ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?
COVER STORY

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದು 4 ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ 4 ವರ್ಷಗಳ ಮೋದಿ ಸಾಧನೆಯೇನು ಎನ್ನುವುದನ್ನು ModiReportcard.com ಎಂಬ ಜಾಲತಾಣ ಅಂಕಿ-ಅಂಶಗಳ ಸಮೇತ ಮುಂದಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮತ್ತೊಂದು ಲೋಕಸಭಾ ಚುನಾವಣೆಯೂ ಕೂಡ ಸನ್ನಿಹಿತವಾಗುತ್ತಿದೆ. ಈ ಬೆನ್ನಲ್ಲೇ ಮೋದಿ ತಮ್ಮ ಸಾಧನೆಯ ಪಟ್ಟಿಗಳನ್ನು ದೇಶದ ಜನರ ಮುಂದೆ ಬಿಡಿಸಿಟ್ಟಿದ್ದಾರೆ. ವಿದ್ಯುತ್‌ ಸಂಪರ್ಕ, ಅಡುಗೆ ಅನಿಲ ಇತ್ಯಾದಿಗಳನ್ನು ತಮ್ಮ 4 ವರ್ಷದ ಸಾಧನೆಗಳ ಮಹತ್ತರ ಹೆಜ್ಜೆಗಳು ಎಂದಿದ್ದಾರೆ. ಆದರೆ ಅಧಿಕಾರಕ್ಕೆ ಏರುವ ಮುಂಚೆ ನೀಡಿದ್ದ ಭರಪೂರ ಭರವಸೆಗಳ ಕಥೆಯೇನಾಯಿತು ಎನ್ನುವುದರ ಬಗ್ಗೆ ಸೊಲ್ಲೆತ್ತಿಲ್ಲ. ಘೋಷಿಸಿದ ಆಕರ್ಷಕ ಯೋಜನೆಗಳ ಬಗ್ಗೆ ಮಾತನಾಡಿಲ್ಲ. ಇವುಗಳ ಜತೆಗೆ ಮೋದಿ ಮಾಡಿದ್ದೇನು ಎನ್ನುವ ಪಟ್ಟಿಯನ್ನು Modi Report Card ಎಂಬ ಜಾಲತಾಣ ತೆರೆದಿಟ್ಟಿದೆ.  

ಮೋದಿ ರಿಪೋರ್ಟ್ ಕಾರ್ಡ್‌ ಜಾಲತಾಣ ಪ್ರಕಟಿಸಿರುವ ಮಾಹಿತಿಗಳೆಲ್ಲವೂ ಕೂಡ ಸರಕಾರಿ ಸಂಸ್ಥೆಗಳು ನೀಡಿರುವ ಅಂಕಿ ಅಂಶಗಳನ್ನು ಆಧರಿಸಿದೆ. ಫೋರ್ಬ್ಸ್‌, ಆರ್‌ಬಿಐ ಹಾಗೂ ಕೆಲವು ನಂಬಲರ್ಹ ಸುದ್ದಿ ಸಂಸ್ಥೆಗಳ ವರದಿಗಳನ್ನು ಆಧರಿಸಿ, ಈ ರಿಪೋರ್ಟ್ ಕಾರ್ಡ್‌ಅನ್ನು ಸಿದ್ದಪಡಿಸಲಾಗಿದೆ. ಮೋದಿ ರಿಪೋರ್ಟ್‌ ಕಾರ್ಡ್‌ ಕಲೆ ಹಾಕಿರುವ ಮಾಹಿತಿಗಳು ಈ ಕೆಳಕಂಡಂತಿವೆ.

ನಿರುದ್ಯೋಗ:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಮೋದಿ ಸರಕಾರ ಬಂದಾಗಿನಿಂದ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುವುದರ ಬದಲು ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮುಂಚೆ ವರ್ಷವೊಂದಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ವರ್ಷಕ್ಕೆ ಕೇವಲ 2.05 ಲಕ್ಷ ಉದ್ಯೋಗಗಳನ್ನಷ್ಟೇ ಸೃಷ್ಟಿಸುವಲ್ಲಿ ಮೋದಿ ಸರಕಾರ ಸಫಲವಾಗಿದೆ. 2014ರ ಸಮಯದಲ್ಲಿ ಶೇ.3.41ರಷ್ಟಿದ್ದ ನಿರುದ್ಯೋಗದ ಪ್ರಮಾಣ 2018ರ ವೇಳೆಗೆ ಶೇ.6.23ಕ್ಕೆ ಏರಿಕೆಯಾಗಿದೆ. 4 ವರ್ಷಗಳಲ್ಲಿ 4 ಕೋಟಿ ಉದ್ಯೋಗಗಳು ದೊರೆಯಬೇಕಿತ್ತು. ಆದರೆ ದೊರೆತಿರುವುದು ಕೇವಲ 8.23 ಲಕ್ಷ ಉದ್ಯೋಗಗಳನ್ನು ನೀಡಿದ್ದಾರೆ.

ಭಾರತದಲ್ಲಿ ನಿರುದ್ಯೋಗ ತಹಬದಿಗೆ ಬರಬೇಕು ಎಂದರೆ 2025ರವರೆಗೂ ಪ್ರತಿವರ್ಷಕ್ಕೆ ವರ್ಷಕ್ಕೆ 80 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬೇಕು. 2019ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರೆ ಈ ಸೃಷ್ಟಿಸುತ್ತಿರುವ ಉದ್ಯೋಗಳ 40 ಪಟ್ಟು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಬೇಕಿದೆ.

Also read: ನಾಲ್ಕು ವರ್ಷಗಳ ಬಳಿಕ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ ಮೋದಿ!

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಪೆಟ್ರೋಲ್‌ ಮತ್ತು ಡೀಸೆಲ್‌ ದರ 2018ರಲ್ಲಿ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದೆ. 3 ದಿನಗಳಿಂದ ಕೆಲವು ಪೈಸೆಗಳಲ್ಲಷ್ಟೇ ಇಳಿಕೆಯಾಗುತ್ತಿದೆ.

ಮೋದಿ 2014ರಲ್ಲಿ ಅಧಿಕಾರ ಹಿಡಿದಾಗ ಇಡೀ ಜಗತ್ತಿನಾದ್ಯಂತ ಕಚ್ಚಾತೈಲದ ಬೆಲೆ ಕಡಿಮೆಯಿತ್ತು. ಆದರೂ ಕೂಡ ಅಧಿಕಾರಕ್ಕೆ ಬಂದ ಮೋದಿ ಬೆಲೆಯನ್ನು ಇಳಿಸಿರಲಿಲ್ಲ. 2014ರಿಂದ ಪ್ರತಿವರ್ಷ ಪೆಟ್ರೋಲ್‌ ಮತ್ತು ಡೀಸೆಲ್‌ನಿಂದ 4.5 ಲಕ್ಷ ಕೋಟಿಗಳಷ್ಟು ಆದಾಯ ಸರಕಾರಕ್ಕಿದೆ. ಈಗ ಜನರ ಮುಂದಿರುವ ದೊಡ್ಡ ಪ್ರಶ್ನೆ, “ಇಷ್ಟು ಪ್ರಮಾಣದ ಹಣವೆಲ್ಲಾ ಎಲ್ಲಿಗೆ ಹೋಯಿತು?” ಎನ್ನುವುದು.

ನೋಟುರದ್ದು ಪ್ರಭಾವ:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಮೋದಿ, ಅಗತ್ಯವೇ ಇರದಿದ್ದ ನೋಟುರದ್ದು ಯೋಜನೆ ತಂದು ಲಕ್ಷಾಂತರ ಉದ್ಯೋಗಗಳನ್ನು ಕಿತ್ತುಕೊಂಡಿದ್ದಾರೆ ಎನ್ನುವ ಮಾತಿದೆ. ಸೆಂಟರ್‌ ಆಫ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ಪ್ರಕಾರ, 2017ರ ಜನವರಿಯಿಂದ ಏಪ್ರಿಲ್‌ ತಿಂಗಳವರೆಗೂ 15 ಲಕ್ಷ ಜನ ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ.

ನೋಟುರದ್ದತಿಯಿಂದ ಮಾನ್ಯತೆಯನ್ನು ಕಳೆದುಕೊಂಡ ಶೇ.99ರಷ್ಟು ಹಣ ಮತ್ತೆ ಈಗ ಚಾಲ್ತಿಯಲ್ಲಿದೆ. ಹೀಗೆ ಉಪಯೋಗವಿಲ್ಲದ ಯೋಜನೆಯನ್ನು ಏಕಾಏಕಿ ಚಾಲ್ತಿಗೆ ತಂದು, ಇದಕ್ಕಾಗಿ ಆರ್‌ಬಿಐ ಸುಮಾರು 21,000 ಕೋಟಿಗಳನ್ನು ಖರ್ಚು ಮಾಡಬೇಕಾಯಿತು. ನೋಟುರದ್ದತಿಯಿಂದ ಆದ ಪರಿಣಾಮವೆಂದರೆ ಶೇ.7.93ನ್ನು ತಲುಪಿದ್ದ ಭಾರತದ ಆರ್ಥಿಕ ಅಭಿವೃದ್ಧಿ ಶೇ.6.50ಗೆ ಇಳಿದಿದ್ದು.

Also read: ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ‘ಲೋಕಲ್ ಸರ್ಕಲ್’ ಸಮೀಕ್ಷೆ ಏನನ್ನುತ್ತೆ? 

ಭ್ರಷ್ಟಾಚಾರ:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಮೋದಿ ಅಧಿಕಾರಕ್ಕೆ ಬಂದ ಅವಧಿಯಲ್ಲಿ ದೇಶದ ಒಟ್ಟು ಅನುತ್ಪಾದಕ ಆಸ್ತಿ(ಎನ್‌ಪಿಎ) 2.4 ಲಕ್ಷ ಕೋಟಿ ರೂಪಾಯಿಗಳಿತ್ತು. 2017ರ ಡಿಸೆಂಬರ್‌ ವೇಳೆಗೆ ಒಟ್ಟು ಅನುತ್ಪಾದಕ ಆಸ್ತಿಯ ಮೊತ್ತ 9.5 ಲಕ್ಷ ಕೋಟಿಗಳನ್ನು ತಲುಪಿದೆ. ಜಾಸ್ತಿ ಸಾಲವನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸದಿರುವುದು ಪೌರಸಂಸ್ಥೆಗಳು.

ತಾನು ದೇಶದ ಪ್ರಧಾನ ಸೇವಕ, ದೇಶವನ್ನು ಕಾಯುತ್ತೇನೆ ಮೋದಿ ತಿಳಿಸಿದ್ದರು. ಆದರೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಒಟ್ಟು 12,787 ಬ್ಯಾಂಕ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ಒಟ್ಟು 17,789 ಕೋಟಿ ಹಣ ವಂಚನೆಯಾಗಿದೆ.

ಮೋದಿ ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಫೋರ್ಬ್ಸ್‌ ಸಂಸ್ಥೆ ಹೇಳುವ ಪ್ರಕಾರ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರದಿಂದ ತುಂಬಿರುವ ರಾಷ್ಟ್ರ ಭಾರತ. ಇತ್ತೀಚಿಗಷ್ಟೇ ವಜ್ರದ ವ್ಯಾಪಾರಿ ನೀರವ್‌ ಮೋದಿ 13,000 ಕೋಟಿ ವಂಚಿಸಿ, ದೇಶದಿಂದ ಪರಾರಿಯಾಗಿದ್ದೇ ಇದಕ್ಕೆ ಉದಾಹರಣೆ.

ಅಲ್ಲದೆ ಮೋದಿ ಕಪ್ಪು ಹಣಕ್ಕೆ ಕಡಿವಾಣ ಹಾಕುತ್ತೇನೆ, ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣ ವಾಪಸ್‌ ತಂದು ಪ್ರತಿ ಭಾರತೀಯರ ಬ್ಯಾಂಕ್‌ ಖಾತೆಗಳಿಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇನೆ ಎಂಬ ಬಹಳ ಜನಪ್ರಿಯ ಆಶ್ವಾಸನೆ ನೀಡಿದ್ದರು. ಆದರೆ, ಆ 15 ಲಕ್ಷ ಇನ್ನೂ ಮರೀಚಿಕೆಯಾಗಿದೆ.

ಕೋಮುವಾದ:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಭಾರತ ಅಲ್ಪಸಂಖ್ಯಾತ ಸಮುದಾಯಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. 2015ರಲ್ಲಿನ ಮೊಹಮ್ಮದ್‌ ಅಖ್ಲಾಖ್ ಕೊಲೆ, 2017ರಲ್ಲಿ ನಡೆದ ಜುನಾಯಿದ್‌ ಖಾನ್‌ ಕೊಲೆ, ಅಫ್ಜಾರುಲ್‌ ಖಾನ್‌ ಕೊಲೆಗಳು ಇದನ್ನು ಸೂಚಿಸುತ್ತವೆ.

ಗೋಹತ್ಯೆಗೆ ಸಂಬಂಧಿಸಿದಂತೆ 2010 ಮತ್ತು 2011ರಲ್ಲಿ ಯಾವ ಕೊಲೆಗಳೂ ಆಗಿರಲಿಲ್ಲ. 2012 ಮತ್ತು 2013ರಲ್ಲಿ ತಲಾ ಒಂದೊಂದು ಕೊಲೆಗಳಾಗಿದ್ದವು. 2014ರಲ್ಲಿ ಈ ಸಂಖ್ಯೆ 3ಕ್ಕೆ ಏರಿತ್ತು. 2015ರಲ್ಲಿ ಒಟ್ಟು 12 ಮಂದಿ ಕೊಲೆಯಾದರು. 2016ರಲ್ಲಿ ಒಟ್ಟು 24 ಜನ ಕೊಲ್ಲಲ್ಪಟ್ಟರು. ಈ ಕೊಲೆಗಳ ಸಂಖ್ಯೆ 2017ರಲ್ಲಿ 37ನ್ನು ತಲುಪಿದೆ.

ಹಿಂದು ಧರ್ಮದ ಭಾಗವೇ ಎನ್ನುವ ದಲಿತರ ಮೇಲೆಯೂ ಕೂಡ ದೌರ್ಜನ್ಯ ಹೆಚ್ಚಾಗಿದೆ. ನ್ಯಾಷನಲ್‌ ಕ್ರೈಮ್ಸ್ ರೆಕಾರ್ಡ್ ಬ್ಯೂರೋ ಪ್ರಕಾರ 2008ರಲ್ಲಿ ಒಟ್ಟು 33,000 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದವು. ಮೋದಿ ಅಧಿಕಾರಕ್ಕೆ ಬಂದ 2014ರಲ್ಲಿ ಈ ಸಂಖ್ಯೆ 45,000ಕ್ಕೆ ಏರಿಕೆಯಾಗಿತ್ತು. 2016ರಲ್ಲಿ 40,800 ಪ್ರಕರಣಗಳು ವರದಿಯಾಗಿದ್ದವು.

ಇನ್ನೂ ಪ್ರಾರಂಭವಾಗದ ಯೋಜನೆಗಳು:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಮೋದಿ ಅವಧಿಯಲ್ಲಿ ಬಂದಿರುವ ಹಲವಾರು ಪ್ರಮುಖ ಯೋಜನೆಗಳು ಕಾಂಗ್ರೆಸ್‌ ಅವಧಿಯಲ್ಲಿಯೇ ಜಾರಿಗೆ ಬಂದಿದ್ದವು. ಆ ಯೋಜನೆಗಳ ಹೆಸುರುಗಳನ್ನು ಬದಲಾಯಿಸಿ, ಮೋದಿ ಮತ್ತೆ ಅನುಷ್ಠಾನಕ್ಕೆ ತಂದಿದ್ದಾರೆ.

ಸ್ಟಾಂಡ್‌ ಅಪ್‌ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್‌ ಅಪ್ ಇಂಡಿಯಾ ಇತ್ಯಾದಿಗಳು ಇದೇ ರೀತಿ ಹೆಸರನ್ನು ಬದಲಾಯಿಸಿಕೊಂಡು ಅಸ್ತಿತ್ವಕ್ಕೆ ಬಂದಿರುವ ಯೋಜನೆಗಳು. ಆದರೆ ಈ ಯೋಜನೆಗಳ್ಯಾವುವೂ ಕೂಡ ಇನ್ನೂ ತಮ್ಮ ನಿಗದಿತ ಗುರಿಯನ್ನು ತಲುಪಿಲ್ಲ. ಮೋದಿ ಘೋಷಿಸಿದ ಬಹುನಿರೀಕ್ಷಿತ ಯೋಜನೆಯಾದ ಸ್ಮಾರ್ಟ್ ಸಿಟಿಗಳ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ.

ಸರಕಾರದ ಅನುಪಯುಕ್ತ ಖರ್ಚು:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಒಂದೆಡೆ ಹಲವಾರು ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದರೆ, ಮತ್ತೊಂದೆಡೆ ಮೋದಿ ಉಪಯೋಗವಿಲ್ಲದ ಯೋಜನೆಗಳನ್ನು ತಂದು ದೇಶದ ಬೊಕ್ಕಸವನ್ನು ಖಾಲಿ ಮಾಡತೊಡಗಿದ್ದಾರೆ.

ಸರದಾರ್‌ ಪಟೇಲ್‌ರ ‘ಸ್ಟಾಚ್ಯೂ ಆಫ್‌ ಯುನಿಟಿ’ಗಾಗಿ 3,000 ಕೋಟಿ, ಮುಂಬೈ ಸಮುದ್ರ ತೀರದಲ್ಲಿ ಶಿವಾಜಿ ಪ್ರತಿಮೆಗಾಗಿ 2,500 ಕೊಟಿ, ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣಕ್ಕಾಗಿ 330 ಕೋಟಿ ರೂಪಾಯಿ ಕೊಡುತ್ತಿದ್ದಾರೆ. ಇವುಗಳಿಂದ ಜನರಿಗಾಗುವ ಉಪಯೋಗಗಳೇನು ಎನ್ನುವುದು ಮೋದಿಗೇ ಗೊತ್ತು.

ಪ್ರತಿಮೆಗಳ ನಿರ್ಮಾಣದ ಈ 5,830 ಕೋಟಿ ಹಣವನ್ನು ದೇಶದ ಆರೋಗ್ಯ ಸೇವೆಯನ್ನು ಬಲಪಡಿಸಲು ಬಳಸಿಕೊಳ್ಳಬಹುದಿತ್ತು. ಇದೊಂದೇ ಅಲ್ಲದೆ 4 ವರ್ಷಗಳ ಅವಧಿಯಲ್ಲಿ ಮೋದಿ ಸರಕಾರ ಜಾಹಿರಾತುಗಳಿಗಾಗಿ ಖರ್ಚು ಮಾಡಿರುವ ಹಣ ಒಟ್ಟು 4,343 ಕೋಟಿ ರೂಪಾಯಿಗಳು.

ಬುಲೆಟ್‌ ಟ್ರೈನ್‌ ನಿರ್ಮಾಣಕ್ಕಾಗಿ ಸರಕಾರ ಒಟ್ಟು 1.1 ಲಕ್ಷ ಕೋಟಿ ಖರ್ಚು ಮಾಡಲು ಸಿದ್ಧವಾಗಿದೆ. ಬುಲೆಟ್‌ ಟ್ರೈನ್‌ ನಿರ್ಮಾಣದ ಸ್ವಲ್ಪ ಭಾಗ ಹಣವನ್ನು ಇತ್ತ ಹರಿಸಿದ್ದರೆ ಈಗಾಗಲೇ ಅಸ್ತಿತ್ವದಲ್ಲಿರುವ ರೈಲ್ವೆ ವ್ಯವಸ್ಥೆಯನ್ನು ಒಂದಷ್ಟು ಸರಿಪಡಿಸಬಹುದಿತ್ತು.

ಜನರ ದಾರಿ ತಪ್ಪಿಸಲು ಪ್ರಯತ್ನಿಸುವುದು:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ಪ್ರಧಾನ ಮಂತ್ರಿಗಳು ಎಲ್ಲಿಯವರೆಗೆ ವಿದ್ಯಾಭ್ಯಾಸ ನಡೆಸಿದ್ದಾರೆ ಎನ್ನುವುದು ಇನ್ನೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಆದರೂ ಕೂಡ ಮೋದಿ ಮಕ್ಕಳಿಗೆ ಹೇಗೆ ವಿದ್ಯಾಭ್ಯಾಸ ನಡೆಸಬೇಕು, ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾಗಬೇಕು ಎಂಬ ಭಾಷಣಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಪುಸ್ತಕವನ್ನೂ ಕೂಡ ಬರಿಯಲು ಸಿದ್ಧರಾಗಿದ್ದಾರೆ.

ಸತ್ಯಗಳನ್ನು ನೇಪಥ್ಯಕ್ಕೆ ಸರಿಸಲು ‘ನೆಹರೂ ಭಗತ್‌ ಸಿಂಗ್‌ರನ್ನು ಭೇಟಿಯಾಗಿರಲಿಲ್ಲ’, ‘ನೆಹರು ಕಾರಿಯಪ್ಪನವರಿಗೆ ಅವಮಾನ ಮಾಡಿದ್ದರು’, ಇನ್ನಿತ್ಯಾದಿ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಸುಳ್ಳುಗಳನ್ನು ಹೇಳಿ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ಮೋದಿಗೆ ತಿಳಿದಂತಿಲ್ಲ. ಹೀಗೆ ಸುಳ್ಳುಗಳನ್ನು ಹೇಳುವುದು ಭಾರತದ ಪ್ರಧಾನಿಯ ಗೌರವಕ್ಕೆ ತಕ್ಕುದಾದುದಲ್ಲ.

Also read: 2014- 2018: ನಾಲ್ಕು ವರ್ಷಗಳಲ್ಲಿ ಮೋದಿ ಹೇಳಿದ ಪ್ರಮುಖ ಸುಳ್ಳುಗಳಿವು! 

ಮಾಧ್ಯಮ ಸ್ವಾತಂತ್ರ್ಯ:

ಮೋದಿ ‘ರಿಪೋರ್ಟ್‌ ಕಾರ್ಡ್’; 4 ವರ್ಷಗಳಲ್ಲಿ ಪ್ರಧಾನ ಸೇವಕರು ಸಾಧಿಸಿದ್ದೇನು?

ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಾಂಕದಲ್ಲಿ ಭಾರತ 136ನೇ ಸ್ಥಾನವನ್ನು ಗಳಿಸಿದೆ. 2017ರಲ್ಲೇ ಭಾರತದಲ್ಲಿ 12 ಜನ ಪತ್ರಕರ್ತರು ಕೊಲೆಯಾಗಿದ್ದಾರೆ. ವಿಶ್ವ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ ಅತಂತ್ರತೆಯಲ್ಲಿ ಸಿಲುಕಿಕೊಂಡಿದೆ. ಮೆಕ್ಸಿಕೋ, ಸಿರಿಯಾ, ಇರಾಕ್‌, ಆಫ್ಘಾನಿಸ್ತಾನ, ಪಾಕಿಸ್ತಾನ, ಯೆಮನ್‌ ಹಾಗೂ ಸೊಮಾಲಿಯಾಗಳೇ ಭಾರತಕ್ಕಿಂತ ಉತ್ತಮ ಮಾಧ್ಯಮ ಸ್ವಾತಂತ್ರವನ್ನು ಹೊಂದಿವೆ.

ಇತ್ತೀಚಿಗೆ ಬಿಡುಗಡೆಗೊಂಡ ಕೋಬ್ರಾಪೋಸ್ಟ್‌ನ ಕುಟುಕು ಕಾರ್ಯಾಚರಣೆಯ ವರದಿಗಳು ದೇಶದ ಮುನ್ನಲೆಯ ಮಾಧ್ಯಮಗಳು ಹೇಗೆ ತಮ್ಮತನವನ್ನು ಮಾರಿಕೊಂಡು ಹಿಂದುತ್ವವನ್ನು ಬಿತ್ತಿವೆ ಎನ್ನುವುದನ್ನು ಜಗತ್ತಿನ ಜನರ ಮುಂದೆ ತೆರೆದಿವೆ.

ಇವು ಭಾರತದ ಪ್ರಧಾನಿ ಮೋದಿ ತಮ್ಮ ನಾಲ್ಕು ವರ್ಷ ಆಡಳಿತಾವಧಿಯಲ್ಲಿ ಏರಿರುವ ಅಭಿವೃದ್ಧಿಯ ಮೆಟ್ಟಿಲುಗಳು. ಇವಷ್ಟೇ ಅಲ್ಲದೇ ಇನ್ನೂ ಕೆಲವು ಸಾಧನೆಗಳನ್ನು ಮೋದಿ ರಿಪೋರ್ಟ್‌ ಕಾರ್ಡ್ ಪಟ್ಟಿ ಮಾಡಿದೆ. ಆ ಉಳಿದ ಸಾಧನೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.