‘ಆಧಾರ್‌ ಅಪಸವ್ಯ’: ಸರಕಾರದ ನೀತಿಗೆ 9 ಸಾವು; ಹೈರಾಣಾದ ಬಡವರ ಬದುಕು
COVER STORY

‘ಆಧಾರ್‌ ಅಪಸವ್ಯ’: ಸರಕಾರದ ನೀತಿಗೆ 9 ಸಾವು; ಹೈರಾಣಾದ ಬಡವರ ಬದುಕು

ಚಿಂದಿ ವ್ಯಾಪಾರದಿಂದ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬರು 4 ದಿನ ಅಹಾರವಿಲ್ಲದೇ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಜಾರ್ಖಂಡ್‌ನಲ್ಲಿ ಹಸಿವಿನಿಂದ ಸತ್ತವರ ಸಂಖ್ಯೆ 9ಕ್ಕೆ ಏರಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಆಧಾರ್ ನಂಬರ್. 

ಕಳೆದ 10 ದಿನಗಳ ಅವಧಿಯಲ್ಲಿ ಜಾರ್ಖಂಡ್‌ನಲ್ಲಿ ಮೂರು ಜನ ಹಸಿವಿನಿಂದ ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ.  24 ಗಂಟೆಗಳ ಅವಧಿಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಡಿಸೆಂಬರ್‌ ಅವಧಿಯೊಳಗೆ ನಾಲ್ಕು ಜನ ಹೀಗೆ ಹಸಿವಿನಿಂದ ಕಂಗೆಟ್ಟು ಪ್ರಾಣ ಬಿಟ್ಟಿದ್ದರು. ಒಟ್ಟು ಸಾವಿನ ಸಂಖ್ಯೆ 9ಕ್ಕೇರಿದೆ. ಇದು ಸತ್ತವರ ಸಂಖ್ಯೆ ಮಾತ್ರ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಲೆಕ್ಕಕ್ಕಿಲ್ಲ.

ಈ ಹಸಿವಿನಿಂದ ಉಂಟಾಗುತ್ತಿರುವ ಸಾವುಗಳು ಜಾರ್ಖಂಡ್‌ನ ಮುಖ್ಯಮಂತ್ರಿ ರಘುಬರ್‌ ದಾಸ್‌ ಸರಕಾರದ ಕಾರ್ಯಕ್ಷಮತೆಯ ಕುರಿತು ಪ್ರಶ್ನೆ ಉದ್ಭವಿಸುವಂತೆ ಮಾಡಿವೆ. ಜಾರ್ಖಂಡ್‌ನ ಬಿಜೆಪಿ ಸರಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಬರುವ ಬಿಪಿಎಲ್‌ ಕಾರ್ಡ್‌ ಹೊಂದಿರುವವರು ಕಾರ್ಡ್‌ಗೆ ಕಡ್ಡಾಯವಾಗಿ ಆಧಾರ್‌ ಜೋಡಣೆ ಮಾಡಿಸಬೇಕು ಎಂದಿತ್ತು. ಸಾಕಷ್ಟು ಜನರಿಂದ ಆಧಾರ್‌ ಜೋಡಣೆ ಮಾಡಿಸಲು ಸಾಧ್ಯವಾಗದೇ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳು ಅಮಾನ್ಯಗೊಂಡಿದ್ದವು. ಇಂದು ವರದಿಯಾಗುತ್ತಿರುವ ಸಾವುಗಳಿಗೆ ಸರಕಾರದ ಇದೇ ನೀತಿ ಕಾರಣವಾಗಿದೆ.

ಊಟ ಮಾಡಿ ನಾಲ್ಕು ದಿನವಾಗಿತ್ತು:

ಜಾರ್ಖಂಡ್‌ನ ಚಾತ್ರ ಜಿಲ್ಲೆಯಲ್ಲಿ ಚಿಂದಿ ಆಯ್ದು ಬದುಕು ಸಾಗಿಸುತ್ತಿದ್ದ 45ರ ವಯಸ್ಸಿನ ಮಹಿಳೆ ಮೀನಾ ಮುಶಾರ್‌, ನಾಲ್ಕು ದಿನಗಳ ಕಾಲ ಹಸಿವಿನಿಂದ ಕಂಗೆಟ್ಟು ಪ್ರಾಣ ಬಿಟ್ಟಿದ್ದಾರೆ. ತಾಯಿ ಮೀನಾ ಮುಶಾರ್‌ ಮತ್ತು ಮತ್ತು ಮಗ ಗೌತಮ್‌ ಮುಶಾರ್‌ ಮೂಲತಃ ಬಿಹಾರದ ಗಯಾ ಭಾಗದವರು. ಜಾರ್ಖಂಡ್‌ ವಲಸೆ ಬಂದು, ಚಿಂದಿ ಆಯ್ದು ಜೀವನ ನಡೆಸುತ್ತಿದ್ದರು.

ಕಳೆದ ನಾಲ್ಕು ದಿನಗಳಿಂದ ಮೀನಾ ಮುಶಾರ್‌ ಏನನ್ನೂ ಕೂಡ ತಿಂದಿರಲಿಲ್ಲ. ಅಸ್ವಸ್ಥಳಾದ ತಾಯಿಯನ್ನು ಮಗ ಗೌತಮ್‌ ಸ್ಥಳೀಯ ಪ್ರಾಥಮಿಕ ಆಸ್ಪತ್ರೆಗೆ ಹೊತ್ತು ತಂದಿದ್ದ. ಆದರೆ ಸೋಮವಾರ ಸಂಜೆ ಮೀನಾ ಮುಶಾರ್‌ ಸಾವನ್ನಪ್ಪಿದ್ದಾರೆ.

ತಾಯಿ ಮೀನಾ ಮುಶಾರ್‌ರನ್ನು ಹೊತ್ತು ಸಾಗಿದ ಗೌತಮ್‌ ಮುಶಾರ್‌.
ತಾಯಿ ಮೀನಾ ಮುಶಾರ್‌ರನ್ನು ಹೊತ್ತು ಸಾಗಿದ ಗೌತಮ್‌ ಮುಶಾರ್‌.

ಒಂದುವರೆ ತಿಂಗಳಿಂದ ಅಹಾರ ದೊರೆತಿರಲಿಲ್ಲ:

ಕಳೆದ 10 ದಿನಗಳ ಅವಧಿಯಲ್ಲಿ ಮೃತಪಟ್ಟಿರುವ ಇಬ್ಬರ ಪೈಕಿ ಒಬ್ಬರು ಮುರ್ಹು ಪ್ರಾಂತ್ಯದಲ್ಲಿ ವಾಸವಿದ್ದ 60ರ ಪ್ರಾಯದ ಸುಧಾಮ ಪಾಂಡೆ. ಸ್ಥಳೀಯರ ಪ್ರಕಾರ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸುಧಾಮ ಪಾಂಡೆ ಕಳೆದ ಒಂದುವರೆ ತಿಂಗಳಿಂದ ಪಡಿತರ ವ್ಯವಸ್ಥೆಯಿಂದ ಅಗತ್ಯ ವಸ್ತುಗಳನ್ನು ಪಡೆದಿರಲಿಲ್ಲ.

ನೆರೆಹೊರೆಯವರು ಹೇಳುವಂತೆ, ಏಕಾಂಗಿಯಾಗಿ ವಾಸಿಸುತ್ತಿದ್ದ ಸುಧಾಮ ಪಾಂಡೆ ಮುಂಚಿನ ದಿನಗಳಲ್ಲಿ ಬಿಪಿಎಲ್‌ ಕಾರ್ಡ್ ಮೂಲಕ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುತ್ತಿದ್ದರು. ಸರಕಾರ ಸಾರ್ವಜನಿಕ ವಿತರಾಣಾ ವ್ಯವಸ್ಥೆಯಲ್ಲಿ ಮಧ್ಯ ಪ್ರವೇಶ ಮಾಡಿ ಆಧಾರ್‌ ಜೋಡಣೆ ಕಡ್ಡಾಯವೆಂದಾಗ, ಅಹಾರದಿಂದ ವಂಚಿತರಾದವರ ಪೈಕಿ ಸುಧಾಮ ಪಾಂಡೆ ಕೂಡ ಒಬ್ಬರಾಗಿದ್ದರು. ಪಡಿತರ ವ್ಯವಸ್ಥೆಯಿಂದ ದೊರೆಯುತ್ತಿದ್ದ ಅಹಾರ ಪದಾರ್ಥಗಳು ನಿಂತುಹೋಗಿದ್ದವು. ಆಹಾರವಿಲ್ಲದೇ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಸಾಗಿದ ಸುಧಾಮ ಪಾಂಡೆ, ಮೇ 25ರಂದು ಕೊನೆಯುಸಿರೆಳೆದರು.

ಈ ಕುರಿತು ಮಾತನಾಡಿರುವ ಸ್ಥಳೀಯ ಉಪ ವಿಭಾಗೀಯ ಅಧಿಕಾರಿ ಪವನ್‌ ಕುಮಾರ್‌ ಪಾಲ್‌, “ಸುಧಾಮ ಪಾಂಡೆ ಹಸಿವಿನಿಂದ ಸತ್ತಿರುವುದರ ಬಗ್ಗೆ ಮಾಹಿತಿ ಇಲ್ಲವೆಂದು,” ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಮೂರು ದಿನಗಳಿಂದ ಊಟವಿರಲಿಲ್ಲ:

ಮತ್ತೊಂದು ಕಡೆ ಜಾರ್ಖಂಡ್‌ನ ಗಿರಿದಿಹ್‌ ಜಿಲ್ಲೆಯ ಮಂಗಾರ್‌ಗಡ್ಡಿ ಗ್ರಾಮದಲ್ಲಿ ವಾಸವಾಗಿದ್ದ 58 ವರ್ಷದ ಮಹಿಳೆ ಸಾವಿತ್ರಿ ದೇವಿ 3 ದಿನಗಳ ಕಾಲ ಊಟವಿಲ್ಲದೇ ನಿತ್ರಾಣಗೊಂಡು ಸಾವಿನ್ನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಸಾವಿತ್ರಿ ದೇವಿಯ ಕುಟುಂಬಕ್ಕೆ ಕಳೆದ ಒಂದು ತಿಂಗಳಿಂದ ಅಗತ್ಯವಿರುವಷ್ಟು ಆಹಾರ ದೊರೆತಿರಲಿಲ್ಲ. ಕಳೆದ ಮೂರು ದಿನಗಳಿಂದ ಇಡೀ ಕುಟುಂಬ ಉಪವಾಸದಲ್ಲಿತ್ತು. ಹಸಿವು ತಾಳಲಾರದೇ ಇಳಿವಯಸ್ಸಿನ ಸಾವಿತ್ರಿ ದೇವಿ ಮೃತಪಟ್ಟಿದ್ದಾರೆ.

ಸಾವಿತ್ರಿ ದೇವಿಯವರ ಇಬ್ಬರು ಮಕ್ಕಳು ಕೂಡ ಹೊರರಾಜ್ಯಗಳಲ್ಲಿ ದುಡಿಮೆ ಮಾಡುತ್ತಿದ್ದಾರೆ. ಆದರೆ 6 ತಿಂಗಳಿಂದ ಅವರಿಗೂ ಕೂಡ ಸರಿಯಾದ ಕೆಲಸಗಳು ದೊರೆಯದೇ ಹಣದ ಸಮಸ್ಯೆ ಉಂಟಾಗಿದೆ.

ಆರ್ಥಿಕ ಸಮಸ್ಯೆ ಉಂಟಾದ ಕಾರಣದಿಂದಾಗಿ, ಇಬ್ಬರು ಸೊಸೆಯಂದಿರು ಮತ್ತು ಮೂರು ಜನ ಮಕ್ಕಳ ಹೊಟ್ಟೆ ತುಂಬಿಸುವ ಸಲುವಾಗಿ ನೆರೆಹೊರೆಯವರಿಂದ ಆಹಾರ ಪದಾರ್ಥಗಳನ್ನು ಕಡವಾಗಿ ತರಲಾಗಿತ್ತು. ಸ್ಥಳೀಯ ಸ್ವಸಹಾಯ ಗುಂಪುಗಳಿಂದಲೂ ಚಿಕ್ಕ ಪ್ರಮಾಣದ ಸಾಲವನ್ನು ಪಡೆಯಲಾಗಿತ್ತು. ಆದರೆ 6 ಜನರ ಹೊಟ್ಟೆ ತುಂಬಿಸಲು ಇದರಿಂದ ಸಾಧ್ಯವಾಗಿರಲಿಲ್ಲ. ಹಸಿವು ತಾಳಲಾರದೇ ಸಾವಿತ್ರಿ ದೇವಿ ಇಹಲೋಕ ತ್ಯಜಿಸಿದ್ದಾರೆ.

ರೇಶನ್‌ ಕಾರ್ಡ್‌ ರಾಜಕೀಯ:

ಜಿಲ್ಲಾ ಅಧಿಕಾರಿಗಳು ಹೇಳುವಂತೆ, ಸಾವಿತ್ರಿ ದೇವಿ ಕುಟುಂಬ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿತ್ತೇ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ.

ದುಮ್ರಿ ವಲಯದ ಅಭಿವೃದ್ಧಿ ಅಧಿಕಾರಿ ರಾಹುಲ್‌ ದೇವ್‌ ಸಾವಿತ್ರಿ ದೇವಿ ಕುಟುಂಬ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿದ್ದಾರೆ. “ಸಾವಿತ್ರಿ ದೇವಿ ಕುಟುಂಬದ ಬಳಿ ಪಡಿತರ ಚೀಟಿ ಇರಲ್ಲಿಲ್ಲ. ಅವರಿಂದ ಅರ್ಜಿ ಕೂಡ ಸಲ್ಲಿಕೆಯಾಗಿತ್ತು. ಆದರೆ ಅರ್ಜಿ ಪ್ರಕ್ರಿಯೆ ಮುಮದುವರೆದಿತ್ತೇ ಎನ್ನುವುದರ ಕುರಿತು ತನಿಖೆಯಾಗಬೇಕಿದೆ,” ಎಂದು ರಾಹುಲ್‌ ದೇವ್‌ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿನ ಎಲ್ಲಾ ಜನರಿಗೆ ಆಹಾರ ದೊರೆಯುತ್ತಿದೆಯೇ ಇಲ್ಲವೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವಲ್ಲಿ ಜಾರ್ಖಂಡ್‌ ಸರಕಾರ ಸೋತಿದೆ. ಪಡಿತರ ಚೀಟಿ ವ್ಯವಸ್ಥೆ ಮತ್ತು ವೃದ್ಧಾಪ್ಯ ವೇತನಗಳನ್ನು ನೀಡುವಲ್ಲಿ ಉಂಟಾಗುತ್ತಿರುವ ತಾಂತ್ರಿಕ ದೋಷಗಳು ಕೂಡ ಸರಕಾರದ ಕಣ್ಣಿಗೆ ಕಾಣಿಸಿಲ್ಲ. ಸರಕಾರದ ಈ ವೈಪಲ್ಯವೇ ಈ ಸಾವುಗಳಿಗೆ ಕಾರಣ ಎಂದರೆ ತಪ್ಪಾಗಲಾರದು.

ಬಡವರ ಸಾವಿಗೆ ಹೊಣೆಯಾರು?:

ಹಸಿವಿನಿಂದ ಕಂಗೆಟ್ಟು ಮೃತಪಟ್ಟವರ ಪೈಕಿ ಸೆಪ್ಟೆಂಬರ್‌ನಲ್ಲಿ ಸಾವನ್ನಪ್ಪಿದ 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಮೊದಲನೆಯವಳು. ದೆಹಲಿಯಲ್ಲಿ ಆಹಾರ ಹಕ್ಕು ಕುರಿತಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳು ಈ ಸಾವಿನ ಕುರಿತಾಗಿ ಸ್ಪಷ್ಟತೆಯನ್ನು ನೀಡಿದ್ದರು. ಪಡಿತರ ಚಿಟಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡುವಲ್ಲಿ ಸಂತೋಷಿ ಕುಮಾರಿ ಕುಟುಂಬ ಸೋತಿತ್ತು. ಆದ್ದರಿಂದಗಾಗಿ ಪಡಿಚರ ಚೀಟಿ ಅಮಾನ್ಯಗೊಂಡಿತ್ತು.

ಮೃತ ಬಾಲಕಿ ಸಂತೋಷಿ ಕುಮಾರಿ.
ಮೃತ ಬಾಲಕಿ ಸಂತೋಷಿ ಕುಮಾರಿ.

ಸಂತೋಷಿ ಕುಮಾರಿಯ ಸಹೋದರಿ ಹೇಳುವಂತೆ, ಮನೆಯಲ್ಲಿ ಎಂಟು ದಿನಗಳಿಂದ ಹೊಲೆಯನ್ನೇ ಉರಿಸಿರಲಿಲ್ಲ. ಅಡುಗೆ ಮಾಡಲು ಯಾವ ಧಾನ್ಯಗಳೂ ಕೂಡ ಇರಲಿಲ್ಲ. ಸಂತೋಷಿ ಕುಮಾರಿ ಸಾವನ್ನಪ್ಪಿದ ಸೆಪ್ಟೆಂಬರ್‌ 28ರ ದಿನ ನೆರೆಹೊರೆಯವರ ಬಳಿ ಏನಾನ್ನಾದರೂ ನೀಡುವಂತೆ ಬೇಡಲಾಗಿತ್ತಾದರೂ, ಏನೂ ಸಿಕ್ಕಿರಲಿಲ್ಲ. ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ ಹೊಟ್ಟೆ ನೋವು ಎಂದು ನರಳಲಾರಂಭಿಸಿದ್ದ ಸಂತೋಷಿ ಕುಮಾರಿ, ಕೆಲವು ಗಂಟೆಗಳ ಅವಧಿಯನ ನಂತರ ಸಾವನ್ನಪ್ಪಿದ್ದಳು.

ಸಂತೋಷಿ ಕುಮಾರಿಯ ಸಾವು ಹಲವು ಹೋರಾಟಗಳಿಗೆ ದಾರಿ ಮಾಡಿಕೊಟ್ಟಿತ್ತು. ಹಲವು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಮೊದಲಿಗೆ ಸಂತೋಷಿ ಕುಮಾರಿ ಮಲೇರಿಯಾದಿಂದಾಗಿ ಸತ್ತಿದ್ದಾಳೆ ಎಂದು ಉಡಾಫೆ ಮಾತುಗಳನ್ನಾಡಿದ್ದ ಸರಕಾರ, ನಂತರದಲ್ಲಿ ತಪ್ಪನ್ನು ಒಪ್ಪಿಕೊಂಡಿತ್ತು.

ಅಕ್ಟೋಬರ್‌ ಅವಧಿಯಲ್ಲಿ ಪಡಿತರ ಚೀಟಿಗೆ ಆಧಾರ್‌ ಕಾರ್ಡ್ ಜೋಡಣೆ ಮಾಡಿಸಲು ಸಾಧ್ಯವಾಗದ ಕಾರಣ ದಿಯೋಗರ್‌ ಜಿಲ್ಲೆಯ ರೂಪ್‌ಲಾಲ್‌ ಮರಾಂಡಿ ಸಾವನ್ನಪ್ಪಿದ್ದರು. ಡಿಸೆಂಬರ್‌ 1ರಂದು ಗರ್ಹ್ವಾ ಜಿಲ್ಲೆಯ ದಂಡಾ ವಯಲದಲ್ಲಿ ವಾಸಿಸುತ್ತಿದ್ದ 64 ವರ್ಷದ ವೃದ್ಧೆ ಪ್ರೇಮಾನಿ ಕುನ್ವಾಲ್‌ ಹಸಿವಿನಿಂದಾಗಿ ಪ್ರಾಣ ಬಿಟ್ಟಿದ್ದರು. ಆಧಾರ್‌ ಕಾರ್ಡ್ ಜೋಡಣೆಯ ವೇಳೆ ಲೋಪವುಂಟಾಗಿ, ಪ್ರೇಮಾನಿಗೆ ಬರಬೇಕಾಗಿದ್ದ ವೃದ್ಧಾಪ್ಯ ವೇತನ ಬೇರೊಂದು ಬ್ಯಾಂಕ್‌ ಖಾತೆಗೆ ಸೇರುತ್ತಿತ್ತು. ಈ ವಿಷಯ ಪ್ರೇಮಾನಿಗೆ ತಿಳಿದಿರಲಿಲ್ಲ. ಹಣ ಬಾರದೇ, ಪಡಿತರ ಚೀಟಿ ವ್ಯವಸ್ಥೆಯಲ್ಲಿ ಅಹಾರ ಧಾನ್ಯಗಳು ಕೂಡ ದೊರೆಯದೆ ಪ್ರೇಮಾನಿ ಅಸುನೀಗಿದ್ದರು.

ಡಿಸೆಂಬರ್‌ 25ರಂದು ಗರ್ಹ್ವಾ ಜಿಲ್ಲೆಯ ಸೋನಾಪುರ್ವಾ ಗ್ರಾಮದ 67 ವರ್ಷದ ವೃದ್ಧೆ ಎಟ್ವಾರಿಯಾ ದೇವಿ, ಹಸಿವಿನಿಂದ ಪ್ರಾಣ ಬಿಟ್ಟಿದ್ದರು. ಆಕೆಯ ಕುಟುಂಬಕ್ಕೂ ಕೂಡ ಆಧಾರ್‌ ಜೋಡಣೆ ಮಾಡಿಸಲು ಸಾಧ್ಯವಾಗಿರಲಿಲ್ಲ. ಕುಟುಂಬಕ್ಕೆ ಆಹಾರವಿಲ್ಲದಂತಾಗಿ, ಕೊನೆಗೆ ಎಟ್ವಾರಿಯಾ ದೇವಿ ಪ್ರಾಣವನ್ನೂ ಕೂಡ ಬಿಡುವಂತಾಯಿತು.

ಈ ಎಲ್ಲಾ ಸಾವು ನೋವುಗಳ ಸಂಭವಿಸಿರುವುದು ಜಾರ್ಖಂಡ್‌ ಸರಕಾರ 11.6 ಲಕ್ಷ ಪಡಿತರ ಚೀಟಿಗಳನ್ನು ಅಮಾನ್ಯಗೊಳಿಸಿದ ನಂತರದ ದಿನಗಳಲ್ಲಿ. ಆಧಾರ್ ಕಾರ್ಡ್‌ ಜೊಡಣೆ ಮಾಡಿರದ ಕಾರಣ ಈ ಕಾರ್ಟ್‌ಗಳನ್ನು ಅಮಾನ್ಯಗೊಳಿಸಲಾಗಿದೆ ಎಂದು ಸರಕಾರ ತಿಳಿಸಿತ್ತು.

ಪಡಿತರ ಚೀಟಿ ವ್ಯವಸ್ಥೆಯಡಿಯಲ್ಲಿ ಬಡತನ ರೇಖೆಗಿಂತ ಮೇಲಿರುವವರೂ ಕೂಡ ಮೋಸದಿಂದ ಅಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎನ್ನುವುದು ಅಲ್ಲಗೆಳೆಯಲಾದ ವಿಷಯ. ಆದರೆ ಯಾರನ್ನೋ ಮಟ್ಟ ಹಾಕುವ ಯೋಜನೆಗೆ ಬಲಿಯಾದ ಬಡವರ ಜೀವಗಳಿಗೆ ಬೆಲೆ ಏನು? ಈ ಹೊಣೆಯನ್ನು ಯಾರು ಹೊರುತ್ತಾರೆ ಎನ್ನುವುದಕ್ಕೆ ಜಾರ್ಖಂಡ್‌ ಸರಕಾರವೇ ಉತ್ತರಿಸಬೇಕಿದೆ.