samachara
www.samachara.com
‘ಸುಪಾರಿ ಹಿಂದಿನ ಸತ್ಯ’: ಮನುಷ್ಯನ ಸಣ್ಣತನ, ಹಗೆತನಗಳ ನಡುವಿನ ಸಾಮಾಜಿಕ ರಂಪಾಟ!
COVER STORY

‘ಸುಪಾರಿ ಹಿಂದಿನ ಸತ್ಯ’: ಮನುಷ್ಯನ ಸಣ್ಣತನ, ಹಗೆತನಗಳ ನಡುವಿನ ಸಾಮಾಜಿಕ ರಂಪಾಟ!

ಒಟ್ಟಾರೆ ವೃತ್ತಾಂತದ ಕುರಿತು ‘ಸಮಾಚಾರ’ ಕೆಲವು ಸರಳ ಸತ್ಯಗಳನ್ನು ಮುಂದಿಡುವ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಭಾಸ್ಕರ್ ಪ್ರಸಾದ್ ಹಾಗೂ ದಿನೇಶ್ ಅಮಿನ್ ಮಟ್ಟುವ ಅವರ ಸಾಕಷ್ಟು ಒಡನಾಡಿಗಳನ್ನು ಸಂಪರ್ಕಿಸಲಾಗಿದೆ. 

Team Samachara

ಕಳೆದ 48 ಗಂಟೆಗಳ ಅವಧಿಯಲ್ಲಿ ಸಾಮಾಜಿಕ ಜಾಲತಾಣ ಬಳಸುವ ರಾಜ್ಯದ ‘ವಿಚಾರವಂತ ವರ್ಗ’ ಸುಪಾರಿ ಕಥನವೊಂದರ ಸುತ್ತ ಗಿರಕಿ ಹೊಡೆಯುತ್ತಿದೆ.

ಕಾರಣ; ದಲಿತ ಹೋರಾಟಗಾರ, ಇತ್ತೀಚಿನ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿದ್ದ ಭಾಸ್ಕರ್ ಪ್ರಸಾದ್ ಫೇಸ್‌ಬುಕ್‌ನಲ್ಲಿ ಎಸೆದ ಗಂಭೀರ ಆರೋಪ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಾಧ್ಯಮ ಸಲಹೆಗಾರ, ಪತ್ರಕರ್ತರಾಗಿದ್ದ ದಿನೇಶ್ ಅಮಿನ್‌ ಮಟ್ಟು ಬಲಪಂಥೀಯ ಲೇಖಕ ರೋಹಿತ್ ಚಕ್ರತೀರ್ಥ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ಆರೋಪವನ್ನು ಭಾಸ್ಕರ್ ಮಾಡಿದ್ದಾರೆ.

ಹೇಗೇ ನೋಡಿದರೂ ಇದೊಂದು ಅಪರಾಧ ಪ್ರಕರಣದ ಕುರಿತಾಗಿನ ಗಾಳಿ ಸುದ್ದಿ. ಐಪಿಸಿ 120 ಬಿ ಅಡಿಯಲ್ಲಿ ರೋಹಿತ್ ಸಿಕ್ಕ ಮಾಹಿತಿ ಆಧಾರದ ಮೇಲೆ ಇಷ್ಟೊತ್ತಿಗಾಗಲೇ ದೂರು ದಾಖಲಿಸಬಹುದಿತ್ತು. ಆದರೆ ಆತ ಪೊಲೀಸರ ಮೇಲೆ ಹೊಣೆಭಾರ ಹಾಕಿದಂತೆ ಕಾಣಿಸುತ್ತಿದೆ. ಇತ್ತೀಚಿನ ರೋಹಿತ್ ಫೇಸ್‌ಬುಕ್ ಸ್ಟೇಟಸ್‌ನಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಈ ನಡುವೆ, ದಿನೇಶ್ ಅಮಿನ್ ಮಟ್ಟು ಡಿಜೆ ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಭಾಸ್ಕರ್ ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ‘ನೆಲಮಂಗಲದ ನಿವಾಸಿಯೆನ್ನಲಾದ ಬಿ. ಆರ್. ಭಾಸ್ಕರ ಪ್ರಸಾದ್ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ನನ್ನ ವಿರುದ್ಧ ನಿರಾಧಾರವಾದ ಆರೋಪ ಮಾಡುವ ಮೂಲಕ ಜೀವ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಹೇಳಲಾಗಿದೆ.

ಹೀಗೆ, ಫೇಸ್‌ಬುಕ್‌ನ ಒಂದು ಪೋಸ್ಟ್ ತರಂಗಗಳನ್ನು ಎಬ್ಬಿಸಿದೆ. ಮೇಲ್ನೋಟಕ್ಕೆ ಇದು ಸೈದ್ಧಾಂತಿಕ ಸಂಘರ್ಷದಂತೆ, ಎಡ- ಬಲಗಳ ನಡುವಿನ ಕದನದಂತೆ ಕಂಡರೂ ವಾಸ್ತವದಲ್ಲಿ ಇದು ಮನುಷ್ಯರೊಳಗಿನ ಸಣ್ಣತನಗಳು ಹಾಗೂ ಹಗೆತನಗಳ ಪರಿಣಾಮದಿಂದ ಹುಟ್ಟಿದ ಕ್ಷುಲ್ಲಕ ವಿವಾದ. ದೊಡ್ಡವರೆಲ್ಲಾ ಜಾಣರಲ್ಲ, ಚಿಕ್ಕವರಲ್ಲೂ ಕೋಣರಿತ್ತಾರೆ ಎಂಬುದನ್ನು ನಿರೂಪಿಸುವ ಪ್ರಸಂಗ.

ಒಟ್ಟಾರೆ ವೃತ್ತಾಂತದ ಕುರಿತು ‘ಸಮಾಚಾರ’ ಕೆಲವು ಸರಳ ಸತ್ಯಗಳನ್ನು ಮುಂದಿಡುವ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಭಾಸ್ಕರ್ ಪ್ರಸಾದ್ ಹಾಗೂ ದಿನೇಶ್ ಅಮಿನ್ ಮಟ್ಟು ಅವರ ಸಾಕಷ್ಟು ಒಡನಾಡಿಗಳನ್ನು ಸಂಪರ್ಕಿಸಲಾಗಿದೆ. ಆದರೆ, ನಾನಾ ಕಾರಣಗಳಿಗಾಗಿ ಅವರುಗಳು ಅನಾಮಧೇಯರಾಗಿ ಉಳಿಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೂ, ಅವರ ಪ್ರತಿಕ್ರಿಯೆಗಳು ಈ ಸಮಯದಲ್ಲಿ ಎದ್ದಿರುವ ವಿವಾದಕ್ಕೆ ಎಳ್ಳು ನೀರು ಬಿಡಲು ಅಗತ್ಯವಾಗಿರುವುದರಿಂದ ವರದಿ ಎಲ್ಲವನ್ನೂ ಒಳಗೊಂಡಿದೆ.

ಯಾರಿವರು?:

ಭಾಸ್ಕರ್ ಪ್ರಸಾದ್ ನೆಲಮಂಗಲ ಮೂಲದ ದಲಿತ ಕುಟುಂಬದಲ್ಲಿ ಹುಟ್ಟಿದವರು. ಸ್ಥಳೀಯ ಪೊಲೀಸ್‌ ಠಾಣೆಯ ಪ್ರಕಾರ ‘ರೌಡಿ ಶೀಟರ್’. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಘಟನೆ, ದಲಿತ ಹೋರಾಟಗಳ ಸಂಪರ್ಕಕ್ಕೆ ಬಂದ ನಂತರ ಭಾಸ್ಕರ್ ಪ್ರಸಾದ್ ಬದುಕು ಬದಲಾಗಿತ್ತು ಎನ್ನುತ್ತಾರೆ ಹತ್ತಿರದಿಂದ ಕಂಡವರು. ತಮ್ಮ ಸಮುದಾಯದ ಜನರಿಗಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದವರು ರಾಜ್ಯ ಮಟ್ಟದ ಸಂಘಟನೆಗೆ ಕೈ ಹಾಕುವ ಮೂಲಕ ಸಂಪರ್ಕಗಳನ್ನು ವಿಸ್ತಾರ ಮಾಡಿಕೊಂಡರು. ಹಾಗೆ ಸಂಪರ್ಕಕ್ಕೆ ಬಂದವರಲ್ಲಿ ದಿನೇಶ್ ಅಮಿನ್ ಮಟ್ಟು ಕೂಡ ಒಬ್ಬರು.

ಮಟ್ಟು ಯಾರು ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಆದರೆ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ಮಟ್ಟು, ಮಾಧ್ಯಮ ಸಲಹೆಗೆ ಸೀಮಿತವಾಗಿರಲಿಲ್ಲ. ಸಾಮಾಜಿಕ ಹೋರಾಟಗಳು, ಸಂಘಟನೆಗಳ ಜತೆಗೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರ ಮುಂದುವರಿದ ಭಾಗ ಎನ್ನುವಂತೆ ‘ಉಡುಪಿ ಚಲೋ’ದಲ್ಲಿ ಮಟ್ಟು ಕೆಲಸ ಮಾಡಿದರು, ಭಾಸ್ಕರ್ ಪ್ರಸಾದ್ ಕೂಡ ಜತೆಯಾದರು. ಅಲ್ಲೀವರೆಗೂ ಎಲ್ಲವೂ ಸರಿಯಾಗಿಯೇ ಇತ್ತು ಎನ್ನುತ್ತಾರೆ ಇಬ್ಬರನ್ನು ಹತ್ತಿರದಿಂದ ಬಲ್ಲವರು.

ಒಂದೇ ವೇದಿಕೆಯಲ್ಲಿ ಭಾಸ್ಕರ್ ಪ್ರಸಾದ್ ಹಾಗೂ ದಿನೇಶ್ ಅಮಿನ್ ಮಟ್ಟು. 
ಒಂದೇ ವೇದಿಕೆಯಲ್ಲಿ ಭಾಸ್ಕರ್ ಪ್ರಸಾದ್ ಹಾಗೂ ದಿನೇಶ್ ಅಮಿನ್ ಮಟ್ಟು. 

ಚಲೋ ಉಡುಪಿ ಹಿನ್ನೆಲೆಯಲ್ಲಿ:

ರಾಜ್ಯದಲ್ಲಿ ಹೊಸ ತಲೆಮಾರಿನ, ಹೊಸ ಪರಿಭಾಷೆಯ ದಲಿತ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ‘ಉಡುಪಿ ಚಲೋ’. “ಈ ಸಮಯದಲ್ಲಿ ದಿನೇಶ್ ಅಮಿನ್ ಮಟ್ಟು ಕೂಡ ಕೋರ್ ಕಮಿಟಿಯಲ್ಲಿದ್ದರು. ಅವರು ಸಮಾವೇಶದ ದಿನ ಬಿ. ಕೆ. ಹರಿಪ್ರಸಾದ್‌ರನ್ನು ಅತಿಥಿಯಾಗಿ ಕರೆಯಬೇಕು ಎಂಬ ಇರಾದೆ ವ್ಯಕ್ತಪಡಿಸಿದರು. ಆದರೆ ಇದಕ್ಕೆ ಸಮಿತಿಯ ಕೆಲವು ಸದಸ್ಯರು ಒಪ್ಪಲಿಲ್ಲ. ಭಾಸ್ಕರ್ ಪ್ರಸಾದ್ ಕೂಡ ಅದರಲ್ಲಿ ಒಬ್ಬರು. ಮಟ್ಟು ಅವರಿಗೆ ಇದರಿಂದ ಮುಖಭಂಗವಾಯಿತು. ನಿಧಾನವಾಗಿ ಅದು ಭಾಸ್ಕರ್ ವಿರುದ್ಧ ಸಿಟ್ಟಾಗಿ ಪರಿವರ್ತನೆಯಾಯಿತು. ಎಷ್ಟರ ಮಟ್ಟಿಗೆ ಎಂದರೆ ಭಾಸ್ಕರ್ ರೌಡಿ ಶೀಟರ್ ಹಿನ್ನೆಲೆ ಕಾರಣಕ್ಕೆ ಉಡುಪಿ ಚಲೋದ ವೇದಿಕೆಯಲ್ಲಿ ಇರಬಾರದು ಎಂದು ಆಗ್ರಹ ಮುಂದಿಟ್ಟರು,’’ ಎನ್ನುತ್ತಾರೆ ಉಡುಪಿ ಚಲೋದ ಕೋರ್ ಕಮಿಟಿ ಸದಸ್ಯರೊಬ್ಬರು.

ಅಲ್ಲಿಯವರೆಗೂ ಭಾಸ್ಕರ್ ಪ್ರಸಾದ್ ದಿನೇಶ್ ಅಮಿನ್ ಮಟ್ಟು ಬಗ್ಗೆ ಗೌರವದಿಂದಲೇ ಮಾತನಾಡಿಕೊಂಡಿದ್ದರು. ಇಬ್ಬರೂ ಒಂದೇ ವೇದಿಕೆಯಲ್ಲಿ ಸಮಾನತೆಯ ಭಾಷಣಗಳನ್ನು ಮಾಡಿದ್ದರು. ಆದರೆ ಉಡುಪಿ ಚಲೋದಲ್ಲಿ ನಡೆದ ಮುಖಭಂಗ ಮತ್ತು ಅದಕ್ಕೆ ನೀಡಿದ ಸಣ್ಣತನದ ಪ್ರತಿಕ್ರಿಯೆಗಳು ಒಟ್ಟಾರೆ ಸಂವಾದದ ನೆಲೆಯನ್ನೇ ಬದಲಿಸಿದವು. ಸಾಮುದಾಯಿಕ ದೃಷ್ಟಿಕೋನಗಳು ಒಂದೇಟಿಗೆ ಸಂಕುಚಿತಗೊಂಡು ವೈಯಕ್ತಿಕ ಇಗೋ ಉಪಷಮನಕ್ಕೆ ಇಳಿದು ಬಿಟ್ಟವು.

‘ಉಡುಪಿ ಚಲೋ’ ವೇದಿಕೆಯಲ್ಲಿ ಭಾಸ್ಕರ್ ಪ್ರಸಾದ್. 
‘ಉಡುಪಿ ಚಲೋ’ ವೇದಿಕೆಯಲ್ಲಿ ಭಾಸ್ಕರ್ ಪ್ರಸಾದ್. 

ಅಷ್ಟಕ್ಕೆ ನಿಲ್ಲಲಿಲ್ಲ:

ಹೀಗೆ, ಉಡುಪಿ ಚಲೋದಿಂದ ಆರಂಭಗೊಂಡ ಅಂತರವೊಂದು ಅಷ್ಟಕ್ಕೆ ನಿಲ್ಲಲಿಲ್ಲ. ಭಾಸ್ಕರ್ ಪ್ರಸಾದ್‌ ಅವರಲ್ಲಿ ಮಟ್ಟು ಬಗೆಗೆ ವೈಯಕ್ತಿಕ ಮಟ್ಟದ ಹಗೆತನವೊಂದು ಬೆಳೆಯುತ್ತ ಹೋಯಿತು. ಅದಕ್ಕೆ ಪೂರಕ ಎಂಬಂತೆ ಗುರುತರ ಹೊಣೆಗಾರಿಕೆ ಸ್ಥಾನದಲ್ಲಿದ್ದ ಮಟ್ಟು ಕೂಡ ವೈಯಕ್ತಿಕ ಮಟ್ಟಕ್ಕಿಳಿದು ಭಾಸ್ಕರ್ ಪ್ರಸಾದ್ ವಿರುದ್ಧ ಮಾತನಾಡತೊಡಗಿದರು. ಇಬ್ಬರನ್ನೂ ಹತ್ತಿರದಿಂದ ಬಲ್ಲವರು ಆ ಹೊತ್ತಿಗೇ ಇವೆಲ್ಲವೂ ಒಳ್ಳೆಯದಕ್ಕಲ್ಲ ಎಂಬುದನ್ನು ಮನಗೊಂಡಿದ್ದರು.

“ಭಾಸ್ಕರ್ ಪ್ರಸಾದ್ ಫೇಸ್‌ಬುಕ್ ಸ್ಟೇಟಸ್‌ಗಳ ಮೂಲಕ ತಮ್ಮ ಹಗೆತನವನ್ನು ಕಾರಿಕೊಳ್ಳುತ್ತಿದ್ದರೆ, ಅತ್ತ ದಿನೇಶ್ ಅಮಿನ್ ಮಟ್ಟು ವೈಯಕ್ತಿಕ ಸಂಪರ್ಕಗಳಲ್ಲಿ ಭಾಸ್ಕರ್ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದರು. ಭಾಸ್ಕರ್ ಕುಟುಂಬದ ವಿಚಾರವನ್ನು ಎಳೆದು ತಂದರು. ಇದೊಂದು ರೀತಿಯಲ್ಲಿ ಗುಬ್ಬಿಯ ಮೇಲೆ ನಡೆಸಿದ ಬ್ರಹ್ಮಾಸ್ತ್ರದ ಪ್ರಯೋಗ. ಇದಕ್ಕೆ ಒಂದಷ್ಟು ಕೋರಂ ಕೂಡ ಸಿದ್ಧವಾಗಿತ್ತು. ಅವೆಲ್ಲದರ ಪರಿಣಾಮ ಇವತ್ತು ಒಟ್ಟಾರೆ ಪ್ರಗತಿಪರ ಆಶಯಗಳಿಗೆ ಈ ಇಬ್ಬರ ಸಣ್ಣತನಗಳು ಹಾಗೂ ಹಗೆತನಗಳು ದೊಡ್ಡ ಘಾಸಿ ಮಾಡಿವೆ,’’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸೌಹಾರ್ದ ಚಳವಳಿಯ ಪ್ರಮುಖ ನಾಯಕರೊಬ್ಬರು.

ಸುಪಾರಿ ಸಂಗತಿ:

ರೋಹಿತ್ ಚಕ್ರತೀರ್ಥ. 
ರೋಹಿತ್ ಚಕ್ರತೀರ್ಥ. 

ಇನ್ನು, ರೋಹಿತ್ ಚಕ್ರತೀರ್ಥ ಹತ್ಯೆಗೆ ಸುಪಾರಿ ನೀಡಿರುವ ವಿಚಾರ. ದೇಶದ ಬಲಪಂಥೀಯ ವಿಚಾರಧಾರೆ ಪ್ರಚಾರಕ್ಕೆ ಕ್ರೂರ ತಂತ್ರಗಾರಿಕೆಯನ್ನು ದೊಡ್ಡಮಟ್ಟದಲ್ಲಿ ಅಳವಡಿಸಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಿ. ಸಂಕೇತಗಳನ್ನು, ವ್ಯಕ್ತಿಗಳನ್ನು ವೈಯಕ್ತಿಕ ಮಟ್ಟದಲ್ಲಿ ಒಡೆಯುವ ಮೂಲಕ ಜನರ ನಂಬಿಕೆಯನ್ನು ನಾಶ ಮಾಡುವ ಕಾರ್ಯತಂತ್ರವದು. ಈ ಕುರಿತು ಸಾಕಷ್ಟು ತನಿಖಾ ವರದಿಗಳು, ಅಧ್ಯಯನಶೀಲ ಪುಸ್ತಕಗಳು ಈಗ ಹೊರಬಿದ್ದಿವೆ.

ಇಂತಹದೊಂದು ಕಾರ್ಯತಂತ್ರವನ್ನು ಕರ್ನಾಟಕದಲ್ಲಿ ಜಾರಿಗೆ ತಂದಾತ ರೋಹಿತ್ ಚಕ್ರತೀರ್ಥ. ವಿಜ್ಞಾನ ಬರವಣಿಗೆ ಸೋಗಿನಲ್ಲಿ ಅಕ್ಷರ ಕೃಷಿ ಆರಂಭಿಸಿದ ರೋಹಿತ್, ಇತ್ತೀಚಿನ ವರ್ಷಗಳಲ್ಲಿ ಬರೆದಿದ್ದರಲ್ಲಿ ಸಿಂಹಪಾಲು ವೈಯಕ್ತಿಕ ಮಟ್ಟದಲ್ಲಿ ಹೀಗಳಿಯುವಿಕೆಗಳು, ವ್ಯಕ್ತಿಗತ ಮಟ್ಟದ ಘಾಸಿಗಳು.

ಆರಂಭದಲ್ಲಿ ಇದು ಕರ್ನಾಟಕ ಪ್ರಗತಿಪರ ವಲಯವನ್ನು ಕಸಿವಿಸಿಗೆ ದೂಡಿತ್ತು ಕೂಡ. ಅಲ್ಲೀವರೆಗೂ ಸೈದ್ಧಾಂತಿಕ ಸಂಘರ್ಷ ನಡೆಸಿಕೊಂಡು ಬಂದವರು, ವೈಯಕ್ತಿಕ ಮಟ್ಟದ ಹೀಗಳಿಯುವಿಕೆಗೆ ಒಗ್ಗಿಕೊಳ್ಳಲು ಸಮಯ ತೆಗೆದುಕೊಂಡರು. ಈ ಕಾಲಘಟ್ಟದಲ್ಲಿ ‘ರೋಹಿತ್ ತಲೆ ತೊಳೆಯಬೇಕು, ಕೈ ಮುರಿಯಬೇಕು, ನಿವಾರಿಸಿಕೊಳ್ಳಬೇಕು’ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಯಾವಾಗ ರೋಹಿತ್ ಬರವಣಿಗೆಯಲ್ಲಿ ಬೈಗುಳಗಳ ಮನಾಟನಿ ಸೃಷ್ಟಿಯಾಯಿತೋ, ಆತನ ಎಡೆಗೆ ಉಪೇಕ್ಷೆ ಆರಂಭವಾಯಿತು.

“ಬಹುಷಃ ಮಟ್ಟು ಮತ್ತು ಭಾಸ್ಕರ್ ನಡುವೆ ನಡೆದಿರುವ ಸಂಭಾಷಣೆ ಈ ಕಾಲಘಟ್ಟದ್ದು. ಆದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಯಾರನ್ನಾದರೂ ಕೊಲ್ಲುವ ಮೂಲಕ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಆದರೆ ಇದೇ ಸಮಯದಲ್ಲಿ ಯಾರೇ ಆದರೂ, ವೈಯಕ್ತಿಕ ಮಟ್ಟದಲ್ಲಿ ಘಾಸಿ ಮಾಡಲು ಮುಂದಾದರೆ, ಅದೇ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ,’’ ಎನ್ನುತ್ತಾರೆ ಸಂಘಟನೆಗಳ ಒಡನಾಡಿಯೊಬ್ಬರು.

ಯಾರಿಗೆ ಲಾಭ?:

‘ಸುಪಾರಿ ಹಿಂದಿನ ಸತ್ಯ’: ಮನುಷ್ಯನ ಸಣ್ಣತನ, ಹಗೆತನಗಳ ನಡುವಿನ ಸಾಮಾಜಿಕ ರಂಪಾಟ!

ಕರ್ನಾಟಕದಲ್ಲಿ ಚುನಾವಣೆ ಮುಗಿದು 16 ದಿನ ಕಳೆದಿದೆ. ಪೂರ್ಣಪ್ರಮಾಣದ ಸರಕಾರ ಇನ್ನೂ ಅಸ್ಥಿತ್ವಕ್ಕೆ ಬಂದಿಲ್ಲ. ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನರ ಸೇವೆಗೆ ಸಿಕ್ಕ ಅಧಿಕಾರ ಸಾಲದು ಎಂಬಂತೆ ಮಂತ್ರಿಗಿರಿಗೆ ಪೈಪೋಟಿ ನಡೆಸುತ್ತಿದ್ದಾರೆ.

ಆದರೆ ವಿಚಾರವಂತ ವರ್ಗ, ಯಾರು ಪ್ರಗತಿಪರರು ಎಂದು ಬೈಲಾ ಬರೆದುಕೊಂಡು ಕುಳಿತಿದೆ. ಎಡ- ಬಲ ಎಂಬ ಒಣ ಜಗಳದಲ್ಲಿ ಕಳೆದು ಹೋಗಿದೆ. ಇದರ ನಡುವೆ ಇಬ್ಬರು ವ್ಯಕ್ತಿಗಳ ನಡುವಿನ ಸಣ್ಣತನ, ಹಗೆತನಗಳಿಗೆ ದುಬಾರಿ ಬೆಲೆ ತೆರಲು ಸಿದ್ಧವಾಗಿದೆ. ಇದರಿಂದ ಲಾಭ ಆಗುತ್ತಿರುವುದು ಯಾರಿಗೆ? ಎಂದು ನೋಡಿದರೆ, ಪಕ್ಷಭೇದಗಳ ಆಚೆಗೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರವವರು ಮುನ್ನೆಲೆಗೆ ಬರುತ್ತಾರೆ.

ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಾಗಲಿದೆ. ರಾಜ್ಯದ 28 ಸಂದಸರು ಐದು ವರ್ಷಗಳಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂಬುದನ್ನು ಪರಾಮರ್ಶೆಗೆ ಒಡ್ಡಲು ಎಡ- ಬಲಗಳ ಹಂಗು ಬೇಕಿಲ್ಲ. ಪ್ರಜಾಭುತ್ವದಲ್ಲಿ ಚರ್ಚೆ ನಡೆಯಬೇಕಿರುವುದು ಆಡಳಿತ, ಜನಪ್ರತಿನಿಧಿ, ಜನ ಸಮಸ್ಯೆಗಳ ಬಗ್ಗೆಯೇ ಹೊರತು, ಎಡ- ಬಲದ ಸಿದ್ಧಾಂತಗಳ ಬಗೆಗೆ ಅಲ್ಲ. ಇಂತಹ ಚರ್ಚೆಗಳಿಂದ ಲಾಭ ಮಾಡಿಕೊಳ್ಳುವವರು ಇಂತಹ ಸತ್ಯಗಳನ್ನು ಹೇಳದೆ ಹೋಗಬಹುದು, ಆದರೆ ಇವತ್ತು ಎಚ್ಚತ್ತ ವರ್ಗವೊಂದು ಇಂತಹ ತಮಾಷೆಗಳನ್ನು ನಿವಾರಿಸಿಕೊಂಡು ಆಲೋಚನೆ ಮಾಡಬೇಕಿದೆ. ಸದ್ಯಕ್ಕೆ 'ಅನ್‌ಫಾಲೋ’ ಮಾಡುವುದೇ ಸುಪಾರಿ ವೃತ್ತಾಂತಕ್ಕೆ ಸರಳ ಮದ್ದು.