‘ಆಲ್ ಎಬೌಟ್ ಆಯಿಲ್’: ಭಾರತೀಯರ ತೈಲ ಬಳಕೆ ಹಿಂದಿದೆ ಅಚ್ಚರಿ ಮೂಡಿಸುವ ಅಂಕಿ ಅಂಶಗಳು!
COVER STORY

‘ಆಲ್ ಎಬೌಟ್ ಆಯಿಲ್’: ಭಾರತೀಯರ ತೈಲ ಬಳಕೆ ಹಿಂದಿದೆ ಅಚ್ಚರಿ ಮೂಡಿಸುವ ಅಂಕಿ ಅಂಶಗಳು!

ಜಗತ್ತು ಇದೇ ಪ್ರಮಾಣದಲ್ಲಿ ತೈಲವನ್ನು ಬಗಿಯುತ್ತಾ ಸಾಗಿದರೆ ಇನ್ನು 53 ವರ್ಷಗಳಲ್ಲಿ ಪೆಟ್ರೋಲಿಯಂ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗುತ್ತದೆ ಎಂದು ವರದಿಗಳೇ ತಿಳಿಸಿವೆ.

ಇಡೀ ಜಗತ್ತಿನ ಆರ್ಥಿಕತೆ ನಿಂತಿರುವುದು ನವೀಕರಿಸಲಾಗದ ಇಂಧನ ಮೂಲಗಳ ಮೇಲೆ. ಭಾರತವೂ ಇದಕ್ಕೆ ಹೊರತೇನಲ್ಲ. ಭಾರತ ಬಳಸುತ್ತಿರುವ ಶೇ.99ರಷ್ಟು ಇಂಧನ ಮೂಲಗಳು ಮುಂದಿನ ದಿನಗಳಲ್ಲಿ ಖಾಲಿಯಾಗುವಂತವೇ. ಅವುಗಳ ಪೈಕಿ ಕಲ್ಲಿದ್ದಲು ಮೊದಲನೆಯ ಸ್ಥಾನದಲ್ಲಿದ್ದು, ಭಾರತದ ಇಂಧನದ ಅಗತ್ಯತೆಯಲ್ಲಿ ಶೇ.44ರಷ್ಟನ್ನು ಪೂರೈಸುತ್ತಿದೆ. ಎರಡನೆಯದು ಪೆಟ್ರೋಲಿಯಂ. ಶೇ.22ರಷ್ಟು ಇಂಧನ ಪೂರೈಕೆ ಈ ಪೆಟ್ರೋಲಿಯಂ ಉತ್ಪನ್ನಗಳಿಂದ ದೊರೆಯುತ್ತಿದೆ. ಕಲ್ಲಿದ್ದಲು ಭಾರತದಲ್ಲಿ ಅಗಾಧವಾಗಿಯೇ ದೊರೆಯುತ್ತಿದೆ. ಆದರೆ ಪೆಟ್ರೋಲಿಯಂ ಕಲ್ಲಿದ್ದಲಿನಂತಲ್ಲ ಎನ್ನುವುದೇ ಸಧ್ಯದ ಚಿಂತೆ. 

ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಲವಾರು ತೈಲೋತ್ಪಾದನಾ ರಾಷ್ಟ್ರಗಳು ಉತ್ಪಾದನೆಯನ್ನು ಕುಂಠಿತಗೊಳಿಸಿವೆ. ಹೀಗಾಗಿ ಅಭಿವೃದ್ಧಿ ಹೊಂದಿದ ದೇಶಗಳು ನವೀಕರಿಸಬಹುದಾದ ಇಂಧನ ಮೂಲಗಳತ್ತ ಮುಖಮಾಡಿವೆ.

ಭಾರತದಲ್ಲಿ ತೈಲ ಬಳಕೆಯ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಷ್ಟೆ ವೇಗದಲ್ಲಿ ದೇಶದೊಳಗಿನ ಪೆಟ್ರೋಲ್‌, ಡೀಸೆಲ್‌ ಬೆಲೆಯೂ ಕೂಡ ದುಬಾರಿಯಾಗುತ್ತಿದೆ.

Also read: ಜಾಗತಿಕ ಮಟ್ಟದಲ್ಲಿ ಗಗನಕ್ಕೇರುತ್ತಿರುವ ತೈಲಬೆಲೆ; ಇಲ್ಲಿವೆ ಪ್ರಮುಖ ಕಾರಣಗಳು

ಭಾರತೀಯರು ಬಳಸುತ್ತಿರುವ ಕಚ್ಚಾತೈಲವೆಷ್ಟು?:

ಅತಿ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುವ ರಾಷ್ಟ್ರಗಳ ಪೈಕಿ ಜಪಾನ್‌ನನ್ನು ಹಿಂದಿಟ್ಟಿರುವ ಭಾರತ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮೊದಲೆರಡು ಸ್ಥಾನಗಳಲ್ಲಿ ಅಮೆರಿಕಾ ಮತ್ತು ಚೈನಾ ರಾಷ್ಟ್ರಗಳಿವೆ.

ವರ್ಷದಿಂದ ವರ್ಷಕ್ಕೆ ಭಾರತೀಯರು ಹೆಚ್ಚೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. 21ನೇ ಶತಮಾನದ ಆರಂಭದಲ್ಲಿ ಭಾರತ ಬಳಸುತ್ತಿದ್ದ ಪೆಟ್ರೋಲಿಯಂ ಪ್ರಮಾಣ ದಿನವೊಂದಕ್ಕೆ 13 ಲಕ್ಷ ಬ್ಯಾರಲ್‌ಗಳಷ್ಟಿತ್ತು. ಒಂದು ಬ್ಯಾರಲ್‌ 159 ಲೀಟರ್‌ಗಳಿಗೆ ಸಮ. ಎಂದರೆ 2000ದಲ್ಲಿ ಭಾರತೀಯರು ಪ್ರತಿದಿನ ಬಳಸುತ್ತಿದ್ದ ಪೆಟ್ರೋಲಿಯಂ ಪ್ರಮಾಣ 20.67 ಕೋಟಿ ಲೀಟರ್‌ಗಳು.

ಈ ಪ್ರಮಾಣ 2012ರ ವೇಳೆಗೆ 36 ಲಕ್ಷ ಬ್ಯಾರಲ್‌ಗಳಗೆ ಏರಿಕೆಯಾಗಿತ್ತು. ಅಂದರೆ 57.24 ಕೋಟಿ ಲೀಟರ್‌ಗಳು. 2015ರಲ್ಲಿ ಭಾರತೀಯರ ತೈಲ ಬಳಕೆ ಪ್ರತಿದಿನ 66.13 ಕೋಟಿ ಲೀಟರ್‌ ತಲುಪಿತ್ತು. ಸಧ್ಯ ಭಾರತೀಯರು ಪ್ರತಿ ದಿನಕ್ಕೆ 47 ಲಕ್ಷ ಬ್ಯಾರಲ್‌ ಅಂದರೆ 74.73 ಕೋಲಿ ಲೀಟರ್‌ ತೈಲವನ್ನುಬಳಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಪ್ರಮಾಣವೆಷ್ಟು?:

ಕಡಿಮೆ ಪ್ರಮಾಣದ ಕಚ್ಚಾ ತೈಲವನ್ನು ಉತ್ಪಾದಿಸುವ ರಾಷ್ಟ್ರಗಳೆ ಅತೀ ಹೆಚ್ಚು ತೈಲವನ್ನು ಬಳಕೆ ಮಾಡುವ ಮೊದಲ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿವೆ. ಅದರಲ್ಲಿ ಭಾರತದ್ದು 3ನೇ ಸ್ಥಾನ.

ಭಾರತದಲ್ಲಿ 2016ರ ವೇಳೆಗೆ ಪ್ರತಿದಿನ ಉತ್ಪಾದನೆಯಾಗುತ್ತಿದ್ದ ಕಚ್ಚಾ ತೈಲದ ಪ್ರಮಾಣ 9 ಲಕ್ಷ ಬ್ಯಾರಲ್, ಅಂದರೆ 14.31 ಕೋಟಿ ಲೀಟರ್‌ ತೈಲ. ಇದೇ ಸಮಯದಲ್ಲಿ ಭಾರತ ಪ್ರತಿದಿನಕ್ಕೆ ಬಳಸುತ್ತಿದ್ದ ತೈಲದ ಪ್ರಮಾಣ 44.89 ಲಕ್ಷ ಬ್ಯಾರೆಲ್, ಎಂದರೆ 71.38 ಕೋಟಿ ಲೀಟರ್.

2012ರಲ್ಲಿ ಭಾರತದ 35.6 ಮಿಲಿಯನ್‌ ಟನ್‌ ತೈಲವನ್ನು ಉತ್ಪಾದಿಸಿತ್ತು. ಅದೇ ವರ್ಷ ಭಾರತದ ಬಳಸಿದ್ದ ತೈಲದ ಪ್ರಮಾಣ 148 ಮಿಲಿಯನ್‌ ಟನ್. ಈ ಉತ್ಪಾದನಾ ಪ್ರಮಾಣ ಕಡಿಮೆಗೊಳ್ಳುತ್ತಾ ಬರುತ್ತಿದೆ. 2017ರ ವೇಳೆಗೆ 34.8 ಮಿಲಿಯನ್‌ ಟನ್‌ ತಲುಪಿದ್ದು, ಬಳಕೆಯಾಗುತ್ತಿರುವ ತೈಲದ ಪ್ರಮಾಣ 194 ಮಿಲಿಯನ್‌ ಟನ್‌ಗೆ ಏರಿಕೆಯಾಗಿದೆ.

ಭಾರತಕ್ಕೆ ಪ್ರತಿದಿನ ಅಗತ್ಯವಿರುವ ತೈಲದಲ್ಲಿ ಶೇ.84ರಷ್ಟನ್ನು ಹೊರ ದೇಶಗಳಿಂದ ಅಮದು ಮಾಡಿಕೊಳ್ಳುತ್ತಿದೆ. ಉಳಿದ 16ರಷ್ಟು ಮಾತ್ರವೇ ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ವಿದೇಶಗಳಿಂದ ಕಚ್ಚಾ ತೈಲವನ್ನು ಅಮದು ಮಾಡಿಕೊಳ್ಳುತ್ತಿರುವ ಭಾರತ, ದೇಶದೊಳಗೆಯೇ ಕಚ್ಚಾ ತೈಲ ಸಂಸ್ಕರಣಾಗಾರಗಳನ್ನು ಹೊಂದಿದೆ.

ಒಟ್ಟು 23 ಸಂಸ್ಕರಣಾಗಾರಗಳನ್ನು ಭಾರತ ಹೊಂದಿದ್ದು, ಪ್ರತಿದಿನವೊಂದಕ್ಕೆ 74.73 ಕೋಟಿ ಲೀಟರ್‌ಗಳಷ್ಟು ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲೂ ಕೂಡ ಭಾರತ 5ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸಧ್ಯ ಭಾರತದಲ್ಲಿ ಪ್ರತಿದಿನ 71.55 ಕೋಟಿ ಲೀಟರ್‌ಗಳಷ್ಟು ತೈಲವನ್ನು ಸಂಸ್ಕರಿಸಲಾಗುತ್ತಿದ್ದು, 2020ರ ವೇಳೆಗೆ ಈ ಪ್ರಮಾಣವನ್ನು 100 ಕೋಟಿ ಲೀಟರ್‌ ಮುಟ್ಟಿಸಬೇಕೆಂಬ ಆಶಯ ಭಾರತದ್ದು.

ಭಾರತದಲ್ಲಿರುವ ಕಚ್ಚಾ ತೈಲ ಸಂಸ್ಕರಣಾಗಾರಗಳು.
ಭಾರತದಲ್ಲಿರುವ ಕಚ್ಚಾ ತೈಲ ಸಂಸ್ಕರಣಾಗಾರಗಳು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿ ಹೇಗೆ:

ಭಾರತದ ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚು. ಪಾಕಿಸ್ತಾನದಲ್ಲಿ ಪೆಟ್ರೋಲ್‌ ಬೆಲೆ 50 ರೂಪಾಯಿಗಳಲ್ಲಿದೆ. ಬಾಂಗ್ಲಾ ದೇಶದಲ್ಲಿ 68 ರೂಪಾಯಿಗಳಿದ್ದರೆ ನೇಪಾಳದಲ್ಲಿ 66 ರೂಪಾಯಿಗಳಿದೆ. ಭಾರತದಿಂದಲೇ ಪೆಟ್ರೋಲ್‌ ಖರೀದಿಸುವ ಶ್ರೀಲಂಕಾದಲ್ಲಿ ಒಂದು ಲೀಟರ್‌ ಪೆಟ್ರೋಲ್‌ನ ಬೆಲೆ 49 ರೂಪಾಯಿಗಳು. ಭಾರತದಲ್ಲಿ ಮಾತ್ರ 80 ರೂಪಾಯಿಗಳನ್ನು ತಲುಪುವ ಧಾವಂತದಲ್ಲಿದೆ.

ಡೀಸೆಲ್‌ ಬೆಲೆಯೂ ಕೂಡ ಸುತ್ತಮುತ್ತಲಿನ ದೇಶಗಳಲ್ಲಿ 40 ರೂಪಾಯಿಗಳಿಂದ 57 ರೂಪಾಯಿಗಳ ಒಳಗಿದೆ. ಆದರೆ ಭಾರತದಲ್ಲಿ ಮಾತ್ರ 70 ರೂಪಾಯಿಗಳನ್ನು ತಲುಪುತ್ತಿದೆ. ಈ ಹೆಚ್ಚಿನ ಬೆಲೆಗೆ ಕಾರಣ ಭಾರತದ ಸರಕಾರ ವಿಧಿಸಿರುವ ತೆರಿಗೆಗಳು.

ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮೇಲೆ ವಿಧಿಸಿರುವ ಶೇಕಡವಾರು ತೆರಿಗೆಗಳ ಪಟ್ಟಿ.
ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮೇಲೆ ವಿಧಿಸಿರುವ ಶೇಕಡವಾರು ತೆರಿಗೆಗಳ ಪಟ್ಟಿ.

ಈ ಮೇಲಿನ ಪಟ್ಟಿ ಭಾರತದ ರಾಜಧಾನಿ ದೆಹಲಿಯಲ್ಲಿ ಮಾರಾಟವಾಗುವ ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಬೆಲೆಯನ್ನು ಹೇಗೆ ನಿಗದಿ ಮಾಡಲಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ. ಬುಧವಾರ ದೆಹಲಿಯಲ್ಲಿನ ಪೆಟ್ರೋಲ್‌ ಬಂಕ್‌ಗಳಲ್ಲಿ ಒಂದು ಲೀಟರ್‌ ಪೆಟ್ರೋಲ್ 76.87 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಆದರೆ ಪೆಟ್ರೋಲ್‌ನ ನೈಜ ಬೆಲೆ ಇರುವುದು 36.90 ರೂಪಾಯಿಗಳು ಮಾತ್ರ. ಈ 36.90 ರೂಪಾಯಿಗಳ ಮೇಲೆ ಕೇಂದ್ರ ಸರಕಾರ ಶೇ.26ರಷ್ಟು ಅಬಕಾರಿ ತೆರಿಗೆಯನ್ನು ವಿಧಿಸುತ್ತದೆ. ವ್ಯಾಪಾರಿಗಳು ಶೇ.5ರಷ್ಟು ಕಮಿಷನ್‌ ಹಾಕುತ್ತಾರೆ. ನಂತರ ಶೇ.21ರಷ್ಟು ಮೌಲ್ಯವರ್ಧಿತ ತೆರಿಗೆ ಸೇರಿಕೊಳ್ಳುತ್ತದೆ. ಇದಿಷ್ಟೂ ಸೇರಿ ಒಂದು ಲೀಟರ್‌ ಪೆಟ್ರೋಲ್‌ನ ಬೆಲೆ 76.87ರೂಪಾಯಿಗಳನ್ನು ಮುಟ್ಟುತ್ತದೆ.

ಡೀಸೆಲ್‌ ಬೆಲೆಯೂ ಕೂಡ ಹೀಗೆಯೇ. ಬುಧವಾರ ಡೀಸೆಲ್‌ನ ಸಾಮಾನ್ಯ ಬೆಲೆ 39.63 ರೂಪಾಯಿಗಳು. ಶೇ.23ರಷ್ಟು ಕೇಂದ್ರದ ಅಬಕಾರಿ ತೆರಿಗೆ, ಶೇ.4ರಷ್ಟು ವ್ಯಾಪಾರಿಗಳ ಕಮಿಷನ್ ಮತ್ತು ಶೇ.13ರಷ್ಟು ಮೌಲ್ಯವರ್ಧಿತ ತೆರಿಗೆ ಸೇರಿ 68.34 ರೂಪಾಯಿಗಳಿಗೆ ಮಾರಾಟಗೊಳ್ಳುತ್ತಿದೆ. ಇನ್ನಿತರ ಪೆಟ್ರೋಲಿಯಮ್‌ ಉತ್ಪನ್ನಗಳೂ ಕೂಡ ಇದೇ ರೀತಿ ತೆರಿಗೆಯನ್ನು ವಿಧಿಸಿಕೊಂಡು ದುಬಾರಿಯಾಗಿ ಕುಳಿತಿವೆ.

ಪೆಟ್ರೋಲ್‌ ಬಳಕೆ ಹೇಗಿದೆ?:

‘ಆಲ್ ಎಬೌಟ್ ಆಯಿಲ್’: ಭಾರತೀಯರ ತೈಲ ಬಳಕೆ ಹಿಂದಿದೆ ಅಚ್ಚರಿ ಮೂಡಿಸುವ ಅಂಕಿ ಅಂಶಗಳು!

ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲ್‌ ಬಳಸುತ್ತಿರುವುದು ದ್ವಿಚಕ್ರ ವಾಹನಗಳೇ. ಭಾರತದಲ್ಲಿ ಬಳಕೆಯಾಗುವ ಪೆಟ್ರೋಲ್ ಪೈಕಿ ಶೇ.61.42ರಷ್ಟನ್ನು ದ್ವಿಚಕ್ರ ವಾಹನಗಳೇ ಕುಡಿಯುತ್ತಿವೆ. ಶೇ.34.33ರಷ್ಟು ಪೆಟ್ರೋಲ್‌ ಕಾರುಗಳಿಗೆ ಬಳಕೆಯಾಗುತ್ತಿದ್ದು, ಶೇ.2.34ರಷ್ಟು ಪೆಟ್ರೋಲ್‌ಅನ್ನು ತ್ರಿಚಕ್ರ ವಾಹನಗಳು ಬಳಸುತ್ತಿವೆ. ಶೇ.1.51ರಷ್ಟು ಪೆಟ್ರೋಲ್‌ ಚಿಕ್ಕ ಪುಟ್ಟ ಸಾಗಾಣಿಕಾ ವಾಹನಗಳಿಗಾಗಿ ಬಳಕೆಯಾಗುತ್ತಿದ್ದು, ಉಳಿದ ಶೇ.0.93ರಷ್ಟು ಇನ್ನಿತರೆ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಸಂಸ್ಕರಣಗೊಳ್ಳುವ ಪೆಟ್ರೋಲ್‌ ಪೈಕಿ ಶೇ.99ರಷ್ಟು ಪೆಟ್ರೋಲ್‌, ಪೆಟ್ರೋಲ್‌ ಬಂಕ್‌ಗಳಲ್ಲಿಯೇ ಮಾರಾಟಗೊಳ್ಳುತ್ತದೆ.

ಡೀಸೆಲ್‌ ಬಳಕೆ:

ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಪೈಕಿ ಅತಿ ಹೆಚ್ಚು ಬೇಡಿಕೆಯನ್ನು ಹೊಂದಿರುವುದು ಡೀಸೆಲ್‌. ಒಟ್ಟು ಸಂಸ್ಕರಣೆಗೊಳ್ಳುವ ಡೀಸೆಲ್‌ ಪೈಕಿ ಶೇ.90ರಷ್ಟು ಪೆಟ್ರೋಲ್‌ ಬಂಕ್‌ಗಳಲ್ಲಿಯೇ ಮಾರಲ್ಪಡುತ್ತದೆ. ಒಟ್ಟು ಡೀಸೆಲ್‌ನಲ್ಲಿ ಶೇ.70ರಷ್ಟು ಸಾಗಾಣಿಕೆಯಲ್ಲಿ ಬಳಕೆಯಾಗುತ್ತದೆ. ಪ್ರಾರಂಭದಲ್ಲಿ ಪೆಟ್ರೋಲ್‌ಗಿಂತಲೂ ಡೀಸೆಲ್‌ ಬೆಲೆಯೇ ಹೆಚ್ಚಾಗಿರುತ್ತದೆ. ಸಾಮಾನ್ಯ ಬೆಲೆಗೆ ನಾನಾ ರೀತಿಯ ತೆರಿಗೆಗಳು ಸೇರಿ ಡೀಸೆಲ್‌ಗಿಂತ ಪೆಟ್ರೋಲ್‌ನ ಬೆಲೆ ಹೆಚ್ಚಾಗುತ್ತದೆ.

ಭಾರತದಲ್ಲಿ ಯಾವ್ಯಾವುದಕ್ಕೆ ಎಷ್ಟೆಷ್ಟು ಡೀಸೆಲ್‌ ಬಳಕೆಯಾಗುತ್ತಿದೆ ಎನ್ನುವುದು ಈ ಕೆಳಕಂಡಂತಿದೆ.

‘ಆಲ್ ಎಬೌಟ್ ಆಯಿಲ್’: ಭಾರತೀಯರ ತೈಲ ಬಳಕೆ ಹಿಂದಿದೆ ಅಚ್ಚರಿ ಮೂಡಿಸುವ ಅಂಕಿ ಅಂಶಗಳು!

ಭಾರತದಲ್ಲಿ ಬಳಕೆಯಾಗುವ ಡೀಸೆಲ್‌ ಪೈಕಿ ಅತಿ ಹೆಚ್ಚು ಪ್ರಮಾಣದ ಡೀಸೆಲ್‌ಅನ್ನು ಕುಡಿಯುವುದು ದೊಡ್ಡ ಮತ್ತು ಸಣ್ಣ ಮಟ್ಟದ ಸಾಗಾಣಿಕಾ ಟ್ರಕ್ಕುಗಳು. ಶೇ.28.25ರಷ್ಟು ಡೀಸೆಲ್‌ ಇವುಗಳಿಗೆ ಸಲ್ಲುತ್ತದೆ. ಶೇ.6.9ರಷ್ಟು ಡೀಸೆಲ್‌ ತ್ರಿಚಕ್ರ ಸಾಗಾಣಿಕಾ ವಾಹನಗಳಿಗೆ ಬಳಕೆಯಾಗುತ್ತದೆ. ಶೇ.8.94ರಷ್ಟು ತೈಲ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಕಾರುಗಳಿಗೆಂದು ಬಳಕೆಯಾದರೆ, ಶೇ.13.51ರಷ್ಟು ಖಾಸಗಿ ಕಾರುಗಳಿಗೆ ಬಳಕೆಯಾಗುತ್ತದೆ.

ಶೇ.13ರಷ್ಟು ಡೀಸೆಲ್‌ ಕೃಷಿ ಚಟುವಟಿಗೆಗಳಿಗಾಗಿ ಬಳಕೆಯಾಗುತ್ತಿದ್ದು, ಶೇ.9.55ರಷ್ಟನ್ನು ಬಸ್‌ಗಳಿಗಾಗಿ ಬಳಸಲಾಗುತ್ತಿದೆ. ಉಳಿದಂತೆ ಶೇ.3.24ರಷ್ಟು ರೈಲ್ವೆಗೆ, ಶೇ.0.48ರಷ್ಟು ವಿಮಾನಯಾನಕ್ಕೆ, ಶೇ.4.06ರಷ್ಟು ಕಾರ್ಖಾನೆಗಳಿಗೆ, ಶೇ. 1.54ರಷ್ಟು ಮೊಬೈಲ್‌ ಟವರ್‌ಗಳಿಗೆ ಮತ್ತು ಉಳಿದ ಶೇ.6.45ರಷ್ಟು ಕೈಗಾರಿಕೇತರ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಇಡೀ ದೇಶದ ಆರ್ಥಿಕತೆ ಇಂದು ಡೀಸೆಲ್‌ ಮೇಲೆಯೇ ನಿಂತಿದೆ. ಪೆಟ್ರೋಲಿಯಂ ಕೊರೆತೆಯನ್ನು ಭಾರತ ಎದುರಿಸಿದ್ದೇ ಆದಲ್ಲಿ ಇಡೀ ದೇಶಕ್ಕೆ ಹೊಡೆತ ಬೀಳುವುದು ನಿಸ್ಸಂದೇಹ.

ವರದಿಗಳು ಹೇಳುವ ಪ್ರಕಾರ, ಭಾರತದಲ್ಲಿ ಪ್ರತಿ 1000 ಜನರಲ್ಲಿ 40 ಜನರ ಬಳಿ ಕಾರುಗಳಿವೆ. ಯುರೋಪ್‌ ಖಂಡದ ರಾಷ್ಟ್ರಗಳಲ್ಲಿ ಪ್ರತಿ 1000 ಜನರಲ್ಲಿ 525 ಮಂದಿಯ ಬಳಿ ಕಾರುಗಳಿವೆ. ಭಾರತ ಇನ್ನೂ ಮುಂದುವರೆಯುತ್ತಿರುವ ರಾಷ್ಟ್ರ ಎನಿಸಿಕೊಂಡಿದ್ದು, ಬಹುಪಾಲು ಜನರ ಬಳಿ ಕಾರು ಕೊಳ್ಳುವ ಶಕ್ತಿ ಇಲ್ಲದ ಕಾರಣ, ಜನಸಾಮಾನ್ಯರು ತಮ್ಮ ಖಾಸಗಿ ಕಾರಣಗಳಿಗಾಗಿ ಡೀಸೆಲ್‌ ಬಳಸುವ ಪ್ರಮಾಣ ಕಡಿಮೆಯಿದೆ. ಆದರೆ ಪೆಟ್ರೋಲ್ ವಿಷಯದಲ್ಲಿ ಹೀಗಿಲ್ಲ.

ಪೆಟ್ರೋಲ್‌ ಬಳಕೆ ಹೆಚ್ಚಾಗಿರುವುದು ದ್ವಿಚಕ್ರ ವಾಹನಗಳಿಂದ. ಮಧ್ಯಮ ವರ್ಗದ ಜನ ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನೇ ಅವಲಂಭಿಸಿದ್ದಾರೆ. ಭಾರತ 21ನೇ ಶತಮಾನಕ್ಕೆ ಕಾಲಿಟ್ಟಾಗ ಶೇ.4ರಷ್ಟು ಜನ ಮಧ್ಯಮ ವರ್ಗದಲ್ಲಿದ್ದರು ಎಂದು ವರದಿಗಳು ಹೇಳಿದ್ದವು. 2015ಕ್ಕೆ ಮಧ್ಯಮ ವರ್ಗದವರ ಸಂಖ್ಯೆ ಶೇ.22ನ್ನು ತಲುಪಿದೆ. ಅದೇ ಪ್ರಮಾಣದಲ್ಲಿ ದ್ವಿಚಕ್ರವಾಹನಗಳ ಸಂಖ್ಯೆಯೂ ಏರಿಕೆಯಾಗಿದೆ. 2030ರ ವೇಳೆಗೆ ಭಾರತದ ಶೇ.45ರಷ್ಟು ಮಂದಿ ಮಧ್ಯಮ ವರ್ಗದಲ್ಲಿ ಕಾಣಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗೇನಾದರೂ ಆದಲ್ಲಿ ಭಾರತದ ದ್ವಿಚಕ್ರ ವಾಹನಗಳ ಸಂಖ್ಯೆಯೂ ದ್ವಿಗುಣಗೊಳ್ಳಲಿದೆ. ಪೆಟ್ರೋಲ್‌ ಮೇಲಿನ ಅವಲಂಬನೆಯೂ ಅಧಿಕವಾಗಬಹುದು.

ಭಾರತದ ಮುಂದಿನ ದಿನಗಳಿಗಾಗಿ ಪೆಟ್ರೋಲಿಯಂಅನ್ನು ಕೂಡಿಟ್ಟುಕೊಳ್ಳುತ್ತಿದೆ. ಈವರೆಗೆ ಭಾರತದ ಬಳಿ 3.74 ಲಕ್ಷ ಬ್ಯಾರಲ್‌ ತೈಲ ದಾಸ್ತಾನಿದೆ. ಇಷ್ಟು ತೈಲವನ್ನು ಸಂಸ್ಕರಿಸಿದರೆ ಭಾರತದ 2 ವಾರಗಳ ತೈಲ ಬೇಡಿಕೆಯನ್ನಷ್ಟೇ ಪೂರೈಕೆ ಮಾಡಬಹುದು. 2020ರ ವೇಳೆಯೊಳಗೆ ಈ ದಾಸ್ತಾನಿನ ಪ್ರಮಾಣವನ್ನು 13.20 ಲಕ್ಷ ಬ್ಯಾರಲ್‌ಗಳಿಗೆ ಏರಿಸುವ ನಿರ್ಧಾರವನ್ನು ಭಾರತ ಕೈಗೊಂಡಿದೆ.

ಇದನ್ನು ಬಿಟ್ಟು ಭಾರತದ ಭೂಗರ್ಭದಲ್ಲಿರುವ ಪೆಟ್ರೋಲಿಯಂನ ಪ್ರಮಾಣ ಸರಿಸುಮಾರು 750 ಮಿಲಿಯನ್‌ ಮೆಟ್ರಿಕ್‌ ಟನ್‌ಗಳೆಂದು ಅಂದಾಜಿಸಲಾಗಿದೆ. ಇಷ್ಟೂ ತೈಲದ ಒಟ್ಟು ಪ್ರಮಾಣ 525 ಕೋಟಿ ಬ್ಯಾರಲ್‌ಗಳಾಗಬಹುದು. ಲೀಟರ್‌ ಪ್ರಮಾಣದಲ್ಲಿ ನೋಡುವುದಾದರೆ 83,475 ಕೋಟಿ ಲೀಟರ್‌ಗಳು. ಇಂದು ಬಳಸುತ್ತಿರುವ ಪ್ರಮಾಣದಲ್ಲಿಯೇ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಾ ಸಾಗಿದರೆ ಕೆಲವೇ ವರ್ಷಗಳಲ್ಲಿ ಭಾರತೀಯ ಭೂಗರ್ಭದ ಪೆಟ್ರೋಲ್‌ ಖಾಲಿಯಾಗಿಬಿಡುತ್ತದೆ.

ಇತರೆ ದೇಶಗಳೂ ಕೂಡ ಇದೇ ಪ್ರಮಾಣದಲ್ಲಿ ತೈಲವನ್ನು ಬಗಿಯುತ್ತಾ ಸಾಗಿದರೆ ಇನ್ನು 53 ವರ್ಷಗಳಲ್ಲಿ ಪೆಟ್ರೋಲಿಯಂ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗುತ್ತದೆ ಎಂದು ವರದಿಗಳೇ ತಿಳಿಸಿವೆ. ಜತೆಗೆ ದೇಶ ದೇಶಗಳ ನಡುವಿನ ವೈಮನಸ್ಯಗಳು ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಏರುವಂತೆ ಮಾಡಿವೆ. ಇನ್ನಾದರೂ ಭಾರತದಂತಹ ಪೆಟ್ರೋಲಿಯಂ ನಿಕ್ಷೇಪಗಳು ಕಡಿಮೆ ಇರುವ ದೇಶಗಳು ನವೀಕರಿಸಬಹುದಾದ ಇಂಧನ ಮೂಲಗಳ ಕಡೆಗೆ ಸಾಗದಿದ್ದರೆ, ದೇಶಗಳ ಇಡೀ ಆರ್ಥಿಕ ವ್ಯವಸ್ಥೆಯೇ ಮುಗ್ಗರಿಸಿ ಬೀಳಬಹುದು.