‘ಕಾಂಗ್ರೆಸ್‌ ಸೋಲಿಗೆ ನಾವು ಕಾರಣರಲ್ಲ’: ಲಿಂಗಾಯತ ಮಹಾಸಭಾ ಜಾಹೀರಾತಿನ ಸ್ಪಷ್ಟನೆ!
COVER STORY

‘ಕಾಂಗ್ರೆಸ್‌ ಸೋಲಿಗೆ ನಾವು ಕಾರಣರಲ್ಲ’: ಲಿಂಗಾಯತ ಮಹಾಸಭಾ ಜಾಹೀರಾತಿನ ಸ್ಪಷ್ಟನೆ!

ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಿಗೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕಾರಣ ಎಂಬ ಮಾತುಗಳ ಬೆನ್ನಲ್ಲೇ, ‘ಈ ಸೋಲಿಗೂ ನಮಗೂ ಸಂಬಂಧವಿಲ್ಲ’ ಎಂಬ ಸ್ಪಷ್ಟನೆಯನ್ನು ಲಿಂಗಾಯತ ಮಹಾಸಭಾ ನೀಡಿದೆ.

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನಾ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬೆಂಬಲಿಸದಂತೆ ಕರೆ ಕೊಟ್ಟಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಈಗ ಕಾಂಗ್ರೆಸ್‌ ಸೋಲಿಗೆ ಲಿಂಗಾಯತ ಹೋರಾಟ ಕಾರಣವಲ್ಲ ಎಂಬ ಜಾಹೀರಾತನ್ನು ನೀಡಿದೆ.

ಲಿಂಗಾಯತ ಸ್ವತಂತ್ರ ಧರ್ಮ ಶಿಫಾರಸನ್ನು ಕೇಂದ್ರಕ್ಕೆ ಕಳಿಸಿದ್ದ ಹಿಂದಿನ ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಲಿಂಗಾಯತರೆಲ್ಲರೂ ಮತ ನೀಡುವಂತೆ ಈ ಹಿಂದೆ ಜಾಗತಿಕ ಲಿಂಗಾಯತ ಮಹಾಸಭಾ ನೀಡಿದ್ದ ಜಾಹೀರಾತಿನಲ್ಲಿ ಮನವಿ ಮಾಡಿತ್ತು. ರಾಜ್ಯ ಸರಕಾರ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಿದ್ದು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮತಗಳು ಕಾಂಗ್ರೆಸ್‌ಗೆ ಬೋನಸ್‌ ಆಗುತ್ತವೆ ಎಂದೇ ಊಹಿಸಲಾಗಿತ್ತು.

ಆದರೆ, ಚುನಾವಣಾ ಫಲಿತಾಂಶ ಬಂದ ಬಳಿಕ ಈ ಊಹೆ ಸುಳ್ಳಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಷ್ಟೇ ಅಲ್ಲ ಹಳೇ ಮೈಸೂರು ಭಾಗದಲ್ಲೂ ಕಾಂಗ್ರೆಸ್‌ ಹಲವು ಸ್ಥಾನಗಳನ್ನು ಕಳೆದುಕೊಂಡಿತ್ತು. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ತಮಗೆ ಲಾಭವಾಗುತ್ತದೆ ಎಂದುಕೊಂಡಿದ್ದ ಕಾಂಗ್ರೆಸ್‌ ಈಗ ಆ ಹೋರಾಟದ ಕಾರಣದಿಂದ ನಷ್ಟವಾಯಿತು ಎನ್ನುತ್ತಿದೆ ಎಂದು ಮಹಾಸಭಾ ಹೇಳಿದೆ. ಇದಕ್ಕಾಗಿ ಸ್ಪಷ್ಟೀಕರಣದ ರೂಪದಲ್ಲಿ ಮಹಾಸಭಾ ಜಾಹೀರಾತನ್ನು ನೀಡಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು ಈ ಬಾರಿ ಲಿಂಗಾಯತರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು ಪ್ರಮುಖ ಕಾರಣ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹೇಳಿದೆ. ಅಲ್ಲದೆ ಹಿಂದೆ ಬಿಜೆಪಿಯಿಂದ ಒಡೆದು ಹೋಗಿದ್ದ ಕೆಜೆಪಿ ಮತ್ತು ಬಿಎಸ್‌ಆರ್‌ ಕಾಂಗ್ರೆಸ್‌ ಬಿಜೆಪಿ ಜತೆಗೆ ವಿಲೀನವಾಗಿದ್ದು ಕೂಡಾ ಈ ಬಾರಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನೆರವು ಮಾಡಿಕೊಟ್ಟಿದೆ ಎಂದು ಮಹಾಸಭಾ ಜಾಹೀರಾತಿನಲ್ಲಿ ತಿಳಿಸಿದೆ.

ಕಾಂಗ್ರೆಸ್ ಲಿಂಗಾಯತರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರೆ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್‌ಗೆ ಸಿಗುತ್ತಿದ್ದವು ಎಂದು ಮಹಾಸಭಾ ಪರೋಕ್ಷವಾಗಿ ಹೇಳಿದೆ. ಈ ಮೂಲಕ ಸದ್ಯ ಸಚಿವ ಸ್ಥಾನ ಕೈತಪ್ಪಿದ ಹತಾಶೆಯಲ್ಲಿರುವ ಕಾಂಗ್ರೆಸ್‌ನ ಹಿರಿಯ ಶಾಸಕರ ಬೆನ್ನಿಗೆ ಮಹಾಸಭಾ ನಿಂತಿದೆ ಎಂಬುದಂತೂ ಸ್ಪಷ್ಟವಾಗುತ್ತದೆ.

ಲಿಂಗಾಯತ ಹೋರಾಟ ಕಾಂಗ್ರೆಸ್‌ ಸೋಲಿಗೆ ಕಾರಣ ಎಂಬ ವಾದ ಸುಳ್ಳು. ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದರೆ ಕಾಂಗ್ರೆಸ್‌ ಗೆಲ್ಲುತ್ತಿತ್ತೇ ಎಂಬ ಪ್ರಶ್ನೆಗೆ ಈಗ ಕಾಂಗ್ರೆಸ್‌ ಪಕ್ಷವೇ ಉತ್ತರಿಸಬೇಕು.
- ಜಿ.ಬಿ. ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಲಿಂಗಾಯತ ಹೋರಾಟ ಒಂದು ಅಂಶವಾಗಿತ್ತೇ? ಎಂಬ ಪ್ರಶ್ನೆ ಎತ್ತಿರುವ ಲಿಂಗಾಯತ ಮಹಾಸಭಾ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ತಮಗೆ ಚುನಾವಣಾ ವಿಷಯವಲ್ಲ ಎಂದು ಕಾಂಗ್ರೆಸ್‌ ನಾಯಕರು ಚುನಾವಣಾ ಪೂರ್ವದಲ್ಲಿ ಹೇಳುತ್ತಾ ಬಂದಿದ್ದರು. ಈಗ ಸೋಲಿನ ಬಳಿಕ ಲಿಂಗಾಯತ ಹೋರಾಟದ ಮೇಲೆ ಗೂಬೆ ಕೂರಿಸುತ್ತಿರುವುದು ಏಕೆ? ಎಂದು ಕೇಳಿದೆ.

“ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಪಡೆದ ಒಟ್ಟು ಮತದ ಶೇಕಡಾವಾರು ಪ್ರಮಾಣ ನೋಡಿದರೆ ಈ ಬಾರಿ ಹೆಚ್ಚಿನ ಲಿಂಗಾಯತರು ಕಾಂಗ್ರೆಸ್‌ ಪರವಾಗಿ ಮತ ನೀಡಿದ್ದಾರೆ. ಸ್ವತಂತ್ರ ಧರ್ಮದ ಮಾನ್ಯತೆ ನೀಡಿದ ಕಾಂಗ್ರೆಸ್‌ಗೆ ಲಿಂಗಾಯತರು ಋಣಿಗಳಾಗಿ ಮತ ಚಲಾಯಿಸಿದ್ದಾರೆ. ಹೀಗಾಗಿಯೇ ಮೋದಿ ಎಂಬ ಬಿರುಗಾಳಿಯಲ್ಲಿ ಒಣಗಿದ ಎಲೆಗಳಂತೆ ಹಾರಿಹೋಗಲಿದ್ದ ಕಾಂಗ್ರೆಸ್ ಪಕ್ಷವು 78 ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು” ಎಂದು ಮಹಾಸಭಾ ಹೇಳಿದೆ.

ಆದರೆ, “ಲಿಂಗಾಯತ ಸ್ವತಂತ್ರಕ್ಕೆ ಮಾನ್ಯತೆ ನೀಡುವ ಮೂಲಕ ಕಾಂಗ್ರೆಸ್‌ ಧರ್ಮ ಒಡೆಯುತ್ತಿದೆ” ಎಂದು ಉತ್ತರ ಕರ್ನಾಟಕ ಭಾಗದ ತಳಮಟ್ಟದಲ್ಲಿ ಬಿಜೆಪಿ ಮಾಡಿದ ಪ್ರಚಾರ ಕಾಂಗ್ರೆಸ್‌ಗೆ ಹೊಡೆತ ನೀಡಿರುವುದಂತೂ ಸುಳ್ಳಲ್ಲ. ಆದರೆ, ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕಾಂಗ್ರೆಸ್‌ಗೆ ನಷ್ಟಕ್ಕಿಂತ ಲಾಭ ಮಾಡಿಕೊಟ್ಟಿದೆ ಎಂಬುದು ಜಾಗತಿಕ ಲಿಂಗಾಯತ ಮಹಾಸಭಾದ ವಾದ.

ಇದನ್ನು ವಿವರಿಸಲೆಂದೇ ಮಹಾಸಭಾ ಅರ್ಧ ಪುಟ ಜಾಹೀರಾತನ್ನು ನೀಡಿದೆ. ಉತ್ತರ ಕರ್ನಾಟಕದ ಯಾವ ಯಾವ ಭಾಗದಲ್ಲಿ ಯಾವ ಸಮಯದಲ್ಲಿ ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನಗಳು ಲಭಿಸಿವೆ ಎಂಬ ವರ್ಷವಾರು ಅಂಕಿಸಂಖ್ಯೆಯ ಸಹಿತ ನೀಡಿರುವ ಈ ಜಾಹೀರಾತಿನಲ್ಲಿ ಕಾಂಗ್ರೆಸ್ ಸೋಲಿಗೆ ಲಿಂಗಾಯತ ಹೋರಾಟ ಕಾರಣವಲ್ಲ ಎಂದು ಮಹಾಸಭಾ ಹೇಳಿದೆ.

ಲಿಂಗಾಯತ ಮಹಾಸಭಾ ನೀಡಿರುವ ಸ್ಪಷ್ಟೀಕರಣದ ಜಾಹೀರಾತು
ಲಿಂಗಾಯತ ಮಹಾಸಭಾ ನೀಡಿರುವ ಸ್ಪಷ್ಟೀಕರಣದ ಜಾಹೀರಾತು

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಮಾವೇಶಗಳು ನಡೆದ ಭಾಗಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ ಎಂದಿರುವ ಮಹಾಸಭಾ, ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದ 47 ಅಭ್ಯರ್ಥಿಗಳ ಪೈಕಿ 17 ಮಂದಿ ಗೆಲುವು ಸಾಧಿಸಿದ್ದಾರೆ. ಉಳಿದ ಜಾತಿಗಳ ಟಿಕೆಟ್‌ ಹಂಚಿಕೆ ಪ್ರಾತಿನಿಧ್ಯ ಹಾಗೂ ಗೆಲುವನ್ನು ನೋಡಿದರೆ ಲಿಂಗಾಯತ ಅಭ್ಯರ್ಥಿಗಳ ಗೆಲುವಿನ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಮಹಾಸಭಾ ಹೇಳಿದೆ.

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಕಾಂಗ್ರೆಸ್‌ಗೆ ಮುಳುವಾಯಿತು ಎಂಬ ಮಾತನ್ನು ಒಪ್ಪಲು ಜಾಗತಿಕ ಲಿಂಗಾಯತ ಮಹಾಸಭಾ ಸಿದ್ಧವಿಲ್ಲ. ಹೀಗಾಗಿಯೇ ಈ ಜಾಹೀರಾತಿನ ಮೂಲಕ ಅಂಕಿಸಂಖ್ಯೆಗಳ ಲೆಕ್ಕಾಚಾರವನ್ನು ಮಹಸಭಾ ಜನರ ಮುಂದಿಡುವ ಪ್ರಯತ್ನ ನಡೆಸಿದೆ. ಲಿಂಗಾತಯ ಹೋರಾಟ ಕಾಂಗ್ರೆಸ್‌ಗೆ ನಷ್ಟಕ್ಕಿಂತ ಲಾಭ ಮಾಡಿಕೊಟ್ಟಿದೆ ಎನ್ನುತ್ತಾರೆ ಮಹಾಸಭಾದ ಪ್ರಮುಖರು.

“ಲಿಂಗಾಯತ ಹೋರಾಟ ಎಲ್ಲೂ ಕಾಂಗ್ರೆಸ್‌ ಪಕ್ಷಕ್ಕೆ ಹೊಡೆತ ಕೊಟ್ಟಿಲ್ಲ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದ ಸರಕಾರಕ್ಕೆ ನಮ್ಮ ಕೃತಜ್ಞತೆ ಸಲ್ಲಿಸುವುದು ಪ್ರಜಾಧರ್ಮವಾಗಿತ್ತು. ಹೀಗಾಗಿ ಕಾಂಗ್ರೆಸ್‌ ಬೆಂಬಲಿಸುವಂತೆ ಈ ಹಿಂದೆ ಜಾಹೀರಾತು ನೀಡಿದ್ದೆವು. ಆದರೆ, ಈಗ ಕಾಂಗ್ರೆಸ್‌ ಸೋಲಿಗೆ ನಮ್ಮ ಹೋರಾಟವೇ ಕಾರಣ ಎಂಬ ಮಾತುಗಳು ಹೆಚ್ಚಾಗಿವೆ. ಹೀಗಾಗಿ ಈ ಕುರಿತು ಸ್ಪಷ್ಟೀಕರಣ ನೀಡಲು ಜಾಹೀರಾತನ್ನು ನೀಡಿದ್ದೇವೆ” ಎನ್ನುತ್ತಾರೆ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ್.

“ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಕಾಂಗ್ರೆಸ್‌ಗೆ ಮತ ನೀಡುವಂತೆ ಈ ಹಿಂದೆ ನೀಡಿದ್ದ ಜಾಹೀರಾತು ನೂರಕ್ಕೆ ನೂರರಷ್ಟು ಫಲಕೊಟ್ಟಿದೆ. ಕಾಂಗ್ರೆಸ್‌ ಪಕ್ಷಕ್ಕೆ ಸಿಕ್ಕಿರುವ ಶೇಕಡಾವಾರು ಮತ ಹಂಚಿಕೆ ಪ್ರಮಾಣದ ಹೆಚ್ಚಳಕ್ಕೆ ಲಿಂಗಾಯತ ಮತಗಳೇ ಕಾರಣ” ಎಂಬುದು ಅವರ ಮಾತು.

ಕಾಂಗ್ರೆಸ್‌ ತನ್ನ ಸೋಲನ್ನು ಲಿಂಗಾಯತ ಹೋರಾಟದ ತಲೆಗೆ ಕಟ್ಟುವ ಪ್ರಯತ್ನ ನಡೆಸುತ್ತಿದೆ ಎಂಬುದನ್ನು ಆರಂಭದಲ್ಲೇ ಅರಿತಿರುವ ಲಿಂಗಾಯತ ಮಹಾಸಭಾ ಜಾಹೀರಾತಿನ ಮೂಲಕ ಈ ಸೋಲಿಗೆ ಕಾರಣ ನಾವಲ್ಲ ಎಂದು ಹೇಳಿದೆ. ಜತೆಗೆ ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಲಿಂಗಾಯತರನ್ನು ಘೋಷಿಸಿದ್ದರೆ ಈ ಸೋಲು ಸಾಧ್ಯವಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದೆ.

ಸಮ್ಮಿಶ್ರ ಸರಕಾರದಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಕಾರಣಕ್ಕೆ ಎದ್ದಿರುವ ಭಿನ್ನಮತ ಹಾಗೂ ಲಿಂಗಾಯತ ಮಹಾಸಭಾ ಜಾಹೀರಾತಿನ ಮೂಲಕ ನೀಡಿರುವ ಸ್ಪಷ್ಟೀಕರಣದ ತಿರುಗೇಟು ಸದ್ಯಕ್ಕಂತೂ ಕಾಂಗ್ರೆಸ್‌ಗೆ ಮಗ್ಗಲ ಮುಳ್ಳಾಗಿದೆ.