ಮೋದಿಯ 15 ಲಕ್ಷ, ಎಚ್‌ಡಿಕೆ ಸಾಲಮನ್ನಾ: ಚುನಾವಣಾ ಭರವಸೆಗಳು ಮತ್ತು ವಾಸ್ತವ!
COVER STORY

ಮೋದಿಯ 15 ಲಕ್ಷ, ಎಚ್‌ಡಿಕೆ ಸಾಲಮನ್ನಾ: ಚುನಾವಣಾ ಭರವಸೆಗಳು ಮತ್ತು ವಾಸ್ತವ!

ರಾಜಕಾರಣಿಗಳು ಚುನಾವಣಾ ವೇದಿಕೆಗಳಲ್ಲಿ ಕೊಡುವ ಭರವಸೆಗಳಿಗೂ, ಆಡಳಿತ ವ್ಯವಸ್ಥೆಯೊಳಗೆ ಅವನ್ನು ಈಡೇರಿಸಲು ಇರುವ ಸಾಧ್ಯತೆಗಳಿಗೂ ಸಾಕಷ್ಟು ಅಂತರಗಳಿರುತ್ತವೆ.

ರಾಜಕಾರಣಿಗಳ ಚುನಾವಣಾ ಪೂರ್ವ ಭಾಷಣಗಳು ಬಹುತೇಕ ಜನಪ್ರಿಯ ಭರವಸೆಗಳಿಂದಲೇ ಕೂಡಿರುತ್ತವೆ. ರೈತರ ಸಾಲ ಮನ್ನಾ, ಬಡವರಿಗೆ ಉಚಿತ ವಸತಿ, ಉಚಿತ ಊಟ, ಉಚಿತ ಬಸ್‌ ಪಾಸ್‌ – ಹೀಗೆ ಜನಸಾಮಾನ್ಯರನ್ನು ಸೆಳೆಯಲು ಬೇಕಾದ ಎಲ್ಲಾ ತಂತ್ರಗಳನ್ನೂ ರಾಜಕಾರಣಿಗಳು ಬಳಸುವುದು ಸಾಮಾನ್ಯ. ಆದರೆ, 2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಕೊಟ್ಟಿದ್ದ ಭರವಸೆ ಇಡೀ ದೇಶದ ತಮ್ಮ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಿಕೊಳ್ಳುವಂತೆ ಮಾಡಿತ್ತು!

“ಬಿಜೆಪಿ ಅಧಿಕಾರಕ್ಕೆ ಬಂದರೆ ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ವಾಪಸ್‌ ತಂದು ಬಡವರ ಬ್ಯಾಂಕ್‌ ಖಾತೆಗಳಿಗೆ 15 ಲಕ್ಷರಿಂದ 20 ಲಕ್ಷ ರೂಪಾಯಿ ಜಮಾ ಮಾಡಲಾಗುವುದು” ಎಂದು ಮೋದಿ ಭರವಸೆ ಕೊಟ್ಟಿದ್ದರು. 2014ರ ಲೋಕಸಭಾ ಚುನಾವಣೆಗೂ ಮುನ್ನಾ ಮೋದಿ ನೀಡಿದ್ದ ಈ ಭರವಸೆ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಇನ್ನೂ ಈಡೇರಿಲ್ಲ.

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್‌ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ತಮೆಗ ಪೂರ್ಣ ಬಹುಮತ ಬರದಿರುವ ಕಾರಣ ಸಾಲ ಮನ್ನಾದ ಭರವಸೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಚುನಾವಣೆಗೂ ಮುನ್ನಾ ಸರಕಾರದಿಂದ ಹೊರಗಿದ್ದು ನೀಡುವ ಭರವಸೆಗಳಿಗೂ, ಚುನಾವಣೆ ಮುಗಿದು ಅಧಿಕಾರದ ಚುಕ್ಕಾಣಿ ಹಿಡಿದಾಗ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲು ಇರುವ ಕಾನೂನು ತೊಡಕುಗಳು, ಆರ್ಥಿಕ ಸ್ಥಿತಿಗತಿಗಳ ಅರಿವು ರಾಜಕಾರಣಿಗಳಿಗೆ ಆಗುತ್ತದೆ. ಆದರೆ, ಕೊಟ್ಟಿರುವ ಭರವಸೆಗಳನ್ನು ಈಡೇರಿಸದೇ ಇದ್ದರೆ ಜನಸಾಮಾನ್ಯರಿಂದ ಛೀಮಾರಿ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ.

ಚುನಾವಣೆಯ ಸಂದರ್ಭದಲ್ಲಿ ಜನಸಮೂಹವನ್ನು ಮಾತಿನ ಮೂಲಕ ಮೋಡಿ ಮಾಡಿ, ಬಣ್ಣ ಬಣ್ಣದ ಭರವಸೆಗಳನ್ನು ಕೊಡುವ ರಾಜಕಾರಣಿಗಳು ತಮಗೆ ಅಧಿಕಾರ ಸಿಕ್ಕಾಗ ಈ ಭರವಸೆಗಳನ್ನು ಈಡೇರಿಸಲು ಸಾಧ್ಯತೆ ಎಂಬ ಭವಿಷ್ಯದ ದೂರದೃಷ್ಟಿ ಇರುವುದಿಲ್ಲ. ಹೀಗಾಗಿಯೇ ಚುನಾವಣಾ ವೇದಿಕೆಗಳಿಂದ ಎಲ್ಲಾ ಪಕ್ಷಗಳ ನಾಯಕರೂ ಒಬ್ಬರಿಗಿಂತ ಒಬ್ಬರು ಗಿಲೀಟಿನ ಭರವಸೆಗಳನ್ನು ನೀಡುತ್ತಲೇ ಹೋಗುತ್ತಾರೆ.

2014ರ ಲೋಕಸಭಾ ಚುನಾವಣೆಗೂ ಮುನ್ನಾ ಕಪ್ಪು ಹಣ ವಾಪಸ್‌ ತಂದು 15 ಲಕ್ಷ ರೂಪಾಯಿಯನ್ನು ಬಡವರ ಬ್ಯಾಂಕ್‌ ಖಾತೆಗಳಿಗೆ ಹಾಕುವುದಾಗಿ ಭರವಸೆ ಕೊಟ್ಟಿದ್ದ ಮೋದಿ ಅದೇ ಭರವಸೆಯನ್ನು ಅಧಿಕಾರಕ್ಕೆ ಬಂದ ಮೇಲೂ ಅದೆಷ್ಟೋ ಸಾರಿ ಪುನರುಚ್ಛರಿಸಿದ್ದರು.

2016ರ ನವೆಂಬರ್‌ 12ರಂದು ಗೋವಾದಲ್ಲಿ ಮಾತನಾಡಿದ್ದ ಮೋದಿ, “ಮುಂದಿನ 50 ದಿನಗಳಲ್ಲಿ ಕಪ್ಪುಹಣವನ್ನು ಭಾರತಕ್ಕೆ ವಾಪಸ್‌ ತರದಿದ್ದರೆ ದೇಶದ ಜನ ಏನೇ ಶಿಕ್ಷೆ ನೀಡಿದರೂ ಆ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧ” ಎಂದು ಭಾವುಕವಾಗಿ ಮಾತನಾಡಿದ್ದರು. 2016ರ ಡಿಸೆಂಬರ್‌ 30ರೊಳಗೆ ಕಪ್ಪು ಹಣವನ್ನು ಸಂಪೂರ್ಣವಾಗಿ ಭಾರತಕ್ಕೆ ತರುವ ಕಾಲಮಿತಿ ಹಾಕಿಕೊಂಡಿದ್ದ ಮೋದಿ ಬಳಿಕ ಆ ವಿಚಾರವನ್ನು ಅಲ್ಲಿಗೇ ಬಿಟ್ಟರು.

ಭರವಸೆ ಮತ್ತು ವಾಸ್ತವ

ರಾಜಕಾರಣಿಗಳು ಚುನಾವಣೆಗೂ ಮುನ್ನಾ ನೀಡುವ ಭರವಸೆಗಳಿಗೂ, ಸರಕಾರಿ ಯಂತ್ರದ ಒಳ ಹೊಕ್ಕಾಗ ಅವರಿಗೆ ಕಾಣುವ ವಾಸ್ತವಕ್ಕೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ ಎನ್ನುತ್ತಾರೆ ಆರ್ಥಿಕ ತಜ್ಞರು.

“ಚುನಾವಣೆ ಸಂದರ್ಭದಲ್ಲಿ ಜನರ ಮತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ರಾಜಕಾರಣಿಗಳು ಜನಪ್ರಿಯ ಭರವಸೆಗಳನ್ನು ನೀಡುತ್ತಾರೆ. ಹೀಗೆ ಭರವಸೆಗಳನ್ನು ನೀಡುವುದರಲ್ಲಿ ಯಾವ ಪಕ್ಷಗಳೂ, ಯಾವ ರಾಜಕಾರಣಿಗಳೂ ಹಿಂದೆ ಉಳಿದಿಲ್ಲ. ಮುಂದೆ ಅಧಿಕಾರ ಸಿಕ್ಕಾಗ ನೋಡಿಕೊಂಡರಾಯಿತು ಎಂಬ ಉದಾಸೀನ ಭಾವದಲ್ಲಿ ರಾಜಕಾರಣಿಗಳು ಭರವಸೆಗಳನ್ನು ನೀಡಿರುತ್ತಾರೆ. ಆದರೆ, ಅದನ್ನು ಈಡೇರಿಸುವುದು ಭರವಸೆ ಕೊಟ್ಟಷ್ಟು ಸುಲಭ ಅಲ್ಲ ಎಂಬುದು ಅಧಿಕಾರ ಸಿಕ್ಕ ಬಳಿಕ ಅವರಿಗೇ ಗೊತ್ತಾಗುತ್ತದೆ” ಎನ್ನುತ್ತಾರೆ ಆರ್ಥಿಕ ವಿಶ್ಲೇಷಕ ಪ್ರೊ. ಎಂ.ಎಸ್‌. ಶ್ರೀರಾಮ್‌.

ರಾಜಕಾರಣಿಗಳು ಭರವಸೆ ನೀಡುವ ಸಂದರ್ಭದಲ್ಲಿ ಕಾನೂನು ತೊಡಕುಗಳು, ಸರಕಾರದ ಹಣಕಾಸಿನ ಪರಿಸ್ಥಿತಿ ಈ ಯಾವುದರ ಬಗ್ಗೆಯೂ ಯೋಚಿಸಿರುವುದಿಲ್ಲ. ಅಧಿಕಾರ ಸಿಕ್ಕಾಗ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಲು ಇರುವ ತೊಡಕುಗಳೇನು ಎಂಬುದು ರಾಜಕಾರಣಿಗಳಿಗೆ ಗೊತ್ತಾಗುತ್ತದೆ.
- ಪ್ರೊ. ಎಂ.ಎಸ್‌. ಶ್ರೀರಾಮ್‌, ಆರ್ಥಿಕ ವಿಶ್ಲೇಷಕ

‘ಪೂರ್ಣ ಬಹುಮತ ಸಿಕ್ಕಿಲ್ಲ’

ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ 53 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿರುವುದರಿಂದ ಸಮನ್ವಯ ಸಮಿತಿಯ ಮೂಲಕ ಎರಡೂ ಪಕ್ಷಗಳು ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ ಕುಮಾರಸ್ವಾಮಿ.

ಆದರೆ, ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿರಲಿಲ್ಲ. ಹೀಗಾಗಿ ರಾಜ್ಯದ ರೈತರ 53 ಸಾವಿರ ಕೋಟಿ ರೂಪಾಯಿ ಸಂಪೂರ್ಣ ಸಾಲ ಮನ್ನಾ ಭರವಸೆ ಈಡೇರುವ ಸಾಧ್ಯತೆ ಕಡಿಮೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳಿಗೂ ಅಧಿಕಾರ ಸಿಕ್ಕರೂ ಪೂರ್ಣ ಬಹುಮತದ ನೆವದಿಂದ ತಾವು ಕೊಟ್ಟಿದ್ದ ಭರವಸೆಗಳಿಂದ ನುಣುಚಿಕೊಳ್ಳಲು ಅವಕಾಶವಿದೆ.

ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ 1 ಲಕ್ಷ ರೂಪಾಯಿವರೆಗಿನ ರೈತರ ಬೆಳೆ ಸಾಲ, ನೇಕಾರರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಮೂರು ದಿನದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ದಿನವೇ ಈ ಸಂಬಂಧ ಆದೇಶ ಹೊರಡಿಸಲು ತರಾತುರಿ ನಡೆಸಿದ್ದರೂ ಆಡಳಿತ ಯಂತ್ರದೊಳಗೆ ಅವಸರದಲ್ಲಿ ಇಂತಹ ಪ್ರಮುಖ ಆದೇಶ ಹೊರಡಿಸುವುದು ಸಾಧ್ಯವಿಲ್ಲ ಎಂಬುದು ಕೊನೆಗೂ ಸಾಬೀತಾಯಿತು.

ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ 4 ವರ್ಷ ಕಳೆದರೂ ತಾನು ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸಿಲ್ಲ. ಕಪ್ಪು ಹಣವನ್ನು ಭಾರತಕ್ಕೆ ವಾಪಸ್‌ ತಂದು ದೇಶದ ನಾಗರಿಕರ ಬ್ಯಾಂಕ್‌ ಖಾತೆಗಳಿಗೆ ತಲಾ 15 ಲಕ್ಷ ರೂಪಾಯಿ ಹಾಕುವುದಾಗಿ ಖುದ್ದು ಮೋದಿ ಭರವಸೆ ನೀಡಿದ್ದರು. ಆದರೆ, ದೇಶಕ್ಕೆ ಇನ್ನೂ ಕಪ್ಪು ಹಣ ವಾಪಸ್‌ ಬಂದಿಲ್ಲ. ತಮ್ಮ ಬ್ಯಾಂಕ್‌ ಖಾತೆಗೆ ಇಂದಿಲ್ಲಾ ನಾಳೆ 15 ಲಕ್ಷ ರೂಪಾಯಿ ಬಂದು ಬೀಳಬಹುದು ಎಂದು ಕನಸು ಕಾಣುತ್ತಿದ್ದ ಜನಸಾಮಾನ್ಯರು ಈಗ 15 ಲಕ್ಷ ರೂಪಾಯಿಯ ಆಸೆಗೆ ಎಳ್ಳುನೀರು ಬಿಟ್ಟಿದ್ದಾರೆ.

ಅಲ್ಲದೆ, ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ಭ್ರಷ್ಟಾಚಾರ ನಿರ್ಮೂಲನೆ, ಆಡಳಿತದಲ್ಲಿ ಪಾರದರ್ಶಕತೆ, ಕಪ್ಪುಹಣಕ್ಕೆ ಕಡಿವಾಣ, ಎಲ್ಲಾ ಕೃಷಿಕರ ಜಮೀನಿಗೂ ನೀರು, ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಪೂರೈಕೆ, ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ, ಎಲ್ಲರಿಗೂ ಸೂರು, ಉದ್ಯೋಗ ಹೆಚ್ಚಳದ ಭರವಸೆ ನೀಡಿದ್ದ ಬಿಜೆಪಿ ಈ ಭರವಸೆಗಳನ್ನು ಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿಲ್ಲ.

ರಾಜಕಾರಣಿಗಳು ಚುನಾವಣಾ ವೇದಿಕೆಗಳಲ್ಲಿ ಕೊಡುವ ಭರವಸೆಗಳಿಗೂ, ಆಡಳಿತ ವ್ಯವಸ್ಥೆಯೊಳಗೆ ಅವನ್ನು ಈಡೇರಿಸಲು ಇರುವ ಸಾಧ್ಯತೆಗಳಿಗೂ ಸಾಕಷ್ಟು ಅಂತರಗಳಿರುತ್ತವೆ. ಭರವಸೆಗಳು ಮತ್ತು ವಸ್ತುಸ್ಥಿತಿಯ ನಡುವೆ ಸಾಕಷ್ಟು ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸವನ್ನು ಅರಿತು ರಾಜಕಾರಣಿಗಳು ಈಡೇರುವಂಥ ಭರವಸೆಗಳನ್ನು ನೀಡಿದರೆ ಮಾತ್ರ ತಮ್ಮ ಮಾತನ್ನು ಉಳಿಸಿಕೊಳ್ಳಲು ಸಾಧ್ಯ.