ಯೋಗಿ ಆಡಳಿತದಲ್ಲಿ ‘ಕುತ್ತಿಗೆಗೆ ಬಿದ್ದ  ಗುಂಡು’: ತುರ್ತು ಚಿಕಿತ್ಸೆಗಾಗಿ ಮಧ್ಯರಾತ್ರಿ ಹೋರಾಡಿದ ಡಾ. ಖಫೀಲ್
COVER STORY

ಯೋಗಿ ಆಡಳಿತದಲ್ಲಿ ‘ಕುತ್ತಿಗೆಗೆ ಬಿದ್ದ ಗುಂಡು’: ತುರ್ತು ಚಿಕಿತ್ಸೆಗಾಗಿ ಮಧ್ಯರಾತ್ರಿ ಹೋರಾಡಿದ ಡಾ. ಖಫೀಲ್

ಡಾ. ಕಫೀಲ್ ತಮ್ಮ, ಉದ್ಯಮಿ ಖಾಶಿಫ್ ಜಮಿಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಮೂಲಕ ರಾಮ, ಲಕ್ಷ್ಮಣ, ಸೀತೆಯರನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದ ಯೋಗಿ ಆಡಳಿತದಲ್ಲಿ ‘ರಾಮರಾಜ್ಯ’ದ ದಾರುಣ ಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

‘ಆರೋಗ್ಯ ವ್ಯವಸ್ಥೆ ಹಾಳಾಗಿ ಹೋಗಿದೆ, ಅದನ್ನು ಸರಿಪಡಿಸುವ ಅಗತ್ಯವಿದೆ’ ಎಂದು ನೀವು ಉತ್ತರ ಪ್ರದೇಶದಲ್ಲಿ ಮಾತನಾಡುವುದು ಅಪರಾಧ ಎನ್ನಿಸಿಕೊಳ್ಳುತ್ತದೆ.

ಮಕ್ಕಳ ಸರಣಿ ಸಾವಿನ ನಂತರ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಕ್ಷೇತ್ರದ ಆಸ್ಪತ್ರೆಯ ದುಃಸ್ಥಿತಿಯನ್ನು ಜಗತ್ತಿಗೆ ತೆರೆದಿಟ್ಟ ವೈದ್ಯ ಡಾ. ಕಫೀಲ್ ಖಾನ್ ಜೈಲಿಗೆ ಹೋಗಿಬಂದರು. ಅದರ ಬೆನ್ನಲ್ಲೇ ಭಾನುವಾರ ರಾತ್ರಿ ಡಾ. ಕಫೀಲ್ ತಮ್ಮ, ಉದ್ಯಮಿ ಖಾಶಿಫ್ ಜಮಿಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಮೂಲಕ ರಾಮ, ಲಕ್ಷ್ಮಣ, ಸೀತೆಯರನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದ ಯೋಗಿ ಆಡಳಿತದಲ್ಲಿ ‘ರಾಮರಾಜ್ಯ’ದ ದಾರುಣ ಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಗೋರಖ್‌ಪುರದಲ್ಲಿ ಶನಿವಾರದ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಳಿದುಕೊಂಡಿದ್ದರು. ಅದರ ಮಾರನೇ ದಿನವೇ ಅಲ್ಲಿಂದ 500 ಮೀಟರ್ ಅಂತರದಲ್ಲಿ ಈ ಗುಂಡಿನ ದಾಳಿ ನಡೆದಿದೆ. ಡಾ. ಕಫೀಲ್ ತಮ್ಮ ಖಾಶಿಫ್ ಕುತ್ತಿಗೆ ಬಂದು ಗುಂಡು ನುಗ್ಗಿದೆ. ಸದ್ಯ ಅದನ್ನು ಹೊರತೆಗೆಯಲಾಗಿದ್ದು ಪ್ರಾಣಕ್ಕೆ ಏನೂ ಅಪಾಯ ಇಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ.

ಪೊಲೀಸರ ಅಮಾನವೀಯ ವರ್ತನೆ:

ಬೈಕನಲ್ಲಿ ಬಂದ ನಾಲ್ವರು ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು ಭಾನುವಾರ ರಾತ್ರಿ 10. 15ರ ಸುಮಾರಿಗೆ. “ತಕ್ಷಣ ಸಮೀಪದ ಸ್ಟಾರ್ ಆಸ್ಪತ್ರೆಗೆ ತೆಗೆದುಕೊಂಡ ಹೋಗಲಾಯಿತು. ಆದರೆ ಇದು ಮೆಡಿಕೋ ಲೀಗಲ್ ಕೇಸ್ ಆಗಿರುವುದರಿಂದ ಸರಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಯಿತು. ಜತೆಗೆ 20-30 ಪೊಲೀಸರಿದ್ದರು. ಸರ್ದಾರ್ ಆಸ್ಪತ್ರೆಗೆ ಹೋದರೆ, ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗಲು ಹೇಳಿದರು. ಅಲ್ಲಿಗೆ ಹೋದರೆ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕೋ ಲೀಗಲ್ ಮುಗಿಸಿರುವುದರಿಂದ ಅಲ್ಲಿಯೇ ಗುಂಡು ತೆಗೆಸಲು ಹೇಳಿದರು. ಅಲ್ಲಿಗೆ ವಾಪಾಸ್ ಬಂದು ಕುತ್ತಿಗೆಯಲ್ಲಿದ್ದ ಗುಂಡು ಹೊರತೆಗೆಯಲು ನಾಲ್ಕು ತಾಸು ಸತಾಯಿಸಿದರು,’’ ಎಂದು ಡಾ. ಖಫೀಲ್ ‘ಸಮಾಚಾರ’ಕ್ಕೆ ತಿಳಿಸಿದರು.

ಘಟನೆ ನಡೆದ ತಕ್ಷಣವೇ ವಾಟ್ಸಾಪ್‌ನಲ್ಲಿ, ‘ನಾನು ಮುಂಚೆಯೇ ಹೇಳಿದ್ದೆ, ಅವರು ನಮ್ಮನ್ನು ಮುಗಿಸುತ್ತಾರೆ’ ಎಂಬ ಭಾವತೀವ್ರತೆಯ ಸಂದೇಶವೊಂದನ್ನು ಕಳುಹಿಸಿದ್ದರು. ಅದಾದ ನಂತರ ಮಧ್ಯ ರಾತ್ರಿ 3 ಗಂಟೆವರೆಗೆ ತುರ್ತು ಚಿಕಿತ್ಸೆ ಕೊಡಿಸಲು ಕುಟುಂಬದ ಜತೆ ಹೋರಾಟ ಮಾಡಿದ್ದಾರೆ ಡಾ. ಖಫೀಲ್.

“ಇದು ನಮ್ಮ ಪರಿಸ್ಥಿತಿ. ಒಂದು ಕಡೆ ಗುಂಡೇಟು ತಿನ್ನುತ್ತೇವೆ. ಮತ್ತೊಂದು ಕಡೆ ತುರ್ತು ಚಿಕಿತ್ಸೆಗೂ ಹೋರಾಟ ಮಾಡಿ ಜೀವ ಉಳಿಸಿಕೊಳ್ಳುತ್ತೇವೆ. ಇಷ್ಟಕ್ಕೂ ನಾವು ಎಸಗಿರುವ ತಪ್ಪೇನು? ಮಕ್ಕಳು ಸಾಯಬಾರದು ಎಂದು ಕಳಕಳಿ ವ್ಯಕ್ತಪಡಿಸಿದ್ದು ಅಲ್ವಾ?’’ ಎಂದರು ಡಾ. ಖಫೀಲ್.

Also read: ‘ಬದಲಾವಣೆ ಬಂದೇ ಬರುತ್ತದೆ’: ಯೋಗಿಯ ಗೋರಖ್‌ಪುರದಿಂದ ಡಾ. ಕಫೀಲ್ ಖಾನ್! 

ಸದ್ಯ ಪೊಲೀಸರು ನಾಲ್ವರು ಆಗಂತುಕರ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. "ತನಿಖೆ ಪ್ರಗತಿಯಲ್ಲಿದೆ,’’ ಎಂದು ಉತ್ತರ ಪ್ರದೇಶದ ಪೊಲೀಸರ ಹೇಳಿಕೆಯನ್ನು ಸ್ಥಳೀಯ ವೆಬ್‌ಸೈಟ್‌ಗಳು ಪ್ರಕಟಿಸಿವೆ.

ಘಟನಾ ಸ್ಥಳದ ಒಂದಷ್ಟು ಚಿತ್ರಗಳು ಇಲ್ಲಿವೆ. ಅವೇ ಅಲ್ಲಿನ ಪರಿಸ್ಥಿತಿಯನ್ನು ವಿವಿಸುತ್ತವೆ.

ಡಾ. ಖಫೀಲ್ ಖಾನ್ ತಮ್ಮನ ಕುತ್ತಿಗೆ ಭಾಗದ ಎಕ್ಸ್‌ ರೇ ರಿಪೋರ್ಟ್‌

ಡಾ. ಖಫೀಲ್ ಖಾನ್ ತಮ್ಮನ ಕುತ್ತಿಗೆ ಭಾಗದ ಎಕ್ಸ್‌ ರೇ ರಿಪೋರ್ಟ್‌