samachara
www.samachara.com
‘ಬಣ್ಣದ ಬದುಕು, ರಾಜಕೀಯಕ್ಕೆ ರಂಗು’: ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿ
COVER STORY

‘ಬಣ್ಣದ ಬದುಕು, ರಾಜಕೀಯಕ್ಕೆ ರಂಗು’: ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿ

ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಕುಮಾರಸ್ವಾಮಿಯವರ ಸಿಎಂ ಕನಸು ನನಸಾಗಿದೆ. 12 ವರ್ಷಗಳ ಅಧಿಕಾರದ ವನವಾಸ ಮುಗಿಸಿ ಬುಧವಾರ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕುಮಾರಸ್ವಾಮಿ ರಾಜಕೀಯ ಬದುಕಿನ ಹೆಜ್ಜೆಗಳ ದಾಖಲೆ ಇಲ್ಲಿದೆ. 

ಬುಧವಾರ ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2ನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. 

ಜೆಡಿಎಸ್‌ ಕಾರ್ಯಕರ್ತರ ಪಾಲಿಗೆ ಕುಮಾರಣ್ಣ ಎಂದೇ ಖ್ಯಾತರಾಗಿರುವ ಎಚ್‌. ಡಿ. ಕುಮಾರಸ್ವಾಮಿ ಜನಿಸಿದ್ದು 1959ರ ಡಿಸೆಂಬರ್‌ 16ರಂದು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಅವರ ಹುಟ್ಟೂರು. ತಮ್ಮ ಬಾಲ್ಯ ಹಾಗೂ ಪ್ರಾರ್ಥಮಿಕ ಶಿಕ್ಷಣವನ್ನು ಕುಮಾರಸ್ವಾಮಿ ಹಾಸನದ ಹೊಳೆನರಸೀಪುರದಲ್ಲಿ ಮುಗಿಸಿಕೊಂಡಿದ್ದರು. ಫ್ರೌಡಾವಸ್ಥೆಯನ್ನು ತಲುಪುವ ವೇಳೆಗೆ ಕುಂಟುಂಬದ ಜತೆ ಬೆಂಗಳೂರಿಗೆ ಬಂದು ನೆಲೆಸಿದ ಕುಮಾರಸ್ವಾಮಿ, ಜಯನಗರದ ಎಂಇಎಸ್‌ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು.

ಪದವಿ ಪೂರ್ವ ಶಿಕ್ಷಣವನ್ನು ವಿಜಯ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಜಯನಗರದಲ್ಲಿರುವ ಪ್ರತಿಷ್ಟಿತ ನ್ಯಾಷನಲ್‌ ಪದವಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು.

ಎಚ್‌. ಡಿ. ಕುಮಾರಸ್ವಾಮಿಗೆ ನಟ ಡಾ. ರಾಜ್‌ಕುಮಾರ್‌ ಎಂದರೆ ಎಲ್ಲಿಲ್ಲದ ಅಭಿಮಾನ. ಅಂದಿನ ಚಿತ್ರಗಳಲ್ಲಿ ರಾಜ್‌ಕುಮಾರ್‌ ಧರಿಸುತ್ತಿದ್ದಂತ ಬಟ್ಟೆಗಳನ್ನೇ ಧರಿಸಬೇಕೆಂಬ ಆಸೆ ಕುಮಾರಸ್ವಾಮಿಯವರಲ್ಲಿತ್ತು. ರಾಜ್‌ಕುಮಾರ್‌ ಧರಿಸಿದಂತದೇ ಪ್ಯಾಂಟ್‌ಗಳನ್ನು ತೊಡಬೇಕು ಎಂದು ಕುಮಾರಸ್ವಾಮಿ ಆಶಿಸುತ್ತಿದ್ದರು. ರಾಜ್‌ಕುಮಾರ್‌ ಕಾರಣದಿಂದಾಗಿಯೇ ಕುಮಾರಸ್ವಾಮಿಯವರಿಗೆ ಚಿತ್ರರಂಗವನ್ನು ಪ್ರವೇಶಿಸಬೇಕು ಎನ್ನುವ ಆಸೆ ಅಂಕುರಿಸಿತ್ತು. ರಾಜಕಾರಣದ ಮೇಲೆ ಒಲವಿರದಿದ್ದ ಕುಮಾರಸ್ವಾಮಿ ಚಿತ್ರರಂಗದಲ್ಲಿ ಯಶಸ್ಸು ಕಾಣಬೇಕು ಎಂದೇ ಕಾಲೇಜು ದಿನಗಳಲ್ಲೇ ಚಿಂತಿಸಿದ್ದರು.

ಬೆಂಗಳೂರಿನಲ್ಲಿಯೇ ವಾಸವಾಗಿದ್ದ ಕುಮಾರಸ್ವಾಮಿ 1986 ಮಾರ್ಚ್‌ 3ರಂದು ಅನಿತಾರ ಕೈಹಿಡಿದರು. ಜನಿಸಿದ ತಮ್ಮ ಮಗನಿಗೆ ನಿಖಿಲ್‌ ಗೌಡ ಎಂದು ನಾಮಕರಣ ಮಾಡಿದರು. ಈವರೆಗೂ ಕೂಡ ಕುಮಾರಸ್ವಾಮಿ ತಂದೆಯ ರಾಜಕಾರಣವನ್ನು ಬೆಳೆದಿದ್ದರೆ ವಿನಃ ಸ್ವತಃ ರಾಜಕಾರಣದಲ್ಲಿ ಭಾಗಿಯಾಗಿರಲಿಲ್ಲ.

ರಾಜಕೀಯದತ್ತ ತಿರುಗಿದ ಬದುಕು:

ಎಚ್. ಡಿ. ಕುಮಾರಸ್ವಾಮಿ ರಾಜಕೀಯ ಬದುಕು ಆರಂಭಗೊಂಡಿದ್ದು 1996ರಲ್ಲಿ. ಆಗ ಅವರಿಗೆ ಸರಿಸುಮಾರು 36ರ ಪ್ರಾಯ. ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಕಾಲಿರಿಸಿದ ಕುಮಾರಸ್ವಾಮಿ, ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದ ಜನತಾದಳ ಅಭ್ಯರ್ಥಿಯಾಗಿ ಪರೀಕ್ಷೆಗೆ ಇಳಿದಿದ್ದರು.

ಕನಕಪುರ ಲೋಕಸಭಾ ಕ್ಷೇತ್ರ ಸ್ವತಂತ್ರ ನಂತರದಿಂದಲೂ ಕೂಡ ಕಾಂಗ್ರೆಸ್‌ನ ಭದ್ರ ಕೋಟೆಯಾಗಿತ್ತು. ಕಾಂಗ್ರೆಸ್‌ ನಾಯಕ ಎಂ. ವಿ. ಚಂದ್ರಶೇಖರ ಮೂರ್ತಿ ಸತತ 5 ಬಾರಿ ಕನಕಪುರದಿಂದ ಆಯ್ಕೆಯಾಗಿ ಸಂಸತ್ತನ್ನು ಪ್ರವೇಶಿಸಿದ್ದರು. ಕ್ಷೇತ್ರದಲ್ಲಿ ಬೇರು ಬಿಟ್ಟಿದ್ದ ಚಂದ್ರಶೇಖರ ಮೂರ್ತಿಯವರ ಮುಂದೆ ಇದೀಗ ತಾನೇ ರಾಜಕೀಯ ಜೀವನವನ್ನು ಆರಂಭಿಸುತ್ತಿರುವ ಕುಮಾರಸ್ವಾಮಿ ಗೆದ್ದು ಬರುವುದು ಸಾಧ್ಯವೇ ಎಂಬ ಪ್ರಶ್ನೆಯೂ ಕೇಳಿಬಂದಿತ್ತು. ಇದ್ಯಾವುದಕ್ಕೂ ಆಸ್ಪದ ಕೊಡದ ಕುಮಾರಸ್ವಾಮಿಯನ್ನು ಕನಕಪುರ ಕ್ಷೇತ್ರದ ಜನರ ಗೆಲ್ಲಿಸಿದ್ದರು. ಅಲ್ಲಿಯವರೆಗೂ ಗ್ರಾಮ ಪಂಚಾಯಿತಿ, ವಿಧಾನಸಭೆ ಯಾವುದನ್ನೂ ಕಾಣದ ಕುಮಾರಸ್ವಾಮಿ ಮೊದಲ ಬಾರಿಗೇ ಸಂಸತ್ತನ್ನು ಪ್ರವೇಶಿಸಿದ್ದರು.

ಆ ಸಮಯದಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳು ಜನತಾದಳದ ಪಾಲಾಗಿದ್ದವು. ಸಂಸತ್ತಿನಲ್ಲೂ ಕೂಡ ಯಾವುದೇ ಪಕ್ಷ ಬಹುಮತ ಪಡೆಯದೇ ಅತಂತ್ರ ಸ್ಥಿತಿ ಉಂಟಾಗಿತ್ತು. ಆ ವೇಳೆ ಕುಮಾರಸ್ವಾಮಿ ತಂದೆ ಎಚ್‌. ಡಿ. ದೇವೇಗೌಡರು ಸುಮಾರು 10 ತಿಂಗಳ ಕಾಲ ದೇಶದ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡಿದ್ದರು. ಆದರೆ ಸರಕಾರ ಹೆಚ್ಚಿನ ದಿನಗಳ ಕಾಲ ಉಳಿಯಲಿಲ್ಲ. ದೇವೇಗೌಡರು ಅಧಿಕಾರ ಕಳೆದುಕೊಂಡ ನಂತರದಲ್ಲಿ ಸರಕಾರವೂ ಉರುಳಿ, ಮರು ಚುನಾವಣೆ ಘೋಷಣೆಯಾಯಿತು.

ಪ್ರಧಾನ ಮಂತ್ರಿಯಾಗಿದ್ದ ವೇಳೆಯಲ್ಲಿ ದೇವೇಗೌಡರು.
ಪ್ರಧಾನ ಮಂತ್ರಿಯಾಗಿದ್ದ ವೇಳೆಯಲ್ಲಿ ದೇವೇಗೌಡರು.

ದೇವೇಗೌಡರು ಕೇಂದ್ರದಲ್ಲಿ ಕೆಳಗಿಳಿದರೆ, ಇಲ್ಲಿ ಕುಮಾರಸ್ವಾಮಿ ತಮ್ಮ ಸಂಸದನ ಪಟ್ಟ ಕಳೆದುಕೊಳ್ಳಬೇಕಾಯಿತು. 1998ರಲ್ಲಿ ನಡೆದ ಮರುಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂವಿಸಿ ಮೂರ್ತಿ ಕುಮಾರಸ್ವಾಮಿಯವರನ್ನು ಠೇವಣಿ ಕೂಡ ಇಲ್ಲದಂತೆ ಹೀನಾಯವಾಗಿ ಸೋಲಿಸಿದ್ದರು. ಕುಮಾರಸ್ವಾಮಿ ಇದುವರೆಗೂ ಸ್ಪರ್ಧಿಸಿರುವ ಚುನಾವಣೆಗಳಲ್ಲಿ ಅತೀ ಹೀನಾಯವಾಗಿ ಸೋತಿದ್ದೂ ಕೂಡ ಇದೇ ಚುನಾವಣೆಯಲ್ಲಿಯೇ.

1999ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಾಗಲೂ ಕೂಡ ಕುಮಾರಸ್ವಾಮಿಯವರ ಅದೃಷ್ಟ ಕೈಕೊಟ್ಟಿತ್ತು. ಕಾಂಗ್ರೆಸ್ ಪಕ್ಷದಿಂದ ಪ್ರತಿಸ್ಪರ್ಧಿಯಾಗಿ ನಿಂತಿದ್ದ ಡಿ. ಕೆ. ಶಿವಕುಮಾರ್‌ ಸರಿಸುಮಾರು 14, 500 ಮತಗಳ ಅಂತರದಿಂದ ಕುಮಾರಸ್ವಾಮಿಯವರನ್ನು ಸೋಲಿಸಿದ್ದರು.

ಹಿಂದೆ ಹಿಂದೆಯೇ ಎರಡು ಸೋಲುಗಳನ್ನು ಕಂಡರು ಕುಮಾರಸ್ವಾಮಿ. ಆದರೆ ಅದೇ ವೇಳೆಗೆ ಕುಮಾರಸ್ವಾಮಿ ಬಂಡವಾಳ ಹೂಡಿದ್ದ ವಿಷ್ಣುವರ್ಧನ್‌ ಮುಖ್ಯಪಾತ್ರಾಭಿನಯದ ಚಲನಚಿತ್ರ ‘ಸೂರ್ಯವಂಶ’ ಅತ್ಯದ್ಭುತ ಗೆಲುವನ್ನು ಕಂಡಿತ್ತು. ಚಿತ್ರದ ಯಶಸ್ಸು ಕುಮಾರಸ್ವಾಮಿಯವರ ಚುನಾವಣಾ ಸೋಲನ್ನು ಒಂದಷ್ಟರಮಟ್ಟಿಗೆ ಮರೆಸಿರಬಹುದು. ಸೂರ್ಯವಂಶಕ್ಕೆ ಸೀಮಿತವಾಗದ ಕುಮಾರಸ್ವಾಮಿ 2000ದಲ್ಲಿ ‘ಗಲಾಟೆ ಅಳಿಯಂದ್ರು’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. 2003ರಲ್ಲಿ ನಿರ್ಮಿಸಿದ ಚಿತ್ರ ‘ಚಂದ್ರಚಕೋರಿ’ ರಾಜ್ಯದ ನೂರಾರು ಚಿತ್ರ ಮಂದಿರಗಳಲ್ಲಿ 365 ದಿನಗಳ ಕಾಲ ಪ್ರದರ್ಶನಗೊಂಡಿತ್ತು.

ಅದು 2004ರ ಸಮಯ, ಕರ್ನಾಟಕದಲ್ಲಿ ಮತ್ತೊಂದು ವಿಧಾನಸಭಾ ಚುನಾವಣೆಯ ಘೋಷಣೆಯಾಗಿತ್ತು. ರಾಮನಗರದಿಂದ ಅದೃಷ್ಟ ಪರೀಕ್ಷೆಗಿಳಿದ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾದರು. ಮೊದಲ ಬಾರಿಗೆ ವಿಧಾನಸೌಧಕ್ಕೆ ಕಾಲಿಟ್ಟರು.

ಯಾವ ಪಕ್ಷಗಳಿಗೂ ಬಹುಮತ ಸೂಚಿಸದ ಮತದಾರರು ಆಗಲೂ ಕೂಡ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿಯನ್ನು ಹುಟ್ಟುಹಾಕಿದ್ದರು. ಕಾಂಗ್ರೆಸ್‌ ಪಕ್ಷದ ಜತೆ ಕೈಜೋಡಿಸಿದ ಜನತಾದಳ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿತ್ತು. ಕಾಂಗ್ರೆಸ್‌ ನಾಯಕ ಧರಮ್‌ಸಿಂಗ್‌ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಮುಖ್ಯಮಂತ್ರಿ ಪದವಿಗೇರಿದ್ದರು. ಆದರೆ ಈ ಸರಕಾರ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. 42 ಶಾಸಕರ ಬಲವನ್ನು ಹೊಂದಿದ್ದ ಜೆಡಿಎಸ್‌ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡು ಸರಕಾರವನ್ನು ಉರುಳಿಸಿತ್ತು.

ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ:

ರಾತ್ರೋರಾತ್ರಿ ಬಿಜೆಪಿಯ ಜತೆಗೆ ಮೈತ್ರಿಯ ಮಾತುಕಥೆಗಳಾದವು. 20 ತಿಂಗಳ ಅವಧಿಗೆ ಕುಮಾರಸ್ವಾಮಿ ಹಾಗೂ ಇನ್ನು ಉಳಿದ 20 ತಿಂಗಳ ಅವಧಿಗೆ ಬಿಜೆಪಿಯ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸುವುದೆಂದು ಒಪ್ಪಂದ ಮಾಡಿಕೊಳ್ಳಲಾಯಿತು. ಒಪ್ಪಂದದ ಪ್ರಕಾರ ಎಚ್‌. ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಕರ್ನಾಟಕದ ಮಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದು 2006ರ ಫೆಬ್ರವರಿ 4.

ತಂದೆಯ ಇಚ್ಚೆಗೆ ವಿರೋಧ ವ್ಯಕ್ತಪಡಿಸಿ, ಕಾಂಗ್ರೆಸ್‌ ಜತೆಗಿನ ಮೃತ್ರಿಯನ್ನು ಕಡಿದುಕೊಂಡು ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಹೊಸದೊಂದು ಭರವಸೆಯನ್ನು ಮೂಡಿಸಿದ್ದರು.

ಕುಮಾರಸ್ವಾಮಿ ಆರಂಭಿಸಿದ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಜನರ ಮನದಲ್ಲಿ ನೆಲೆಯೂರಿತ್ತು. ವಿರೋಧ ಪಕ್ಷ ಅದನ್ನು ರಾಜಕೀಯ ಗಿಮಿಕ್‌ ಎಂದರೂ ಕೂಡ ಜನ ತಲೆ ಕೆಡಿಸಿಕೊಂಡಿರಲಿಲ್ಲ. ಡೈನಾಮಿಕ್‌ ವ್ಯಕ್ತಿತ್ವದ ಕುಮಾರಸ್ವಾಮಿ ಕರ್ನಾಟಕದ ಯುವ ಮುಖ್ಯಮಂತ್ರಿಯಾಗಿ ಕಂಡಿದ್ದರು. ರೈತಾಪಿ ವರ್ಗದ ಬಗ್ಗೆ ನಿಜವಾದ ಕಾಳಜಿಯನ್ನು ತೋರಿಸಿದ್ದರು. ರಾಜ್ಯದುದ್ದಗಲಕ್ಕೂ ಸಂಚರಿಸಿ ‘ಜನತಾದರ್ಶನ’ವನ್ನು ಆರಂಭಿಸಿದ್ದರು. ಕುಮಾರಸ್ವಾಮಿಯವರ 20 ತಿಂಗಳ ಆಡಳಿತಾವಧಿಯಲ್ಲಿ ರಾಜ್ಯದ ಜಿಡಿಪಿ ಎಂದು ಕಾಣದಷ್ಟು ಎತ್ತರೆಕ್ಕೆ ಏರಿತ್ತು. ಶೇ.19.10ರಷ್ಟು ಏರಿಕೆ ಕಂಡಿತ್ತು.

‘ಬಣ್ಣದ ಬದುಕು, ರಾಜಕೀಯಕ್ಕೆ ರಂಗು’: ಕುಮಾರಸ್ವಾಮಿ ರಾಜ್ಯದ 25ನೇ ಮುಖ್ಯಮಂತ್ರಿ

ಆದರೆ ನಂತರದ ದಿನಗಳಲ್ಲಿ ಕುಮಾರಸ್ವಾಮಿ ಕೈಗೊಂಡ ನಿರ್ಧಾರಗಳು ಅವರು ಗಳಿಸಿದ ಮಾನ್ಯತೆಯನ್ನು ಅಳಿಸಿಹಾಕಿದ್ದವು. ಯಡಿಯೂರಪ್ಪರಿಗೆ ಅಧಿಕಾರವನ್ನು ಬಿಟ್ಟುಕೊಡದ ಕಾರಣಕ್ಕಾಗಿ ರಾಜ್ಯದ ದೊಡ್ಡ ಜನವರ್ಗವೊಂದು ಕುಮಾರಸ್ವಾಮಿಯ ಮೇಲೆ ಅಸಾಮಾಧಾನಗೊಂಡಿತ್ತು. ಇದೊಂದು ನಿರ್ಧಾರ ಕುಮಾರಸ್ವಾಮಿಯ ಆಡಳಿತ ಸುಧಾರಣೆಗಳನ್ನು ಮೂಲೆಗೆ ತಳ್ಳಿತ್ತು. ಯಡಿಯೂರಪ್ಪ ಪರವಾದ ಅನುಕಂಪದ ಅಲೆ ರಾಜ್ಯದೆಲ್ಲೆಡೆ ಕಾಣಿಸಿಕೊಂಡಿತ್ತು.

ನಂತರದಲ್ಲಿ ಕುಮಾರಸ್ವಾಮಿ ಅಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್‌ಗೆ ರಾಜೀನಾಮೆ ಸಲ್ಲಿಸುತ್ತಾರೆ. ಬಿಎಸ್‌ವೈ ಮುಖ್ಯಮಂತ್ರಿಯಾಗುತ್ತಾರಾದರೂ ಕೆಲವೇ ದಿನಗಳಲ್ಲಿ ಸಚಿವ ಸಂಪುಟವನ್ನು ವಿಸರ್ಜಿಸುವಂತಾಯಿತು.

2008ರಲ್ಲಿ ಮರು ಚುನಾವಣೆ ನಡೆದು ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆಪರೇಷನ್‌ ಕಮಲ ಎಂಬ ಕರ್ಮಕಾಂಡವನ್ನು ಆರಂಭಿಸಿದ ಬಿಜೆಪಿ ಅಧಿಕಾರದ ಗಾಧಿ ಹಿಡಿಯುವಲ್ಲಿ ಸಫಲವಾಯಿತು. 2009ರಲ್ಲಿ ರಾಜ್ಯ ರಾಜಕೀಯವನ್ನು ಬಿಟ್ಟು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಕುಮಾರಸ್ವಾಮಿ 2ನೇ ಬಾರಿಗೆ ಸಂಸತ್‌ ಸದಸ್ಯರಾದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಯಡಿಯೂರಪ್ಪರ ಭ್ರಷ್ಟಾಚಾರಗಳನ್ನು ಒಂದೊಂದಾಗಿಯೇ ಹೊರಗೆಳೆಯುತ್ತಾ ಸಾಗಿದ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾಗಿ ನಿಂತು ಬಿಜೆಪಿಯ ಪ್ರತಿನಡೆಯನ್ನೂ ಕೂಡ ಪ್ರಶ್ನಿಸಿದರು. 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ, 40,000 ಮತಗಳ ಅಂತರದಿಂದ ಗೆದ್ದು ವಿರೋಧ ಪಕ್ಷದ ನಾಯಕರಾದರು. 2014ರಲ್ಲಿ ಜೆಡಿಎಸ್‌ನ ರಾಜ್ಯಾಧ್ಯಕ್ಷ ಪಟ್ಟವನ್ನು ವಹಿಸಿಕೊಂಡರು.

2016ರ ವೇಳೆಗೆ ಕನ್ನಡ ‘ಜಾಗ್ವಾರ್‌’ ಚಿತ್ರಕ್ಕೆ ಬಂಡವಾಳವನ್ನು ಹೂಡಿದರು. ಆದರೆ ಆ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಕುಮಾರಸ್ವಾಮಿ ಮತ್ತೆ ರಾಜಕೀಯದಲ್ಲಿ ಜಾಗೃತರಾದರು. ಚುನಾವಣಾ ಪ್ರಚಾರವನ್ನು ಆರಂಭಿಸಿ ಮತ್ತೆ ಗ್ರಾಮವಾಸ್ತವ್ಯ ಹಾಗೂ ಜನತಾದರ್ಶನವನ್ನು ಆರಂಭಿಸುವುದಾಗಿ ತಿಳಿಸಿದ್ದರು. ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ರೈತರ ಸಂಕಷ್ಟ ನಿವಾರಣೆಯೇ ಜೆಡಿಎಸ್ ಮೂಲ ಧ್ಯೇಯ. ದುಡಿವ ವರ್ಗದ ಎಲ್ಲರ ಅಭ್ಯುದಯಕ್ಕೆ ಜೆಡಿಎಸ್ ಸಂಕಲ್ಪ ಮಾಡಿದೆ. ಜೆಡಿಎಸ್ ಪ್ರಣಾಳಿಕೆ ರಾಜ್ಯದ ಎಲ್ಲ ಸಮುದಾಯಗಳ ಏಳಿಗೆ ಕನಸು ಹೊಂದಿದೆ ಎಂದು ಕುಮಾರಸ್ವಾಮಿ ಜನರಲ್ಲಿ ಜೆಡಿಎಸ್‌ ಬಗ್ಗೆ ಭರವಸೆಯನ್ನು ಮೂಡಿಸಲು ಪ್ರಯತ್ನಿಸಿದ್ದರು. ಅಧಿಕಾರಕ್ಕೇರಿದ 24 ಗಂಟೆಯೊಳಗೆ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದರು.

ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ “ನಮ್ಮಪ್ಪನಾಣೆ ಗೆಲ್ಲಲ್ಲ” ಎಂಬ ಮಾತುಗಳು ಹರಿದಾಡಿದ್ದವು. ಬಿಜೆಪಿ-ಜೆಡಿಎಸ್‌ ಮತ್ತೆ ಮೈತ್ರಿಯಾಗಬಹುದೇ ಎಂಬ ಯೋಚನೆಗಳೂ ಕೂಡ ಹಾದುಹೋಗಿದ್ದವು. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರೆ ಮನೆಯಿಂದಲೇ ಹೊರಗಟ್ಟುವುದಾಗಿ ದೇವೇಗೌಡರು ಗರ್ಜಿಸಿದ್ದರು. ಚುನಾವಣೆಗೂ ಮುಂಚಿನ ದಿನಗಳೂ ಕೂಡ ನಾಟಕೀಯ ತಿರುವು ಪಡೆದುಕೊಂಡು ಯಾರು ಯಾರ ಜತೆ ಸೇರಿ ಸರಕಾರ ರಚಿಸುತ್ತಾರೆ ಎನ್ನುವುದೇ ಗೊಂದಲಮಯವಾಗಿತ್ತು.

ಚುನಾವಣಾ ಫಲಿತಾಂಶದ ದಿನವೇ ಗೊಂದಲಗಳು ಬಗೆಹರಿದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ರಚಿಸಿ ಕುಮಾರಸ್ವಾಮಿಯೇ ಸಿಎಂ ಆಗುತ್ತಾರೆ ಎನ್ನುವುದು ಖಚಿತವಾಗಿತ್ತು. ಆದರೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸಲು 15 ದಿನ ಅವಕಾಶ ಪಡೆದು ಕುದುರೆ ವ್ಯಾಪಾರಕ್ಕೆ ನಿಂತಾಗ ಮತ್ತೆ ರಾಜ್ಯದಲ್ಲಿ ಗೊಂದಲ ಏರ್ಪಟ್ಟಿತ್ತು. ಆದರೆ ಯಡಿಯೂರಪ್ಪರ ರಾಜೀನಾಮೆ ಕುಮಾರಸ್ವಾಮಿಯವರ ಸಿಎಂ ಕನಸನ್ನು ಭದ್ರವಾಗಿಸಿದೆ.

ಕುಮಾರಸ್ವಾಮಿಯವರ ಮೇಲೂ ಕೇಸುಗಳಿವೆ. ಅಧಿಕಾರದ ದುರ್ಬಳಕೆ, ಅಕ್ರಮ ಭೂ ಡಿನೋಟಿಫಿಕೇಷನ್‌, ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದ ಕೇಸುಗಳು ದಾಖಲಾಗಿದೆ. ಇದಲ್ಲದೇ 2006ರಲ್ಲಿ ಕುಮಾರಸ್ವಾಮಿ ಕನ್ನಡದ ಹೆಸರಾಂತ ನಟಿ ರಾಧಿಕಾರನ್ನು ವರಿಸಿದ್ದರು. ಅವರಿಗೆ ಶಮಿಕಾ ಹೆಸರಿನ ಪುಟ್ಟ ಮಗುವೂ ಇದೆ. ಒಬ್ಬ ಹೆಂಡತಿ ಇರುವಾಗಲೇ ಮತ್ತೊಂದು ಮದುವೆಯಾಗುವುದು 1955ರ ಹಿಂದೂ ವಿವಾಹ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಈ ಅಪರಾಧಕ್ಕೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೂಡ ದಾಖಲಾಗಿತ್ತು.

ಇದೆಲ್ಲಾ ಏನೇ ಇದ್ದರೂ ಕೂಡ ಕುಮಾರಸ್ವಾಮಿ ಕರ್ನಾಟಕದ ಚುಕ್ಕಾಣಿ ಹಿಡಿದಿದ್ದಾರೆ. ಒಮ್ಮೆ ಮುಖ್ಯಮಂತ್ರಿಯಾಗಿ ನಾಡಿನ ದೊರೆ ಎಂದು ಪತ್ರಿಕೆಗಳಿಂದ ಗುಣವಾಚಕವನ್ನು ಪಡೆದುಕೊಂಡವರು ಅವರು. ಮುಂದಿನ ದಿನಗಳಲ್ಲಿ ಅವರ ಆಡಳಿತವೇ ಅವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಲಿದೆ.