‘ಕಾಲಾ ವಿವಾದ’: ಕಾವೇರಿ ವಿಚಾರ ಮೀರಿದ ಲಾಭನಷ್ಟದ ಸಿನಿ ಲೆಕ್ಕಾಚಾರ!
COVER STORY

‘ಕಾಲಾ ವಿವಾದ’: ಕಾವೇರಿ ವಿಚಾರ ಮೀರಿದ ಲಾಭನಷ್ಟದ ಸಿನಿ ಲೆಕ್ಕಾಚಾರ!

ರಜನಿಕಾಂತ್‌ ನಟನೆಯ ‘ಕಾಲಾ’ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸೇ ತೀರುವುದಾಗಿ ಕನ್ನಡ ಸಂಘಟನೆಗಳು ಹೇಳಿವೆ. ಹಾಗೆ ನೋಡಿದರೆ ವಿವಾದವನ್ನೂ ಲಾಭ ಮಾಡಿಕೊಳ್ಳುವ ಚಿತ್ರೋದ್ಯಮಕ್ಕೆ ಪ್ರತಿಭಟನೆಗಳು ಹೊಸತೇನಲ್ಲ. 

ರಜನಿಕಾಂತ್‌ ನಟನೆಯ ತಮಿಳಿನ ‘ಕಾಲಾ’ ಸಿನಿಮಾ ಗುರುವಾರ ಬಿಡುಗಡೆಯಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಕನ್ನಡ ಸಂಘಟನೆಗಳ ಪ್ರತಿಭಟನೆಯ ಭೀತಿ ಎದುರಾಗಿದೆ.

‘ಕಾಲಾ’ ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರುವ ಹೈಕೋರ್ಟ್‌, ಈ ಸಿನಿಮಾ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳಿಗೆ ಭದ್ರತೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಹಾಗೂ ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶ ಹೊರಬಂದು ಸರಕಾರ ರಚನೆಯ ಹಗ್ಗಜಗ್ಗಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಕಾವೇರಿ ವಿಚಾರವಾಗಿ ನೀಡಿದ್ದ ಹೇಳಿಕೆ ಈಗ ರಾಜ್ಯದಲ್ಲಿ ‘ಕಾಲಾ’ ಸಿನಿಮಾ ಪ್ರದರ್ಶನಕ್ಕೆ ತೊಡರಾಗಿದೆ. “ಕರ್ನಾಟಕದಲ್ಲಿ ಯಾವುದೇ ಸರಕಾರ ಬಂದರೂ ಸರಿ ತಮಿಳುನಾಡಿಗೆ ನೀರು ಬಿಡಬೇಕು” ಎಂದು ರಜನಿಕಾಂತ್ ಹೇಳಿದ್ದರು. ರಜನಿಕಾಂತ್‌ ಅವರ ಈ ಹೇಳಿಕೆಗಳಿಗೆ ರಾಜ್ಯದಲ್ಲಿ ಎದ್ದ ವಿರೋಧ ಅವರ ನಟನೆಯ ‘ಕಾಲಾ’ ಚಿತ್ರದ ನಿಷೇಧಕ್ಕೆ ಒತ್ತಡ ತಂದಿದೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಜನಿಕಾಂತ್‌ ಕರ್ನಾಟಕದ ವಿರುದ್ಧ ಹೇಳಿಕೆಗಳನ್ನು ನೀಡಿದ ಕಾರಣಕ್ಕೆ ಅವರ ನಟನೆಯ ‘ಕಾಲಾ’ ಚಿತ್ರದ ಮೇಲೆ ಕೋಪಗೊಂಡಿರುವ ಕನ್ನಡ ಸಂಘಟನೆಗಳು ಚಿತ್ರ ಪ್ರದರ್ಶನ ನಡೆಯದಂತೆ ಪ್ರತಿಭಟನೆ ನಡೆಸಲು ಮುಂದಾಗಿವೆ.

ರಜನಿ ನಟನೆಯ ಎಲ್ಲಾ ಚಿತ್ರಗಳಿಗೂ ವಿರೋಧ:

“ಕಾವೇರಿ ನೀರು ಹಂಚಿಕೆ ಮಂಡಳಿ ರಚನೆಯಾಗಬೇಕೆಂದು ಹೇಳಿಕೆ ನೀಡಿರುವ ರಜನಿಕಾಂತ್‌ ಕನ್ನಡ ವಿರೋಧಿ, ಕರ್ನಾಟಕ ವಿರೋಧಿ. ಮಂಡಳಿ ರಚನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ. ಕಾವೇರಿ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ನಾವು ರಜನಿಕಾಂತ್‌ ನಟನೆಯ ‘ಕಾಲಾ’ ಚಿತ್ರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ” ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

“ರಜನಿಕಾಂತ್‌ ನಟನೆಯ ಯಾವುದೇ ಚಿತ್ರವನ್ನೂ ನಾವು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ. ರಜನಿಕಾಂತ್‌ ಚಿತ್ರಗಳ ವಿರುದ್ಧ ನಮ್ಮ ಪ್ರತಿಭಟನೆ ಮುಂದೆಯೂ ನಡೆಯುತ್ತದೆ. ರಜನಿಕಾಂತ್‌ ಒಂದು ವೇಳೆ ಕ್ಷಮೆ ಕೋರಿದರೂ ನಾವು ಪ್ರತಿಭಟನೆಯ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದಿಲ್ಲ” ಎನ್ನುತ್ತಾರೆ ವಾಟಾಳ್‌.

ರಜನಿಕಾಂತ್‌ ನಟನೆಯ ಜತೆಗೆ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ. ಹೀಗಾಗಿ ರಜನಿಕಾಂತ್‌ ಹೇಳಿಕೆ ಈಗ ತಮಿಳು ಭಾಷೆಯ ಜನಪ್ರಿಯ ನಟನೊಬ್ಬನ ಹೇಳಿಕೆಯಷ್ಟೇ ಅಲ್ಲ, ತಮಿಳುನಾಡಿನ ರಾಜಕಾರಣಿಯ ಹೇಳಿಕೆ ಕೂಡಾ. ಸಿನಿಮಾಗಳಲ್ಲಿ ಹೀರೋಯಿಸಂ ತೋರುವ ಜನಪ್ರಿಯ ನಟರು, ನಿಜ ಜೀವನದಲ್ಲಿ ಅದನ್ನೆಲ್ಲಾ ಮಾಡಲು ಸಾಧ್ಯವಾಗದ ಸಂದರ್ಭಗಳೇ ಹೆಚ್ಚು. ಆದರೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ರಾಜಕೀಯ ತಾಳಮೇಳಗಳೇ ಬೇರೆ.

ಈ ಎರಡೂ ರಾಜ್ಯಗಳಲ್ಲಿ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದವರು ಮುಖ್ಯಮಂತ್ರಿ ಹುದ್ದೆಗೂ ಏರಿದ್ದಾರೆ. ತಮಿಳುನಾಡಿನಲ್ಲಂತೂ ರಾಜಕೀಯದಿಂದ ಸಿನಿಮಾ ನಟರನ್ನು ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ. ಎಂಜಿಆರ್‌, ಕರುಣಾನಿಧಿ, ಜಯಲಲಿತಾ ಅವರಿಂದ ಹಿಡಿದು ಕಮಲ್‌ ಹಾಸನ್‌, ರಜನಿಕಾಂತ್‌ವರೆಗೂ ಸಿನಿಮಾ ಮೂಲಕ ರಾಜಕೀಯಕ್ಕೆ ಬಂದ ಜನಪ್ರಿಯ ನಟರ ಉದಾಹರಣೆಗಳು ಸಿಗುತ್ತವೆ.

ಆದರೆ, ಸಿನಿಮಾದ ಜನಪ್ರಿಯತೆ ಮತ್ತು ರಾಜಕೀಯ ಜನಪ್ರಿಯತೆ ಮಧ್ಯೆ ಸಾಕಷ್ಟು ಅಂತರವಿದೆ ಎಂಬುದನ್ನು ನಾಯಕ ನಟರು ತಿಳಿದಿರಬೇಕಾಗುತ್ತದೆ. ಅಂತರರಾಜ್ಯ ನದಿ ವಿವಾದಗಳ ವಿಚಾರದಲ್ಲಿ ಮಾತನಾಡುವಾಗ ಸಾಕಷ್ಟು ಎಚ್ಚರದಿಂದಿರಬೇಕಾದ್ದು ಅಗತ್ಯ. ಜನಪ್ರಿಯತೆಯ ಕಾರಣಕ್ಕೆ ಒಂದು ರಾಜ್ಯದ ಪರವಾಗಿ ಮಾತನಾಡುವುದು ಮತ್ತೊಂದು ರಾಜ್ಯದ ಜನರನ್ನು ಸಿಟ್ಟಿಗೇಳಿಸಬಹುದು ಎಂಬ ಸೂಕ್ಷ್ಮತೆ ರಜನಿಕಾಂತ್‌ ಅವರಲ್ಲಿ ಇದ್ದಿದ್ದರೆ ಬಹುಶಃ ‘ಕಾಲಾ’ ಚಿತ್ರಕ್ಕೆ ವಿರೋಧವೇ ಎದುರಾಗುತ್ತಿರಲಿಲ್ಲ.

ವಿವಾದ ಮತ್ತು ಲಾಭ ನಷ್ಟ:

ಚಿತ್ರಗಳು ವಿವಾದ ಉಂಟುಮಾಡಿ ಲಾಭ ಮಾಡಿಕೊಳ್ಳುವುದು ಹೊಸತೇನಲ್ಲ. ಚಿತ್ರವೊಂದು ಅದರ ವಸ್ತುವಿನ, ಸಂಭಾಷಣೆಯ ಅಥವಾ ನಿರ್ದಿಷ್ಟ ಅಂಶವೊಂದರ ಕಾರಣಕ್ಕೆ ವಿವಾದ ಉಂಟು ಮಾಡುವುದು ಒಂದು ಬಗೆಯಾದರೆ, ಆಯಾ ಸಿನಿಮಾದ ನಟರು ನೀಡುವ ಹೇಳಿಕೆಗಳು ವಿವಾದ ಎಬ್ಬಿಸಿ ಅವರು ನಟಿಸಿರುವ ಚಿತ್ರದ ಪ್ರದರ್ಶನಕ್ಕೆ ವಿರೋಧ ಎದುರಾಗುವುದು ಮತ್ತೊಂದು ಬಗೆಯದ್ದು.

ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಚಿತ್ರ ಬಿಡುಗಡೆಯ ಸಂದರ್ಭದಲ್ಲೂ ನಟನ ಹೇಳಿಕೆ ಕಾರಣಕ್ಕೆ ಕರ್ನಾಟಕದಲ್ಲಿ ಆ ಚಿತ್ರವನ್ನು ಬಿಡುಗಡೆ ಮಾಡಲು ಬಿಡದಂತೆ ಕನ್ನಡ ಸಂಘಟನೆಗಳು ಪಟ್ಟುಹಿಡಿದಿದ್ದವು.

ಬಾಹುಬಲಿ ಸಿನಿಮಾದ ಕಟ್ಟಪ್ಪ ಪಾತ್ರಧಾರಿಯಾಗಿದ್ದ ತಮಿಳು ನಟ ಸತ್ಯರಾಜ್‌ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಡಿಯೊ ವೈರಲ್‌ ಆಗಿತ್ತು. ಕೊನೆಗೆ ಸತ್ಯರಾಜ್ ಕ್ಷಮೆ ಕೋರಿದ ಬಳಿಕ ‘ಬಾಹುಬಲಿ 2’ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ಸಿಕ್ಕಿತ್ತು.

ಆದರೆ, ಎಲ್ಲಾ ಸಂದರ್ಭಗಳಲ್ಲೂ ವಿವಾದಗಳು ಲಾಭವನ್ನೇ ತಂದುಕೊಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಜನಪ್ರಿಯ ನಟರ ಸಿನಿಮಾಗಳು ಟ್ರೈಲರ್‌ ಬಿಡುಗಡೆಯಾದಾಗಲೇ ಕುತೂಹಲ ಹುಟ್ಟಿಸಿರುತ್ತವೆ. ರಜನಿಕಾಂತ್‌ ಅವರಂಥ ಜನಪ್ರಿಯತೆ ಇರುವ ನಟರ ಚಿತ್ರಗಳು ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿಯ ಪ್ರೀಬುಕ್ಕಿಂಗ್‌ ಲಾಭ ಮಾಡಿಕೊಂಡಿರುತ್ತವೆ ಎನ್ನುತ್ತಾರೆ ಸಿನಿಮಾ ವಿಮರ್ಶಕರೊಬ್ಬರು.

“ನಟನೊಬ್ಬನ ವೈಯಕ್ತಿಕ ಹೇಳಿಕೆಯನ್ನಿಟ್ಟುಕೊಂಡು ಆತ ನಟಿಸಿದ ಚಿತ್ರದ ಮೇಲೆ ನಿಷೇಧ ಹೇರಬೇಕು ಎಂಬ ವಾದವೇ ಸರಿಯಲ್ಲ, ಸಿನಿಮಾ ಒಂದು ಸಮೂಹ ಕಲೆ. ನಾಯಕ ನಟನೊಬ್ಬನಿಂದಲೇ ಸಿನಿಮಾ ಪೂರ್ಣವಾಗುವುದಿಲ್ಲ. ಸಿನಿಮಾದಲ್ಲಿ ನಾಯಕ ನಟನೂ ಸೇರಿದಂತೆ ಹಲವಾರು ಕಲಾವಿದರು, ತಂತ್ರಜ್ಞರು ಕೆಲಸ ಮಾಡಿರುತ್ತಾರೆ. ನಾಯಕ ನಟನ ವೈಯಕ್ತಿಕ ಹೇಳಿಕೆಯ ಕಾರಣಕ್ಕೆ ಸಿನಿಮಾ ವಿರೋಧಿಸುವುದರಲ್ಲಿ ಅರ್ಥವಿಲ್ಲ” ಎಂಬುದು ಅವರ ಅಭಿಪ್ರಾಯ.

“ರಜನಿಕಾಂತ್‌ ಚಿತ್ರಗಳು ಸೋತ ಉದಾಹರಣೆಗಳು ತುಂಬಾ ಕಡಿಮೆ. ಸದ್ಯಕ್ಕಂತೂ ರಜನಿಕಾಂತ್‌ ತಮಿಳುನಾಡಿನಲ್ಲಿ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ನಟ. ರಜನಿಕಾಂತ್‌ ಗೆಲ್ಲುವ ಕುದುರೆ ಎಂದೇ ಅವರಿಗಾಗಿ ಚಿತ್ರ ಮಾಡುವ ನಿರ್ಮಾಪಕರು, ನಿರ್ದೇಶಕರು ತಮಿಳುನಾಡಿನಲ್ಲಿದ್ದಾರೆ. ತಮಿಳು ಭಾಷೆಯನ್ನೂ ಮೀರಿ ರಜನಿಕಾಂತ್‌ ಅವರಿಗೆ ಜನಪ್ರಿಯತೆ ಇದೆ. ಹೀಗಿರುವಾಗ ಕಾವೇರಿ ವಿವಾದದಿಂದ ಕಾಲಾ ಚಿತ್ರಕ್ಕೆ ಹೆಚ್ಚಿನ ಲಾಭವಾಗುವಂಥದ್ದೇನೂ ಇಲ್ಲ” ಎನ್ನುತ್ತಾರೆ ಅವರು.

“ಸಿನಿಮಾಗೆ ಸಂಬಂಧಿಸಿದ ವಿವಾದಗಳು ಆ ಸಿನಿಮಾ ಬಗ್ಗೆ ಹೆಚ್ಚಿನ ಜನರಲ್ಲಿ ಕುತೂಹಲ ಮೂಡಿಸಬಹುದು. ಆದರೆ, ಜನರ ಕುತೂಹಲ ತಣಿಯುವ ಮಟ್ಟಕ್ಕೆ ಆ ವಿವಾದ ಇಲ್ಲದೇ ಇದ್ದರೆ ವಿವಾದದಿಂದ ಸಿನಿಮಾಗೆ ಹೆಚ್ಚಿನ ಲಾಭವೇನೂ ಆಗುವುದಿಲ್ಲ. ವಿವಾದ ನಿಷೇಧದ ಮಟ್ಟಕ್ಕೆ ಹೋದಾಗ ಅದರಿಂದ ಸಿನಿಮಾ ಮೇಲೆ ಹೂಡಿಕೆ ಮಾಡಿದವರು ನಷ್ಟ ಅನುಭವಿಸಬೇಕಾಗುತ್ತದೆ” ಎಂಬುದು ಅವರ ಮಾತು.

“ಕಾವೇರಿ ವಿಚಾರದ ಬಗ್ಗೆ ರಜನಿಕಾಂತ್ ಹೇಳಿಕೆ ನೀಡಿದ ಕಾರಣಕ್ಕೆ ಪ್ರತಿಭಟನೆ ನಡೆಸುವುದರಿಂದ ಕಾವೇರಿ ವಿವಾದವೇನೂ ಬಗೆಹರಿಯುವುದಿಲ್ಲ. ಕನ್ನಡ ಸಂಘಟನೆಗಳ ಪ್ರತಿಭಟನೆಯ ಹಿಂದೆ ಹಣಕಾಸಿನ ವ್ಯವಹಾರದ ಜತೆಗೆ ಅಸ್ತಿತ್ವದ ಪ್ರಶ್ನೆಯೂ ಇರುತ್ತದೆ. ಆಗಾಗ ಪ್ರತಿಭಟನೆ, ಬಂದ್ ನಡೆಸದಿದ್ದರೆ ಜನ ಈ ಕನ್ನಡ ಸಂಘಟನೆಗಳನ್ನು ಮರೆಯುತ್ತಾರೆ. ಹೀಗಾಗಿ ವಿವಾದಗಳಿಗಾಗಿ ಕಾಯುತ್ತಿರುವ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರೊಬ್ಬರು.

“ಎಷ್ಟೋ ಸಂದರ್ಭದಲ್ಲಿ ಸಂಘಟನೆಗಳ ಗದ್ದಲ ಹೆಚ್ಚಾಗಿ ವಿವಾದದ ಮೂಲ ಸ್ವರೂಪವೇ ಮರೆಯಾಗಿರುತ್ತವೆ. ಈಗ ಆಗುತ್ತಿರುವುದೂ ಅದೇ. ರಜನಿಕಾಂತ್‌ ಅವರನ್ನು ವಿರೋಧಿಸುವ ಭರದಲ್ಲಿ ಕಾವೇರಿ ವಿಚಾರವೂ ಸೇರಿದಂತೆ ಇಂದು ನಾಡಿನಲ್ಲಿರುವ ಅದೆಷ್ಟೋ ಪ್ರಮುಖ ವಿಚಾರಗಳು ಹಿನ್ನೆಲೆಗೆ ಸರಿಯುತ್ತಿವೆ. ಕನ್ನಡ ಸಂಘಟನೆಗಳು ಬದ್ಧತೆ ತೋರುವವರೆಗೂ ಅವುಗಳು ನಡೆಸುವ ಪ್ರತಿಭಟನೆಯಿಂದ ಹೆಚ್ಚಿನ ಲಾಭವೇನೂ ಆಗದು” ಎನ್ನುತ್ತಾರೆ ಅವರು.

ಸಿನಿಮಾ ಒಂದು ವಿವಾದದ ಮೂಲಕ ಒಂದಷ್ಟು ಜನರ ಗಮನ ಸೆಳೆದರೆ, ಅದನ್ನು ವಿರೋಧಿಸುವ ಸಂಘಟನೆಗಳು ಪ್ರತಿಭಟನೆಗಳು ಅಸ್ತಿತ್ವದ ಪ್ರಶ್ನೆಯಂತೆ ಕಾಣುತ್ತವೆ. ವಿವಾದದ ನೆಗೆಟೀವ್‌ ಅಂಶವನ್ನೂ ಪಾಸಿಟೀವ್‌ ಮಾಡಿಕೊಳ್ಳುವ ಕಲೆ ಗೊತ್ತಿರುವ ಚಿತ್ರೋದ್ಯಮಕ್ಕೆ ವಿವಾದಗಳು ಇರಬೇಕು. ಆದರೆ, ಅವು ನಷ್ಟ ತರುವ ಮಟ್ಟಕ್ಕೆ ಏರಬಾರದು!