ಸಿದ್ದು ನ್ಯಾಮಗೌಡ ರಾಜಕಾರಣಿ ಮಾತ್ರ ಅಲ್ಲ, ‘ಕ್ರೌಡ್‌ ಫಂಡಿಂಗ್‌’ ಕಲ್ಪನೆ ಕೊಟ್ಟ ನಾಯಕ ಕೂಡ!
COVER STORY

ಸಿದ್ದು ನ್ಯಾಮಗೌಡ ರಾಜಕಾರಣಿ ಮಾತ್ರ ಅಲ್ಲ, ‘ಕ್ರೌಡ್‌ ಫಂಡಿಂಗ್‌’ ಕಲ್ಪನೆ ಕೊಟ್ಟ ನಾಯಕ ಕೂಡ!

ಕ್ರೌಡ್‌ ಫಂಡಿಂಗ್‌ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಆದರೆ ಕರ್ನಾಟಕದಲ್ಲಿ 1980ರ ದಶಕದಲ್ಲೆ ಕ್ರೌಡ್‌ ಫಂಡಿಂಗ್‌ ಪ್ರಯೋಗವೊಂದು ನಡೆದಿತ್ತು. ಜನರೇ ನೀಡಿದ ಹಣದಿಂದ ಜಲಾಶಯ ನಿರ್ಮಾಣಗೊಂಡಿತ್ತು. 

‘ಕ್ರೌಡ್‌ ಫಂಡಿಂಗ್‌’- ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಪದ. ಬೀದಿ ಬದಿಯಲ್ಲಿ ಗಣೇಶ ಕೂರಿಸುವುದರಿಂದ ಹಿಡಿದು ದೊಡ್ಡ ಬಜೆಟ್‌ನ ಚಿತ್ರ ಚಲನಚಿತ್ರ ನಿರ್ಮಾಣ ಮಾಡುವವರೆಗೆ, ಆನ್‌ಲೈನ್‌ ಅಭಿಯಾನದಿಂದ ಹಣ ಕೂಡಿಸಿ ಚಿಕ್ಕ ಮಗುವಿನ ಪ್ರಾಣ ಉಳಿಸುವುದರಿಂದ ಹಿಡಿದು ದೊಡ್ಡ ಕಂಪನಿಯೊಂದನ್ನು ತೆರೆಯುವವರೆಗೆ ಕ್ರೌಡ್‌ ಫಂಡಿಂಗ್‌ ತನ್ನ ಬಾಹುಗಳನ್ನು ಹರಡಿನಿಂತಿದೆ.

ಚೆನ್ನೈನಲ್ಲಿ ಇದೇ ರೀತಿ ಕ್ರೌಂಡ್‌ ಫಂಡಿಂಗ್‌ ಮಾಡಿ 4 ವರ್ಷದ ಬಾಲಕಿಯೊಬ್ಬಳ ಜೀವ ಉಳಿಸಿಲಾಗಿತ್ತು. ವಾರ್ಧಾ ಚಂಡಮಾರುತದಿಂದ ಕಂಗೆಟ್ಟಿದ್ದ ಹಲವಾರು ಮಂದಿಯನ್ನು ಇದೇ ಕ್ರೌಡ್‌ ಫಂಡಿಂಗ್‌ ಕೈಹಿಡಿದಿತ್ತು. ಜನರಿಂದ 20 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದ ತಂದೆ ತನ್ನ ಮಗಳ ಜೀವ ಉಳಿಸಿದ್ದ. ಕನ್ನಡದಲ್ಲಿ ‘ಮರೆಯಲಾರೆ’, ‘ಫಿಕ್ಷನ್‌’ ಎಂಬ ಚಲನಚಿತ್ರಗಳು ಕ್ರೌಡ್‌ ಫಂಡಿಂಗ್‌ ಮೂಲಕವೇ ನಿರ್ಮಾಣದ ಕನಸು ಹೊತ್ತವು. ಖ್ಯಾತ ಲೇಖಕಿ ಶರ್ಮಿನ್‌ ಅಲಿ ತಮ್ಮ ಪುಸ್ತಕ ಪ್ರಕಟಣೆಗಾಗಿ ಕ್ರೌಡ್‌ ಫಂಡಿಗ್‌ನ ಮೊರೆ ಹೋಗಿದ್ದರು. ಪುಸ್ತಕ ಮಾರಾಟದಿಂದ ಬರುವ ಲಾಭವನ್ನು ಮಹಿಳಾ ಸಬಲೀಕರಣಕ್ಕೆ ಮೀಸಲಿಡುವುದಾಗಿ ತಿಳಿಸಿದ್ದರು.

Also read: ‘ಕ್ರೌಡ್ ಫಂಡಿಂಗ್’ ಮೂಲಕ ನಾಲ್ಕು ವರ್ಷದ ಬಾಲಕಿಯ ಜೀವ ಉಳಿಸಲು ನೆರವಾದ ಸಾಫ್ಟ್‌ವೇರ್‌ ಎಂಜಿನಿಯರ್

ಇವೆಲ್ಲವೂ ಕೂಡ 21ನೇ ಶತಮಾನದಲ್ಲಿ ಕಾಣಿಸಿಕೊಂಡ ಬೆಳವಣಿಗೆಗಳು. ಇತ್ತೀಚಿನ ದಿನಗಳಲ್ಲಿ ಕ್ರೌಡ್‌ ಫಂಡಿಂಗ್‌ ಬಿರುಸು ಪಡೆದುಕೊಂಡು ಸಾಗುತ್ತಿದೆ.

ಆದರೆ ಕರ್ನಾಟಕದಲ್ಲಿ 1980ರ ದಶಕದಲ್ಲಿ ಇದೇ ಕ್ರೌಡ್‌ ಫಂಡಿಂಗ್‌ ತತ್ವದ ಅಡಿಯಲ್ಲಿ ಸುಮಾರು ಹಳ್ಳಿಗಳ ಜನಸಮುದಾಯ ಒಟ್ಟಾಗಿ ನಿಂತಿತ್ತು. ತಮ್ಮದೇ ಹಣವನ್ನು ಹಾಕಿ, ತಾವೇ ಹಾರೆ-ಗುದ್ದಲಿಯನ್ನಿಡಿದು ಮಣ್ಣನ್ನು ಅಗೆದು, ಗೋಡೆ ಕಟ್ಟಿ ನದಿ ನೀರು ನಿಲ್ಲಿಸಲು ಮುಂದಾಗಿತ್ತು. ಪರಿಣಾಮವಾಗಿ ಇಂದು 3 ಲಕ್ಷಕ್ಕೂ ಹೆಚ್ಚು ಜನ ಕುಡಿಯುವ ನೀರು ಪಡೆಯುತ್ತಿದ್ದಾರೆ. ಇದೆಲ್ಲದ್ದಕ್ಕೂ ನೇತೃತ್ವ ವಹಿಸಿದ್ದು ಸೋಮವಾರ ಬೆಳಗ್ಗೆ ರಸ್ತೆ ಅಫಘಾತದಲ್ಲಿ ಮೃತಪಟ್ಟ ಜಮಖಂಡಿಯ ಶಾಸಕ ಸಿದ್ದು ನ್ಯಾಮಗೌಡ.

ಕೃಷ್ಣಾ ನದಿಗೆ ಬ್ಯಾರೇಜ್‌ ಕಟ್ಟಿ ನೀರು ನಿಲ್ಲಿಸಿದ ಸಿದ್ದು ನ್ಯಾಮಗೌಡ ‘ಬ್ಯಾರೇಜ್‌ ಸಿದ್ದು’ ಎಂದೇ ಹೆಸರಾಗಿದ್ದರು. ಸಹಕಾರ ತತ್ವದ ಅಡಿಯಲ್ಲಿ ಸಹಸ್ರಾರು ಎಕರೆ ಕೃಷಿ ಭೂಮಿಗೆ ನೀರು ಹರಿಸಿದ್ದರು.

ಜನರ ಸಹಕಾರದಿಂದ ‘ಶ್ರಮಬಿಂದು ಸಾಗರ’ ನಿರ್ಮಾಣ:

ಅದು 1983ರ ಕಾಲಘಟ್ಟ. ವಿಜಯಪುರ ಜಿಲ್ಲೆಯ ಜನರು ಸತತ ಬರಗಾಲದಿಂದ ಬೆಂದುಹೋಗಿದ್ದರು. ಕುಡಿಯುವ ನೀರೀಗೂ ತಾತ್ಸಾರ ಉಂಟಾಗಿತ್ತು. ಪಕ್ಕದಲ್ಲೇ ಕೃಷ್ಣಾ ನದಿ ಹರಿಯುತ್ತಿತ್ತಾದರೂ ಅಗತ್ಯಕ್ಕೆ ತಕ್ಕಷ್ಟು ನೀರು ಸಿಗುತ್ತಿರಲಿಲ್ಲ.

ಆ ಸಮಯದಲ್ಲಿ ಇನ್ನೂ ಯುವಕರಾಗಿದ್ದ ಸಿದ್ದು ನ್ಯಾಮಗೌಡ ಕೃಷ್ಣ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಿಸುವಂತೆ ಅಂದಿನ ಜನತಾ ಪಕ್ಷ ಸರಕಾರದ ಮೊರೆ ಹೋಗಿದ್ದರು. ಆ ದಿನದಂದು ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಬಿರುದು ತಮ್ಮದಾಗಿಸಿಕೊಂಡಿದ್ದ ರಾಮಕೃಷ್ಣ ಹೆಗಡೆಯವರು ಸಿದ್ದು ನ್ಯಾಮಗೌಡರ ಬೇಡಿಕೆ ಬಗ್ಗೆ ತಲೆಕಡೆಸಿಕೊಂಡಿರಲಿಲ್ಲ. ಯೋಜನೆಗೆ ಒಟ್ಟು 2.5 ಕೊಟಿ ಹಣ ಖರ್ಚಾಗಲಿದ್ದು, ಕಾಮುಗಾರಿ ಪೂರ್ಣಗೊಳ್ಳಲು 5 ವರ್ಷ ಸಮಯ ಹಿಡಿಯುತ್ತದೆ ಎಂದು ಸರಕಾರ ತಿಳಿಸಿತ್ತು. ಅದಾಗಲೇ ಬರದಿಂದ ಕಂಗೆಟ್ಟಿದ್ದ ಜನರಿಗೆ ಇನ್ನೂ ಕಾಯುವಷ್ಟು ತಾಳ್ಮೆ ಇರಲಿಲ್ಲ.

ಸಿದ್ದು ನ್ಯಾಮಗೌಡ ತಾವೇ ಮುಂದೆ ನಿಂತು ಜನರಿಂದಲೇ ಬ್ಯಾರೇಜ್‌ ನಿರ್ಮಾಣ ಮಾಡಿಸಬೇಕೆಂದು ಪಣ ತೊಟ್ಟರು. 1985ರಲ್ಲಿ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಿಸಲು ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದರು. ಅನುದಾನ ಪಡೆಯಲು ಮೊದಲು 5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಎಂದು ರಾಮಕೃಷ್ಣ ಹೆಗಡೆ ಸಿದ್ದು ನ್ಯಾಮಗೌಡರಿಗೆ ಸೂಚನೆಯನ್ನು ನೀಡಿದ್ದರು.

ಅಗಲಿದ ಶಾಸಕ ಸಿದ್ದು ನ್ಯಾಮಗೌಡ. 
ಅಗಲಿದ ಶಾಸಕ ಸಿದ್ದು ನ್ಯಾಮಗೌಡ. 

ರಾಮಕೃಷ್ಣ ಹೆಗಡೆಯವರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ್ದ ಸಿದ್ದು ನ್ಯಾಮಗೌಡ ಜನರಿಗೆ ಅಗತ್ಯವಿರುವ ಬ್ಯಾರೇಜ್‌ ಕಟ್ಟಲು ಜನರಿಂದಲೇ ಹಣ ಪಡೆಯಲು ಮುಂದಾಗಿದ್ದರು. ಜನರಿಂದ ಹಣ ಸಂಗ್ರಹಿಸುವ ಸಲುವಾಗಿ ‘ಕೃಷ್ಣಾ ತೀರ ರೈತಸಂಘ’ ಎಂಬ ರೈತಾಪಿ ಸಂಘಟನೆಗೆ ಮುನ್ನುಡಿ ಬರೆದರು.

ಮೊದಲಿಗೆ ಕೆಲವು ಸ್ಥಳೀಯ ರಾಜಕೀಯ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೂ ಸಿದ್ದು ನ್ಯಾಮಗೌಡ ತಮ್ಮ ಹಠವನ್ನು ಬಿಟ್ಟಿರಲಿಲ್ಲ. ಕೆಲವು ಹಳ್ಳಿಗಳು ಮುಳುಗಡೆಯಾಗುತ್ತವೆ ಎಂಬ ವಾದಕ್ಕೆ ಸಿದ್ದು ಸೊಪ್ಪು ಹಾಕಿರಲಿಲ್ಲ. ಹಲವು ಹಳ್ಳಿಗಳಿಗೆ ನೀರುಣಿಸುವ ಯೋಚನೆ ಅವರದಾಗಿತ್ತು. ಎದುರಾದ ಎಲ್ಲಾ ಸಮಸ್ಯೆಗಳನ್ನು ಸಿದ್ದು ನ್ಯಾಮಗೌಡ ಗಟ್ಟಿಯಾಗಿಯೇ ಎದುರಿಸುತ್ತಾ ಬಂದಿದ್ದರು.

ಅಂದು ಜನರಿಗೆ ನೀರು ಬೇಕಾಗಿತ್ತು. ಜನರಿಂದಲೇ ದುಡ್ಡು ಪಡೆದು, ಅದನ್ನು ಜನರಿಗೇ ವಿನಿಯೋಗಿಸಲು ಸಿದ್ದು ನ್ಯಾಮಗೌಡ ಮುಂದಾಗಿದ್ದರು. ಬ್ಯಾರೇಜ್‌ ಕಟ್ಟಲು ಬೇಕಾದ ಹಣ ಹಾಗೂ ಶ್ರಮವನ್ನು ಕೂಡಿಸಲು ಮುಂದಾಗಿದ್ದರು. ನಾವೆಲ್ಲರೂ ಅವರ ಜತೆಗೂಡಿದ್ದೆವು. ಕೆಲವು ತೊಡಕುಗಳು ಬಂದರೂ ಕೂಡ ಸಿದ್ದು ಹಿಡಿದ ಕಾರ್ಯ ಬಿಡಲಿಲ್ಲ. ಬ್ಯಾರೇಜ್‌ ನಿರ್ಮಾಣ ಕಾರ್ಯಕ್ಕೆ ನಾಯಕನಾಗಿ ನಿಂತು ಕೆಲಸ ಮಾಡಿದರು. 
ಎಂ. ಪಿ. ನಾಡಗೌಡ, ಜೆಡಿಯು ಹಿರಿಯ ಮುಂಖಂಡರು.

ತಮ್ಮ ಸಂಘಟನೆಯ ಹೆಸರನ್ನೇ ಮುಂದಿಟ್ಟು ಸಿದ್ದು ನ್ಯಾಮಗೌಡ ಜನರಲ್ಲಿ ದುಡ್ಡು ಕೇಳಲು ಮುಂದಾಗಿದ್ದರು. ಮೊದಲಿಗೆ ನೀರಸವಾಗಿದ್ದ ಜನರ ಪ್ರತಿಕ್ರಿಯೆ ಕೆಲ ದಿನಗಳಲ್ಲಿ ಸ್ವಲ್ಪ ವಿಶ್ವಾಸವನ್ನು ಗಳಿಸುವಂತೆ ಮಾಡಿತ್ತು. ಜಲಾಶಯ ನಿರ್ಮಾಣವಾದರೆ ಸುತ್ತಮುತ್ತಲಿನ 30 ಹಳ್ಳಿಗಳ ಜನರು ಇದರಿಂದ ನೀರಾವರಿ ಸೌಲಭ್ಯ ಪಡೆಯುತ್ತಿದ್ದರು. ಆ 30 ಹಳ್ಳಿಗಳ ಜನರ ಬಳಿಯೇ ಹೋಗಿ ಹಣ ಕೇಳಲು ಸಿದ್ದು ನ್ಯಾಮಗೌಡ ಮುಂದಾದರು.

‘ಹನಿ ಹನಿಗೂಡಿ ಹಳ್ಳವಾಯಿತು’:

ಒಂದು ಎಕರೆ ಭೂಮಿ ಇದ್ದವರು ಇಷ್ಟು ಹಣ, ಎರಡು ಎಕರೆಯಿರುವವರು ಇಷ್ಟು, ಜಾಸ್ತಿ ಭೂಮಿ ಇದ್ದವರು ಇಷ್ಟು ಎಂದು ಹಣವನ್ನು ನಿಗದಿಪಡಿಸಲಾಯಿತು. ದುಡ್ಡಿದ್ದವರು ಹಣ ನೀಡಿದರು. ಆದರೆ ಎಷ್ಟೋ ಜನರ ಬಳಿ ಹಣ ಇರಲಿಲ್ಲ. ಸಾಕಷ್ಟು ಜನ ಸಾಲ ಮಾಡಿ ದುಡ್ಡು ನೀಡಿದರು. ಮತ್ತೆ ಕೆಲವರು ತಮ್ಮ ಕೆಲವು ಆಸ್ತಿಪಾಸ್ತಿಗಳನ್ನು ಮಾರಿ ದುಡ್ಡು ಕೊಟ್ಟರು. ಕೆಲವರು 20 ರೂಪಾಯಿಗಳನ್ನು ಕೊಟ್ಟರೆ, ಕೆಲವರು 100 ರೂಪಾಯಿಗಳನ್ನು ಕೊಟ್ಟರು. ಮತ್ತೆ ಕೆಲವರು 500 ರೂಪಾಯಿಗಳನ್ನು ಕೊಟ್ಟರು. ಒಂದಷ್ಟು ಜನ ಜಮೀನನ್ನು ಮಾರಿ ಹಣ ಕೊಟ್ಟರೆ ಮತ್ತಷ್ಟು ಜನ ಜಮೀನನ್ನೇ ಜಲಾಶಯಕ್ಕಾಗಿ ಬಿಟ್ಟುಕೊಟ್ಟರು. ಒಂದು ವಾರದೊಳಗೆ 30 ಹಳ್ಳಿಗಳ ಜನರಿಂದ ಒಟ್ಟು 18 ಲಕ್ಷ ಹಣ ಸಂಗ್ರಹಗೊಂಡಿತ್ತು. ಸಹಕಾರಿ ಪರಿಶ್ರಮದ ಫಲ ಮೊದಲಿಗೆ ಕಣ್ಮುಂದೆ ಕಂಡಿತ್ತು.

ಯಾವಾಗ ಜನರೇ ಮುಂದೆ ಬಂದು ಹಣ ನೀಡಿ, ಜಲಾಶಯ ಕಟ್ಟಲು ಅಡಿಗಲ್ಲು ಹಾಕಿದರೋ ಆಗ ಬೆಳಗಾವಿ ಜಿಲ್ಲಾ ಪರಿಷತ್‌ ಅಧ್ಯಕ್ಷ ಅಮರಸಿಂಹ ಪಾಟೀಲ್‌ ಬ್ಯಾರೇಜ್‌ ನಿರ್ಮಾಣಕ್ಕಾಗಿ 5 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದರು. ಕಪಾರ್ಟ್‌ ಯೋಜನೆಯ ಅಡಿಯಲ್ಲಿ ಕೇಂದ್ರ ಸರಕಾರ ಜಲಾಶಯ ಕಟ್ಟಲು 28 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿತು.

ಎಲ್ಲರಿಂದಲೂ ದೊರೆತ ಹಣವನ್ನು ಒಟ್ಟಗೂಡಿಸಿದ ಸಿದ್ದು ನ್ಯಾಮಗೌಡ, ಬ್ಯಾರೇಜ್‌ ಕಟ್ಟಲು ಮುಂದಾಗಿದ್ದರು. ನಗರಗಳಲ್ಲಿದ್ದ ಇಂಜಿನಿಯರ್‌ಗಳು ತಾವೇ ಸ್ವತಃ ಮುಂದೆ ಬಂದು ಬ್ಯಾರೇಜ್‌ನ ರೂಪುರೇಶೆಗಳನ್ನು ಹಾಕಿಕೊಟ್ಟರು. ಹಳ್ಳಿಯ ಜನರೇ ಗುದ್ದಲಿ, ಪಿಕಾಸಿ ಹಿಡಿದು ಜಲಾಶಯದ ನಿರ್ಮಾಣಕ್ಕೆ ನಿಂತರು. ಒಟ್ಟು 11 ತಿಂಗಳ ಕಾಲ ಸಹಸ್ರಾರು ಜನ ಪರಿಶ್ರಮದ ಕಾರಣದಿಂದಾಗಿ ಸರಿಸುಮಾರು 90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಚಿಕ್ಕಪಡಸಲಗಿ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ 430 ಮೀಟರ್‌ ಉದ್ದ ಮತ್ತು 10.2 ಮೀಟರ್‌ ಎತ್ತರದ ತಡೆಗೋಡೆ ನಿರ್ಮಾಣಗೊಂಡಿತು. ಜನರ ಶ್ರಮದಿಂದ ನಿರ್ಮಾಣಗೊಂಡ ಜಲಾಶಯಕ್ಕೆ ‘ಶ್ರಮಬಿಂದು ಸಾಗರ’ ಎಮದು ಹೆಸರಿಡಲಾಯಿತು.

ಶ್ರಮ ಬಿಂದು ಸಾಗರದ ಚಿತ್ರ,
ಶ್ರಮ ಬಿಂದು ಸಾಗರದ ಚಿತ್ರ,

ಮಳೆಗಾಲದಲ್ಲಿ ಮಾತ್ರವೇ ತುಂಬಿ, ಕೆಲವು ದಿನಗಳ ಕಾಲ ಹರಿದು, ನಂತರ ಬತ್ತಿ ಹೋಗುತ್ತಿದ್ದ ಕೃಷ್ಣಾ ನದಿಯಲ್ಲಿ ನೀರು ನಿಲ್ಲುವಂತಾಯಿತು. ಸರಿ ಸುಮಾರು 4.3 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆ ಆಗತೊಡಗಿತು. ಸುತ್ತಮುತ್ತಲಿನ ಸರಿ ಸುಮಾರು 30 ಹಳ್ಳಿಗಳ 3 ಲಕ್ಷ ಜನರಿಗೆ ಕುಡಿಯುವ ನೀರು ದೊರೆಯಿತು. 70 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿತು. ಮೊದಲ ಬಾರಿಗೆ ದೇಶದಲ್ಲಿ ರೈತರ ಹಣದಲ್ಲಿ ಎದ್ದ ಮೊದಲ ಬ್ಯಾರೇಜ್‌, ರೈತಾಪಿ ವರ್ಗಕ್ಕೆ ಬೆಂಬಲವಾಗಿ ನಿಂತಿತ್ತು.

ಸಹಕಾರದ ಅಸ್ತಿತ್ವಕ್ಕೆ ಬಂದ ಜಮಖಂಡಿ ಶುಗರ್ಸ್‌:

ಅದುವರೆಗೂ ಮಳೆಗಾಲದಲ್ಲಿ ಮಾತ್ರವೇ ಬೆಳೆ ಕಾಣುತ್ತಿದ್ದ ಒಣಭೂಮಿಗೆ ಬಿರು ಬೇಸಿಗೆಯಲ್ಲಿಯೂ ನೀರು ಹರಿದು ಬರತೊಡಗಿತ್ತು. ವರ್ಷ ಪೂರ್ತಿ ರೈತರ ಭೂಮಿಗಳು ಹಸಿರಿನಿಂದ ನಳನಳಿಸತೊಡಗಿದ್ದವು. ಕಬ್ಬು, ಭತ್ತ ಸೇರಿದಂತೆ ಹೆಚ್ಚು ನೀರು ಬೇಡುವ ಬೆಳೆಗಳು ಕಾಣಿಸತೊಡಗಿದ್ದವು. ಕಬ್ಬು ಬೆಳೆ ಹೆಚ್ಚಾದಂತೆ ಕಬ್ಬಿನ ಬೆಲೆ ಕಡಿಮೆಯಾಗುತ್ತಾ ಸಾಗಿತ್ತು. ಆಗಲೂ ಕೂಡ ರೈತರಿಗೆ ನಷ್ಟವಾಗದಂತೆ ಬೆನ್ನೆಲುಬಾಗಿ ನಿಂತದ್ದು ಸಿದ್ದು ನ್ಯಾಮಗೌಡರು ಈ ಮೊದಲೇ ಅನುಸರಿಸಿದ್ದ ಸಹಕಾರಿ ತತ್ವ.

ಸಿದ್ದು ನ್ಯಾಮಗೌಡ ಒಡೆತನದ ಜಮಖಂಡಿ ಶುಗರ್ಸ್‌ ಕಾರ್ಖಾನೆ.
ಸಿದ್ದು ನ್ಯಾಮಗೌಡ ಒಡೆತನದ ಜಮಖಂಡಿ ಶುಗರ್ಸ್‌ ಕಾರ್ಖಾನೆ.

ತಮ್ಮದೇ ಭೂಮಿಯಲ್ಲಿ ಸಿದ್ದು ನ್ಯಾಮಗೌಡ ಜಮಖಂಡಿ ಶುಗರ್ಸ್‌ ಹೆಸರಿನ ಸಕ್ಕರೆ ಕಾರ್ಖಾನೆ ತೆರೆಯಲು ಮುಂದಾಗಿದ್ದರು. ಈ ಕಾರ್ಖಾನೆಗೆ ಅಗತ್ಯವಿದ್ದ ಬಂಡವಾಳವನ್ನು ಶೇರುಗಳ ರೂಪದಲ್ಲಿ ರೈತರಿಂದಲೇ ಪಡೆದರು. ದೂರದೂರಿಗೆ ಸಾಗಿ ಕಬ್ಬು ಮಾರಾಟ ಮಾಡಬೇಕಿದ್ದ ರೈತರಿಗೆ ಈಗ ಊರಿನ ಬಳಿಯಲ್ಲೇ ಕಬ್ಬು ಮಾರಲು ಅವಕಾಶವಾಗಿತ್ತು. ಜತೆಗೆ ಸಹಸ್ರಾರು ಮಂದಿಗೆ ಉದ್ಯೋಗವೂ ದೊರೆತಿತ್ತು.

ಹೀಗೆ, ಒಬ್ಬಂಟಿ ಪ್ರಯತ್ನಕ್ಕಿಂತ ಎಲ್ಲರೂ ಕೈಜೊಡಿಸದರೆ ಅಂದುಕೊಂಡದ್ದು ಸಾಧ್ಯವಾಗುತ್ತದೆ ಎನ್ನುವುದನ್ನು ಸಿದ್ದ ನ್ಯಾಮಗೌಡ ಸಾಧಿಸಿ ತೋರಿಸಿದ್ದರು. ಸಹಕಾರ ತತ್ವವನ್ನು ಅನುಸರಿಸಿ, ಇಡೀ ಒಂದು ತಾಲೂಕಿನ ಚಿತ್ರಣವನ್ನೇ ಬದಲಾಯಿಸುವ ಕಾರ್ಯಕ್ಕೆ ನೇತೃತ್ವವನ್ನು ವಹಿಸಿದ್ದರು. ಅವರ ಮತ್ತು ಅವರೊಟ್ಟಿಗೆ ಕೈಜೋಡಿಸಿದ ಸಹಸ್ರಾರು ಜನರ ಶ್ರಮ ಫಲವಾಗಿ ಬಾಗಲಕೋಟೆ ತಾಲೂಕಿನ ಜಮಖಂಡಿ ತಾಲೂಕು ಇಂದು ಹಸಿರಿನಿಂದ ನಳನಳಿಸುತ್ತಿದೆ.

ಇವತ್ತು ಇದನ್ನು ಸಾಧಿಸಿ ತೋರಿಸಿದ ಸಿದ್ದು ನ್ಯಾಮಗೌಡರು ನಮ್ಮನ್ನು ಅಗಲಿದ್ದಾರೆ. ಅವರು ಹಾಕಿಕೊಟ್ಟ ದಾರಿ ಹಾಗೂ ಅದನ್ನು ಈಡೇರಿಸಿಕೊಳ್ಳಲು ಬಳಸಿದ ಸಹಕಾರಿ ತತ್ವ ಭವಿಷ್ಯ ಭರವಸೆಯಾಗಿ ಕಾಣಿಸುತ್ತಿದೆ.