ಪ್ರವಾಸಿ ಸ್ಥಳಗಳಲ್ಲಿ ಅನಗತ್ಯ ಸಾವುಗಳು: ತಡೆಯಲು ಸಿಂಪಲ್ ಪರಿಹಾರ ಇಲ್ಲಿದೆ
COVER STORY

ಪ್ರವಾಸಿ ಸ್ಥಳಗಳಲ್ಲಿ ಅನಗತ್ಯ ಸಾವುಗಳು: ತಡೆಯಲು ಸಿಂಪಲ್ ಪರಿಹಾರ ಇಲ್ಲಿದೆ

ನೂತನ ಸರಕಾರದಲ್ಲಿ ಇದು ಯಾರು ಪ್ರವಾಸೋದ್ಯಮ ಖಾತೆಯನ್ನು ತೆಗೆದುಕೊಳ್ಳುತ್ತಾರೆ ಎಂಬದನ್ನು ಇನ್ನಷ್ಟೆ ಖಾತ್ರಿಯಾಗಬೇಕಿದೆ. ಯಾರೇ ಸಚಿವರಾದರೂ, ಅವರು ಈ ನಿಟ್ಟಿನಲ್ಲಿ ಆಲೋಚನೆ ಮಾಡಲಿ ಎಂಬುದು ‘ಸಮಾಚಾರ’ದ ಒತ್ತಾಯ.

ಹೊರಗೆ ಮಳೆಯಾಗುತ್ತಿದೆ. ರಾಜ್ಯದ ಜಲಾಶಯಗಳು, ಸಣ್ಣ ಪುಟ್ಟ ಅಬ್ಬಿಗಳು ತುಂಬಿ ಹರಿಯುತ್ತಿವೆ. ಪ್ರಕೃತಿ ಹಸಿರು ತುಂಬಿಕೊಂಡು ನಳನಳಿಸುತ್ತಿವೆ. ವೀಕೆಂಡ್‌ಗಳು ಸಹಜವಾಗಿಯೇ ನಗರ ಪ್ರವೇಶದ ಜನರನ್ನು ಪ್ರವಾಸದತ್ತ ಮುಖ ಮಾಡಿಸುತ್ತಿವೆ.

ಯಾಂತ್ರಿಕ ಬದುಕಿನಿಂದ ಒಂದಷ್ಟು ಕಾಲ ಮುಕ್ತಿ ಹೊಂದಿ, ಹೊಸ ಉತ್ಸಾಹವನ್ನು ತುಂಬಿಕೊಳ್ಳಲು ಹೊರಡುವ ಇಂತಹ ವೀಕೆಂಡ್ ಪ್ರವಾಸಗಳೇ ಬದುಕಿಗೆ ಕಂಟಕವಾಗುತ್ತಿರು ಘಟನೆಗಳು ವರದಿಯಾಗುತ್ತಿವೆ.

ಕಳೆದ ವಾರ ಮೈಸೂರು ಜಿಲ್ಲೆ ಕೆ. ಆರ್‌. ನಗರ ತಾಲೂಕಿನಲ್ಲಿರುವ ಚುಂಚನಕಟ್ಟೆ ಜಲಪಾತಕ್ಕೆ ಹೋಗಿದ್ದ ನೆಲಮಂಗಲದ ಕುಟುಂಬವೊಂದು ಇವತ್ತು ಹೇಳಿಕೊಳ್ಳಲಾದ ಯಾತನೆಯಲ್ಲಿದೆ. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ವಿಜ್ಞಾನಿಯಾಗಿದ್ದ ಸೋಮಶೇಖರ್ ತಮ್ಮ ಪತ್ನಿ ಹಾಗೂ ಮಗು ಜತೆ ವೀಕೆಂಡ್‌ ಕಳೆಯಲು ಆಯ್ಕೆ ಮಾಡಿಕೊಂಡಿದ್ದು ಈ ಜಲಪಾತವನ್ನು. ಆದರೆ ಅದು ಅವರ ಬದುಕಿನ ಕೊನೆಯ ಆಯ್ಕೆಯೂ ಆಯಿತು. ನೋಡ ನೋಡುತ್ತಲೇ ಅವರು ನೀರಿನಲ್ಲಿ ಕೊಚ್ಚಿ ಹೋದರು. ನೆಲಮಂಗಲದ ಮೂಲದ ಅವರು ಮೈಸೂರಿನಲ್ಲಿ ವಾಸವಾಗಿದ್ದರು.

ಸೋಮಶೇಖರ್ ಅವರ ಸಾವಿಗೂ ಮುಂಚೆ ಅದೇ ತಾನೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮುಗಿಸಿದ್ದ ವಿದ್ಯಾರ್ಥಿಗಳು ಚುಂಕನಕಟ್ಟೆ ಜಲಾಶಯದಲ್ಲಿ ಈಜಲು ಹೋಗಿದ್ದರು. ಆದರೆ ಅದು ಅವರ ಕೊನೆಯ ಮೋಜಿನ ಸಮಯವಾಯಿತು. ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟರು.

ಇಂತಹ ಪ್ರವಾಸದ ಸಮಯದಲ್ಲಿ ಸಾವುಗಳಿಗೆ ಸಾಕ್ಷಿಯಾಗುತ್ತಿರುವುದು ಚುಂಚಲಕಟ್ಟೆ ಜಲಪಾತ ಮಾತ್ರವೇ ಅಲ್ಲ. ಇತ್ತೀಚಿಗಷ್ಟೇ ರಾಮನಗರದ ಬಳಿಯ ರೇವಣ ಸಿದ್ದೇಶ್ವರ ಬೆಟ್ಟದ ಬಳಿಯ ಹೊಸಕೆರೆಯಲ್ಲಿ ಈಜಲು ಹೋಗಿದ್ದ ಬೆಂಗಳೂರು ಮೂಲದ ಎಂಟು ಜನ ವಿದ್ಯಾರ್ಥಿಗಳ ಪೈಕಿ 24 ವರ್ಷದ ಚೇತನ್‌ ಮೃತನಾಗಿದ್ದ. ಮೈಸೂರಿನ ದೇವೇಗೌಡನ ಹುಂಡಿಯ ನಿವಾಸಿ 20 ವರ್ಷದ ಬಸವರಾಜು ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ವೇಳೆ, ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದ. ರಜೆ ಎಂದು ಮೋಜು ಮಾಡಲು ಚಿಕ್ಕಬಳ್ಳಾಪುರದ ಬಳಿಯ ಶ್ರೀನಿವಾಸ ಸಾಗರಕ್ಕೆ ತೆರಳಿದ್ದ ಕುಟುಂಬವೊಂದು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿತ್ತು. ಜತೆಗೆ ಅವರನ್ನು ರಕ್ಷಿಸಲು ಮುಂದಾದ ಅವರ ಕಾರ್‌ ಚಾಲಕ ಕೂಡ ಅವರೊಂದಿಗೆ ನೀರಿನ ಸೆಳೆತಕ್ಕೆ ಸಿಕ್ಕಿ ಮೃತನಾಗಿದ್ದ.

ಸೆಲ್ಫಿ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಕೂಡ ಕಡಿಮೆಯೇನಿಲ್ಲ. ಸುಳ್ಯ ತಾಲೂಕಿನ ಕಲ್ಯಾಳ ಜಲಪಾತದ ವೀಕ್ಷಣೆಗೆಂದು ತೆರಳಿದ್ದ 20 ವರ್ಷದ ಯುವಕ ಹರ್ಷಿತ್‌ ನಾಯ್ಕ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದ.

ಕಲ್ಯಾಳ ಜಲಪಾತ.
ಕಲ್ಯಾಳ ಜಲಪಾತ.

ಉಡುಪಿ ಕೊಡಗು ಜಿಲ್ಲೆಗಳು ಜಲಪಾತಗಳ ತವರಾಗಿದ್ದು, ಮಳೆಗಾಲದಲ್ಲಿ ಪ್ರವಾಸಿಗರು ಜಲಪಾತಗಳ ವೀಕ್ಷಣೆಗೆಂದೇ ಬರುತ್ತಾರೆ. ಇವರಲ್ಲಿ ಬೆಂಗಳೂರು, ಮೈಸೂರು ಭಾಗಗಳಿಂದ ಬರುವ ಟೆಕ್ಕಿಗಳು, ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ. ಹೀಗೆ ಪ್ರವಾಸಕ್ಕೆಂದು ಬಂದವರಲ್ಲಿ ಸೆಲ್ಫಿ ಸೆರೆ ಹಿಡಿಯಲು ಹೋದ ನವವಿವಾಹಿತ ಜಲಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಕಳೆದ ತಿಂಗಳಷ್ಟೇ ಕೊಡಗಿನ ನಾಪೊಕ್ಲು ಸಮೀಪದ ಚೇಲಾವರ ಜಲಪಾತ ಬಳಿ ನಡೆದಿತ್ತು. ಕಲ್ಯಾಳ ಫಾಲ್ಸ್ ನಲ್ಲಿ ಇತ್ತೀಚೆಗಷ್ಟೇ ಜೀಪು ಚಾಲಕರೊಬ್ಬರು ಬಿದ್ದು ಕೊನೆಯುಸಿರೆಳೆದಿದ್ದರು.

ಪುತ್ತೂರಿನ ಕುದ್ಮಾರು ಗ್ರಾಮದ ಬಳಿ ಕುಮಾರಧಾರ ನದಿಯಲ್ಲಿ ಬಿದ್ದು ಹರೀಶ್‌ ಎನ್ನುವವರು ಪ್ರಾಣ ಕಳೆದು ಕೊಂಡಿದ್ದರು. ಇದಾದ ಎರಡೇ ದಿನಕ್ಕೆ ಇದೇ ಸ್ಥಳದಲ್ಲಿ ಇನ್ನಿಬ್ಬರು ಪ್ರಾಣ ಕಳೆದುಕೊಂಡಿದ್ದರು. ಉತ್ತರ ಕನ್ನಡದ ಚೆಂಡಿಯಾ ನಾಗರಮಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಗೋವಾ ರಾಜ್ಯದ ಮಡಗಾಂವ್ ರಾಯ್ ಗ್ರಾಮದ ಐದು ಜನ ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಪ್ರಸಿದ್ದ ಜೋಗ ಜಲಪಾತ ಲೆಕ್ಕಕ್ಕಿಲ್ಲದಷ್ಟು ಜನರನ್ನು ಬಲಿ ತೆಗೆದುಕೊಂಡಿದೆ. ಮಂಡ್ಯ ಜಿಲ್ಲೆಯ ಶಿವನ ಸಮುದ್ರ ಜಲಪಾತವೂ ಕೂಡ ಅಸಂಖ್ಯ ಜನರ ಮರಣ ಸ್ಥಳ. ಹೀಗೆ ತಮ್ಮ ಸೌಂದರ್ಯದ ಜತೆ ಸಾವಿನ ಕಾರಣಕ್ಕೂ ಹೆಸರಾಗಿರುವ 50ಕ್ಕೂ ಹೆಚ್ಚು ಜಲಪಾತಗಳು ಕರ್ನಾಟಕದಲ್ಲಿವೆ.

ತೀರ್ಥಹಳ್ಳಿ ತಾಲೂಕಿನ ಮಹಿಷಿಯಲ್ಲಿ ತುಂಗಾ ನದಿ ಸೆಳೆತಕ್ಕೆ ಸಿಲುಕಿ ತಾಯಿ ಮತ್ತು ಮಗಳ ಮೃತಪಟ್ಟ ಘಟನೆ ವರದಿಯಾಗಿತ್ತು.

ಇವು ಅಚಾನಕ್ಕಾಗಿ ಸಂಭವಿಸಿದ ಸಾವುಗಳಾದರೆ, ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಪ್ರವಾಸಿ ತಾಣಗಳು, ಗಿರಿ ಪ್ರದೇಶಗಳು, ಬೆಟ್ಟ ಗುಡ್ಡಗಳನ್ನು ಏರುವ ಸಂಖ್ಯೆಯೂ ಇದೆ. ಇತ್ತೀಚಿಗಷ್ಟೇ ಗೋಕಾಕ ಜಿಲ್ಲೆಯ ಹೊರಭಾಗದಲ್ಲಿರುವ ಗೋಕಾಕ ಜಲಪಾತಕ್ಕೆ ಹಾರಿ ಸತಿ ಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹದ್ದೇ ಸೂಸೈಡ್‌ ಪಾಯಿಂಟ್‌ಗಳಿಗೆ ಕರ್ನಾಟಕದಲ್ಲಿ ಬರವಿಲ್ಲ.

ದೇಶದೆಲ್ಲೆಡೆ ಪ್ರಸಿದ್ಧವಾಗಿರುವ ಚಿಕ್ಕಬಳ್ಳಾಪುರದ ಬಳಿಯ ನಂದಿ ಗಿರಿಧಾಮ ಆತ್ಮಹತ್ಯೆಗಳ ಕಾರಣದಂದಾಗಿಯೂ ಪ್ರಸಿದ್ಧವಾಗಿದೆ. ತುಮಕೂರಿಗೆ ಸಮೀಪವಿರುವ ಶಿವಗಂಗೆ ಬೆಟ್ಟವೂ ಕೂಡ ಹಲವಾರು ಜನರ ಆತ್ಯಹತ್ಯೆಗಳನ್ನು ಕಂಡಿದೆ.

ಶಿವಗಂಗೆ ಬೆಟ್ಟದ ಶಾಂತಲಾ ಪಾಯಿಂಟ್‌.
ಶಿವಗಂಗೆ ಬೆಟ್ಟದ ಶಾಂತಲಾ ಪಾಯಿಂಟ್‌.

ಈ ಬೆಟ್ಟ ಗುಡ್ಡಗಳ ಸಮೀಪದಲ್ಲೇ ಸಿದ್ಧರ ಬೆಟ್ಟ, ದೇವರಾಯನ ದುರ್ಗ, ಸಾವನ ದುರ್ಗ, ಮಾಕಳಿ ದುರ್ಗ, ಚನ್ನರಾಯನ ದುರ್ಗ, ಸ್ಕಂದ ಗಿರಿ, ಚನ್ನ ಗಿರಿ, ಮಧುಗಿರಿ ಬೆಟ್ಟ, ಆವಲ ಬೆಟ್ಟ ಸೇರಿದಂತೆ ಹತ್ತಾರು ಸಾಲು ಸಾಲು ಶಿಖರಗಳಿವೆ. ಬೆಟ್ಟಗಳನ್ನು ಏರಿ, ಮೇಲಿಂದ ಬಿದ್ದು ಸತ್ತರೂ ಕೂಡ ಕೆಲದಿನಗಳವರೆಗೂ ಯಾರಿಗೂ ತಿಳಿಯುವುದಿಲ್ಲ.

ಇವು ಬೆಂಗಳೂರಿನಿಂದ ಉತ್ತರ ದಿಕ್ಕಿಗಿರುವ ಬೆಟ್ಟ ಗುಡ್ಡಗಳು. ದಕ್ಷಿಣದಲ್ಲೂ ಕೂಡ ಬೆಟ್ಟ ಗುಡ್ಡಗಳ ಸಂಖ್ಯೆಯೇನು ಕಡಿಮೆಯಿಲ್ಲ. ರೇವಣ ಸಿದ್ಧೇಶ್ವರ ಬೆಟ್ಟ, ಕುಂತಿ ಬೆಟ್ಟ, ರಾಮದೇವರ ಬೆಟ್ಟ, ಬಿಳಿಕಲ್‌ ರಂಗನಾಥ ಸ್ವಾಮಿ ಬೆಟ್ಟ, ಅಂತರಗಂಗೆ ಸೇರಿದಂತೆ ಇನ್ನೂ ಇತ್ಯಾದಿ ಬೆಟ್ಟ ಗುಡ್ಡಗಳ ಸಾಲುಗಳಿವೆ. ಈ ಜಾಗಗಳೂ ಕೂಡ ಯಾರಿಗೆ ಏನು ಮಾಡಿದರೂ ಕೂಡ ತಿಳಿಯದಂತ ಪ್ರದೇಶಗಳನ್ನು ಒಳಗೊಂಡಿವೆ. ಇವು ಬೆಂಗಳೂರು ನಗರದ ಸುತ್ತಮುತ್ತಲಿನ ಬೆಟ್ಟಗಳಷ್ಟೇ. ಇಂತಹವು ಕರ್ನಾಟಕದಲ್ಲಿ ಸಾಕಷ್ಟಿವೆ.

ರಾಮದೇವರ ಬೆಟ್ಟದ ಕಡಿದಾದ ದಾರಿ.
ರಾಮದೇವರ ಬೆಟ್ಟದ ಕಡಿದಾದ ದಾರಿ.

ಹೀಗೆ ಅಚಾನಕ್ಕಾಗಿಯೋ ಅಥವಾ ಉದ್ದೇಶಪೂರ್ವಕವಾಗಿಯೋ ಸಂಭವಿಸುತ್ತಿರುವ ಸಾವುಗಳ ಕೊಂಚ ಮುನ್ನೆಚರಿಕಾ ಕ್ರಮಗಳಿಂದ ತಡೆಯುವ ಸಾಧ್ಯತೆಗಳಿವೆ. ಚುಂಚನಕಟ್ಟೆ ಜಲಪಾತದ ಬಳಿ ವಿಜ್ಞಾನಿ ಸೋಮಶೇಖರ್ ಸಾವಿನ ನಂತರವಷ್ಟೆ ಸಂಬಂಧಪಟ್ಟವರು ಜನರಿಗೆ ಎಚ್ಚರಿಕೆ ನೀಡಲು ಕ್ರಮ ಕೈಗೊಂಡಿದ್ದಾರೆ. ಸ್ಥಳದಲ್ಲಿ ಗಸ್ತು ಸಿಬ್ಬಂದಿಯನ್ನು ನೇಮಿಸಿದ್ದಾರೆ.

ಕೆಆರ್‌ ನಗರದ ಸ್ಥಳೀಯ ಆಡಳಿತ ನಿಧಾನವಾಗಿಯಾದರೂ ತೆಗೆದುಕೊಂಡ ಈ ನಿರ್ಧಾರವನ್ನು ರಾಜ್ಯದ ಇತರೆ ಪ್ರವಾಸ ತಾಣಗಳಲ್ಲಿ ಅಳವಡಿಸಿಳ್ಳಬೇಕಿದೆ. ಇದಕ್ಕಾಗಿಯೇ ಯೋಜನೆಯೊಂದನ್ನು ಸರಕಾರ ರೂಪಿಸಬಹುದಾಗಿದೆ. ಸ್ಥಳೀಯ ಯುವಕ ಯುವತಿಯರನ್ನು ಗಸ್ತು ಸಿಬ್ಬಂದಿಗಳನ್ನಾಗಿ ಅಥವಾ ಎಚ್ಚರಿಕೆ ನೀಡುವ ಮಾಹಿತಿದಾರರನ್ನಾಗಿ ಸರಕಾರವೇ ನೇಮಕ ಮಾಡಿಕೊಂಡರೆ, ಒಂದಷ್ಟು ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಸಾವು ನೋವುಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಇದರ ಜತೆಗೆ ಅಗತ್ಯ ಇರುವ ಕಡೆಗಳಲ್ಲಿ ಫಲಕಗಳನ್ನು ಪ್ರದರ್ಶಿಸುವುದು, ಎಚ್ಚರಿಕೆ ನೀಡುವ ಸಂದೇಶಗಳನ್ನು ಪ್ರವಾಸಿಗರಿಗೆ ತಲುಪುವ ಹಾಗೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಗಂಭೀರವಾಗಿ ಮಾಡಬಹುದಾಗಿದೆ.

ಜನರನ್ನು ಪ್ರವಾಸರಿಂದ ದೂರ ಇರಿಸಲು ಸಾಧ್ಯವಿಲ್ಲ. ಅದೇ ವೇಳೆ ಮೋಜಿಗಾಗಿಯೇ ಹೋದರಿಂದ ಹೆಚ್ಚಿನ ಹೊಣೆಗಾರಿಕೆಯನ್ನು ನಿರೀಕ್ಷಿಸುವುದು ಕಷ್ಟ. ಆದರೆ, ಚಿಕ್ಕದೊಂದು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡರೆ ಸೋಮಶೇಖರ್ ತರಹದ ವಿಜ್ಞಾನಿಗಳನ್ನು ನಾವು ಉಳಿಸಿಕೊಳ್ಳಬಹುದಾಗಿದೆ. ಅದರ ಜತೆಗೆ, ಪ್ರವಾಸೋದ್ಯಮ ಅಡಿಯಲ್ಲಿ ಒಂದಷ್ಟು ಉದ್ಯೋಗಗಳನ್ನೂ ಸೃಷ್ಟಿಸಬಹುದಾಗಿದೆ. ನೂತನ ಸರಕಾರದಲ್ಲಿ ಇದು ಯಾರು ಪ್ರವಾಸೋದ್ಯಮ ಖಾತೆಯನ್ನು ತೆಗೆದುಕೊಳ್ಳುತ್ತಾರೆ ಎಂಬದನ್ನು ಇನ್ನಷ್ಟೆ ಖಾತ್ರಿಯಾಗಬೇಕಿದೆ. ಯಾರೇ ಸಚಿವರಾದರೂ, ಅವರು ಈ ನಿಟ್ಟಿನಲ್ಲಿ ಆಲೋಚನೆ ಮಾಡಲಿ ಎಂಬುದು ‘ಸಮಾಚಾರ’ದ ಒತ್ತಾಯ.