ದಕ್ಷಿಣ ಭಾರತದಲ್ಲಿ ಬಿಜೆಪಿ ವಿರೋಧಿ ಬಲಪ್ರದರ್ಶನಕ್ಕೆ ಪ್ರಮಾಣ ವಚನ ಸಮಾರಂಭವೇ ವೇದಿಕೆ
COVER STORY

ದಕ್ಷಿಣ ಭಾರತದಲ್ಲಿ ಬಿಜೆಪಿ ವಿರೋಧಿ ಬಲಪ್ರದರ್ಶನಕ್ಕೆ ಪ್ರಮಾಣ ವಚನ ಸಮಾರಂಭವೇ ವೇದಿಕೆ

ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎನಿಸಿಕೊಂಡ ಕರ್ನಾಟಕದಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದೆ. ಈಗ ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂಭ್ರಮಾಚರಣೆ ನಡೆಸಲು ಭಾರತದ ಬಹುಮಖ್ಯ ಬಿಜೆಪಿ ವಿರೋಧಿ ನಾಯಕರ ದಂಡೇ ಆಗಮಿಸಲಿದೆ.

ಅಂದುಕೊಂಡಂತೆ ಕರ್ನಾಟಕದ ಚುನಾವಣೆ ಕೇವಲ ರಾಜ್ಯ ರಾಜಕಾರಣವಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಲು ಹೊರಟಿದೆ. ಕರ್ನಾಟಕದ ಚುನಾವಣಾ ಫಲಿತಾಂಶ 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿ ನಿಲ್ಲುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಅದರ ಮೊದಲ ಭಾಗವಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಷ್ಟ್ರ ನಾಯಕರು ಮತ್ತು ಪ್ರಾದೇಶಿಕ ನಾಯಕರ ದಂಡೇ ಬಂದು ಸೇರುವ ನಿರೀಕ್ಷೆಯಿದೆ. 

ಮೋದಿ ನೇತೃತ್ವದ ಬಿಜೆಪಿ ಸರಕಾರ 4 ವರ್ಷವನ್ನು ಪೂರೈಸುವ ಹಂತದಲ್ಲಿದ್ದಾಗ ಬಂದ ಗುಜರಾತ್‌ ಮತ್ತು ಕರ್ನಾಟಕದ ವಿಧಾನಸಭಾ ಚುನಾವಣೆಗಳು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಕರೆಸಿಕೊಂಡಿದ್ದವು. ಎರಡೂ ರಾಜ್ಯಗಳ ಚುನಾವಣೆಗಳು ಹೈವೋಲ್ಟೇಜ್‌ ಚುನಾವಣೆಗಳಾಗಿ ರೂಪುತಳೆದು ಇಡೀ ದೇಶದ ಜನರನ್ನು ತಮ್ಮಡೆಗೆ ತಿರುಗಿ ನೋಡುವಂತೆ ಮಾಡಿದ್ದವು.

ಕಳೆದ ವರ್ಷ ಡಿಸೆಂಬರ್ 18ರಂದು ಹೊರಬಿದ್ದ ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಬಿಜೆಪಿ ಪಕ್ಷಕ್ಕೆ ಬಹುಮತವನ್ನು ನೀಡಿತ್ತಾದರೂ, ಕೂಡ ಬಿಜೆಪಿ 99 ಸ್ಥಾನಗಳನ್ನು ಗೆಲ್ಲುವಲ್ಲಿಗೆ ಸುಸ್ತು ಹೊಡೆದಿತ್ತು. 2012ರ ಚುನಾವಣೆಯಲ್ಲಿ 115 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ 2017ರಲ್ಲಿ 16 ಕ್ಷೇತ್ರಗಳನ್ನು ಕಳೆದುಕೊಂಡಿತ್ತು. 2012ರಲ್ಲಿ 61 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಕಳೆದ ವರ್ಷ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಬೆಳವಣಿಗೆಯನ್ನು ಕಂಡಿತ್ತು. ಬಿಜೆಪಿ ಸರಕಾರ ರಚನೆಗೆ ಅಗತ್ಯವಿರುಷ್ಟು ಕ್ಷೇತ್ರಗಳಲ್ಲಿ ಗೆದ್ದಿತ್ತಾದರೂ ಒಟ್ಟಾರೆ ಫಲಿತಾಂಶದಲ್ಲಿ ಹಿನ್ನಡೆಯನ್ನು ಕಂಡಿತ್ತು. ಬಿಜೆಪಿಯ ಈ ಹಿನ್ನಡೆ ರಾಷ್ಟ್ರ ಮಟ್ಟದ ವಿರೋಧ ಪಕ್ಷಗಳಿಗೆ ಇನ್ನಷ್ಟು ಬಲವನ್ನು ತಂದುಕೊಟ್ಟಿದೆಯೆಂದೇ ಹೇಳಬಹುದು.

ಕರ್ನಾಟಕದ ಚುನಾವಣಾ ಫಲಿತಾಂಶ ಮತ್ತಷ್ಟು ರೋಚಕತೆಯನ್ನು ಹುಟ್ಟುಹಾಕಿದೆ. ಕರ್ನಾಟಕದಲ್ಲಿ ಬಿಜೆಪಿ ಗೆದ್ದು ಸೋತಿದೆ. ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌, ಮುಖ್ಯಮಂತ್ರಿ ಪಟ್ಟವನ್ನು ಕಳೆದುಕೊಂಡಿದೆಯಾದರೂ ಬಿಜೆಪಿಯನ್ನು ಮಣಿಸುವಲ್ಲಿ ಸಫಲವಾಗಿದೆ. ಭಾರತೀಯ ಜನತಾ ಪಕ್ಷದ ವಿರುದ್ಧ ಜೆಡಿಎಸ್‌, ಕಾಂಗ್ರೆಸ್‌, ಬಿಎಸ್‌ಪಿ ಸೇರಿದಂತೆ ಹಲವಾರು ಪಕ್ಷಗಳ ಶ್ರಮ ಫಲ ನೀಡಿದೆ. ಪ್ರತಿತಿಫಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ, ಬಹುಮತವನ್ನು ತೋರಿಸಲಾಗದೇ ಸೋಲೊಪ್ಪಿಕೊಂಡಿದ್ದಾರೆ.

ಇದು ಇಲ್ಲಿಯವರೆಗಿನ ಕತೆಯಾದರೆ ಬುಧವಾರ ನಡೆಯಲಿರುವ ಹೆಚ್‌. ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾರತದ ರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಮೈಲಿಗಲ್ಲನ್ನು ನೆಡಲು ಸಿದ್ಧವಾಗಿದೆ.

ಇಡೀ ದೇಶದೆಲ್ಲೆಡೆ ವ್ಯಾಪಿಸಲು ಬಯಸುತ್ತಿರುವ ಬಿಜೆಪಿಯನ್ನು ಬಗ್ಗುಬಡಿಯು ಈ ಸಮಾರಂಭವೇ ವೇದಿಕೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಕೇವಲ ರಾಜ್ಯದ ನಾಯಕರಷ್ಟೇ ಅಲ್ಲದೇ ದೇಶದ ನಾನಾ ಭಾಗಗಳ ರಾಜಕೀಯ ನಾಯಕರು ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಮೋದಿ ನೇತೃತ್ವದ ಬಿಜೆಪಿಗೆ ಒಕ್ಕೊರಲ ವಿರೋಧದ ಕಹಳೆ ಮೊಳಗಲಿದೆ. ಈ ಬೆಳವಣಿಗೆ ದೇಶದ ರಾಜಕಾರಣದಲ್ಲಿ ಮತ್ತೊಂದು ಅಧ್ಯಾಯನ್ನು ಸೃಷ್ಟಿಬಲ್ಲ ಎಲ್ಲಾ ಸೂಚನೆಗಳಿವೆ.

ತೃಣಮೂಲ ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಕಳೆದೊಂದು ವರ್ಷದಿಂದಲೂ ರಾಷ್ಟ್ರದ ನಾನಾ ನಾಯಕರನ್ನು ಭೇಟಿ ಮಾಡುತ್ತಿರುವ ಮಮತಾ ಬ್ಯಾನರ್ಜಿ ದೇಶದಲ್ಲಿ ಬಿಜೆಪಿ ವಿರೋಧಿ ಒಕ್ಕೂಟವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ. ಡಿಸೆಂಬರ್‌ ಅವಧಿಯಲ್ಲಿ ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂದಿ ಮತ್ತು ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿದ್ದರು.

ತೆಲಂಗಾಣದ ಪ್ರಾದೇಶಿಕ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಮತ್ತು ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ರನ್ನು ಕೊಲ್ಕತ್ತಾದಲ್ಲಿ ಭೇಟಿಯಾಗಿದ್ದರು. ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿಯ ಶರದ್‌ ಪವಾರ್‌ ಅಷ್ಟೇ ಅಲ್ಲದೇ ಬಿಜೆಪಿಯ ಹಿರಿಯ ನಾಯಕರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಸೇರಿದಂತೆ ಇತರನ್ನು ಭೇಟಿಯಾಗಿದ್ದರು. ತೆಲುಗು ದೇಶಂ ಪಕ್ಷದ ಚಂದ್ರಬಾಬುನಾಯ್ಡು, ಬಿಎಸ್‌ಪಿಯ ಮಾಯಾವತಿ, ಎಸ್‌ಪಿಯ ಅಖಿಲೇಶ್‌ ಯಾದವ್‌ ಕೂಡ ಮಮತಾ ಬ್ಯಾನರ್ಜಿ ಭೇಟಿ ಮಾಡಿದವರ ಪಟ್ಟಿಯಲ್ಲಿದ್ದಾರೆ. ಈಗ ಮಮತಾ ಬ್ಯಾನರ್ಜಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.

ಉತ್ತರ ಭಾರತದಿಂದ ಕೇವಲ ಮಮತಾ ಬ್ಯಾನರ್ಜಿಯಷ್ಟೇ ಅಲ್ಲದೇ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಮಾಣ ವಚನ ಸಮಾರಂಭಕ್ಕೆ ಬರಲಿದ್ದಾರೆ. ಕರ್ನಾಟಕದಲ್ಲೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಮಾಯಾವತಿಯವರ ಬಿಎಸ್‌ಪಿ ಪಕ್ಷದ ಕರ್ನಾಟಕದ ಪ್ರಾಂತ್ಯದ ನಾಯಕ ಎನ್‌.ಮಹೇಶ್‌ ಕೊಳ್ಳೆಗಾಲ ಕ್ಷೇತ್ರದಿಂದ ಗೆದ್ದು ಶಾಸನ ಸಭೆಯ ಭಾಗವಾಗಿದ್ದಾರೆ.

ಬಿಜೆಪಿ ವಿರುದ್ಧ ಸಮರ ಸಾರಿರುವ ನಾಯಕರಲ್ಲಿ ಒಬ್ಬರಾಗಿರುವ ಮಾಯಾವತಿ ಕರ್ನಾಟಕಕ್ಕೆ ಆಗಮಿಸುತ್ತಿರುವುದು ಬಿಜೆಪಿ ವಿರೋಧಿ ಒಕ್ಕೂಟಕ್ಕೆ ದೊಡ್ಡ ಬೆಂಬಲವನ್ನು ತಂದುಕೊಡಲಿದೆ ಎನ್ನಲಾಗುತ್ತಿದೆ. ಜತೆಗೆ ಅತಿಚಿಕ್ಕ ವಯಸ್ಸಿನ ಮಾಜಿ ಮುಖ್ಯಮಂತ್ರಿ ಎನ್ನಿಸಿಕೊಂಡಿರುವ ಎಸ್‌ಪಿಯ ಅಖಿಲೇಶ್‌ ಯಾದವ್‌ ಕೂಡ ಕರ್ನಾಟಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳ ಪೈಕಿ ಒಂದಾದ ಪಂಜಾಬ್‌ನ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಕೂಡ ಬರುವ ಸುದ್ದಿಯಿದೆ.

ಇದು ಉತ್ತರ ಭಾರತದ ನಾಯಕರ ಕತೆಯಾದರೆ ಮೊದಲಿನಿಂದಲೂ ಬಿಜೆಪಿಯನ್ನು ತಮ್ಮೊಳಗೆ ಪ್ರವೇಶಿಸಲು ಅವಕಾಶ ನೀಡದಿರುವ ದಕ್ಷಿಣ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ದಕ್ಷಿಣ ಭಾರತದ 5 ರಾಜ್ಯಗಳ ಪೈಕಿ ಬಿಜೆಪಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಮಾತ್ರ. ಕರ್ನಾಟಕವನ್ನು ಬಿಜೆಪಿ ದಕ್ಷಿಣ ಭಾರತದ ಬಾಗಿಲು ಎಂದೇ ಪರಿಗಣಿಸಿತ್ತು. ಆದರೆ ಬಿಜೆಪಿಗೆ ಈ ಬಾರಿ ಬಾಗಿಲಲ್ಲೇ ಹಿನ್ನಡೆಯಾಗಿದೆ. ಈ ಹಿನ್ನಡೆಯ ಸಂಭ್ರಮಾಚರಣೆಗೆ ದಕ್ಷಿಣ ಭಾರತದ ರಾಜ್ಯ ನಾಯಕರು ಸಾಕ್ಷಿಯಾಗಲಿದ್ದಾರೆ.

ಕೇರಳದಲ್ಲಿ ಬಿಜೆಪಿಗೆ ಸಿಂಹಸ್ವಪ್ನವಾಗಿ ನಿಂತಿರುವ ಆಡಳಿತ ಪಕ್ಷ ಸಿಪಿಐ(ಎಂ) ನಾಯಕ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಮಾರಂಭದಲ್ಲಿ ಬಾಗಿಯಾಗಲಿದ್ದಾರೆ. ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ನಾಯಕ ಎಂ. ಕೆ. ಸ್ಟಾಲಿನ್‌ ವೇದಿಕೆಯ ಮೇಲಿರಲಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಚಂದ್ರೇಶಖರ್‌ ರಾವ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಜತೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆ ದಕ್ಷಿಣ ಭಾರತದ ಐದೂ ರಾಜ್ಯಗಳ ನಾಯಕರು ಬುಧವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗುತ್ತಿರುವುದು ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಜಾಗವಿಲ್ಲ ಎಂಬ ಮಾತಿನ ನಿಜರೂಪದಂತೆ ಕಾಣಿಸುತ್ತಿದೆ.

ಇವರಷ್ಟೇ ಅಲ್ಲದೇ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಷ್ಟ್ರಾಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಸಮಾರಂಭಕ್ಕೆ ಆಹ್ವಾನಿಸಲು ಸ್ವತಃ ಕುಮಾರಸ್ವಾಮಿಯವರೇ ಸೋಮವಾರ ದೆಹಲಿಗೆ ತೆರಳಿದ್ದಾರೆ. ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡರು ಕಾರ್ಮಕ್ರಮದಲ್ಲಿರಲಿದ್ದು, ನಟ ಮತ್ತು ರಾಜಕಾರಣಿ ಕಮಲ ಹಾಸನ್‌ ಕೂಡ ಆಗಮಿಸಲಿದ್ದಾರೆ. ಕಾಂಗ್ರೆಸ್‌ನ ಹಲವಾರು ಹಿರಿಯ ರಾಷ್ಟ್ರ ಮತ್ತು ರಾಜ್ಯ ನಾಯಕರು ಕಾರ್ಯಕ್ರಮದಲ್ಲಿರಲಿದ್ದಾರೆ.

ಒಟ್ಟಾರೆ ಕುಮಾರಸ್ವಾಮಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಡೀ ದೇಶದ ಬಿಜೆಪಿ ವಿರೋಧಿ ನಾಯಕರು ಸಮಾಗಮವಾಗುವ ವೇದಿಕೆಯಾಗಿ ಕಾಣಿಸುತ್ತಿದೆ. ಕರ್ನಾಟಕದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊಮ್ಮಿ ಆತುರಾತುರವಾಗಿ ಅಧಿಕಾರ ಹಿಡಿಯಲು ಹೊರಟ ಬಿಜೆಪಿಯನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕಟ್ಟಿಹಾಕಿವೆ.

2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎನಿಸಿಕೊಂಡ ಕರ್ನಾಟಕದ ಚುನಾವಣೆಯಲ್ಲಿ ದೊರೆತ ಫಲಿತಾಂಶ ಹಾಗೂ ನಂತರ ರಾಜಕೀಯ ಬೆಳವಣಿಗಳ ಕಂಪನ ಮುಂದಿನ ವರ್ಷವೂ ಕಾಣಿಸಲಿದೆ ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ.