೇಳಿದೆ.

‘ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ವಾಪಸ್‌ ಕಳಿಸುವ ಸಾಧ್ಯತೆಗಳಿವೆ’ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ. ಬಿ. ಪಾಟೀಲ್, “ಇದು ಮಾಧ್ಯಮ ಕಲ್ಪಿತ ಸುಳ್ಳು ವರದಿ”ಎಂದಿದ್ದಾರೆ.

ಈ ಬಗ್ಗೆ ‘ಸಮಾಚಾರ’ದ ಜತೆಗೆ ಮಾತನಾಡಿದ ಜಿ.ಬಿ. ಪಾಟೀಲ್, “ಕೇಂದ್ರ ಸರಕಾರ ಸ್ವತಂತ್ರ ಲಿಂಗಾಯತ ಧರ್ಮದ ಪ್ರಸ್ತಾವವನ್ನು ವಾಪಸ್‌ ಕಳಿಸುವ ಸಾಧ್ಯತೆ ಇಲ್ಲ. ಮೀಸಲಾತಿ ಕುರಿತಂತೆ ಇರುವ ಕೆಲವು ವಿಷಯಗಳಲ್ಲಿ ಸ್ಪಷ್ಟನೆ ಕೇಳಬಹುದಷ್ಟೇ. ಇಡೀ ಪ್ರಸ್ತಾವವನ್ನು ಕೇಂದ್ರ ಸರಕಾರ ರಾಜ್ಯಕ್ಕೆ ವಾಪಸ್‌ ಕಳಿಸುತ್ತದೆ ಎಂಬುದು ಸುಳ್ಳು. ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರಕಾರಕ್ಕೆ ಸೂಕ್ತವಾದ ಸ್ಪಷ್ಟನೆ ನೀಡಲು ನಾವು ಸಿದ್ಧರಿದ್ದೇವೆ. ಒಂದು ವೇಳೆ ಕೇಂದ್ರ ಸರಕಾರ ಪ್ರಸ್ತಾವವನ್ನು ವಾಪಸ್‌ ಕಳಿಸಿದ್ದೇ ಆದಲ್ಲಿ ನಾವು ಸುಪ್ರೀಂಕೋರ್ಟ್‌ ಮೊರೆ ಹೋಗುತ್ತೇವೆ”ಎಂದು ಹೇಳಿದ್ದಾರೆ.

“ಪ್ರಸ್ತಾವವನ್ನು ವಾಪಸ್‌ ಕಳಿಸಲಾಗಿದೆಯೇ ಎಂಬ ಬಗ್ಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರನ್ನು ಕೇಳಿದ್ದೇವೆ. ಈವರೆಗೆ ಯಾವುದೇ ಕಡತವನ್ನು ವಾಪಸ್‌ ಕಳಿಸಿರುವ ಬಗ್ಗೆ ಮಾಹಿತಿ ಇಲ್ಲ. ಇಡೀ ಪ್ರಸ್ತಾವವನ್ನು ಕೇಂದ್ರ ಸರಕಾರ ವಾಪಸ್‌ ಕಳಿಸುವ ಸಾಧ್ಯತೆ ಕಡಿಮೆ” ಎನ್ನುತ್ತಾರೆ ಪಾಟೀಲ್.

ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದಲ್ಲಿ ಮರುಪರಿಶೀಲನೆಯ ಅಗತ್ಯವಿಲ್ಲ. ಒಂದೊಮ್ಮೆ ಅನಗತ್ಯ ಗೊಂದಲ ಉಂಟು ಮಾಡಿದರೆ ಸುಪ್ರೀಂಕೋರ್ಟ್‌ ಮೊರೆ ಹೋಗುತ್ತೇವೆ. 
- ಜಿ.ಬಿ. ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

“ಮಹಾರಾಷ್ಟ್ರದಲ್ಲಿ ಈಗ ಲಿಂಗಾಯತ ಉಪ ಜಾತಿಗಳಿರುವುದು ಹಿಂದೂ ಧರ್ಮದ ಕೆಳಗೆ. ಹೀಗಾಗಿ ಮೀಸಲಾತಿ ವಿಚಾರದಲ್ಲಿ ಗೊಂದಲವಾಗಿರಬಹುದು. ಲಿಂಗಾಯತ ಸ್ವತಂತ್ರ ಧರ್ಮ ಅಸ್ತಿತ್ವಕ್ಕೆ ಬಂದರೆ ಉಪಜಾತಿಗಳ ಮೀಸಲಾತಿ ವಿಚಾರ ಹಿಂದೂ ಧರ್ಮದ ಮೀಸಲಾತಿ ವ್ಯಾಪ್ತಿಗೆ ಬರುವುದೇ ಇಲ್ಲ. ಹೀಗಾಗಿ ಮೀಸಲಾತಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ”ಎಂಬುದು ಪಾಟೀಲ್‌ ಅವರ ಮಾತು.

“ಈ ಹಿಂದೆ ಇದ್ದ ಸರಕಾರ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವಾಗಿ ತಜ್ಞರ ಸಮಿತಿ ನೇಮಿಸಿ, ವರದಿ ತರಿಸಿಕೊಂಡು ಅದರ ಆಧಾರದ ಮೇಲೆ ಕೇಂದ್ರಕ್ಕೆ ಶಿಫಾರಸು ಕಳಿಸಿದೆ. ಹೀಗಾಗಿ ಸ್ವತಂತ್ರ ಧರ್ಮದ ವಿಚಾರದಲ್ಲಿ ರಾಜ್ಯ ಸರಕಾರ ಮರುಪರಿಶೀಲಿಸುವ ಅಗತ್ಯವಿಲ್ಲ. ಮರುಪರಿಶೀಲನೆ, ಮೀಸಲಾತಿ ವಿಚಾರ ಎಂದು ಗೊಂದಲ ಉಂಟಾದರೆ ನಾವು ಅಂತಿಮವಾಗಿ ನ್ಯಾಯಾಂಗದ ಮೊರೆ ಹೋಗುತ್ತೇವೆ”ಎನ್ನುತ್ತಾರೆ ಪಾಟೀಲ್.

ವೀರಶೈವ- ಲಿಂಗಾಯತರ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟಕ್ಕೆ ರಾಜ್ಯ ಸರಕಾರದ ಒಪ್ಪಿಗೆ ಒಂದು ಹಂತದ ಜಯ ಎಂದೇ ಹೇಳಲಾಗಿತ್ತು. ಆದರೆ, ಈ ಆರಂಭಿಕ ಜಯಕ್ಕೆ ಕೇಂದ್ರ ಸರಕಾರದ ಮಾನ್ಯತೆ ಎಂಬ ಅಂತಿಮ ಒಪ್ಪಿಗೆಯ ಅಗತ್ಯವಿದೆ.

ಸ್ವತಂತ್ರ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರಕಾರ ಮರುಪರಿಶೀಲನೆಗೆ ಕಳಿಸಿದರೆ ರಾಜ್ಯದಲ್ಲಿರುವ ಜೆಡಿಎಸ್‌- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮತ್ತೆ ಈ ಪ್ರಸ್ತಾವವನ್ನು ಕೇಂದ್ರಕ್ಕೆ ಕಳಿಸುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಅಂತಹ ಸಾಧ್ಯತೆಯೇ ಇಲ್ಲ ಎಂಬುದು ಲಿಂಗಾಯತ ಮಹಾಸಭಾದ ವಾದ.

ರಾಜ್ಯ ಸರಕಾರ ಸಲ್ಲಿಸಿದ್ದ ಸ್ವತಂತ್ರ ಧರ್ಮದ ಪ್ರಸ್ತಾವವನ್ನು ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಿತ್ತು. ರಾಜ್ಯದಲ್ಲಿ ಈ ವಿಚಾರದ ಬಗ್ಗೆ ಮರುಪರಿಶೀಲನೆ ಅಗತ್ಯವಿದ್ದು, ಪ್ರಸ್ತಾವವನ್ನು ವಾಪಸ್ ಕಳಿಸುವಂತೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಗೃಹ ಸಚಿವಾಲಯಕ್ಕೆ ಸಲಹೆ ನೀಡಿತ್ತು ಎನ್ನಲಾಗಿದೆ.

ಕರ್ನಾಟಕದಲ್ಲಿ ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವುದರಿಂದ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿರುವ ಲಿಂಗಾಯತ ಸಮುದಾಯದ ಮೀಸಲಾತಿಯಲ್ಲಿ ಗೊಂದಲವಾಗುತ್ತದೆ ಎಂಬ ಮಾತುಗಳಿವೆ. ಲಿಂಗಾಯತ ಸ್ವತಂತ್ರ ಧರ್ಮವಾದರೆ ಮಹಾರಾಷ್ಟ್ರದ ಲಿಂಗಾಯತ ಸಮುದಾಯಕ್ಕೆ ಸೇರಿದ ಕೆಲ ಉಪಜಾತಿಗಳಿಗೆ ನೀಡಲಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಬೇಕಾಗಬಹುದು ಎನ್ನಲಾಗುತ್ತಿದೆ.

ಇದೇ ಕಾರಣಕ್ಕೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸ್ವತಂತ್ರ ಧರ್ಮದ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ವಾಪಸ್‌ ಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸ್ವತಂತ್ರ ಧರ್ಮದ ಪ್ರಸ್ತಾವವನ್ನು ಕೇಂದ್ರ ಸರಕಾರ ರಾಜ್ಯಕ್ಕೆ ವಾಪಸ್‌ ಕಳಿಸುವ ಸಾಧ್ಯತೆಯನ್ನೇ ತಳ್ಳಿಹಾಕಿರುವ ಲಿಂಗಾಯತ ಮಹಾಸಬಾ, ಈ ವಿಚಾರದಲ್ಲಿ ಗೊಂದಲ ಉಂಟಾದರೆ ಅಂತಿಮವಾಗಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ಮುಂದಾಗಿದೆ.

ಚುನಾವಣಾ ಪೂರ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರ ಕಾಂಗ್ರೆಸ್‌ಗೆ ಲಾಭವಾಗುತ್ತದೆ ಎನ್ನಲಾಗಿತ್ತು. ಲಿಂಗಾಯತ ಮಹಾಸಭಾ ಕಾಂಗ್ರೆಸ್ ಬೆಂಬಲಿಸುವಂತೆ ಜಾಹೀರಾತನ್ನೂ ನೀಡಿತ್ತು. ಮಾತೆ ಮಹಾದೇವಿ ಕಾಂಗ್ರೆಸ್‌ಗೆ ಮತ ನೀಡುವಂತೆ ಬಹಿರಂಗವಾಗಿ ಲಿಂಗಾಯತರಿಗೆ ಕರೆ ನೀಡಿದ್ದರು. ಆದರೆ, ಚುನಾವಣಾ ಫಲಿತಾಂಶ ಕಾಂಗ್ರೆಸ್‌ ಪಾಲಿಗೆ ಸಿಹಿಯಾಗಿರಲಿಲ್ಲ.

ಕಾಂಗ್ರೆಸ್‌ ಸೋಲಿಗೆ ಲಿಂಗಾಯತ ಹೋರಾಟ ಕಾರಣ ಎಂಬ ಮಾತುಗಳು ಹೆಚ್ಚಾಗುತ್ತಿದ್ದ ಬೆನ್ನಲ್ಲೇ ಮಹಾಸಭಾ ಈ ಸೋಲಿಗೆ ತಮ್ಮ ಹೋರಾಟ ಕಾರಣವಲ್ಲ ಎಂಬ ಸ್ಪಷ್ಟೀಕರಣದ ಜಾಹೀರಾತನ್ನು ನೀಡಿತ್ತು.

Also read: ‘ಕಾಂಗ್ರೆಸ್‌ ಸೋಲಿಗೆ ನಾವು ಕಾರಣರಲ್ಲ’: ಲಿಂಗಾಯತ ಮಹಾಸಭಾ ಜಾಹೀರಾತಿನ ಸ್ಪಷ್ಟನೆ!

ಒಂದು ವೇಳೆ ಪ್ರಸ್ತಾವವನ್ನು ಕೇಂದ್ರ ವಾಪಸ್‌ ಕಳಿಸಿ, ರಾಜ್ಯ ಸರಕಾರ ಅದನ್ನು ಮೂಲೆ ಗುಂಪು ಮಾಡಿದರೆ ಅಂತಿಮವಾಗಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಹೇಳುತ್ತಿರುವ ಲಿಂಗಾಯತ ಮಹಾಸಭಾ ತನ್ನ ವಾದಕ್ಕೆ ಜೈನ ಧರ್ಮದ ಉಹಾಹರಣೆಯನ್ನು ಮುಂದಿಡುತ್ತಿದೆ.