‘ಸಂಘ’ದ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಪ್ರಣವ್‌ ಮುಖರ್ಜಿ: ತೃತೀಯ ರಂಗಕ್ಕೆ ಮಾಜಿ ರಾಷ್ಟ್ರಪತಿ ನೇತೃತ್ವ?
COVER STORY

‘ಸಂಘ’ದ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಪ್ರಣವ್‌ ಮುಖರ್ಜಿ: ತೃತೀಯ ರಂಗಕ್ಕೆ ಮಾಜಿ ರಾಷ್ಟ್ರಪತಿ ನೇತೃತ್ವ?

2019ರ ಲೋಕಸಭಾ ಚುನಾವಣೆಯ ಹೊತ್ತಿಗೆ ತೃತೀಯ ರಂಗ ಬಲಪಡಿಸುವ ದೊಡ್ಡ ಪ್ರಯತ್ನಗಳು ನಡೆಯುತ್ತಿವೆ. ಆರ್‌ಎಸ್‌ಎಸ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಪ್ರಣವ್‌ ಮುಖರ್ಜಿ ಒಪ್ಪಿರುವುದು ಕೂಡಾ ಈ ಪ್ರಯತ್ನದ ಮುಂದುವರಿದ ಭಾಗದಂತಿದೆ.

ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಹಿರಿಯ ಕಾಂಗ್ರೆಸಿಗ ಪ್ರಣವ್‌ ಮುಖರ್ಜಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಶಿಬಿರಾರ್ಥಿಗಳ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಒಪ್ಪಿರುವುದು 2019ರ ಲೋಕಸಭಾ ಚುನಾವಣೆಗೆ ಮುಖರ್ಜಿ ತೃತೀಯ ರಂಗದ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂಬ ಚರ್ಚೆ ಹುಟ್ಟುಹಾಕಿದೆ.

ಕಾಂಗ್ರೆಸ್‌ನ ನಿಷ್ಠಾವಂತ ಮುಖಂಡ ಎನಿಸಿರುವ ಪ್ರಣವ್‌ ಮುಖರ್ಜಿ ಆರ್‌ಎಸ್‌ಎಸ್‌ನ ಕೇಂದ್ರ ಸ್ಥಾನ ನಾಗಪುರದಲ್ಲಿ ಜೂನ್‌ 7ರಂದು ನಡೆಯುವ ‘ಸಂಘ್‌ ಶಿಕ್ಷಾ ವರ್ಗ್’ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿಯ ಆಂತರಿಕ ವಲಯದಲ್ಲಿ ತರಂಗವೊಂದನ್ನು ಎಬ್ಬಿಸಿದೆ.

ಪ್ರಣವ್‌ ಮುಖರ್ಜಿ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಮುಖಂಡರನ್ನು 2019ರ ಲೋಕಸಭಾ ಚುನಾವಣೆಗೆ ಸಂಘಟಿಸುತ್ತಿದ್ದಾರೆ ಎಂಬ ಮಾತುಗಳಿಗೆ ಈ ಬೆಳವಣಿಗೆ ಪುಷ್ಠಿ ನೀಡಿದೆ. 82 ವರ್ಷದ ಹಿರಿಯ ಕಾಂಗ್ರೆಸ್‌ ಮುಖಂಡ ಪ್ರಣವ್‌ ಮುಖರ್ಜಿ 2019ರ ವೇಳೆಗೆ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗುವ ಆಕಾಂಕ್ಷೆಯಲ್ಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ತೃತೀಯ ರಂಗದ ಮುಖಂಡರೊಂದಿಗೆ ಪ್ರಣವ್‌ ಮುಖರ್ಜಿ ಭೇಟಿ, ಮಾತುಕತೆಗಳು ಹಾಗೂ ಮಾತೃಪಕ್ಷ ಕಾಂಗ್ರೆಸ್‌ನಲ್ಲಿ ಮುಖರ್ಜಿ ಅವರಿಗೆ ಪ್ರಧಾನಮಂತ್ರಿ ಹುದ್ದೆ ಕೈತಪ್ಪಿದ ಬಗ್ಗೆ ಇರುವ ಅಸಮಾಧಾನ – ಇವೆಲ್ಲವೂ 2019ರ ರಾಷ್ಟ್ರೀಯ ರಾಜಕೀಯ ಚಿತ್ರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡುತ್ತಿವೆ.

ಸುಮಾರು ಐದು ದಶಕಗಳಷ್ಟು ದೀರ್ಘ ಕಾಲದಿಂದ ಕಾಂಗ್ರೆಸ್‌ನಲ್ಲಿರುವ ಪ್ರಣವ್‌ ಮುಖರ್ಜಿ ಅವರಿಗೆ ಕಾಂಗ್ರೆಸ್‌ ಪ್ರಧಾನಮಂತ್ರಿ ಹುದ್ದೆಯೊಂದನ್ನು ಬಿಟ್ಟು ಎಲ್ಲಾ ಪ್ರಮುಖ ಹುದ್ದೆಗಳನ್ನೂ ನೀಡಿದೆ. ಯುಪಿಎ ಸರಕಾರದ ಅವಧಿಯಲ್ಲಿ ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದ ಪ್ರಣವ್‌ ಮುಖರ್ಜಿ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಎರಡು ಬಾರಿ ಕೈ ತಪ್ಪಿತ್ತು.

ಇಂದಿರಾ ಗಾಂಧಿ ಅವರೊಂದಿಗೆ ಪ್ರಣವ್‌ ಮುಖರ್ಜಿ (ಸಂಗ್ರಹ ಚಿತ್ರ)
ಇಂದಿರಾ ಗಾಂಧಿ ಅವರೊಂದಿಗೆ ಪ್ರಣವ್‌ ಮುಖರ್ಜಿ (ಸಂಗ್ರಹ ಚಿತ್ರ)

ಇಂದಿರಾ ಗಾಂಧಿ ಹತ್ಯೆಯ ಬಳಿಕ ಪ್ರಧಾನಮಂತ್ರಿ ಹುದ್ದೆಗೆ ಕಾಂಗ್ರೆಸ್‌ನಲ್ಲಿ ಮೊದಲು ಕೇಳಿಬಂದಿದ್ದ ಹೆಸರು ಪ್ರಣವ್‌ ಮುಖರ್ಜಿ. ಆದರೆ, ಆಗಿನ ಪರಿಸ್ಥಿತಿ ರಾಜೀವ್‌ ಗಾಂಧಿ ಅವರನ್ನು ಪ್ರಧಾನಿ ಹುದ್ದೆಗೇರುವಂತೆ ಮಾಡಿತ್ತು. 2004ರಲ್ಲಿ ಯುಪಿಎ ಮೈತ್ರಿಕೂಟಕ್ಕೆ ಬಹುಮತ ಸಿಕ್ಕಾಗ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೇರಲು ಹಿಂದೇಟು ಹಾಕಿದ್ದರು. ಆ ಸಂದರ್ಭದಲ್ಲೂ ಪ್ರಣವ್‌ ಮುಖರ್ಜಿ ಅವರೇ ಪ್ರಧಾನಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಪ್ರಣವ್‌ ಮುಖರ್ಜಿ ಅವರಿಗೆ ಎರಡನೇ ಬಾರಿಯೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿತ್ತು. ಅಂದಿನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿ ತಮಗೆ ಪ್ರಧಾನಿ ಹುದ್ದೆ ನೀಡುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದ ಪ್ರಣವ್‌ ಮುಖರ್ಜಿ ಅವರಿಗೆ ನಿರಾಸೆ ಕಾದಿತ್ತು. 2004ರಲ್ಲಿ ಮನಮೋಹನ್‌ ಸಿಂಗ್‌ ಅವರಿಗೆ ಪ್ರಧಾನಿ ಹುದ್ದೆ ಒಲಿದಿತ್ತು.

ಯುಪಿಎ ಮೈತ್ರಿ ಕೂಟ 2009ರಲ್ಲಿ ಮತ್ತೆ ಬಹುಮತ ಬಂದಾಗಲೂ ಎರಡನೇ ಬಾರಿಗೆ ಮನಮೋಹನ್‌ ಸಿಂಗ್‌ ಅವರೇ ಪ್ರಧಾನಿಯಾದರು. ಕಾಂಗ್ರೆಸ್‌ನ ಈ ನಡೆಯಿಂದ ಅಸಮಾಧಾನಗೊಂಡಿದ್ದ ಪ್ರಣವ್‌ ಮುಖರ್ಜಿ ಅವರನ್ನು 2012ರಲ್ಲಿ ರಾಷ್ಟ್ರಪತಿಯಾಗಿ ಚುನಾಯಿಸಲಾಯಿತು. ಆದರೆ, ಮುಖರ್ಜಿ ಅವರಿಗೆ ರಾಷ್ಟ್ರಪತಿ ಹುದ್ದೆಗಿಂತ ಹೆಚ್ಚಿನ ಒಲವು ಇದ್ದಿದ್ದಿ ಪ್ರಧಾನಮಂತ್ರಿ ಹುದ್ದೆಯ ಮೇಲೆ.

ಕಾಂಗ್ರೆಸ್‌ ಪಕ್ಷದಲ್ಲಿ ಇಷ್ಟು ವರ್ಷಗಳಿದ್ದೂ ಕನಸಾಗಿಯೇ ಉಳಿದಿರುವ ಪ್ರಧಾನಮಂತ್ರಿ ಹುದ್ದೆಯನ್ನು ತೃತೀಯ ರಂಗದ ಮೂಲಕ ನನಸಾಗಿಸಿಕೊಳ್ಳಲು ಈಗ ಪ್ರಣವ್‌ ಮುಖರ್ಜಿ ಮುಂದಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಬಲಕಳೆದುಕೊಳ್ಳುತ್ತಿದೆ ಎಂಬ ಮಾತು ಹೆಚ್ಚಾಗಿರುವ ಸಂದರ್ಭದಲ್ಲಿ ತೃತೀಯ ರಂಗ ಹಾಗೂ ಪ್ರಣವ್‌ ಮುಖರ್ಜಿ ಪ್ರಧಾನಿ ಹುದ್ದೆಯ ಚರ್ಚೆಗೆ ಮಹತ್ವ ಬಂದಿದೆ.

ಈ ವರ್ಷದ ಜನವರಿ ತಿಂಗಳಲ್ಲಿ ಪ್ರಣವ್‌ ಮುಖರ್ಜಿ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿವಾಸದಲ್ಲಿ ಔತಣಕೂಟದಲ್ಲಿ ಭಾಗವಹಿಸಿದ್ದರು. ಪ್ರಣವ್‌ ಮುಖರ್ಜಿ ಅವರೊಂದಿಗೆ ಎಲ್‌.ಕೆ. ಅಡ್ವಾಣಿ, ಎಚ್‌.ಡಿ. ದೇವೇಗೌಡ, ಸೀತಾರಾಮ್‌ ಯಚೂರಿ ಮತ್ತು ನವೀನ್‌ ಪಟ್ನಾಯಕ್‌ ಊಟ ಮಾಡುತ್ತಿರುವ ಚಿತ್ರವನ್ನು ನವೀನ್‌ ಪಟ್ನಾಯಕ್‌ ಟ್ವೀಟ್‌ ಮಾಡಿದ್ದರು. ತೃತೀಯ ರಂಗದ ಶಕ್ತಿ ಬಲಗೊಳ್ಳುತ್ತಿದೆ ಎಂದು ಹೇಳಲು ಈ ಔತಣಕೂಟ ಕೂಡಾ ಒಂದು ಪುರಾವೆಯಾಗಿತ್ತು.

ತೃತೀಯ ರಂಗ ರಚನೆಯ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಈಗಾಗಲೇ ಉತ್ಸಾಹ ತೋರಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎನ್‌ಡಿಎ ಸರಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್‌ ಪಡೆದಿದ್ದಾರೆ. 2019ರ ಚುನಾವಣೆಗೆ ಎನ್‌ಡಿಎಗೆ ತಮ್ಮ ಬೆಂಬಲ ಇಲ್ಲ ಎಂದು ಶಿವಸೇನೆ ಘೋಷಿಸಿದೆ.

ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್‌ ನೀಡಿದ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಜೆಡಿಎಸ್‌ ಕೂಡಾ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಪರವಾಗಿದೆ. ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಕೂಡಾ ತೃತೀಯ ರಂಗದ ರಚನೆಗೆ ಬೇಕಾದ ಎಲ್ಲಾ ಪಟ್ಟುಗಳನ್ನು ತಳಮಟ್ಟದಲ್ಲೇ ಹಾಕುತ್ತಿದ್ದಾರೆ.

ತೃತೀಯ ರಂಗದ ಕನಸು ಬಲಗೊಳ್ಳಲು ಹೀಗೆ ವೇದಿಕೆಯೊಂದು ಸಜ್ಜಾಗುತ್ತಿರುವ ಸಂದರ್ಭದಲ್ಲಿ ಪ್ರಣವ್‌ ಮುಖರ್ಜಿ ಅವರ ಮೂಲಕ ಬಿಜೆಪಿಯೇತರ ಹಾಗೂ ಕಾಂಗ್ರೆಸ್ಸೇತರ ಮುಖಂಡರನ್ನು ಒಂದುಗೂಡಿಸಲು ಪ್ರಣವ್‌ ಮುಖರ್ಜಿ ಮುಂದಾಗಿರುವಂತಿದೆ. ಇದರ ಮೊದಲ ಪ್ರಯತ್ನವೇ ಆರ್‌ಎಸ್‌ಎಸ್‌ ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ಎನ್ನಲಾಗಿದೆ.

“ಆರ್‌ಎಸ್‌ಎಸ್‌ ರಾಷ್ಟ್ರ ವಿರೋಧಿ, ನೈತಿಕತೆ ಇಲ್ಲದ ಸಂಘಟನೆ ಎಂದು ಪ್ರಣವ್‌ ಮುಖರ್ಜಿ ಅವರೇ ಈ ಹಿಂದೆ ಹೇಳಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಪ್ರಣವ್‌ ಮುಖರ್ಜಿ ಅವರ ನಿಲುವು ಏನು ಎಂಬುದು ಆರ್‌ಎಸ್‌ಎಸ್‌ನವರಿಗೇ ತಿಳಿದಿದೆ. ಈಗ ಪ್ರಣವ್‌ ಮುಖರ್ಜಿ ಅವರನ್ನೇ ಮುಖ್ಯ ಅತಿಥಿಯಾಗಿ ಆರ್‌ಎಸ್‌ಎಸ್‌ನವರು ತಮ್ಮ ಸಮಾವೇಶಕ್ಕೆ ಆಹ್ವಾನಿಸಿರುವುದನ್ನು ನೋಡಿದರೆ ಪ್ರಣವ್‌ ಮುಖರ್ಜಿ ಅವರ ಟೀಕೆಗಳನ್ನೆಲ್ಲಾ ಅವರು ಒಪ್ಪಿಕೊಂಡಿರುವಂತಿದೆ” ಎಂದಿದ್ದಾರೆ ಕಾಂಗ್ರೆಸ್‌ ಮುಖಂಡ ಸಂದೀಪ್‌ ದೀಕ್ಷಿತ್.

ಆದರೆ, ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್‌’ ಸಂಘದ ಹೊರಗಿನವರು ಕಾರ್ಯಕ್ರಮಗಳಿಗೆ ಬರುತ್ತಿರುವುದು ಇದೇ ಮೊದಲೇನಲ್ಲ ಎಂದಿದೆ. “1934ರಲ್ಲಿ ವರ್ಧಾದಲ್ಲಿ ನಡೆದಿದ್ದ ಸಂಘದ ಶಿಬಿರಕ್ಕೆ ಮಹಾತ್ಮ ಗಾಂಧಿ ಬಂದಿದ್ದರು. ಆರ್‌ಎಸ್‌ಎಸ್‌ನ ಮೊದಲ ಸರಸಂಘಚಾಲಕ ಕೆ. ಬಿ. ಹೆಗ್ಡೆವಾರ್ ಅವರೊಂದಿಗೆ ಭವಿಷ್ಯದ ಭಾರತದ ಕುರಿತು ಚರ್ಚೆ ನಡೆಸಿದ್ದರು” ಎಂದು ‘ಆರ್ಗನೈಸರ್‌’ ಲೇಖನವೊಂದರಲ್ಲಿ ಹೇಳಿದೆ.