‘ಭೀಮಾ ಕೋರೆಂಗಾವ್ ಹಿಂಸಾಚಾರ’; ಬಂಧಿತರ ಪರ ನಿಂತವರು  ಹೇಳುತ್ತಿರುವುದೇನು? 
COVER STORY

‘ಭೀಮಾ ಕೋರೆಂಗಾವ್ ಹಿಂಸಾಚಾರ’; ಬಂಧಿತರ ಪರ ನಿಂತವರು ಹೇಳುತ್ತಿರುವುದೇನು? 

ಭೀಮಾ ಕೋರೆಂಗಾವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಮಹೇಶ್‌ ರಾವತ್‌ರನ್ನು ಬಿಡುಗಡೆಗೊಳಿಸುವಂತೆ ಅವರ ಮಾಜಿ ಸಹೋದ್ಯೋಗಿಗಳು ಬೇಡಿಕೆಯಿಟ್ಟಿದ್ದಾರೆ. ಮಹೇಶ್‌ ರಾವತ್‌ ಪರವಾಗಿ ನಿಂತವರು ಹೇಳುತ್ತಿರುವುದಾದರೂ ಏನು? 

ಜನವರಿ 1ರಂದು ಭೀಮಾ ಕೋರೆಂಗಾವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಾಗಿರುವ 5 ಜನರ ಪೈಕಿ ಒಬ್ಬರಾದ ಮಹೇಶ್‌ ರಾವತ್‌ಗೆ ಬೆಂಬಲ ಸೂಚಿಸುವ ಸಲುವಾಗಿ ‘ಪ್ರಧಾನ ಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆ’ಯ ಸುಮಾರು 80ರಷ್ಟು ಫೆಲೋಗಳು ಸರಕಾರದ ಮುಂದೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನ ನಾಯಕ ಮತ್ತು ಮಾಜಿ ಗ್ರಾಮೀಣ ಅಭಿವೃದ್ಧಿ ಸಚಿವ ಜೈರಾಮ್‌ ರಮೇಶ್ ಕೂಡ ಒಬ್ಬರು. 

ಮಹೇಶ್‌ ರಾವತ್‌ ಕೂಡ ಪ್ರಧಾನ ಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಫೆಲೋ ಶಿಪ್‌ ಪಡೆದಿದ್ದವರು. ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದರು. ದೇಶದ ಬಡ ಸಮುದಾಯಗಳ ಪರವಾಗಿ ಹೋರಾಟ ನಡೆಸುತ್ತಿರುವ ವಿಸ್ತಪಾನ್ ವಿರೋಧಿ ಜನ ವಿಲಾಸ್‌ ಅಂದೋಲನದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ರಾವತ್‌, ಭಾರತ್‌ ಜನ್ ಆಂದೋಲನ ಎಂಬ ಸ್ವಯಂ ಸೇವಾ ಸಂಸ್ಥೆಯ ಸದಸ್ಯರೂ ಆಗಿದ್ದಾರೆ.

ಮಹೇಶ್‌ ರಾವತ್‌ಗೆ ಬೆಂಬಲ ಸೂಚಿಸುತ್ತಿರುವ ಪ್ರಧಾನ ಮಂತ್ರಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮಾಜಿ ಫೆಲೋಗಳು ನೀಡಿರುವ ಹೇಳಿಕೆ ಈ ಕೆಳಕಂಡಂತಿದೆ:

ನಾಗ್ಪುರದಲ್ಲಿ ವಾಸಿಸುತ್ತಿದ್ದ ನಮ್ಮ ಮಾಜಿ ಸಹೋದ್ಯೋಗಿ ಮಹೇಶ್‌ ರಾವತ್‌ರನ್ನು ಜೂನ್‌ 6ರಂದು ಪುಣೆ ಪೊಲೀಸರು ಬಂಧಿಸಿದ್ದಾರೆ. ಯೋಜನೆಯ ಅಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರ ಪೈಕಿ ಒಬ್ಬರಾಗಿದ್ದ ರಾವತ್‌, ಗಡ್‌ಚಿರೋಲಿ ಜಿಲ್ಲೆಯ ಆಡಳಿತ ವರ್ಗದೊಂದಿಗೆ ಉತ್ತಮ ಸಂಬಂಧ ಬೆಳಸಿಕೊಂಡು 2 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.

ಜನವರಿ 8ರಂದು ವಿಶ್ರಮ್‌ ಭಾಗ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿಲಾಗಿದ್ದ ಎಫ್‌ಐಆರ್‌ ಅಡಿಯಲ್ಲಿ ರಾವತ್‌ರನ್ನು ಬಂಧಿಸಿ, ಅವರ ಮನೆಯನ್ನು ಶೋಧಿಸಲಾಗಿದೆ. ಡಿಸೆಂಬರ್‌ 31ರಂದು ನಡೆದ ಎಲ್ಗರ್‌ ಪರಿಶದ್‌ ಮತ್ತು ಜನವರಿ 1ರಂದು ಭೀಮಾ ಕೋರೆಂಗಾವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಹೇಶ್‌ ರಾವತ್‌ ಮೇಲೆ ಭಾರತೀಯ ದಂಢ ಸಂಹಿತೆಯ ಸೆಕ್ಷನ್ 153(ಎ), 505(ಬಿ), 117 ಮತ್ತು 34ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಲಾಗಿದೆ. ಈಗ ಕಾನೂನುಬಾಹಿರ ಚಟುವಟಿಕೆ(ತಡೆಗಟ್ಟುವಿಕೆ) ಕಾಯ್ದೆಯನ್ನೂ ಕೂಡ ಎಫ್‌ಐಆರ್‌ನಲ್ಲ ಸೇರಿಸಲಾಗಿದೆ. ಈ ಸೆಕ್ಷನ್‌ಗಳ ಅಡಿಯಲ್ಲಿದ್ದಾಗ ಜಾಮೀನು ಸಹ ದೊರೆಯುವುದು ಕಷ್ಟ.

ವಿನಮ್ರ ವ್ಯಕ್ತಿತ್ವದ ಮಹೇಶ್‌ ರಾವತ್‌, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸಸ್‌ನಿಂದ ಮಾಸ್ಟರ್ ಆಫ್‌ ಸೋಷಿಯಲ್‌ ವರ್ಕ್ ಪದವಿಯನ್ನು ಪಡೆದವರು. ಅವರ ಸಾಮಾಜಿಕ ಕಾಳಜಿ ಮತ್ತು ಬದ್ಧತೆೆ ಸಹೋದ್ಯೋಗಿಗಳು ಮತ್ತು ಸಮುದಾಯಗಳು ಅವರನ್ನು ಗೌರದಿಂದ ಕಾಣುವಂತೆ ಮಾಡಿದ್ದವು.

Also read: ನಕ್ಸಲ್‌ ನಂಟಿಂದ ಮೋದಿ ಹತ್ಯೆಯವರೆಗೆ; ಭೀಮಾ ಕೋರೆಗಾಂವ್‌ ಹಿಂಸೆ ಮತ್ತು ಪೊಲೀಸರ ‘ಕತೆ’

ಆರೋಗ್ಯ ಸಮಸ್ಯೆಗಳ ಜತೆಗೆ ಚಿಕ್ಕ ವಯಸ್ಸಿನ ರಾವತ್‌, ಸಾಮಾಜಿಕ ಸಂಘರ್ಷಗಳಿದ್ದ ಪ್ರದೇಶಗಳಲ್ಲಿ ಸಮಾಜದ ಬದಲಾವಣೆಗಾಗಿ ಶ್ರಮಿಸುತ್ತಿದ್ದರು. ಅರೋಗ್ಯದ ಹಿತದೃಷ್ಟಿಯಿಂದ ರಾವತ್‌ ಗಡ್‌ಚಿರೋಲಿಯಿಂದ ನಾಗ್ಪುರಕ್ಕೆ ತೆರಳಿದ್ದರು.

ಮಹೇಶ್‌ ರಾವತ್‌ ಪುಣೆಯಲ್ಲಿ ನಡೆದ ಎಲ್ಗರ್‌ ಪರಿಶದ್‌ನಲ್ಲಿ ಭಾಗವಹಿಸಿರಲಿಲ್ಲ ಹಾಗೂ ಸಂಘಟನಾ ಸಮಿತಿಯ ಭಾಗವೂ ಆಗಿರಲಿಲ್ಲ. ಆಗಿದ್ದರೂ ಕೂಡ ಮಹೇಶ್‌ ರಾವತ್‌ ಹೆಸರು ಹೇಗೆ ಈ ಮೊಖದ್ದಮೆಯೊಳಗೆ ಸೇರಿಕೊಂಡಿತು ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಖಾಸಗಿ ವ್ಯಕ್ತಿಯೊಬ್ಬರು ನೀಡಿರುವ ದೂರನ್ನು ಆಧರಿಸಿ ಮಹೇಶ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಇತ್ತೀಚಿಗಷ್ಟೇ ಅವರ ಪಾಸ್‌ಪೋರ್ಟ್‌ಅನ್ನೂ ಕೂಡ ವಶಪಡಿಸಿಕೊಳ್ಳಲಾಗಿತ್ತು.

ನಿವೃತ್ತ ಐಎಎಸ್‌ ಅಧಿಕಾರಿ ಬಿ. ಡಿ. ಶರ್ಮಾ ಸ್ಥಾಪಿಸಿದ ಭಾರತ್‌ ಜನ್‌ ಆಂದೋಲನ ಕಾರ್ಯಗಳಲ್ಲಿ ಅವರು ಸಕ್ರಿಯವಾಗಿದ್ದ ಕಾರಣ ಇತ್ತೀಚಿನ ದಿನಗಳಲ್ಲಿ ಅವರ ಮನೆಯ ಮೇಲೆ ದಾಳಿ ನಡೆಯುವುದು ಸಾಮಾನ್ಯ ಎನ್ನುವಂತಾಗಿತ್ತು. ಗಣಿಗಾರಿಕೆಯಿಂದ ಶೋಷಣೆಗೆ ಒಳಪಟ್ಟ ಪ್ರದೇಶಗಳನ್ನು ಒಟ್ಟುಗೂಡಿಸಿ ಜನಹೋರಾಟ ಕಟ್ಟಿ, ಜನರ ಕಲ್ಯಾಣಕ್ಕಾಗಿ ಮಹೇಶ್‌ ಶ್ರಮಿಸುತ್ತಿದ್ದರು. ಪಿಇಎಸ್‌ಎ (ಪಂಚಾಯತ್‌ ಎಕ್ಸ್‌ಟೆಂಕ್ಷನ್‌ ಟು ಶೆಡ್ಯೂಲ್ಡ್‌ ಏರಿಯ ಆಕ್ಟ್) ಮತ್ತು ಎಫ್‌ಆರ್‌ಎ(ಫಾರೆಸ್ಟ್‌ ರೈಟ್‌ ಆಕ್ಟ್)ಗಳ ಕುರಿತಾಗಿ ಮಹೇಶ್‌ ನಡೆಸುತ್ತಿದ್ದ ಕಾರ್ಯಗಳು ಜಿಲ್ಲೆ ಹಾಗೂ ರಾಜ್ಯಾಡಳಿತಗಳನ್ನು ಸೆಳೆದಿತ್ತು.

ಮಹೇಶ್‌ ರಾವತ್‌ರ ಫೇಸ್‌ಬುಕ್‌ ಖಾತೆಯಿಂದ.
ಮಹೇಶ್‌ ರಾವತ್‌ರ ಫೇಸ್‌ಬುಕ್‌ ಖಾತೆಯಿಂದ.

ಆದಿವಾಸಿ ಸಮುದಾಯಗಳು ನೆಲೆಸಿರುವ ಪ್ರದೇಶಗಳಲ್ಲಿ ‘ಗ್ರಾಮ ಸಭಾ’ಗಳನ್ನು ಭದ್ರಪಡಿಸುವ ಕಾರ್ಯವನ್ನೂ ಕೂಡ ಮಹೇಶ್‌ ಕೈಗೊಂಡಿದ್ದರು. ಪ್ರಜಾಪ್ರಭುತ್ವ ಅಡಿಯಲ್ಲಿ ನಡೆಸುತ್ತಿರುವ ಈ ಎಲ್ಲಾ ಕಾರ್ಯಗಳು ಹೇಗೆ ಆಡಳಿತ ವಿರೋಧಿ ಎನ್ನಿಸಿಕೊಳ್ಳುತ್ತವೆ?

ಮಹಾರಾಷ್ಟ್ರ ಸರಕಾರ ಮಹೇಶ್‌ ರಾವತ್‌ರನ್ನು ಕಾನೂನುಬಾಹಿರ ಚುಟುವಟಿಕೆಗಳ ಅಡಿಯಲ್ಲಿ ಬಂಧಿಸಿರುವುದನ್ನು ನಾವು ನಾನಾ ನೆಲೆಗಟ್ಟುಗಳಲ್ಲಿ ವಿರೋಧಿಸುತ್ತೇವೆ. ರಾಜ್ಯದಲ್ಲಿ ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾದ ಸಮುದಾಯವನ್ನು ತುಳಿಯಲು ಸರಕಾರ ಈ ಪೊಲೀಸ್‌ ಕ್ರಮವನ್ನು ಕೈಗೊಂಡಿರುವಂತೆ ಗೋಚರಿಸುತ್ತದೆ.

ಇವರು ಸಮಾಜದಲ್ಲಿ ಬದಲಾವಣೆ ತರಬಲ್ಲ ವ್ಯಕ್ತಿಗಳು ಎಂದು ನಂಬಿಕೊಂಡಿರುವ ದೊಡ್ಡ ಜನ ಸಮುದಾಯದ ಮೇಲೆ ಸರಕಾರ ನಡೆಸುತ್ತಿರುವ ದೌರ್ಜನ್ಯವಿದು. ತಳ ಸಮುದಾಯಗಳ ಜನರ ಧ್ವನಿಯಾಗಿ ನಿಂತ ಮಹೇಶ್ ಕಾರ್ಯವನ್ನು ನಾವು ಶ್ಲಾಘಿಸುತ್ತೇವೆ. ಜತೆಗೆ ಮಹೇಶ್‌ ರಾವತ್‌ ಬಂಧನವನ್ನು ತೀವ್ರವಾಗಿ ಖಂಡಿಸುತ್ತೇವೆ.

ಈ ನಿಟ್ಟಿನಲ್ಲಿ ಭಾರತ ಸರಕಾರದ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಪ್ರಧಾನ ಮಂತ್ರಿಗಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮಾಜಿ ಫೆಲೋಗಳಾದ ನಾವು ಈ ಕೆಳಕಂಡ ಬೇಡಿಕೆಗಳನ್ನು ಮಂಡಿಸುತ್ತಿದ್ದೇವೆ:

ಎ) ಮಹೇಶ್‌ ರಾವತ್‌ರ ಮೇಲಿರುವ ಕಾನೂನೂಬಾಹಿರ ಚಟುವಟಿಕೆ(ತಡೆಗಟ್ಟುವಿಕೆ) ಕಾಯ್ದೆಯನ್ನು ಈ ಕೂಡಲೇ ಕೈಬಿಟ್ಟು, ಯಾವುದೇ ಕರಾರುಗಳಿಲ್ಲದೇ ಮಹೇಶ್‌ ರಾವತ್‌ರನ್ನು ಬಿಡುಗಡೆಗೊಳಿಸಬೇಕು.

ಬಿ) ಮಹೇಶ್‌ ರಾವತ್‌ ಅನಾರೋಗ್ಯದಿಂದ ಬಳಲುತ್ತಿರುವ ಕಾರಣದಿಂದಾಗಿ ಈ ಕೂಡಲೇ ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು.

ಸಿ) ಮಹೇಶ್‌ ರಾವತ್‌ರಂತಹ ಸಮಾಜಿಕ ಕಾರ್ಯಕರ್ತರು ಮತ್ತು ಅಭಿವೃದ್ಧಿಯನ್ನೇ ವೃತ್ತಿಯನ್ನಾಗಿಸಿಕೊಂಡವರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು.

ಈ ಮೂರು ಬೇಡಿಕೆಗಳನ್ನು ಸರಕಾರ ಮುಂದಿಟ್ಟಿರುವ ಮಹೇಶ್‌ ರಾವತ್‌ರ ಮಾಜಿ ಸಹೋದ್ಯೋಗಿಗಳು ಹೋರಾಟಗಾರರ ಪರವಾಗಿ ನಿಂತಿದ್ದಾರೆ. ಇವರಿಂದಷ್ಟೇ ಅಲ್ಲದೇ, ದೇಶದ ನಾನಾ ಭಾಗದ ಹೋರಾಟಗಾರರು 5 ಜನ ಬಂಧಿತರ ಪರವಾಗಿ ನಿಂತಿದ್ದಾರೆ. ಈ ಕುರಿತು ಸರಕಾರಗಳ ನಡೆಯೇನು ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಮಾಹಿತಿ ಮೂಲ: ದಿ ವೈರ್‌