samachara
www.samachara.com
‘ಕೋಬ್ರಾ ಪೋಸ್ಟ್‌’ ಖೆಡ್ಡಾದಲ್ಲಿ ಸುವರ್ಣ ನ್ಯೂಸ್: ರವಿ ಹೆಗಡೆಗಿದು ಆತ್ಮವಿಮರ್ಶೆಯ ಸಮಯ
COVER STORY

‘ಕೋಬ್ರಾ ಪೋಸ್ಟ್‌’ ಖೆಡ್ಡಾದಲ್ಲಿ ಸುವರ್ಣ ನ್ಯೂಸ್: ರವಿ ಹೆಗಡೆಗಿದು ಆತ್ಮವಿಮರ್ಶೆಯ ಸಮಯ

ರವಿ ಹೆಗಡೆ ಸ್ಥಾನದಲ್ಲಿ ಯಾರೇ ಇದ್ದರೂ ಇದು ಮುಜುಗರವನ್ನು ಉಂಟು ಮಾಡುವ ವಿಚಾರವೇ. ಅಷ್ಟೆ ಅಲ್ಲ, ಪತ್ರಕರ್ತರಿಗೆ ಅಗತ್ಯವಾದ ವಿಶ್ವಾಸಾರ್ಹತೆಯನ್ನು ಓರೆಗೆ ಹಚ್ಚುವ ವಿಚಾರ ಕೂಡ.

Team Samachara

ಅದು ಅಕ್ಟೋಬರ್ 11, 2017. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸುವರ್ಣ ವಾಹಿನಿಗೆ ಆತ ಕಾಲಿಟ್ಟಿದ್ದ. ಹೆಸರು ಆಚಾರ್ಯ ಛತ್ರಪಾಲ್ ಅಟಲ್‌. ತನ್ನನ್ನು ತಾನು ಹಿಂದುತ್ವ ಪ್ರಚಾರಕ ಎಂದು ಗುರುತಿಸಿಕೊಂಡ ಆಚಾರ್ಯನ ಜತೆಗೆ ಮೊದಲು ವಾಹಿನಿಯ ವ್ಯವಸ್ಥಾಪಕ ಪ್ರದೀಪ್ ಗೌಡ ಸಿ. ಎಸ್. ಮಾತಿಗೆ ಕೂರುತ್ತಾರೆ.

ಹಿಂದುತ್ವ ಸಿದ್ಧಾಂತವನ್ನು ಹರಡಲು ಹಾಗೂ ವಿರೋಧಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ್ನು ಹಣಿಯಲು ಸಂಪಾದಕೀಯ ವಿಭಾಗದ ಸಹಾಯ ಬೇಕು ಎಂಬುದು ಆಚಾರ್ಯನ ಬೇಡಿಕೆ. ಇದಕ್ಕೆ ಪ್ರದೀಪ್ ಗೌಡ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗುತ್ತದೆ. ನಮ್ಮ ನಡುವೆ ಮಾತುಕತೆ ಆದರೆ ವಾಹಿನಿಯ ಸಿಇಓ ಜತೆ ಕೂಡಿಸುವುದಾಗಿ ಭರವಸೆ ಸಿಗುತ್ತದೆ. ಜತೆಗೆ, “ನಮ್ಮ ವಾಹಿನಿಯ ಮಾಲೀಕರು (ರಾಜೀವ್ ಚಂದ್ರಶೇಖರ್) ಕೂಡ ಹಿಂದುತ್ವದ ಮನುಷ್ಯ. ಮೋದಿ ಹಿಂಬಾಲಕ,’’ ಎಂದು ಪ್ರದೀಪ್ ಹೇಳುತ್ತಾರೆ. ಇದು ಸಾಮಾನ್ಯ ಜ್ಞಾನ ಇರುವವರಿಗೆ ಹೊಸ ವಿಚಾರವೇನಲ್ಲ.

ನಂತರ ಆಚಾರ್ಯನನ್ನು ಭೇಟಿ ಮಾಡುವುದು ಸುವರ್ಣ ವಾಹಿನಿಯ ಸೇಲ್ಸ್‌ ವಿಭಾಗದ ಎಸ್. ಅನಿಲ್. ಈ ಸಮಯದಲ್ಲಿ ಇಬ್ಬರ ಮಾತುಕತೆ ಮತ್ತೊಂದು ಘಟ್ಟವನ್ನು ಮುಟ್ಟುತ್ತದೆ. ಒಂದು ಜಾಹೀರಾತು ಸ್ಲಾಟ್‌ (ಹನುಮಾನ್‌ ಚಾಲೀಸಾ ಬುಡಬುಡಿಕೆ ತರಹದ್ದು)ಗಾಗಿ ಆರಂಭವಾಗುವ ಮಾತುಕತೆ ನಂತರ ನಿಧಾನವಾಗಿ ಸಂಪಾದಕೀಯ ವಿಭಾಗದ ಕಡೆ ಹೊರಳುತ್ತದೆ.

ಈ ಸಮಯದಲ್ಲಿ ಅನಿಲ್, ತಮ್ಮ ರಾಜಕೀಯ ನಿಲುವನ್ನು ಆಚಾರ್ಯನ ಬಳಿ ಬಿಚ್ಚಿಡುತ್ತಾರೆ. “ಸಂಘವೂ ಇದೇ ಕೆಲಸ (ಹಿಂದುತ್ವ ಪ್ರಚಾರ) ಮಾಡುತ್ತಿದೆ. ನಾವೂ ಅದನ್ನೇ ಮಾಡುತ್ತಿದ್ದೇವೆ. ನಮ್ಮ ಸಂಪಾದಕ ರವಿ ಹೆಗಡೆ ಕೂಡ ಅದೇ ಕಡೆಯವರು,’’ ಎಂದು ಅನಿಲ್ ಹೇಳುತ್ತಾರೆ. ಕರ್ನಾಟಕದ ಬಿಜೆಪಿ ಕಾರ್ಯತಂತ್ರದಲ್ಲಿ ತಪ್ಪಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುವ ಅವರು, ಅಮಿತ್ ಶಾ ರಾಜ್ಯಕ್ಕೆ ಬಂದರೆ ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವಾಸ ವ್ತಕ್ತಪಡಿಸುತ್ತಾರೆ.

ಅದಾದ ನಂತರ ಆಚಾರ್ಯನನ್ನು ನೇರವಾಗಿ ಸುವರ್ಣ ವಾಹಿನಿ- ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಮುಂದೆ ಕೂರಿಸಲಾಗುತ್ತದೆ. ಮೊದಲು ‘ಮಾನವೀಯ ನೆಲೆ’ಯಲ್ಲಿ ಸಹಾಯ ಬೇಕು ಎನ್ನುವ ಆಚಾರ್ಯ ನಂತರ ನೇರವಾಗಿ ಹಿಂದುತ್ವ ಪ್ರಚಾರಕ್ಕೆ ಸಂಪಾದಕೀಯ ಸಹಾಯ ಬೇಕು ಎಂಬ ಬೇಡಿಕೆಯನ್ನು ರವಿ ಹೆಗಡೆ ಮುಂದಿಡುತ್ತಾನೆ. ರವಿ ಹೆಗಡೆ ಕಡೆಯಿಂದ ಇದಕ್ಕೆ ಲಭ್ಯವಾದ ಪ್ರತಿಕ್ರಿಯೆ ಹೀಗಿತ್ತು.

ರವಿ ಹೆಗಡೆ ಆಚಾರ್ಯನಿಗೆ ಕೇಳುತ್ತಾರೆ, ಯಾವ ರೀತಿಯ ಸಹಾಯ ಬೇಕು ಎಂದು? ಅದಕ್ಕೆ ಆಚಾರ್ಯ ಹೇಳುತ್ತಾನೆ, ಸಂಪಾದಕೀಯ ವಿಭಾಗದ ಮೂಲಕ ನಮ್ಮ ಹಿಂದುತ್ವ ಅಜೆಂಡಾವನ್ನು ಸಾರಬೇಕು ಅಂತ. ಇದಕ್ಕೆ ರವಿ ಹೆಗಡೆ ನೀಡಿದ ಉತ್ತರ ಕೆಳಗಿದೆ ನೋಡಿ. 
ರವಿ ಹೆಗಡೆ ಆಚಾರ್ಯನಿಗೆ ಕೇಳುತ್ತಾರೆ, ಯಾವ ರೀತಿಯ ಸಹಾಯ ಬೇಕು ಎಂದು? ಅದಕ್ಕೆ ಆಚಾರ್ಯ ಹೇಳುತ್ತಾನೆ, ಸಂಪಾದಕೀಯ ವಿಭಾಗದ ಮೂಲಕ ನಮ್ಮ ಹಿಂದುತ್ವ ಅಜೆಂಡಾವನ್ನು ಸಾರಬೇಕು ಅಂತ. ಇದಕ್ಕೆ ರವಿ ಹೆಗಡೆ ನೀಡಿದ ಉತ್ತರ ಕೆಳಗಿದೆ ನೋಡಿ. 
/ಕೋಬ್ರಾ ಪೋಸ್ಟ್. 
ರವಿ ಹೆಗಡೆ ಹೇಳುತ್ತಾರೆ, ನಾವು ಈಗಾಗಲೇ ಅದನ್ನೇ ಮಾಡುತ್ತಿದ್ದೀವಿ ಎಂದು. ಅದಕ್ಕೆ ಪಕ್ಕದಲ್ಲಿದ್ದ ಅನಿಲ್ ಕೂಡ ದನಿಗೂಡಿಸುತ್ತಾರೆ. 
ರವಿ ಹೆಗಡೆ ಹೇಳುತ್ತಾರೆ, ನಾವು ಈಗಾಗಲೇ ಅದನ್ನೇ ಮಾಡುತ್ತಿದ್ದೀವಿ ಎಂದು. ಅದಕ್ಕೆ ಪಕ್ಕದಲ್ಲಿದ್ದ ಅನಿಲ್ ಕೂಡ ದನಿಗೂಡಿಸುತ್ತಾರೆ. 
/ಕೋಬ್ರಾ ಪೋಸ್ಟ್. 

ಅಂದಹಾಗೆ, ಈ ಆಚಾರ್ಯ ಕೋಬ್ರಾಪೋಸ್ಟ್‌ ಎಂಬ ತನಿಖಾ ಪತ್ರಿಕೋದ್ಯಮ ಜಾಲ ತಾಣದ ವರದಿಗಾರನಾಗಿದ್ದ. ಆತ ಸುವರ್ಣ ವಾಹಿನಿ ಮಾತ್ರವಲ್ಲ, ದೇಶದ ಹತ್ತು ಹಲವು ಸುದ್ದಿ ಸಂಸ್ಥೆಗಳ ಅಂತರಾಳದಲ್ಲಿ ಇವತ್ತಿಗೆ ಢಾಳಾಗಿ ಆವರಿಸಿಕೊಂಡಿರುವ ಹಿಂದುತ್ವದ ಅಮಲನ್ನು ಸೆರೆ ಹಿಡಿಯುವ ಪ್ರಯತ್ನದ ಭಾಗವಾಗಿ ಸುವರ್ಣ ವಾಹಿನಿಗೂ ಕಾಲಿಟ್ಟಿದ್ದ. ಮೊದಲ ಹಂತದಲ್ಲಿ ಆತನ ಊಹೆ ನಿಜ ಎನ್ನುವಂತಿತ್ತು ವಾಹಿನಿಯ ಹಿರಿಯ ಸಿಬ್ಬಂದಿಗಳು ನೀಡಿರುವ ಪ್ರತಿಕ್ರಿಯೆ.

ನಿರೀಕ್ಷಣಾ ಜಾಮೀನು:

“ಇದು ಅತ್ಯಂತ ಮುಜುಗರ ಮೂಡಿಸುವ ಸಂಗತಿ,’’ ಎಂದರು ರವಿ ಹೆಗಡೆ.

‘ಸಮಾಚಾರ’ದ ಜತೆ ಮಾತನಾಡಿದ ಅವರು ಕೋಬ್ರಾ ಪೋಸ್ಟ್ ತನಿಖಾ ವರದಿಗೆ ಪ್ರತಿಕ್ರಿಯೆ ನೀಡಿದರು. “ಅಂದು ಆಚಾರ್ಯ ಎಂದು ಹೇಳಿಕೊಂಡು ಬಂದಾತ ಮಾತನಾಡಿದ್ದು ನೋಡಿ ನನಗೆ ಅನುಮಾನ ಬಂತು. ತಕ್ಷಣ ನಾನು ಸಹೋದ್ಯೋಗಿ ಅಜಿತ್ ಹನುಮಕ್ಕನವರ್‌ಗೆ ಆತನ ವಿರುದ್ಧ ಕುಟುಕು ಕಾರ್ಯಾಚರಣೆ ಮಾಡುವಂತೆ ತಿಳಿಸಿದೆ. ಜತೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆವು. ಮೊದಲು ಆತ ಜಾಹೀರಾತಿಗಾಗಿ ಸ್ಲಾಟ್‌ ಕೇಳುವ ಸೋಗಿನಲ್ಲಿ ಬಂದಿದ್ದ. ಅಂತಹ ಅವಕಾಶ ಇದೆ ಎಂದು ಹೇಳಿದೆ ಅಷ್ಟೆ,’’ ಎಂದರು.

‘ಕೋಬ್ರಾ ಪೋಸ್ಟ್‌’ ಖೆಡ್ಡಾದಲ್ಲಿ ಸುವರ್ಣ ನ್ಯೂಸ್: ರವಿ ಹೆಗಡೆಗಿದು ಆತ್ಮವಿಮರ್ಶೆಯ ಸಮಯ

ರವಿ ಹೆಗಡೆ ಸ್ಥಾನದಲ್ಲಿ ಯಾರೇ ಇದ್ದರೂ ಇದು ಮುಜುಗರವನ್ನು ಉಂಟು ಮಾಡುವ ವಿಚಾರವೇ. ಅಷ್ಟೆ ಅಲ್ಲ, ಪತ್ರಕರ್ತರಿಗೆ ಅಗತ್ಯವಾದ ವಿಶ್ವಾಸಾರ್ಹತೆಯನ್ನು ಓರೆಗೆ ಹಚ್ಚುವ ವಿಚಾರ ಕೂಡ. ಕೋಬ್ರಾ ಪೋಸ್ಟ್‌ ಕುಟುಕು ಕಾರ್ಯಾಚರಣೆಯಲ್ಲಿ ತೋರಿಸಿರುವ ದೃಶ್ಯಗಳನ್ನಷ್ಟೆ ಎದುರಿಗೆ ಇಟ್ಟುಕೊಂಡು ನೋಡಿದರೆ, ಆಚಾರ್ಯನ ಜತೆಗಿನ ಮಾತುಕತೆ ಕೇವಲ ಜಾಹೀರಾತಿಗೆ ಮಾತ್ರವೇ ಸೀಮಿತವಾಗದೆ, ಸಂಪಾದಕೀಯ ವಿಭಾಗ ನೆರವಿನೊಂದಿಗೆ ಹಿಂದುತ್ವ ವಿಚಾರವನ್ನು ಹರಡಲು ವಾಹಿನಿಯ ವ್ಯವಸ್ಥಾಪಕ, ಮಾರಾಟ ವಿಭಾಗದ ಪ್ರತಿನಿಧಿ ಹಾಗೂ ಖುದ್ದಾಗಿ ಸಂಪಾದಕರು ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಗಳು ಸಿಗುತ್ತವೆ.

ಆದರೆ, ರವಿ ಹೆಗಡೆ ತಾವು ಇಟ್ಟ ತಪ್ಪು ಹೆಜ್ಜೆಯನ್ನು ಸರಿಪಡಿಸಲು ಪ್ರಯತ್ನಿಸಿರುವುದು ನಡೆದಿದೆ. ಮೇಲಿನ ಮಾತುಕತೆ ನಂತರ ಆಚಾರ್ಯನನ್ನು ಕುಟುಕು ಕಾರ್ಯಾಚರಣೆಗೆ ಕೆಡವಲು ಪ್ರಯತ್ನ ಆರಂಭಿಸುತ್ತಾರೆ. ಮತ್ತೊಂದೆಡೆ ದೂರು ದಾಖಲಿಸುತ್ತಾರೆ. ಅದರ ಜತೆಗೆ, ಮಾರನೇ ದಿನ ಕನ್ನಡ ಪ್ರಭದಲ್ಲಿ ‘ಕೋಮು ಗಲಭೆ ಹರಡುವ ಸಾಧ್ಯತೆ’ ಕುರಿತು ವರದಿಯೊಂದನ್ನು ಪ್ರಕಟಿಸುತ್ತಾರೆ. ಇವೆಲ್ಲವೂ ಎಸಗಿದ ಅಪರಾಧ ಅರಿವಾದ ನಂತರ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವ ಸನ್ನಾಹದಂತೆ ಕಾಣಿಸುತ್ತದೆ.

ಕೌಂಟರ್ ಕುಟುಕು ಕಾರ್ಯಾಚರಣೆ, ದೂರುಗಳ ಆಚೆಗೆ, ಕೋಬ್ರಾ ಪೋಸ್ಟ್ ಬಿಡುಗಡೆ ಮಾಡಿರುವ ದೃಶ್ಯಾವಳಿಗಳು ಈಗಾಗಲೇ ಪಕ್ಷಪಾತದ ಆರೋಪಕ್ಕೆ ಹಲವು ಬಾರಿ ಗುರಿಯಾಗಿರುವ ಸುವರ್ಣ ವಾಹಿನಿಯನ್ನು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಬೆತ್ತಲು ಮಾಡಿದೆ. ಇತಿಹಾಸ ತಮ್ಮನ್ನು ಪತ್ರಕರ್ತ ಎಂದು ಗುರುತಿಸಬೇಕು ಎಂಬ ಬಯಕೆ ಇದ್ದಿದ್ದೇ ಆದರೆ, ಸಂಪಾದಕ ಸ್ಥಾನದಲ್ಲಿರುವ ರವಿ ಹೆಗಡೆ ಆತ್ಮಾವಲೋಕ ಮಾಡಿಕೊಳ್ಳಬೇಕಿದೆ.

ಆದರೆ ಶನಿವಾರ ಬೆಳಗ್ಗೆಯಿಂದ ಈವರೆಗೆ ಸುವರ್ಣ ವಾಹಿನಿಯಲ್ಲಿ ಭಿತ್ತರವಾಗುತ್ತಿರುವ ಸುದ್ದಿಗಳು ಹಾಗೂ ಅವುಗಳಿಗೆ ನೀಡಲಾಗುತ್ತಿರುವ ಅಡಿ ಬರಹಗಳನ್ನು ನೋಡಿದರೆ, ಅಂತಹದೊಂದು ಆತ್ಮವಿಮರ್ಶೆ ನಡೆದಂತೆ ಕಾಣಿಸುತ್ತಿಲ್ಲ. ವಾಹಿನಿಯನ್ನು ಆವರಿಸಿಕೊಂಡಿರುವ ‘ಪಾಪಿಸ್ತಾನ’ದ ಅಮಲು ಇಳಿದಂತೆ ಕಾಣಿಸುತ್ತಿಲ್ಲ. ಇದು ರವಿ ಹೆಗಡೆ ಪಾಲಿಗೆ ಒಳ್ಳೆಯ ಬೆಳವಣಿಗೆ ಅಲ್ಲ.