ಇನ್ನೆರಡು ಗಂಟೆಗಳಲ್ಲಿ ‘ವಾಸ್ತು ಪ್ರಕಾರ’ ಸಮ್ಮಿಶ್ರ ಸಂಪುಟ: ಕೊನೆಯ ಕ್ಷಣದ ನಿರೀಕ್ಷಿತ ಪಟ್ಟಿ
COVER STORY

ಇನ್ನೆರಡು ಗಂಟೆಗಳಲ್ಲಿ ‘ವಾಸ್ತು ಪ್ರಕಾರ’ ಸಮ್ಮಿಶ್ರ ಸಂಪುಟ: ಕೊನೆಯ ಕ್ಷಣದ ನಿರೀಕ್ಷಿತ ಪಟ್ಟಿ

ಸಂಪುಟ ವಿಸ್ತರಣೆಗೆ ದಿಲ್ಲಿ ಹಾಗೂ ಬೆಂಗಳೂರಿನ ಪದ್ಮನಾಭನಗರದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದವು. ಈಗ ಅವೆಲ್ಲಾ ರಾಜಕೀಯ ಪ್ರಕ್ರಿಯೆಗಳಿಗೆ ಮೊದಲ ಹಂತದ ಕ್ಲೈಮ್ಯಾಕ್ಸ್ ನೀಡಲು ‘ಕಾಲ’ ನಿಗಧಿಯಾಗಿದೆ.

ಇನ್ನೆರಡು ಗಂಟೆಗಳ ಅವಧಿಯಲ್ಲಿ ರಾಜ್ಯದ ‘ವಾಸ್ತು ಪ್ರಕಾರ’ ಸಮ್ಮಿಶ್ರ ಸರಕಾರದ ಮೊದಲ ಹಂತದ ಸಂಪುಟ ರಚನೆ ನಡೆಯಲಿದೆ.

ಮಧ್ಯಾಹ್ನ 2 ಗಂಟೆ 12 ನಿಮಿಷಕ್ಕೆ ನೂತನ ಸಚಿವರುಗಳು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಸಂಭ್ಯಾವ್ಯ ಸಚಿವರುಗಳ ಪಟ್ಟಿ ತೇಲಿ ಬಂದಿದೆ. ಆದರೆ ಅಂತಿಮವಾಗಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೆ ಯಾರೆಲ್ಲಾ ಸಚಿವರಾಗಲಿದ್ದಾರೆ ಎಂಬುದು ನಿಖರವಾಗಿ ತಿಳಿಯಲಿದೆ.

ಮೇ. 15ರಂದು ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಮತದಾರರು ನೀಡಿದ ಅತಂತ್ರ ತೀರ್ಪಿನ ಮುನ್ಸೂಚನೆ ಅರಿತ ಕಾಂಗ್ರೆಸ್, ಜ್ಯಾತ್ಯಾತೀತ ಸಿದ್ಧಾಂತದ ನೆಲೆಯಲ್ಲಿ ಜೆಡಿಎಸ್‌ಗೆ ಷರತ್ತುರಹಿತ ಬೆಂಬಲ ನೀಡುವುದಾಗಿ ತಿಳಿಸಿತ್ತು.

ಈ ನಡುವೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರಕಾರ ರಚನೆಯ ವಿಫಲ ಕಸರತ್ತು ನಡೆಸಿತ್ತು. ಬಿ. ಎಸ್. ಯಡಿಯೂರಪ್ಪ ಮೂರು ದಿನಗಳ ಅವಧಿಗೆ ಮುಖ್ಯಮಂತ್ರಿಯಾಗಿ, ನಂತರ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚಿಸಲು ಮುಂದಾಗಿ, ರಾಜೀನಾಮೆಯನ್ನೂ ನೀಡಿದ್ದಕ್ಕೆ ರಾಜ್ಯ ಸಾಕ್ಷಿಯಾಗಿತ್ತು.

ಇದಾದ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ನಂತರ ಸಂಪುಟ ವಿಸ್ತರಣೆಗೆ ದಿಲ್ಲಿ ಹಾಗೂ ಬೆಂಗಳೂರಿನ ಪದ್ಮನಾಭನಗರದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದ್ದವು. ಈಗ ಅವೆಲ್ಲಾ ರಾಜಕೀಯ ಪ್ರಕ್ರಿಯೆಗಳಿಗೆ ಮೊದಲ ಹಂತದ ಕ್ಲೈಮ್ಯಾಕ್ಸ್ ನೀಡಲು ‘ಕಾಲ’ ನಿಗಧಿಯಾಗಿದೆ.

ಈ ಹೊತ್ತಿನಲ್ಲಿ ಚರ್ಚೆಯಲ್ಲಿರುವ ಸಂಭಾವ್ಯ ಸಚಿವರುಗಳ ಪಟ್ಟಿಯನ್ನು ಗಮನಿಸಿದರೆ, ಕೆಲವು ಪ್ರಮುಖ ಅಂಶಗಳು ಢಾಳಾಗಿ ಕಾಣಿಸುತ್ತಿವೆ.

ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವವರ ನಿರೀಕ್ಷಿತ ಪಟ್ಟಿ. 
ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವವರ ನಿರೀಕ್ಷಿತ ಪಟ್ಟಿ. 
  1. ಸಂಪುಟ ವಿಸ್ತರಣೆಯ ಜತೆಜತೆಗೆ ಭಿನ್ನಮತ ಭುಗಿಲೇಳದಂತೆ ತಡೆಯುವ ಕಸರತ್ತು ನಡೆದಿರುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಕಾಂಗ್ರೆಸ್‌ನ ಕಟ್ಟಾ ಅನುಯಾಯಿಗಳು, ಹಿರಿಯರನ್ನು ಪಕ್ಕಕ್ಕಿಟ್ಟು, ‘ಕುದುರೆ ವ್ಯಾಪಾರ’ಕ್ಕೆ ಅಣಿಯಾಗುವವರಿಗೆ ಮೊದಲ ಹಂತದಲ್ಲಿ ಮಣೆ ಹಾಕಿದಂತೆ ಕಾಣಿಸುತ್ತಿದೆ.
  2. ಜೆಡಿಎಸ್‌ನಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಕಾಣಿಸುತ್ತಿಲ್ಲ. ಬಿಜೆಪಿಗೆ ಹಾರುವ ಸಾಧ್ಯತೆ ಇರುವವರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ನೀಡಿ ತೃಪ್ತಿಪಡಿಸುವ ಅಂಶ ಕಾಣಿಸುತ್ತಿದೆ. ‘ಮಾತು ಕೇಳುವವರಿಗೆ’ ಎರಡನೇ ಹಂತದಲ್ಲಿ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಿ ತಯಾರಿಸಲಾಗಿದೆ ಎಂಬ ಮಾಹಿತಿ ಇದೆ.
  3. ಸಹಜವಾಗಿಯೇ ಜಾತಿವಾರು, ಪ್ರಾದೇಶಿಕತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜತೆಗೆ ಪ್ರಬಲ ಸಮುದಾಯಗಳಾದ ಒಕ್ಕಲಿಗರಿಗೆ ಹಾಗೂ ವೀರಶೈವ- ಲಿಂಗಾಯತರಿಗೆ ಮನ್ನಣೆ ನೀಡುವ ಸಾಧ್ಯತೆ ಎದ್ದು ಕಾಣಿಸುತ್ತಿದೆ. ಉಳಿದಂತೆ ಪ್ರಾದೇಶಿಕತೆಯ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಸಮಬಲವನ್ನು ಕಾಯ್ದುಕೊಳ್ಳುವ ಸಾಧ್ಯತೆ ಇದೆ.
  4. ಈಗಾಗಲೇ ಭಿನ್ನಮತದ ಹೆಸರಿನಲ್ಲಿ ಬೆಂಬಲಿಗರಿಂದ ಹೋರಾಟ, ಅಸಮಾಧಾನಗಳನ್ನು ಎರಡೂ ಪಕ್ಷಗಳ ನಾಯಕರು ಹೊರಹಾಕಿದ್ದಾರೆ. ಕೆಲವರು ರಾಜೀನಾಮೆಯ ಬೆದರಿಕೆಯನ್ನೂ ಹಾಕಿದ್ದಾರೆ. ಕೊನೆಯ ಹಂತದಲ್ಲಿ ಪಟ್ಟಿಯಲ್ಲಿ ಆಗುವ ಬದಲಾವಣೆಗಳ ಮೇಲೆ ಈ ಪ್ರಯತ್ನಗಳು ಪ್ರಭಾವ ಬೀರುವ ಸಾಧ್ಯತೆಗಳಿಲ್ಲ ಎಂದು ಕೆಪಿಸಿಸಿ ಮೂಲಗಳು ಹೇಳುತ್ತಿವೆ.
  5. ಸಂಪುಟ ವಿಸ್ತರಣೆಯನ್ನು ಪ್ರತಿಪಕ್ಷ ಬಿಜೆಪಿ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಿ. ಎಸ್. ಯಡಿಯೂರಪ್ಪ ಹೇಳಿಕೆಯೊಂದನ್ನು ನೀಡಿದ್ದು, ಜೆಡಿಎಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಒಂದು ವೇಳೆ ಭಿನ್ನಮತ ದೊಡ್ಡ ಪರಿಣಾಮಗಳನ್ನು ಬೀರಿದ್ದೇ ಆದರೆ, ಬಿಜೆಪಿ ಅದರ ಲಾಭ ಪಡೆಯುವ ಸಾಧ್ಯತೆಗಳೂ ಇವೆ.
  6. ಇಂತಹ ಸಾಧ್ಯತೆಗಳ ಆಚೆಗೂ, ಸಂಪುಟ ವಿಸ್ತರಣೆ ನಡೆಯಲಿದೆ. ಆದರೆ ಅಧಿಕಾರ ಹಿಡಿಯುವವರಿಗೆ ಎಷ್ಟು ದಿನ ಸ್ಥಾನದಲ್ಲಿ ಮುಂದುವರಿಯುತ್ತೇವೆ ಎಂಬ ಖಾತ್ರಿ ಇಲ್ಲ. ವೈರಾಗ್ಯದ ಮಾತುಗಳನ್ನೇ ಆಡುತ್ತಲೇ ಅಧಿಕಾರದ ಸವಿಯನ್ನು ಹಂಚಿಕೊಳ್ಳುತ್ತಿರುವವರ ಮಾತುಗಳು ಇದನ್ನು ಸಾರಿ ಹೇಳುತ್ತಿವೆ.
  7. ಚುನಾವಣೆ ವೇಳೆಯಲ್ಲಿ ಜನಸೇವೆ ಎಂದು ಭಾಷಣ ಮಾಡುವ ರಾಜಕಾರಣಿಗಳು, ಅಧಿಕಾರಕ್ಕಾಗಿ ನಡೆಸುವ ಕಸರತ್ತುಗಳು ಹೇಗಿರುತ್ತವೆ ಎಂಬುದು ಈ ಬಾರಿ ಸ್ಪಷ್ಟವಾಗಿ ಜಾಹೀರಾಗುತ್ತಿದೆ. ಮೊದಲ ಹಂತದ ಸಂಪುಟ ರಚನೆಯಲ್ಲಿ ಜಾತಿ, ಗಾಡ್ ಫಾದರ್‌, ಪ್ರಾದೇಶಿಕತೆ ಹಾಗೂ ಹಣದ ಪ್ರಭಾವಗಳು ಕೆಲಸ ಮಾಡಿವೆ ಎಂಬ ಆರೋಪಗಳನ್ನು ಅವಕಾಶ ವಂಚಿತರು ಮಾಡುತ್ತಿದ್ದಾರೆ. ಈ ಕುರಿತು ಇನ್ನಷ್ಟು ನಿಖರ ಚಿತ್ರಣ ಲಭ್ಯವಾಗಲು ಮಧ್ಯಾಹ್ನದವರೆಗೂ ಕಾಯಬೇಕಿದೆ.