ಮೈತ್ರಿ ಸರಕಾರದ ಮುಂದಿದೆ ‘ಜನಪ್ರಿಯ’ ಭರವಸೆಗಳನ್ನು ಈಡೇರಿಸುವ ಸವಾಲು; ಏನವು?
COVER STORY

ಮೈತ್ರಿ ಸರಕಾರದ ಮುಂದಿದೆ ‘ಜನಪ್ರಿಯ’ ಭರವಸೆಗಳನ್ನು ಈಡೇರಿಸುವ ಸವಾಲು; ಏನವು?

ಪ್ರಣಾಳಿಕೆಯ ಜನಪ್ರಿಯ ಭರವಸೆಗಳೂ ತಮಗೆ ಸ್ಪಷ್ಟ ಬಹುಮತ ತಂದುಕೊಡಲಿಲ್ಲ ಎಂಬುದು ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಅರಿವಾಗಿದೆ. ತಾವು ನೀಡಿರುವ ಜನಪ್ರಿಯ ಭರವಸೆಗಳನ್ನು ಈಡೇರಿಸುವ ಸವಾಲು ಈಗ ಜೆಡಿಎಸ್- ಕಾಂಗ್ರೆಸ್‌ ಮೈತ್ರಿ ಸರಕಾರದ ಮುಂದಿದೆ.

ರಾಷ್ಟ್ರದ ಗಮನ ಸೆಳೆದಿದ್ದ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಸದ್ಯ ಒಂದು ಹಂತಕ್ಕೆ ಬಂದಿವೆ. ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ನಿರ್ಗಮನದಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಒಲಿಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಸದ್ಯ ಮೈತ್ರಿ ಸರಕಾರದ ಮುಂದಿರುವ ಸವಾಲು ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವುದು.

ಸ್ಪಷ್ಟ ಬಹುಮತ ಪಡೆಯಲು ವಿಫಲವಾದ ಕಾಂಗ್ರೆಸ್‌ ಚುನಾವಣಾ ಫಲಿತಾಂಶದ ದಿನವೇ ಜೆಡಿಎಸ್‌ಗೆ ಬೆಂಬಲ ಘೋಷಿಸಿತ್ತು. ಶತಾಯಗತಾಯ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿ ಯುಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಅವರಿಂದ ರಾಜೀನಾಮೆಯನ್ನೂ ಕೊಡಿಸಿ ಮುಂದಿನ ರಾಜಕೀಯ ರಣತಂತ್ರಗಳನ್ನು ಹೆಣೆಯಲು ಸಜ್ಜಾಗಿದೆ.

ಈ ಎಲ್ಲಾ ರಾಜಕೀಯ ಹೈಡ್ರಾಮಾಗಳ ನಡುವೆಯೂ ಯಡಿಯೂರಪ್ಪ ಸುಮ್ಮನೇ ರಾಜೀನಾಮೆ ನೀಡಿಲ್ಲ. ತಮಗೆ ಅಧಿಕಾರ ಸಿಕ್ಕಿದ್ದರೆ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೆ, ಕೇಂದ್ರದಲ್ಲಿ ಮೋದಿ ಸರಕಾರದ ಜತೆಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಸರಕಾರ ಇದ್ದಿದ್ದರೆ ರಾಜ್ಯದ ಚಿತ್ರಣವೇ ಬದಲಾಯಿಸುತ್ತಿದ್ದೆ ಎಂದಿದ್ದಾರೆ.

ಶನಿವಾರದ ತುರ್ತು ಅಧಿವೇಶನವನ್ನು ವಿಶ್ವಾಸಮತ ಯಾಚನೆಯ ಬದಲಿಗೆ ತಮ್ಮ ಭಾಷಣಕ್ಕೆ ಮೀಸಲು ಮಾಡಿಕೊಂಡ ಯಡಿಯೂರಪ್ಪ ರೈತರ ಸಂಕಷ್ಟ, ಕೊಳೆಗೇರಿಗಳ ಸ್ಥಿತಿಗತಿ ಹಾಗೂ ರಾಜ್ಯದ ಪ್ರಮುಖ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. 113 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದ್ದರೆ ರಾಜ್ಯವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುತ್ತಿದ್ದೆ ಎಂದಿದ್ದಾರೆ ಯಡಿಯೂರಪ್ಪ.

ಯಡಿಯೂರಪ್ಪ ಹೀಗೆ ತಮ್ಮ ಪ್ರಣಾಳಿಕೆಯ ಪ್ರಮುಖಾಂಶಗಳನ್ನು ಮತ್ತೆ ಸದನದಲ್ಲಿ ಮಂಡಿಸಿ ಹೋಗಿದ್ದರೆ, ಜೆಡಿಎಸ್‌- ಕಾಂಗ್ರೆಸ್‌ ಪಕ್ಷಗಳು ಪ್ರಣಾಳಿಕೆಯ ಬಗ್ಗೆ ತಲೆಕಡೆಸಿಕೊಳ್ಳದೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಸರದಲ್ಲಿವೆ. ಪ್ರಣಾಳಿಕೆಯ ಬಗ್ಗೆ ಈ ಎರಡೂ ಪಕ್ಷಗಳು ಸದ್ಯದ ಮಟ್ಟಿಗೆ ಮರೆವು ಪ್ರದರ್ಶಿಸಿದರೂ ಮುಂದಿನ ದಿನಗಳಲ್ಲಾದರೂ ತಾವು ನೀಡಿದ್ದ ಭರವಸೆಗಳ ಬಗ್ಗೆ ಬಾಯ್ಬಿಡಬೇಕಾದ ಸಂದರ್ಭ ಬಂದೇ ಬರುತ್ತದೆ.

ಜೆಡಿಎಸ್‌ ಪ್ರಣಾಳಿಕೆಯ ಭರವಸೆಗಳು:

“ರಾಜ್ಯದ ಪ್ರತಿಯೊಬ್ಬ ರೈತನು ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಕೃಷಿ ಸಾಲವನ್ನು ಯಾವುದೇ ಷರತುಗಳಿಲ್ಲದೆ ಶೇಕಡ 100ರಷ್ಟು ಸಂಪೂರ್ಣ ಮನ್ನಾ ಮಾಡಲಾಗುವುದು. ರಾಜ್ಯದ ರೈತರಿಗೆ ಕೃಷಿ ಬಳಕೆಗಾಗಿ 24 ಗಂಟೆ 3 ಫೇಸ್ ವಿದ್ಯುತ್ ದೊರಕುವಂತೆ ಮಾಡುವುದು. ಬಯಲು ಸೀಮೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು” ಎಂದು ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು.

“ರೈತರು ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ 53 ಸಾವಿರ ಕೋಟಿ ರೂಪಾಯಿ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮನ್ನಾ ಮಾಡುವುದು, ಸಣ್ಣ ಟ್ರಾಕ್ಟರ್‌ ಖರೀದಿಗೆ ಶೇಕಡ 75 ಹಾಗೂ ಇತರೆ ಕೃಷಿ ಸಲಕರಣೆಗಳ ಖರೀದಿಗೆ ಶೇಕಡ 90ರಷ್ಟು ಸಬ್ಸಿಡಿ ನೀಡುವುದು, ರೈತರು ನೀರು ಸಂಗ್ರಹ ಮಾಡುವ ಯಾವುದೇ ವ್ಯವಸ್ಥೆಗೆ ಶೇಕಡ 100 ಸಬ್ಸಿಡಿ, ಸ್ವಸಹಾಯಕ ಸಂಘಗಳಲ್ಲಿ ಮಹಿಳೆಯರು ಮಾಡಿರುವ ಸಾಲ ಮನ್ನಾ, ಆಶಾ ಕಾರ್ಯಕರ್ತರ ಪ್ರೋತ್ಸಾಹಕ ಧನವನ್ನು 3,500 ರೂಪಾಯಿಯಿಂದ 5000 ರೂಪಾಯಿಗೆ ಏರಿಕೆ” - ಹೀಗೆ ಜನಪ್ರಿಯತೆಗೆ ಬೇಕಾದ ಎಲ್ಲಾ ಅಂಶಗಳನ್ನೂ ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿತ್ತು.

“ಬಡ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ಕುಟುಂಬ ನಿರ್ವಹಣಾ ಭತ್ಯೆ ನೀಡಲಾಗುತ್ತದೆ. 65 ವರ್ಷ ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ತಿಂಗಳಿಗೆ 6000 ರೂಪಾಯಿ ಪಿಂಚಣಿ, ವಕೀಲರಿಗೆ ತಿಂಗಳಿಗೆ 5000 ರೂಪಾಯಿ ಸ್ಟೇಫಂಡ್‌, ದ್ವಿದಳ ಧಾನ್ಯಗಳಿಗೆ 500 ರೂಪಾಯಿ ಬೆಂಬಲ ಬೆಲೆ, ಸರ್ಕಾರಿ ಶಾಲೆಗಳನ್ನು ಸ್ಮಾರ್ಟ್ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು, ಡೊನೇಷನ್‌ ಹಾವಳಿಗೆ ಕಡಿವಾಣ ಹಾಕಲಾಗುವುದು” ಎಂದು ಜೆಡಿಎಸ್‌ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡಿತ್ತು.

“ರಾಜ್ಯದ ನೀರಾವರಿ ಯೋಜನೆಗಳಿಗಾಗಿ 1.5 ಲಕ್ಷ ಕೋಟಿ ರೂಪಾಯಿ ಮೀಸಲು, ಗ್ರಾಮೀಣ ಪ್ರದೇಶದ ಯುವಕರಿಗೆ 7000 ರೂಪಾಯಿಯಿಂದ 8000 ರೂಪಾಯಿವರೆಗೆ ವೇತನ ನೀಡಿ, ಅವರ ಮೂಲಕ ಸಾಮಾಜಿಕ ಅರಣ್ಯ ಬೆಳೆಸಲು ಕ್ರಮ, ಲೋಕಾಯುಕ್ತ ಬಲವರ್ಧನೆ, ಎಸಿಬಿ ರದ್ದು, ಇಸ್ರೇಲ್ ಮಾದರಿ ಕ್ರಷಿಗೆ ಪ್ರೋತ್ಸಾಹ” ಇಂತಹ ಭರವಸೆಗಳನ್ನು ಜೆಡಿಎಸ್‌ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿತ್ತು.

ವಿಧಾನಸಭೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್‌ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್‌ ಕೂಡಾ ಹಿಂದುಳಿದಿಲ್ಲ!

ಭರವಸೆ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಕೂಡಾ ಹಿಂದುಳಿದಿಲ್ಲ. ನೀರಾವರಿ ಯೋಜನೆಗಳು, ರೈತರ ಪ್ರೋತ್ಸಾಹ, ಗ್ರಾಮೀಣಾಭಿವೃದ್ಧಿ, ವಿದ್ಯಾರ್ಥಿಗಳ ಪ್ರೋತ್ಸಾಹದಂಥ ವಿಚಾರಗಳನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿತ್ತು.

“ನೀರಾವರಿ ಯೋಜನೆಗಳಿಗೆ 1.25 ಲಕ್ಷ ಕೋಟಿ ರೂಪಾಯಿ ಮೀಸಲು, ಹವಾಮಾನ ಆಧರಿತ ಕೃಷಿ ಕಾರಿಡಾರ್‌ ನಿರ್ಮಾಣ, ಸ್ಮಾರ್ಟ್‌ ಗ್ರಾಮಗಳ ಅಭಿವೃದ್ಧಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲಿ ಶೇಕಡ 75ರಷ್ಟು ರಿಯಾಯ್ತಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂಪಾಯಿಗೆ ಏರಿಕೆ, ರಾಜ್ಯದ ಎಲ್ಲ ಗ್ರಾಮಗಳಲ್ಲಿ ದಿನಕ್ಕೆ 20 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಪೂರೈಕೆ ಮಾಡಲಾಗುವುದು” ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿತ್ತು.

ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ವಿದ್ಯುತ್‌, ನಗರಾಭಿವೃದ್ಧಿ, ನಗರ ಜೀವನಮಟ್ಟ ಸುಧಾರಣೆ, ಕೌಶಲಾಭಿವೃದ್ಧಿ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಮೊದಲಾದ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಮಹಿಳೆಯರಿಗೆ ಉದ್ಯೋಗದಲ್ಲಿ ಶೇಕಡ 30ರಷ್ಟು ಮೀಸಲಾತಿ ಕಲ್ಪಿಸುವ ಭರವಸೆಯೊಂದಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸುವ ಭರವಸೆಯನ್ನು ಕಾಂಗ್ರಸ್‌ ನೀಡಿತ್ತು.

“ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜತೆಯಲ್ಲಿ ಪ್ರತ್ಯೇಕ ಒಬಿಸಿ ನಿಗಮ ಸ್ಥಾಪಿಸಲಾಗುವುದು. ಸೋಲಿಗ ಸಮುದಾಯದ ಮಕ್ಕಳಿಗೆ ನರ್ಸಿಂಗ್‌ ಮತ್ತು ಆರೋಗ್ಯ ಸಹಾಯಕರ ತರಬೇತಿ ಕಾರ್ಯಕ್ರಮ ಜಾರಿಗೆ ತರಲಾಗುವುದು. ಸೋಲಿಗರ ಎಲ್ಲ ಕುಟುಂಬಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗುವುದು” ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿತ್ತು.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ನೀಡಿದ್ದ ಭರವಸೆಗಳು ಜನಪ್ರಿಯತೆಯ ಆಧಾರದ ಮೇಲೆ ರೂಪುಗೊಂಡಂಥವು. ಲೋಕಾಯುಕ್ತ, ಭತ್ಯೆ, ಪ್ರೋತ್ಸಾಹ ಧನದ ವಿಚಾರಗಳನ್ನು ಬಿಟ್ಟರೆ ಎರಡೂ ಪಕ್ಷಗಳ ಪ್ರಣಾಳಿಕೆಗಳು ರೈತರು, ಬಡಜನರು ಹಾಗೂ ಗ್ರಾಮೀಣಾಭಿವೃದ್ಧಿ ಸುತ್ತಲೇ ಹೆಣೆದುಕೊಂಡಿರುವಂಥವು.

ಉಳಿಯಲಿವೆಯೇ ಭಾಗ್ಯಗಳು?

ಹೆಚ್ಚೂ ಕಡಿಮೆ ಒಂದೇ ಬಗೆಯ ಭರವಸೆಗಳನ್ನು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ನೀಡಿರುವುದರಿಂದ ಈ ಭರವಸೆಗಳ ಈಡೇರಿಕೆ ಜಟಿಲವಾಗುವ ಸಾಧ್ಯತೆ ಕಡಿಮೆ. ಅಲ್ಲದೆ, “ನಮಗೆ ಪೂರ್ಣ ಬಹುಮತ ಸಿಗದೇ ಇರುವುದರಿಂದ ಪ್ರಣಾಳಿಕೆಯ ಭರವಸೆಗಳನ್ನು ಪೂರ್ಣವಾಗಿ ಈಡೇರಿಸುವ ಸಾಧ್ಯತೆ ಇಲ್ಲ” ಎಂದು ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಪ್ರಣಾಳಿಕೆಯ ವಿಚಾರಗಳು ಮೈತ್ರಿ ಸರಕಾರದೊಳಗೆ ಬಿಕ್ಕಟ್ಟಾಗುವ ಪ್ರಮೇಯವಿಲ್ಲ.

ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಈ ಹಿಂದೆ ಸಿದ್ದರಾಮಯ್ಯ ನೀಡಿರುವ ಭಾಗ್ಯಗಳನ್ನು ಮುಂದುವರಿಸುತ್ತಾರೆಯೇ ಎಂಬ ಪ್ರಶ್ನೆಯೂ ಸದ್ಯ ದೊಡ್ಡದಾಗಿದೆ. ಇರುವ ಭಾಗ್ಯಗಳನ್ನು ಅವೇ ಹೆಸರಿನಲ್ಲಿ ಮುಂದುವರಿಸುವ ಇಲ್ಲವೇ ಹೊಸ ಹೆಸರಿನೊಂದಿಗೆ ಹಳೆಯ ಯೋಜನೆಗಳನ್ನೇ ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಆಯ್ಕೆಗಳು ಹೊಸ ಸರಕಾರದ ಮುಂದಿವೆ.

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ನಂಥ ಜನಪ್ರಿಯ ಯೋಜನೆಗಳು ಭವಿಷ್ಯದಲ್ಲಿ ಯಾವ ರೀತಿ ಬದಲಾಗಲಿವೆ ಎಂಬುದನ್ನೂ ನಾಡಿನ ಜನತೆ ಎದುರು ನೋಡುತ್ತಿದ್ದಾರೆ. ಮೈತ್ರಿ ಸರಕಾರ ಈಗಿರುವ ಜನಪ್ರಿಯ ಯೋಜನೆಗಳನ್ನು ನಿಲ್ಲಿಸುವ ಸಾಧ್ಯತೆ ಕಡಿಮೆ. ಜನಪ್ರಿಯ ಯೋಜನೆಗಳನ್ನು ನಿಲ್ಲಿಸಿದರೂ ಇನ್ನಷ್ಟು ಜನಪರವಾದ ಯೋಜನೆಗಳನ್ನು ಜಾರಿಗೆ ತಂದರೆ ಮಾತ್ರ ಹೊಸ ಸರಕಾರ ಜನರ ವಿಶ್ವಾಸ ಗಳಿಸಲು ಸಾಧ್ಯ.

ಎರಡೂ ಪಕ್ಷಗಳು ಅಧಿಕಾರಕ್ಕಾಗಿ ಕೈ ಜೋಡಿಸಿರುವುದರಿಂದ ತಾವು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಬದಲಿಗೆ ಹೊಸದಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (Common Minimum Programme) ರೂಪಿಸುವ ಸಾಧ್ಯತೆಯೂ ಇದೆ. ಆದರೆ, ಎಷ್ಟೆಲ್ಲಾ ಜನಪ್ರಿಯ ಭರವಸೆಗಳನ್ನು ನೀಡಿದರೂ ನಾಡಿನ ಜನ ತಮಗೆ ಸ್ಪಷ್ಟ ಬಹುಮತ ನೀಡಿಲ್ಲ ಎಂಬುದನ್ನು ಮೂರೂ ಪಕ್ಷಗಳೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಇದು.