samachara
www.samachara.com
‘ಸಂಪುಟ ಅಸ್ಥಿತ್ವಕ್ಕೆ’: ಕನ್ಯಾ ಲಗ್ನದಲ್ಲಿ 24 ಪುರುಷ ಹಾಗೂ ಜಯಮಾಲ ಸಚಿವರಾಗಿ ಪ್ರಮಾಣ ವಚನ
COVER STORY

‘ಸಂಪುಟ ಅಸ್ಥಿತ್ವಕ್ಕೆ’: ಕನ್ಯಾ ಲಗ್ನದಲ್ಲಿ 24 ಪುರುಷ ಹಾಗೂ ಜಯಮಾಲ ಸಚಿವರಾಗಿ ಪ್ರಮಾಣ ವಚನ

24 ಶಾಸಕರು ಸಂಪುಟ ದರ್ಜೆಗೆ ಭಡ್ತಿ ಪಡೆದುಕೊಂಡಿದ್ದರೆ, ಪರಿಷತ್ ಸದಸ್ಯೆಯಾಗಿರುವ ಜಯಮಾಲ ಕೂಡ ಅದೇ ಸ್ಥಾನಮಾನವನ್ನು ಪಡೆದುಕೊಂಡ ಏಕೈಕ ಮಹಿಳೆ ಎನ್ನಿಸಿಕೊಂಡಿದ್ದಾರೆ.

Team Samachara

ವಿಧಾನಸಭೆ ಚುನಾವಣೆಯ ಅತಂತ್ರ ಫಲಿತಾಂಶ ಹೊರಬಿದ್ದು ಸರಿಯಾಗಿ 22 ದಿನಗಳಿಗೆ ರಾಜ್ಯದಲ್ಲಿ ಸಚಿವ ಸಂಪುಟವೊಂದು ಅಸ್ಥಿತ್ವಕ್ಕೆ ಬಂದಿದೆ. ಮೊದಲ ಹಂತದಲ್ಲಿ ಒಟ್ಟು 24 ಪುರುಷ ಹಾಗೂ ಓರ್ವ ಮಹಿಳೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಹಾಗೂ ಗೌಪ್ಯತಾ ವಿಧಿಗಳನ್ನು ಘೋಷಿಸಿಕೊಂಡರು.

ಎಚ್. ಡಿ. ರೇವಣ್ಣ, ಆರ್. ವಿ. ದೇಶಪಾಂಡೆ, ಬಂಡೆಪ್ಪ ಕಾಶಂಪುರ್, ಡಿ. ಕೆ. ಶಿವಕುಮಾರ್, ಜಿ. ಟಿ. ದೇವೇಗೌಡ, ಕೆ. ಜೆ. ಜಾರ್ಜ್‌, ಡಿ. ಸಿ. ತಮ್ಮಣ್ಣ, ಕೃಷ್ಣಾ ಬೈರೇಗೌಡ, ಮನಗೂಳಿ ಮಲ್ಲಪ್ಪ ಚೆನ್ನವೀರಪ್ಪ, ಎನ್. ಎಚ್. ಶಿವಶಂಕ್ ರೆಡ್ಡಿ, ಎಸ್. ಆರ್. ಶ್ರೀನಿವಾಸ್, ಜಾರಕಿಹೋಳಿ ರಮೇಶ್ ಲಕ್ಷ್ಮಣರಾವ್‌, ವೆಂಕಟರಾವ್ ನಾಡಗೌಡ, ಪ್ರಿಯಾಂಕ ಖರ್ಗೆ, ಸಿ. ಎಸ್. ಪುಟ್ಟರಾಜು, ಯು. ಟಿ. ಖಾದರ್, ಸಾ. ರಾ. ಮಹೇಶ್, ಬಿ. ಝಡ್‌, ಜಮೀರ್ ಅಹಮದ್ ಖಾನ್, ಎನ್. ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ್ ಬಸವರಾಜ್ ಪಾಟೀಲ್, ಸಿ. ಪುಟ್ಟರಂಗ ಶೆಟ್ಟಿ, ಆರ್. ಶಂಕರ್, ಜಯಮಾಲ ರಾಮಚಂದ್ರ ಬುಧವಾರ ಸಂಪುಟ ದರ್ಜೆ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದವರು.

ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರಲ್ಲಿ ಮೊದಲಿಗರಾದ ಎಚ್. ಡಿ. ರೇವಣ್ಣ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಬಂದವರಲ್ಲಿ ಬಹುತೇಕರು ಭಗವಂತ, ದೇವರು, ಮನೆದೇವರು, ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ, ಬಿಎಸ್‌ಪಿ ಎನ್. ಮಹೇಶ್ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಭಿನ್ನವಾಗಿ ನಿಂತರು. ಬಿಜಾಪುರದ ಶಿವಾನಂದ ಎಸ್ ಪಾಟೀಲ್ ಅಣ್ಣ ಬಸವಣ್ಣನ ಹೆಸರಿನಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಬುಧವಾರ ಸಂಪುಟ ಸೇರಿದ ಸಚಿವರು
ಬುಧವಾರ ಸಂಪುಟ ಸೇರಿದ ಸಚಿವರು

24 ಶಾಸಕರು ಸಂಪುಟ ದರ್ಜೆಗೆ ಭಡ್ತಿ ಪಡೆದುಕೊಂಡಿದ್ದರೆ, ಪರಿಷತ್ ಸದಸ್ಯೆಯಾಗಿರುವ ಜಯಮಾಲ ಕೂಡ ಅದೇ ಸ್ಥಾನಮಾನವನ್ನು ಪಡೆದುಕೊಂಡ ಏಕೈಕ ಮಹಿಳೆ ಎನ್ನಿಸಿಕೊಂಡಿದ್ದಾರೆ. ಸಿಂಧಗಿ ಕ್ಷೇತ್ರದ 84 ವರ್ಷದ ಶಾಸಕ ಅಧಿಕಾರ ವಹಿಸಿಕೊಂಡವರ ಪೈಕಿ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ.

ಒಟ್ಟು 9 ಜನ ಒಕ್ಕಲಿಗ, ನಾಲ್ವರು ಲಿಂಗಾಯತ, ಮೂರು ಪರಿಶಿಷ್ಟ ಜಾತಿ, ಇಬ್ಬರು ಕುರುಬರು, ಇಬ್ಬರು ಮುಸ್ಲಿಂ, ತಲಾ ಒಬ್ಬರು ಬ್ರಾಹ್ಮಣ, ಪರಿಶಿಷ್ಟ ಪಂಗಡ, ಕ್ರಿಶ್ಚಿಯನ್, ಉಪ್ಪಾರ, ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಪ್ರಾದೇಶಿಕತೆ ವಿಚಾರಕ್ಕೆ ಬಂದರೆ, ಮಲೆನಾಡು ಭಾಗದಿಂದ ಒಬ್ಬರಿಗೂ ಸಚಿವರಾಗುವ ಅವಕಾಶ ಸಮ್ಮಿಶ್ರ ಸರಕಾರದಲ್ಲಿ ಸಿಕ್ಕಿಲ್ಲ. ಹಿಂದುಳಿದ ತಾಲೂಕಾದ ಪಾವಗಡ ಸೇರಿದಂತೆ ತುಮಕೂರು ಜಿಲ್ಲೆಗೆ ಮೂರು ಸ್ಥಾನಗಳು ಸಿಕ್ಕಿವೆ. ಉಳಿದಂತೆ ಬೆಂಗಳೂರಿಗೆ ಮೂರು, ಜೆಡಿಎಸ್‌ಗೆ ಪ್ರಚಂಡ ಮತಗಳನ್ನು ನೀಡಿದ ಮಂಡ್ಯ, ಹಾಸನ ಜಿಲ್ಲೆಗಳಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಶಾಪಗ್ರಸ್ಥ ಜಿಲ್ಲೆ ಎನ್ನಿಸಿಕೊಂಡಿದ್ದ ಚಾಮರಾಜನಗರಕ್ಕೆ ಎರಡು ಸಚಿವ ಸ್ಥಾನಗಳು ಸಿಕ್ಕಿವೆ. ಮಧ್ಯ ಕರ್ನಾಟಕಕ್ಕೆ ಪ್ರಾತಿನಿಧ್ಯವನ್ನು ಸಮ್ಮಿಶ್ರ ಸಂಪುಟ ಕಲ್ಪಿಸಿದೆ. ಉಳಿದಂತೆ ಉತ್ತರ ಕರ್ನಾಟಕ ಹಾಗೂ ಹೈಕ ಭಾಗಗಳಿಗೆ ಸಚಿವ ಸ್ಥಾನಗಳು ಹಂಚಿಕೆಯಾಗಿವೆ.

ದಿಲ್ಲಿ ಹಾಗೂ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಕಳೆದ ಹದಿನೈದು ದಿನಗಳ ಕಾಲ ಎಳೆದಾಡಿದ ಸಂಪುಟ ರಚನೆ ಕಸರತ್ತು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಯಾರಿಗೆ ಯಾವ ಕಾರಣಕ್ಕೆ ಸಚಿವ ಸ್ಥಾನ ಸಿಗಬಹುದು, ಸಿಗದೇ ಹೋಗಬಹುದು ಎಂಬ ಲೆಕ್ಕಾಚಾರಗಳು ನಡೆದಿದ್ದವು. ಇದೀಗ ಆ ಲೆಕ್ಕಾಚಾರಗಳನ್ನು ಮೀರಿ ಒಟ್ಟು 27 ಜನರ ಸಂಪುಟವೊಂದು ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಖಾತೆ ಹಂಚಿಕೆ ಬಾಕಿ ಇದೆ.

ಇಷ್ಟು ದಿನಗಳ ರಾಜಕೀಯ ಮೇಲಾಟದಲ್ಲಿ ಕಳೆದು ಹೋಗಿದ್ದ ಸಮ್ಮಿಶ್ರ ಸರಕಾರದ ಆಡಳಿತ ಇನ್ನಷ್ಟೆ ಚುರುಕು ಪಡೆದುಕೊಳ್ಳಬೇಕಿದೆ. ಸಚಿವರುಗಳು ಅವರವರ ಹೊಣೆಗಾರಿಕೆಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಯಾರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೂ ಅಂತಿಮವಾಗಿ ಅವರು ಜನರಿಗೆ ಜವಾಬ್ದಾರರು ಎಂಬುದನ್ನು ಈ ಸಮಯದಲ್ಲಿ ನೆನಪಿಸುವುದು ಕ್ಲೀಷೆ ಆಗದು.