‘ಮೌಢ್ಯಗಳ ಮೇಲಾಟ’: ಇವರು ‘ವಾಸ್ತು ಪ್ರಕಾರ’ ನಮ್ಮ ಸಂವಿಧಾನ ಜಾರಿಗೊಳಿಸುವವರು!
COVER STORY

‘ಮೌಢ್ಯಗಳ ಮೇಲಾಟ’: ಇವರು ‘ವಾಸ್ತು ಪ್ರಕಾರ’ ನಮ್ಮ ಸಂವಿಧಾನ ಜಾರಿಗೊಳಿಸುವವರು!

ಮಾನ ಮರ್ಯಾದೆಗಳನ್ನು ಒತ್ತೆ ಇಟ್ಟು ಹೋರಾಟ ನಡೆಸಿದ್ದ ರಾಜಕಾರಣಿಗಳು ಮಡಿಯುಟ್ಟುಕೊಂಡು ಮೈಲಿಗೆ ತೊಳೆದುಕೊಳ್ಳುವ ಭರಾಟೆಯಲ್ಲಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹೊಸ ಸರಕಾರ ರಚನೆಗೆ ಸಮ್ಮಿಶ್ರವೊಂದು ಜಾರಿಯಲ್ಲಿದೆ. ರಾಜಕಾರಣಿಗಳು ಹೊಸ ಬಟ್ಟೆ ತೊಟ್ಟು ನಳನಳಿಸುತ್ತಿದ್ದಾರೆ. ಜತೆಗೆ, ಜ್ಯೋತಿಷಿಗಳು, ವಾಸ್ತು ತಜ್ಞರು ತಮ್ಮ ಹಳೆಯ ವೇಷಭೂಷಣಗಳನ್ನು ಒಗೆದು ಇಸ್ತ್ರಿ ಮಾಡಿಕೊಂಡಿದ್ದಾರೆ. ಅಡ್ಡ, ಉದ್ದ, ಪಟಾಪಟ್ಟಿ ನಾಮಗಳನ್ನು ಬಳಿದುಕೊಳ್ಳುತ್ತಿದ್ದಾರೆ. ಅರಮನೆ –ಗುರುಮನೆಗಳ ಆಹ್ವಾನಕ್ಕಾಗಿ ಕಾದು ಕುಳಿತಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯ ದೇವಸ್ಥಾನಗಳು, ಮಡಿಯುಟ್ಟ ಮಠಾದೀಶರು, ಧರ್ಮದರ್ಶಿಗಳ ಜತೆ ರಾಜಕಾರಣಿಗಳು ಕಾಣಿಸಿಕೊಂಡು ಟಿವಿ ಪರದೆಗಳನ್ನು ಆವರಿಸಿಕೊಂಡಿದ್ದಾರೆ. ಮಾನ ಮರ್ಯಾದೆಗಳನ್ನು ಒತ್ತೆ ಇಟ್ಟು ಹೋರಾಟ ನಡೆಸಿದ್ದ ರಾಜಕಾರಣಿಗಳು ಮಡಿಯುಟ್ಟುಕೊಂಡು ಮೈಲಿಗೆ ತೊಳೆದುಕೊಳ್ಳುವ ಭರಾಟೆಯಲ್ಲಿದ್ದಾರೆ.

ನಿಯೋಜಿತ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸಿಎಂಗಳ ಅಧಿಕೃತ ಸರ್ಕಾರಿ ವಸತಿ ಗೃಹ ಅನುಗೃಹದಲ್ಲಿ ವಾಸ ಮಾಡುವುದಿಲ್ಲ ಎಂದಿದ್ದಾರೆ. ಕಾರಣ ಅವರ ಜ್ಯೋತಿಷಿಗಳು ಅನುಗ್ರಹದಲ್ಲಿ ವಾಸ್ತು ಸರಿಯಿಲ್ಲ, ಒಂದೊಮ್ಮೆ ನೀವು ಅಲ್ಲಿ ವಾಸ ಮಾಡಿದ್ದೇ ಆದರೆ ಅದು ನಿಮ್ಮ ಏಳಿಗೆಗೆ ಅಡ್ಡಿಯಾಗಲಿದೆ ಎಂದಿರುವುದು. ಇದಕ್ಕೆ ತಲಾಯಾಡಿಸಿರುವ ಕುಮಾರಸ್ವಾಮಿ ಅನುಗ್ರಹದ ಬದಲು ತಮ್ಮ ಜೆಪಿ ನಗರದ ಮನೆಯಲ್ಲೇ ವಾಸ ಮಾಡುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿಗೆ ಬದಲಾಯಿಸಲು ಎರಡು ಮೂರು ಸರ್ಕಾರಿ ಮನೆಗಳಿರುತ್ತವೆ, ಜತೆಗೆ ನಾಲ್ಕಾರು ಖಾಸಗಿ ಮನೆಗಳೂ ಇರಬಹುದು. ಆದರೆ ವಾಸ್ತು ಸರಿಯಿಲ್ಲ ಎಂದು ಈ ದೇಶದ ಬಡವ ತನ್ನ ಇದ್ದೊಂದು ಮನೆಯನ್ನೋ, ಗುಡಿಸಲನ್ನೋ ಬಿಟ್ಟು ಹೋಗಲು ಸಾಧ್ಯವೇ?

ಇಂದಿಗೂ ಭಾರತದ ನಗರಗಳಲ್ಲಿ ವಾಸ ಮಾಡುವ ಶೇ.50ರಷ್ಟು ಮನೆಗಳು ಭದ್ರವಾಗಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಕೊಳಗೇರಿಗಳ ಸ್ಥಿತಿಯಂತೂ ಹೇಳ ತೀರದು. ಇನ್ನು ಗ್ರಾಮೀಣ ಭಾರತದ ಶೇ.90ರಷ್ಟು ಮನೆಗಳು ಇದೇ ದುಸ್ಥಿತಿಯಲ್ಲಿವೆ. ಇವರೆಲ್ಲಾ ನಮ್ಮಂತೆ ವಾಸ್ತು ಸರಿಯಿಲ್ಲ ಎಂದು ಮನೆ ಬದಲಾಯಿಸಲು ಸಾಧ್ಯವೇ? ಚುನಾವಣೆ ಸಮಯದಲ್ಲಿ ಮತದಾರರ ಬಗ್ಗೆ ಯೋಚಿಸುವವರ ಅಧಿಕಾರಕ್ಕೆ ಕೇಂದ್ರಕ್ಕೆ ಬಂದ ನಂತರವೂ ಆಲೋಚನೆ ಮಾಡಿದ್ದರೆ ಇಂತಹದೊಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ವಾಸ್ತುಗೆ ಅನಗತ್ಯ ಪ್ರಾಮುಖ್ಯತೆಯೂ ಸಿಗುತ್ತಿರಲಿಲ್ಲ.

ಬಹುತೇಕ ರಾಜಕಾರಣಿಗಳು ಮೂಢನಂಬಿಕೆ ಮೌಢ್ಯಗಳಿಗೆ ಒಳಗಾದವರೆ. ಅಂಧಶ್ರದ್ಧೆ, ಮೂಢನಂಬಿಕೆಯು ವ್ಯಕ್ತಿಯ ಒಳಮನಸ್ಸಿನ ಅಸಾಹಾಯಕತೆಯ ಪ್ರತೀಕ. ಅಧಿಕಾರ ತಪ್ಪಿ ಹೋಗುವುದು ಎಂಬ ಆತಂಕ ಹೆಚ್ಚಾದಾಗ ಅವುಗಳಿಂದ ತಪ್ಪಿಸಿಕೊಳ್ಳಲು ಮೌಢ್ಯಗಳ ಮೊರೆ ಹೋಗ್ತಾರೆ. ಹಾಗೆ ವಾಸ್ತು ದೋಷ ಇದೆಯೆಂದು ಹೊರಟರೆ ಬೆಂಗಳೂರಿನ ಎಲ್ಲ ಮನೆಗಳೂ ದೋಷದಿಂದ ಕೂಡಿವೆ ಎನ್ನಬೇಕಾಗುತ್ತದೆ.
ಡಾ. ಅ. ಶ್ರೀಧರ್‌, ಮನಶಾಸ್ತ್ರಜ್ಞ. 

ರಾಜ್ಯದ ಹಿಂದಿನ ಬಹುತೇಕ ಮುಖ್ಯಮಂತ್ರಿಗಳೂ ಇದೇ ಮೌಢ್ಯದ ಬಲೆಯಲ್ಲಿ ಸಿಲುಕಿದ್ದವರೇ. ಮೂರು ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಮಾಡಿದ ಮೊದಲ ಕೆಲಸ ಭರವಸೆ ನೀಡಿದಂತೆ ಒಂದು ಗಂಟೆಯಲ್ಲಿ ಸಾಲಾ ಘೋಷಣೆ ಮಾಡಿದ್ದಲ್ಲ. ಬದಲಾಗಿ ತಮ್ಮ ಕಚೇರಿಯನ್ನು ವಾಸ್ತುವಿಗೆ ತಕ್ಕಂತೆ ಬದಲಾಯಿಸಿದ್ದು. ಜ್ಯೋತಿಷಿಗಳ ತಾಳಕ್ಕೆ ತಕ್ಕಂತೆ ಪವಿತ್ರೀಕರಿಸಿದ್ದು.

ಸಿದ್ಧರಾಮಯ್ಯ ಪೂರ್ವಕ್ಕೆ ಕಚೇರಿ ಬಾಗಿಲು ತೆರೆದಿದ್ದರಂತೆ, ಯಡಿಯೂರಪ್ಪ ಅದನ್ನು ಮುಚ್ಚಿಸಿ ಪಶ್ಚಿಮದ ಬಾಗಿಲು ತೆಗೆಸಿದರು. ಪೂರ್ವಕ್ಕಿದ್ದ ಸಿದ್ದರಾಮಯ್ಯ ಕುರ್ಚಿಯನ್ನೂ ಬದಲಿಸಿದರು. ಸಿದ್ಧರಾಮಯ್ಯ ಉತ್ತರಕ್ಕೆ ಕುಳಿತು ದಕ್ಷಿಣಕ್ಕೆ ಮುಖ ಮಾಡಿದ್ದರಂತೆ.ಯಡಿಯೂರಪ್ಪ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡರು.

ಗೆದ್ದು ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಎಲ್ಲವೂ ಮರೆತು ಹೋದವು. ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ನೆನಪು ಮಾತ್ರ ಗಟ್ಟಿಯಾಗಿ ಉಳಿಯಿತು. ತಾವು ಸಂವಿಧಾನ ಜಾರಿ ಮಾಡುವ ಸ್ಥಾನದಲ್ಲಿ ಕುಳಿತ ಮುಖ್ಯಸ್ಥರು ಎಂಬುದೂ ಇವರಿಗೆ ಮುಖ್ಯವಾಗುವುದಿಲ್ಲ.

2008ರಿಂದ 2011ರವರೆಗೆ ಸಿಎಂ ಆಗಿದ್ದ ವೇಳೆ ಅನುಗ್ರಹದ ವಾಸ್ತು ಸರಿಯಿಲ್ಲ ಎಂದು ಅವರು ಅಲ್ಲಿಗೆ ಕಾಲಿಡಲಿಲ್ಲ. ಅಷ್ಟು ದಿನವೂ ಅದು ಪಾಳು ಬಿದ್ದಿತ್ತು. ಅವರ ಹಿಂದೆ ಮುಖ್ಯಮಂತ್ರಿಯಾದ ಸದಾನಂದಗೌಡರಿಗೆ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣದ ವಾಸ್ತು ಕೂಡಿ ಬರಲಿಲ್ಲ. ಯಡಿಯೂರಪ್ಪ ಹೋಗದೆ ಮೂರು ವರ್ಷವೂ ಬಾಗಿಲು ಹಾಕಿದ್ದ ಅನುಗ್ರಹದ ವಾಸ್ತು ಕೂಡಿ ಬಂತಂತೆ. ಹೀಗಾಗಿ ಅವರು ಅಲ್ಲಿ ವಾಸ್ತವ್ಯ ಹೂಡಿದರು. ಆದರೆ ಯಡಿಯೂರಪ್ಪನವರ ಅಧಿಕಾರವಾಗಲಿ, ಸದಾನಂದಗೌಡರ ಅಧಿಕಾರವನ್ನಾಗಲಿ ಈ ವಾಸ್ತು ಕಾಪಾಡಲಿಲ್ಲ ಏಕೆ? ಇಂಥ ಮೌಢ್ಯವನ್ನು ಅನುಸರಿಸುವ ಪ್ರಭುಗಳು ತಮ್ಮ ಜನತೆಗೆ ಇನ್ನೇಗೆ ಮಾದರಿಯಾದಾರು ಎಂಬುದನ್ನು ಜನ ಪ್ರಶ್ನೆ ಕೇಳಿಕೊಳ್ಳಬೇಕಿದೆ.

ಜ್ಯಾತ್ಯತೀತ, ಪ್ರಗತಿಪರ, ಅಭಿವೃದ್ಧಿ ಪರ ಎಂದು ಹೇಳಿಕೊಳ್ಳುವ ನಮ್ಮನ್ನಾಳುವ ರಾಜಕಾರಣಿಗಳ ಮೌಢ್ಯಗಳೂ ಅಷ್ಟಿಷ್ಟಲ್ಲ. 1999-2004ರ ವರೆಗೆ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದಿದ್ದರು. ಅವರು ಅಮೆರಿಕಾದ ಸದರ್ನ್ ಮೆತೊಡಿಸ್ಟ್, ಜಾರ್ಜ್ ವಾಷಿಗ್ಟಂನ್ ಯೂನಿವರ್ಸಿಗಳಲ್ಲಿ ಎರಡೆರಡು ಪದವಿ ಪಡೆದವರು. ಆದರೆ ಈ ಯಾವ ಓದೂ ಅವರಿಗೆ ವೈಚಾರಿಕೆ ಪ್ರಜ್ಞೆ ಕೊಡಲಿಲ್ಲ. ಅವರೂ ಜ್ಯೋತಿಷ ಮತ್ತು ವಾಸ್ತುವಿಗೆ ತಮ್ಮ ಪ್ರಜ್ಞೆಯನ್ನು ಪೂರ್ಣವಾಗಿ ಒಪ್ಪಿಸಿಬಿಟ್ಟಿದ್ದರು.

ಮುಖ್ಯಮಂತ್ರಿಯಾಗುತ್ತಲೇ ಸಿಎಂ ಅಧಿಕೃತ ವಸತಿಗೃಹ ‘ಅನುಗ್ರಹದ’ ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ವಾಸ್ತುವನ್ನು ಬದಲಾಯಿಸಿದರು. ಇಷ್ಟೆಲ್ಲಾ ಮಾಡಿದ ಮೇಲೂ ಅವರೇಕೆ ಎರಡನೇ ಬಾರಿಗೆ ಸಿಎಂ ಆಗಲಿಲ್ಲ, ಅವರ ಸರ್ಕಾರ ಯಾಕೆ ಹೀನಾಯವಾಗಿ ಸೋತಿತು? ಯಾವ ವಾಸ್ತು ತಜ್ಞರೂ ಉತ್ತರ ನೀಡಿಲ್ಲ.

ವಾಸ್ತವ ಸಮಾಜಕ್ಕಿಂತ ನಕ್ಷತ್ರ ಚಂದ್ರ, ಇಂದ್ರ, ವಾಸ್ತು ಇತ್ಯಾದಿ ಮೌಢ್ಯಗಳಲ್ಲೇ ತೇಲುವ ರಾಜಕಾರಣಿಗಳ ವರ್ತನೆ ಸಮಾಜಕ್ಕೆ ಮಾರಕ. ಹೀಗಾಗಿ ಜ್ಯೋತಿಷಿಗಳು ಇಂಥವರ ದೌರ್ಬಲ್ಯಗಳನ್ನು ದುರುಪಯೋಗ ಮಾಡಿಕೊಳ್ತಾರೆ. ವಿದೇಶಗಳಲ್ಲೂ ಸಾರ್ವಜನಿಕ ಸ್ಥಳ, ದೇಗುಲ, ಚರ್ಚ್ ಗಳಲ್ಲಿ ಇಂಥ ಮೌಢ್ಯದ ಆಚರಣೆಗಳಿಗೆ ಇಂಥ ಅವಕಾಶ ಇಲ್ಲ. ಆದರೆ ನಮ್ಮ ರಾಜಕಾರಣಿಗಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬಂತಾಗಿದೆ.
ನಾಗೇಶ್ ಬೆಟ್ಟಕೋಟೆ, ಕುಲಸಚಿವರು, ಕೆ.ಎಸ್.ಜಿ.ಎಸ್. ವಿವಿ

2006-07ರ ಟ್ವೆಂಟಿ ಟ್ವೆಂಟಿ ಸರ್ಕಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಜ್ಯೋತಿಷಿಗಳ ಮಾತು ಕೇಳಿ ಅನುಗ್ರಹದ ವಾಸ್ತು ಬದಲಿಸಿದ್ದರು. ಸದ್ಯ ಅದರ ಬಾಗಿಲನ್ನು ಅವರೇ ಮುಚ್ಚಿಸುತ್ತಿದ್ದಾರೆ ಆದರೆ ಮುಖ್ಯಮಂತ್ರಿಯಾಗಿ ಇಲ್ಲೇ ವಾಸವಿದ್ದ ದೇವೇಗೌಡರು ಪ್ರಧಾನಿಯಾಗಿ ಆಯ್ಕೆಯಾದರಲ್ಲ ಅನುಗ್ರಹದಿಂದ ದೊರೆತ ಅನುಗ್ರಹ ಎಂದೇಕೆ ಅಂದುಕೊಳ್ಳಬಾರದು?

ನಮ್ಮನ್ನಾಳುವ ನಾಯಕರ ದೌರ್ಬಲ್ಯವನ್ನು ಸದುಪಯೋಗ ಮಾಡಿಕೊಳ್ಳಲು ಜ್ಯೋತಿಷಿಗಳೂ ಕಾಯುತ್ತಿರುತ್ತಾರೆ. ಅವರು ದುರ್ಬಲ ನಾಯಕರಾದರಂತೂ ವಾಸ್ತು ಮತ್ತು ಜ್ಯೋತಿಷಿಗಳು ತಮ್ಮ ಜುಟ್ಟಿನಂತೆ ಅವರನ್ನು ಆಡಿಸಬಲ್ಲರು.

ಇವೆಲ್ಲಾ ಇಷ್ಟಕ್ಕೇ ಮುಗಿವುದಿಲ್ಲ. ಕಾಂಗ್ರೆಸ್ ನಾಯಕ ಧರ್ಮಸಿಂಗ್, ಸಮಾಜವಾದಿಯಾಗಿದ್ದ ಜೆ. ಎಚ್. ಪಟೇಲ್ ಸೇರಿದಂತೆ ಎಲ್ಲರೂ ಸಂವಿಧಾನ ಎಷ್ಟು ಪಾಲನೆ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಮೌಢ್ಯದ ಪಾಲನೆ ಚೆನ್ನಾಗಿ ಮಾಡಿದ್ದರು.

2003ರ ವಾಜಪೇಯಿ ಸರ್ಕಾರ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶ್ವವಿದ್ಯಾಲಯಗಳನ್ನೇ ತೆರೆಯಲು ಹೊರಟಿತ್ತು. ಹೋರಾಟದ ಮೂಲಕ ಪ್ರತ್ಯೇಕ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾದ ಟಿ. ಆರ್. ಚಂದ್ರಶೇಖರ ರಾವ್ ಮುಖ್ಯಮಂತ್ರಿ ಜ್ಯೋತಿಷಿ ಎಂಬ ಹುದ್ದೆಯನ್ನೇ ಸೃಷ್ಟಿಸಿದ್ದಾರೆ.

ಇನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ತಾನೊಬ್ಬ ಅತ್ಯಂತ ಪ್ರೋ ಆಕ್ಟೀವ್ ವ್ಯಕ್ತಿ ಎಂದು ಕಾಣಿಸಿಕೊಳ್ಳಲು ಇಚ್ಚಿಸುತ್ತಾರೆ, ಹಾಗೇ ವರ್ತಿಸುತ್ತಾರೆ. ಆದರೆ ತಾನೊಬ್ಬ 120 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿ ಎಂಬುದನ್ನು ಮರೆತು ಮೌಢ್ಯದ ಪಾಲನೆ ಮಾಡ್ತಾರೆ. ತಾವು ಸಂಸತ್ತಿಗೆ ಆಯ್ಕೆ ಆದ ವೇಳೆ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಅಡ್ಡ, ಉದ್ದ, ಪಟ್ಟೆ ನಾಮಗಳನ್ನು ಬಳಿದುಕೊಂಡು ಕಾಣಿಸಿಕೊಂಡಿದ್ದನ್ನು ಕಂಡಿದ್ದೇವೆ.

ಅಂತರಾಷ್ಟ್ರೀಯ ವಿಜ್ಞಾನ ಪರಿಷತ್‌ನಲ್ಲಿ ಸೇರಿದ ವಿಜ್ಞಾನಿಗಳ ಮುಂದೆ ಮೋದಿಯವರು, ಸನಾತನ ಕಾಲದಲ್ಲೇ ಗಣೇಶನಿಗೆ ಆನೆ ತಲೆಯನ್ನು ಕಸಿ ಮಾಡಿದ ವೈದ್ಯ ವಿಜ್ಞಾನ ಪದ್ಧತಿ ಭಾರತದಲ್ಲಿ ಇತ್ತು ಎಂದು ಹೇಳಿದ್ದರು. ಆದಾದ ನಂತರ ಅನೇಕ ಬಾರಿ ಇಂಥ ಮೌಢ್ಯದ ಮಾತುಗಳನ್ನು ಹೇಳಿದ್ದಾರೆ. ಇದನ್ನೇ ಅನುಸರಿಸುತ್ತಿರುವ ಬಿಜೆಪಿ ಸಚಿವ ಮತ್ತು ಸಂಸದರು ದೇವರು ಮತ್ತು ಧರ್ಮದ ಕುರಿತು ನೀಡುತ್ತಿರುವ ಹೇಳಿಕೆಗಳು ವಿಜ್ಞಾನ ಹಾಗೂ ವಿಜ್ಞಾನಿಗಳಿಗೆ ಮಾಡುತ್ತಿರುವ ಅವಮಾನ.

21ನೇ ಶತಮಾನದಲ್ಲಿ ದೇಶದ ಜನತೆ ತಮ್ಮ ಧಾರ್ಮಿಕ ನಂಬಿಕೆಗಳು, ಅನಕ್ಷರತೆಯ ಕಾರಣಗಳಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿವಾಗಿ ಮೇಲೆ ಬರಲಾಗುತ್ತಿಲ್ಲ. ಇಂತಹ ಜನವರ್ಗದ ನಮ್ಮ ನಾಯಕರು ಜನರನ್ನು ಇನ್ನಷ್ಟು ಮೌಢ್ಯಕ್ಕೆ ತಳ್ಳುವ ಮೂಲಕ ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುವ ಕೆಲಸ ಮಾಡ್ತಿದಾರೆ. ಅದರ ಭಾಗವಾಗಿಯೇ ನಿಯೋಜಿತ ಮುಖ್ಯಮಂತ್ರಿ ದೇವಸ್ಥಾನಗಳಿಂದ ದೇವಸ್ಥಾನಗಳಿಗೆ ಓಡುತ್ತಿದ್ದಾರೆ. ಬುಧವಾರ ಸಂವಿಧಾನಬದ್ಧವಾಗಿ ಅಧಿಕಾರ ಸ್ವೀಕರಿಸುತ್ತಾರೆ. ಇವರಿಂದ ಮೌಢ್ಯದ ವಿಚಾರದಲ್ಲಿ ಏನನ್ನು ತಾನೆ ಈ ಸಮಾಜ ಬಯಸಲು ಸಾಧ್ಯವಿದೆ? ಪ್ರಶ್ನೆಯನ್ನು ಜನ ಕೇಳಿಕೊಳ್ಳಬೇಕಿದೆ.