‘ಸಂವಿಧಾನ ಉಳಿವಿನ’ ಕೊನೆಯ ತುದಿಯಲ್ಲಿ ರವಿಕೃಷ್ಣಾ ರೆಡ್ಡಿ ಏಕಾಂಗಿ ಹೋರಾಟ!
COVER STORY

‘ಸಂವಿಧಾನ ಉಳಿವಿನ’ ಕೊನೆಯ ತುದಿಯಲ್ಲಿ ರವಿಕೃಷ್ಣಾ ರೆಡ್ಡಿ ಏಕಾಂಗಿ ಹೋರಾಟ!

2018ರ ರಾಜ್ಯ ವಿಧಾನಸಭಾ ಚುನಾವಣೆ ಪರ್ಯಾಯ ರಾಜಕಾರಣದ ಹೊಸ ದಿಕ್ಕನ್ನು ತೋರಬಹುದು ಎಂಬ ನಿರೀಕ್ಷೆಯಿತ್ತು. ಆ ನಿರೀಕ್ಷೆಯ ಆಶಾವಾದದ ಕೊನೆಯ ತುದಿಯಲ್ಲಿ ಈಗ ರವಿಕೃಷ್ಣಾ ರೆಡ್ಡಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. “ಕಾಂಗ್ರೆಸ್‌ ಮತ್ತು ಬಿಜೆಪಿ ನಡೆಸುತ್ತಿರುವ ಚುನಾವಣಾ ಅಕ್ರಮಗಳಿಗೆ ಚುನಾವಣಾ ಆಯೋಗ ಮತ್ತು ಸ್ಥಳೀಯ ಪೊಲೀಸರು ಅನುಕೂಲ ಮಾಡಿಕೊಡುತ್ತಿದ್ದಾರೆ” ಎಂದು ಆರೋಪಿಸಿರುವ ರವಿಕೃಷ್ಣಾ ರೆಡ್ಡಿ ಜಯನಗರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

“ಜಯನಗರ ವಿಧಾನಸಭಾ ಕ್ಷೇತ್ರದ ಪೊಲೀಸರ ನಿಷ್ಕ್ರಿಯತೆ ಮತ್ತು ಕಳ್ಳರನ್ನು ಹಾಗೂ ಗೂಂಡಾಗಳನ್ನು ರಕ್ಷಿಸುತ್ತಿರುವ ಪಕ್ಷಪಾತಿ ನಡವಳಿಕೆಯ ವಿರುದ್ಧ ಜಯನಗರ 4ನೇ ಹಂತದಲ್ಲಿರುವ ಜಯನಗರ ಪೊಲೀಸ್ ಠಾಣೆ ಮುಂಭಾಗ ಬುಧವಾರ (ಜೂನ್‌ 6) ಪ್ರತಿಭಟನೆ ನಡೆಸುತ್ತೇನೆ” ಎಂದು ರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನ ಜಯನಗರ ಕ್ಷೇತ್ರ ಒಂದನ್ನು ಬಿಟ್ಟು ರಾಜ್ಯದ ಎಲ್ಲಾ 223 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮುಗಿದು, ಫಲಿತಾಂಶವೂ ಬಂದು ಸಮ್ಮಿಶ್ರ ಸರಕಾರವೂ ರಚನೆಯಾಗಿದೆ. ಆದರೆ, ಜಯನಗರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್‌ ಕುಮಾರ್‌ ಅವರ ನಿಧನದಿಂದಾಗಿ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು. ಜಯನಗರದಲ್ಲಿ ಜೂನ್‌ 11ರಂದು ಮತದಾನ ನಡೆಯಲಿದ್ದು, ಜೂನ್‌ 13ರಂದು ಫಲಿತಾಂಶ ಹೊರಬೀಳಲಿದೆ.

ರಾಜ್ಯದಲ್ಲಿ ಚುನಾವಣಾ ಪೂರ್ವದಲ್ಲಿ ‘ಸಂವಿಧಾನ ಉಳಿವಿಗಾಗಿ ಕರ್ನಾಟಕ’ ಹೆಸರಿನ ವೇದಿಕೆಯಡಿ ಹಲವರು ಪರ್ಯಾಯ ರಾಜಕಾರಣದ ಪ್ರಯತ್ನ ನಡೆಸಿದ್ದರು. ಇದೇ ಪ್ರಯತ್ನದ ಭಾಗವಾಗಿ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ರಾಜ್ಯಕ್ಕೆ ಬಂದು ಬಿಜೆಪಿ ವಿರುದ್ಧ ಭಾಷಣ ಮಾಡಿ ಹೋದರು.

ಚುನಾವಣೆ ಮುಗಿದ ಬಳಿಕ ಸಂವಿಧಾನದ ಉಳಿವಿನ ವೇದಿಕೆ ಅಸ್ತಿತ್ವ ಕಳೆದುಕೊಂಡಿದೆ. ಪರ್ಯಾಯದ ಪ್ರಯತ್ನ ನಿರೀಕ್ಷಿತ ಯಶಸ್ಸನ್ನು ತಂದುಕೊಡದ ಕಾರಣ ಹಲವರು ಭ್ರಮನಿರಸನರಾಗಿದ್ದರೆ, ಕೆಲವರು ಆರೋಪ- ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಆದರೆ, ಚುನಾವಣೆ ಪೂರ್ವದಲ್ಲಿ ಸಂವಿಧಾನ ಉಳಿವಿನ ಹೆಸರಲ್ಲಿ ಭಾಷಣ ಮಾಡಿದ್ದ ಯಾರಿಗೂ ಕೊನೆಯದಾಗಿ ಉಳಿದಿರುವ ಜಯನಗರ ವಿಧಾನಸಭಾ ಕ್ಷೇತ್ರ ಭರವಸೆಯಾಗಿ ಕಾಣುತ್ತಿಲ್ಲ.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈಗ ರವಿಕೃಷ್ಣಾ ರೆಡ್ಡಿ ಅವರದ್ದು ಒಂಟಿ ದನಿ, ಏಕಾಂಗಿ ಹೋರಾಟ. ಸಂವಿಧಾನ ಉಳಿವಿಗಾಗಿ ರವಿಕೃಷ್ಣಾ ರೆಡ್ಡಿ ಜತೆಗೆ ಜೋಡಿಸುವ ಕೈಗಳಿಗೆ ಈಗ ಕೊರತೆ ಬಿದ್ದಿದೆ. ಆದರೆ, ತಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ರವಿಕೃಷ್ಣಾ ರೆಡ್ಡಿ ಇದ್ದಾರೆ.

ಜಯನಗರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್‌. ವಿಜಯ್‌ಕುಮಾರ್‌ ಅವರ ಸೋದರ ಪ್ರಹ್ಲಾದ್‌ ಬಾಬು ಕಣದಲ್ಲಿದ್ದಾರೆ. ವಿಜಯ್‌ಕುಮಾರ್‌ ಅವರ ನಿಧನದ ಅನುಕಂಪ ತಮಗೆ ಗೆಲುವು ತಂದುಕೊಡಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದ್ದರೆ, ಪಕ್ಕದ ಕ್ಷೇತ್ರದ ರಾಮಲಿಂಗಾ ರೆಡ್ಡಿ ಅವರ ‘ಪ್ರಭಾವ’ ಸೌಮ್ಯಾ ರೆಡ್ಡಿ ಗೆಲುವಿಗೆ ಕೆಲಸ ಮಾಡಲಿದೆ ಎಂಬ ಮಾತುಗಳಿವೆ. ಅಲ್ಲದೆ ಜೆಡಿಎಸ್‌ ಕೂಡಾ ಇಲ್ಲಿ ಸೌಮ್ಯಾ ರೆಡ್ಡಿ ಅವರ ಪರವಾಗಿ ಕೆಲಸ ಮಾಡುತ್ತಿದೆ.

ಈ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಪ್ರಭಾವದ ನಡುವೆಯೂ ಜಯನಗರದಲ್ಲಿ ಸದ್ದು ಮಾಡುತ್ತಿರುವವರು ರವಿಕೃಷ್ಣಾ ರೆಡ್ಡಿ. ಚುನಾವಣಾ ಪೂರ್ವದಿಂದಲೇ ಜನಜಾಗೃತಿ ಆರಂಭಿಸಿದ್ದ ರವಿಕೃಷ್ಣಾ ರೆಡ್ಡಿ ಚುನಾವಣಾ ಪ್ರಚಾರ ನಡೆಸಿದ್ದೂ ವಿಶೇಷವಾಗಿತ್ತು. ಮೊದಲು ‘ಒಂದು ನೋಟು, ಒಂದು ಓಟು’ ಎಂದಿದ್ದ ರವಿಕೃಷ್ಣಾ ರೆಡ್ಡಿ ಕೊನೆಗೆ ‘ಮತದಾರರಿಗೆ ಹಣ, ಸೀರೆ ಹಂಚಲು ಚುನಾವಣಾ ಆಯೋಗ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದ್ದರು.

Also read: ‘ಒಂದು ನೋಟು- ಓಟು’: ಶಾಂತವೇರಿ ಗೋಪಾಲಗೌಡರನ್ನು ನೆನಪಿಸಿದ ರವಿಕೃಷ್ಣಾ ರೆಡ್ಡಿ

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ತಾವು ನಡೆಸಿರುವ ಜನಜಾಗೃತಿ ಈ ಬಾರಿ ತಮ್ಮನ್ನು ಗೆಲ್ಲಿಸುತ್ತದೆ ಎಂಬ ಖಚಿತ ವಿಶ್ವಾಸ ವ್ಯಕ್ತಪಡಿಸುತ್ತಾರೆ ರವಿಕೃಷ್ಣಾ ರೆಡ್ಡಿ. ಆದರೆ, ತಮ್ಮ ಗೆಲುವಿಗೆ ಅಡ್ಡಿಯಾಗಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿಯ ಚುನಾವಣಾ ಅಕ್ರಮ ಎಂಬುದು ಅವರ ದೂರು.

“ಚುನಾವಣೆಯನ್ನು ಕದಿಯುವ ಪ್ರಯತ್ನ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ನಡೆಯುತ್ತಿದೆ. ಚುನಾವಣೆಯನ್ನೇ ಕದಿಯಲು ಚುನಾವಣಾ ಆಯೋಗ ಮತ್ತು ಪೊಲೀಸ್‌ ವ್ಯವಸ್ಥೆ ಇವರಿಗೆ ಸಹಕಾರಿಯಾಗಿದೆ. ಈವರೆಗೂ ನೀಡಿರುವ ದೂರುಗಳ ಪೈಕಿ ಯಾವುದರ ಬಗ್ಗೆಯೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ” ಎಂಬ ಆರೋಪ ರವಿಕೃಷ್ಣಾ ರೆಡ್ಡಿ ಅವರದ್ದು.

Also read: ಮತದಾರರಿಗೆ ಹಣ ಹಂಚಲು ಅನುಮತಿ ಕೋರಿ ಪತ್ರ: ಜಯನಗರ ಚುನಾವಣಾ ಕಣದಲ್ಲಿ ಹೊಸ ಬೆಳವಣಿಗೆ

“ವ್ಯವಸ್ಥೆ ಬದಲಾಗುವುದಿಲ್ಲ ಎನಿಸಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನವನ್ನೇ ಮಾಡುತ್ತಿರಲಿಲ್ಲ. ವ್ಯವಸ್ಥೆ ಬದಲಾಗುತ್ತದೆ, ಬದಲಾಗಬೇಕು, ಬದಲಾಗಬೇಕಾದ್ದು ಅನಿವಾರ್ಯ ಈ ಸಮಾಜಕ್ಕೆ. ಮುಂದಿನ ದಾರುಣ ದಿನಗಳನ್ನು ಇದೇ ಸಮಾಜ ಮುಂದೆ ಎದುರಿಸಬೇಕಾಗಿರುವುದರಿಂದ ಬದಲಾವಣೆ ಅನಿವಾರ್ಯ” ಎನ್ನುತ್ತಾರೆ ಅವರು.

“ಕ್ಷುಲ್ಲಕ ರಾಜಕೀಯ ನಿರ್ಧಾರಗಳು ನಮ್ಮನ್ನು, ನಮ್ಮ ಸಮಾಜವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಬಡತನ, ಅಸಮಾನತೆ, ಸಾಮರಸ್ಯವಿಲ್ಲದ ಜೀವನ ಇದೆಲ್ಲಕ್ಕೂ ಕಾರಣ ನಮ್ಮ ರಾಜಕೀಯ ತಪ್ಪುಗಳು. ಹಾಗಾಗಿ ಜನತೆ ತಿದ್ದುಕೊಳ್ಳುತ್ತಾರೆ, ತಮ್ಮ ಮುಂದಿನ ನಡೆಗಳನ್ನು ಬಹಳ ಎಚ್ಚರಿಕೆಯಿಂದ ಇಡುತ್ತಾರೆ. ಅದು ಅವರಿಗೂ ಅನಿವಾರ್ಯ ಆಗಿದೆ” ಎಂಬುದು ರೆಡ್ಡಿ ಅವರ ಮಾತು.

“ಕೆಟ್ಟದ್ದರ ವಿರುದ್ಧ ತಾತ್ವಿಕ ಒಳ್ಳೆಯತನ ಪ್ರತಿರೋಧ ಒಡ್ಡಿ ಗೆಲ್ಲುತ್ತದೆ ಎಂಬುದು ಈಗಾಗಲೇ ನಿರೂಪಿತವಾಗಿದೆ. ಇತಿಹಾಸದಲ್ಲಿ ಇದು ಪದೇ ಪದೇ ನಿರೂಪಿತವಾಗಿದೆ. ಇಂಥ ತಾತ್ವಿಕ ಪ್ರತಿರೋಧ ಇತಿಹಾಸವಲ್ಲ, ವಿಜ್ಞಾನವಾಗಿ ರೂಪಿತವಾಗಿದೆ. ಹೀಗಾಗಿ ಗೆಲುವಿನ ಬಗ್ಗೆ ನಮಗೆ ಖಚಿತ ನಂಬಿಕೆ ಇದೆ” ಎನ್ನುವ ವಿಶ್ವಾಸ ಅವರದ್ದು.

“ನಮ್ಮ ಚುನಾವಣಾ ಫಲಿತಾಂಶ ಈಗಾಗಲೇ ನಮಗೆ ಗೊತ್ತಾಗಿದೆ. ನಮಗೂ ಗೆಲುವಿಗೂ ಮಧ್ಯೆ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿಯವರು ನಡೆಸುವ ಚುನಾವಣಾ ಅಕ್ರಮಗಳು ಮತ್ತು ಚುನಾವಣಾ ಆಯೋಗ ಈ ಅಕ್ರಮಗಳಿಗೆ ಅವಕಾಶ ಮಾಡಿಕೊಡುತ್ತಿರುವುದು. ಈಗಾಗಲೇ ನಾವು ಮೂಡಿಸಿರುವ ಜನಜಾಗೃತಿ, ಕ್ಷೇತ್ರದಲ್ಲಿ ಮಾಡಿರುವ ವೈಚಾರಿಕ ಕ್ರಾಂತಿ, ಚುನಾವಣೆಯಲ್ಲಿ ಪ್ರಜ್ಞಾಂವತ ಜನ ತೆಗೆದುಕೊಳ್ಳಬೇಕಾದ ನಿರ್ಧಾರದ ತತ್ವ - ಇದೆಲ್ಲವನ್ನೂ ನಾವು ಈಗಾಗಲೇ ಸಾಧಿಸಿದ್ದೇವೆ. ಗೆಲುವು ನಮದೇ” ಎನ್ನುತ್ತಾರೆ ರವಿಕೃಷ್ಣಾ ರೆಡ್ಡಿ.

ಕರ್ನಾಟಕ ವಿಧಾನಸಭಾ ಚುನಾವಣೆಯ ಕೊನೆಯಲ್ಲಿ ನಿಂತು ರವಿಕೃಷ್ಣ ರೆಡ್ಡಿ ವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ. ಇನ್ನೊಂದು ವಾರಕ್ಕೆ ಜಯನಗರ ಕ್ಷೇತ್ರದ ಮತದಾರ ಪ್ರಭುಗಳು ಯಾರಿಗೆ ಬಹುಮತ ನೀಡುತ್ತಾರೆ ಎಂಬುದು ಗೊತ್ತಾಗಲಿದೆ. ಸಂವಿಧಾನದ ಉಳಿವಿನ ಹೆಸರಿನಲ್ಲಿ ನಡೆದ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಉಳಿಯಲು ಕೊನೆಯದೊಂದು ಆಶಾವಾದವಾಗಿ ಜಯನಗರ ಕ್ಷೇತ್ರ ಉಳಿದುಕೊಂಡಿದೆ!