samachara
www.samachara.com
- ಸಾಂದರ್ಭಿಕ ಚಿತ್ರ
- ಸಾಂದರ್ಭಿಕ ಚಿತ್ರ
COVER STORY

15ನೇ ವಿಧಾನಸಭೆಯ ಜಾತಿ ಪ್ರಾತಿನಿಧ್ಯ; ಯಾವ್ಯಾವ ಸಮುದಾಯಕ್ಕೆ ಸಿಕ್ಕಿದ್ದೆಷ್ಟು?

ಅಧಿಕಾರ ರಾಜಕಾರಣದ ಬೆನ್ನಲ್ಲೇ ರಾಜ್ಯದ ಚುನಾವಣಾ ರಾಜಕಾರಣದ ಜಾತಿ ಪ್ರಾತಿನಿಧ್ಯವನ್ನು ನೋಡಿದರೆ ರಾಜ್ಯದ ಪ್ರಬಲ ಸಮುದಾಯಗಳ ಜನಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವುದು ಕಾಣುತ್ತದೆ.

ದಯಾನಂದ

ದಯಾನಂದ

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ, ಫಲಿತಾಂಶ, ಅಧಿಕಾರಕ್ಕಾಗಿ ಪಕ್ಷಗಳ ಹಗ್ಗಜಗ್ಗಾಟ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ, ಮೂರು ದಿನಗಳಲ್ಲೇ ರಾಜೀನಾಮೆ ಎಂಬೆಲ್ಲಾ ಪ್ರಹಸನಗಳು ಮುಗಿದು ಈಗ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆಗಳು ನಡೆದಿವೆ.

ಅಧಿಕಾರ ರಾಜಕಾರಣದ ಬೆನ್ನಲ್ಲೇ ರಾಜ್ಯದ ಚುನಾವಣಾ ರಾಜಕಾರಣದ ಜಾತಿ ಪ್ರಾತಿನಿಧ್ಯವನ್ನು ನೋಡಿದರೆ ರಾಜ್ಯದ ಪ್ರಬಲ ಸಮುದಾಯಗಳ ಜನಪ್ರತಿನಿಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿರುವುದು ಕಾಣುತ್ತದೆ.

15ನೇ ವಿಧಾನಸಭೆಗೆ ಗೆದ್ದು ಬಂದಿರುವ ಜನಪ್ರತಿನಿಧಿಗಳು ಪ್ರತಿನಿಧಿಸುತ್ತಿರುವ ಸಮುದಾಯಗಳನ್ನು ನೋಡಿದರೆ ಚುನಾವಣೆಗಳು ನಡೆಯುತ್ತಿರುವುದೇ ಜಾತಿ ಆಧಾರದ ಮೇಲೆ ಎಂಬುದನ್ನು ಒಪ್ಪದೇ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಹಿಂದಿನಿಂದಲೂ ಪ್ರಬಲವಾಗಿರುವ ಸಮುದಾಯಗಳ ಜನರೇ ಚುನಾವಣಾ ರಾಜಕೀಯದಲ್ಲೂ ಮುನ್ನೆಲೆಯಲ್ಲಿರುವುದು ಈಗ ಗೆದ್ದಿರುವ ಶಾಸಕರ ಅಂಕಿ ಸಂಖ್ಯೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ಈ ಚುನಾವಣೆಯಲ್ಲೂ ವೀರಶೈವ– ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳಾಗಿ ಆರಿಸಿ ಬಂದಿರುವುದು ಕಾಣುತ್ತದೆ. ಬಿಜೆಪಿಯಿಂದ 36, ಕಾಂಗ್ರೆಸ್‌ನಿಂದ 16 ಮತ್ತು ಜೆಡಿಎಸ್‌ನಿಂದ 4 ಮಂದಿ ಲಿಂಗಾಯತ ಜನಪ್ರತಿನಿಧಿಗಳು ವಿಧಾನಸಭೆಗೆ ಆರಿಸಿಬಂದಿದ್ದಾರೆ. ಈ ಬಾರಿ ವೀರಶೈವ- ಲಿಂಗಾಯತ ಶಾಸಕರ ಒಟ್ಟು ಸಂಖ್ಯೆ 58.

ಲಿಂಗಾಯತರ ಬಳಿಕದ ಸ್ಥಾನ ಒಕ್ಕಲಿಗರದ್ದು. ಜೆಡಿಎಸ್‌ನಿಂದ 23, ಕಾಂಗ್ರೆಸ್‌ನಿಂದ 11 ಮತ್ತು ಬಿಜೆಪಿಯಿಂದ 8 ಮಂದಿ ಶಾಸಕರು ಒಕ್ಕಲಿಗ ಸಮುದಾಯದಿಂದ ಆಯ್ಕೆಯಾಗಿದ್ದಾರೆ. ಒಟ್ಟು 42 ಒಕ್ಕಲಿಗ ಶಾಸಕರು ಈ ಬಾರಿಯ ವಿಧಾನಸಭೆ ಪ್ರವೇಶಿಸಿದ್ದಾರೆ.

ಮೀಸಲು ಕ್ಷೇತ್ರಕ್ಕಷ್ಟೇ ಎಸ್‌ಸಿ ಪ್ರಾತಿನಿಧ್ಯ:

ವೀರಶೈವ- ಲಿಂಗಾಯತ ಮತ್ತು ಒಕ್ಕಲಿಗ ಶಾಸಕರ ನಂತರದ ಸ್ಥಾನದಲ್ಲಿರುವುದು ಪರಿಶಿಷ್ಟ ಜಾತಿಯ ಜನಪ್ರತಿನಿಧಿಗಳು. ಪರಿಶಿಷ್ಟ ಜಾತಿಯ ಒಟ್ಟು 36 ಶಾಸಕರು ಈ ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಿಜೆಪಿಯಿಂದ 16, ಕಾಂಗ್ರೆಸ್‌ನಿಂದ 12, ಜೆಡಿಎಸ್‌ನಿಂದ 6, ಬಹುಜನ ಸಮಾಜ ಪಕ್ಷದಿಂದ 1 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಪರಿಶಿಷ್ಟ ಜಾತಿಯನ್ನು ಈ ಬಾರಿ ಪ್ರತಿನಿಧಿಸುತ್ತಿದ್ದಾರೆ. ರಾಜ್ಯದಲ್ಲಿರುವ 36 ಎಸ್ಸಿ ಮೀಸಲು ಕ್ಷೇತ್ರಗಳನ್ನು ಬಿಟ್ಟರೆ ಬೇರೆ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಗೆದ್ದಿಲ್ಲ.

ಇನ್ನು ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳಾಗಿ ಆರಿಸಿಬಂದಿರುವವರ ಸಂಖ್ಯೆ 19. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 9 ಮತ್ತು ಜೆಡಿಎಸ್‌ನಿಂದ ಒಬ್ಬ ಪರಿಶಿಷ್ಟ ಪಂಗಡದ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಾಗಿ 36 ಮತ್ತು ಪರಿಶಿಷ್ಟ ಪಂಗಡಕ್ಕಾಗಿ 15 ಮೀಸಲು ಕ್ಷೇತ್ರಗಳಿವೆ. ಇನ್ನು ಪರಿಶಿಷ್ಟ ಪಂಗಡದ 15 ಮೀಸಲು ಕ್ಷೇತ್ರಗಳನ್ನು ಬಿಟ್ಟರೆ ನಾಲ್ಕು ಬೇರೆ ಕ್ಷೇತ್ರಗಳಲ್ಲಷ್ಟೇ ಪರಿಶಿಷ್ಟ ಪಂಗಡದ ಶಾಸಕರು ಗೆದ್ದಿದ್ದಾರೆ.

ಈ ಬಾರಿಯ ವಿಧಾನಸಭೆಗೆ ಆಯ್ಕೆಯಾಗಿರುವ ಒಟ್ಟು ಬ್ರಾಹ್ಮಣರ ಸಂಖ್ಯೆ 14. ಬಿಜೆಪಿಯಿಂದ 10, ಕಾಂಗ್ರೆಸ್‌ನಿಂದ 4 ಮಂದಿ ಬ್ರಾಹ್ಮಣ ಶಾಸಕರು ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಇನ್ನು ಕುರುಬ ಸಮುದಾಯದ 13 ಮಂದಿ ಶಾಸಕರು ಈ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಜಾತಿ ಹಾಗೂ ಪಕ್ಷವಾರು ಪ್ರಾತಿನಿಧ್ಯ
ಜಾತಿ ಹಾಗೂ ಪಕ್ಷವಾರು ಪ್ರಾತಿನಿಧ್ಯ

ಇತರೆ ಹಿಂದುಳಿದ ಜಾತಿಗಳಿಗೆ ಸೇರಿದ 21 ಜನ ಈ ಬಾರಿ ಶಾಸಕರಾಗಿದ್ದಾರೆ. ಬಿಜೆಪಿಯಿಂದ 16, ಕಾಂಗ್ರೆಸ್‌ನಿಂದ 5 ಮಂದಿ ಇತರೆ ಹಿಂದುಳಿದ ಜಾತಿಗಳಿಗೆ ಸೇರಿದ ಜನಪ್ರತಿನಿಧಿಗಳು ವಿಧಾನಸಭೆ ಪ್ರವೇಶಿಸಿದ್ದಾರೆ. ರೆಡ್ಡಿ ಸಮುದಾಯಕ್ಕೆ ಸೇರಿದ ಒಟ್ಟು 9 ಮಂದಿ ಶಾಸಕರು ಈ ಬಾರಿ ವಿಧಾನಸಭೆಯಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ 4 ಮಂದಿ ಮತ್ತು ಜೆಡಿಎಸ್‌ನಿಂದ ಒಬ್ಬ ರೆಡ್ಡಿ ಜನಪ್ರತಿನಿಧಿ ಶಾಸಕರಾಗಿದ್ದಾರೆ.

ಮುಸ್ಲಿಂ ಸಮುದಾಯದ 7 ಮತ್ತು ಕ್ರಿಶ್ಚಿಯನ್ ಸಮುದಾಯ ಒಬ್ಬ ಜನಪ್ರತಿನಿಧಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದ ಶಾಸಕರು ಆರಿಸಿ ಬಂದಿರುವುದು ಕಾಂಗ್ರೆಸ್‌ ಪಕ್ಷದಿಂದ. ಇನ್ನು ಇಬ್ಬರು ಕೊಡವ ಜನಪ್ರತಿನಿಧಿಗಳು ಈ ಬಾರಿ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ.

ಮಹಿಳಾ ಜನಪ್ರತಿನಿಧಿಗಳು:

ಈ ಬಾರಿಯ ಚುನಾವಣೆಯಲ್ಲಿ ಕಣದಲ್ಲಿದ್ದ 221 ಮಂದಿ ಮಹಿಳಾ ಅಭ್ಯರ್ಥಿಗಳ ಪೈಕಿ 7 ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ 4 ಮತ್ತು ಬಿಜೆಪಿಯಿಂದ 3 ಮಂದಿ ಮಹಿಳೆಯರು ವಿಧಾನಸಭೆ ಪ್ರವೇಶಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ ಕಲಬುರ್ಗಿ ಉತ್ತರ ಕ್ಷೇತ್ರದಿಂದ ಖನೀಸಾ ಫಾತಿಮಾ, ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್‌, ಖಾನಾಪುರದಿಂದ ಅಂಜಲಿ ನಿಂಬಾಳ್ಕರ್‌, ಕೆಜಿಎಫ್‌ನಿಂದ ಕೆ.ಎಚ್‌. ಮುನಿಯಪ್ಪ ಪುತ್ರಿ ರೂಪಕಲಾ ಆಯ್ಕೆಯಾಗಿದ್ದಾರೆ. ಇನ್ನು ಬಿಜೆಪಿಯಿಂದ ನಿಪ್ಪಾಣಿ ಕ್ಷೇತ್ರದಿಂದ ಶಶಿಕಲಾ ಜೊಲ್ಲೆ, ಕಾರವಾರದಿಂದ ರೂಪಾಲಿ ನಾಯ್ಕ, ಹಿರಿಯೂರು ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್‌ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿರುವ ಪ್ರಬಲ ಸಮುದಾಯಗಳನ್ನು ಬಿಟ್ಟು ಸಾವಿರಾರು ಜಾತಿಗಳಿವೆ. ಅದೆಷ್ಟೋ ಸಮುದಾಯಗಳು ಅಧಿಕಾರ ರಾಜಕಾರಣದ ಸಮೀಪಕ್ಕೂ ಬರಲಾರದ ಸ್ಥಿತಿಯಲ್ಲಿವೆ. ಉತ್ತರ ಕರ್ನಾಟಕದಲ್ಲಿ ವೀರಶೈವ- ಲಿಂಗಾಯತ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಜನಪ್ರತಿನಿಧಿಗಳನ್ನು ಬಿಟ್ಟರೆ ಮೀಸಲು ಕ್ಷೇತ್ರದ ಎಸ್‌ಸಿ ಶಾಸಕರ ಸಂಖ್ಯೆಯಷ್ಟೇ ಜಾತಿ ಪ್ರಾತಿನಿಧ್ಯದಲ್ಲಿ ಎದ್ದು ಕಾಣುತ್ತಿದೆ. ಎಲ್ಲಿಯವರೆಗೂ ಜಾತಿ ಲೆಕ್ಕಾಚಾರದ ಮೇಲೆಯೇ ಚುನಾವಣೆಗಳು ನಡೆಯುತ್ತಿರುತ್ತವೋ ಅಲ್ಲಿಯವರೆಗೂ ಈ ಅಂತರವನ್ನು ತಪ್ಪಿಸಲು ಸಾಧ್ಯವಿಲ್ಲ.