ಸಮ್ಮಿಶ್ರ ಸರಕಾರಕ್ಕೆ ‘ಅತೃಪ್ತಿ’ ಕಂಟಕ; ಕಾಂಗ್ರೆಸ್‌ ಅಸಮಾಧಾನ ಬಿಜೆಪಿಗೆ ಲಾಭ?
COVER STORY

ಸಮ್ಮಿಶ್ರ ಸರಕಾರಕ್ಕೆ ‘ಅತೃಪ್ತಿ’ ಕಂಟಕ; ಕಾಂಗ್ರೆಸ್‌ ಅಸಮಾಧಾನ ಬಿಜೆಪಿಗೆ ಲಾಭ?

ಸಮ್ಮಿಶ್ರ ಸರಕಾರದೊಳಗೆ ಕಾಂಗ್ರೆಸ್‌ನ ಅಸಮಾಧಾನ ಹಾಗೂ ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಒಳಗೆ ಕಾಣಿಸಿಕೊಂಡಿರುವ ಅತೃಪ್ತಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರೆ ಆಶ್ಚರ್ಯವಿಲ್ಲ.

ಸಮ್ಮಿಶ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ ಎಂಬುದು ಈಗ ಕಾಂಗ್ರೆಸ್‌ಗೆ ಮನವರಿಕೆಯಾಗುತ್ತಿದೆ. ಜೆಡಿಎಸ್‌ಗಿಂತ ಎರಡು ಪಟ್ಟು ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ತಮ್ಮ ಜುಟ್ಟನ್ನು ಅವರ ಕೈಗೆ ಕೊಟ್ಟ ನಿರಾಸೆ ಕಾಂಗ್ರೆಸ್‌ ಅನ್ನು ಕಾಡುತ್ತಿದೆ.

ಜೆಡಿಎಸ್‌ ಜತೆಗೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರ ಅತೃಪ್ತಿ ಮತ್ತು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ ಒಳಗೆ ನಡೆಯುತ್ತಿರುವ ಮುಸುಕಿನ ಗುದ್ದಾಟಗಳು ಮತ್ತೆ ಬಿಜೆಪಿಗೆ ವರವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡಲು ವಿಫಲವಾದ ಕಾರಣ ನೀಡಿ ಎಸ್‌.ಆರ್‌. ಪಾಟೀಲ್‌ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿರುವ ಸಚಿವ ಸ್ಥಾನದ ಆಕಾಂಕ್ಷಿಗಳು ಒಂದೊಮ್ಮೆ ತಮಗೆ ಸಚಿವ ಸ್ಥಾನ ಕೈ ತಪ್ಪಿದರೆ ಬಿಜೆಪಿ ಕಡೆಗೆ ಮುಖಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಆಪರೇಷನ್‌ ಕಮಲಕ್ಕೆ ಹೆಚ್ಚಿನ ಕಸರತ್ತು ಮಾಡಬೇಕಿಲ್ಲ. ಸಚಿವ ಸ್ಥಾನ ಕೈ ತಪ್ಪಿದರೆ ಅಸಮಾಧಾನಗೊಳ್ಳುವ ಕಾಂಗ್ರೆಸ್‌ನ ಕೆಲ ಶಾಸಕರು ತಾವೇ ಕಮಲದ ಆಪರೇಷನ್‌ಗೆ ಒಳಗಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ನಿಜವೇ ಆದರೆ ಈ ಬಾರಿ ಮನೆ ಬಾಗಿಲಿಗೆ ಬರುವವರನ್ನು ಬಿಜೆಪಿ ಸುಮ್ಮನೆ ಕಳಿಸುವುದಿಲ್ಲ.

ಜೆಡಿಎಸ್- ಕಾಂಗ್ರೆಸ್ ಸರಕಾರದ ಗೊಂದಲಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
-ಬಿ.ಎಸ್. ಯಡಿಯೂರಪ್ಪ, ವಿಪಕ್ಷದ ನಾಯಕ

ಐದು ವರ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಮತ್ತು ಪ್ರಮುಖ ಖಾತೆಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಬಗ್ಗೆ ರಾಜ್ಯ ಕಾಂಗ್ರೆಸ್‌ ಒಳಗೆ ಕೈ ಹೈಕಮಾಂಡ್‌ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಕಾಂಗ್ರೆಸ್‌ ಜೆಡಿಎಸ್‌ಗೆ ಬೆಂಬಲ ನೀಡಿದ್ದು ಸರಿ, ಆದರೆ ಅವರ ಮುಂದೆ ಕೈ ಕಟ್ಟಿನಿಲ್ಲುವ ಮಟ್ಟಕ್ಕೆ ಸರಕಾರದ ಚುಕ್ಕಾಣಿಯನ್ನು ಪೂರ್ತಿಯಾಗಿ ಜೆಡಿಎಸ್‌ಗೆ ಕೊಟ್ಟಿದ್ದು ಸರಿಯಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ ಕಾರ್ಯಕರ್ತರ ಮಟ್ಟದಿಂದ ಶಾಸಕರ ಮಟ್ಟದವರೆಗೆ ಇದೆ.

ಕಾಂಗ್ರೆಸ್‌ ಈ ಬಾರಿಯ ಸಂಪುಟದಲ್ಲಿ ಯಾರಿಗೆ ಯಾವ ಖಾತೆಗಳನ್ನು ಹಂಚಿಕೆ ಮಾಡುತ್ತದೆ, ಯಾರು ಯಾರಿಗೆ ಸಚಿವ ಸ್ಥಾನ ನೀಡುತ್ತದೆ ಎಂಬುದರ ಮೇಲೂ ಕಾಂಗ್ರೆಸ್‌ನ ಭವಿಷ್ಯ ನಿಂತಿದೆ. ಸಚಿವ ಸ್ಥಾನಕ್ಕಾಗಿ ಈಗಾಗಲೇ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್‌ ಶಾಸಕರು ತಮಗೆ ಸಚಿವ ಸ್ಥಾನ ಕೈತಪ್ಪಿದರೆ ಸಮ್ಮಿಶ್ರ ಸರಕಾರದ ಬುಡ ಅಲುಗಿಸಲು ಸಿದ್ಧರಾಗಿದ್ದಾರೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಸಚಿವ ಸ್ಥಾನದ ಬದಲಿದೆ ಪಕ್ಷದ ಜವಾಬ್ದಾರಿ ವಹಿಸುವ ಮಾತುಗಳೂ ಕಾಂಗ್ರೆಸ್‌ ಪಾಳಯದಲ್ಲಿ ಕೇಳಿಬರುತ್ತಿವೆ. ಡಿ.ಕೆ. ಶಿವಕುಮಾರ್‌ ಆಪ್ತರ ಮನೆಗಳ ಮೇಲೆ ನಡೆದಿರುವ ಸಿಬಿಐ ದಾಳಿಯ ಕಾರಣಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಡಿ.ಕೆ. ಶಿವಕುಮಾರ್‌ ಅವರಿಗೆ ಸಚಿವ ಸ್ಥಾನ ನೀಡಲು ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.

ಒಂದು ವೇಳೆ ಸಿಬಿಐ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಿದರೆ ಸಮ್ಮಿಶ್ರ ಸರಕಾರ ಮುಜುಗರ ಅನುಭವಿಸಬೇಕಾಗುತ್ತದೆ. ಬಿಜೆಪಿಯ ಬಿ,ಎಸ್‌, ಯಡಿಯೂರಪ್ಪ, ಜನಾರ್ದನ ರೆಡ್ಡಿ ಅವರನ್ನು ‘ಜೈಲಿಗೆ ಹೋಗಿ ಬಂದವರು’ ಎಂದು ಜರೆದಿರುವ ಕಾಂಗ್ರೆಸ್ ಮುಂದೆ ವಿಪಕ್ಷಗಳಿಂದ ಅಂಥದ್ದೇ ಮಾತುಗಳನ್ನು ತಾನು ಕೇಳಬೇಕಾಗುತ್ತದೆ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್‌ ಅವರಿಗೆ ಸಚಿವ ಸ್ಥಾನ ನೀಡದಿರಲು ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧರಿಸಿದೆ ಎಂಬ ಮಾತುಗಳಿವೆ.

ಬಿಜೆಪಿ ಈಗ ಕಾದು ನೋಡುವ ತಂತ್ರವನ್ನು ಅನುಸರಿಸುತ್ತದೆ. ತಾನಾಗಿಯೇ ಯಾರನ್ನೂ ಸೆಳೆಯಲು ಮುಂದಾಗುವುದಿಲ್ಲ. ಆದರೆ, ಅತೃಪ್ತ ಶಾಸಕರ ಅಸಮಾಧಾನ ಬಿಜೆಪಿಗೆ ವರವಾಗುವ ಸಾಧ್ಯತೆ ಇದೆ.
- ಎಸ್‌. ಮಹದೇವ ಪ್ರಕಾಶ್, ರಾಜಕೀಯ ವಿಶ್ಲೇಷಕ

ಕಾಂಗ್ರೆಸ್‌ ಪಕ್ಷದೊಳಗಿನ ಈ ಒಡಕುಗಳನ್ನು ಲಾಭವಾಗಿಸಿಕೊಳ್ಳಲು ಬಿಜೆಪಿ ಈಗಾಗಲೇ ಸಿದ್ಧತೆ ನಡೆಸಿದೆ ಎಂಬ ಮಾತುಗಳಿವೆ. ಕನಿಷ್ಠ 10 ಮಂದಿ ಅತೃಪ್ತ ಶಾಸಕರನ್ನಾದರೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಸೆಳೆಯಲು ಬಿಜೆಪಿ ಈ ಬಾರಿ ಗಟ್ಟಿಯಾಗಿ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.

ಆದರೆ, ಬಿಜೆಪಿಯ ಈ ಪ್ರಯತ್ನ ಈ ಬಾರಿ ಬಹಿರಂಗಕ್ಕಿಂತ ಆಂತರಿಕವಾಗಿಯೇ ಹೆಚ್ಚಾಗಿರಲಿದೆ. ಈ ಹಿಂದೆ ಶಾಸಕರಿಗೆ ಕರೆ ಮಾಡಿ ಮಂತ್ರಿಗಿರಿಯ ಆಸೆ ತೋರಿಸಿ ತಮಗೆ ಬೆಂಬಲ ನೀಡಬೇಕೆಂದು ಕೇಳಿದ್ದ ಬಿಜೆಪಿ ಈ ಬಾರಿ ತಾನೇ ತಾನಾಗಿ ಆಪರೇಷನ್‌ ಕಮಲಕ್ಕೆ ಮುಂದಾಗುವ ಸಾಧ್ಯತೆ ತುಂಬಾ ಕಡಿಮೆ ಎಂಬ ಮಾತು ರಾಜಕೀಯ ವಿಶ್ಲೇಷಕರದ್ದು.

“ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿ ಈ ಹಿಂದೆ ಸೋತಿರುವ ಬಿಜೆಪಿ ಈಗ ಹೊರಗೆ ಕಾಣುವ ರೀತಿಯಲ್ಲಿ ಏನನ್ನೂ ಮಾಡುವುದಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದೊಳಗಿನ ಹಾಗೂ ಸಮ್ಮಿಶ್ರ ಸರಕಾರದೊಳಗಿನ ಆಂತರಿಕ ಬಿಕ್ಕಟ್ಟುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುವ ಲಕ್ಷಣಗಳು ಈಗಾಗಲೇ ಕಾಣುತ್ತಿವೆ. ಈ ಸಂದರ್ಭದಲ್ಲಿ ಬಿಜೆಪಿ ಈ ಕಚ್ಚಾಟವನ್ನು ನೋಡುತ್ತಾ ಸುಮ್ಮನಿರುತ್ತದೆ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಎಸ್‌. ಮಹದೇವ ಪ್ರಕಾಶ್.

“ಹಿಂದೆ ಆಪರೇಷನ್‌ ಕಮಲದಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಬಂದಿದೆ. ಹೀಗಾಗಿ ಈ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತೆ ಅಂತಹ ಆಪರೇಷನ್‌ಗೆ ಮುಂದಾಗುವ ಸಾಧ್ಯತೆ ಕಡಿಮೆ. ಏಕೆಂದರೆ ಮತ್ತೊಂದು ಆಪರೇಷನ್‌ ಕಮಲ ನಡೆಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಹೆಸರು ಮತ್ತಷ್ಟು ಕೆಡುತ್ತದೆ. 2019ರ ಲೋಕಸಭಾ ಚುನಾವಣೆಯ ಮೇಲೆ ಇದು ಪರಿಣಾಮ ಬೀರುತ್ತದೆ” ಎಂಬುದು ಅವರ ಮಾತು.

“ಬಿಜೆಪಿ ಈ ಸಂದರ್ಭದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಶಾಸಕರನ್ನು ಸೆಳೆಯಲು ಮುಂದಾದರೆ ರಾಷ್ಟ್ರೀಯ ಮಟ್ಟದ ತೃತೀಯ ರಂಗದ ಪಕ್ಷಗಳು ಬಿಜೆಪಿ ವಿರುದ್ಧದ ಅಸ್ತ್ರವಾಗಿ ಇದನ್ನು ಬಳಸಿಕೊಳ್ಳುತ್ತವೆ. ಹೀಗಾಗಿ ಕಾಂಗ್ರೆಸ್- ಜೆಡಿಎಸ್‌ ಕಚ್ಚಾಟ ಹಾಗೂ ಈ ಪಕ್ಷಗಳ ಒಳಗಿನ ಆಂತರಿಕ ಬಿಕ್ಕಟ್ಟು ಹೆಚ್ಚಾಗಲಿ ಎಂದು ಬಿಜೆಪಿ ಮೌನ ವಹಿಸುತ್ತದೆ. ಬಿಜೆಪಿ ಒಳಗೊಳಗೆ ಏನೇ ತಂತ್ರಗಾರಿಕೆ ಮಾಡಿದರೂ, ಮೈತ್ರಿ ಸರಕಾರದಿಂದ ಅತೃಪ್ತಿಯಿಂದ ಹೊರಬಂದ ಶಾಸಕರನ್ನು ಬರಮಾಡಿಕೊಳ್ಳುವ ಕೆಲಸವನ್ನಷ್ಟೇ ತಾವು ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಬಿಜೆಪಿ ಮಾಡಿಕೊಂಡಿದೆ” ಎನ್ನುತ್ತಾರೆ ಅವರು.

ಒಂದು ಕಡೆಗೆ ಸಚಿವ ಸ್ಥಾನಕ್ಕಾಗಿ ಪಕ್ಷಗಳ ಒಳಗಿನ ಗುದ್ದಾಟ, ಮತ್ತೊಂದು ಕಡೆಗೆ ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಲಾಭವಾಗಿದೆ ಎಂಬ ಕಾಂಗ್ರೆಸ್‌ ಒಳಗಿನ ಅಸಮಾಧಾನ ಬಿಜೆಪಿಗೆ ಅಧಿಕಾರ ಸಿಗುವ ವೇದಿಕೆಯನ್ನಂತೂ ಸಿದ್ಧಮಾಡಿಕೊಡುತ್ತಿದೆ. ಈ ಇಬ್ಬರ ಜಗಳದ ಲಾಭ ಮೂರನೆಯವನಿಗೇ ಎಂಬುದು ಗೊತ್ತಿರುವ ಬಿಜೆಪಿ ಸದ್ಯ ಮೌನಕ್ಕೆ ಶರಣಾಗಿದೆ.