ಅಂದು ಕೆಎಎಸ್‌, ಇಂದು ಕ್ಯಾಬಿನೆಟ್: ಏಕೈಕ ಬಿಎಸ್‌ಪಿ ಶಾಸಕರಿಗೆ ಒಲಿದ ಸಚಿವ ಸ್ಥಾನ!
COVER STORY

ಅಂದು ಕೆಎಎಸ್‌, ಇಂದು ಕ್ಯಾಬಿನೆಟ್: ಏಕೈಕ ಬಿಎಸ್‌ಪಿ ಶಾಸಕರಿಗೆ ಒಲಿದ ಸಚಿವ ಸ್ಥಾನ!

ಬಿಎಸ್‌ಪಿ ರಾಜ್ಯಾಧ್ಯಕ್ಷ ಎನ್‌. ಮಹೇಶ್‌ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ, ಸಂಪುಟವನ್ನೂ ಸೇರಿದ್ದಾರೆ. ಸುಮಾರು ಎರಡು ದಶಕದಿಂದ ಬಿಎಸ್‌ಪಿಯಲ್ಲಿರುವ ಮಹೇಶ್‌ ಸಾಗಿ ಬಂದ ಹಾದಿಯ ಸುತ್ತ ಹೀಗೊಂದು ನೋಟ...

24 ವರ್ಷಗಳ ನಂತರ ರಾಜ್ಯದಲ್ಲಿ ಬಿಎಸ್‌ಪಿ ಖಾತೆ ತೆರೆದ ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಸಂಪುಟ ಸೇರಿದ್ದಾರೆ. 63 ವರ್ಷದ ಮಹೇಶ್‌ ನೀಲಿ ಕೋಟು ಧರಿಸಿ ಬುದ್ಧ, ಬಸವ, ಅಂಬೇಡ್ಕರ್‌ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

1994ರಲ್ಲಿ ಬೀದರ್‌ ವಿಧಾನಸಭಾ ಕ್ಷೇತ್ರದಿಂದ ಸೈಯದ್ ಜುಲ್ಫಿಕರ್ ಹಶ್ಮಿ ಬಿಎಸ್‌ಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಅಲ್ಲಿಂದ ಇಲ್ಲಿಯವರೆಗೂ ಬಿಎಸ್‌ಪಿ ರಾಜ್ಯದಲ್ಲಿ ಒಂದು ಸ್ಥಾನ ಗೆಲ್ಲಲೂ ಸಾಧ್ಯವಾಗಿರಲಿಲ್ಲ. ಸುಮಾರು ಎರಡು ದಶಕದಿಂದ ಬಿಎಸ್‌ಪಿಯಲ್ಲಿದ್ದ ಮಹೇಶ್‌ ಈ ಬಾರಿ ಶಾಸಕರಾಗಿ ತಮ್ಮ ಮೊದಲ ಗೆಲುವಿನ ಜತೆಗೆ ಸಚಿವರಾಗಿಯೂ ಆಯ್ಕೆಯಾಗಿದ್ದಾರೆ.

1999ರಿಂದ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಲೇ ಬಂದಿರುವ ಮಹೇಶ್‌ ಅವರಿಗೆ 2018ರ ಚುನಾವಣೆ ಶಾಸಕತ್ವದ ಜತೆಗೆ ಮಂತ್ರಿಗಿರಿಯನ್ನೂ ತಂದುಕೊಟ್ಟಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಶಂಕನಪುರದವರಾದ ಮಹೇಶ್‌ 1981ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಬಳಿಕ ಕೆಎಎಸ್‌ ಅಧಿಕಾರಿಯಾಗಿ ಆಯ್ಕೆಯಾದ ಮಹೇಶ್‌ ಅಂದಿನ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಗೆ ಸೇರ್ಪಡೆಯಾದರು. ಇಲಾಖೆಯ ಸಹಾಯಕ ನಿರ್ದೇಶಕರಾಗಿ ಮಂಡ್ಯ, ಕೋಲಾರ, ಮೈಸೂರು ಭಾಗದಲ್ಲಿ ಸೇವೆಯಲ್ಲಿದ್ದ ಮಹೇಶ್ ಮುಂದೆ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್. ಮಹೇಶ್
ರಾಜಭವನದ ಗಾಜಿನ ಮನೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್. ಮಹೇಶ್

1999ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಕಿರುಗಾವಲು (ಈಗಿನ ಮಳವಳ್ಳಿ ಮೀಸಲು ಕ್ಷೇತ್ರ) ವಿಧಾನಸಭಾ ಕ್ಷೇತ್ರದಿಂದ ಒಟ್ಟೊಟ್ಟಿಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಅಧಿಕಾರಿಯಾಗಿದ್ದ ಮಹೇಶ್‌ ಜನಪ್ರಿಯತೆ ಚುನಾವಣೆಯಲ್ಲಿ ಗೆಲ್ಲುವ ಮಟ್ಟಕ್ಕೆ ಕೆಲಸ ಮಾಡಲಿಲ್ಲ. ಹೀಗಾಗಿ ಮಹೇಶ್‌ ಮೊದಲ ಚುನಾವಣೆಯಲ್ಲಿ ಸೋತರು.

ಬಳಿಕ ತಮ್ಮ ಸ್ವಂತ ಊರು ಕೊಳ್ಳೇಗಾಲವನ್ನೇ ಚುನಾವಣೆಗೆ ಆರಿಸಿಕೊಂಡ ಮಹೇಶ್‌ 2004ರಿಂದಲೂ ಕೊಳ್ಳೇಗಾಲದಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದರು. 2004, 2008 ಮತ್ತು 2013ರ ಚುನಾವಣೆಗಳು ಮಹೇಶ್‌ ಕೈ ಹಿಡಿಯಲಿಲ್ಲ. ಆದರೆ, ಈ ಬಾರಿಯ ಚುನಾವಣೆ ಮಹೇಶ್‌ ಪಾಲಿಗೆ ಅದೃಷ್ಟದ ಚುನಾವಣೆಯಾಗಿತ್ತು.

ಬಿಎಸ್‌ಪಿ ರಾಜ್ಯಾಧ್ಯಕ್ಷರಾಗಿದ್ದ ಮಹೇಶ್‌ ಕೊಳ್ಳೇಗಾಲದಲ್ಲಿ ಜೆಡಿಎಸ್ ಬೆಂಬಲದ ಜತೆಗೆ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. “ಬಿಎಸ್‌ಪಿ ಪಕ್ಷದ ಸಂಘಟನೆಯ ಜತೆಗೆ ಮಹೇಶ್‌ ಕೊಳ್ಳೇಗಾಲದಲ್ಲೂ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿರುವುದು ಈ ಬಾರಿ ಅವರ ಕೈ ಹಿಡಿದಿದೆ,” ಎನ್ನುತ್ತಾರೆ ಚಾಮರಾಜನಗರದ ಪತ್ರಕರ್ತರೊಬ್ಬರು.

ಈ ಬಾರಿಯ ಸಂಪುಟದ ಕೋಟಿವೀರರ ನಡುವೆ ಮಹೇಶ್‌ ಲಕ್ಷಾದೀಶ ಮಾತ್ರ. ಚುನಾವಣಾ ಆಯೋಗಕ್ಕೆ ಮಹೇಶ್‌ ಸಲ್ಲಿಸಿರುವ ಪ್ರಮಾಣ ಪತ್ರದ ಪ್ರಕಾರ ಮಹೇಶ್‌, ಪತ್ನಿ ಮತ್ತು ಪುತ್ರರ ಒಟ್ಟು ಚರ, ಸ್ಥಿರಾಸ್ತಿ ಮೌಲ್ಯ 80,92,926 ರೂಪಾಯಿ. ಮಹೇಶ್‌ ಅವರ ಪತ್ನಿ ವಿಜಯ ಬ್ಯಾಂಕ್‌ ಉದ್ಯೋಗಿ, ಮಗ ಚೆಗವಾರ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಹೇಶ್‌ ಆಪ್ತರ ಪ್ರಕಾರ, ಅವರು ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿರುವುದಕ್ಕಿಂತ ಕೊಳ್ಳೇಗಾಲದಲ್ಲೇ ಹೆಚ್ಚು ಸಮಯ ಕಳೆದವರು. ಬೆಂಗಳೂರಿನ ಹೊಸ ಗುರಪ್ಪನಪಾಳ್ಯದಲ್ಲಿ ಮಹೇಶ್‌ ಅವರ ಪತ್ನಿ ವಿಜಯ ಅವರ ಹೆಸರಿನಲ್ಲಿ 37 X 21 ಅಳತೆಯ ನಿವೇಶನವಿದೆ. 2014ರಲ್ಲಿ 30 ಲಕ್ಷ ರೂಪಾಯಿ ಕೊಟ್ಟು ಖರೀದಿಸಿರುವ ಈ ನಿವೇಶನದ ಈಗಿನ ಮಾರುಕಟ್ಟೆ ಮೌಲ್ಯ 70 ಲಕ್ಷ ರೂಪಾಯಿ. ಮಹೇಶ್‌ ಕುಟುಂಬದ ಒಟ್ಟು ಆಸ್ತಿ ಮೌಲ್ಯದಲ್ಲಿ ದೊಡ್ಡ ಪಾಲಿರುವುದು ಈ ನಿವೇಶನದ್ದೇ.

ಅಂದು ಕೆಎಎಸ್‌, ಇಂದು ಕ್ಯಾಬಿನೆಟ್: ಏಕೈಕ ಬಿಎಸ್‌ಪಿ ಶಾಸಕರಿಗೆ ಒಲಿದ ಸಚಿವ ಸ್ಥಾನ!

“ಮಹೇಶ್‌ ಭ್ರಷ್ಟಾಚಾರದ ಆರೋಪದ ಕಾರಣಕ್ಕೆ ಸರಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು ಎಂಬ ಮಾತುಗಳಿವೆ. ಆದರೆ, ಆ ಬಗ್ಗೆ ಖಚಿತವಾದ ಸಾಕ್ಷ್ಯಾಧಾರಗಳಿಲ್ಲ. ಘೋಷಿತ ಆಸ್ತಿ ನೋಡಿದರೆ ಅವರು ಭ್ರಷ್ಟರು ಎನಿಸುವುದಿಲ್ಲ” ಎನ್ನುತ್ತಾರೆ ಚಾಮರಾಜನಗರದ ಹಿರಿಯ ಪತ್ರಕರ್ತರೊಬ್ಬರು.

ಜೆಡಿಎಸ್‌ – ಕಾಂಗ್ರೆಸ್‌ ಖಾತೆ ಹಂಚಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾಂಗ್ರೆಸ್‌ ಪಾಲಾಗಿದೆ. ಇಲ್ಲವಾದರೆ ಮಹೇಶ್‌ ಅವರಿಗೇ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಾಗಿತ್ತು. ಮಹೇಶ್‌ ಅವರಿಗೆ ಈಗ ಶಿಕ್ಷಣ ಖಾತೆ ಸಿಗಬಹುದು ಎಂಬ ನಿರೀಕ್ಷೆ ಇದೆ.

ದಲಿತ ಕುಟುಂಬದಿಂದ ಬಂದು ರಾಜ್ಯದಲ್ಲಿ ಬಿಎಸ್‌ಪಿ ಸಂಘಟಿಸಿ, ಸುಮಾರು ಎರಡು ದಶಕಗಳಿಂದ ದಲಿತ ಹೋರಾಟದಲ್ಲಿರುವ ಮಹೇಶ್‌ ಈ ಬಾರಿ ಜೆಡಿಎಸ್‌ ಬೆಂಬಲ ಸಿಗದೇ ಇದ್ದಿದ್ದರೆ ಮತ್ತೆ ಸೋಲು ಕಾಣಬೇಕಾಗಿತ್ತು ಎಂಬ ಮಾತುಗಳು ಕೊಳ್ಳೇಗಾಲದಲ್ಲಿವೆ.

ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಬಿಎಸ್‌ಪಿಗೆ ಜೆಡಿಎಸ್‌ ಬೆಂಬಲ ನೀಡಿದ್ದು ಮತ್ತು ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಮಹೇಶ್‌ ಅವರ ಪಾಲಿಗಂತೂ ಅದೃಷ್ಟದಂತಾಗಿದೆ.