‘ಪರಿಸರ ದಿನಾಚರಣೆ’: ಮೊಬೈಲ್ ಬಳಸುವವರ ಗಮನಕ್ಕೆ...
COVER STORY

‘ಪರಿಸರ ದಿನಾಚರಣೆ’: ಮೊಬೈಲ್ ಬಳಸುವವರ ಗಮನಕ್ಕೆ...

ಇ- ವೇಸ್ಟ್ ಎಂದು ಕರೆಸಿಕೊಳ್ಳುವ ಅವಧಿ ಮುಗಿದ ಎಲೆಕ್ಟ್ರಾನಿಕ್ ಉಪಕರಣಗಳ ಸಮಸ್ಯೆಗಳ ಕುರಿತು ‘ಸಮಾಚಾರ’ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಕಾರಣಗಳೂ ಇವೆ.

ಮತ್ತೊಂದು ಪರಿಸರ ದಿನಾಚರಣೆ ಬಂದಿದೆ. 1974ರ ಜೂನ್ 5ರಂದು ವಿಶ್ವಸಂಸ್ಥೆ ಆರಂಭಿಸಿದ ಈ ದಿನಾಚರಣೆ ಜಗತ್ತಿನಾದ್ಯಂತ ಪರಿಸರದ ಕುರಿತು ಕಾಳಜಿ, ಮಾಹಿತಿ ನೀಡುವ ಕೆಲಸವನ್ನು ಕ್ರೀಯಾಶೀಲವಾಗಿ ಮಾಡಿಕೊಂಡು ಬಂದಿದೆ. ಪ್ರತಿ ವರ್ಷ, ಜೂನ್ 5ರಂದು ವಿಶ್ವಸಂಸ್ಥೆ ಒಂದೊಂದು ಘೋಷಣೆಯನ್ನು ನೀಡಿಕೊಂಡು ಬಂದಿದೆ. ಈ ಬಾರಿ, ‘ಪ್ಲಾಸ್ಟಿಕ್ ಮುಕ್ತ’ ಬದುಕು ಎಂಬ ಘೋಷಣೆ ಅಡಿಯಲ್ಲಿ ಆಚರಣೆಗಳು, ಕಾರ್ಯಕ್ರಮಗಳು, ಸಂಕಿರಣಗಳು, ಸಮಾವೇಶಗಳು ಜಗತ್ತಿನ ಹೆಚ್ಚು ಕಡಿಮೆ ಎಲ್ಲಾ ದೇಶಗಳಲ್ಲೂ ನಡೆಯುತ್ತಿದೆ.

ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ನಿವಾಸ ಜೆಪಿ ನಗರದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ್ದಾರೆ. ನಾವೂ, ನೀವು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ರಕ್ಷಣೆಯ ಕುರಿತು ಕಾಳಜಿಗಳನ್ನು ಹೊರಹಾಕುತ್ತಿದ್ದೇವೆ. ಆದರೆ, ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆನೋ ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತಿದ್ದೇವೆ. ಮೊಬೈಲ್ ಫೋನ್ ಬಳಕೆದಾರರು, ಕಂಪ್ಯೂಟರ್ ಬಳಸುವವರು, ಹೀಗೆ ಎಲೆಕ್ಟ್ರಾನಿಕ್ ಸಂಬಂಧಿಸಿದ ವಸ್ತುಗಳನ್ನು ನಾವು ಬಳಸುವುದು ಮತ್ತು ಅವುಗಳ ಆಯುಷ್ಯ ಮುಗಿದ ಮೇಲೆ ಬಿಸಾಕುವುದು ಕೂಡ ಪರಿಸರಕ್ಕೆ ಸಮಸ್ಯೆ ತಂದೊಡ್ಡುತ್ತಿದೆ.

ಈ ಬಾರಿಯ ಪರಿಸರ ದಿನಾವಣೆಯ ಘೋಷಣೆ, ಪ್ಲಾಸ್ಟಿಕ್ ಮುಕ್ತತೆಯ ಬಗೆಗಾದರೂ, ಇ- ವೇಸ್ಟ್ ಎಂದು ಕರೆಸಿಕೊಳ್ಳುವ ಅವಧಿ ಮುಗಿದ ಎಲೆಕ್ಟ್ರಾನಿಕ್ ಉಪಕರಣಗಳ ಸಮಸ್ಯೆಗಳ ಕುರಿತು 'ಸಮಾಚಾರ’ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಕಾರಣಗಳೂ ಇವೆ.

ಜಗತ್ತಿನ ಟಾಪ್ ಫೈವ್ ಪಟ್ಟಿಯಲ್ಲಿ:

ಎಲೆಕ್ಟ್ರಾನಿಕ್ ತ್ಯಾಜ್ಯಗಳ ಉತ್ಪಾದನೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವುದು ಚೈನಾ. ನಂತರ ಅಮೆರಿಕಾ, ಜಪಾನ್, ಜರ್ಮನಿಗಳು ಪ್ರತಿ ವರ್ಷ ಇ- ತ್ಯಾಜ್ಯ ಉತ್ಪಾದಿಸುತ್ತಿರುವ ದೇಶಗಳ ಟಾಪ್ ಫೋರ್ ಪಟ್ಟಿಯಲ್ಲಿವೆ ಎಂದು ಅಸೋಚಾಮ್ ವರದಿ ಹೇಳುತ್ತವೆ.

ಇದೇ ವರದಿಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ, ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಇ- ತ್ಯಾಜ್ಯದ ಉತ್ಪಾದನೆ ಆಗುತ್ತಿದೆ. ದೇಶದ ಒಟ್ಟಾರೆ ಇ- ತ್ಯಾಜ್ಯದ ಉತ್ಪಾದನೆ ಪೈಕಿ ಶೇ. 19. 8ರಷ್ಟರ ಕೊಡುಗೆಯನ್ನು ನೀಡುತ್ತಿರುವುದು ವಾಣಿಜ್ಯ ನಗರಿಯನ್ನು ರಾಜಧಾನಿ ಮಾಡಿಕೊಂಡಿರುವ ಮಹಾರಾಷ್ಟ್ರ. ನಂತರ ಸ್ಥಾನದಲ್ಲಿ ತಮಿಳುನಾಡು (ಶೇ. 13), ಉತ್ತರ ಪ್ರದೇಶ (ಶೇ. 10), ಪಶ್ಚಿಮ ಬಂಗಾಳ (ಶೇ 9.8), ದಿಲ್ಲಿ (ಶೇ. 9.5) ಇವೆ. ಸಿಲಿಕಾನ್ ಸಿಟಿಯನ್ನು ಹೊಂದಿರುವ ಕರ್ನಾಟಕದ ಕೊಡುಗೆ ಶೇ. 8.9 ರಷ್ಟಿದೆ.

‘ಪರಿಸರ ದಿನಾಚರಣೆ’: ಮೊಬೈಲ್ ಬಳಸುವವರ ಗಮನಕ್ಕೆ...

“ಬೆಂಗಳೂರಿಗರಿಗೆ ಕಸದ ಸಮಸ್ಯೆ ಹೊಸತೇನಲ್ಲ. ಇಲ್ಲಿ ನಿತ್ಯ ಬಳಸುವ ಕಸದಲ್ಲಿ ಘನ ತ್ಯಾಜ್ಯ, ಹಸಿ ತ್ಯಾಜ್ಯವನ್ನಾಗಿ ವಿಭಾಗಿಸಬೇಕು ಎಂದು ಸ್ಥಳೀಯ ಆಡಳಿತಕ್ಕೆ ಅರಿವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ. ಈಗಲೂ ಸಾಕಷ್ಟು ಜನ ಈ ಕೆಲಸವನ್ನು ಮಾಡುತ್ತಿಲ್ಲ. ಕಸವೇ ಮಾಫಿಯಾ ಆಗಿ ಬದಲಾಗಿರುವ ಸಿಲಿಕಾನ್ ಸಿಟಿಯಲ್ಲಿ ತ್ಯಾಜ್ಯಗಳ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ,’’ ಎನ್ನುತ್ತಾರೆ ಪರಿಸರ ಹೋರಾಟಗಾರ್ತಿ ವಾಸಂತಿ ಶೆಣೈ.

ಸದ್ಯ ಸ್ಥಳೀಯ ಆಡಳಿತ ಘನ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳ ವಿಂಗಡಣೆ ಕುರಿತು ಯೋಜನೆ ರೂಪಿಸಿದೆಯಾದರೂ, ಇ -ತ್ಯಾಜ್ಯಗಳ ಬಗೆಗೆ ವಿಶೇಷವಾಗಿ ಯೋಜನೆಗಳು ಕಾಣಸಿಗುವುದಿಲ್ಲ. ಮನೆಯಗಳಲ್ಲಿ ಬಳಸಿ ಬಿಸಾಡುವ ಮೊಬೈಲ್ ಚಾರ್ಜರ್‌ನಿಂದ ಹಿಡಿದು, ಕಂಪ್ಯೂಟರ್‌ಗಳವೆರೆಗೆ ಎಲ್ಲವೂ ಘನ ತ್ಯಾಜ್ಯದಲ್ಲಿಯೇ ಸೇರಿ ಹೋಗುತ್ತಿದೆ.

ಬೆಳವಣಿಗೆಯ ಅಡ್ಡಪರಿಣಾಮ:

90ರ ದಶಕದ ನಂತರ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಐಟಿ- ಬಿಟಿ ಬೆಳವಣಿಗೆಗಳ ಅಡ್ಡ ಪರಿಣಾಮಗಳು ನಾನಾ ಆಯಾಮಗಳನ್ನು ಹೊಂದಿವೆ. ಅರ್ಧ ದಶಕದ ಅಂತರದಲ್ಲಿ ಹೊಸತಾಗಿ ಸೃಷ್ಟಿಯಾಗಿ ಮಧ್ಯಮ ವರ್ಗವೊಂದು ವಾಹನಗಳನ್ನು ಕೊಳ್ಳುವ ಶಕ್ತಿಯನ್ನು ತನ್ನದಾಗಿಸಿಕೊಂಡಿತು. ಪರಿಣಾಮ ಬೆಂಗಳೂರಿನ ಟ್ರಾಫಿಕ್ ಬೆಳೆಯಿತು. ಅದರ ಜತೆಗೆ ವಾತಾವರಣವೂ ಕಲುಷಿತಗೊಳ್ಳುತ್ತ ಬಂತು. ಇತರೆ ಜಿಲ್ಲಾ ಕೇಂದ್ರಗಳೀಗ ಇದೇ ಹಾದಿಯಲ್ಲಿವೆ.

ಇದರ ಜತೆಗೆ, ವಿದ್ಯುನ್ಮಾನ ಮಾಧ್ಯಮ ಕೈಗೆಟಕುವ ಬೆಲೆಯಲ್ಲಿ ಸಿಗಲು ಶುರುವಾದ ನಂತರ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಹೆಚ್ಚಿದೆ. ಈ ಕುರಿತು ರಾಜ್ಯವನ್ನು ಇಟ್ಟುಕೊಂಡು ನಿಖರವಾದ ಅಧ್ಯಯನಗಳು ಈವರೆಗೂ ಹೊರಬಿದ್ದಿಲ್ಲವಾದರೂ, ರಾಜ್ಯ ಶೇ. 55ರಷ್ಟು ಜನರ ಕೈಲಿ ಈಗ ಎಲೆಕ್ಟ್ರಾನಿಕ್ ಉಪಕರಣಗಳಿವೆ ಎಂಬ ಅಂದಾಜಿದೆ. ಇಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಇ- ಉಪಕರಣಗಳು ಆಯುಷ್ಯ ಮುಗಿದ ಮೇಲೆ ಏನಾಗುತ್ತಿವೆ? ಇದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.

‘ಪರಿಸರ ದಿನಾಚರಣೆ’: ಮೊಬೈಲ್ ಬಳಸುವವರ ಗಮನಕ್ಕೆ...

ನಾವೇನು ಮಾಡಬಹುದು?:

ಒಂದು ಕಡೆ ಬೆಳವಣಿಗೆಯ ವೇಗ, ಮತ್ತೊಂದೆಡೆ ಸಾಮಾನ್ಯ ಬದುಕಿಗೆ ಅಗತ್ಯವಾಗಿರುವ ಪರಿಸರ ರಕ್ಷಣೆ. ಎರಡರ ನಡುವೆ ಸಮತೋಲನವೊಂದನ್ನು ಕಾಯ್ದುಕೊಳ್ಳಬೇಕಿದೆ. “ವೈಯಕ್ತಿಕ ಮಟ್ಟದಲ್ಲಿ ಇ- ತ್ಯಾಜ್ಯಗಳ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವುದು ಅಗತ್ಯ. ಅದೇ ವೇಳೆ ಸರಕಾರದ ಮಟ್ಟದಲ್ಲಿ ದೊಡ್ಡ ದೊಡ್ಡ ಕಂಪನಿಗಳಿಂದ ಹೊರಬೀಳುತ್ತಿರುವ ಇ- ತ್ಯಾಜ್ಯವನ್ನು ಸಂಸ್ಕರಣೆ, ಪುನರ್‌ ಬಳಕೆ ಮಾಡಲು ಇರುವ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಬೇಕು,’’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವಿನಯ್ ಶ್ರೀನಿವಾಸ್.

ಕಾಯ್ದೆ ವಿಚಾರದಲ್ಲಿ ಇನ್ನಷ್ಟು ಚರ್ಚೆಗಳು ನಡೆಬೇಕಿದೆ. ಒತ್ತಡಗಳನ್ನು ರೂಪಿಸಬೇಕಿದೆ. ಅದು ದೂರಗಾಮಿ ನೆಲೆಯಲ್ಲಿ ನಡೆಬೇಕಿರುವ ಕೆಲಸ. ಅದಕ್ಕೂ ಮುಂಚೆ, ವೈಯಕ್ತಿಕ ಮಟ್ಟದಲ್ಲಿ ಇ- ತ್ಯಾಜ್ಯ ನಿರ್ವಹಣೆಯನ್ನು ಆರಂಭಿಸಲು ಇಚ್ಚಾಶಕ್ತಿಯೊಂದಿದ್ದರೂ ಸಾಕು. ಅದಕ್ಕಾಗಿ ಮನೆಯಲ್ಲಿ ಬಳಸಿದ ನಂತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಘನ ತ್ಯಾಜ್ಯಗಳ ಜತೆಗೆ ಸೇರಿಸುವ ಮುನ್ನ ಕೊಂಚ ಯೋಚಿಸಿ. ಅವುಗಳನ್ನು ಪ್ರತ್ಯೇಕಗೊಳಿಸಿ, ಇ- ವೇಸ್ಟ್ ಸಂಸ್ಕರಿಸುವ ಸಂಸ್ಥೆಗಳಿಗೆ ತಲುಪಿಸುವ ಕೆಲಸ ಮಾಡಿದರೂ ಸಾಕಾಗುತ್ತದೆ.

ಯಾಕೆ ಎಂದರೆ, ಅಧ್ಯಯನವೊಂದರ ಪ್ರಕಾರ, 2021ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಉತ್ಪಾದನೆಯಾಗುವ ಇ- ತ್ಯಾಜ್ಯದ ಪ್ರಮಾಣ 52. 2 ಮಿಲಿಯನ್ ಟನ್‌ನಷ್ಟಾಗುತ್ತದೆ. ಸದ್ಯ ಇದರ ಪ್ರಮಾಣ 44. 7 ಮಿಲಿಯನ್ ಟನ್‌ನಷ್ಟಿದೆ. ಹೀಗೆ, ಇನ್ನು ಐದು ವರ್ಷಗಳಲ್ಲಿ ಐದು ಮಿಲಿಯನ್ ಟನ್‌ ಇ- ತ್ಯಾಜ್ಯ ಉತ್ಪಾದನೆಯಾದರೆ ಪ್ರತಿಯೊಬ್ಬರ ಪಾಲು 6. 8 ಕೇಜಿ ಎಂದು ಅಂದಾಜಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿಯೊಬ್ಬರ ಪಾಲು ಎಷ್ಟಿರಬೇಕು ಎಂಬುದು ನಮ್ಮ ಕೈಯಲ್ಲೇ ಇದೆ.