‘ತೂತುಕುಡಿ ಪೊಲೀಸ್‌ ಫೈರಿಂಗ್‌’: ಗುಂಡು ಹಾರಿಸುವಂತೆ ಆದೇಶಿಸಿದ್ದು ಯಾರು?
COVER STORY

‘ತೂತುಕುಡಿ ಪೊಲೀಸ್‌ ಫೈರಿಂಗ್‌’: ಗುಂಡು ಹಾರಿಸುವಂತೆ ಆದೇಶಿಸಿದ್ದು ಯಾರು?

ನ್ಯಾಯಕ್ಕಾಗಿ ಆಗ್ರಹಿಸಿದ ಜನರತ್ತ ಲಾಠಿ ಬೀಸಿ ಹಿಂಸೆ ಕೊಟ್ಟ ಆಡಳಿತ ವರ್ಗ, ಈಗ ಜನರ ವಿರುದ್ಧವೇ ಹತ್ತಾರು ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಿದೆ. ಇಡೀ ಜನ ಸಮೂಹವನ್ನು ತಪ್ಪಿತಸ್ತರನ್ನಾಗಿಸಿ, ಶಿಕ್ಷೆ ಕೊಡಿಸಲು ಮುಂದಾಗಿದೆ.

ಆರು ದಿನಗಳ ಹಿಂದೆ ತೂತುಕುಡಿಯಲ್ಲಿ ಪ್ರತಿಭಟನಾಕಾರರನ್ನು ತಡೆಗಟ್ಟವ ಸಲುವಾಗಿ ನೇಮಕಗೊಂಡಿದ್ದ ಪೊಲೀಸ್‌ ಸಿಬ್ಬಂದಿ ಸ್ಟೆರ್‌ಲೈಟ್‌ ತಾಮ್ರ ಘಟಕ ವಿರೋಧಿ ಹೋರಾಟಗಾರರತ್ತ ಗುಂಡು ಹಾರಿಸಿದ್ದರು. ಮೇ 22 ಮತ್ತು 23ರಂದು ನಡೆದ ಗುಂಡಿನ ದಾಳಿಗೆ 13 ಜನ ಹೋರಾಟಗಾರರು ಮೃತಪಟ್ಟಿದ್ದರು. ಈ ಕುರಿತು ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರಿಗೆ ಗುಂಡು ಹಾರಿಸಲು ಅನುಮತಿ ನೀಡಿದ್ದು ‘ತಹಸಿಲ್ದಾರರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ.

ಉಪ ತಹಸೀಲ್ದಾರ್‌ ಪಿ. ಶೇಖರ್‌ ಹೇಳುವ ಪ್ರಕಾರ, ಮೇ 22ರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ 10,000ಕ್ಕಿಂತಲೂ ಹೆಚ್ಚು ಪ್ರತಿಭಟನಾಕಾರರು ಮಾರಕ ಆಯುಧಗಳನ್ನು ಹಿಡಿದು ಬರುತ್ತಿದ್ದರು. ಪೊಲೀಸರ ಆದೇಶಗಳನ್ನು ಗಾಳಿಗೆ ತೂರಿ, ರಸ್ತೆಯ ಅಕ್ಕಪಕ್ಕದಲ್ಲಿದ ಸಾರ್ವಜನಿಕ ಆಸ್ತಿಗಳಗೆ ಹಾನಿ ಎಸಗುತ್ತಿದ್ದರು. ಜತಗೆ ಅವರ ಬಳಿ ಪೆಟ್ರೋಲ್‌ ಬಾಂಬ್‌ಗಳಿದ್ದವು.

ಇದನ್ನು ಗಮನಿಸಿದ ಉಪ ತಹಸೀಲ್ದಾರ್‌ ಪ್ರತಿಭಟನಾಕಾರರಿಗೆ ‘ನಿಮ್ಮ ಕಾನೂನುಬಾಹಿರ ಕೃತ್ಯಗಳನ್ನು ನಿಲ್ಲಿಸದಿದ್ದರೆ ಅಶ್ರುವಾಯು ದಾಳಿ ನಡೆಸುತ್ತೇವೆ’ ಎಂದು ಎಚ್ಚರಿಸಿದ್ದರು. ಜನ ಸೇರಿದ್ದ ಪ್ರದೇಶದಲ್ಲಿ ಸೆಕ್ಷನ್‌ 144 ಕೂಡ ಜಾರಿಯಾಗಿತ್ತು.

“ಪ್ರತಿಭಟನಾಕಾರರು ಮಾತು ಕೇಳದಿದ್ದಾಗ ಅಶ್ರುವಾಯುಗಳನ್ನು ಸಿಡಿಸುವಂತೆ ಸೂಚಿಸಿದೆ. ಆಗಲೂ ಕೂಡ ಸುಮ್ಮನಾಗದ ಜನ ಹಿಂಸೆಗಿಳಿದರು. ಪೊಲೀಸರ ಮೇಲೆ ಮಾರಕಾಸ್ತ್ರಗಳು ಮತ್ತು ಕ್ಲಲುಗಳಿಂದ ದಾಳಿ ನಡೆಸತೊಡಗಿದರು,” ಎಂದು ಉಪ ತಹಸೀಲ್ದಾರ್‌ ಪಿ.ಶೇಖರ್‌ ತಮ್ಮ ದೂರು ಪ್ರತಿಯಲ್ಲಿ ತಿಳಿಸಿದ್ದಾರೆ.

ಮುಂದುವರಿದು, “ಸಮವಸ್ತ್ರದಲ್ಲಿರುವ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಬೇಕು ಎನ್ನುವುದು ಪ್ರತಿಭಟನಾಕಾರರ ನಡೆಯಾಗಿತ್ತು. ನೀವು ಚದುರದೇ ಹೀಗೆ ಹಿಂಸೆಯನ್ನು ಮುಂದುವರೆಸಿದರೆ ಗುಂಡಿನ ದಾಳಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಲಾಯಿತು. ಆದರೆ ಪ್ರತಿಭಟನಾಕಾರರು ಸಾರ್ವಜನಿಕರ ಜೀವಗಳಿಗೆ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಕಾರಕವಾಗತೊಡಗಿದರು,” ಎನ್ನತ್ತಾರೆ ಪಿ.ಶೇಖರ್‌.

ಈ ಎಚ್ಚರಿಕೆಗಳ ನಂತರ ಗಾಳಿಯಲ್ಲಿ ಗುಂಡು ಹಾರಿಸುವಂತೆ ಪೊಲೀಸರಿಗೆ ಸೂಚಿಸಲಾಯಿತು. ಗುಂಡು ಹಾರಿಸಿದರೂ ಕೂಡ ಪ್ರತಿಭಟನಾಕಾರರು ಮಾತು ಕೇಳದೆ ಆಸ್ತಿಪಾಸ್ತಿಗೆ ಹಾನಿ ಮಾಡಲು ಮುಂದಾದಾಗ ಜನರನ್ನು ಚದುರಿಸಲು ಗುಂಡು ಹಾರಿಸಬೇಕಾಯಿತು ಎಂದು ಉಪ ತಹಸೀಲ್ದಾರ್‌ ಪಿ.ಶೇಖರ್‌ ದೂರು ಪತ್ರದಲ್ಲಿ ತಿಳಿಸಿದ್ದಾರೆ.

ತೂತುಕುಡಿಯಲ್ಲಿ ಪ್ರತಿಭಟನೆಯ ವೇಳೆ ನೆರೆದಿದ್ದ ಜನಸಾಗರ.
ತೂತುಕುಡಿಯಲ್ಲಿ ಪ್ರತಿಭಟನೆಯ ವೇಳೆ ನೆರೆದಿದ್ದ ಜನಸಾಗರ.

ಉಪ ತಹಸೀಲ್ದಾರ್‌ ಗುಂಡು ಹಾರಿಸಲು ಆದೇಶೀಸಬಹುದೆ?:

ಕಳೆದ ವಾರ ಇದೇ ಪ್ರಶ್ನೆ ಎಲ್ಲೆಡೆ ಕೇಳಿ ಬಂದಿತ್ತು. ಗುಂಡು ಹಾರಿಸಲು ಆದೇಶಿಸಿದವರು ಯಾರು ಎಂದು ಜನ ಪ್ರಶ್ನಿಸತೊಡಗಿದ್ದರು. ರಿಪಬ್ಲಿಕ್‌ ಟಿವಿ ನಡೆಸಿದ ಕುಟುಕು ಕಾರ್ಯಾಚರಣೆಯ ವೇಳೆ ಪೊಲೀಸ್‌ ಅಧೀಕ್ಷಕ ಪಿ.ಮಹೇಂದ್ರನ್‌, ಗುಂಡು ಹಾರಿಸಲು ಆದೇಶಿಸಿದ್ದು ‘ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌’ ಎಂದಿದ್ದರು.

ಕಾನೂನು ತಜ್ಞರು ಹೇಳುವ ಪ್ರಕಾರ ಮ್ಯಾಜಿಸ್ಟ್ರೇಟ್‌ ಅಥವಾ ಮ್ಯಾಜಿಸ್ಟ್ರೇಟ್‌ರಷ್ಟೇ ಅಧಿಕಾರ ಹೊಂದಿರುವ ಇತರರು ಗುಂಡಿನ ದಾಳಿ ನಡೆಸಲು ಆದೇಶ ನೀಡಬಹುದು.

‘ದಿ ನ್ಯೂಸ್‌ ಮಿನಿಟ್‌’ ಪತ್ರಿಕೆಯ ಜತೆ ಮಾತನಾಡುವಾಗ “ಕ್ರಿಮಿನಲ್‌ ಕಾಯ್ದೆಯ ಪ್ರಕಾರ, ಮ್ಯಾಜಿಸ್ಟ್ರೇಟ್‌ ಆಗಿರುವವರು ಕಲೆಕ್ಟರರಿಗೆ, ಪ್ರಾದೇಶಿಕ ಅಭಿವೃದ್ಧಿ ಅಧಿಕಾರಿಗಳಿಗೆ, ತಹಿಸೀಲ್ದಾರ್‌ ಅಥವಾ ವಲಯ ತಹಸೀಲ್ದಾರರಿಗೆ ಈ ಆದೇಶವನ್ನು ನೀಡಬಹುದು. ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಷ್ಟೇ ಗುಂಡು ಹಾರಿಸಲು ಆದೇಶಿಸಬಹುದು. ಈ ಆದೇಶವನ್ನು ಹೊರಡಿಸಲು ಹೆಚ್ಚಿನ ಸಮಯದ ಅಗತ್ಯವೂ ಇಲ್ಲ,” ಎನ್ನತ್ತಾರೆ ಮದ್ರಾಸ್‌ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಕೆ. ಚಂದ್ರು.

ಮಾಜಿ ಐಎಎಸ್‌ ಅಧಿಕಾರಿ ಎಮ್‌. ಜಿ. ದೇವಸಹಾಯಂ ‘ದಿ ನ್ಯೂಸ್‌ ಮಿನಿಟ್‌’ ಪತ್ರಿಕೆಯೊಂದಿಗೆ ಮಾತನಾಡಿ, ಉಪ ತಹಸೀಲ್ದಾರರ ಹುದ್ದೆಯಲ್ಲಿರುವವರಿಗೆ ಗುಂಡು ಹಾರಿಸುವಂತೆ ಆದೇಶಿಸುವ ಅಧಿಕಾರವಿಲ್ಲ ಎಂದಿದ್ದಾರೆ.

“ನನ್ನ ಅಧಿಕಾರಾವಧಿಯಲ್ಲಿ ಉಪ ತಹಸೀಲ್ದಾರರೊಬ್ಬರು ಇಂತಹ ಆದೇಶವನ್ನು ಹೊರಡಿಸಿದ ಯಾವ ಸನ್ನಿವೇಶಗಳನ್ನೂ ನಾನು ಕಂಡಿಲ್ಲ. ಈ ಸಂಧರ್ಭದಲ್ಲಿ ಸರಕಾರ ಅದೇಶ ಹೊರಡಿಸಿದೆಯೇ ಎನ್ನುವುದನ್ನು ನಾವು ಗಮನಿಸಬೇಕಿದೆ,” ಎಂದು ‘ದಿ ನ್ಯೂಸ್‌ ಮಿನಿಟ್‌’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಾರ್ವಜನಿಕರ ವಿರುದ್ಧ ಎಫ್‌ಐಆರ್‌:

ಘಟನೆಗೆ ಸಂಬಂಧಿಸಿದ ಸಾರ್ವಜನಿಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸಾರ್ವಜನಿಕರ ಪರವಾಗಿರಬೇಕಿದ್ದ ಎಫ್‌ಐಆರ್‌ ಸಾರ್ವಜನಿಕರ ವಿರುದ್ಧ ನಿಂತಿದೆ.

“ಎಫಐಆರ್‌ನಲ್ಲಿನ ಬರಹವೇ ಅಸಮರ್ಥನೀಯ. ಪೊಲೀಸ್‌ ಗುಂಡಿಗೆ ಬಲಿಯಾದ 13 ಜನರಿಗೆ ಸಂಬಂಧಿಸಂತೆ ಏನನ್ನೂ ಹೇಳಲಾಗಿಲ್ಲ. ಎನ್‌ಕೌಂಟರ್‌ ನಡೆಸಿದ ಸಂಧರ್ಭದಲ್ಲಿ ಸೆಕ್ಷನ್‌ 302ರ ಅಡಿಯಲ್ಲಿ ಕೇಸು ದಾಖಲಿಸಬಹುದು. ಆದರೆ ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿಲ್ಲ,” ಎನ್ನುತ್ತಾರೆ ಎಮ್‌. ಜಿ. ದೇವಸಹಾಯಂ.

ಮುಂದುವರಿದು, “ಕನಿಷ್ಟ ಪಕ್ಷ ಸೆಕ್ಷನ್‌ 304(ಕೊಲೆಗೆ ಒಳಪಡುವಂತ ಅಪರಾಧ ನಡೆಸದ ವ್ಯಕ್ತಿಗೆ ಶಿಕ್ಷೆ) ಆದರೂ ಎಫ್‌ಐಆರ್‌ ಒಳಗಿರಬೇಕಿತ್ತು,”ಎಂದು ಎಮ್‌.ಜಿ.ದೇವಸಹಾಯಂ ಹೇಳುತ್ತಾರೆ.

ಎಫ್‌ಐಆರ್‌ ದಾಖಲೆ ‘ಮಾರಕವೆನಿಸಿದ ಜನರ ಗುಂಪಿ’ನ ವಿರುದ್ಧ ಮಾತನಾಡುತ್ತ, ‘ಸಾರ್ವಜನಿಕ ಹಿತಾಸಕ್ತಿ’ ಎಂದು ಬಿಂಬಿಸಿಕೊಳ್ಳುತ್ತಿದೆ ಎನ್ನುತ್ತದೆ ‘ದಿ ನ್ಯೂಸ್‌ ಮಿನಿಟ್‌’ ಸುದ್ದಿ ಸಂಸ್ಥೆ.

ಎಫ್‌ಐಆರ್‌ನಲ್ಲಿ ಸೆಕ್ಷನ್‌ 147(ಗಲಭೆ), 148(ಗಲಭೆ ಮತ್ತು ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವುದು), 188(ಸಾರ್ವಜನಿಕರ ಆದೇಶಕ್ಕೆ ಅಸಹಾಕಾರ ಸೂಚಿಸುವುದು), 353(ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ಮೇಲೆ ದಾಳಿ ನಡೆಸುವುದು), 323(ಸ್ವಯಂಪ್ರೇರಣೆಯಿಂದ ಹಾನಿ ಮಾಡುವುದು), 324(ಸ್ವಯಂ ಪ್ರೇರಣೆಯಿಂದ ಮಾರಣಾಂತಿಕ ಅಸ್ತ್ರಗಳನ್ನು ಬಳಸಿ ಹಾನಿ ಮಾಡುವುದು), 436(ಬೆಂಕಿ ಅಥವಾ ಸ್ಪೋಟಕ ವಸ್ತುವಿನಿಂದ ಕೇಡು ಉಂಟುಮಾಡುವುದು), 307(ಕೊಲೆ ಪ್ರಯತ್ನ), ಹಾಗೂ 506(ಕ್ರಿಮಿನಲ್‌ ಬೆದರಿಕೆ)ಗಳನ್ನು ಸೇರಿಸಲಾಗಿದೆ. ಇದಷ್ಟೇ ಅಲ್ಲದೇ ಪ್ರತಿಭಟನಾಕಾರರ ವಿರುದ್ಧ ತಮಿಳುನಾಡು ಸಾರ್ವಜನಿಕ ಆಸ್ತಿ ಕಾಯ್ದೆ ಮತ್ತು ಸ್ಪೊಟಕ ವಸ್ತು ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

Also read: ವೇದಾಂತ ಒಡೆತನದ ಸ್ಟೆರ್ಲೈಟ್‌ ಕಾರ್ಖಾನೆ ಶಾಶ್ವತವಾಗಿ ಮುಚ್ಚಲು ತಮಿಳುನಾಡು ಆದೇಶ

ಸುಳ್ಳಿನ ಮೇಲೆ ಸುಳ್ಳುಗಳು:

ಹೋರಾಟವನ್ನು ಹತ್ತಿರದಿಂದ ಕಂಡ ಪ್ರತಿಭಟನಾಕಾರರು ಹೇಳುವ ಪ್ರಕಾರ, ಯಾವ ಹೋರಾಟಗಾರರೂ ಕೂಡ ಮೆರವಣಿಗೆಯ ವೇಳೆ ಮಾರಕಾಸ್ತ್ರಗಳನ್ನು ಹೊಂದಿರಲಿಲ್ಲ. ಎಚ್ಚರಿಕೆಯನ್ನೂ ಕೂಡ ನೀಡದೆ ಲಾಠಿ ಪ್ರಹಾರಕ್ಕೆ ಮುಂದಾದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲುಗಳನ್ನಷ್ಟೇ ಎಸೆದಿದ್ದರು.

ಜಿಲ್ಲಾಧಿಕಾರಿ ಕಚೇರಿಯ ಸಿಸಿ ಟಿವಿಗಳಲ್ಲಿ ದೊರೆತಿರುವ ವೀಡಿಯೋಗಳು ಪ್ರತಿಭಟನಾಕಾರರ ಹೇಳಿಕೆಯನ್ನೇ ಸಮರ್ಥಿಸುತ್ತವೆ. ಹತ್ತಾರು ಜನ ಪ್ರತಿಭಟನಾಕಾರರು ಕಚೇರಿಯತ್ತ ಕಲ್ಲು ಬೀಸಿದ್ದು ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಸ್ಥಳದಲ್ಲಿದ್ದ ‘ಪೀಪಲ್ಸ್‌ ವಾಚ್‌’ ತಂಡದ ಹೆನ್ರಿ ಹೇಳುವ ಪ್ರಕಾರ, ಜಿಲ್ಲಾ ಅಡಳಿತ ಅಥವಾ ಜಿಲ್ಲಾಧಿಕಾರಿ ಕಚೇರಿಯ ಮುಂದಿದ್ದ ಪೊಲೀಸರು ಯಾವುದೇ ಎಚ್ಚರಿಕೆಗಳನ್ನು ನೀಡಿರಲಿಲ್ಲ. ಉಪ ತಹಸೀಲ್ದಾರ್‌ ನೀಡಿರುವ ಹೇಳಿಕೆಗಳೆಲ್ಲಾ ಸುಳ್ಳು. ಯಾವ ಆದೇಶವೂ ಕೂಡ ಇಲ್ಲದೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ನ್ಯಾಯಕ್ಕಾಗಿ ಆಗ್ರಹಿಸಿದ ಜನರತ್ತ ಲಾಠಿ ಬೀಸಿ ಹಿಂಸೆ ಕೊಟ್ಟ ಆಡಳಿತ ವರ್ಗ, ಈಗ ಜನರ ವಿರುದ್ಧವೇ ಹತ್ತಾರು ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಿದೆ. ಇಡೀ ಜನ ಸಮೂಹವನ್ನು ತಪ್ಪಿತಸ್ತರನ್ನಾಗಿಸಿ, ಶಿಕ್ಷೆ ಕೊಡಿಸಲು ಮುಂದಾಗಿದೆ.