‘ಆಪರೇಷನ್‌ 136’: ಮುಂದುವರಿದ ಭಾಗದಲ್ಲಿ ಬೆತ್ತಲಾದ ಪ್ರತಿಷ್ಠಿತರು
COVER STORY

‘ಆಪರೇಷನ್‌ 136’: ಮುಂದುವರಿದ ಭಾಗದಲ್ಲಿ ಬೆತ್ತಲಾದ ಪ್ರತಿಷ್ಠಿತರು

ಕೋಬ್ರಾಪೋಸ್ಟ್‌ ತನ್ನ ಎರಡನೇ ವರದಿಯಲ್ಲಿ ದೇಶದ ಸರಿಸುಮಾರು 24 ಸುದ್ದಿ ಸಂಸ್ಥೆಗಳು ಹಿಂದುತ್ವದ ಹೆಸರಿನಲ್ಲಿ ಕೋಮುವಾದವನ್ನು ಬಿತ್ತುವುದಷ್ಟೇ ಅಲ್ಲದೇ, ಹಣ ಪಡೆದು ಜನರ ಓಟುಗಳನ್ನು ಬಿಜೆಪಿಯತ್ತ ತಿರುಗಿಸಲು ತಯಾರಿವೆ ಎಂಬುದನ್ನು ನಿರೂಪಿಸಿದೆ. 

ಕಳೆದ ಮಾರ್ಚ್ ತಿಂಗಳಲ್ಲಿ ‘ಕೋಬ್ರಾ ಪೋಸ್ಟ್’ ಸುದ್ಧಿ ಸಂಸ್ಥೆ ದುಡ್ಡು ಪಡೆದು ಹಿಂದುತ್ವವನ್ನು ಪ್ರಚಾರ ಮಾಡಲು ತಯಾರಿರುವ ಸುದ್ಧಿ ಮಾಧ್ಯಮಗಳ ಮುಖವಾಡವನ್ನು ಬಯಲು ಮಾಡಿತ್ತು. ‘ಆಪರೇಷನ್‌ 136’ ಹೆಸರಿನಲ್ಲಿ ಕೋಬ್ರಾ ಪೋಸ್ಟ್‌ ನೀಡಿದ ವರದಿಯಲ್ಲಿ ಮಾಧ್ಯಮಗಳ ‘ಹಿಡನ್ ಅಜೆಂಡಾ’ ಇಡೀ ದೇಶದ ಮುಂದೆ ಬೆತ್ತಲೆಯಾಗಿತ್ತು. ಈ ವರದಿಯ 2ನೇ ಭಾಗವನ್ನು ‘ಕೋಬ್ರಾಪೋಸ್ಟ್‌’ ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದೆ. ಈ ಬಾರಿ ಕೂಡ ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳ ಬಣ್ಣವನ್ನು ಬಯಲು ಮಾಡಿದೆ.

ಕೋಬ್ರಾಪೋಸ್ಟ್‌ ತನ್ನ ಎರಡನೇ ಮತ್ತು ಕೊನೆಯ ವರದಿಯಲ್ಲಿ ದೇಶದ ಸರಿಸುಮಾರು 24ರಷ್ಟು ಸುದ್ದಿ ಸಂಸ್ಥೆಗಳು ಹಿಂದುತ್ವದ ಹೆಸರಿನಲ್ಲಿ ಕೋಮುವಾದವನ್ನು ಬಿತ್ತುವುದಷ್ಟೇ ಅಲ್ಲದೇ, ಹಣ ಪಡೆದು ಜನರ ಓಟುಗಳನ್ನು ಬಿಜೆಪಿಯತ್ತ ತಿರುಗಿಸಲು ತಯಾರಿವೆ ಎಂಬುದನ್ನು ನಿರೂಪಿಸಿದೆ. ಮರಳುಗಾಡಿನಲ್ಲೂ ನೀರಿನ ಸೆಲೆ ಇರುವಂತೆ, ಈ ಕುಟುಕು ಕಾರ್ಯಾಚರಣೆಯಲ್ಲಿ ವಸ್ತುನಿಷ್ಟತೆ ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುವ ಎರಡು ಮಾಧ್ಯಮಗಳ ಸಂಸ್ಥೆಗಳೂ ಸಿಕ್ಕಿವೆ. ‘ಬರ್ತಾಮಾನ್’ ಮತ್ತು ‘ದೈನಿಕ್‌ ಸಂಬಂಧ್’ ಎಂಬ ಎರಡು ಬೆಂಗಾಳಿ ಪತ್ರಿಕೆಗಳು ಮಾತ್ರವೇ ‘ಕೋಬ್ರಾ ಪೋಸ್ಟ್’ ತೋಡಿದ ಖೆಡ್ಡಾಕ್ಕೆ ಬಿದ್ದಿಲ್ಲ. ಆದರೆ ಪ್ರತಿಷ್ಠಿಯ ಸಂಸ್ಥೆಗಳೇ ಕುಟುಕು ಕಾರ್ಯಾಚರಣೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ಮೂಲಕ ಭಾರತೀಯ ಮಾಧ್ಯಮಗಳ ಭೀಕರ ಚಿತ್ರಣ ಜಾಹೀರಾಗಿದೆ.

‘ಆಚಾರ್ಯ ಅಟಲ್‌’ ಹೆಸರಿನಲ್ಲಿ ಸುದ್ದಿ ಮಾಧ್ಯಮಗಳಿಗೆ ಭೇಟಿ ನೀಡಿದ ಕೋಬ್ರಾಪೋಸ್ಟ್‌ನ ಪತ್ರಕರ್ತ ಪುಷ್ಪ್ ಶರ್ಮಾ, ತಾನು ಆರ್‌ಎಸ್‌ಎಸ್‌ ಸಂಘಟನೆಗೆ ಹತ್ತಿರದ ವ್ಯಕ್ತಿ ಎಂದು ಹೇಳಿಕೊಂಡಿದ್ದಾರೆ. ತನ್ನದೇ ಒಂದು ಹಿಂದು ಸಂಘಟನೆ ಇರುವುದಾಗಿ ತಿಳಿಸಿದ್ದಾರೆ. ‘ನಾವು ಕಂಟೆಂಟ್‌ ನೀಡುತ್ತೇವೆ, ನೀವದನ್ನು ನಿಮ್ಮ ಸುದ್ದಿ ವಾಹಿನಿಗಳ ಮೂಲಕ ಜನರೊಳಗೆ ಬಿತ್ತರಿಸಬೇಕು’ ಎಂಬ ಆಚಾರ್ಯ ಅಟಲ್‌ ಬೇಡಿಕೆಗೆ ಸುದ್ದಿ ಮಾಧ್ಯಮಗಳು ಕೆಲವು ಕೋಟಿಗಳಿಂದ 500 ಕೋಟಿಗಳವರೆಗೆ ಬೇಡಿಕೆ ಇಟ್ಟಿವೆ.

ಕೋಬ್ರಾಪೋಸ್ಟ್‌ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಬೆತ್ತಲಾಗಿರುವ ಬಹುದೊಡ್ಡ ಹೆಸರು ವಿನೀತ್‌ ಜೈನ್‌. ಟೈಮ್ಸ್ ಗ್ರೂಪ್‌ನ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿನೀತ್‌ ಜೈನ್‌ ಕೋಬ್ರಾಪೋಸ್ಟ್ ತೋಡಿರುವ ಹಳ್ಳಕ್ಕೆ ನೇರವಾಗಿ ಬಂದು ಬಿದ್ದಿದ್ದಾರೆ. ಟೈಮ್ಸ್ ಗ್ರೂಪ್‌ ಒಡೆತನದಲ್ಲಿ ಟೈಮ್ಸ್ ನೌ ಚಾನೆಲ್‌, ಟೈಮ್ಸ್ ಆಫ್‌ ಇಂಡಿಯಾ ವೃತ್ತ ಪತ್ರಿಕೆ ಸೇರಿದಂತೆ ಹಲವಾರು ರೀತಿಯ ಮಾಧ್ಯಮಗಳಿವೆ. ಇವುಗಳಲ್ಲಿ ಹಿಂದುತ್ವವನ್ನು ಪ್ರಚಾರ ಮಾಡಲು 500 ಕೋಟಿ ರೂಪಾಯಿಗಳ ಬೇಡಿಕೆಯನ್ನು ವಿನೀತ್‌ ಜೈನ್‌ ಇಟ್ಟಿದ್ದಾರೆ. ಕೆಲವು ಉದ್ಯಮಗಳಿಗೆ ಆ ಹಣವನ್ನು ನೀಡುವಂತೆ ವಿನೀತ್‌ ಜೈನ್‌ ಅಚಾರ್ಯ ಅಟಲ್‌ಗೆ ತಿಳಿಸಿದ್ದು, ನಂತರದಲ್ಲಿ ಆ ಬ್ಲಾಕ್‌ ಮನಿಯನ್ನು ವೈಟ್‌ ಆಗಿಸಿ ಪರಿವರ್ತಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಟೈಮ್ಸ್‌ ಗ್ರೂಪ್‌ನ 2017ರ ವಾರ್ಷಿಕ ಆದಾಯ 9,976 ಕೋಟಿ ರೂಪಾಯಿಗಳು. ಟೈಮ್ಸ್ ಮಾಲೀಕರು ಬೇಡಿಕೆ ಇಟ್ಟಿರುವುದು 500 ಕೋಟಿ. ಅಂದರೆ ಇಡೀ ಸಂಸ್ಥೆಯ ವಾರ್ಷಿಕ ಆದಾಯದ ಶೇ.5ರಷ್ಟಾಗುತ್ತದೆ.

ಕೃಷ್ಣ ಮತ್ತು ಭಗವದ್ಗೀತೆ ಕುರಿತಾಗಿ ಆಚಾರ್ಯ ಅಟಲ್‌ ನೀಡುವ ಕಂಟೆಂಟ್‌ಅನ್ನು ಪ್ರಸಾರ ಮಾಡಲು ವಿನೀತ್‌ ಜೈನ್‌ ಒಪ್ಪಿಕೊಂಡಿದ್ದು, ನಿಮ್ಮ ರಾಜಕೀಯ ಅಜೆಂಡಾಗೆ ಹಿಂದುತ್ವದ ಕವಚದಂತೆ ಇದು ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಕೋಬ್ರಾಪೋಸ್ಟ್‌ನ ಕುಟುಕು ಕಾರ್ಯಾಚರಣೆಯ ಮುಂದೆ ಬೆತ್ತಲಾಗಿರುವ ಮತ್ತೊಂದು ದೊಡ್ಡ ಸುದ್ಧಿ ಸಂಸ್ಥೆ ಇಂಡಿಯಾ ಟುಡೇ ಗ್ರೂಪ್‌. ಈ ಸುದ್ಧಿ ಸಂಸ್ಥೆಯ ಉಪಾಧ್ಯಕ್ಷೆ ಕಲ್ಲಿ ಪುರಿ ಕೋಬ್ರಾಪೋಸ್ಟ್ ಖೆಡ್ಡಾಗೆ ಬಿದ್ದಿದ್ದಾರೆ.

ರಾಮ ಮತ್ತು ಅಯೋದ್ಯೆ ವಿಷಯಗಳು ವಿವಾದಾತ್ಮಕಗೊಂಡಿವೆ. ಹಿಂದುತ್ವವನ್ನು ಬಿತ್ತಲು ರಾಮನ ಬದಲು ಕೃಷ್ಣ ಮತ್ತು ಭಗವದ್ಗೀತೆಯನ್ನು ಪ್ರಚಾರ ಮಾಡಬೇಕು ಎಂಬ ಆಚಾರ್ಯ ಅಟಲ್‌ರ ಬೇಡಿಕೆಗೆ ಕಲ್ಲಿ ಪುರಿ ಒಪ್ಪಿಗೆ ಸೂಚಿಸಿದ್ದಾರೆ. ಆಚಾರ್ಯ ನೀಡುವ ಕಂಟೆಂಟ್‌ಅನ್ನು ಒಳ ಅಂಕಣಗಳಲ್ಲಿ ಪ್ರಕಟಿಸಿ, ರಾಜಕೀಯವಾಗಿ ಬಿಜೆಪಿಗೆ ಸಹಾಯವಾಗುವಂತೆ ಮಾಡಲು ಕಲ್ಲಿಪುರಿ ಸಿದ್ಧವಾಗಿರುವುದಾಗಿ ದೃಶ್ಯಾವಳಿಗಳು ಹೇಳುತ್ತಿವೆ.

ಅಚಾರ್ಯ ಅಟಲ್‌ ಟಿವಿ ಟುಡೇ ಸುದ್ಧಿ ಸಂಸ್ಥೆಯ ಮುಖ್ಯ ಆದಾಯ ಅಧಿಕಾರಿ ರಾಹುಲ್‌ ಕುಮಾರ್‌ರನ್ನು ಭೇಟಿಯಾದಾಗ, ರಾಹುಲ್‌ ‘ನಾನು ಸಧ್ಯದ ಸರಕಾರದ ಪರವಾಗಿದ್ದೇನೆ,’ ಎಂದು ಘೋಷಿಸಿಕೊಂಡಿದ್ದಾರೆ. ಕಲ್ಲಿ ಪುರಿಯ ಈ ಸುದ್ದಿ ಸಂಸ್ಥೆಯಿಂದ 275 ಕೊಟಿ ರೂಪಾಯಿಗಳ ಬೇಡಿಕೆ ಬಂದಿದೆ. ಇದು ಇಂಡಿಯಾ ಟುಡೇ ಗ್ರೂಪ್‌ನ 2017ರ ವಾರ್ಷಿಕ ಆದಾಯದ ಶೇ.20ರಷ್ಟು.

‘ಟೈಮ್ಸ್ ಆಫ್‌ ಇಂಡಿಯಾ’ ಮತ್ತು ‘ಇಂಡಿಯಾ ಟುಡೇ’ ಅಷ್ಟೇ ಅಲ್ಲದೇ ‘ಹಿಂದೂಸ್ತಾನ್‌ ಟೈಮ್ಸ್’, ‘ದೈನಿಕ್‌ ಬಾಸ್ಕರ್’, ‘ಜೀ ನ್ಯೂಸ್‌’, ಸ್ಟಾರ್ ಇಂಡಿಯಾ’, ‘ಎಬಿಪಿ’, ‘ದೈನಿಕ್‌ ಜಾಗರನ್’, ‘ರೇಡಿಯೋ ಒನ್‌’, ‘ಸುವರ್ಣ ನ್ಯೂಸ್‌’, ‘ರೆಡ್‌ ಎಫ್‌ಎಂ’, ‘ಲೋಕ್‌ಮಾತ್‌’, ‘ ಎಬಿಎನ್‌’, ‘ಅಂಧ್ರ ಜ್ಯೋತಿ’, ‘ಟಿವಿ 5’, ‘ದಿನಮಾಲರ್’, ‘ಬಿಗ್ ಎಫ್‌ಎಂ’, ‘ಪ್ರಭಾತ್‌ ಖಬರ್’, ‘ಕೆ ನ್ಯೂಸ್‌’, ‘ಇಂಡಿಯಾ ವಾಯ್ಸ್’, ‘ದಿ ನ್ಯೂಸ್‌ ಇಂಡಿಯನ್‌ ಎಕ್ಸ್‌ಪ್ರೆಸ್‌’, ಎಂವಿ ಟಿವಿ’ ಮತ್ತು ‘ಓಪೆನ್‌’ ಎಂಬ ಪತ್ರಿಕೆ ಹಿಂದುತ್ವವನ್ನು ಬಿತ್ತಲು ಒಪ್ಪಿಕೊಂಡಿವೆ.

ಕೋಬ್ರಾಪೋಸ್ಟ್‌ ಈ ಸುದ್ದಿಯನ್ನು ಪ್ರಕಟಿಸದಂತೆ ದೈನಿಕ್‌ ಬಾಸ್ಕರ್‌ ಸುದ್ದಿ ಸಂಸ್ಥೆ ದೆಹಲಿ ಹೈಕೋರ್ಟ್‌ನಿಂದ ತಡೆಯಾಜ್ಞೆಯನ್ನು ತಂದಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಕೋಬ್ರಾಪೋಸ್ಟ್‌ ಸುದ್ದಿಯನ್ನು ಪ್ರಕಟಿಸಿದೆ.

ಮತ್ತೊಂದು ಪ್ರಮುಖ ಸುದ್ದಿ ಮಾಧ್ಯಮವಾದ ‘ಹಿಂದುಸ್ತಾನ್‌ ಟೈಮ್ಸ್’ನ ಉಪಾಧ್ಯಕ್ಷ ಅವ್ನೀಶ್‌ ಬನ್ಸಾಲ್‌, ಕೆಲವು ಕೊಟಿಗಳನ್ನು ನೀಡಿದರೆ ಇಡೀ ಸಂಪಾದಕೀಯ ವಿಭಾಗದ ಮೇಲೆ ಒತ್ತಡ ಉಂಟಾಗಿ ನಿಮ್ಮ ವಿರುದ್ಧ ಯಾವು ನಕಾರಾತ್ಮಕ ಸುದ್ದಿಗಳನ್ನೂ ಕೂಡ ಬರೆಯುವುದಿಲ್ಲ, ಎಂಬ ವಿಶ್ವಾಸವನ್ನು ಆಚಾರ್ಯ ಅಟಲ್‌ರ ಮುಂದೆ ವ್ಯಕ್ತಪಡಿಸಿದ್ದಾರೆ.

‘ಕೋಬ್ರಾ ಪೋಸ್ಟ್‌’ನ ಸಂಪಾದಕ ಅನಿರುದ್ಧ ಬಹಲ್‌ ಹೇಳುವಂತೆ, ಬಹುಪಾಲು ಪ್ರಾದೇಶಿಕ ಮೀಡಿಯಾಗಳು ರಾಜಕಾರಣಿಗಳ ಒಡೆತನದಲ್ಲಿವೆ. ಮತ್ತು ಕೆಲವು ಮೀಡಿಯಾಗಳು ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿವೆ. ಆದಕಾರಣ ಈ ಮೀಡಿಯಾಗಳು ತಮ್ಮ ಒಡೆಯರು ಹೇಳಿದಂತೆ ಕೆಲಸ ಮಾಡಬೇಕಾಗಿದೆ.

ಕೋಬ್ರಾಪೋಸ್ಟ್‌ ಹೇಳುವಂತೆ, ಭಾರತದ ಬಹುತೇಕ ಸುದ್ದಿ ಸಂಸ್ಥೆಗಳಲ್ಲಿ ಹಿಂದುತ್ವದ ಬೇರುಗಳು ಬಲಗೊಳ್ಳುತ್ತಿವೆ. ಈ ಸಂಸ್ಥೆಗಳ ಮುಖ್ಯಸ್ಥರೂ ಕೂಡ ಆಡಳಿತ ಪಕ್ಷ ಬಿಜೆಪಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಬಿಜೆಪಿಯ ತಾಯಿಬೇರು ಆರ್‌ಎಸ್‌ಎಸ್‌ ಜತೆ ಕೂಡ ಇದ್ದಾರೆ. ಬಿಗ್‌ ಎಫ್‌ಎಂ ರೇಡಿಯೋ ಮಾಧ್ಯಮದ ಪಾಲುದಾರ ಅಮಿತ್‌ ಚೌದರಿಯೇ ಹೇಳುವಂತೆ ರಿಲಯನ್ಸ್‌ ಕಂಪನಿ ಯಾವಾಗಲೂ ಬಿಜೆಪಿಯ ಬೆಂಬಲಿಗನಾಗಿರುತ್ತದೆ.

ಮಾರ್ಚ್‌ ತಿಂಗಳಲ್ಲಿ ಹೊರಬಿದ್ದಿದ್ದ ಕೋಬ್ರಾಪೋಸ್ಟ್‌ನ ಕುಟುಕು ಕಾರ್ಯಾಚರಣೆ ‘ಆಪರೇಷನ್‌ 136’ನ ಮೊದಲ ಭಾಗದಲ್ಲಿ 17 ಸುದ್ದಿ ಸಂಸ್ಥೆಗಳ ಬಣ್ಣ ಬಯಲಾಗಿತ್ತು. 2017ರಲ್ಲಿ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಾಂಕದಲ್ಲಿ ಭಾರತ 136ನೇ ಸ್ಥಾನದಲ್ಲಿತ್ತು. ಇದೇ ಆಧಾರದ ಮೇಲೆ ಈ ಕುಟುಕು ಕಾರ್ಯಾಚರಣೆಗೆ ‘ಆಪರೇಷನ್‌ 136’ ಎಂದು ಹೆಸರಿಡಲಾಗಿತ್ತು.

Also read: ‘ಆಪರೇಷನ್‌ 136’: ಮಾಧ್ಯಮಗಳನ್ನೇ ಬೆತ್ತಲಾಗಿಸಿದ ಕೋಬ್ರಾಪೋಸ್ಟ್ ಹೊಸ ಕುಟುಕು ಕಾರ್ಯಾಚರಣೆ

ಪ್ರಧಾನಿ ನರೇಂದ್ರ ಮೋದಿಗೆ ಹತ್ತಿರದ ವ್ಯಕ್ತಿ ಮತ್ತು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಹಿಂದಿ ಪತ್ರಿಕೆ ‘ದೈನಿಕ್‌ ಜಾಗರಣ್‌’ನ ಸಂಪಾದಕ ರಜತ್‌ ಶರ್ಮಾ ಒಡೆತನದ ‘ಇಂಡಿಯಾ ಟಿವಿ’, ಉತ್ತರ ಪ್ರದೇಶದ ಸ್ಥಳೀಯ ಮಾಧ್ಯಮ ‘ಹಿಂದಿ ಖಬರ್‌’, ‘ಡಿಎನ್‌ಎ’, ‘ಅಮರ್ ಉಜಾಲಾ’, ‘ಯುಎನ್‌ಐ’, ‘ಪಂಜಾಬ್‌ ಕೇಸರಿ’, ‘ಸ್ವತಂತ್ರ ಭಾರತ್‌’ ಸುದ್ದಿ ಸಂಸ್ಥೆಗಳು ರಾಷ್ಟ್ರದ ಜನರ ಮುಂದೆ ಬೆತ್ತಲಾಗಿದ್ದವು. ಈಗ ಮತ್ತೆ ಸುಮಾರು 2 ಡಜನ್‌ನಷ್ಟು ಪ್ರಮುಖ ಸುದ್ದಿ ಸಂಸ್ಥೆಗಳು ಬಟಾ ಬಯಲಾಗಿವೆ. ಅವುಗಳ ಪೈಕಿ ಕನ್ನಡದ ಸುದ್ದಿ ಮಾಧ್ಯಮ ‘ಸುವರ್ಣ ನ್ಯೂಸ್‌’ ಕೂಡ ಒಂದು.

Also read: ‘ಕೋಬ್ರಾ ಪೋಸ್ಟ್‌’ ಖೆಡ್ಡಾದಲ್ಲಿ ಸುವರ್ಣ ನ್ಯೂಸ್: ರವಿ ಹೆಗಡೆಗಿದು ಆತ್ಮವಿಮರ್ಶೆಯ ಸಮಯ

ವ್ಯವಸ್ಥೆಯ ನಾಲ್ಕನೇ ಅಂಗ ಎನಿಸಿಕೊಂಡಿರುವ ಪತ್ರಿಕೋದ್ಯಮ, ಇಂದು ಉದ್ಯಮವಾಗಿ ರೂಪತಳೆದು ದೇಶದ ಜನರ ದಾರಿ ತಪ್ಪಿಸುತ್ತಿವೆ ಎಂಬ ಮಾತುಗಳು ಗಟ್ಟಿಯಾಗಿಯೇ ಕೇಳಿ ಬರುತ್ತಿದ್ದವು. ಈಗ ಈ ಮಾತಿಗೆ ಸ್ಪಷ್ಟ ಪುರಾವೆಗಳು ದೊರೆತಿವೆ. ರಾಜಕೀಯ ಪಕ್ಷಗಳಿಗೆ, ಕೋಮು ಸಂಘಟನೆಗಳಿಗೆ ತಮ್ಮನ್ನು ಮಾರಿಕೊಂಡಿರುವ ಸುದ್ದಿ ಮಾಧ್ಯಮಗಳು, ದೇಶದೊಳಗೆ ಕೋಮು ಧ್ರುವೀಕರಣಕ್ಕಾಗಿ ಹಗಲು ರಾತ್ರಿಯೆನ್ನದೇ ಶ್ರಮಿಸಿ ತಮ್ಮ ಒಡೆಯರ ಬೂಟು ನೆಕ್ಕುತ್ತಿವೆ. ಇನ್ನೂ ಏನಾದರೂ ಅನುಮಾನ ಉಳಿದಿದ್ದರೆ, ಇರುವ ಅವಕಾಶದಲ್ಲಿಯೇ ವಸ್ತುನಿಷ್ಟತೆ ಮೆರೆಯಬಹುದು ಎಂಬ ಭ್ರಮೆಯಲ್ಲಿದ್ದರೆ ಅದು ಶುದ್ಧ ಹಿಪಾಕ್ರಸಿ ಅಷ್ಟೆ.