‘ಮೋದಿ ಮೋಡಿ’: ಲೋಕಸಭೆಯಲ್ಲಿ ಸರಳ ಬಹುಮತ ಕಳೆದುಕೊಂಡ ಬಿಜೆಪಿ!
COVER STORY

‘ಮೋದಿ ಮೋಡಿ’: ಲೋಕಸಭೆಯಲ್ಲಿ ಸರಳ ಬಹುಮತ ಕಳೆದುಕೊಂಡ ಬಿಜೆಪಿ!

ಉಪ ಚುನಾವಣೆಗಳಲ್ಲಿ ಹಿಡಿತ ಕಳೆದುಕೊಳ್ಳುತ್ತಿರುವ ಬಿಜೆಪಿಯ ಲೋಕಸಭಾ ಸಂಖ್ಯಾಬಲ 282ರಿಂದ 270ಕ್ಕೆ ಕ್ಷೀಣಿಸಿದೆ. ಈ ಮೂಲಕ ಸರಳ ಬಹುಮತವನ್ನು ಬಿಜೆಪಿ ಕಳೆದುಕೊಂಡಿದೆ. ಎನ್‌ಡಿಎ ಮಿತ್ರಕೂಟದ ಬಲದಿಂದ ಮೋದಿ ಪ್ರಧಾನಿ ಸ್ಥಾನದಲ್ಲಿದ್ದಾರೆ. 

2014ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದ್ದ ಬಿಜೆಪಿಯ ಸಂಖ್ಯಾಬಲ ಉಪ ಚುನಾವಣೆಗಳಲ್ಲಿ ಕ್ಷೀಣಿಸುತ್ತಾ ಬರುತ್ತಿದೆ. 2014ರಲ್ಲಿ ಲೋಕಸಭೆಯಲ್ಲಿ 282 ಇದ್ದ ಬಿಜೆಪಿ ಸಂಸದರ ಸಂಖ್ಯೆ ಈಗ 270ಕ್ಕೆ ಇಳಿದಿದೆ.

ಉತ್ತರ ಪ್ರದೇಶದ ಮೂರು ಲೋಕಸಭಾ ಕ್ಷೇತ್ರಗಳಿಗೆ ಮಾರ್ಚ್‌ ತಿಂಗಳಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಈಗ ಅಂಥದ್ದೇ ಸ್ಥಿತಿ ಮತ್ತೆ ಬಿಜೆಪಿಗೆ ಬಂದಿದೆ. ಲೋಕಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಈ ಬಿಜೆಪಿ ಒಂದು ಸ್ಥಾನ ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಬಹುಮತ ಸಿಕ್ಕ ಹಿನ್ನೆಲೆಯಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್‌ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದುಬಂದಿತ್ತು. ಸಂಸದ ಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ರಾಜೀನಾಮೆ ನೀಡಿದ ಬಳಿಕ ಅವರು ಪ್ರತಿನಿಧಿಸುತ್ತಿದ್ದ ಗೋರಖ್‌ಪುರ ಲೋಕಸಭಾ ಕ್ಷೇತ್ರವೂ ಸೇರಿದಂತೆ ಮೂರೂ ಕ್ಷೇತ್ರಗಳಿಗೆ ಇದೇ ವರ್ಷದ ಮಾರ್ಚ್‌ನಲ್ಲಿ ಉಪ ಚುನಾವಣೆ ನಡೆದಿತ್ತು. ಆದರೆ, ಒಂದು ಸ್ಥಾನ ಉಳಿಸಿಕೊಳ್ಳಲೂ ಬಿಜೆಪಿ ವಿಫಲವಾಗಿತ್ತು.

ಮೇ 28ರಂದು ನಡೆದಿದ್ದ ನಾಲ್ಕು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. ಈ ನಾಲ್ಕು ಕ್ಷೇತ್ರಗಳ ಪೈಕಿ ಈ ಹಿಂದೆ ಬಿಜೆಪಿ ಮೂರರಲ್ಲಿ ಜಯ ಸಾಧಿಸಿತ್ತು. ಆದರೆ, ಉಪ ಚುನಾವಣೆಯಲ್ಲಿ ಹಿಂದೆ ಇದ್ದ ಮೂರರ ಪೈಕಿ ಒಂದರಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿದೆ.

ಬಿಜೆಪಿ ತನ್ನ ಭದ್ರಕೋಟೆ ಎಂದೇ ಬಿಂಬಿಸುತ್ತಿದ್ದ ಉತ್ತರ ಪ್ರದೇಶದ ಕೈರಾನಾ ಕ್ಷೇತ್ರದಲ್ಲಿ ಆರ್‌ಎಲ್‌ಡಿ ಜಯ ಸಾಧಿಸಿದೆ. ಮಹಾರಾಷ್ಟ್ರದ ಭಂಡಾರಾ- ಗೋಂದಿಯಾ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಪಿ ಗೆದ್ದಿದೆ. ಮಹಾರಾಷ್ಟ್ರದ ಪಾಲ್ಘರ್‌ ಕ್ಷೇತ್ರವನ್ನು ಮಾತ್ರ ಬಿಜೆಪಿ ಉಳಿಸಿಕೊಂಡಿದೆ. ಇನ್ನು ನಾಗಲ್ಯಾಂಡ್‌ ಕ್ಷೇತ್ರದಲ್ಲಿ ಎನ್‌ಡಿಪಿಪಿ ಹಿಡಿತ ಸಾಧಿಸಿದೆ.

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈ ಹಿಂದೆ ಇದ್ದ ಹಿಡಿತವನ್ನು ಬಿಜೆಪಿ ಕಳೆದುಕೊಂಡಿದೆ ಎಂಬುದಕ್ಕೆ ಈ ಫಲಿತಾಂಶಗಳು ಉದಾಹರಣೆಯಂತಿವೆ. 10 ವಿಧಾನಸಭಾ ಕ್ಷೇತ್ರಗಳು ಹಾಗೂ 4 ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗಳ ಫಲಿತಾಂಶಗಳಲ್ಲಿ ಬಿಜೆಪಿ ಹೇಳಿಕೊಳ್ಳುವಂಥ ಗೆಲುವು ಪಡೆದಿಲ್ಲ.

ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಮುಂದೂಡಿಕೆಯಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರ ಸೇರಿದಂತೆ 11 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವೂ ಬಿಜೆಪಿ ಪಾಲಿಗೆ ಸಿಹಿಯಾಗಿಲ್ಲ. 11 ವಿಧಾನಸಭ ಕ್ಷೇತ್ರಗಳ ಪೈಕಿ ಬಿಜೆಪಿಗೆ ಸಿಕ್ಕಿರುವುದು ಒಂದು ಗೆಲುವು ಮಾತ್ರ. ಈ ಮೂಲಕ ಬಿಜೆಪಿ ಒಂದು ಲೋಕಸಭಾ ಸ್ಥಾನ ಮತ್ತು ಒಂದು ವಿಧಾನಸಭಾ ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

11 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಉಳಿದ ಆರರಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿವೆ. ಜಾರ್ಖಂಡ್‌ನ ಎರಡು ಸ್ಥಾನಗಳಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಹಾರದಲ್ಲಿ ಆರ್‌ಜೆಡಿ, ಉತ್ತರ ಪ್ರದೇಶದಲ್ಲಿ ಎಸ್‌ಪಿ, ಕೇರಳದಲ್ಲಿ ಸಿಪಿಎಂ ಜಯ ಗಳಿಸಿವೆ. ಮಹಾರಾಷ್ಟ್ರ, ಮೇಘಾಲಯ, ಪಂಜಾಬ್‌ ಮತ್ತು ಕರ್ನಾಟಕದ ಒಂದೊಂದು ಸ್ಥಾನಗಳಲ್ಲಿ ಕಾಂಗ್ರೆಸ್‌ ಜಯ ಸಾಧಿಸಿದೆ. ಉತ್ತರಾಖಂಡದ ಒಂದು ಸ್ಥಾನದಲ್ಲಿ ಬಿಜೆಪಿ ಗೆದ್ದಿದೆ.

ಕೆಲಸ ಮಾಡದ ಮೋದಿ ಅಲೆ:

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಗೆದ್ದರೂ ಅಧಿಕಾರ ಹಿಡಿಯಲಾಗದ ಸ್ಥಿತಿಯಲ್ಲಿರುವ ಬಿಜೆಪಿ ಉಪ ಚುನಾವಣೆಗಳಲ್ಲೂ ಸಂಖ್ಯೆ ಹೆಚ್ಚಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮುಖ ಮತ್ತು ಮಾತಿಗೆ ಮತಗಳು ಬಿಜೆಪಿಗೆ ಬುಟ್ಟಿಗೆ ಬಂದು ಬೀಳುತ್ತವೆ ಎಂಬ ಬಿಜೆಪಿಯ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ.

ಚುನಾವಣೆಯನ್ನು ಗೆಲ್ಲಿಸಿಕೊಡುವ ಚಾಣಕ್ಯ ಎಂದೆಲ್ಲಾ ಹೊಗಳಿಕೆ ಕಂಡ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡಾ ದಿನದಿಂದ ದಿನಕ್ಕೆ ಹಿನ್ನೆಲೆಗೆ ಸರಿಯುತ್ತಿದ್ದಾರೆ. ರಾಜಕಾರಣದಲ್ಲಿ ಒಂದೇ ಸೂತ್ರ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂಬುದು ಬಿಜೆಪಿಗೆ ಈಗ ಅರಿವಾಗಿರುವಂತಿದೆ.

ಕರ್ನಾಟಕದ ಗೆಲವಿನ ಮೂಲಕ ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವ ಬಿಜೆಪಿಯ ಕನಸಿಗೆ ಕಾಂಗ್ರೆಸ್- ಜೆಡಿಎಸ್‌ ಸೇರಿ ತಣ್ಣೀರೆರೆಚಿವೆ. ಉಪ ಚುನಾವಣೆಗಳಲ್ಲಿ ಸರಣಿ ಸೋಲನ್ನೇ ಕಾಣುವ ಮೂಲಕ ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲವೂ ಕುಗ್ಗುತ್ತಿದೆ.

ಕರ್ನಾಟಕದಲ್ಲಿ ಶಾಸಕರಾಗಿ ಗೆಲುವು ಕಂಡಿರುವ ಮೂವರು ಸಂಸದರ ರಾಜೀನಾಮೆಯಿಂದ ಮತ್ತೆ ಮೂರು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಬಿ.ಎಸ್‌. ಯಡಿಯೂರಪ್ಪ ಮತ್ತು ಬಿ. ಶ್ರೀರಾಮುಲು ಅವರ ಬಿಜೆಪಿಯ ಎರಡು ಸ್ಥಾನಗಳು ಈಗ ಖಾಲಿಯಾಗಲಿವೆ. ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ನ ಪುಟ್ಟರಾಜು ಸ್ಥಾನ ಖಾಲಿ ಉಳಿಯಲಿದೆ.

ಈ ಮೂರೂ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಒಂದು ವೇಳೆ ಈಗಿರುವ ಎರಡು ಸ್ಥಾನಗಳನ್ನೂ ಬಿಜೆಪಿ ಕಳೆದುಕೊಂಡರೆ ಅಲ್ಲಿಗೆ ಲೋಕಸಭೆಯಲ್ಲಿ ಬಿಜೆಪಿ ಒಟ್ಟು ಸಂಖ್ಯೆ 268ಕ್ಕೆ ಬೀಳಲಿದೆ.

ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ನೋಟುರದ್ದು, ಕಪ್ಪುಹಣ ವಾಪಸ್‌ನ ಹುಸಿ ಭರವಸೆ, ಜನಸಾಮಾನ್ಯರ ಬರಿಗಣ್ಣಿಗೆ ಕಾಣದ ಅಚ್ಛೇದಿನ್‌ ಇವೆಲ್ಲಕ್ಕೂ ಮಿಗಿಲಾಗಿ ಪ್ರಧಾನಮಂತ್ರಿಗಳ ಬಾಯಿಂದಲೇ ಬಂದ ಸುಳ್ಳುಗಳು ದೇಶದ ಜನರನ್ನು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿವೆ. 2014ರಲ್ಲಿ ಕಂಡ ಮೋದಿಗೂ ಈಗ ಕಾಣುತ್ತಿರುವ ಮೋದಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬುದು ಜನರಿಗೇ ಅರ್ಥವಾಗಿದೆ. ಇದೆಲ್ಲರ ಪರಿಣಾಮ ಉಪ ಚುನಾವಣೆಗಳಲ್ಲಿ ಬಿಜೆಪಿ ಕಾಣುತ್ತಿರುವ ಸೋಲು.

ಒಂದು ಕಡೆಗೆ ಬಿಜೆಪಿ ಬಗ್ಗೆ ದೇಶದಲ್ಲಿ ಹೆಚ್ಚುತ್ತಿರುವ ಜನಸಾಮಾನ್ಯರ ಅಸಮಾಧಾನ, ಮತ್ತೊಂದು ಕಡೆಗೆ ಪ್ರಾದೇಶಿಕ ಪಕ್ಷಗಳು ಮುನ್ನೆಲೆಗೆ ಬರುತ್ತಿರುವುದು 2019ರಲ್ಲಿ ತೃತೀಯರಂಗ ರಚನೆಯ ಸಾಧ್ಯತೆಯನ್ನು ಮಸುಕುಮಸುಕಾಗಿ ತೋರುತ್ತಿವೆ.