ಕೊಳೆಗೇರಿಗಳನ್ನೇ ಮತಕೋಟೆ ಮಾಡಿಕೊಂಡ ಮುನಿರತ್ನ ಗೆಲುವಿನ ಹಿಂದೆ ‘ಅಭಿವೃದ್ಧಿ ಮಂತ್ರ’!
COVER STORY

ಕೊಳೆಗೇರಿಗಳನ್ನೇ ಮತಕೋಟೆ ಮಾಡಿಕೊಂಡ ಮುನಿರತ್ನ ಗೆಲುವಿನ ಹಿಂದೆ ‘ಅಭಿವೃದ್ಧಿ ಮಂತ್ರ’!

ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ‘ವಿಲನ್’ ರೀತಿಯಲ್ಲಿ ಚಿತ್ರಿಸಲ್ಪಟ್ಟ ಮುನಿರತ್ನರನ್ನು ಜನ ಯಾಕೆ ನಂಬಿದರು? ಯಾಕೆ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ವಿಧಾನಸಭೆಗೆ ಕಳುಹಿಸಿದರು?

ಗುರುವಾರ ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕರಾಗಿ ಆಯ್ಕೆಯಾದ ಮುನಿರತ್ನ ನಾಯ್ಡು ಅವರಿಗೆ ಅತ್ಯಂತ ಸಂತಸದ ದಿನ. ಕಾರಣ, ಆರೋಪಗಳ ಮಸಿ ಬಳಿಸಿಕೊಂಡು, ಚುನಾವಣೆ ಹೊಸ್ತಿಲಲ್ಲಿ ಮುಗ್ಗರಿಸಿದರೂ, ಕ್ಷೇತ್ರದ ಜನ ಕೈಹಿಡಿದಿದ್ದಾರೆ. ಅದೂ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ನೀಡುವ ಮೂಲಕ ‘ಜನಸೇವೆ’ಗೆ ಇನ್ನೊಂದು ಐದು ವರ್ಷ ಅವಕಾಶ ನೀಡಿದ್ದಾರೆ.

ಹಾಗೆ ನೋಡಿದರೆ, ಈ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಇತರೆ ಎಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಸದ್ದು ಮಾಡಿದ್ದು ರಾಜರಾಜೇಶ್ವರಿ ನಗರ. ಮತದಾನಕ್ಕೆ ಕೆಲವೇ ದಿನಗಳಿವೆ ಎನ್ನುವಾಗ ಇಲ್ಲಿ ಪತ್ತೆಯಾದ 10 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ, ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಚುನಾವಣಾ ಆಯೋಗ ಚುನಾವಣೆಯನ್ನು ಮುಂದಕ್ಕೆ ಹಾಕಿತ್ತಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ದೂರು ದಾಖಲಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸುವ ಮಾತುಗಳು ಕೇಳಿಬಂದಿದ್ದವು. ಪಕ್ಷದ ಹಿರಿಯ ನಾಯಕರು ಮುನಿರತ್ನಗೆ ಚುನಾವಣೆ ಕಣದಿಂದ ಹಿಂದೆ ಸರಿಯುವಂತೆ ಉಪದೇಶವನ್ನೂ ನೀಡಿದ್ದರು ಎಂದು ಮೂಲಗಳು ಹೇಳುತ್ತವೆ. ಆದರೆ ಹಠಕ್ಕೆ ಬಿದ್ದವರಂತೆ ಮುನಿರತ್ನ ಚುನಾವಣೆ ಕಣದಲ್ಲಿ ಉಳಿದುಕೊಂಡಿದ್ದಾರೆ. ಈಗ ಕ್ಷೇತ್ರದ ಜನ ಅವರನ್ನು ಶಾಸಕರಾಗಿ ಮತ್ತೊಂದು ಅವಧಿಗೆ ಉಳಿಸಿಕೊಂಡಿದ್ದಾರೆ.

ಫಲಿತಾಂಶ ಪ್ರಕಟಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿರುವ ಮುನಿರತ್ನ ಅವರ ಪತ್ನಿ ಹಾಗೂ ಮಗಳು, “ಅಭಿವೃದ್ಧಿಗೆ ಜನ ಮನ್ನಣೆ ನೀಡಿದ್ದಾರೆ. ಆರೋಪಗಳನ್ನು ಹೊರಿಸಿದರೂ ಜನ ನಂಬಿಕೆ ಕಳೆದುಕೊಂಡಿಲ್ಲ,’’ ಎಂದಿದ್ದಾರೆ. ಇದು ಒಂದು ಆಯಾಮದಲ್ಲಿ ನಿಜ ಕೂಡ. ಮಾಧ್ಯಮಗಳಲ್ಲಿ ಹೆಚ್ಚು ಕಡಿಮೆ ‘ವಿಲನ್’ ರೀತಿಯಲ್ಲಿ ಚಿತ್ರಿಸಲ್ಪಟ್ಟ ಮುನಿರತ್ನರನ್ನು ಜನ ಯಾಕೆ ನಂಬಿದರು? ಯಾಕೆ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ವಿಧಾನಸಭೆಗೆ ಕಳುಹಿಸಿದರು? ಮುನಿರತ್ನ ಅವರ ಈ ಭರ್ಜರಿ ವಿಜಯದ ಹಿಂದಿರುವ ರಹಸ್ಯವಾದರೂ ಏನು? ಇವು ಈಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಪ್ರಶ್ನೆಗಳು.

ಚುನಾವಣೆಗೆ ಕೆಲವೇ ದಿನಗಳಿವೆ ಎನ್ನುವಾಗ ಮುನಿರತ್ನ ಭರದಿಂದ ನಡೆಸಿದ ರಸ್ತೆ ಕಾಮಗಾರಿ. 
ಚುನಾವಣೆಗೆ ಕೆಲವೇ ದಿನಗಳಿವೆ ಎನ್ನುವಾಗ ಮುನಿರತ್ನ ಭರದಿಂದ ನಡೆಸಿದ ರಸ್ತೆ ಕಾಮಗಾರಿ. 

ಜನಸೇವೆ, ಅಭಿವೃದ್ಧಿ ಕೆಲಸ:

“ಯಾವ ಶಾಸಕರೂ ನಮ್ಮ ಕ್ಷೇತ್ರದಲ್ಲಿ ಕೊಳೆಗೇರಿಗಳು ಇರಬೇಕು ಎಂದು ಬಯಸುವುದಿಲ್ಲ. ಆದರೆ ಮುನಿರತ್ನ ಅವರಿಗೆ ಕೇಳಿ ನೋಡಿ. ಎಷ್ಟು ಕೊಳೆಗೇರಿಗಳು ಬಂದರೂ ಅವರು ತಮ್ಮ ಕ್ಷೇತ್ರದಲ್ಲಿಯೇ ಇರಲಿ ಎಂದು ಹೇಳುತ್ತಾರೆ. ಅವರಿಗೆ ಕೊಳೆಗೇರಿಗಳೇ ಮತಕೋಟೆಗಳು,’’ ಎನ್ನುತ್ತಾರೆ ಗಣೇಶ್. ದಲಿತ ಸಂಘಟನೆಗಳಲ್ಲಿ ಕೆಲಸ ಮಾಡುವ ಗಣೇಶ್‌ ಆರ್‌ಆರ್‌ ನಗರ ವ್ಯಾಪ್ತಿಯ ಕೊಳೆಗೇರಿಗಳಲ್ಲಿ ಜನರಿಗೆ ಹಕ್ಕು ಪತ್ರ ಕೊಡಿಸುವುದು, ಮೂಲಸೌಕರ್ಯಕ್ಕಾಗಿ ಒತ್ತಾಯಿಸುವ ಕೆಲಸವನ್ನು ಗಣೇಶ್ ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ರಾಜಕೀಯದಿಂದ ದೂರವೇ ಉಳಿದಿದ್ದ ಅವರು ಈ ಬಾರಿ ಮುನಿರತ್ನ ಅವರ ಜತೆಯಲ್ಲಿ ಕಾಣಿಸಿಕೊಂಡಿದ್ದರು.

“ಈ ಹಿಂದೆ ಎಂ. ಕೃಷ್ಣಪ್ಪ ಅವದಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದೆವು. ಕನಿಷ್ಟ ನೀರಿಗಾಗಿ ಹೋರಾಟ ಮಾಡಬೇಕಾಗಿತ್ತು. ಆದರೆ ಮುನಿರತ್ನ ಬಂದ ನಂತರ ಸಾಕಷ್ಟು ಬದಲಾವಣೆಗಳು ಇಲ್ಲಾಗಿವೆ. ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಇಲ್ಲಿ ನಡೆದಿರುವ ಕೆಲಸಗಳು ಗಮನ ಸೆಳೆಯುತ್ತವೆ. ಈ ಕಾರಣಕ್ಕೆ ಸ್ಲಂ ನಿವಾಸಿಗಳು ಮುನಿರತ್ನ ಅವರಿಂದ ದೂರು ಉಳಿಯುವ ಸಾಧ್ಯತೆಗಳೇ ಇರಲಿಲ್ಲ,’’ ಎಂದರು ಗಣೇಶ್.

ಕೊನೆಯ ಹಂತದಲ್ಲಿ ಆರ್‌ ಆರ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಭಿತ್ತಿಚಿತ್ರ. 
ಕೊನೆಯ ಹಂತದಲ್ಲಿ ಆರ್‌ ಆರ್‌ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಭಿತ್ತಿಚಿತ್ರ. 

ಕೈ ಹಿಡಿದ ಅನುಕಂಪ:

ಚುನಾವಣೆ ಘೋಷಣೆಯಾಗುವ ಮುಂಚಿನಿಂದಲೇ ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಮುನಿರತ್ನ ಸೋಲಿಗಾಗಿ ಬಿಜೆಪಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಲಾರಂಭಿಸಿತ್ತು. ಆ ಕಾರಣಕ್ಕಾಗಿಯೇ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ತಂಡವೊಂದನ್ನು ಕಟ್ಟಿಕೊಂಡು ಅಖಾಡಕ್ಕೆ ಇಳಿದಿದ್ದರು. ಹೆಜ್ಜೆ ಹೆಜ್ಜೆಗೂ ಮುನಿರತ್ನ ಅವರ ಚುನಾವಣಾ ತಂತ್ರಗಾರಿಕೆಗಳನ್ನು ‘ಎಕ್ಸ್‌ಪೋಸ್‌’ ಮಾಡುವ ಕೆಲಸಕ್ಕೆ ಕೈ ಹಾಕಿದ್ದರು. ಇದರ ಭಾಗವಾಗಿಯೇ ಮತದಾರರ ಗುರುತಿನ ಚೀಟಿಗಳು ಸಿಕ್ಕ ಅಪಾರ್ಟ್‌ಮೆಂಟ್ ಮೇಲೂ ದಾಳಿ ನಡೆಸಿದ್ದರು. ಇವು ಹೊರಗೆ ದೊಡ್ಡ ಮಟ್ಟದ ಪ್ರಚಾರ ತಂದುಕೊಟ್ಟಿತಾದರೂ, ಕೊಳೆಗೇರಿ ಜನರಲ್ಲಿ ಮುನಿರತ್ನ ಅವರ ಬಗೆಗೆ ಅನುಕಂಪ ಮೂಡಲು ಕಾರಣವಾಯಿತು.

“ತುಳಸಿ ಮುನಿರಾಜು ಗೌಡ ಆಗಲಿ, ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಗೌಡ ಆಗಲಿ ಒಕ್ಕಲಿಗರು. ಈ ಕ್ಷೇತ್ರದಲ್ಲಿ ಪ್ರಬಲ ಸಮುದಾಯ ಅದು. ಆದರೆ ಮುನಿರತ್ನ ತೆಲಗು ನಾಯ್ಡು ಸಮುದಾಯಕ್ಕೆ ಸೇರಿದವರು. ವಿರೋಧ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಅಕ್ರಮದ ಹೆಸರಿನಲ್ಲಿ ದಾಳಿ ನಡೆಸಿದಷ್ಟು ಕೊಳೆಗೇರಿಗಳ ಜನ ಮುನಿರತ್ನ ಅವರ ಜತೆ ಗಟ್ಟಿಯಾಗಿ ನಿಂತರು. ಇಲ್ಲಿನ ಲಗ್ಗೆರೆ, ಸುಮ್ಮನಗಳ್ಳಿ, ಯಶವಂತಪುರ ಗಡಿ ಭಾಗದಲ್ಲಿರುವ ದೊಡ್ಡ ಸಂಖ್ಯೆಯ ಸ್ಲಂ ನಿವಾಸಿಗಳಿಗೆ ಮುನಿರತ್ನ ಅವರ ಹೆಸರು ತಲುಪಿತು. ಆದರೆ ಅದರ ಜತೆಗೆ ಅಂಟಿಕೊಂಡ ಆರೋಪಗಳನ್ನು ಅವರಿಗೆ ಅರ್ಥವಾಗಲಿಲ್ಲ. ಪರಿಣಾಮ ಈಗ ಬಂದಿರುವ ಫಲಿತಾಂಶ,’’ ಎನ್ನುತ್ತಾರೆ ಸ್ಥಳೀಯ ರಾಜಕೀಯ ಕಾರ್ಯಕರ್ತರೊಬ್ಬರು.

ಇದನ್ನು ಬಿಜೆಪಿ ಕಾರ್ಯಕರ್ತರೂ ಒಪ್ಪಿಕೊಳ್ಳುತ್ತಾರೆ. “ನಮಗೆ ಸಮಸ್ಯೆಯಾಗಿದ್ದು ಜೆಡಿಎಸ್‌ಗೆ ಹೋದ ರಾಮಚಂದ್ರ ಸ್ಪರ್ಧೆ. ಇದರಿಂದ ಒಂದಷ್ಟು ಒಕ್ಕಲಿಗರ ಮತಗಳು ವಿಭಾಗವಾದವು. ಅದರ ಜತೆಗೆ ಕೊಳೆಗೇರಿಗಳ ಒಳಗೆ ನಮ್ಮನ್ನು ಜನ ಬಿಟ್ಟುಕೊಳ್ಳಲಿಲ್ಲ. ಕೆಲವು ಸ್ಲಂಗಳಲ್ಲಿ ನಾವು ಪ್ರಚಾರ ನಡೆಸಿದರೂ ಜನ ಬರಲಿಲ್ಲ. ಅಷ್ಟರ ಮಟ್ಟಿಗೆ ಮುನಿರತ್ನ ಪ್ರಭಾವ ಜೋರಾಗಿತ್ತು,’’ ಎನ್ನುತ್ತಾರೆ ಬಿಜೆಪಿ ಸ್ಥಳೀಯ ನಾಯಕರೊಬ್ಬರು.

ಮುನಿರತ್ನ ಆಯ್ಕೆ:

ತಮ್ಮ ಹಿನ್ನೆಲೆಯ ಕಾರಣಕ್ಕೆ ಮುನಿರತ್ನ ಕೂಡ ತಮ್ಮ ಮತಬ್ಯಾಂಕ್ ಯಾವುದು ಎಂಬುದು ಸ್ಪಷ್ಟವಾಗಿ ಗುರುತಿಸಿಕೊಂಡಿದ್ದರು. ಅವರ ಮೇಲಿನ ಆರೋಪಗಳು ಮಧ್ಯಮ ವರ್ಗದ ಜನರಿಗೆ ಅರ್ಥವಾಗುತ್ತವಾದರೂ, ಸ್ಲಂ ಜನರಿಗೆ ಅದು ಮುಖ್ಯವಾಗುವುದಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದರು. ಅದೇ ವೇಳೆ ಮೂಲಸೌಕರ್ಯಗಳು, ಜಾತಿ ಪ್ರಭಾವದಿಂದ ನಡೆಯುತ್ತಿದ್ದ ಮೇಲಾಟಗಳನ್ನು ಹತೋಟಿಗೆ ತಂದರು. ಇದರಿಂದ ಸ್ಲಂ ಜನ ‘ತಮ್ಮ ನಾಯಕ’ ಎಂದು ಗುರುತಿಸಲು ಆರಂಭಿಸಿದ್ದರು.

ಚುನಾವಣೆಗಳು ನಡೆಯುವ ರೀತಿ ಹೇಗಿರುತ್ತದೆ ಎಂಬದಕ್ಕೆ ಇವತ್ತು ರಾಜರಾಜೇಶ್ವರಿ ನಗರ ಉದಾಹರಣೆ. ಜಾತಿ ಕೆಲಸ ಮಾಡಿತ್ತಾದರೂ ಅದು ದೊಡ್ಡ ಲಾಭವನ್ನು ಬಿಜೆಪಿಗೆ ಹಾಗೂ ಜೆಡಿಎಸ್‌ಗೆ ತಂದುಕೊಡುವಲ್ಲಿ ಸೋತಿದೆ. ಅಕ್ರಮದ ಆರೋಪಗಳು ಬಂದರೂ, ಜನ ವೈಯಕ್ತಿಕ ನೆಲೆಯಲ್ಲಿ ಅಭ್ಯರ್ಥಿಯಿಂದ ತಮಗೆ ಆದ ಅನುಕೂಲಗಳನ್ನು ಮಾತ್ರವೇ ಗಮನಕ್ಕೆ ತೆಗೆದುಕೊಂಡಿದ್ದಾರೆ. ಹಣ ಕೆಲಸ ಮಾಡಿದೆಯಾದರೂ, ಅಂತಿಮವಾಗಿ ತಳವರ್ಗದ ಸಾಮುದಾಯಿಕ ಅಭಿಪ್ರಾಯಗಳೇ ಮತಗಳಾಗಿ ಬದಲಾಗಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯದ ಆಯಾಮಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಂತೆ ಕಾಣಿಸುತ್ತಿರುವ ಮುನಿರತ್ನ ಗೆದ್ದಿದ್ದಾರೆ.

Also read: ‘ದಿ ಸ್ಟೋರಿ ಆಫ್‌ ಮುನಿರತ್ನ’: ಕಳ್ಳ ಕಸುಬು, ನಕಲಿ ಬಿಲ್ಲು, ‘ಕೈ’ ಹಿಡಿದ ಗೂಂಡಾಗಿರಿ!