ಎರಡು ದೋಣಿಯಲ್ಲಿ ಯಡಿಯೂರಪ್ಪ ಕಾಲು; ಕೇಂದ್ರ- ರಾಜ್ಯದ ನಡುವೆ ಅಧಿಕಾರದ ಕನಸು!
COVER STORY

ಎರಡು ದೋಣಿಯಲ್ಲಿ ಯಡಿಯೂರಪ್ಪ ಕಾಲು; ಕೇಂದ್ರ- ರಾಜ್ಯದ ನಡುವೆ ಅಧಿಕಾರದ ಕನಸು!

ರಾಜ್ಯದಲ್ಲಿ ಮತ್ತೆ ಅತಂತ್ರ ರಾಜಕೀಯ ಸ್ಥಿತಿ ನಿರ್ಮಾಣವಾದರೆ ಪುನಃ ಅಧಿಕಾರಕ್ಕೆ ಬರುವ, ಇಲ್ಲವೇ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳನ್ನು ಬಿಜೆಪಿಗೆ ಗೆಲ್ಲಿಸಿಕೊಡುವ ಇರಾದೆಯಲ್ಲಿದ್ದಾರೆ ಬಿಎಸ್‌ವೈ.

ಬಿ.ಎಸ್.ಯಡಿಯೂರಪ್ಪ ಬಹುಮತವಿಲ್ಲದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಆಗೇ ತೀರುತ್ತೇನೆ ಎಂದು ಹೇಳಿಕೊಂಡು ಬಂದಿದ್ದ ಅವರ ಕನಸು ಭಗ್ನವಾಗಿದೆ. ಮಹತ್ವಾಕಾಂಕ್ಷಿಯಾದ ಅವರ ಮುಂದಿನ ನಡೆ ಏನು ಎಂಬ ಚರ್ಚೆ ಒಂದಡೆಯಾದರೆ, ಏರುತ್ತಿರುವ ವಯಸ್ಸು ಮತ್ತೊಂದೆಡೆ. ಹಾಗಿದ್ದರೆ ಬಿಎಸ್ ವೈ ರಾಜಕೀಯ ಜೀವನ ಮುಗಿದು ಹೋಯಿತೇ ಅಥವಾ ಇದ್ದರೆ ಯಡಿಯೂರಪ್ಪ ಭವಿಷ್ಯವೇನು. ಅವರ ನಡೆಯೇನು ಎಂಬ ಪ್ರಶ್ನೆಗಳೂ ಏಳುತ್ತಿವೆ.

ಮುಂದಿನ ವರ್ಷ ನಡೆವ ಲೋಕಸಭಾ ಚುನಾವಣೆವರೆಗೂ ರಾಜ್ಯದಲ್ಲಿ ಅಧಿಕಾರ ಬದಲಾವಣೆಗಳು ನಡೆಯುವ ಸಾಧ್ಯತೆ ಕಡಿಮೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಥಾನ ಹಂಚಿಕೆ ಮತ್ತಿತರ ಅಸಮಾಧಾನಗಳಿಂದ ಕಾಂಗ್ರೆಸ್ ಹೊರ ಬಂದರೆ ಆಗ ಅಧಿಕಾರ ದೋಣಿಯ ತಳ ಒಡೆಯಬಹುದು. ಆಗ ಯಡಿಯೂರಪ್ಪ ಮತ್ತೆ ರಾಜಕೀಯದಾಟಕ್ಕೆ ಪ್ರವೇಶ ಕೊಡಬಹುದು. ಆದರೆ ಅಲ್ಲಿಯವರೆಗೆ ಅವರ ಚಿತ್ತ ಕೇಂದ್ರದತ್ತ.

ಮುಂದಿನ ಲೋಕಸಭಾ ಚುನಾವಣೆ ಹಲವು ಕಾರಣಗಳಿಂದ ಮಹತ್ವ ಪಡೆದುಕೊಳ್ಳಲಿದೆ. ಕರ್ನಾಟಕದ ಎಲ್ಲ 28 ಸ್ಥಾನಗಳನ್ನೂ ಗೆಲ್ಲಿಸಿ ಕಳುಹಿಸಿ ಪ್ರಧಾನಿ ಮೋದಿಯವರ ಕೈ ಬಲಪಡಿಸುತ್ತೇನೆ ಎಂದು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ಸದನದಲ್ಲಿ ಮಾಡಿದ ಭಾಷಣದಲ್ಲಿ ಕೂಡ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸುವ ಇರಾದೆ ಹೊಂದಿದ್ದಾರೆ. ಈ ಮೂಲಕ ರೈಲ್ವೆ ಅಥವಾ ಕೃಷಿಯಂಥ ಮಹತ್ವದ ಖಾತೆಗಳನ್ನು ಕೇಂದ್ರದಲ್ಲಿ ತಾವು ಪಡೆಯುವ ಕನಸನ್ನೂ ಯಡಿಯೂರಪ್ಪ ಹೊಂದಿರಬಹುದು.

ಲೋಕಸಭಾ ಚುನಾವಣೆಗೂ ಮುನ್ನಾ ರಾಜ್ಯದಲ್ಲಿ ಉಪ ಚುನಾವಣೆಗಳು ನಡೆದರೂ ಬಿಜೆಪಿಯನ್ನು ಗೆಲ್ಲಿಸಿಕೊಳ್ಳುವ ಜರೂರತ್ತು ಯಡಿಯೂರಪ್ಪ ಅವರಿಗಿದೆ. ಒಂದೊಮ್ಮೆ ಸಂಖ್ಯಾಬಲಗಳು ಏರುಪೇರಾಗಿ ಕಾಂಗ್ರೆಸ್ – ಜೆಡಿಎಸ್ ನಡುವೆ ವೈ ಮನಸ್ಸುಗಳು ಉಂಟಾದರೆ ಅದರ ಲಾಭ ಪಡೆಯುವುದಕ್ಕೂ ಅವರು ಹಿಂದೆ ಮುಂದೆ ನೋಡುವುದಿಲ್ಲ. ಹೀಗಾಗಿ ಅವರು ಕೇಂದ್ರ ಮತ್ತು ರಾಜ್ಯ ರಾಜಕಾರಣದ ಆಗು ಹೋಗುಗಳ ಬಗ್ಗೆ ಯಡಿಯೂರಪ್ಪ ಸದಾ ಎಚ್ಚರದಿಂದಲೇ ಇರುತ್ತಾರೆ ಎಂಬ ಮಾತುಗಳಿವೆ.

2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟದಿಂದ ಬರೋಬ್ಬರಿ 17 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿತ್ತು. 2009ರಲ್ಲಿ ಇನ್ನೂ ಮುಂದೆ ಹೋಗಿ ಅದು 19 ಸ್ಥಾನಗಳನ್ನು ಗೆಲ್ಲಿಸಿ ಕಳುಹಿಸಿಕೊಟ್ಟಿತ್ತು. 2014ರಲ್ಲಿ ಅದು ಮತ್ತೆ 17 ಸ್ಥಾನಗಳಿಗೆ ಬಂದು ನಿಂತಿದೆ. ದಿನೇ ದಿನೇ ಏರುತ್ತಿರುವ ತೈಲ ಬೆಲೆ, ಬಡಜನರ ಖಾತೆಗೆ ಬೀಳದ 15 ಲಕ್ಷ ರೂಪಾಯಿ ಕಪ್ಪು ಹಣ, ಸಾಕಾರವಾಗದ ಭ್ರಷ್ಟಾಚಾರ ನಿಯಂತ್ರಣ, ಏರುತ್ತಿರುವ ನಿರುದ್ಯೋಗ, ಬ್ಯಾಂಕ್ ಸಾಲ ತೀರಿಸದೆ ಪರಾರಿಯಾಗುತ್ತಿರುವ ಉದ್ಯಮಿಗಳು, ದಲಿತ ಮತ್ತು ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಇತ್ಯಾದಿ ಹತ್ತು ಹಲವು ಸಂಗತಿಗಳು ವಿರೋಧ ಪಕ್ಷಗಳಿಗೆ ಬಿಜೆಪಿ ವಿರುದ್ಧ ಹೊಸ ಅಸ್ತ್ರಗಳನ್ನು ನೀಡಿವೆ. 2014ರಲ್ಲಿ 282 ಸ್ಥಾನಗಳನ್ನು ಗಳಿಸಿ ಉತ್ಸಾಹದಲ್ಲಿದ್ದ ಬಿಜೆಪಿ ಸಂಖ್ಯಾಬಲ ಉಪ ಚುನಾವಣೆಗಳಲ್ಲಿನ ಸೋಲು ಹಾಗೂ ಕೆಲವರ ರಾಜೀನಾಮೆಗಳಿಂದ ಈಗ 272 ಸ್ಥಾನಗಳಿಗೆ ಕುಸಿದಿದೆ.

ಮೊತ್ತೊಂದೆಡೆ ಮಿತ್ರ ಪಕ್ಷಗಳೂ ಮೋದಿಯವರ ನೀತಿಗಳು ಹಾಗೂ ಆಕ್ರಮಣಕಾರಿ ರಾಜಕೀಯಕ್ಕೆ ಬೇಸತ್ತು ಹಿಂದೆ ಸರಿಯುತ್ತಿವೆ. 16 ಸ್ಥಾನಗಳನ್ನು ಹೊಂದಿರುವ ತೆಲುಗು ದೇಶಂ ಈಗಾಗಲೆ ಮೈತ್ರಿ ಕೂಡದಿಂದ ಹೊರ ಬಂದಿದೆ. ಶಿವಸೇನೆ ಬಿಜೆಪಿ ವಿರುದ್ಧ ಗರ್ಜಿಸುತ್ತಿದೆ. ಮಧ್ಯೆ ಬಂದು ಸೇರಿಕೊಂಡಿರುವ ಜೆಡಿಯು ನಾಯಕ ನಿತೀಶ್ ಕುಮಾರ್‌ ಯಾವಾಗ ಹೊರ ಬರುತ್ತಾರೆ ಎಂದು ಗೊತ್ತಿಲ್ಲ. ಎ.ಐ.ಎ.ಡಿ.ಎಂ.ಕೆ. ಕಣ್ಣು ಕಾವೇರಿ ಜಲಮಂಡಳಿ ಮೇಲಿದೆ. ಅದಕ್ಕೆ ಬಿಜೆಪಿ ಅಸ್ತು ಎಂದರೆ ಕರ್ನಾಟದಲ್ಲಿ ತನ್ನ ಬಲವನ್ನೇ ಕಳೆದುಕೊಳ್ಳಬಹುದು. 2014ರಲ್ಲಿ 282 +54 ಸೇರಿ 336 ಸ್ಥಾನಗಳಿದ್ದ ಎನ್.ಡಿ.ಎ ಮೈತ್ರಿ ಕೂಟದ ಸಂಖ್ಯಾಬಲ ಸದ್ಯ 313ಕ್ಕೆ ಕುಸಿದಿದೆ. ನಾಲ್ಕು ವರ್ಷಗಳಲ್ಲಿ 26 ಸ್ಥಾನಗಳು ಬಿಜೆಪಿ ಖಜಾನೆಯಿಂದ ಖಾಲಿಯಾಗಿವೆ. ಹೀಗಾಗಿ 2019ಕ್ಕೆ ಬಿಜೆಪಿಗೆ ಬಿಕ್ಕಟ್ಟುಗಳು ಹೆಚ್ಚಾಗಿವೆ.

ಈ ಎಲ್ಲ ಹೊರೆಯನ್ನು ಸ್ವತಃ ಬಿಜೆಪಿ ಹಾಗೂ ಅದರ ರಾಜ್ಯದ ನಾಯಕರು ಹೊರಬೇಕಾಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಮೋದಿಯವರನ್ನು ಪ್ರಧಾನಿಯಾಗಿ ಮಾಡಬೇಕಾದ ಹೊಣೆ ಇವರ ಮೇಲಿದೆ. ಕಳೆದ ಬಾರಿಯೇ ಮಹತ್ವದ ಖಾತೆಗಳನ್ನು ಪಡೆಯುವ ಹುಮ್ಮಸ್ಸಿನಲ್ಲಿದ್ದ ಬಿಎಸ್‌ವೈಗೆ ಮೋದಿ ಕೃಪಾಕಟಾಕ್ಷ ಸಿಕ್ಕಿರಲಿಲ್ಲ. ಆದರೆ ಕಳೆದ ನಾಲ್ಕು ವರ್ಷಗಳ ಮೋದಿ ಹಿನ್ನೆಡೆ, ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಮುನ್ನಡೆ ಅವರಿಗೆ ಕೇಂದ್ರದಲ್ಲಿ ಹೊಸ ಅವಕಾಶ ಸಿಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ. ಹೀಗಾಗಿ ಅವರು ರಾಜ್ಯದಲ್ಲಿ ಅಧಿಕಾರ ಹೋದರೂ ಕೇಂದ್ರದಲ್ಲಿ ಅಧಿಕಾರ ಸಿಗುವ ಕನಸು ಕಾಣುತ್ತಿರಬಹುದು.

ಮುಂದಿನ ಬಾರಿ ಕರ್ನಾಟದಿಂದ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಿಸಿ ಕಳುಹಿಸಿ ಎಂಬುದು ಕೇಂದ್ರದ ನಾಯಕರ ಒತ್ತಡ. ಇನ್ನು ಬಿಜೆಪಿಗೆ ಕರ್ನಾಟಕದಿಂದ ಮತ ಸೆಳೆಯುವ ವರ್ಚಸ್ಸು ಯಡಿಯೂರಪ್ಪ ಬಿಟ್ಟರೆ ಮತ್ತಾರಿಗೂ ಇಲ್ಲ. ಹೀಗಾಗಿ ಈ ಎಲ್ಲ ಜವಾಬ್ದಾರಿಗಳೂ ಯಡಿಯೂರಪ್ಪ ಅವರ ಮೇಲೆ ಬಿದ್ದಿವೆ. ಅಲ್ಲದೆ ಕೇಂದ್ರದ ನಾಯಕರ ಜೊತೆ ಅವರು ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳ ಕಾರಣದಿಂದ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ ಮೇಲೆ ಅವರು ಅಡ್ವಾಣಿ ಬಣ ಬಿಟ್ಟು ಮೋದಿ ಬಣ ಸೇರಿಕೊಂಡಿದ್ದರು. ಅಲ್ಲದೆ ಮೋದಿ ಪರ ಆಗಾಗ ಬ್ಯಾಟಿಂಗ್ ಮಾಡುತ್ತಲೇ ಬಂದಿದ್ದಾರೆ. 2019ಕ್ಕೆ ಬಿಜೆಪಿ ಗೆದ್ದು ಮೋದಿಯೇ ಪ್ರಧಾನಿಯಾದರೆ ತಮ್ಮ ಕನಸಿನ ಖಾತೆಗಳು ಸಿಗುವ ಕನಸನ್ನು ಯಡಿಯೂಪ್ಪ ಹೊಂದಿದ್ದಾರೆ.

ಇಷ್ಟೆಲ್ಲದರ ನಡುವೆಯೂ ಅವರು ವಿಪಕ್ಷವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಹೋರಾಡ ಬೇಕಾದ ಅನಿವಾರ್ಯತೆ ಇದೆ. ಕರ್ನಾಟದಲ್ಲಿ ಆ ಮೂಲಕ ತಮ್ಮ ಪ್ರಭಾವವನ್ನು ಕಾಯ್ದುಕೊಳ್ಳಬೇಕಾದ ತುರ್ತಿದೆ. ಮತ್ತೊಂದೆಡೆ ಮಗ ವಿಜಯೇಂದ್ರ, ರಾಘವೇಂದ್ರ ಹಾಗೂ ಆಪ್ತರಾದ ಶೋಭಾ ಕರಂದ್ಲಾಜೆಯವರ ಭವಿಷ್ಯವನ್ನೂ ಕಾಪಾಡಬೇಕಾದ ಜವಾಬ್ದಾರಿ ಅವರ ಮೇಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯದ ಎರಡೂ ದೋಣಿಯಲ್ಲಿ ಕಾಲಿಟ್ಟೂ ಎಲ್ಲರಿಗಿಂತ ಮುಂದೆ ನಡೆವ ಷರತ್ತಿಗೆ ಅವರು ಒಳಗಾಗಿದ್ದಾರೆ.

ಈ ಹಿಂದೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಈಗ ಬಿಜೆಪಿಗೆ ಕರ್ನಾಟಕದ ಮಟ್ಟಿಗಂತೂ ಅನಿವಾರ್ಯವಾಗಿದ್ದಾರೆ. ಲಿಂಗಾಯತ ಮುಖಂಡ, ರೈತ ನಾಯಕ ಎಂಬ ಬಿಎಸ್‌ವೈ ಹೆಸರುಗಳನ್ನು ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ರಾಜಕೀಯ ಲಾಭ ಮಾಡಿಕೊಳ್ಳುವ ಇರಾದೆ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರಿಗೂ ಇಲ್ಲದೆ ಇಲ್ಲ. ಹೀಗಾಗಿ ಬಿಎಸ್‌ವೈ ಇಲ್ಲದ ಕರ್ನಾಟಕ ಬಿಜೆಪಿಯನ್ನು 2019ರ ವರೆಗಾದರೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.