2014- 2018: ನಾಲ್ಕು ವರ್ಷಗಳಲ್ಲಿ ಮೋದಿ ಹೇಳಿದ ಪ್ರಮುಖ ಸುಳ್ಳುಗಳಿವು! 
COVER STORY

2014- 2018: ನಾಲ್ಕು ವರ್ಷಗಳಲ್ಲಿ ಮೋದಿ ಹೇಳಿದ ಪ್ರಮುಖ ಸುಳ್ಳುಗಳಿವು! 

ಈ ನಾಲ್ಕು ವರ್ಷಗಳಲ್ಲಿ ಮೋದಿ ಪ್ರಧಾನಿ ಸ್ಥಾನದಲ್ಲಿ ಕುಳಿತು ಜನರಿಗೆ ಸುಳ್ಳುಗಳನ್ನು ಹೇಳಿದ್ದಾರೆ. ಅವರ ಸಾಧನೆಯನ್ನು ಮಣ್ಣುಮಾಡಲು ಇವೇ ಸಾಕಾಗುತ್ತವೆ. ಅವುಗಳ ಪಟ್ಟಿ ಇಲ್ಲಿದೆ. 

ಮುಂದಿನ ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವಲ್ಲಿ ಪ್ರಧಾನಿ ಮೋದಿ ತಮ್ಮ ನಾಲ್ಕು ವರ್ಷದ ಸಾಧನೆಗಳನ್ನು ದೇಶದ ಜನರ ಮುಂದಿಡುತ್ತಾ ಸಾಗುತ್ತಿದ್ದಾರೆ.  ಅದರ ಭಾಗವಾಗಿ ಈಗ ಅಡುಗೆ ಅನಿಲದ ಅಂಕಿ ಅಂಶಗಳನ್ನು ಜನರ ಮುಂದಿಟ್ಟಿದ್ದಾರೆ. 

ತಮ್ಮ 4 ವರ್ಷದ ಆಡಳಿತಾವಧಿಯಲ್ಲಿ ಒಟ್ಟು ದೇಶದ 10 ಕೋಟಿ ಜನರಿಗೆ ಅಡುಗೆ ಅನಿಲದ ಸೌಲಭ್ಯವನ್ನು ತಲುಪಿಸಲಾಗಿದೆ. ಈ ಮುಂಚೆ 6 ದಶಕಗಳ ಕಾಲ ಆಡಳಿತ ನಡೆಸಿದವರು 60 ವರ್ಷಗಳಲ್ಲಿ 13 ಕೋಟಿ ಜನರಿಗಷ್ಟೇ ಎಲ್‌ಪಿಜಿ ಸೌಲಭ್ಯ ಕಲ್ಪಿಸಿದ್ದಾರೆ ಎಂದಿದ್ದಾರೆ.

ಪ್ರಧಾನಿ ಮೋದಿ ನೀಡಿದ ಈ ಅಂಕಿ ಅಂಶಗಳನ್ನು ಕನ್ನಡದ ಮಾಧ್ಯಮವೊಂದು ತಪ್ಪಾಗಿ ಅರ್ಥೈಸಿಕೊಂಡಿದೆ. ಮೋದಿ ಹೇಳಿದ 10 ಕೋಟಿಯನ್ನು 10,000 ಕೊಟಿ ಎಂದು ತೋರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ.

2014- 2018: ನಾಲ್ಕು ವರ್ಷಗಳಲ್ಲಿ ಮೋದಿ ಹೇಳಿದ ಪ್ರಮುಖ ಸುಳ್ಳುಗಳಿವು! 

ಈ ತಪ್ಪು ಕನ್ನಡದ ಮಾಧ್ಯಮವೊಂದು ಮಾಡಿದ್ದು ಎನ್ನುವುದೇನೋ ನಿಜ. ಆದರೆ ಇಂತಹದ್ದೇ ಸುಳ್ಳುಗಳನ್ನು ಹೇಳುವಲ್ಲಿ ಮೋದಿ ಕೂಡ ಹಿಂದೆ ಬಿದ್ದಿಲ್ಲ. ತಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಸುಳ್ಳಿನ ಸರಮಾಲೆಯನ್ನೇ ಕಟ್ಟಿದ್ದಾರೆ.

ಕಪ್ಪು ಹಣ ಹೊಂದಿರುವ 100 ಜನ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದರಿಂದ ಹಿಡಿದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮೆಯಾಗುತ್ತದೆ ಎನ್ನುವವರೆಗೆ ಮಾದಿ ಹೇಳಿದ್ದು ಸುಳ್ಳು ಎನ್ನುವುದನ್ನು ಇತರರು ಸಾಬೀತು ಪಡಿಸುವ ಅಗತ್ಯ ಈಗಿಲ್ಲ.

ಇವಷ್ಟೇ ಅಲ್ಲದೇ ಇನ್ನೂ ನೂರಾರು ಸುಳ್ಳುಗಳನ್ನು ಮೋದಿ ದೇಶದ ಜನತೆಗೆ ಉಣಬಡಿಸಿದ್ದಾರೆ. ಕೆಲವರು ಕೆಲವನ್ನು ಬಯಲು ಮಾಡಿದ್ದಾರೆ ಕೂಡ. ಹೀಗೆ ಬಯಲಾದ ಸುಳ್ಳುಗಳ ಪೈಕಿ ಕೆಲ ಪ್ರಮುಖ ಸುಳ್ಳುಗಳು ಹೀಗಿವೆ.

ಫೆಬ್ರವರಿ ತಿಂಗಳಲ್ಲಿ ಮೇಘಾಲಯದಲ್ಲಿ ಮಾತನಾಡಿದ್ದ ಮೋದಿ ‘ನಮ್ಮ ಪಕ್ಷ ಧರ್ಮದ ಮೇಲೆ ರಾಜಕಾರಣ ನಡೆಸುವುದಿಲ್ಲ’ ಎಂದಿದ್ದರು. ಬಿಜೆಪಿ ರಾಜಕಾರಣ ನಡೆಸುತ್ತಿರುವುದು ಯಾವ ವಿಷಯವನ್ನಿಡಿದು ಎಂದು ಇಡೀ ದೇಶಕ್ಕೆ ತಿಳಿದಿರುವ ಸಮಯದಲ್ಲಿ ಮೋದಿ ಹೇಳಿದ್ದ ಈ ಸುಳ್ಳು ಅಪಹಾಸ್ಯಕ್ಕೆ ಗುರಿಯಾಗಿತ್ತು.

ಸ್ವತಂತ್ರೋತ್ಸವದ ಸಂಧರ್ಭದಲ್ಲಿ:

ಕಳೆದ ವರ್ಷ ಆಗಸ್ಟ್‌ 15ರಂದು ಕೆಂಪುಕೋಟೆಯಲ್ಲಿ ಮೋದಿ ನಡೆಸಿದ ಭಾಷಣ ಸುಳ್ಳುಗಳಿಂದಲೇ ತುಂಬಿತ್ತು. ಮೋದಿ ತಮ್ಮ ಭಾಷಣದ ಮಧ್ಯೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 1.25 ಲಕ್ಷ ಕೋಟಿ ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದರು. ಆದರೆ ಈ ಲೆಕ್ಕಾಚಾರ ಸುಳ್ಳು ಎಂದು ಸರಕಾರಿ ದಾಖಲೆಗಳೇ ತಿಳಿಸುತ್ತವೆ.

ಭಾಷಣದ ಮಧ್ಯೆ ಮೋದಿ ಅನಾಣ್ಯೀಕರಣದ ಕಾರಣದಿಂದಾಗಿ ಇದುವರೆಗೂ ಬ್ಯಾಂಕ್‌ ಖಾತೆಗೆ ಜಮೆಯಾಗದಿದ್ದ 3 ಲಕ್ಷ ಕೋಟಿ ಹಣ ಬ್ಯಾಂಕ್‌ ಖಾತೆಗಳಿಗೆ ಸೇರಿದೆ. ಅದರಲ್ಲಿ 2 ಲಕ್ಷ ಕೋಟಿ ಕಪ್ಪು ಹಣವಾಗಿದೆ. 1.75 ಲಕ್ಷ ಕೋಟಿ ಹಣದ ಕುರಿತು ತಪಾಸಣೆ ನಡೆಸಲಾಗುತ್ತಿದೆ ಎಂದಿದ್ದರು.

2 ಲಕ್ಷ ಕೋಟಿ ಕಪ್ಪು ಹಣವಾಗಿದ್ದರೆ ಅದಷ್ಟನ್ನೂ ಕೂಡ ತಪಾಸಣೆ ನಡೆಸಬೇಕಿತ್ತು. ಅದನ್ನು ಬಿಟ್ಟು 1.75 ಲಕ್ಷ ಕೋಟಿಯನ್ನು ಮಾತ್ರ ತಪಾಸಣೆ ನಡೆಸುತ್ತಾರೆ ಎಂದರೆ ಉಳಿದ 25 ಸಾವಿರ ಕೋಟಿಗಳ ಕತೆಯೇನು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಯೇ ಮೋದಿ ನೀಡಿದ ಹೇಳಿಕೆ ಸುಳ್ಳು ಎನ್ನುವುದನ್ನು ಸ್ಪಷ್ಟ ಪಡಿಸಿತ್ತು.

“2 ಕೋಟಿಗೂ ಹೆಚ್ಚು ಭಾರತದ ತಾಯಂದಿರು ಮತ್ತು ಸಹೋದರಿಯರು ಈಗ ಅಡುಗೆ ಅನಿಲವನ್ನು ಬಳಸುತ್ತಿದ್ದು, ಒಲೆಗಳ ಮುಂದೆ ಕಟ್ಟಿಗೆಯನ್ನು ಉರಿಸುತ್ತಿಲ್ಲ,” ಎಂದಿದ್ದರು ಮೋದಿ. ಆದರೆ ಸ್ರೋಲ್‌.ಇನ್‌ ಪತ್ರಿಕೆಯ ವರದಿ ಪ್ರಕಾರ ಭಾರತದಲ್ಲಿ ಉಚಿತ ಎಲ್‌ಪಿಜಿ ಕನೆಕ್ಷನ್‌ ಪಡೆದ ಬಹುಪಾಲು ಮಂದಿ ಹೊಸ ಸಿಲೆಂಡರ್‌ಗಳನ್ನು ಕೊಂಡು ಉಪಯೋಗಿಸಿಲ್ಲ.

“ಹೊಸ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಎರಡು ಪಟ್ಟು ವೇಗದಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿವೆ,” ಎಂದು ಮೋದಿ ದೇಶದ ನಾಗರೀಕರ ಮುಂದೆ ತಮ್ಮಸಾಧನೆಯನ್ನು ಬಿಂಬಿಸಿಕೊಂಡಿದ್ದರು. ಆದರೆ ಅದು ಸತ್ಯವಾಗಿರಲಿಲ್ಲ. ಭಾರತದಲ್ಲಿ ಅತಿಹೆಚ್ಚು ವೇಗದಲ್ಲಿ ರಸ್ತೆಗಳು ನಿರ್ಮಾಣಗೊಂಡಿದ್ದು 2012-2013ರ ಸಾಲಿನಲ್ಲಿ. ಸರಕಾರಿ ದಾಖಲೆಗಳೇ ಈ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತವೆ. ಆಗ ಕಾಂಗ್ರೆಸ್‌ನ ಮನಮೋಹನ್‌ ಸಿಂಗ್‌ ದೇಶದ ಪ್ರಧಾನಿಯಾಗಿದ್ದರು.

ರಸ್ತೆಗಳಿಗಷ್ಟೇ ನಿಲ್ಲದೇ “ರೈಲ್ವೇ ಅಳಿ ನಿರ್ಮಾಣ ಕಾಮುಗಾರಿಯ ವೇಗ ದ್ವಿಗುಣಗೊಂಡಿದೆ,” ಎಂದು ಮೋದಿ ಹೇಳಿದ್ದರು. ಸರಕಾರಿ ದಾಖಲೆಗಳ ಪ್ರಕಾರ ಭಾರತದಲ್ಲಿ ಅತಿಹೆಚ್ಚು ವೇಗದಲ್ಲಿ ರೈಲ್ವೇ ಅಳಿಗಳು ನಿರ್ಮಾಣಗೊಂಡ ವಿತ್ತೀಯ ವರ್ಷ 2011-2012.

ಇದೇ ವೇಳೆ ಭಾಷಣದ ಮಧ್ಯೆ ಮೋದಿ, ಕಾಳಧನವನ್ನು ಕೂಡಿಟ್ಟುಕೊಂಡಿದ್ದ 56 ಲಕ್ಷ ಜನ ಅನಾಣ್ಯೀಕರಣದ ಕಾರಣದಿಂದಾಗಿ ಇನ್ನು ಮುಂದೆ ತೆರಿಗೆ ಕಟ್ಟಿಬೇಕಿದೆ ಎಂದಿದ್ದರು. ಇದೇ ವಿಷಯದ ಕುರಿತು ಮಾತನಾಡುವ ವೇಳೆ ವಿತ್ತ ಸಚಿವ ಅರುಣ್‌ ಜೇಟ್ಲಿ 91 ಲಕ್ಷ ಎಂದು ತಿಳಿಸಿದ್ದರು. ಆದರೆ ಆರ್ಥಿಕ ಸಮೀಕ್ಷೆ ಹೇಳುವ ಪ್ರಕಾರ ಕೇವಲ 5.4 ಲಕ್ಷ ಜನರಷ್ಟೇ ತೆರಿಗೆದಾರರ ಪಟ್ಟಿಯೊಳಗೆ ಸೇರಿಕೊಂಡಿದ್ದರು. ಮಾತಿನ ಭರದಲ್ಲಿ ಮೋದಿ 5.4 ಲಕ್ಷವನ್ನು 56 ಲಕ್ಷವಾಗಿಸಿದ್ದರು.

ಓದಿದ್ದೆಷ್ಟು?:

ಮೋದಿಯ ಮತ್ತೊಂದು ದೊಡ್ಡ ಸುಳ್ಳು ಎಂದರೆ ಅವರ ವಿದ್ಯಾಭ್ಯಾಸದ ಕುರಿತಾದದ್ದು. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾಭ್ಯಾಸದ ಕಾಲಂನಲ್ಲಿ ಪದವಿ ಶಿಕ್ಷಣವನ್ನು 1978ರಲ್ಲಿ ಮತ್ತು ಸ್ನಾತಕೋತ್ತರ ಪದವಿಯನ್ನು 1983ರಲ್ಲಿ ಗುಜರಾತ್‌ ವಿಶ್ವವಿದ್ಯಾಲಯದಿಂದ ಪಡೆದಿದ್ದಾಗಿ ನಮೂದಿಸಿದ್ದರು.

ಆದರೆ 1998ರಲ್ಲಿ ಮೋದಿ ಸುದ್ದಿ ಮಾಹಿನಿಗೆ ನೀಡಿದ ಸಂದರ್ಶನದಲ್ಲಿ ತಾವು ಕೇವಲ ಫ್ರೌಡಶಿಕ್ಷವನ್ನಷ್ಟೇ ಪಡೆದಿರುವುದಾಗಿ ತಿಳಿಸಿದ್ದರು.

ಮೊದಲು ಮೆಟ್ರೋ ಏರಿದ್ದು ವಾಜಪೇಯಿ:

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮೆಟ್ರೋ ರೈಲಿನಲ್ಲಿ ಸಂಚರಿಸಿದ ದೇಶದ ಮೊದಲ ಪ್ರಯಾಣಿಕ ಎಂದು ಮೋದಿ ಹೇಳಿಕೆ ನೀಡಿದ್ದರು. ದೆಹಲಿ ಮೆಟ್ರೋದ ಮಗೆಂತಾ ಲೈನ್ ಉದ್ಘಾಟನೆಯ ವೇಳೆ ಮೋದಿ ಈ ಮಾತುಗಳನ್ನು ಉಲ್ಲೇಖಿಸಿದ್ದರು. 2002ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಮೆಟ್ರೋ ಆರಂಭವಾದಾಗ ಮೊದಲು ಅದರಲ್ಲಿ ಸಂಚರಿಸಿದ್ದು ವಾಜಪೇಯಿ ಎಂಬ ಹೇಳಿಕೆಗೆ ಯಾವುದೇ ಹುರುಳಿರಲಿಲ್ಲ.

ದೇಶದಲ್ಲಿ ಮೊದಲ ಮೆಟ್ರೋ ಸೇವೆ ಆರಂಭಗೊಂಡಿದ್ದು ಕೊಲ್ಕತ್ತಾದಲ್ಲಿ. 1972ರಲ್ಲಿ ಇಂದಿರಾ ಗಾಂಧಿ ಮೊಟ್ರೋ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. 1984ರಲ್ಲಿ ಕಾಮುಗಾರಿ ಪೂರ್ಣಗೊಂಡಿತ್ತು. ದೆಹಲಿ ಮೆಟ್ರೋ ಸೇವೆಯನ್ನು ಹೊಂದಿದ ದೇಶದ ಎರಡನೇ ನಗರವಾಗಿತ್ತು.

‘ಡೈರೆಕ್ಟ್ ಬೆನಿಫಿಟ್‌ ಟ್ರಾನ್ಸ್‌ಫರ್‌ ಯೋಜನೆಯನ್ನು ತಂದಿದ್ದು ನಾವೇ’:

ಮೋದಿ ಹೇಳಿದ ಪ್ರಮುಖ ಸುಳ್ಳುಗಳಲ್ಲಿ ಇದೂ ಕೂಡ ಒಂದು. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕರ್ನಾಟಕದಲ್ಲಿ ಮೆರವಣಿಗೆ ನಡೆಸುತ್ತಿದ್ದ ಮೋದಿ ಈ ಮಾತನ್ನು ಹೇಳಿದ್ದರು. ನಮ್ಮ ಸರಕಾರ ಡೈರೆಕ್ಟ್ ಬೆನಿಫಿಟ್‌ ಟ್ರಾನ್ಸ್‌ಫರ್‌ ಯೋಜನೆಯನ್ನು ಜಾರಿಗೆ ತಂದು ಮಧ್ಯವರ್ತಿಗಳನ್ನು ಇಲ್ಲವಾಗಿಸಿದೆ. ಇದರಿಂದ ಜನರಿಗೆ 57,000 ಕೋಟಿ ರೂಪಾಯಿಗಳನ್ನು ಉಳಿಸಿದೆ ಎಂದಿದ್ದರು.

ಈ ಯೋಜನೆಯನ್ನು ಪ್ರಾರಂಭಿಸಿದ್ದು ನಾವೇ ಎಂಬ ಮೋದಿ ಹೇಳಿಕೆ ಸುಳ್ಳು. 2013ರಲ್ಲಿಯೇ ಈ ಯೋಜನೆ ಜಾರಿಗೆ ಬಂದಿತ್ತು. ಹಿಂದೆ ಇದ್ದ ಯುಪಿಎ ಸರಕಾರ 2013ರ ಜನವರಿ 1ರಿಂದಲೇ ಈ ಯೋಜನೆಯನ್ನು ತಂದಿತ್ತು. ಇದು ನಮ್ಮದೇ ಯೋಜನೆ ಎಂದು ಮೋದಿ ಸುಳ್ಳು ಹೇಳಿದ್ದರು. ಪ್ರಧಾನ ಮಂತ್ರಿಗಳ ಕಚೇರಿ ಮಾಡಿದ್ದ ಟ್ವೀಟ್‌ನಲ್ಲೇ ಮೋದಿ ಹೇಳಿಕೆ ಸುಳ್ಳು ಎಂಬ ಅಂಶ ಬಯಲುಗೊಂಡಿತ್ತು.

2014- 2018: ನಾಲ್ಕು ವರ್ಷಗಳಲ್ಲಿ ಮೋದಿ ಹೇಳಿದ ಪ್ರಮುಖ ಸುಳ್ಳುಗಳಿವು! 

ದೀಪಾವಳಿಗಿಂತ ಈದ್‌ಗೆ ಹೆಚ್ಚಿನ ವಿದ್ಯುತ್‌:

ಉತ್ತರ ಪ್ರದೇಶದ ಚುನಾವಣೆ ಸಮೀಪವಿದ್ದ ಬೆನ್ನಲ್ಲೇ ಮೋದಿ ಫತೇಪುರದಲ್ಲಿ ನಡೆಸಿದ ಭಾಷಣದಲ್ಲಿ ಈ ಹೇಳೀಕೆಯನ್ನು ನೀಡಿದ್ದರು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷ ದೀಪಾವಳಿಗಿಂತ ಈದ್ ಹಬ್ಬಕ್ಕೆ ಹೆಚ್ಚಿನ ವಿದ್ಯುತ್‌ ನೀಡಿದೆ ಎಂದು ಆರೋಪಿಸಿದ್ದರು.

ಆದರೆ 2016ರ ಜುಲೈ 6ರಂದು ಈದ್ ಹಬ್ಬ ನಡೆದ ವೇಳೆಯಲ್ಲಿ 13,500 ಮೆಗಾವ್ಯಾಟ್‌ ವಿದ್ಯುತ್‌ ಹರಿಸಲಾಗಿತ್ತು. ಅದೇ ವರ್ಷ ಅಕ್ಟೋಬರ್‌ 28ರಿಂದ ನವೆಂಬರ್‌ 1ರವರೆಗೆ 3 ದಿನಗಳ ಕಾಲ ನಡೆದ ದೀಪಾವಳಿಗೆ ದಿನವೊಂದಕ್ಕೆ 24 ಗಂಟೆಗಳ ಕಾಲ 15,400 ಮೆಗಾ ವ್ಯಾಟ್‌ ವಿದ್ಯುತ್‌ ಹರಿಸಲಾಗಿತ್ತು. ಮೋದಿ ಹೇಳೀಕೆಯನ್ನಿಡಿದು ನೋಡುವುದಾದರೆ ಈದ್‌ಗಿಂತ ದೀಪಾವಳಿಗೆ ಹೆಚ್ಚಿನ ವಿದ್ಯುತ್‌ ನೀಡಲಾಗಿತ್ತು.

ಕ್ರೈಮ್‌ನಲ್ಲಿ ಉತ್ತರ ಪ್ರದೇಶ ನಂ.1:

ದೇಶದೆಲ್ಲೆಡೆ ನಡೆಯುತ್ತಿರುವ ಅಪರಾಧಗಳ ಪೈಕಿ ಉತ್ತರ ಪ್ರದೇಶ ನಂ.1 ಸ್ಥಾನದಲ್ಲಿದೆ. ಪ್ರತಿನಿತ್ಯ 24 ಅತ್ಯಾಚಾರಗಳು, 21 ಅತ್ಯಾಚಾರ ಪ್ರಯತ್ನಗಳು, 13 ಕೊಲೆ, 33 ಅಪಹರಣ, 19 ಗಲಭೆ ಹಾಗೂ 136 ಕಳ್ಳತನಗಳು ಸಂಭವಿಸುತ್ತವೆ ಎಂದು ಮೋದಿ ಹೇಳಿದ್ದರು.

ನ್ಯಾಷನಲ್‌ ಕ್ರೈಮ್‌ ರೆಕಾರ್ಡ್ಸ್ ಬ್ಯೂರೋದ ಅಂಕಿಅಂಶಗಳು ಈ ಮಾಹಿತಿ ಸುಳ್ಳು ಎನ್ನುತ್ತಿದ್ದವು. ಈ ಅಂಕಿಸಂಖ್ಯೆಗಳು ಉತ್ತರ ಪ್ರದೇಶದ್ದಲ್ಲ. ಪ್ರತಿದಿನ ನಡೆಯುವ ಘಟನೆಗಳೂ ಕೂಡ ಆಗಿರಲಿಲ್ಲ. ಉತ್ತರ ಪ್ರದೇಶದ ಮತದಾರರನ್ನು ತಮ್ಮತ್ತ ಸೆಳೆಯುವ ಸಲುವಾಗಿ ಮೋದಿ ಇಂತಹದ್ದೊಂದು ಸುಳ್ಳನ್ನು ಹೇಳಿದ್ದರು.

ಇವು ಮೋದಿ ಸುಳ್ಳಿನ ಕೆಲವು ಭಾಗಗಳಷ್ಟೇ. ತಮ್ಮ ಸರಕಾರದ 4 ವರ್ಷದ ಸಾಧನೆ ಎಂದು ಒಂಡೆದೆ ಮೋದಿ ಅಂಕಿ ಸಂಖ್ಯೆಗಳನ್ನು ಜನರ ಮುಂದಿಡುತ್ತಿದ್ದರೆ, ಕೆಲ ಮಾಧ್ಯಮಗಳು ಆ ಅಂಕಿ ಸಂಖ್ಯೆಗಳನ್ನು ಸಾವಿರಾರು ಪಟ್ಟು ಹೆಚ್ಚಾಗಿ ತೋರಿಸುತ್ತಿವೆ. ಅದೇ ವೇಳೆ, ಈ ನಾಲ್ಕು ವರ್ಷಗಳಲ್ಲಿ ಮೋದಿ ಪ್ರಧಾನಿ ಸ್ಥಾನದಲ್ಲಿ ಕುಳಿತು ಜನರಿಗೆ ಸುಳ್ಳುಗಳನ್ನು ಹೇಳಿದ್ದಾರೆ. ಅವರ ಸಾಧನೆಯನ್ನು ಮಣ್ಣುಮಾಡಲು ಇವೇ ಸಾಕಾಗುತ್ತವೆ.