- ಸಾಂದರ್ಭಿಕ ಚಿತ್ರ
COVER STORY

ಪ್ರತಿಕ್ರಿಯೆ ನೀರಸ: ಬಂದ್‌ಗಳ ವಿಚಾರದಲ್ಲಿ ಬಿಜೆಪಿ ಸೋಲುತ್ತಿರುವುದೇಕೆ?

ಬಂದ್‌ಗಳ ವಿಚಾರ ಬಂದಾಗೆಲ್ಲಾ ಬಿಜೆಪಿ ವೈಫಲ್ಯ ಅನುಭವಿಸಿರುವುದೇ ಹೆಚ್ಚು. ಚುನಾವಣೆಯ ಸಂದರ್ಭದಲ್ಲಿ ಬಲಗೊಳ್ಳುವ ಬಿಜೆಪಿಯ ಸಂಘಟನಾ ಶಕ್ತಿ ಬಂದ್‌ಗಳ ವಿಚಾರಕ್ಕೆ ಬಂದಾಗ ಕಾಣುವುದಿಲ್ಲ ಏಕೆ?

ಬಿಜೆಪಿ ಕರೆ ನೀಡಿದ್ದ ಸೋಮವಾರದ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾನದ ಕಾರಣ ಬೆಂಗಳೂರು ಹೊರತು ಪಡಿಸಿ ರಾಜ್ಯಾದ್ಯಂತ ಬಂದ್ ನಡೆಸಲಾಗುವುದು ಎಂದು ಬಿಜೆಪಿ ಹೇಳಿತ್ತು. ಆದರೆ, ಬಿಜೆಪಿಯ ಬಂದ್‌ ಕರೆಗೆ ರಾಜ್ಯದ ಯಾವ ಭಾಗದಲ್ಲೂ ಉತ್ತಮ ಸ್ಪಂದನೆ ಸಿಕ್ಕಿಲ್ಲ.

ಇದೇ ಮೊದಲ ಬಾರಿಯಲ್ಲ, ಬಿಜೆಪಿ ಬಂದ್‌ಗೆ ಕರೆ ನೀಡಿದ್ದ ಸಂದರ್ಭದಲ್ಲೆಲ್ಲಾ ವೈಫಲ್ಯವನ್ನೇ ಕಂಡಿದೆ. ಚುನಾವಣೆಯ ಸಂದರ್ಭದಲ್ಲಿ ಸಂಘಟನೆಯ ಒಗ್ಗಟ್ಟು ತೋರುವ ಪಕ್ಷ ಬಿಜೆಪಿ ಬಂದ್‌, ಪ್ರತಿಭಟನೆಗಳ ವಿಚಾರದಲ್ಲಿ ಸೋತಿರುವುದೇ ಹೆಚ್ಚು.

ಬಿಜೆಪಿಯ ಸಂಸದರು, ಶಾಸಕರ ಪ್ರಾಬಲ್ಯ ಹೆಚ್ಚಾಗಿರುವ ಕೆಲ ಪ್ರದೇಶಗಳನ್ನು ಹೊರತು ಪಡಿಸಿ ಬಂದ್‌ ಬಿಸಿ ಬೇರೆಡೆಗೆ ತಟ್ಟಿಲ್ಲ. ಮಡಿಕೇರಿ, ಮೈಸೂರು, ಧಾರವಾಡ, ಯಾದಗಿರಿ, ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವ ಹಾಗೂ ಬಸ್‌ ಸಂಚಾರ ನಿಲ್ಲಿಸುವ ಯತ್ನ ನಡೆಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

Also read: ಬಿಜೆಪಿ ಬಂದ್‌ಗೆ ರೈತ ಸಂಘಟನೆಗಳಿಂದಲೇ ಸಿಗದ ಬೆಂಬಲ!

ಬಿಜೆಪಿಯ ಬಂದ್‌ ವೈಫಲ್ಯ:

ಬಿಜೆಪಿ ಬಂದ್‌ಗೆ ಕರೆ ನೀಡಿದ್ದ ಬಹುಪಾಲು ಸಂದರ್ಭದಲ್ಲಿ ಇಂಥ ವೈಫಲ್ಯಗಳನ್ನೇ ಕಂಡಿದೆ. ಸಂಘಟನೆಯ ಬಲವಿದ್ದರೂ ಬೀದಿಗಿಳಿದು ಹೋರಾಡುವ ಬಲ ಇತರರಿಗಿಂತ ಬಿಜೆಪಿಯಲ್ಲಿ ಕಡಿಮೆ ಎಂಬ ಮಾತಿದೆ. ಇದೇ ಕಾರಣಕ್ಕೆ ಬಿಜೆಪಿ ಬಂದ್‌ಗಳನ್ನು ಯಶಸ್ವಿಗೊಳಿಸಲು ವಿಫಲವಾಗುತ್ತಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

“ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ ಬಹುತೇಕ ಸಂದರ್ಭಗಳಲ್ಲಿ ಜನ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ನಡೆಸುತ್ತಾರೆ. ಬಂದ್‌ಗೆ ಕರೆ ನೀಡಿರುವ ಕಾರಣ ಗಟ್ಟಿಯಾಗಿದ್ದರೆ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳೂ ಕೂಡಾ ಬಂದ್‌ ಬೆಂಬಲಿಸುತ್ತವೆ. ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದರೆ ಅಂತಹ ಬಂದ್‌ ಬಹುತೇಕ ಯಶಸ್ವಿಯಾಗುತ್ತದೆ. ಆದರೆ, ಈಗ ಬಿಜೆಪಿ ಕರೆ ನೀಡಿರುವ ಬಂದ್‌ನ ಸ್ಥಿತಿಯೇ ಬೇರೆ ರೀತಿ ಇದೆ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಎಸ್. ಮಹದೇವ ಪ್ರಕಾಶ್‌.

“ಬಿಜೆಪಿಯ ಓಟ್‌ ಬ್ಯಾಂಕ್‌ ಹೆಚ್ಚಾಗಿರುವುದು ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದಲ್ಲಿ. ಬಿಜೆಪಿಯ ಸಂಘಟನೆಯ ಶಕ್ತಿ ಇರುವುದು ವೈಟ್‌ ಕಾಲರ್‌ ಜನರಲ್ಲಿ. ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವ ಈ ವೈಟ್‌ ಕಾಲರ್‌ ಜನ ಬಂದ್‌, ಪ್ರತಿಭಟನೆ ಸಂದರ್ಭದಲ್ಲಿ ಬೀದಿಗಿಳಿಯುವುದು ಕಡಿಮೆ. ಹೀಗಾಗಿಯೇ ಬಿಜೆಪಿಯ ಬಹುತೇಕ ಬಂದ್‌ಗಳು ಯಶಸ್ವಿಯಾಗುವುದಿಲ್ಲ” ಎಂಬುದು ಮಹದೇವ ಪ್ರಕಾಶ್‌ ಅವರ ಅಭಿಪ್ರಾಯ.

“ಬಹುತೇಕ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಬಂದ್‌ಗೆ ಕರೆ ನೀಡುತ್ತಾರಷ್ಟೇ. ಆ ಬಳಿಕ ಅವರು ಬೀದಿಗಿಳಿಯುವುದಿಲ್ಲ. ಬೀದಿಗಿಳಿಯುವ ನಾಯಕರು ಬಿಜೆಪಿಯಲ್ಲಿ ಕಡಿಮೆ. ಆದರೆ, ಕನ್ನಡ ಸಂಘಟನೆಗಳು ಬಂದ್‌, ಪ್ರತಿಭಟನೆಗೆ ಕರೆ ನೀಡಿದರೆ ಆ ಸಂಘಟನೆಗಳ ಮುಖಂಡರೇ ಮೊದಲು ಬೀದಿಗಿಳಿಯುತ್ತಾರೆ. ಆ ನಂತರ ಅವರೊಂದಿಗೆ ಜನ ಗುಂಪುಗೂಡುತ್ತಾರೆ. ಬಂದ್‌ ವಿಚಾರಕ್ಕೆ ಬಂದರೆ ಹೆಚ್ಚಿನ ಸಂದರ್ಭದಲ್ಲಿ ಇಂತಹ ಸಂಘಟನಾ ಶಕ್ತಿ ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಬಿಜೆಪಿ ಕರೆ ನೀಡುವ ಬಂದ್‌ಗಳು ಅವರ ನಿರೀಕ್ಷೆ ಮುಟ್ಟುವುದಿಲ್ಲ” ಎನ್ನುತ್ತಾರೆ ಅವರು.

“ಸದನದಲ್ಲಿ ಮಾತನಾಡಿದ್ದ ಯಡಿಯೂರಪ್ಪ ಸಾಲಮನ್ನಾ ಮಾಡದಿದ್ದರೆ ಮೊದಲು ರಾಜ್ಯಾಧ್ಯಂತ ಧರಣಿ ಮಾಡುತ್ತೇವೆ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿ ಒಂದು ವಾರದ ಬಳಿಕ ಬಂದ್‌ಗೆ ಕರೆ ನೀಡಿದ್ದರೆ ಆ ಹೊತ್ತಿಗೆ ಒಂದು ವಾತಾವರಣ ನಿರ್ಮಾಣವಾಗುತ್ತಿತ್ತು. ಸದನದಲ್ಲಿ ಏಕಾಏಕಿ ಬಂದ್‌ ಘೋಷಿಸಿ, ಬಳಿಕ ಬಿಜೆಪಿ ಬಂದ್‌ಗೆ ಕರೆ ನೀಡಿಲ್ಲ ಎಂದು ಹೇಳಿದ್ದು ಕೂಡಾ ಬಂದ್‌ ಬಿಸಿ ಕಾಣದಿರಲು ಕಾರಣ” ಎಂಬುದು ಅವರ ಮಾತು.

ತಣ್ಣಗಾಗಿದ್ದ ಮೀಸಲಾತಿ ವಿರೋಧಿ ಬಂದ್:

ಕೇಂದ್ರ ಸರಕಾರ ಎಸ್‌ಸಿ/ಎಸ್‌ಟಿ ಕಾಯ್ದೆ ದುರ್ಬಲಗೊಳಿಸುತ್ತಿದೆ ಎಂದು ದಲಿತ ಸಂಘಟನೆಗಳು ಏಪ್ರಿಲ್‌ 2ರಂದು ಭಾರತ್‌ ಬಂದ್‌ಗೆ ಕರೆ ನೀಡಿದ್ದವು. ಏಪ್ರಿಲ್‌ 2ರಂದು ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ದಲಿತರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. ಆದರೆ, ದಲಿತರ ಭಾರತ್‌ ಬಂದ್ ಹಾಗೂ ಮೀಸಲಾತಿ ವಿರೋಧಿಸಿ ಬಿಜೆಪಿ ಮುಖಂಡರು ಕರೆ ನೀಡಿದ್ದ ಏಪ್ರಿಲ್‌ 10ರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಿಜೆಪಿ ಕರೆ ನೀಡಿದ್ದ ಬಂದ್‌ ಯಶಸ್ವಿಯಾಗಿರಲಿಲ್ಲ.

ತಿಂಗಳ ಹಿಂದೆ ಭಾರತ್‌ ಬಂದ್‌ಗೆ ಕರೆ ನೀಡಿದ್ದ ಬಿಜೆಪಿ ರಾಷ್ಟ್ರಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿತ್ತು. ಈಗ ಕರ್ನಾಟಕ ಬಂದ್‌ಗೆ ಕರೆ ನೀಡಿ ಬಿಜೆಪಿ ಮತ್ತೊಮ್ಮೆ ಮುಜುಗರ ಅನುಭವಿಸುತ್ತಿದೆ. ಬಿಜೆಪಿಯ ಸೋಮವಾರದ ಬಂದ್ ವಿಫಲವಾಗಲು ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾನ ಒಂದು ಕಾರಣವಾಗಿದ್ದರೆ ಮತ್ತೊಂದು ಪ್ರಮುಖ ಕಾರಣ ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ವೈರುಧ್ಯದ ಹೇಳಿಕೆಗಳು.

ಕಳೆದ ಬುಧವಾರ ಸದನದಲ್ಲಿ ಮಾತನಾಡಿದ್ದ ಯಡಿಯೂರಪ್ಪ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಬಂದ್ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಶನಿವಾರದ ಹೊತ್ತಿಗೆ ಯಡಿಯೂರಪ್ಪ ನಿಲುವು ಬದಲಾಗಿತ್ತು. “ಬಿಜೆಪಿ ಬಂದ್‌ ಮಾಡುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದಂತೆ ನಡೆಯದಿದ್ದರೆ ರೈತರೇ ಬಂದ್‌ ಮಾಡುತ್ತಾರೆ ಎಂದು ಹೇಳಿದ್ದೆ” ಎನ್ನುವ ಮೂಲಕ ಯಡಿಯೂರಪ್ಪ ಬಂದ್‌ ಕಾವನ್ನು ತಣ್ಣಗೆ ಮಾಡಿದ್ದರು.

ಆದರೆ, ಬಂದ್‌ ಅವಕಾಶವನ್ನು ಬಿಟ್ಟುಕೊಡಲು ಉಳಿದ ರಾಜ್ಯ ಬಿಜೆಪಿ ಮುಖಂಡರು ಸಿದ್ಧರಿರಲಿಲ್ಲ. ಸೋಮವಾರ ಬಂದ್ ಮಾಡಿಯೇ ಸಿದ್ಧ ಎಂದು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಹೇಳಿಕೆ ನೀಡಿದರು. ಬೆಂಗಳೂರು ಹೊರತು ಪಡಿಸಿ ಕನಿಷ್ಠ ಬಿಜೆಪಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಾದರೂ ಬಂದ್‌ ನಡೆಸಬೇಕೆಂದು ಬಿಜೆಪಿಯ ಕೆಲ ಮುಖಂಡರು ಪಟ್ಟು ಹಿಡಿದರು. ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಮಾತುಗಳು ಈ ಮುಖಂಡರಿಗೆ ಬೇಕಾಗಿರಲಿಲ್ಲ.

ಒಂದು ಕಡೆ ಬಿಜೆಪಿ ಬಂದ್‌ಗೆ ಕರೆ ನೀಡಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದರೆ ಮತ್ತೊಂದು ಕಡೆ ಸೋಮವಾರ ಬಂದ್ ಮಾಡೇ ಮಾಡುತ್ತೇವೆ ಎಂದು ಬಿಜೆಪಿಯ ಕೆಲ ಶಾಸಕರು, ಸಂಸದರು ಟೊಂಕಕಟ್ಟಿ ನಿಂತರು. ಈ ವೈರುಧ್ಯವೂ ಸೋಮವಾರದ ಬಂದ್‌ ತಣ್ಣಗಾಗಲು ಕಾರಣ.

ಬಂದ್‌ಗೆ ಕರೆ ನೀಡುವ ಮುನ್ನಾ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದರೆ ಬಿಜೆಪಿ ಸ್ವಲ್ಪಮಟ್ಟಿಗಾದರೂ ಸೋಮವಾರದ ಬಂದ್‌ ಪ್ರಹಸನದ ಮುಜುಗರವನ್ನು ತಪ್ಪಿಸಿಕೊಳ್ಳಬಹುದಿತ್ತು. ರೈತರ ಸಾಲಮನ್ನಾಕ್ಕಾಗಿ ಕರೆ ನೀಡಿದ್ದ ಬಂದ್‌ಗೆ ರೈತ ಸಂಘಟನೆಗಳ ಬೆಂಬಲವೇ ಸಿಗದಿದ್ದುದು ಕೂಡಾ ಬಂದ್‌ ವಿಫಲವಾಗಲು ಪ್ರಮುಖ ಕಾರಣ.