‘ಎರಡು ಪಕ್ಷ; ಒಂದು ಆತ್ಮ’: ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯ ಸಮನ್ವಯ
COVER STORY

‘ಎರಡು ಪಕ್ಷ; ಒಂದು ಆತ್ಮ’: ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯ ಸಮನ್ವಯ

ಜನಪ್ರಿಯ ಯೋಜನೆಗಳು ಉತ್ತಮ ಆರ್ಥಿಕತೆಯ ಮಾದರಿಗಳಲ್ಲ ಎಂದು ಹಿಂದೆ ಹೇಳುತ್ತಿದ್ದ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಜಾರಿಗೆ ತಂದಿದ್ದು ಜನಪ್ರಿಯ ಯೋಜನೆಗಳನ್ನೇ. ಚುನಾವಣೆಯಲ್ಲಿ ಅವೇ ಅವರ ಕೈ ಹಿಡಿಯಲಿಲ್ಲ. 

ರಾಜಕಾರಣದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದನ್ನು ಕಳೆದೊಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸ್ಪಷ್ಟಪಡಿಸಿವೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ವಿಶ್ವಾಸದಲ್ಲಿದ್ದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಗೆದ್ದರೂ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ತಣ್ಣಗಾಗಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಜೀವನ, ಐದು ವರ್ಷದ ಅಧಿಕಾರಾವಧಿಯ ಹಿನ್ನೋಟ ಇಲ್ಲಿದೆ.

ಒಂದು ಕಾಲಕ್ಕೆ ಕಾಂಗ್ರೆಸ್‌ ಪಕ್ಷವನ್ನು ಕುಟುಂಬ ರಾಜಕಾರಣದ ಪಕ್ಷ ಎಂದು ಜರಿಯುತ್ತಿದ್ದ ಸಿದ್ದರಾಮಯ್ಯ ಕೊನೆಗೆ ಅದೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದವರು. ಜನಪ್ರಿಯ ಯೋಜನೆಗಳು ಉತ್ತಮ ಆರ್ಥಿಕತೆಯ ಮಾದರಿಗಳಲ್ಲ ಎಂದು ಹಿಂದೆ ಹೇಳುತ್ತಿದ್ದ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಜಾರಿಗೆ ತಂದಿದ್ದು ಜನಪ್ರಿಯ ಯೋಜನೆಗಳನ್ನೇ.

ಭಾರತೀಯ ಲೋಕ ದಳ ಪಕ್ಷದ ಮೂಲಕ 1983ರಲ್ಲಿ ಆರಂಭವಾದ ಸಿದ್ದರಾಮಯ್ಯ ರಾಜಕೀಯ ಜೀವನ ಹಲವು ಏರಿಳಿತಗಳನ್ನು ಕಂಡಿದೆ. ಜನತಾ ಪಕ್ಷದಿಂದ ಜೆಡಿಎಸ್‌, ಅಹಿಂದ ನಂತರ ಕಾಂಗ್ರೆಸ್‌ – ಹೀಗೆ ಹಲವು ಸ್ಥಿತ್ಯಂತರಗಳು ಸಿದ್ದರಾಮಯ್ಯ ಅವರ ರಾಜಕೀಯ ಪಯಣದಲ್ಲಿ ಆಗಿವೆ.

‘ಎರಡು ಪಕ್ಷ; ಒಂದು ಆತ್ಮ’: ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯ ಸಮನ್ವಯ

ಸಿದ್ದರಾಮನಹುಂಡಿ ಎಂಬ ಪುಟ್ಟ ಹಳ್ಳಿಯಿಂದ ಮೈಸೂರಿಗೆ ಬಂದು ಎಲ್‌ಎಲ್‌ಬಿ ಓದಿ, ಒಂದಷ್ಟು ದಿನ ವಕೀಲಿಕೆ ಮಾಡಿ, ಸಮಾಜವಾದಿ ಆಶಯಗಳನ್ನು ಮುಂದಿಟ್ಟುಕೊಂಡು ರಾಜಕೀಯ ಪ್ರವೇಶಿಸಿ, ರಾಜ್ಯದ ಮುಖ್ಯಮಂತ್ರಿ ಹುದ್ದೆಗೂ ಏರಿದ ಕುರುಬ ಸಮುದಾಯದ ರಾಜಕಾರಣಿ ಸಿದ್ದರಾಮಯ್ಯ.

ಸಿದ್ದರಾಮಯ್ಯ ಹುಟ್ಟಿದ್ದು 1948ರ ಆಗಸ್ಟ್‌ 12ರಂದು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸಿದ್ದರಾಮನಹುಂಡಿಯಲ್ಲಿ. ಅವರ ತಂದೆ ಸಿದ್ದರಾಮೇಗೌಡ, ತಾಯಿ ಬೋರಮ್ಮ.

1968ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡಿದ ಸಿದ್ದರಾಮಯ್ಯ, 1972ರಲ್ಲಿ ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದರು.

ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲೇ ಸಿದ್ದರಾಮಯ್ಯ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಬೆಳೆದಿತ್ತು. ಆಗಲೇ ರೈತ ಚಳವಳಿಯ ನೇತಾರ ನಂಜುಂಡಸ್ವಾಮಿ ಹಾಗೂ ಸಮಾಜವಾದಿ ಹೋರಾಟಗಾರ ಕೆ.ರಾಮ್‌ದಾಸ್‌ ಅವರ ಆಪ್ತ ವಲಯದಲ್ಲಿ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದರು. ಸಿದ್ದರಾಮಯ್ಯ ರಾಜಕೀಯ ಪ್ರವೇಶಿಸಲು ಅವರ ಮೈಸೂರಿನ ಆಪ್ತ ವಲಯ ಹುರಿದುಂಬಿಸಿತ್ತು.

ಜೆ.ಎಚ್‌. ಪಟೇಲ್‌, ಎಚ್‌.ಡಿ. ದೇವೇಗೌಡರ ಜತೆ ಸಿದ್ದರಾಮಯ್ಯ
ಜೆ.ಎಚ್‌. ಪಟೇಲ್‌, ಎಚ್‌.ಡಿ. ದೇವೇಗೌಡರ ಜತೆ ಸಿದ್ದರಾಮಯ್ಯ

1983ರಲ್ಲಿ ಭಾರತೀಯ ಲೋಕ ದಳ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರಿಗೆ ಮೊದಲ ಪ್ರಯತ್ನದಲ್ಲೇ ಜಯ ಸಿಕ್ಕಿತ್ತು.

ಈ ಗೆಲುವು ಸಿದ್ದರಾಮಯ್ಯ ಸೇರಿದಂತೆ ಅವರ ಆಪ್ತರಿಗೆ ಆಶ್ಚರ್ಯ ತಂದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಸಿದ್ದರಾಮಯ್ಯ ಅವರ ಹೆಸರು ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಹರಿದಾಡತೊಡಗಿತು.

ಭಾರತೀಯ ಲೋಕ ದಳ ಪಕ್ಷದಿಂದ ಆಗಿನ ಆಡಳಿತಾರೂಢ ಜನತಾ ಪಕ್ಷ ಸೇರಿದ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ನೇಮಕವಾದರು. 1985ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮರು ಆಯ್ಕೆಯಾದ ಸಿದ್ದರಾಮಯ್ಯ ಮೊದಲ ಬಾರಿಗೆ ಪಶುಸಂಗೋಪನೆ ಸಚಿವರಾದರು.

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದ ಸಿದ್ದರಾಮಯ್ಯ 1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ. ರಾಜಶೇಖರ ಮೂರ್ತಿ ಎದುರು ಸೋಲುಂಡರು.

1992ರಲ್ಲಿ ಜನತಾ ದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಸಿದ್ದರಾಮಯ್ಯ 1994ರ ಚುನಾವಣೆಯಲ್ಲಿ ಗೆದ್ದು ಎಚ್‌.ಡಿ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾದರು. 1996ರಲ್ಲಿ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿತ್ತು.

ಜನತಾ ಪಕ್ಷ ಹೋಳಾದ ಬಳಿಕ ದೇವೇಗೌಡರ ಬಣದಲ್ಲಿ ಗುರುತಿಸಿಕೊಂಡ ಸಿದ್ದರಾಮಯ್ಯ ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸಿದ್ದರಾಮಯ್ಯ ಸೋಲು ಕಾಣಬೇಕಾಯಿತು.

2004ರಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಅಂದು ಜೆಡಿಎಸ್‌ನಲ್ಲಿ ದೇವೇಗೌಡರ ನಂತರ ಕೇಳಿಬರುತ್ತಿದ್ದ ಎರಡನೇ ಹೆಸರು ಸಿದ್ದರಾಮಯ್ಯ.

‘ಎರಡು ಪಕ್ಷ; ಒಂದು ಆತ್ಮ’: ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯ ಸಮನ್ವಯ

Also read: ELECTION TOUR : ಚಾಮುಂಡೇಶ್ವರಿ ಭಯದಲ್ಲಿ ಬಾದಾಮಿ ಕನಸು ಕಂಡ ಸಿದ್ದರಾಮಯ್ಯ?

ವಿರೋಧಿಸುತ್ತಿದ್ದ ಪಕ್ಷಕ್ಕೇ ಸೇರಿದ ಸಿದ್ದರಾಮಯ್ಯ

ಧರಂಸಿಂಗ್‌ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಡಿಎಸ್‌ ಹಿಂತೆಗೆದುಕೊಂಡಿದ್ದು ರಾಜ್ಯ ರಾಜಕಾರಣದಲ್ಲಿ ಹಲವು ವಿಚಿತ್ರ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಜತೆಗೆ ಕೈ ಜೋಡಿಸಿ ತಾವು ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರು.

ತಮ್ಮ ಮಗ ಕುಮಾರಸ್ವಾಮಿ ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತಗಳನ್ನೇ ಗಾಳಿಗೆ ತೂರಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡರೂ ದೇವೇಗೌಡರು ಇದನ್ನು ಗಟ್ಟಿಯಾಗಿ ವಿರೋಧಿಸಲಿಲ್ಲ, ತಾವು ಮುಖ್ಯಮಂತ್ರಿಯಾಗಲು ಇದ್ದ ಅವಕಾಶಕ್ಕೆ ದೇವೇಗೌಡ ಕಲ್ಲು ಹಾಕಿದರು ಎಂಬ ಕಾರಣಕ್ಕೆ ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ಸಿಟ್ಟಾಗಿದ್ದರು. ಈ ಸಿಟ್ಟು ಸಿದ್ದರಾಮಯ್ಯ ಜೆಡಿಎಸ್‌ ತೊರೆಯುವಂತೆಯೂ ಮಾಡಿತ್ತು.

2005ರಲ್ಲಿ ಜೆಡಿಎಸ್‌ ತೊರೆದ ಸಿದ್ದರಾಮಯ್ಯ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕುವ ಯೋಜನೆ ಹಾಕಿಕೊಂಡಿದ್ದರು. ಅಹಿಂದ ಚಳವಳಿ ಮೂಲಕ ಪ್ರಾದೇಶಿಕ ಪಕ್ಷದ ಸ್ಥಾಪನೆಗೆ ರೂಪುರೇಷೆ ಸಿದ್ದಪಡಿಸಿಕೊಂಡಿದ್ದ ಸಿದ್ದರಾಮಯ್ಯ ಅಹಿಂದ ಸಮಾವೇಶವನ್ನೂ ಮಾಡಿದ್ದರು.

ಆದರೆ, ಕೊನೆ ಗಳಿಗೆಯಲ್ಲಿ ಆ ಯೋಚನೆ ಕೈಬಿಟ್ಟ ಸಿದ್ದರಾಮಯ್ಯ ಈ ಹಿಂದೆ ತಾವು ತೀವ್ರವಾಗಿ ವಿರೋಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಸಿದ್ದರಾಮಯ್ಯ ತಾವು ಅತಿಯಾಗಿ ವಿರೋಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷಕ್ಕೇ ಸೇರಿದ್ದೊಂದು ವೈರುಧ್ಯ.

ಕುಟುಂಬ ರಾಜಕಾರಣದ ಪಕ್ಷ ಎಂದು ಕಾಂಗ್ರೆಸ್‌ ಅನ್ನು ಜರಿಯುತ್ತಿದ್ದ ಸಿದ್ದರಾಮಯ್ಯ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ನೆಲೆ ಇಲ್ಲ ಎಂದು ಬೇರೆ ಆಯ್ಕೆಯೇ ಇಲ್ಲದೆ ಕಾಂಗ್ರೆಸ್‌ ಸೇರಬೇಕಾಯಿತು.

ಆವರೆಗೂ ಕಾಂಗ್ರೆಸ್‌ ಅನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷ ಅನಿವಾರ್ಯವಾದರೆ, ಕಾಂಗ್ರೆಸ್‌ಗೂ ಸಿದ್ದರಾಮಯ್ಯ ಅವರಂಥ ಜನಪ್ರಿಯ ನಾಯಕನ ಅನಿವಾರ್ಯ ಆಗ ಕರ್ನಾಟಕದಲ್ಲಿತ್ತು.
- ಡಾ. ಹರೀಶ್‌ ರಾಮಸ್ವಾಮಿ, ರಾಜಕೀಯ ವಿಶ್ಲೇಷಕ
ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್. 
ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್. 

ಅಂದು ಸಿದ್ದರಾಮಯ್ಯ ಸೇರ್ಪಡೆಗೆ ಕಾಂಗ್ರೆಸ್ ಪಕ್ಷದೊಳಗೇ ವಿರೋಧವಿದ್ದರೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಡಾ. ಜಿ. ಪರಮೇಶ್ವರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರಿಗೆ ನೆರವಾಗಿದ್ದರು.

2006ರ ಚಾಮುಂಡೇಶ್ವರಿ ಕ್ಷೇತ್ರದ ಮರುಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡ ಮತ್ತು ಆಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಅಬ್ಬರದ ಪ್ರಚಾರ ಮಾಡಿದ್ದರು.

ಆದರೂ ಜೆಡಿಎಸ್‌ನ ಎಂ. ಶಿವಬಸಪ್ಪ ವಿರುದ್ಧ ಸಿದ್ದರಾಮಯ್ಯ 257 ಮತಗಳಿಂದ ಜಯ ಗಳಿಸಿದರು. ಈ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತಿದ್ದರೆ ಅವರ ರಾಜಕೀಯ ಜೀವನ ಅಲ್ಲಿಗೇ ನಿಂತುಹೋಗುವ ಸಾಧ್ಯತೆ ಹೆಚ್ಚಾಗಿತ್ತು.

2008ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಗೆದ್ದು ವಿಪಕ್ಷ ನಾಯಕರಾಗಿ ಆಯ್ಕೆಯಾದರು. ಕಾಂಗ್ರೆಸ್‌ಗೆ ವಲಸೆ ಬಂದ ನಾಯಕ ಎನಿಸಿಕೊಂಡಿದ್ದ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನಕ್ಕೇರಿದ್ದು ಕಾಂಗ್ರೆಸ್‌ನ ಅನೇಕ ಮೂಲ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದ ಹಿಡಿತ ಹೊಂದಿದ್ದ ಬಳ್ಳಾರಿಯ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು ವಿಧಾನಸಭೆಯಲ್ಲಿ ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ್ದರು.

ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ತೊಡೆ, ತೋಳು ತಟ್ಟಿ ಈ ಸವಾಲು ಸ್ವೀಕರಿಸಿ ಬಳ್ಳಾರಿ ಪಾದಯಾತ್ರೆ ನಡೆಸಿದರು. ಬಳ್ಳಾರಿ ಪಾದಯಾತ್ರೆ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿತ್ತು.

ಸದನದೊಳಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. 
ಸದನದೊಳಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. 

2013ರ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ರಾಜ್ಯದ 22ನೇ ಮುಖ್ಯಮಂತ್ರಿಯಾದರು. ಹಿಂದೆ ಜೆಡಿಎಸ್‌ ತಪ್ಪಿಸಿದ್ದ ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಮೂಲಕ ದಕ್ಕಿತ್ತು.

Also read: ಬಾದಾಮಿಯ ‘ತಮ್ಮ ಜನ’ ಕೈ ಹಿಡಿಯುವ ವಿಶ್ವಾಸದಲ್ಲಿ ಸಿದ್ದರಾಮಯ್ಯ!

ಕಾಂಗ್ರೆಸ್‌ ಒಳಗೇ ಅಸಮಾಧಾನ

ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಬಂದ ಸಿದ್ದರಾಮಯ್ಯ ಕಾಂಗ್ರೆಸ್‌ನ ಮೂಲ ನಿವಾಸಿಗಳನ್ನು ಒಬ್ಬೊರನ್ನಾಗಿ ತುಳಿದು ತಾವು ಮೇಲೆ ಬಂದರು ಎಂಬ ಆರೋಪವಿದೆ. ಕಾಂಗ್ರೆಸ್‌ ಹೈಕಮಾಂಡ್‌ ಕೂಡಾ ಸಿದ್ದರಾಮಯ್ಯ ಬೆಳವಣಿಗೆಗೆ ನೀರೆರೆಯುತ್ತಿತ್ತು. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತ ನಾಯಕರಂತೆ ವರ್ತಿಸುತ್ತಿದ್ದುದು ಕಾಂಗ್ರೆಸ್‌ ಒಳಗಿದ್ದ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.

“ಸಿದ್ದರಾಮಯ್ಯ ಕೃತಜ್ಞತೆ ಇಲ್ಲದ ಮನುಷ್ಯ. ಕಾಂಗ್ರೆಸ್‌ ಪಕ್ಷದೊಳಗೆ ಬರಲು ಯಾರು ಸಹಾಯ ಮಾಡಿದರೋ ಅವರನ್ನೇ ಮರೆತ ಮನುಷ್ಯ ಸಿದ್ದರಾಮಯ್ಯ. ಕಾಂಗ್ರೆಸ್‌ಗಾಗಿ ಎಷ್ಟೆಲ್ಲಾ ಕೆಲಸ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್‌ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಸಿದ್ದರಾಮಯ್ಯ ಬಗ್ಗೆ ಈಗಲೂ ಪಕ್ಷದೊಳಗಿನ ಹಲವರಿಗೆ ಅಸಮಾಧಾನವಿದೆ” ಎನ್ನುತ್ತಾರೆ ಮಾಜಿ ಸಂಸದ ಹಾಗೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎಚ್‌. ವಿಶ್ವನಾಥ್‌.

“ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಈ ವರ್ತನೆ ಸಹಿಸಲಾರದೆ ನಾನು, ವಿ. ಶ್ರೀನಿವಾಸ್‌ ಪ್ರಸಾದ್‌, ಎಸ್‌.ಎಂ. ಕೃಷ್ಣ ಹೊರ ಬಂದೆವು. ನಾವೆಲ್ಲಾ ಕಾಂಗ್ರೆಸ್‌ ತೊರೆಯಲು ಸಿದ್ದರಾಮಯ್ಯ ಅವರೇ ಕಾರಣ. ಎಲ್ಲ ಮುಖಂಡರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಸಿದ್ದರಾಮಯ್ಯ ಅವರಲ್ಲಿಲ್ಲ. ತಾನೊಬ್ಬನೇ ಬೆಳೆಯಬೇಕೆಂಬ ದುರ್ಗುಣ ಅವರದ್ದು” ಎಂಬುದು ಅವರ ಮಾತು.

“ಸಮಾಜವಾದಿ ಚಳವಳಿ, ರೈತ ಚಳವಳಿ ಎಂದೆಲ್ಲಾ ಸಿದ್ದರಾಮಯ್ಯ ಬರಿದೆ ಮಾತನಾಡುತ್ತಾರೆ. ಆದರೆ, ಕಾಲೇಜು ದಿನಗಳಿಂದಲೂ ಅವರು ಬೀದಿಗಿಳಿದು ಹೋರಾಡಿದವರಲ್ಲ. ಚಳವಳಿಯ ಮುಖಂಡ ಜತೆಗೆ ಮಾತನಾಡುತ್ತಿದ್ದಿದ್ದು ಬಿಟ್ಟರೆ ಹೋರಾಟ, ಚಳವಳಿಗಳಲ್ಲಿ ಯಾವತ್ತೂ ಮುಂದೆ ಬಂದ ವ್ಯಕ್ತಿಯಲ್ಲ ಅವರು. ತಮ್ಮನ್ನು ಬೆಳೆಸಿದ ದೇವೇಗೌಡರ ವಿರುದ್ಧವೇ ಟೀಕೆ ಮಾಡುವ, ರಾಜಕೀಯವಾಗಿ ಸಹಾಯ ಮಾಡಿದವರನ್ನು ನೆನೆಯದ ಕೃತಜ್ಞತೆ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ” ಎನ್ನುತ್ತಾರೆ ವಿಶ್ವನಾಥ್‌.

“ಸಿದ್ದರಾಮಯ್ಯ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಿದ್ದವರು ಆಗ ಭಾರತೀಯ ಲೋಕ ದಳದ ಮುಖಂಡರಾಗಿದ್ದ ಜಾರ್ಜ್‌ ಫರ್ನಾಂಡಿಸ್‌. ಸದ್ಯ ಜೀವನದ ಕೊನೆಗಾಲದಲ್ಲಿರುವ ಜಾರ್ಜ್‌ ಫರ್ನಾಂಡಿಸ್‌ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸುವ ಸೌಜನ್ಯವನ್ನೂ ಸಿದ್ದರಾಮಯ್ಯ ತೋರಿಲ್ಲ” ಎನ್ನುತ್ತಾರೆ ಅವರು.

ಜನಪ್ರಿಯ ಯೋಜನೆಗಳಿಗೇ ದುಂಬಾಲು

ವಿಪಕ್ಷದಲ್ಲಿದ್ದಾಗ ಜನಪ್ರಿಯ ಯೋಜನೆಗಳು ಒಳ್ಳೆಯ ಆರ್ಥಿಕತೆಯ ಮಾದರಿಗಳಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾದಾಗ ಜಾರಿಗೆ ತಂದಿದ್ದು ಜನಪ್ರಿಯ ಯೋಜನೆಗಳನ್ನೇ. ಅನ್ನಭಾಗ್ಯ, ಕ್ಷೀರಭಾಗ್ಯ, ಪಶುಭಾಗ್ಯದಂಥ ಜನಪ್ರಿಯ ಯೋಜನೆಗಳನ್ನೇ ಸಿದ್ದರಾಮಯ್ಯ ಸರಕಾರ ತನ್ನ 5 ವರ್ಷಗಳ ಸಾಧನೆ ಎಂದು ಹೇಳಿಕೊಂಡಿತ್ತು.

ಹಿಂದೆ ತಾವು ಯಾವುದು ಒಳ್ಳೆಯ ಮಾದರಿಯಲ್ಲ ಎಂದು ಹೇಳುತ್ತಿದ್ದರೋ ಅದೇ ಮಾದರಿಯನ್ನು ಚುನಾವಣೆಯ ತಂತ್ರವಾಗಿ ಬಳಸಲು ಸಿದ್ದರಾಮಯ್ಯ ಮುಂದಾದರು. ಕಾಂಗ್ರೆಸ್‌ ಪಕ್ಷ ಕೂಡಾ ಈ ಚುನಾವಣೆಯಲ್ಲಿ ಈ ಜನಪ್ರಿಯ ಯೋಜನೆಗಳನ್ನೇ ಸಾಮಾಜಿಕ ನ್ಯಾಯದ ಸಾಕಾರ ಎಂದು ಬಿಂಬಿಸಿತು. ಆದರೆ, 2018ರ ಚುನಾವಣೆಯಲ್ಲಿ ಇವ್ಯಾವೂ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಕೈಹಿಡಿಯಲಿಲ್ಲ.

ಗರ್ವದ ಮನುಷ್ಯ?

ಗರ್ವದ ಮನುಷ್ಯ, ದುರಹಂಕಾರಿ ಎಂದು ವಿರೋಧಿಗಳು ಕರೆಯುವ ಸಿದ್ದರಾಮಯ್ಯ ನಿಜಕ್ಕೂ ಹಾಗಿಲ್ಲ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು. “ತಳ ಸಮುದಾಯದ ಜನ ಸ್ವಾಭಿಮಾನದಿಂದ ನಡೆದುಕೊಂಡಾಗ ವಿರೋಧಿಗಳು ಅವರನ್ನು ಗರ್ವದ ಮನುಷ್ಯ, ದುರಹಂಕಾರಿ ಎನ್ನುವುದು ಸಾಮಾನ್ಯ. ಆದರೆ ಅವರನ್ನು ಹತ್ತಿರದಿಂದ ನೋಡಿದರೆ ಅವರ ವ್ಯಕ್ತಿತ್ವ ಗೊತ್ತಾಗುತ್ತದೆ. ಸಿದ್ದರಾಮಯ್ಯ ಯಾರ ಮುಖಸ್ತುತಿ ಮಾಡುವುದಿಲ್ಲ. ಯಾರೊಂದಿಗೂ ಆತ್ಮೀಯತೆ ತೋರುವುದಿಲ್ಲ. ಅವರು ನೇರ ಹಾಗೂ ನಿಷ್ಠುರ ವ್ಯಕ್ತಿತ್ವದವರು” ಎಂಬುದು ಸಿದ್ದರಾಮಯ್ಯ ಅವರ ಆಪ್ತರ ಮಾತು.

“ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಬದ್ಧತೆ ಇದೆ. ಉಳಿದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಸಿದ್ದರಾಮಯ್ಯ ತಮ್ಮ ಕೆಲಸಗಳ ಮೂಲಕ ತಮ್ಮ ಬದ್ಧತೆಯನ್ನು ತೋರಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಶೋಷಿತರ ಬಗ್ಗೆ ಕಾಳಜಿ ಇದೆ. ಸಿದ್ದರಾಮಯ್ಯ ಚುರುಕಿನ ಮನುಷ್ಯ. ಅವರ ನೆನಪಿನ ಶಕ್ತಿಯೂ ಹೆಚ್ಚಾಗಿದೆ. ಹಲವು ಸಂದರ್ಭಗಳಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ ಅವರ ವಿರೋಧಿಗಳೂ ಒಪ್ಪುವಂತಿರುತ್ತದೆ” ಎನ್ನುತ್ತಾರೆ ಅವರು.

ಇಸ್ಪೀಟ್‌ ಇಷ್ಟ:

ಸಿದ್ದರಾಮಯ್ಯ ಅವರಿಗೆ ಕ್ರೀಡೆಯ ಬಗ್ಗೆಯೂ ಆಸಕ್ತಿ ಇದೆ. ಸಿದ್ದರಾಮಯ್ಯ ಹಿಂದೆ ಕಬಡ್ಡಿ ಆಡುತ್ತಿದ್ದರು. ಕ್ರಿಕೆಟ್‌ ಕೂಡಾ ಅವರ ಮೆಚ್ಚಿನ ಕ್ರೀಡೆ. ಬೆಂಗಳೂರಿನಲ್ಲಿ ನಡೆಯುವ ಏಕದಿನ ಪಂದ್ಯಗಳನ್ನು ಅವರು ತಪ್ಪಿಸಿಕೊಳ್ಳುವುದು ಕಡಿಮೆ. ಅವರ ಮೆಚ್ಚಿನ ಆಟ ಇಸ್ಪೀಟ್‌ ಎನ್ನುತ್ತಾರೆ ಆಪ್ತರು.

“ಮೈಸೂರಿಗೆ ಹೋದಾಗೆಲ್ಲಾ ಈಗಲೂ ಹಳೆಯ ಗೆಳೆಯರೊಂದಿಗೆ ಇಸ್ಪೀಟ್‌ ಆಡುತ್ತಾರೆ. ಆಟವಾಗಿ ಅವರು ಇಸ್ಪೀಟ್‌ ಆಡುತ್ತಾರೆಯೇ ಹೊರತು ಜೂಜಾಗಿ ಅಲ್ಲ. ಅವರಿಗೆ ಕುಡಿತದ ಅಭ್ಯಾಸವಿದೆ. ಆದರೆ, ವ್ಯಸನಿ ಅಲ್ಲ. ಗೆಳೆಯರು, ಸ್ನೇಹಿತರು ಸೇರಿದಾಗ ಒಂದು ಪೆಗ್‌ ಹಾಕುತ್ತಾರೆ. ಕುಡಿಯುವ ವಿಚಾರದಲ್ಲಿ ಅವರೇನೂ ಮುಚ್ಚುಮರೆ ಮಾಡುವುದಿಲ್ಲ” ಎಂಬುದು ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ಕಂಡವರ ಅಭಿಪ್ರಾಯ.

ಸಿದ್ದರಾಮಯ್ಯ ಆಗಾಗ ನಿದ್ದೆಯ ಕಾರಣಕ್ಕೂ ನೆನಪಾಗುತ್ತಾರೆ. 
ಸಿದ್ದರಾಮಯ್ಯ ಆಗಾಗ ನಿದ್ದೆಯ ಕಾರಣಕ್ಕೂ ನೆನಪಾಗುತ್ತಾರೆ. 

ಸಿದ್ದರಾಮಯ್ಯ ‘ನಿದ್ದೆ’ರಾಮಯ್ಯ!

ಸಿದ್ದರಾಮಯ್ಯ ವೇದಿಕೆ ಮೇಲಿರಲಿ, ಸಭೆ- ಸಮಾರಂಭಗಳಲ್ಲಿರಲಿ ಎಲ್ಲೆಂದರಲ್ಲಿ ನಿದ್ರೆ ಮಾಡುತ್ತಾರೆ ಎಂಬ ಕಾರಣಕ್ಕೆ ವಿಪಕ್ಷಗಳು ಅವರನ್ನು ‘ನಿದ್ದೆ’ರಾಮಯ್ಯ ಎಂದು ಅಣಕವಾಡಿದ್ದಿದೆ. ಸುದ್ದಿವಾಹಿನಿಗಳಂತೂ ಸಿದ್ದರಾಮಯ್ಯ ನಿದ್ರೆ ಮಾಡುವುದನ್ನು ಸಾಕೆನಿಸುವಷ್ಟು ವ್ಯಂಗ್ಯ ಮಾಡಿವೆ. ಆದರೆ, ಸಿದ್ದರಾಮಯ್ಯ ಅವರಿಗೆ ರಾತ್ರಿ ನಿದ್ರೆಯಲ್ಲಿ ಉಸಿರಾಟದ ವೇಳೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದರಿಂದ ಅವರು ರಾತ್ರಿ ತಡವಾಗಿ ಮಲಗಿದ ಅಥವಾ ಬೆಳಿಗ್ಗೆ ಬೇಗ ಎದ್ದ ದಿನಗಳಲ್ಲಿ ಕುಳಿತಲ್ಲಿ ಅವರಿಗೆ ನಿದ್ರೆ ಎಳೆಯುತ್ತದೆ ಎನ್ನುತ್ತಾರೆ ಅವರ ಆಪ್ತರು.

ಯಾರನ್ನೂ ಹಚ್ಚಿಕೊಳ್ಳುವುದಿಲ್ಲ

ಸಿದ್ದರಾಮಯ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಹಾಗೆ ಅವರು ಯಾರನ್ನೂ ಹಚ್ಚಿಕೊಳ್ಳುವುದಿಲ್ಲ. ಈ ಮಾತು ನಿಜವೂ ಕೂಡಾ ಎನ್ನುತ್ತಾರೆ ಅವರ ವೈಯಕ್ತಿಕ ಬದುಕನ್ನು ಹತ್ತಿರದಿಂದ ಕಂಡ ಅವರ ಹಳೆಯ ಗೆಳೆಯರೊಬ್ಬರು.

‘ಎರಡು ಪಕ್ಷ; ಒಂದು ಆತ್ಮ’: ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯ ಸಮನ್ವಯ

“ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಸಿದ್ದರಾಮಯ್ಯ ಅವರೊಂದಿಗೆ ಓಡಾಡುವುದೇ ಕಡಿಮೆ. ಸಿದ್ದರಾಮಯ್ಯ ಯಾರನ್ನೂ ಹೆಚ್ಚು ಹಚ್ಚಿಕೊಳ್ಳುವುದಿಲ್ಲ. ಹೆಚ್ಚು ಸಂತೋಷವನ್ನೂ ತೋರಿಸಿಕೊಳ್ಳುವುದಿಲ್ಲ. ಹೆಚ್ಚು ದುಃಖವನ್ನೂ ತೋರುವುದಿಲ್ಲ. ಅವರ ಮಗ ರಾಕೇಶ್ ಸಾವನ್ನಪ್ಪಿದಾಗಲೂ ಅವರು ಬಿಕ್ಕಿಬಿಕ್ಕಿ ಅಳಲಿಲ್ಲ. ಸಂತೋಷವೇ ಇರಲಿ, ನೋವೇ ಇರಲಿ ಅದನ್ನು ಒಳಗೇ ಇಟ್ಟುಕೊಳ್ಳುತ್ತಾರೆ” ಎನ್ನುತ್ತಾರೆ ಅವರ ಗೆಳೆಯರು.

“ಮಗ ಸಾವನ್ನಪ್ಪಿದ ಬಳಿಕ ಸಿದ್ದರಾಮಯ್ಯ ಹೆಚ್ಚು ಚಟುವಟಿಕೆಯಿಂದಿದ್ದಾರೆ. ನಿದ್ರೆ ಹಾಗೂ ಉಸಿರಾಟದ ಸಮಸ್ಯೆ ನಿಯಂತ್ರಣದಲ್ಲಿಟ್ಟುಕೊಳ್ಳಲು ವ್ಯಾಯಾಮ, ಯೋಗ ಮಾಡುತ್ತಾರೆ. ಅವರ ಮಧುಮೇಹ ಕೂಡಾ ನಿಯಂತ್ರಣದಲ್ಲಿದೆ. ಹೀಗಾಗಿ ಇತ್ತೀಚೆಗೆ ಅವರು ಎಲ್ಲೂ ಸಾರ್ವಜನಿಕವಾಗಿ ನಿದ್ರೆ ಮಾಡಿದ್ದಿಲ್ಲ” ಎನ್ನುತ್ತಾರೆ ಅವರು.

“ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಕ್ಷೇತ್ರ ಮರೆಯಲಿಲ್ಲ. ರಾಕೇಶ್‌ ಇರುವವರೆಗೂ ಕ್ಷೇತ್ರದ ಜವಾಬ್ದಾರಿ ಅವರೇ ನೋಡಿಕೊಳ್ಳುತ್ತಿದ್ದರು. ಈಗ ಸಿದ್ದರಾಮಯ್ಯ ಮತ್ತು ಅವರ ಕಿರಿಯ ಮಗ ಯತೀಂದ್ರ ಆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಯತೀಂದ್ರಗೆ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಇಲ್ಲ. ಆದರೆ, ಅವರ ಸುತ್ತಮುತ್ತ ಇರುವವರು ಯತೀಂದ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುತ್ತಿದ್ದಾರೆ. ಆದರೆ, ಸಂಕೋಚದ ಸ್ವಭಾವವಿರುವ ಯತೀಂದ್ರ ರಾಜಕೀಯದಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆ” ಎನ್ನುತ್ತಾರೆ ಮೈಸೂರು ಭಾಗದ ಸಿದ್ದರಾಮಯ್ಯ ಗೆಳೆಯರು.

Also read: ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಚರ್ಚೆ; ಏನಾಗಲಿದೆ ಕಾಂಗ್ರೆಸ್ ಹೈಕಮಾಂಡ್‌ ಲೆಕ್ಕಾಚಾರ?

2013ರ ವಿಧಾನಸಭಾ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡಿದ್ದ ಸಿದ್ದರಾಮಯ್ಯ ಬಳಿಕ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದರು. 2018ರ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲೇ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಕೂಡಾ ಘೋಷಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದರೆ ಅಥವಾ ಕಾಂಗ್ರೆಸ್‌ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದರೆ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು.

ಆದರೆ, ಸಿದ್ದರಾಮಯ್ಯ ಹೆಸರಿನಲ್ಲಿ 2018ರ ಚುನಾವಣೆಯನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲು ಸಾಧ್ಯವಾಗದ ಕಾಂಗ್ರೆಸ್‌ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಅಲ್ಲದೆ, ಸಿದ್ದರಾಮಯ್ಯ ಅವರೇ ಇದೇ ನನ್ನ ಕೊನೆಯ ಚುನಾವಣೆ. ಬ್ರಹ್ಮ ಬಂದು ಹೇಳಿದರೂ ಮತ್ತೆ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಪಕ್ಷೇತರವಾಗಿ ಕೆಲಸ ಮಾಡಿದ್ದಾರೆ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಗೆಲ್ಲುವ ಸಾಧ್ಯತೆಗಳೂ ಹೆಚ್ಚು. ಮಗ ರಾಕೇಶ್‌ ಸಾವನ್ನಪ್ಪಿದ ಬಳಿಕ ಸಿದ್ದರಾಮಯ್ಯ ಹೆಚ್ಚು ಚಟುವಟಿಕೆಯಿಂದಿರುವುದು ಹಾಗೂ ಮಗನ ಸಾವಿನ ಅನುಕಂಪ ಕೂಡಾ ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಮತ ತಂದುಕೊಡಬಹುದು ಎಂಬ ಮಾತುಗಳಿದ್ದವು. ಆದರೆ, ಅವೆಲ್ಲವನ್ನೂ ಈ ಬಾರಿಯ ಚುನಾವಣೆ ಸುಳ್ಳಾಗಿಸಿದೆ.

ಕಿಕ್‌ ಬ್ಯಾಕ್‌ ಆರೋಪ

“ಬಳ್ಳಾರಿಯ ಸಂಡೂರಿನಿಂದ 5,450 ಕೋಟಿ ರೂಪಾಯಿ ಮೌಲ್ಯದ ಅದಿರು ಕಳ್ಳ ಸಾಗಣೆಯಾಗಿರುವ ಪ್ರಕರಣ ಮೈಸೂರು ಮಿನರಲ್ಸ್‌ಲಿಮಿಟೆಡ್‌ (ಎಂಎಂಎಲ್‌) ಆಂತರಿಕ ತನಿಖೆಯಿಂದ ಬಹಿರಂಗವಾಗಿದೆ. ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳ ಮಾರ್ಗದರ್ಶನದಲ್ಲೇ ಈ ಅಕ್ರಮ ನಡೆದಿದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.

“ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ಹಲವು ಬಾರಿ ದೂರು ನೀಡಿದ್ದರೂ ರಾಜಕೀಯ ಪ್ರಭಾವ ಬಳಸಿ ಆ ದೂರುಗಳ ತನಿಖೆ ನಡೆಯದಂತೆ ಸಿದ್ದರಾಮಯ್ಯ ನೋಡಿಕೊಂಡಿದ್ದಾರೆ” ಎಂದು ಬಿಜೆಪಿ ಮುಖಂಡ ಬಿ.ಜೆ. ಪುಟ್ಟಸ್ವಾಮಿ ದೂರಿದ್ದರು.

Also read: ಮೋದಿಗೆ ಎದುರಾಗಿ ನಿಂತಿರುವ ದೇಶದ ಏಕೈಕ ‘ಪ್ರಾದೇಶಿಕ’ ನಾಯಕ!

ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಇಡೀ ದೇಶದಲ್ಲಿ ಗಟ್ಟಿಯಾಗಿ ಮಾತನಾಡಿದ ರಾಜ್ಯಮಟ್ಟದ ನಾಯಕ ಸಿದ್ದರಾಮಯ್ಯ ಮಾತ್ರ. ಇದನ್ನು ಅರಿತಿದ್ದ ಕಾಂಗ್ರೆಸ್‌ ರಾಷ್ಟ್ರರಾಜಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಕರೆತರುವ ಆಸಕ್ತಿ ತೋರಿತ್ತು. ಆದರೆ, ಈಗ ಅದೆಲ್ಲಾ ಮುಗಿದ ಅಧ್ಯಾಯದಂತಾಗಿದೆ.

ಹಿಂದೆ ಯಾವ ಪಕ್ಷವನ್ನು ವಿರೋಧಿಸಿದ್ದರೋ ಅದೇ ಪಕ್ಷದಲ್ಲಿ ಮೇಲೇರಿದ ಹಾಗೂ ಹಿಂದೆ ಯಾವ ಜನಪ್ರಿಯ ಯೋಜನೆಗಳನ್ನು ವಿರೋಧಿಸಿದ್ದರೋ ಅದೇ ಜನಪ್ರಿಯ ಯೋಜನೆಗಳನ್ನೇ ತನ್ನ ಸರಕಾರದ ಸಾಧನೆ ಎಂದು ಹೇಳಿಕೊಂಡಿದ್ದು ಸಿದ್ದರಾಮಯ್ಯ ರಾಜಕೀಯ ಬದುಕಿನ ವೈರುಧ್ಯ.

ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದರೆ, ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಮುಂದಿನ ಹಲವು ವರ್ಷಗಳ ಕಾಲ ರಾಜ್ಯವನ್ನು ಪ್ರಭಾವಿಸುವ ಅವಕಾಶಗಳಿವೆ. ಸಮ್ಮಿಶ್ರ ಸರಕಾರದಲ್ಲಿ ಎರಡೂ ಪಕ್ಷಗಳ ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಮಾತಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಹೆಸರುಗಳು ಅದಲು ಬದಲಾಗಿವೆ. ಎರಡು ಪಕ್ಷ, ಒಂದು ಆತ್ಮದಂತೆ ಕಾಣಿಸುತ್ತಿರುವ ಸಿದ್ದರಾಮಯ್ಯ ಎರಡೂ ಪಕ್ಷಗಳನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬುದರ ಮೇಲೆ ಸಮ್ಮಿಶ್ರ ಸರಕಾರದ ಭವಿಷ್ಯ ನಿಂತಿದೆ.