‘ಮಾಡೆಲ್ ಆಫ್ ಅಚ್ಛೆ ದಿನ್’: ಸತತ 16 ದಿನಗಳ ಏರಿಕೆ, 17ನೇ ದಿನ ಒಂದು ಪೈಸೆ ಇಳಿಕೆ!
COVER STORY

‘ಮಾಡೆಲ್ ಆಫ್ ಅಚ್ಛೆ ದಿನ್’: ಸತತ 16 ದಿನಗಳ ಏರಿಕೆ, 17ನೇ ದಿನ ಒಂದು ಪೈಸೆ ಇಳಿಕೆ!

ಸತತ 16 ದಿನಗಳ ಏರಿಕೆ ನಂತರ ಬುಧವಾರದ ಹೊತ್ತಿಗೆ ಪೆಟ್ರೋಲ್ ಬೆಲೆ ಇಳಿಕೆ ಕಂಡಿದೆ; ಅದೂ ಒಂದು ಪೈಸೆ. ಹೌದು, ಒಂದೇ ಪೈಸೆ, ಮೇಕ್ ನೋ ಮಿಸ್ಟೇಕ್!

ಸತತ 16 ದಿನಗಳ ಏರಿಕೆ ನಂತರ ಬುಧವಾರದ ಹೊತ್ತಿಗೆ ಪೆಟ್ರೋಲ್ ಬೆಲೆ ಇಳಿಕೆ ಕಂಡಿದೆ; ಅದೂ ಒಂದು ಪೈಸೆ. ಹೌದು, ಒಂದೇ ಪೈಸೆ, ಮೇಕ್ ನೋ ಮಿಸ್ಟೇಕ್!

ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ಮುಗಿದ ಮಾರನೇ ದಿನದಿಂದಲೇ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣಲು ಶುರುವಾಯಿತು. ಸತತ 16 ದಿನಗಳ ಕಾಲ ಪ್ರತಿ ದಿನ ಇಂಧನ ಬೆಲೆ ಏರಿಕೆ ಕಾಣುತ್ತಲೇ ಇತ್ತು. ಆದರೆ ಬುಧವಾರದ ಹೊತ್ತಿಗೆ ಒಂದು ಪೈಸೆ ಇಳಿಕೆ ಕಂಡಿದೆ.

ಮೇ. 13ರಂದು ದೇಶದ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 74. 63 ರೂಪಾಯಿಗಳಷ್ಟಿತ್ತು. ನಂತರ ಸತತವಾಗಿ ಏರಿಕೆ ಕಾಣುತ್ತಲೇ ಬಂದ ಬೆಲೆ ಮೇ. 29ರಂದು 78.43 ಪ್ರತಿ ಲೀಟರ್‌ಗೆ ಬಂದು ನಿಂತಿತ್ತು. ಆದರೆ ಬುಧವಾರ ಬೆಳಗ್ಗೆ ಇಂಡಿಯನ್‌ ಆಯಿಲ್ ವೆಬ್‌ಸೈಟ್‌ನಲ್ಲಿ ಪೆಟ್ರೋಲ್ ಬೆಲೆ 74.62 ರೂಪಾಯಿ ಎಂದು ನಮೂದಿಸಲಾಗಿದೆ. ಅಂದರೆ ಕೇವಲ ಒಂದು ಪೈಸೆ ಇಳಿಕೆ ಕಂಡಂತಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇಂಧನ ಬೆಲೆ. ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ದಿಲ್ಲಿಯಲ್ಲಿ ಅತಿ ಕಡಿಮೆ ಇಂಧನ ಬೆಲೆ ಇದೆ. ಉಳಿದೆಡೆ ಬೆಲೆಗಳು ಪಟ್ಟಿಯಲ್ಲಿವೆ. 
ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇಂಧನ ಬೆಲೆ. ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ದಿಲ್ಲಿಯಲ್ಲಿ ಅತಿ ಕಡಿಮೆ ಇಂಧನ ಬೆಲೆ ಇದೆ. ಉಳಿದೆಡೆ ಬೆಲೆಗಳು ಪಟ್ಟಿಯಲ್ಲಿವೆ. 

ಪೆಟ್ರೋಲ್, ಡೀಸೆಲ್ ಮಾತ್ರ ಅಲ್ಲ ಗ್ಯಾಸೋಲಿನ್ ಬೆಲೆಗಳು ಏರಿಕೆಯಾಗುತ್ತಲೇ ಬಂದಿದ್ದವು. ಈ ಕುರಿತು ಆರಂಭದಲ್ಲಿ ಸರಕಾರ ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿತ್ತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಇದೇ ಹೇಳಿಕೆಗಳನ್ನು ನೀಡಿದ್ದರು. ಹೀಗಿದ್ದರೂ ಸತತ 16 ದಿನಗಳ ಕಾಲ ಇಂಧನ ಬೆಲೆ ಏರಿಕೆಯಾಗುತ್ತಲೇ ಬಂದಿತ್ತು. ಕೊನೆಗೆ ಬುಧವಾರ ಬೆಲೆ ಇಳಿಕೆಯ ಕುರುಹು ಲಭ್ಯವಾಗಿದೆ.

ತಮಾಷೆಯ ವಿಚಾರ ಎಂದರೆ, ಒಂದು ಪೈಸೆಯನ್ನು ಒಂದು ರೂಪಾಯಿ ಎಂದು ಅಪಾರ್ಥ ಮಾಡಿಕೊಂಡ ರಾಷ್ಟ್ರೀಯ ಮಾಧ್ಯಮಗಳು ಬುಧವಾರ ಬೆಳಗ್ಗೆ ಕೇಂದ್ರ ಸರಕಾರವನ್ನು ಹೊಗಳುವ ಪ್ರಕ್ರಿಯೆ ಆರಂಭಿಸಿದ್ದವು. ಆದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಒಂದು ರೂಪಾಯಿ ಎಂದು ತಪ್ಪಾಗಿದೆ, ಒಂದು ಪೈಸೆ ಅಷ್ಟೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಸರಿಪಡಿಸಿಕೊಂಡ ಮೇಲೆ ಹೊಗಳಿಕೆ ಪ್ರಮಾಣ ಕಡಿಮೆಯಾಗಿದೆ.

ಸಮಜಾಯಿಷಿಗಳು:

ಈ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸತತ ಏರಿಕೆ ಕಾಣುತ್ತಿದ್ದಂತೆ, ಜನಪ್ರಿಯ ಕಾರಣಗಳನ್ನೇ ಜನರ ಮುಂದಿಟ್ಟಿತ್ತು ಸರಕಾರ. ಅದರಲ್ಲಿ ಪ್ರಮುಖವಾದುದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂಬುದು. ಹಾಗೆ ನೋಡಿದರೆ, ಕಚ್ಚಾತೈಲ ಬೆಲೆ ಕಳೆದ ನಾಲ್ಕು ವರ್ಷಗಳಲ್ಲಿ ಕನಿಷ್ಟ ಮಟ್ಟವನ್ನು ಮುಟ್ಟಿತ್ತು. ಈ ಸಮಯದಲ್ಲಿ ಭಾರತದಲ್ಲಿ ಇಂಧನ ಬೆಲೆ ಏನೂ ಇಳಿದಿರಲಿಲ್ಲ. ಬದಲಿಗೆ, ಸರಕಾರಕ್ಕೆ ವರಮಾನ ದುಪ್ಪಟ್ಟಾಗಿತ್ತು.

ಇದರ ಜತೆಗೆ ಈ ಬಾರಿಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಲು ಕಾರಣ ಅಂತ ಹೇಳುತ್ತಿರುವುದು ಡಾಲರ್ ಎದುರಿಗೆ ರೂಪಾಯಿ ಅಪಮೌಲ್ಯಗೊಳ್ಳತ್ತಿರುವುದು. ಆದರೆ ಮೇ. 13ರಿಂದ ಇಲ್ಲಿಯವರೆಗಿನ ಗ್ರಾಫ್‌ ನೋಡಿದರೆ ಡಾಲರ್ ಎದುರಿಗೆ ರೂಪಾಯಿ ಬೆಲೆ ಕುಸಿದಿದೆ, ಅಷ್ಟೇ ಏರಿಕೆಯೂ ಕಂಡಿದೆ. ಆದರೆ ದೇಶದಲ್ಲಿ ಇಂಧನ ಬೆಲೆಗಳು ಮಾತ್ರ ಇಂತಹ ಏರಿಳಿತಗಳನ್ನು ಕಾಣಲಿಲ್ಲ ಎಂಬುದು ಗಮನಿಸಬೇಕಿದೆ.

ಡಾಲರ್ ಎದುರಿಗೆ ರೂಪಾಯಿ, ಕಳೆದ ಸಪ್ತಾಹದಲ್ಲಿ ಕಂಡ ಏರಿಳಿತಗಳು. 
ಡಾಲರ್ ಎದುರಿಗೆ ರೂಪಾಯಿ, ಕಳೆದ ಸಪ್ತಾಹದಲ್ಲಿ ಕಂಡ ಏರಿಳಿತಗಳು. 
https://www.xe.com/currencycharts/?from=USD&to=INR&view=1M

ದುಬಾರಿ ತೆರಿಗೆಯೇ ಹೊರೆ:

ಸಾಮಾನ್ಯ ಜನರಿಗೆ ಅರ್ಥವಾಗದ ಅಂತಾರಾಷ್ಟ್ರೀಯ ಮಟ್ಟದ ಕಾರಣಗಳನ್ನು ಮುಂದಿಟ್ಟು ಇಂಧನ ಬೆಲೆ ಏರಿಕೆಗಳನ್ನು ಸಮರ್ಥಿಸಿಕೊಳ್ಳುವುದು ಒಂದು ಕಡೆಗೆ ನಡೆಯುತ್ತಿದೆ. ಮತ್ತೊಂದೆಡೆ, ಸರಕಾರಗಳು ಇಂಧನ ಮೂಲವನ್ನೇ ತಮ್ಮ ಆದಾಯದ ಮೂಲವನ್ನಾಗಿ ಮಾಡಿಕೊಂಡ ಕುರಿತು ಟೀಕೆಗಳೂ ವ್ಯಕ್ತವಾಗುತ್ತಿವೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಂಧನಗಳ ಮೇಲೆ ವಿಧಿಸುವ ತೆರಿಗೆಗಳನ್ನು ಕಡಿಮೆ ಮಾಡಬೇಕು, ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಬೇಕು ಎಂಬ ವಾದಗಳೂ ಕೇಳಿಬರುತ್ತಿವೆ. ಅದಕ್ಕೂ ಮುಂಚೆ, ಸದ್ಯ ಪ್ರತಿ ದಿನ ಭಾರತದ ಆಯಿಲ್ ಕಂಪನಿಗಳು ಬೆಲೆ ನಿಗದಿಗೆ ತೆಗೆದುಕೊಳ್ಳುವ ಮಾನದಂಡಗಳು ಏನಿವೆ ಎಂಬುದನ್ನು ಗಮನಿಸಿ.

ಇದು ಇಂಧನ ಬೆಲೆ ನಿಗದಿಗೆ ಇರುವ ಮಾನದಂಡಗಳು
ಇದು ಇಂಧನ ಬೆಲೆ ನಿಗದಿಗೆ ಇರುವ ಮಾನದಂಡಗಳು

ಈಗ ಪ್ರತಿದಿನ ಆಧಾರದ ಮೇಲೆ ದೇಶಾದ್ಯಂತ ಇಂಧನ ಬೆಲೆ ನಿಗದಿಯಾಗುತ್ತದೆ. ಇದಕ್ಕೆ ಆಯಿಲ್ ಕಾರ್ಪೊರೇಷನ್‌ಗಳು ತೆಗೆದುಕೊಳ್ಳುವ ಮಾನದಂಡಗಳು, ಅನುಸರಿಸುವ ಮಾರ್ಗ ಮೇಲಿನ ಪಟ್ಟಿಯಲ್ಲಿ ಸ್ಪಷ್ಟವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮೊದಲ ಪಟ್ಟಿಯಲ್ಲಿದ್ದರೆ, ಡಾಲರ್ ಎದುರಿಗೆ ರೂಪಾಯಿ ಮೌಲ್ಯ ನಂತರ ಸ್ಥಾನದಲ್ಲಿದೆ. ಇವುಗಳ ಆಧಾರದ ಮೇಲೆ ಡೀಲರ್‌ಗಳಿಗೆ ಪ್ರತಿ ಲೀಟರ್‌ಗೆ ಇಷ್ಟು ಎಂದು ಬೆಲೆ ನಿಗದಿಯಾಗುತ್ತದೆ. ಅದರ ಮೇಲೆ, ಎಕ್ಸೈಸ್‌ ಡ್ಯೂಟಿ, ಡೀಲರ್ ಕಮಿಷನ್, ವ್ಯಾಟ್‌ ಸೇರಿ ಕೊನೆಗೆ ಒಂದು ಲೀಟರ್ ಇಂಧನ ಬೆಲೆ ನಿಗದಿಯಾಗುತ್ತದೆ.

ಮೇ. 30ರಂದು ದಿಲ್ಲಿಯ ಪೆಟ್ರೋಲ್ ಬೆಲೆಯನ್ನೇ ತೆಗೆದುಕೊಂಡರೆ, ಡೀಲರ್‌ಗಳಿಗೆ ಒಂದು ಲೀಟರ್ ಪೆಟ್ರೋಲ್ 38.63 ರೂಪಾಯಿಗೆ ಲಭ್ಯವಾಗುತ್ತದೆ. ಇದರ ಮೇಲೆ ಎಕ್ಸೈಸ್‌ ಡ್ಯೂಟಿ ಹೆಸರಿನಲ್ಲಿ 19. 48 ರೂಪಾಯಿ ವಿಧಿಸಲಾಗಿದೆ. ಅಂದರೆ, ಹೆಚ್ಚು ಕಡಿಮೆ ಶೇ. 50ರಷ್ಟು ತೆರಿಗೆ. ಜತೆಗೆ 1667ರಷ್ಟು ವ್ಯಾಟ್‌ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿಯೇ ಇಂಧನ ಉತ್ಪನ್ನಗಳನ್ನೂ ಎಕ್ಸೈಸ್‌ ಡ್ಯೂಟಿ ಮತ್ತು ವ್ಯಾಟ್‌ಗಳಿಂದ ಹೊರತಂದು ಜಿಎಸ್‌ಟಿ ಅಡಿಯಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಿ ಎಂಬ ಬೇಡಿಕೆ ಕೇಳಿಬರುತ್ತಿರುವುದು. ಒಂದು ವೇಳೆ ಹಾಗೇನಾದರೂ ಆದರೆ, ಇಂಧನ ಬೆಲೆಯಲ್ಲಿ ಭಾರಿ ಇಳಿಕೆ ಕಾಣುವುದು ಸಾಧ್ಯವಾಗಲಿದೆ. ಆದರೆ ಅದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.

ಎಷ್ಟಿದೆ ಆದಾಯ?:

ಇಂಧನ ಮಾರಾಟದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಬಂದ ಆದಾಯವನ್ನು ಗಮನಿಸಿದರೆ ಇನ್ನೊಂದಿಷ್ಟು ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ‘ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಸೆಲ್’ ವೆಬ್‌ಸೈಟ್‌ನಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಇಂಧನ ಮೂಲಗಳಿಂದ ಸರಕಾರದ ಖಜಾನೆಗೆ ದೊಡ್ಡಮೊತ್ತದ ಆದಾಯದ ಹರಿವು ಕಂಡುಬಂದಿದೆ.

2014- 15ರಲ್ಲಿ ಇಂಧನ ಮಾರಾಟದಿಂದ ಕೇಂದ್ರಕ್ಕೆ ಬಂದ ಆದಾಯ 3, 32, 620 ಕೋಟಿ ರೂಪಾಯಿಗಳು (ಇದರಲ್ಲಿ ರಾಜ್ಯಗಳಿಗೆ ಸಿಕ್ಕ ಪಾಲು ಶೇ. 48. 27), 2015-16ರಲ್ಲಿ 4, 18, 652 ಕೋಟಿ (ಇದರಲ್ಲಿ ರಾಜ್ಯಗಳಿಗೆ ಹಂಚಿಕೆಯಾಗಿದ್ದು ಶೇ. 38. 27) ಹಾಗೂ 2016- 17 ಸಾಲಿನಲ್ಲಿ ಕೇಂದ್ರ ಸರಕಾರಕ್ಕೆ 5, 24, 304 ಕೋಟಿ ಆದಾಯ ಬಂದಿದೆ (ರಾಜ್ಯಗಳಿಗೆ ಶೇ. 36. 19 ಹಂಚಿಕೆಯಾಗಿದೆ). ಹೀಗೆ ಕಳೆದ ಮೂರು ವರ್ಷಗಳಲ್ಲಿ ಇಂಧನ ಮೂಲದ ಆದಾಯದಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ, ಅದೇ ವೇಳೆ ರಾಜ್ಯಗಳಿಗೆ ಹಂಚಿಕೆಯಾಗುವ ಪ್ರಮಾಣದಲ್ಲಿ ವ್ಯತ್ಯಾಸಗಳೇನೂ ಆಗಿಲ್ಲ.

ಇಷ್ಟಿದ್ದರೂ ಯಾಕೆ ಸರಕಾರ ಸಾಮಾನ್ಯ ಜನರ ಮೇಲೆ, ಮಧ್ಯಮ ವರ್ಗದ ಮೇಲೆ ಇಂಧನದ ಭಾರವನ್ನು ಹೇರುತ್ತಲೇ ಬರುತ್ತಿದೆ. ಒಂದು ಕಾರಣ, ಆದಾಯವನ್ನು ಕಳೆದುಕೊಳ್ಳುವ ಮನಸ್ಸು ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಇಲ್ಲದಿರಬಹುದು, ಎರಡು, ಹೇಗಿದ್ದರೂ ಜನ ಮೌನವಾಗಿಯೇ ಇಂಧನ ದರವನ್ನು ಭರಿಸುತ್ತಾ ‘ಅಚ್ಛೆ ದಿನ್‌’ ನಿರೀಕ್ಷೆಯಲ್ಲಿಯೇ ಕಳೆದುಹೋಗುತ್ತಾರೆ ಎಂಬ ಭರವಸೆ ಇರಬಹುದು, ಮೂರನೆಯದು, ಪ್ರತಿಪಕ್ಷಗಳು ಜನರನ್ನು ಇಂಧನ ಬೆಲೆ ವಿಚಾರದಲ್ಲಿ ಬೀದಿಗಳಿಸಲು ಸಶಕ್ತರಾಗಿಲ್ಲ ಎಂಬುದು ಸ್ಪಷ್ಟವಾಗಿರಬಹುದು.

ಒಟ್ಟಾರೆ, ನರೇಂದ್ರ ಮೋದಿ ನೇತೃತ್ವದ ಸರಕಾರ ಇಂಧನ ಬೆಲೆ ವಿಚಾರದಲ್ಲಿ ಜನರ ಮೇಲಿನ ಭಾರವನ್ನು ತಾನಾಗಿಯೇ ಇಳಿಸುವ ಇಚ್ಚಾಶಕ್ತಿ ತೋರಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ. ಸತತ ಹದಿನಾರು ದಿನಗಳ ಏರಿಕೆ ನಂತರ, ಬುಧವಾರ ಒಂದು ಪೈಸೆ ಇಳಿಸಿದ್ದು- ‘ಅಚ್ಛೆ ದಿನ್’ ಎಂಬುದು ಸುಲಭಕ್ಕೆ ಬರುವಂತದ್ದಲ್ಲ ಸ್ಪಷ್ಟ ಸಂದೇಶ ಅಷ್ಟೆ.