samachara
www.samachara.com
ಎರಡು ಹಂತಗಳಲ್ಲಿ ರೈತರ ಸಾಲಮನ್ನಾ: ಷರತ್ತುಗಳು ಅನ್ವಯ*!
COVER STORY

ಎರಡು ಹಂತಗಳಲ್ಲಿ ರೈತರ ಸಾಲಮನ್ನಾ: ಷರತ್ತುಗಳು ಅನ್ವಯ*!

ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರ್ಥಿಕ ಶಿಸ್ತಿನ ಕಾರಣಕ್ಕೆ ಕೆಲವೊಂದು ಷರತ್ತುಗಳನ್ನು ಹಾಕಿದ್ದಾರೆ. ಆ ಷರತ್ತುಗಳಿಗೆ ಬಹುತೇಕ ರೈತ ಮುಖಂಡರೂ ಒಪ್ಪಿದ್ದಾರೆ.

ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ‘ಆರ್ಥಿಕ ಶಿಸ್ತು’ ಅಳವಡಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೆಲವು ಷರತ್ತುಗಳೊಂದಿಗೆ ಎರಡು ಹಂತಗಳಲ್ಲಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ರೈತ ಸಂಘಗಳ ಪ್ರತಿನಿಧಿಗಳು, ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ರೈತರಿಂದ ಸಲಹೆಗಳನ್ನು ಪಡೆದು, ಅವುಗಳನ್ನು ಪರಿಶೀಲಿಸಿ 15 ದಿನಗಳಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

“2009ರ ಏಪ್ರಿಲ್‌ 1ರಿಂದ 2017ರ ಡಿಸೆಂಬರ್‌ 31ರ ಅವಧಿಯೊಳಗೆ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲದ ಬಗ್ಗೆ ಆ ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುತ್ತೇನೆ” ಎಂದು ಅವರು ತಿಳಿಸಿದರು.

“ಸತತ ಮೂರು ವರ್ಷಗಳ ಕಾಲ 4 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ತೆರಿಗೆ ಪಾವತಿಸಿರುವವರು, ಜನಪ್ರತಿನಿಧಿಗಳು, ನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವವರು, ಕೃಷಿ ಸಾಲ ಪಡೆದು ಆ ಹಣದಲ್ಲಿ ಬೇರೆ ವ್ಯವಹಾರ ನಡೆಸುತ್ತಿರುವವರು, 3 ಲಕ್ಷ ರೂಪಾಯಿ ಆದಾಯವಿರುವ ಸಹಕಾರಿ ಬ್ಯಾಂಕ್‌ಗಳ ಪದಾಧಿಕಾರಿಗಳು ಮಾಡಿರುವ ಸಾಲಮನ್ನಾ ಮಾಡಬೇಕೇ ಬೇಡವೇ ಎಂಬ ಬಗ್ಗೆ ಸಲಹೆಗಳನ್ನು ಪಡೆದು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ” ಎಂದರು.

ಕುಮಾರಸ್ವಾಮಿ ಭರವಸೆ ನೀಡಿದಂತೆ ಸಂಪೂರ್ಣ 53 ಸಾವಿರ ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಬೇಕು. ಮಾತಿಗೆ ತಪ್ಪಿದರೆ ಹೋರಾಟ ನಡೆಸುತ್ತೇವೆ.
- ಬಿ.ಎಸ್‌. ಯಡಿಯೂರಪ್ಪ, ವಿಪಕ್ಷ ನಾಯಕ

“ಮೊದಲ ಹಂತದಲ್ಲಿ ಬೆಳೆಸಾಲವನ್ನು ಮನ್ನಾ ಮಾಡಿ, ಎರಡನೇ ಹಂತದಲ್ಲಿ ಟ್ರಾಕ್ಟರ್‌ ಸೇರಿದಂತೆ ಇತರೆ ಯಂತ್ರೋಪಕರಣಗಳ ಖರೀದಿಯ ಸಾಲಮನ್ನಾ ಮಾಡಲಾಗುವುದು. ಸಾಲಮನ್ನಾ ವಿಚಾರದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ನೋಡಲ್‌ ಅಧಿಕಾರಿಗಳಾಗಿರಲಿದ್ದಾರೆ. ರೈತರು ತಮ್ಮ ಸಾಲ ಬಾಕಿ, ಬಡ್ಡಿ ವಿವರಗಳ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು” ಎಂದು ತಿಳಿಸಿದರು.

“ರೈತರ ಸಾಲಮನ್ನಾ ಮಾಡುವ ಜತೆಗೆ ರೈತರು ಸಾಲಗಾರರಾಗದಂತೆ ಬದುಕು ಕಟ್ಟಿಕೊಳ್ಳಲು ಬೇಕಾದ ರೈತ ನೀತಿಯನ್ನು ಜಾರಿಗೆ ತರುವ ಜವಾಬ್ದಾರಿ ನನ್ನ ಮೇಲಿದೆ. ಪ್ರತಿ ತಿಂಗಳೂ ರೈತರ ಸಭೆ ನಡೆಸುತ್ತೇನೆ. ರೈತರಿಗೆ ವಿಧಾನಸೌಧ ಯಾವಾಗಲೂ ತೆರೆದಿರುತ್ತದೆ” ಎಂದರು.

ರೈತ ಮುಖಂಡರ ಜತೆಗಿನ ಸಭೆಯಲ್ಲಿ ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತಿತರರು ಪಾಲ್ಗೊಂಡಿದ್ದರು.
ರೈತ ಮುಖಂಡರ ಜತೆಗಿನ ಸಭೆಯಲ್ಲಿ ವಿಪಕ್ಷ ಉಪ ನಾಯಕ ಗೋವಿಂದ ಕಾರಜೋಳ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತಿತರರು ಪಾಲ್ಗೊಂಡಿದ್ದರು.

“ಸಾಲಮನ್ನಾ ಮೂಲಕ ನಾನು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದೇನೆ. ರೈತರು ನೀಡುವ ಸಲಹೆಗಳನ್ನು ಅಳವಡಿಸಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ಸಮ್ಮಿಶ್ರ ಸರಕಾರವನ್ನು ರೈತರು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿ ಕೆಲವು ಷರತ್ತುಗಳ ಬಗ್ಗೆ ಪ್ರಸ್ತಾಪಿಸಿರುವುದಕ್ಕೆ ರೈತ ಮುಖಂಡರೂ ಸಮ್ಮತಿ ವ್ಯಕ್ತಪಡಿಸಿದ್ದಾರೆ. ರೈತರ ಸಲಹೆಗಳನ್ನು ಪರಿಗಣಿಸುವುದಾಗಿ ಹೇಳಿರುವುದರಿಂದ ರೈತ ಮುಖಂಡರು ತಮ್ಮ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದಾರೆ.

“ಸಭೆಯಲ್ಲಿ ಮುಖ್ಯಮಂತ್ರಿಯವರ ತೀರ್ಮಾನದ ಬಗ್ಗೆ ಸಮಾಧಾನವಿದೆ. ರೈತರ ಸಲಹೆ, ಅಧಿಕಾರಿಗಳ ಸಭೆ, ದಾಖಲೆಗಳ ಪರಿಶೀಲನೆ ಮುಂತಾದ ಪ್ರಕ್ರಿಯೆಗೆ 15 ದಿನಗಳ ಕಾಲಾವಕಾಶ ಕೇಳಿದ್ದಾರೆ. 15 ದಿನಗಳ ಕಾಲ ಕಾದು ನೋಡುತ್ತೇವೆ” ಎಂದು ರೈತ ಮುಖಂಡ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ.

ಸಾಲಮನ್ನಾ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರನ್ನು ಸಭೆಗೆ ಆಹ್ವಾನಿಸಿದ್ದರೂ ಮಂಗಳೂರಿಗೆ ಭೇಟಿ ನೀಡುವ ನೆಪ ಒಡ್ಡಿ ವಿಪಕ್ಷದ ಉಪ ನಾಯಕ ಗೋವಿಂದ ಕಾರಜೋಳ ಅವರನ್ನು ಸಭೆಗೆ ಕಳಿಸಿ, ಈಗ ಮನೆಯಲ್ಲಿ ಕುಳಿತು ಲಘುವಾಗಿ ಮಾತನಾಡುತ್ತಿದ್ದಾರೆ. ಅವರು ರೈತರ ವಿಚಾರದಲ್ಲಾದರೂ ಚಿಲ್ಲರೆ ರಾಜಕಾರಣ ಬಿಡಲಿ.
- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಕೆಲವೊಂದಷ್ಟು ಷರತ್ತುಗಳನ್ನು ಹಾಕುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ವಿಚಾರವನ್ನು ಈ ಬಾರಿ ಸ್ವಲ್ಪ ಗಂಭೀರಗೊಳಿಸಿದ್ದಾರೆ. ಸಿದ್ದರಾಮಯ್ಯ ಸಾಲಮನ್ನಾ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡದವರಿಗೂ ಸಾಲಮನ್ನಾದ ‘ಲಾಭ’ ಸಿಕ್ಕಿತ್ತು.

ಈ ಬಾರಿ ಸಾಲಮನ್ನಾ ವಿಚಾರದಲ್ಲಿ ಜಿಲ್ಲಾಧಿಕಾರಿಗಳನ್ನೇ ನೋಡಲ್‌ ಅಧಿಕಾರಿ ಎಂದು ಘೋಷಿಸಿರುವುದರಿಂದ ಮಧ್ಯವರ್ತಿಗಳ ಕೈವಾಡಕ್ಕೆ ತಕ್ಕಮಟ್ಟಿಗೆ ಕಡಿವಾಣ ಬಿದ್ದಂತಾಗಿದೆ. ಅಲ್ಲದೆ ಸಾಲ ಮಾಡಿರುವ, ಕಂತು ಕಟ್ಟಿರುವ ಹಾಗೂ ಸಾಲ ಬಾಕಿ ಇರುವ ದಾಖಲೆಗಳನ್ನು ರೈತರು ನೋಡಲ್‌ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿರುವುದರಿಂದ ನಕಲಿ ಸಾಲಗಾರರ ಆಟ ನಡೆಯುವುದಿಲ್ಲ ಎನ್ನಲಾಗಿದೆ.

ಈ ಬಾರಿಯ ಸಾಲಮನ್ನಾದ ಪ್ರಯೋಜನ ರೈತರಿಗೇ ಸಿಗಬೇಕು ಎಂದು ಕುಮಾರಸ್ವಾಮಿ ಕೆಲವು ಷರತ್ತುಗಳನ್ನು ಹಾಕಿಕೊಂಡಿದ್ದಾರೆ. ಆ ಮಟ್ಟಿಗೆ ಈ ಬಾರಿಯ ಸಾಲಮನ್ನಾದ ನೇರ ಪ್ರಯೋಜನ ಸಾಲ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ತಲುವಂತೆ ಕಾಣುತ್ತಿದೆ. ಆದರೆ, ಸರಕಾರ ಚಾಪೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ತೂರುವ ಮಧ್ಯವರ್ತಿಗಳಿರುವಾಗ ಈ ಸಾಲಮನ್ನಾದ ಆಶಯ ನೂರಕ್ಕೆ ನೂರಷ್ಟು ಈಡೇರುತ್ತದೆ ಎಂಬುದನ್ನು ನಿರೀಕ್ಷಿಸುವುದೂ ಕಷ್ಟವಿದೆ.