ಎಚ್‌ಡಿಕೆ ಟೆಂಪಲ್‌ ರನ್: ಸಾರ್ವಜನಿಕವಾಗಿ ವಿಜೃಂಭಿಸುತ್ತಿರುವ ವೈಯಕ್ತಿಕ ನಂಬಿಕೆಗಳು!
COVER STORY

ಎಚ್‌ಡಿಕೆ ಟೆಂಪಲ್‌ ರನ್: ಸಾರ್ವಜನಿಕವಾಗಿ ವಿಜೃಂಭಿಸುತ್ತಿರುವ ವೈಯಕ್ತಿಕ ನಂಬಿಕೆಗಳು!

ತಮಗೆ ಅಧಿಕಾರ ಸಿಗಲು ರಾಜ್ಯದ ಜನತೆಯ ಆಶೀರ್ವಾದಕ್ಕಿಂತ ದೇವರ, ಗುರುಗಳ ಆಶೀರ್ವಾದವೇ ಹೆಚ್ಚಾಗಿದೆ ಎಂದು ನಂಬಿಕೊಂಡಿರುವ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನಾ ಭರ್ಜರಿ ಟೆಂಪಲ್‌ ರನ್‌ ನಡೆಸಿದ್ದಾರೆ.

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ವಿಧಾನಸೌಧದ ಮೆಟ್ಟಿಲುಗಳ ಮೇಲೆ ವೇದಿಕೆ ಸಜ್ಜಾಗಿದೆ. ಇತ್ತ ಕಾರ್ಮಿಕರು ವಿಧಾನಸೌಧದ ಎದುರು ವೇದಿಕೆಯ ಅಟ್ಟಣಿಗೆ ಕಟ್ಟುತ್ತಿದ್ದರೆ ಅತ್ತ ಕುಮಾರಸ್ವಾಮಿ ದೇವಾಲಯಗಳ ಸುತ್ತು ಹಾಕುತ್ತಿದ್ದಾರೆ.

ವಿಧಾನಸೌಧದ ಮುಂದೆ ವೇದಿಕೆ ನಿರ್ಮಾಣಕ್ಕೂ ಮುನ್ನಾ ಮೆಟ್ಟಿಲುಗಳ ಮೇಲೆ ಸೋಮವಾರ ವಿಶೇಷ ಪೂಜೆ ನಡೆಸಿ ಕುಂಬಳಕಾಯಿ ಹೊಡೆಯಲಾಗಿದೆ. ಮನೆ ದೇವರು, ಊರ ದೇವರು, ನಾಡ ದೇವರುಗಳ ಹರಕೆ ತೀರಿಸಿ ಕುಮಾರಸ್ವಾಮಿ ಮಂಗಳವಾರ ತಮ್ಮ ಕುಟುಂಬದ ನೆಚ್ಚಿನ ‘ತೀರ್ಥಕ್ಷೇತ್ರ’ವಾದ ಶೃಂಗೇರಿಯಲ್ಲಿ ನಡೆಯುತ್ತಿರುವ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಸಮ್ಮಿಶ್ರ ಸರಕಾರದಿಂದ ಜೆಡಿಎಸ್‌ಗೆ ಅಧಿಕಾರ ಬರುವುದು ಖಾತ್ರಿಯಾದ ದಿನದಿಂದ ದೇವೇಗೌಡರು ಒಂದಲ್ಲಾ ಒಂದು ಪೂಜೆ, ಹೋಮ, ದೇವರ ದರ್ಶನಗಳಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್ ಬೆಂಬಲ ಒಪ್ಪಿಕೊಂಡಿರುವುದನ್ನು ಸ್ಪಷ್ಟಪಡಿಸಲು ಕುಮಾರಸ್ವಾಮಿ ಕರೆದ ಮೊದಲ ಪತ್ರಿಕಾಗೋಷ್ಠಿಯ ದಿನ ದೇವೇಗೌಡರು ಪದ್ಮನಾಭನಗರದ ತಮ್ಮ ಮನೆಯಲ್ಲಿ ಹೋಮದಲ್ಲಿ ನಿರತರಾಗಿದ್ದರು.

ರಾಜ್ಯದ ವಿಧಾನಸಭೆಯಲ್ಲಿ ಬಹುಮತ ಸಾಬೀತಿನ ನಾಟಕ ನಡೆಯುತ್ತಿದ್ದರೆ ದೇವೇಗೌಡರು ಆಂಧ್ರಪ್ರದೇಶದ ತಿರುಪತಿಯಲ್ಲಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದರು. ಇನ್ನು ಗೌಡರ ಕುಟುಂಬ ದೊಡ್ಡ ಕುಡಿ ಎಚ್.ಡಿ. ರೇವಣ್ಣ ಮಾತನಾಡಲೂ ಸಂಖ್ಯಾಶಾಸ್ತ್ರ ನೋಡುವ ಮಟ್ಟಕ್ಕೆ ಜೋತಿಷ್ಯ ನಂಬಿಕೆಯನ್ನು ಹಚ್ಚಿಕೊಂಡಿರುವವರು.

ಹಾಗೆ ನೋಡಿದರೆ ರೇವಣ್ಣ ಮತ್ತು ಕುಮಾರಸ್ವಾಮಿ ಅವರಿಗೆ ಈ ನಂಬಿಕೆ ದೇವೇಗೌಡರ ರಕ್ತದಿಂದಲೇ ಬಂದಿದೆ. ಹೋಮ, ಹವನ, ಹರಕೆ, ಪೂಜೆಗಳ ವಿಚಾರದಲ್ಲಿ ದೇವೇಗೌಡರು ಕಡು ಸನಾತನವಾದಿಗಳನ್ನೂ ಹಿಂದಿಕ್ಕುವಂಥವರು.

ಸೋಮವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ವಿಶೇಷ ಪೂಜೆ
ಸೋಮವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ವಿಶೇಷ ಪೂಜೆ

Also read: ‘ದೊಡ್ಡಗೌಡರ ದೈವಭಕ್ತಿ’: ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಸಂಖ್ಯಾಶಾಸ್ತ್ರ!

ಕುಮಾರಸ್ವಾಮಿ ಟೆಂಪಲ್‌ ರನ್‌!

ತಮಗೆ ಅಧಿಕಾರ ಸಿಗಲು ರಾಜ್ಯದ ಜನತೆಯ ಆಶೀರ್ವಾದಕ್ಕಿಂತ ದೇವರ, ಗುರುಗಳ ಆಶೀರ್ವಾದವೇ ಹೆಚ್ಚಾಗಿದೆ ಎಂದು ನಂಬಿಕೊಂಡಿರುವ ಕುಮಾರಸ್ವಾಮಿ ಹಲವು ದೇವಾಲಯಗಳ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಭಾನುವಾರ ತಮಿಳುನಾಡಿನ ತಿರುಚ್ಚಿ ಸಮೀಪದ ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸೋಮವಾರ ತವರು ಜಿಲ್ಲೆಯಾದ ಹಾಸನದ ವಿವಿಧ ದೇವಾಲಯಗಳಲ್ಲಿ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎಚ್.ಡಿ.ರೇವಣ್ಣ ಜತೆಗೆ ಹಾಸನ ಹಾಗೂ ಚನ್ನರಾಯಪಟ್ಟಣದ ಸುಮಾರು 5 ದೇವಾಲಯಗಳಲ್ಲಿ ಕುಮಾರಸ್ವಾಮಿ ಅಭಿಷೇಕ, ಅರ್ಚನೆ ಮಾಡಿಸಿದ್ದಾರೆ.

ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯ, ಹುಟ್ಟೂರು ಹರದನಹಳ್ಳಿಯ ಈಶ್ವರ ದೇವಸ್ಥಾನದಲ್ಲಿ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕು ಆನೆಕೆರೆಯಮ್ಮ ದೇವಾಲಯದಲ್ಲಿ ಈಡುಗಾಯಿ ಹಾಕಿ, ಹರಕೆ ಈಡೇರಿಸಿದ ಕುಮಾರಸ್ವಾಮಿ ಯಲಿಯೂರು ದೇವೀರಮ್ಮ ದೇಗುಲಕ್ಕೆ ಹೋಗಿ ಪೂಜೆ ಮಾಡಿಸಿದ್ದಾರೆ.

Also read: ‘ಮೌಢ್ಯಗಳ ಮೇಲಾಟ’: ಇವರು ‘ವಾಸ್ತು ಪ್ರಕಾರ’ ನಮ್ಮ ಸಂವಿಧಾನ ಜಾರಿಗೊಳಿಸುವವರು!

ಮಂಗಳವಾರ ಬೆಳಿಗ್ಗೆ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದರ್ಶನ ಪಡೆದ ಕುಮಾರಸ್ವಾಮಿ ಬಳಿಕ ಶೃಂಗೇರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ನಿಯೋಜಿತ ಮುಖ್ಯಮಂತ್ರಿಯವರ ದಿನಚರಿ ಹೀಗೆ ದೇವಾಲಯ ಭೇಟಿಗಳಲ್ಲೇ ಕಳೆಯುತ್ತಿದೆ.

ಜಾತ್ಯತೀತ ತತ್ವಗಳಲ್ಲಿ ತಮಗೆ ಹೆಚ್ಚಿನ ನಂಬಿಕೆ ಇಲ್ಲ ಎಂದು ಈಗಾಗಲೇ ಬಹಿರಂಗವಾಗಿ ಹೇಳಿಕೊಂಡಿರುವ ಜಾತ್ಯತೀತ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಸಿಗುತ್ತಿರುವ ಪೂರ್ವದಲ್ಲಿ ಹುದ್ದೆ ಕೈ ತಪ್ಪದಿರಲೆಂದು ದೈವಗಳ ಮೊರೆ ಹೋಗಿದ್ದಾರೆ.

ಕುಮಾರಸ್ವಾಮಿ ಈಗ ಅತಿಯಾಗಿ ತೋರಿಸಿಕೊಳ್ಳುತ್ತಿರುವ ಈ ದೈವ ಭಕ್ತಿಯ ಹಿಂದೆ ರಾಜಕೀಯ ಲೆಕ್ಕಾಚಾರಗಳೂ ಇರಬಹುದು ಎಂಬ ಮಾತಿದೆ. ಆಕಸ್ಮಿಕವಾಗಿ ಸಿಕ್ಕಿರುವ ಅಧಿಕಾರಕ್ಕೆ ದೈವ ಬಲವೇ ಕಾರಣ ಎಂದು ಈಗಾಗಲೇ ಹೇಳಿಕೊಂಡಿರುವ ಕುಮಾರಸ್ವಾಮಿ ಅದೇ ನೆವದಲ್ಲಿ ಜಾತ್ಯತೀತ ಪಕ್ಷಕ್ಕೆ ಹಿಂದೂಗಳ ಅನುಪಂಕವನ್ನೂ ತಂದುಕೊಡುವ ಲೆಕ್ಕಾಚಾರದಲ್ಲಿರಬಹುದು.

“ದೈವ ನಂಬಿಕೆ, ದೇವಾಲಯಗಳಲ್ಲಿ ಪೂಜೆ - ಇಂತಹ ಕೆಲಸಗಳಿಂದ ಸುಲಭವಾಗಿ ಜನರ ವಿಶ್ವಾಸ ಗಳಿಸಬಹುದು ಎಂಬ ಅಂದಾಜು ರಾಜಕಾರಣಿಗಳಿಗಿದೆ. ಜನ ಸಾಮಾನ್ಯರೂ ಕೂಡಾ ದೇವಸ್ಥಾನಗಳಿಗೆ ಭೇಟಿ ನೀಡುವ ರಾಜಕಾರಣಿಯನ್ನು ಒಳ್ಳೆಯವನು ಎಂದು ಭಾವಿಸುತ್ತಾರೆ. ಹೀಗಾಗಿ ಜನರನ್ನು ಮೋಡಿ ಮಾಡಲು ರಾಜಕಾರಣಿಗಳು ಬಳಸುವ ತಂತ್ರವಾಗಿ ಇದು ಕಾಣುತ್ತದೆ” ಎನ್ನುತ್ತಾರೆ ಮನೋವಿಜ್ಞಾನಿ ಡಾ. ಅ. ಶ್ರೀಧರ್.

ವೈಯಕ್ತಿಕ ನಂಬಿಕೆಗಳ ಸಾರ್ವಜನಿಕ ಪ್ರದರ್ಶನ ಉತ್ತಮ ನಾಯಕತ್ವದ ಗುಣ ಅಲ್ಲ. ಇಂತಹ ನಂಬಿಕೆಗಳು ಹೆಚ್ಚಾದರೆ ವೈಜ್ಞಾನಿಕ ಆಲೋಚನೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ದೂರದೃಷ್ಟಿ ಹಾಗೂ ಅಭಿವೃದ್ಧಿಯ ಆಧುನಿಕ ಮನಸ್ಥಿತಿಗೆ ತದ್ವಿರುದ್ಧ ಮನೋಭಾವ ಇದು.
- ಡಾ. ಅ. ಶ್ರೀಧರ್‌, ಮನೋವಿಜ್ಞಾನಿ

ದೇವಾಲಯಗಳ ಆದಾಯ ಏರಿಕೆ?

ಕುಮಾರಸ್ವಾಮಿ ಟೆಂಪಲ್‌ ರನ್‌ನಿಂದ ದೇವಾಲಯಗಳ ಆದಾಯದಲ್ಲಿ ಏರಿಕೆ ಕಾಣುವ ಸಾಧ್ಯತೆಯೂ ಇದೆ. ಅಧಿಕಾರ ಸಿಗುವ ಮುನ್ನವೇ ಕುಮಾರಸ್ವಾಮಿ ಇಷ್ಟರ ಮಟ್ಟಿಗೆ ದೇವಾಲಯಗಳಿಗೆ ತಲೆ ಬಾಗುತ್ತಿರುವುದರಿಂದ ಮುಂದೆ ಅಧಿಕಾರ ಸಿಕ್ಕಾಗ ದೇವಾಲಯಗಳ ಹುಂಡಿ ತುಂಬುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಕುಮಾರಸ್ವಾಮಿ ಬಂದು ಹೋದ ದೇವಾಲಯಗಳು ಈ ಭೇಟಿಯನ್ನು ತನ್ನ ‘ವ್ಯವಹಾರ’ ವೃದ್ಧಿಸಿಕೊಳ್ಳಲು ಬಳಸಿದರೆ ಆಶ್ಚರ್ಯವೇನಿಲ್ಲ.

ಕುಮಾರಸ್ವಾಮಿ ತಮ್ಮ ಆಪ್ತರೊಬ್ಬರಿಗೆ ಮುಜರಾಯಿ ಖಾತೆ ನೀಡಿ ನಾಡಿನ ದೇವಾಲಯಗಳಿಗೆ 'ಭರಪೂರ ಕೊಡುಗೆ' ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಚಿನ್ನದ ವ್ಯಾಪಾರಿ ಟಿ. ಎ. ಸರವಣ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿರುವ ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಸರವಣ ಅವರಿಗೆ ಮುಜರಾಯಿ ಖಾತೆ ನೀಡುವ ಮಾತುಗಳು ಈಗಾಗಲೇ ಕೇಳಿಬಂದಿವೆ.

ಒಂದು ವೇಳೆ ಸರವಣ ಅವರಿಗೆ ಮುಜರಾಯಿ ಖಾತೆ ಸಿಕ್ಕರೆ ಅವರು ದೇವಾಲಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಾರೋ ಅಥವಾ ದೇವಾಲಯಗಳಲ್ಲಿರುವ ಚಿನ್ನದ ಮೇಲೆ ಕಣ್ಣಿಡುತ್ತಾರೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ತಮ್ಮ ವೈಯಕ್ತಿಕ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ಜನರ ಅನುಕಂಪ ಗಳಿಸುವ ಹಾಗೂ ತಮ್ಮ ನಾಯಕತ್ವದ ಸೋಲುಗಳನ್ನು ದೈವದ ಮೇಲೆ ಹೊರಿಸುವ ಲೆಕ್ಕಾಚಾರಗಳು ರಾಜಕಾರಣಿಗಳಿಗೆ ಹೊಸದೇನಲ್ಲ. ಆದರೆ, ‘ಜಾತ್ಯತೀತ’ ಹೆಸರಿಟ್ಟುಕೊಂಡಿರುವ ಪಕ್ಷಕ್ಕೆ ಅಧಿಕಾರ ಸಿಕ್ಕಾಗ ಇಡೀ ಕುಟುಂಬ ಹೀಗೆ ದೈವ ನಂಬಿಕೆಯ ಹೆಸರಿನಲ್ಲಿ ಪುರೋಹಿತಶಾಹಿಯ ಮುಂದೆ ತಲೆ ಬಾಗುತ್ತಿರುವುದು ದುರಂತ.