‘ವೈಟ್‌ಹೌಸ್‌ನಲ್ಲಿ ಇಫ್ತಾರ್‌’:   ಟ್ರಂಪ್‌ ಆಮಂತ್ರಣವನ್ನು ನಿರಾಕರಿಸಿದ ಮುಸ್ಲಿಂ ಸಂಘಟನೆಗಳು
COVER STORY

‘ವೈಟ್‌ಹೌಸ್‌ನಲ್ಲಿ ಇಫ್ತಾರ್‌’: ಟ್ರಂಪ್‌ ಆಮಂತ್ರಣವನ್ನು ನಿರಾಕರಿಸಿದ ಮುಸ್ಲಿಂ ಸಂಘಟನೆಗಳು

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವೈಟ್‌ ಹೌಸ್‌ನಲ್ಲಿ ಮೊದಲ ಬಾರಿಗೆ ಏರ್ಪಡಿಸಿರುವ ಇಫ್ತಾರ್‌ ಕೂಟಕ್ಕೆ ಹಾಜಾರಾಗದಿರಲು ಮುಸ್ಲಿಂ ಸಮುದಾಯ ತೀರ್ಮಾನಿಸಿದೆ. ಇದಕ್ಕೆ ಟ್ರಂಪ್‌ರ ಮುಸ್ಲಿಂ ವಿರೋದಿ ನೀತಿಯೇ ಕಾರಣ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವೈಟ್‌ ಹೌಸ್‌ನಲ್ಲಿ ಮೊದಲ ಬಾರಿಗೆ ಏರ್ಪಡಿಸಿರುವ ಇಫ್ತಾರ್‌ ಕೂಟಕ್ಕೆ ಹಾಜರಾಗದಿರಲು ಮುಸ್ಲಿಂ ಸಮುದಾಯ ತೀರ್ಮಾನಿಸಿದೆ. ಡೊನಾಲ್ಡ್ ಅನುಸರಿಸುತ್ತಿರುವ ಮುಸ್ಲಿಂ ವಿರೋಧಿ ನೀತಿಯ ಕಾರಣದಿಂದ ಅಸಮಾಧಾನಗೊಂಡಿರುವ ಸಮುದಾಯ, ಇಂತಹದ್ದೊಂದು ಪ್ರತಿಭಟನೆಗೆ ಮುಂದಾಗಿದೆ.

ಅಮೆರಿಕಾದ ಅಧ್ಯಕ್ಷರಾಗುವವರ ಅಧಿಕೃತ ನಿವಾಸ ವೈಟ್‌ ಹೌಸ್‌ನಲ್ಲಿ ಶತಮಾನಗಳ ಕಾಲದಿಂದ ಇಫ್ತಾರ್‌ ಕೂಟವನ್ನು ಆಯೋಜಿಸಿಕೊಂಡು ಬರಲಾಗಿತ್ತು. 1805ರಲ್ಲಿ ಥಾಮಸ್‌ ಜಾಫರ್‌ಸನ್‌ ಅಮೆರಿಕಾದ ಅಧ್ಯಕ್ಷ ಸ್ಥಾನವನ್ನು ವಹಿಸಿದಾಗಲೇ ಈ ಕಾರ್ಯಕ್ಕೆ ಮುನ್ನುಡಿ ಬರೆದಿದ್ದರು. ಆದರೆ ಕೆಲವು ವರ್ಷಗಳ ನಂತರ ವೈಟ್‌ ಹೌಸ್‌ ಒಳಗಿನ ಇಫ್ತಾರ್‌ ಆಯೋಜನೆ ನಿಂತು ಹೋಗಿತ್ತು. ಮತ್ತೆ 1990ರಲ್ಲಿ ಅಮೆರಿಕಾದ ಅಧ್ಯಕ್ಷ ಸ್ಥಾನಕ್ಕೇರಿದ್ದ ಬಿಲ್ ಕ್ಲಿಂಟನ್‌ ಇಫ್ತಾರ್‌ ಆಯೋಜನೆಗೆ ಮರು ಚಾಲನೆ ನೀಡಿದ್ದರು. ಅಂದಿನಿಂದ 2016ರವರೆಗೂ ಇಫ್ತಾರ್‌ ನಡೆಯುತ್ತಲೇ ಬಂದಿತ್ತು.

ವೈಟ್‌ಹೌಸ್‌ನಲ್ಲಿ ನಡೆದ ಇಫ್ತಾರ್‌ ಕೂಟದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ.
ವೈಟ್‌ಹೌಸ್‌ನಲ್ಲಿ ನಡೆದ ಇಫ್ತಾರ್‌ ಕೂಟದಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ.

ಮುಸ್ಲಿಂ ವಿರೋಧಿ ನೀತಿಗಳನ್ನು ತನ್ನವಾಗಿಸಿಕೊಂಡಿದ್ದ ಡೊನಾಲ್ಡ್‌ ಟ್ರಂಪ್, ಅಮೆರಿಕಾದ ಅಧ್ಯಕ್ಷಗಿರಿಯನ್ನು ವಹಿಸಿಕೊಂಡ ನಂತರದಲ್ಲಿ ವೈಟ್‌ ಹೌಸ್‌ನಲ್ಲಿ ಇಫ್ತಾರ್‌ ಕೂಟ ನಡೆದಿರಲಿಲ್ಲ. ಈಗ ಮನಸು ಬದಲಾಯಿಸಿರುವ ಟ್ರಂಪ್‌ ತಮ್ಮ ನಿವಾಸ ವೈಟ್‌ ಹೌಸ್‌ನಲ್ಲಿ ಇಫ್ತಾರ್‌ ಕೂಟ ಆಯೋಜಿಸುವ ನಿರ್ಧಾರ ಕೈಗೊಂಡಿದ್ದರು. ಈ ವಾರದ ಪ್ರಾರಂಭದಲ್ಲಿ ವೈಟ್‌ ಹೌಸ್‌ನಲ್ಲಿ ಈ ವರ್ಷದ ಇಫ್ತಾರ್ ಕೂಟ ನಡೆಯುವುದು ಖಚಿತವಾಗಿತ್ತು. ಆದರೆ ಟ್ರಂಪ್‌ರ ಈ ನಿರ್ಧಾರಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ಸಕಾರಾತ್ಮಕ ನಿಲುವು ವ್ಯಕ್ತಪಡಿಸಿಲ್ಲ.

ಗುರುವಾರ ರಾತ್ರಿ ಇಫ್ತಾರ್‌ ಆಯೋಜನೆ ನಿಗಧಿಯಾಗಿದ್ದು, ಎಷ್ಟು ಮುಸ್ಲಿಂ ಸಂಘಟನೆಗಳ ಸದಸ್ಯರು ಭಾಗಿಯಾಗಲಿದ್ದಾರೆ ಎನ್ನುವುದು ತಿಳಿಯದಾಗಿದೆ.

ಈ ಕುರಿತು ಬುಧವಾರ ತಮ್ಮ ದಿನನಿತ್ಯದ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವೈಟ್‌ ಹೌಸ್‌ನ ಮಾಧ್ಯಮ ಕಾರ್ಯದರ್ಶಿ ಸರಾಹ್‌ ಸ್ಯಾಂಡರ್ಸ್, “ನನ್ನ ನಂಬಿಕೆ ಪ್ರಕಾರ ಹೆಚ್ಚೆಂದರೆ 30ರಿಂದ 40 ಜನ ಇಫ್ತಾರ್‌ ಕೂಟದಲ್ಲಿ ಭಾಗಿಯಾಗಬಹುದು,” ಎಂಬ ಅಂದಾಜು ಸಂಖ್ಯೆಯನ್ನು ತಿಳಿಸಿದ್ದಾರೆ.

ಹಿಂದಿನಿಂದಲೂ ಕೂಡ ಇಫ್ತಾರ್‌ ಕೂಟದಲ್ಲಿ ಭಾಗಿಯಾಗುತ್ತಿದ್ದ ವಾಷಿಂಗ್‌ಟನ್‌ ನಗರದಲ್ಲಿರುವ ಪ್ರಮುಖ ಇಸ್ಲಾಂ ಸಂಘಟನೆಗಳು ಈ ಬಾರಿಯ ಕೂಟದಲ್ಲಿ ಭಾಗಿಯಾಗಲು ನಿರಾಕರಿಸಿದ್ದು, “ಟ್ರಂಪ್ ಇಸ್ಲಾಂ ಧರ್ಮವನ್ನು ಮತ್ತು ಅದರ ಅನುಯಾಯಿಗಳುನ್ನು ಗುರಿಯಾಗಿಸಿಕೊಂಡಿದ್ದಾರೆ,” ಎಂದಿದ್ದಾರೆ. ಇನ್ನೂ ಕೆಲವು ಸಂಘಟನೆಗಳ ಪ್ರಮುಖರು ವೈಟ್‌ ಹೌಸ್‌ ಮುಂದೆ ತಾವೇ ಇಫ್ತಾರ್‌ ಕೂಟ ಆಯೋಜಿಸುವುದಾಗಿ ತಿಳಿಸಿದ್ದಾರೆ.

“ಡೊನಾಲ್ಡ್ ಟ್ರಂಪ್‌ ತಮ್ಮ ಆಡಳಿತಾವಧಿಯ ಪ್ರಾರಂಭದಿಂದಲೂ ಸಹ ಅಮೆರಿಕಾದಲ್ಲಿನ ಮುಸಲ್ಮಾರ ಬಗ್ಗೆ ವಿರೋಧಿ ಧೋರಣೆಯನ್ನು ಅನುಸರಿಕೊಂಡು ಬಂದಿದ್ದಾರೆ. ಆದ್ದರಿಂದಾಗಿ ಇಫ್ತಾರ್‌ ಕೂಟವನ್ನು ನಿರಾಕರಿಸಿದ್ದೇವೆ,” ಎಂದು ಸಂಘಟನೆಯೊಂದು ಹೇಳಿದೆ.

ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಷನ್ಸ್ ಸಂಘಟನೆ, "ಟ್ರಂಪ್‌ ಹಿಂದೆಂದೂ ಕಂಡಿಲ್ಲದ ಮುಸ್ಲಿಂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ,” ಎಂದಿದೆ. ವಾಷಿಂಗ್‌ಟನ್‌ ಮೂಲದ ಮಾನವ ಹಕ್ಕುಗಳ ಸಂಘಟನೆಗಳು ಕೂಡ ಟ್ರಂಪ್‌ರ ಮೂಲಭೂತವಾದಿ ಧೋರಣೆಯನ್ನು ತಿರಸ್ಕರಿಸುತ್ತಾ ಬಂದಿದ್ದು, ಇಫ್ತಾರ್‌ ಕೂಟಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಇಸ್ಲಾಂ ಸಂಘಟನೆಗಳ ಜತೆ ಕೈ ಜೋಡಿಸಿವೆ.

ಡೊನಾಲ್ಡ್ ಟ್ರಂಪ್‌ 2016ರಲ್ಲಿ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರವನ್ನು ಆರಂಭಿಸಿದಾಗ ಮುಸಲ್ಮಾನರು ಅಮೆರಿಕಾಗೆ ಬರುವುದನ್ನು ನಿಷೇಧಿಸುತ್ತೇನೆ ಎಂದಿದ್ದರು. ಅಧಿಕಾರ ಹಿಡಿದ ನಂತರ ಟ್ರಂಪ್‌ ಮೊದಲು ಕೈಗೆತ್ತಕೊಂಡ ಕಾರ್ಯಗಳಲ್ಲಿ ಮುಸ್ಲಿಂ ದೇಶಗಳ ಪ್ರವಾಸವನ್ನು ರದ್ದು ಮಾಡಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಿ ಟ್ರಂಪ್‌ ಮುಸ್ಲಿಂ ಧರ್ಮವನ್ನು ವಿರೋಧಿಸುವ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.

ಇಲ್ಲಿಯವರೆಗೂ ಮುಸಲ್ಮಾನರ ವಿರುದ್ಧ ಮಾತನಾಡಿಕೊಂಡು ಬಂದ ಟ್ರಂಪ್‌, ಈಗ ಇಫ್ತಾರ್‌ ಕೂಟ ಆಯೋಜಿಸಿರುವುದರ ಕುರಿತು ಸಹಜವಾಗಿಯೇ ವಿರೋಧ ವ್ಯಕ್ತವಾಗಿದೆ. ಗುರುವಾರ ಸಂಜೆ ವೈಟ್‌ ಹೌಸ್‌ನಲ್ಲಿ ನಡೆಯಲಿರುವ ಇಫ್ತಾರ್‌ ಕೂಟದಲ್ಲಿ ಎಷ್ಟು ಮಂದಿ ಮುಸಲ್ಮಾನರು ಭಾಗಿಯಾಗುತ್ತಾರೆ ಎನ್ನುವುದರ ಮೇಲೆ ಟ್ರಂಪ್‌ರ ಈ ಇಫ್ತಾರ್‌ ಕೂಟ ಯಶಸ್ವಿಯಾಗುತ್ತದೆಯೇ ಇಲ್ಲವೇ ಎನ್ನುವುದು ತಿಳಿಯಲಿದೆ.

ಇದಕ್ಕೂ ಮೊದಲು ಅಮೆರಿಕಾದಲ್ಲಿ ಇಸ್ಲಾಂ ವಿರೋಧಿ ಮನಸ್ಥಿತಿಯನ್ನು ಭಿತ್ತಲು ಹೇಗೆ ಚಾರಿಟಿ ಹೆಸರಿನಲ್ಲಿ ಷಡ್ಯಂತ್ರವೊಂದು ನಡೆಯುತ್ತಿದೆ ಎಂಬ ಕುರಿತು ಇತ್ತೀಚೆಗೆ ತನಿಖಾ ವರದಿಯೊಂದು ಹೊರಬಿದ್ದಿದೆ. ಆಸಕ್ತರು ವೀಕ್ಷಿಸಿ.