ಕಾಂಗ್ರೆಸ್‌ ‘ಬೇಷರತ್‌’ ಬೆಂಬಲ: ಇನ್ನೂ ರಚನೆಯಾಗಿಲ್ಲ ಪೂರ್ಣಾವಧಿ ಸರಕಾರ!
COVER STORY

ಕಾಂಗ್ರೆಸ್‌ ‘ಬೇಷರತ್‌’ ಬೆಂಬಲ: ಇನ್ನೂ ರಚನೆಯಾಗಿಲ್ಲ ಪೂರ್ಣಾವಧಿ ಸರಕಾರ!

ಜೆಡಿಎಸ್‌ಗೆ ಬೇಷರತ್‌ ಬೆಂಬಲ ನೀಡಿದ್ದ ಕಾಂಗ್ರೆಸ್‌ ಈಗ ಷರತ್ತುಗಳನ್ನು ಹಾಕಿಕೊಂಡು ಕುಂತಿರುವುದರಿಂದ ಸಮ್ಮಿಶ್ರ ಸರಕಾರಕ್ಕೆ ಇನ್ನೂ ಸಂಪುಟ ರಚನೆ ಭಾಗ್ಯ ಕೂಡಿಬಂದಿಲ್ಲ.

ಕಳೆದ ಹದಿನೈದು ದಿನಗಳಿಂದ ಕರ್ನಾಟಕದ ರಾಜಕೀಯ ನಾಟಕಗಳನ್ನು ಕಂಡಿದ್ದ ಜನ ಈಗ ರಾಜಕೀಯ ಶೀತಲೀಕರಣವನ್ನು ನೋಡುವಂತ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಅರ್ಧ ತಿಂಗಳು ಕಳೆದರೂ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರಕಾರ ಇನ್ನೂ ರಚನೆಯಾಗಿಲ್ಲ.

ಮೇ 15ರಂದು ಚುನಾವಣಾ ಫಲಿತಾಂಶ ಪೂರ್ತಿಯಾಗಿ ಹೊರಬರುವ ಮುಂಚೆಯೇ ಸೋಲೊಪ್ಪಿಕೊಂಡಿದ್ದ ಕಾಂಗ್ರೆಸ್‌ ನಾಯಕರು ಪದ್ಮನಾಭನಗರದ ‘ಅಮೋಘ’ ನಿವಾಸಕ್ಕೆ ದೌಡಾಯಿಸಿದ್ದರು. ಸರಕಾರ ರಚನೆಗೆ ಜೆಡಿಎಸ್‌ಗೆ ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್‌ ಈಗ ಸಂಪುರ ರಚನೆಯ ವಿಷಯದಲ್ಲಿ ಷರತ್ತುಗಳನ್ನು ಹಾಕಿಕೊಂಡು ಕುಂತಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಪರಮೇಶ್ವರ್ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಪೂರ್ಣಾವಧಿ ಸರಕಾರಕ್ಕೆ ಅಗತ್ಯವಾದ ಸಂಪುಟವೇ ಇನ್ನೂ ರಚನೆಯಾಗಿಲ್ಲ. ಗೃಹ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಿಗೆ ಸಚಿವರೇ ಇಲ್ಲದಿರುವುದು ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಪ್ರಮುಖ ಖಾತೆಗಳ ಹಂಚಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಾರದ ಜೆಡಿಎಸ್‌- ಕಾಂಗ್ರೆಸ್ ಮುಖಂಡರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿದೇಶದಿಂದ ಹಿಂದಿರುಗುವವರೆಗೂ ಸಂಪುಟ ರಚನೆ ವಿಷಯವನ್ನು ಮುಂದೂಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್‌ ಸಂಪುಟ ರಚನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ದರ್ಶನ ನಡೆಸಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೃಷಿ ಸಾಲಮನ್ನಾ ವಿಚಾರದ ಬಗ್ಗೆ ರೈತ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಆದರೆ, ಸರಕಾರದ ಮಟ್ಟದ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲು ಇನ್ನೂ ಸಂಪುಟವೇ ರಚನೆಯಾಗಿಲ್ಲ.

ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ತಲೆದೋರಿರುವ ಬಿಕ್ಕಟ್ಟು ಶಮನಕ್ಕೆ ಕಾಂಗ್ರೆಸ್‌ ಹಿರಿಯ ಮುಕಂಡ ಗುಲಾಂನಬಿ ಆಜಾದ್‌ ಅವರೂ ಪ್ರಯತ್ನಿಸಿ ಸೋತಿದ್ದಾರೆ. ಕೊನೆಗೆ ರಾಹುಲ್‌ ಗಾಂಧಿ ಮಧ್ಯಸ್ಥಿಕೆಯಲ್ಲೇ ಖಾತೆ ಹಂಚಿಕೆಯಾಗಲಿ ಎಂದು ಕಾಂಗ್ರೆಸ್‌ ಮುಖಂಡರು ಈ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾಯಿಸಿದ್ದಾರೆ. ಆದರೆ, ತೀರ್ಮಾನ ತೆಗೆದುಕೊಳ್ಳಬೇಕಾದ ರಾಹುಲ್‌ ಗಾಂಧಿ ದೇಶದಲ್ಲಿಲ್ಲ.

ಸಂಪುಟ ರಚನೆಯ ದಿನಗಳನ್ನು ಜೆಡಿಎಸ್‌- ಕಾಂಗ್ರೆಸ್‌ ಮುಂದೂಡುತ್ತಲೇ ಬರುತ್ತಿರುವುದನ್ನು ವಿರೋಧ ಪಕ್ಷ ಬಿಜೆಪಿ ಆಕ್ಷೇಪಿಸಿದೆ. ಸಂಪುಟ ರಚನೆಯ ಕಸರತ್ತಿನಲ್ಲಿ ಎರಡೂ ಪಕ್ಷಗಳು ನಾಡಿನ ಜನರ ಹಿತವನ್ನು ಮರೆಯುತ್ತಿವೆ ಎನ್ನುತ್ತಾರೆ ಬಿಜೆಪಿ ಮುಖಂಡರು.

“ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರಿಗೆ ಜನರ ಸಮಸ್ಯೆ ಮುಖ್ಯವಾಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಈ ಸರಕಾರ ಸ್ಪಂದಿಸುತ್ತಿಲ್ಲ. ಈ ಸರಕಾರ ಬಂದ ಮೇಲೆ ಕರಾವಳಿಯಲ್ಲಿ ನೆರೆ ಬಂದಿದೆ. ಕಳೆದ 15 ದಿನನಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸರಕಾರ ಗಮನ ಹರಿಸಿಲ್ಲ” ಎನ್ನುತ್ತಾರೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ.

ಈ ಸರಕಾರ ಜನರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಹಿತಕ್ಕಷ್ಟೇ ಕೆಲಸ ಮಾಡುತ್ತಿದೆ. ಇದು ಜನರ ಪಾಲಿನ ಸರಕಾರ ಅಲ್ಲ.
- ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ

ಸೋನಿಯಾ ಗಾಂಧಿ ಅವರ ಆರೋಗ್ಯ ತಪಾಸಣೆಗಾಗಿ ರಾಹುಲ್‌ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಆದರೆ, ಯಾವ ದೇಶಕ್ಕೆ ಹೋಗಿದ್ದಾರೆ, ಯಾವಾಗ ವಾಪಸ್‌ ಬರುತ್ತಾರೆ ಎಂಬ ಪ್ರಶ್ನೆಗಳಿಗೆ ಅಧಿಕೃತ ಉತ್ತರವಿಲ್ಲ. ಈ ಮಧ್ಯೆ ಕಾಂಗ್ರೆಸ್ನ ರಾಜ್ಯ ಮುಖಂಡರು ಮಾತ್ರ ಸಂಪುಟ ರಚನೆಯ ವಿಚಾರದಲ್ಲಿ ಗೊಂದಲಗಳೇ ಇಲ್ಲ ಎನ್ನುತ್ತಿದ್ದಾರೆ.

“ಸಂಪುಟ ರಚನೆಯ ವಿಚಾರದಲ್ಲಿ ಹೆಚ್ಚಿನ ಗೊಂದಲಗಳೇನೂ ಇಲ್ಲ. ಖಾತೆ ಹಂಚಿಕೆ ವಿಚಾರದಲ್ಲೂ ಯಾವುದೇ ಭಿನ್ನಾಭಿಪ್ರಾಯ ತಲೆದೋರಿಲ್ಲ. ಸಮ್ಮಿಶ್ರ ಸರಕಾರವಾಗಿರುವುದರಿಂದ ಎರಡೂ ಪಕ್ಷಗಳ ನಾಯಕರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ರಾಹುಲ್‌ ಗಾಂಧಿ ಅವರು ವಿದೇಶದಲ್ಲಿರುವುದರಿಂದ ಉನ್ನತ ನಾಯಕರ ಚರ್ಚೆ ಸಾಧ್ಯವಾಗಿಲ್ಲ. ಮುಂದಿನ ಕೆಲ ದಿನಗಳಲ್ಲಿ ಸಂಪುಟ ರಚನೆಯಾಗುತ್ತದೆ” ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ.

“ಯಾರ ಬಳಿ ಯಾವ ಖಾತೆ ಇದೆ ಎನ್ನುವುದಕ್ಕಿಂತ ಯಾರು ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸಿದರು ಎಂಬುದೇ ಮುಖ್ಯವಾಗುತ್ತದೆ. ಹಣಕಾಸು ಖಾತೆಯನ್ನು ಮುಖ್ಯಮಂತ್ರಿಯವರೇ ಇಟ್ಟುಕೊಂಡರೆ ಆ ಖಾತೆಯ ಸವಾಲು- ಅನುಕೂಲ ಎರಡೂ ಅವರಿಗೇ ಇರುತ್ತದೆ. ಖಾತೆ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಯಾವುದೇ ಗೊಂದಲಗಳಿಲ್ಲ” ಎಂಬುದು ಉಗ್ರಪ್ಪ ಅವರ ಮಾತು.

ಖಾತೆ ಹಂಚಿಕೆ ವಿಚಾರದಲ್ಲಿ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಮತ್ತು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆದರೆ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಇಬ್ಬರನ್ನೂ ಸಮಾಧಾನ ಮಾಡಿ ಖಾತೆ ಹಂಚಿಕೆ ವಿಚಾರದ ಗೊಂದಲಗಳನ್ನು ಬಗೆ ಹರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ದೇವೇಗೌಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ದೂರವಾಣಿ ಮಾತುಕತೆ ನಡೆಸಿ ಖಾತೆ ಹಂಚಿಕೆ ವಿಚಾರವನ್ನು ಅಂತಿಮಗೊಳಿಸಿದ್ದಾರೆ ಎಂಬ ಸುದ್ದಿಗಳೂ ಇವೆ. ಖಾತೆ ಹಂಚಿಕೆ ವಿಚಾರದ ಗೊಂದಲ ಒಂದು ಹಂತಕ್ಕೆ ಪರಿಹಾರ ಕಂಡಿದ್ದರೆ ಮುಂದಿನ ಬುಧವಾರ ಸಂಪುಟ ರಚನೆಯಾಗುವ ಸಾಧ್ಯತೆ ಇದೆ.

ಅದೇನೇ ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಫಲಿತಾಂಶ ಹೊರ ಬಿದ್ದ 15 ದಿನಗಳ ನಂತರವೂ ಪೂರ್ಣಾವಧಿ ಸರಕಾರ ರಚನೆಯಾಗದೇ ಇರುವುದು ಕೂಡಾ ಬ್ಯೂಟಿ ಆಫ್‌ ಡೆಮಾಕ್ರಸಿಯ ಮತ್ತೊಂದು ಮಗ್ಗುಲು ಎನಿಸುತ್ತದೆ!