‘ತೂತುಕುಡಿ ಎಫೆಕ್ಟ್’: ಮಾಜಿ ನಕ್ಸಲೈಟ್ ನೀಲಗುಳಿ ಪದ್ಮನಾಭ್ ಬಂಧನ
COVER STORY

‘ತೂತುಕುಡಿ ಎಫೆಕ್ಟ್’: ಮಾಜಿ ನಕ್ಸಲೈಟ್ ನೀಲಗುಳಿ ಪದ್ಮನಾಭ್ ಬಂಧನ

ಅತಂತ್ರ ಸ್ಥಿತಿಯಲ್ಲಿರುವ ಇಂತಹ ಹೋರಾಟಗಾರರತ್ತಲೂ ಗಮನ ಹರಿಸಬೇಕಿದೆ. ಇಲ್ಲವಾದರೆ ಅವರನ್ನು ಮತ್ತೆ ಕಾಡಿಗೆ ತಳ್ಳಿದ ಕೀರ್ತಿಗೆ ಸಮ್ಮಿಶ್ರ ಸರಕಾರ ಪಾತ್ರವಾಗಲಿದೆ. 

ಕರ್ನಾಟಕದಲ್ಲಿ ನಕ್ಸಲ್‌ ಪ್ಯಾಕೇಜ್‌ ಎಂಬುದು ಸಶಸ್ತ್ರ ಹೋರಾಟಗಾರರ ಕಣ್ಣೊರೆಸುವ ತಂತ್ರದ ಭಾಗವಾಗಿತ್ತಾ? ಒಮ್ಮೆ ಸಶಸ್ತ್ರ ಹೋರಾಟ ಕೈಬಿಟ್ಟು ಹೊರಬಂದವರು ಅನ್ಯಾಯಗಳ ವಿರುದ್ಧ ಮಾತೇ ಆಡಬಾರದಾ? ಮುಖ್ಯವಾಹಿನಿಗೆ ಬಂದ ನಕ್ಸಲೀಯರನ್ನು ಮತ್ತೆ ಕಾಡಿಗೆ ಅಟ್ಟುವ ಪ್ರಯತ್ನವೊಂದು ಜಾರಿಯಲ್ಲಿದೆಯಾ? ಹೀಗೊಂದಿಷ್ಟು ಪ್ರಶ್ನೆಗಳು ಹುಟ್ಟಲು ಕಾರಣವಾಗಿದೆ ಗುರುವಾರ ಉಡುಪಿಯಲ್ಲಿ ನಡೆದ ನೀಲಗುಳಿ ಪದ್ಮನಾಭ್ ಬಂಧನ.

ನೀಲಗುಳಿ ಪದ್ಮನಾಭ್ ಮಲೆನಾಡಿನಲ್ಲಿ ದಶಕಗಳ ಹಿಂದೆ ಕ್ರೀಯಾಶೀಲವಾಗಿದ್ದ ನಕ್ಸಲ್‌ ಚಳವಳಿಯ ಜತೆ ಗುರುತಿಸಿಕೊಂಡಿದ್ದವರು. ಇದೇ ವೇಳೆಯಲ್ಲಿ ನಡೆದ ಅಪಘಾತವೊಂದರಲ್ಲಿ ಅವರು ಕಾಲನ್ನೂ ಕಳೆದುಕೊಂಡಿದ್ದರು ಎಂಬ ಮಾಹಿತಿ ಇತ್ತು. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಕ್ಸಲ್‌ ಚಳವಳಿಯಲ್ಲಿದ್ದವರನ್ನು ಮುಖ್ಯವಾಹಿನಿಗೆ ಪ್ರಕ್ರಿಯೆ ನಡೆದಿತ್ತು. 2016 ನವೆಂಬರ್ ಸಮಯದಲ್ಲಿ ನೀಲಗುಳಿ ಪದ್ಮನಾಭ್ ಚಿಕ್ಕಮಗಳೂರಿನಲ್ಲಿ ಪೊಲೀಸರ ಮುಂದೆ ಶರಣಾಗತಿ ಘೋಷಿಸಿದ್ದರು. ಆಗ ಅವರ ಮೇಲೆ ಸುಮಾರು 16 ಪ್ರಕರಣಗಳಿದ್ದವು.

ಶರಣಾಗತಿ ನಂತರ ನೀಲಗುಳಿ ಪದ್ಮನಾಭ್ ಅವರನ್ನು ಪೊಲೀಸರು ಬಂಧಿಸಿ ಸುಮಾರು 9 ತಿಂಗಳುಗಳ ಕಾಲ ಜೈಲಿಗೆ ಕಳುಹಿಸಿದ್ದರು. ಆ ನಂತರ ಹೊರಬಂದ ಅವರು ಕುಟುಂಬ ಸಮೇತ ಚಿಕ್ಕಮಗಳೂರಿನಲ್ಲಿಯೇ ವಾಸವಾಗಿದ್ದರು. ಇತ್ತೀಚೆಗೆ ತೂತುಕಡಿಯಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಇನ್ನೊಂದೆಡೆ ಕಾನೂನು ಹೋರಾಟ ಮುಂದುವರಿಸಿದ್ದರು.

“ಶರಣಾಗತರಾದರೂ ನಮ್ಮ ಮೇಲೆ ಪೊಲೀಸರು ಹಾಕಿದ್ದ ಹಲವು ಸುಳ್ಳು ಕೇಸುಗಳ ವಿಚಾರಣೆ ನ್ಯಾಯಾಲಯಗಳಲ್ಲಿ ನಡೆಯುತ್ತಲೇ ಇತ್ತು. ಭೋಜಶೆಟ್ಟಿ ಹತ್ಯೆ ಪ್ರಕರಣದ ವಿಚಾರಣೆ ಉಡುಪಿಯಲ್ಲಿತ್ತು. ಅದು ಮುಗಿಯುವ ಹಂತದಲ್ಲಿದ್ದರಿಂದ ಕಳೆದ ನಾಲ್ಕು ದಿನಗಳ ಕಾಲ ಪದ್ಮನಾಭ್ ಅಲ್ಲಿಯೇ ಉಳಿದುಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದರು. ಆದರೆ ಗುರುವಾರ ಬೆಳಗ್ಗೆ ನ್ಯಾಯಾಲಯದ ವಿಚಾರಣೆ ಮುಗಿಸಿ ಹೊರಬರುವ ಸಮಯದಲ್ಲಿ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ,’’ ಎಂದು ಪದ್ಮನಾಭ್ ಪತ್ನಿ ರೇಣುಕಾ ಮಾಹಿತಿ ನೀಡಿದರು.

ಮಗನ ಜತೆ ಪದ್ಮನಾಭ್ ಪತ್ನಿ ರೇಣುಕಾ. 
ಮಗನ ಜತೆ ಪದ್ಮನಾಭ್ ಪತ್ನಿ ರೇಣುಕಾ. 

‘ಸಮಾಚಾರ’ದ ಜತೆ ಮಾತನಾಡಿದ ಅವರು, “ಪೊಲೀಸರು ಶರಣಾಗತಿ ಆಗುವ ಸಮಯದಲ್ಲಿ ನಾವಿನ್ನು ಸ್ವತಂತ್ರರು. ನ್ಯಾಯಾಲಯದಲ್ಲಿ ನಮ್ಮ ಮೇಲಿರುವ ಕೇಸುಗಳನ್ನು ಖುಲಾಸೆ ಮಾಡಿಸಿಕೊಳ್ಳಿ. ಆದರೆ ಪೊಲೀಸರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆ ನೀಡಿದ್ದರು. ಆದರೆ ಈಗ ಏಕಾಏಕಿ ಬಂಧಿಸಿದ್ದಾರೆ,’’ ಎಂದು ಆತಂಕವನ್ನು ತೋಡಿಕೊಂಡರು.

ಪದ್ಮನಾಭ್ ಅವರ ಪ್ರಕರಣಗಳನ್ನು ಉಡುಪಿ ನ್ಯಾಯಾಲಯದಲ್ಲಿ ವಾದ ಮಾಡುತ್ತಿರುವ ವಕೀಲ ಶಾಂತರಾಮ ಶೆಟ್ಟಿ ಅವರಿಗೂ ಗುರುವಾರ ನಡೆದ ಬಂಧನದ ಕುರಿತು ಹೆಚ್ಚಿನ ಮಾಹಿತಿ ಇಲ್ಲ. “ಕುಂದಾಪುರ ಪೊಲೀಸರು ಪದ್ಮನಾಭ್‌ರನ್ನು ಬಂಧಿಸಿದ್ದಾರೆ. ಆದರೆ ಆ ಕುರಿತು ಹೆಚ್ಚಿನ ಮಾಹಿತಿ ಇಲ್ಲ,’’ ಎಂದರು ಶೆಟ್ಟರು.

ಪದ್ಮನಾಭ್ ಬಂಧನದ ಕುರಿತು ಮಾಹಿತಿ ನೀಡಿದ ಉಡುಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ, “ಪದ್ಮನಾಭ್ ಮೇಲೆ 2 ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಇನ್ನೆರಡು ಪ್ರಕರಣಗಳು ಲಾಂಗ್ ಪೆಂಡಿಂಗ್ ಕೇಸ್‌ ಎನ್ನಿಸಿಕೊಂಡಿದ್ದವು. ಅಮಾಸೆಬೈಲು ಹಾಗೂ ಶಂಕರನಾರಾಯಣದಲ್ಲಿ ನಡೆದ ಪ್ರಕರಣಗಳಿವು. ಈ ಕುರಿತು ಅವರಿಗೆ ಶರಣಾಗತಿ ಸಮಯದಲ್ಲಿಯೇ ಮಾಹಿತಿ ನೀಡಿದ್ದೆವು. ಈಗ ನಾವು ಕಾನೂನು ಪಾಲನೆ ಮಾಡಿದ್ದೇವೆ,’’ ಎಂದರು.

ಏನಿದು ನಕ್ಸಲ್‌ ಪ್ಯಾಕೇಜ್?:

ಎರಡು ವರ್ಷಗಳ ಮುಂಚೆ ಚಿಕ್ಕಮಗಳೂರು ಪೊಲೀಸರಿಗೆ ಶರಣಾದ ಸಮಯದಲ್ಲಿ ನೀಲಗುಳಿ ಪದ್ಮನಾಭ್. (ಎಡದಿಂದ ಎರಡನೇಯವರು). 
ಎರಡು ವರ್ಷಗಳ ಮುಂಚೆ ಚಿಕ್ಕಮಗಳೂರು ಪೊಲೀಸರಿಗೆ ಶರಣಾದ ಸಮಯದಲ್ಲಿ ನೀಲಗುಳಿ ಪದ್ಮನಾಭ್. (ಎಡದಿಂದ ಎರಡನೇಯವರು). 

ನಕ್ಸಲ್ ಹೋರಾಟವನ್ನು ದೇಶದ ಆಂತರಿಕ ಭದ್ರತೆಯ ಅಪಾಯಗಳ ಪಟ್ಟಿಯಲ್ಲಿ ನಂಬರ್ 1 ಎಂದು ಹಿಂದಿನ ಯುಪಿಎ ಸರಕಾರವೇ ಹೇಳಿತ್ತು. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ನಕ್ಸಲ್ ಚಳವಳಿಯಲ್ಲಿದ್ದವರನ್ನು ಮುಖ್ಯವಾಹಿನಿಗೆ ಕರೆತರುವ ಸಲುವಾಗಿ ವಿಶೇಷ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಕೂಡ 2010ರ ಜೂನ್ ತಿಂಗಳಿನಲ್ಲಿ ನಕ್ಸಲ್‌ ಪ್ಯಾಕೇಜ್‌ ಹೆಸರಿನಲ್ಲಿ ಯೋಜನೆಯೊಂದನ್ನು ಜಾರಿಗೆ ತರಲಾಗಿತ್ತು.

ಇದರ ಅಡಿಯಲ್ಲಿ ನಕ್ಸಲ್ ಹೋರಾಟದಲ್ಲಿ ನೇರವಾಗಿ ಭಾಗಿಯಾಗಿದ್ದು ಭೂಗತರಾಗಿರುವವರು (ರೆಡ್‌ ಝೋನ್), ನಕ್ಸಲ್‌ ಚಳವಳಿಯಲ್ಲಿದ್ದು ಭೂಗತರ ಪಟ್ಟಿಯಲ್ಲಿ ಇಲ್ಲದವರರು (ಗ್ರೇ ಝೋನ್) ಹಾಗೂ ಮಾಹಿತಿದಾರರು ಹಾಗೂ ಅನುಕಂಪ ಹೊಂದಿರುವವರು ( ಗ್ರೀನ್ ಝೋನ್) ಎಂಬ ಮೂರು ವಿಭಾಗಗಳನ್ನಾಗಿ ಮಾಡಲಾಗಿತ್ತು. ಇವರಿಗೆ ಹಣ ಮತ್ತು ಜಮೀನುಗಳನ್ನು ನೀಡಿ ಹೊಸ ಬದುಕು ಕಟ್ಟಿಕೊಳ್ಳುವ ಅವಕಾಶಗಳನ್ನು ನೀಡುವುದಾಗಿ ಯೋಜನೆ ಹೇಳಿತ್ತು. ಆದರೆ ಇದಕ್ಕೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಇಲ್ಲಿವರೆಗೂ ಲಭ್ಯವಾಗಿಲ್ಲ.

ಸದ್ಯ ನೀಲಗುಳಿ ಪದ್ಮನಾಭ್ ತರದವರು, ನಕ್ಸಲ್ ಹೋರಾಟದಲ್ಲಿ ನಾನಾ ಕಾರಣಗಳಿಗಾಗಿ ಮುಂದುವರಿಯಲು ಸಾಧ್ಯವಾಗದೆ ಇರುವವರು ಮಾತ್ರವೇ ನಕ್ಸಲ್ ಪ್ಯಾಕೇಜ್‌ಗಳನ್ನು ಒಪ್ಪಿಕೊಂಡು ಶರಣಾಗಿದ್ದಾರೆ.

“ಶರಣಾಗತಿ ಸಮಯದಲ್ಲಿ ನಾವು ಹಣ ಆಗಲಿ, ಜಮೀನನ್ನಾಗಲಿ ಪಡೆಯಲಿಲ್ಲ. ಬದಲಿಗೆ ನಮ್ಮ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ಹಿಂಪಡೆಯಿರಿ ಎಂದು ಬೇಡಿಕೆ ಇಟ್ಟಿದ್ದೆವು. ಇದನ್ನು ಮಧ್ಯಸ್ಥಿಕೆ ವಹಿಸಿದ್ದ ‘ಶಾಂತಿಗಾಗಿ ನಾಗರಿಕರ ವೇದಿಕೆ’ಗೂ ತಿಳಿಸಿದ್ದೆವು. ಮೊದಲು ಎಲ್ಲಾ ಭರವಸೆ ನೀಡಿದವರು ಶರಣಾದ ನಂತರ ಕೇಸು ಹಿಂಪಡೆಯಲು ಸಾಧ್ಯವಿಲ್ಲ ಎಂದರು. 16 ಪ್ರಕರಣಗಳಲ್ಲಿ 15ರಲ್ಲಿ ನಾನೇ ಪುಟ್ಟ ಮಗುವನ್ನು ಕಟ್ಟಿಕೊಂಡು ಓಡಾಡಿ ಜಾಮೀನು ಮಾಡಿಸಿದ್ದೆ. ಕೂಲಿ ಮಾಡುವ ಜನ ನಾವು. ಕಾನೂನು ಹೋರಾಟಕ್ಕೆ ಎಷ್ಟು ಖರ್ಚಾಗುತ್ತೆ ಎಂಬುದು ನಿಮಗೂ ಗೊತ್ತು,’’ ಎಂದು ಕಣ್ಣೀರಿಟ್ಟರು ಪದ್ಮನಾಭ್ ಪತ್ನಿ ರೇಣುಕಾ.

ಸದ್ಯ ಪದ್ಮನಾಭ್ ಬಂಧನವಾಗಿದೆ. ಇದಕ್ಕೆ ಕಾರಣ ಇತ್ತಿಚೆಗೆ ತೂತುಕುಡಿಯಲ್ಲಿ ನಡೆದ ಪೊಲೀಸ್ ಫೈರಿಂಗ್ ಪ್ರತಿಭಟಿಸಿ ನಡೆದ ಸಭೆಯಲ್ಲಿ ಪದ್ಮನಾಭ್ ಪಾಲ್ಗೊಂಡು ಭಾಷಣ ಮಾಡಿದ್ದು ಎಂಬ ಅನುಮಾನ ರೇಣುಕಾ ಅವರಿಗಿದೆ.

“ಎಲ್ಲೋ ಅನ್ಯಾಯ ಆಗಿದೆ ಅಂದರೆ ಸುಮ್ಮನೆ ಕೂರುವ ಮುನುಷ್ಯ ಅಲ್ಲ ಸಾರ್. ಮೊನ್ನೆ ಹಾಗೆ ಯಾರೋ ಕರೆದರು ಅಂತ ಹೋಗಿ ಭಾಷಣ ಮಾಡಿ ಬಂದರು. ಅದನ್ನು ಪೊಲೀಸರು ರೆಕಾರ್ಡ್‌ ಮಾಡಿಕೊಂಡಿದ್ದರು. ಬಹುಶಃ ಈಗ ಹೇಳದೆ ಕೇಳದೆ ಅರೆಸ್ಟ್ ಮಾಡಲು ಅದೇ ಕಾರಣ ಇರಬಹುದು. ಶರಣಾಗಿದ್ದೀರಿ, ಸುಮ್ಮನೆ ಮನೆಯಲ್ಲಿರಿ ಎಂಬ ಧೋರಣೆ ಪೊಲೀಸರದ್ದು. ಈಗ ಜಾಮೀನು ಮಾಡಿಸಲು ಮತ್ತೆ ಹಣ ಹೊಂದಿಸಬೇಕು. ಇದನ್ನೆಲ್ಲಾ ನೋಡುತ್ತಿದ್ದರೆ ಹಳೆ ದಾರಿಯನ್ನು ಹಿಡಿಯುವುದೇ ಲೇಸು ಅನ್ನಿಸುತ್ತದೆ,’’ ಎಂದ ರೇಣುಣಾ ದನಿಯಲ್ಲಿ ಅಸಹಾಯಕತೆ ಇತ್ತು.

ಒಂದು ಕಡೆ ನಕ್ಸಲ್ ಪ್ಯಾಕೇಜ್, ನಕ್ಸಲ್ ಕಾರ್ಯಾಚರಣೆ ಹೆಸರಿನಲ್ಲಿ ಕರ್ನಾಟಕದಲ್ಲಿಯೇ ಕೆಲವು ಐಪಿಎಸ್ ಅಧಿಕಾರಿಗಳು ದುಂಡಗಾದರು. ಇವರನ್ನು ಹಾಗೂ ಶಾಂತಿಗಾಗಿ ನಾಗರಿಕ ವೇದಿಕೆಯಂತಹ ಮಧ್ಯಸ್ಥಿಕೆದಾರರನ್ನು ನಂಬಿಕೊಂಡು ಹೊರಬಂದ ಪದ್ಮನಾಭ್ ತರದವರು ಕಾನೂನು ಸಿಕ್ಕುಗಳ ನಡುವೆ ಬದುಕು ಕಟ್ಟಿಕೊಳ್ಳಲು ಇನ್ನೂ ಒದ್ದಾಡುತ್ತಲೇ ಇದ್ದಾರೆ. ಅತ್ತ ನಕ್ಸಲೀಯರೂ ಇಲ್ಲ, ಇತ್ತ ವ್ಯವಸ್ಥೆಯೂ ಇಲ್ಲ ಎಂಬ ಸ್ಥಿತಿ ಅವರುಗಳದ್ದಾಗಿದೆ.

ವ್ಯವಸ್ಥೆಗೊಂದು ಮಾನವೀಯ ಸ್ಪರ್ಶ ಇಲ್ಲದೆ ಹೋದರೆ, ಯಾವ ಶರಣಾಗತಿ ಪ್ಯಾಕೇಜುಗಳು ಕೆಲಸ ಮಾಡುವುದಿಲ್ಲ ಎಂಬುದಕ್ಕೆ ಇಂತಹವರು ಸಾಕ್ಷಿಗಳಾಗಿ ನಿಂತಿದ್ದಾರೆ. ಜನತಾ ದರ್ಶನಗಳ ಮೂಲಕ ಬಡವರ ಕಣ್ಣೊರೆಸುವ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ, ಅತಂತ್ರ ಸ್ಥಿತಿಯಲ್ಲಿರುವ ಇಂತಹ ಹೋರಾಟಗಾರರತ್ತಲೂ ಗಮನ ಹರಿಸಬೇಕಿದೆ. ಇಲ್ಲವಾದರೆ ಅವರನ್ನು ಮತ್ತೆ ಕಾಡಿಗೆ ತಳ್ಳಿದ ಕೀರ್ತಿಗೆ ಸಮ್ಮಿಶ್ರ ಸರಕಾರ ಪಾತ್ರವಾಗಲಿದೆ.