samachara
www.samachara.com
‘ಮೇಕಿಂಗ್ ಆಫ್ ದುರಂತ ನಾಯಕ’: ಯಡಿಯೂರಪ್ಪ ಶತ್ರುಗಳು ಹೊರಗಲ್ಲ; ಒಳಗೇ ಇದ್ದರು!
COVER STORY

‘ಮೇಕಿಂಗ್ ಆಫ್ ದುರಂತ ನಾಯಕ’: ಯಡಿಯೂರಪ್ಪ ಶತ್ರುಗಳು ಹೊರಗಲ್ಲ; ಒಳಗೇ ಇದ್ದರು!

ಜಾಹೀರಾತುಗಳಲ್ಲಿ ಮೋದಿ- ಯಡಿಯೂರಪ್ಪ ಜೋಡಿ ಎಂದು ಬಿಂಬಿಸಲಾಯಿತಾದರೂ, ಸಂತೆಮರಳ್ಳಿಯ ಸಭೆ ಬಿಟ್ಟರೆ ಮತ್ಯಾವ ಮೋದಿ ಪ್ರಚಾರ ಸಭೆಗಳಲ್ಲಿ ಯಡಿಯೂರಪ್ಪ ಕಾಣಸಿಗಲಿಲ್ಲ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

2016ರ ಜುಲೈ ತಿಂಗಳು. ಅವು ಸಿಎಂ ಸಿದ್ದರಾಮಯ್ಯ ಸರಕಾರ ರಾಜ್ಯದಲ್ಲಿ ಕಾನೂನು ಅವ್ಯವಸ್ಥೆ ಹಿನ್ನೆಲೆಯಲ್ಲಿ ಆರೋಪಕ್ಕೆ ಗುರಿಯಾಗಿದ್ದ ದಿನಗಳು. ಕೆ. ಜೆ. ಜಾರ್ಜ್‌ ಗೃಹ ಸಚಿವರಾಗಿದ್ದರು. ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು.

ಬೌದ್ಧ ಕೇಂದ್ರದ ಎದುರಿನ ವಿಶಾಲ ಜಾಗದಲ್ಲಿ ವೇದಿಕೆಯೊಂದನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಜಗದೀಶ್ ಶೆಟ್ಟರ್‌, ಆರ್‌. ಅಶೋಕ್ ಸೇರಿದಂತೆ ಹಲವು ನಾಯಕರು ನಿಂತು ಐದಡಿಗಳ ಕೆಳಗೆ ನಿಂತಿದ್ದ ಜನರನ್ನು ಗಮನಿಸುತ್ತಿದ್ದರು. 700-800 ಮಂದಿಯಷ್ಟಿದ್ದ ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಇದ್ದಕ್ಕಿದ್ದ ಹಾಗೆ ಪ್ರತಿಭಟನಾ ಸಭೆ ಸ್ಥಬ್ಧವಾಗಿತ್ತು. ವೇದಿಕೆ ಮೇಲಿದ್ದ ಹಲವು ನಾಯಕರ ಮುಖ ಕಪ್ಪಿಟ್ಟಿತು. ಅಂಚಿನಲ್ಲಿ ಶೋಭ ಕರಂದ್ಲಾಜೆ ಕಾರು ಇಳಿದು ಏಕಾಂಗಿಯಾಗಿ ನಡೆದು ಬಂದರು.

ಮೇಲಿದ್ದ ವೇದಿಕೆಯನ್ನು ಅನಾಯಾಸವಾಗಿ ಏರಿದ ಶೋಭ ಜನರಿಗೆ ಅಭಿಮುಖವಾಗಿ ನಿಂತು ಬೆವರು ಒರೆಸಿಕೊಂಡರು. ಮುಖದಲ್ಲಿ ನಗು ಇತ್ತು, ಅಸಮಾಧಾನ ಇಣಕುತ್ತಿತ್ತು. ಹಠ- ಛಲ ನಡವಳಿಕೆಯಲ್ಲಿತ್ತು. ಶೋಭಾಗಮನ ವೇದಿಕೆ ಮೇಲಿದ್ದ ಯಾರ ಮುಖದಲ್ಲಿ ನಗುವಿನ ಗೆರೆಯನ್ನೂ ಕೂಡ ಮೂಡಿಸಲಿಲ್ಲ. ಇದ್ದಿದರಲ್ಲಿ ವಿ. ಸೋಮಣ್ಣ ಒಬ್ಬರೇ ಪರಿಚಯದ ನಗೆ ನಕ್ಕರು; ಸಭೆ ಆರಂಭವಾಯಿತು.

ಅದು ಯಡಿಯೂರಪ್ಪ ಮತ್ತೆ ಬಿಜೆಪಿಗೆ ವಾಪಾಸಾಗಿದ್ದ ಸಮಯ. ರಾಜ್ಯಾಧ್ಯಕ್ಷ ಹುದ್ದೆ ಏನೋ ಸಿಕ್ಕಿತ್ತು, ಆದರೆ ಕೋರಂ ಕಾಣಿಸುತ್ತಿರಲಿಲ್ಲ. ಶೋಭ ಕರಂದ್ಲಾಜೆ ಕೂಡ ಯಡಿಯೂರಪ್ಪರ ಜತೆಯಲ್ಲಿ ಪಕ್ಷಕ್ಕೆ ಬಂದಿದ್ದರಾದರೂ ಹಳೆಯ ಅಧಿಕಾರದ ವರ್ಚಸ್ಸು ಇರಲಿಲ್ಲ. ಬಿಜೆಪಿ ನಾಯಕರ ನಡುವಿನ ಭಿನ್ನಮತ ತುಂಬಿ ತುಳುಕುತ್ತಿದ್ದ ದಿನಗಳವು. ಅದರ ನಡುವೆಯೇ ಸರಕಾರದ ವಿರುದ್ಧ ಪ್ರತಿಭಟನೆಗೆ ರಾಜ್ಯ ಬಿಜೆಪಿ ಕರೆ ನೀಡಿತ್ತು. ಅದರ ನೇತೃತ್ವವನ್ನು ದಕ್ಷಿಣ ಬೆಂಗಳೂರಿನ ಬಿಜೆಪಿ ನಾಯಕ, ಮಾಜಿ ಶಾಸಕ ಆರ್‌. ಅಶೋಕ್ ವಹಿಸಿಕೊಂಡಿದ್ದರು.

ಸಭೆ ಆರ್. ಅಶೋಕ್ ಅವರ ಮಾತಿನ ಮೂಲಕವೇ ಆರಂಭವಾಯಿತು. ಒಮ್ಮೆಯೂ ಯಡಿಯೂರಪ್ಪರ ಹೆಸರು ಬರಲಿಲ್ಲ. ನಂತರ ಪ್ರಹ್ಲಾದ್ ಜೋಷಿ ಮಾತನಾಡಿದರು. ಅದು ಅಷ್ಟೇನೂ ಪರಿಣಾಮಕಾರಿ ಅನ್ನಿಸಲಿಲ್ಲ. ಮೂರನೇ ಸರದಿ ಪೀಠಿಕೆಯೂ ಇಲ್ಲದೆ ಶೋಭ ಕರಂದ್ಲಾಜೆ ಅವರಿಗೆ ಲಭಿಸಿತು.

ಮೈಕ್ ತೆಗೆದುಕೊಂಡ ಶೋಭ ಮಾತು ಆರಂಭಿಸಿದರು. ಅದರ ರಭಸಕ್ಕೆ ಇಡೀ ಸಭೆ ದಂಗಾಗಿ ನೋಡತೊಡಗಿತು. ಅಷ್ಟೊಂದು ಉಗ್ರವಾಗಿ ರಾಜ್ಯ ಸರಕಾರವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು. ಕೊನೆಯಲ್ಲಿ, ‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ, ಯಡಿಯೂರಪ್ಪ ಸಿಎಂ ಆಗೇ ಆಗುತ್ತಾರೆ’ ಎಂದು ಘೋಷಿಸಿ ಮಾತು ಮುಗಿಸಿದರು. ಸಭೆ ಚಪ್ಪಾಳೆ ಸದ್ದಿನಿಂದ ತುಂಬಿ ಹೋಗಿತ್ತು.

ಶೋಭ ಕರಂದ್ಲಾಜೆ ಹಾಗೂ ಯಡಿಯೂರಪ್ಪ. ಈ ಚಿತ್ರಕ್ಕೆ ಅಡಿ ಬರಹದ ಅಗತ್ಯವಿಲ್ಲ. 
ಶೋಭ ಕರಂದ್ಲಾಜೆ ಹಾಗೂ ಯಡಿಯೂರಪ್ಪ. ಈ ಚಿತ್ರಕ್ಕೆ ಅಡಿ ಬರಹದ ಅಗತ್ಯವಿಲ್ಲ. 

ಶೋಭ ಕರಂದ್ಲಾಜೆ ಹಠದಿಂದ ಮಂಡಿಸಿದ ಕನಸೊಂದು ಇವತ್ತು ನಿಜವಾಗಿದೆ. ಅಷ್ಟೆ ವೇಗವಾಗಿ ಕಳೆದುಹೋಗಿದೆ. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 56 ಗಂಟೆಯೊಳಗೆ ರಾಜೀನಾಮೆಯನ್ನೂ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷ ಎಂಬ ಒಂದು ಕಾಲದಲ್ಲಿ ನಗರ ಪ್ರದೇಶದ ಮೇಲ್ಜಾತಿ ಜನರ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿ, ಅದೇ ಪಕ್ಷದಿಂದ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ಏಕೈಕ ನಾಯಕ ಬಿಎಸ್‌ವೈ. ಆದರೆ ಅವರು ಕೊನೆಯಲ್ಲೊಮ್ಮೆ ಮುಖ್ಯಮಂತ್ರಿಯಾಗುವುದು ಶೋಭಾ ಕರಂದ್ಲಾಜೆ ಒಬ್ಬರನ್ನು ಬಿಟ್ಟರೆ, ಪಕ್ಷದ ಉಳಿದ ಯಾವ ನಾಯಕರಿಗೆ ಇಷ್ಟಿವಿದ್ದಂತೆ ಕಾಣಿಸುತ್ತಿಲ್ಲ. ಪರಿಣಾಮ ‘ತೀನ್ ದಿನ್ ಕ ಸುಲ್ತಾನ್’ ಆಗಿ ಹೊರಹೊಮ್ಮಿದ್ದಾರೆ.

ಈ ಬಾರಿಯೂ ಬಿಜೆಪಿ ನಡೆಸಿದ ರಾಜಕೀಯ ಪ್ರಯೋಗ ಯಡಿಯೂರಪ್ಪರನ್ನು ಬಲಿ ಪಡೆಯುವುದಕ್ಕೆ ನಿರ್ಮಿಸಿದ ಖೆಡ್ಡಾದ ಹಾಗೆ ಆರಂಭದಿಂದಲೂ ಕಾಣಿಸುತ್ತಿತ್ತು. ಅದಕ್ಕಾಗಿಯೇ ಗುರುವಾರ ದಾಖಲೆ ವೇಗದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳ್ಳಿರಿಸಿ, ಮಾಜಿ ಮಾಡಿಸಲಾಯಿತು.

ಬಿಜೆಪಿ ಬೆನ್ನಿಗಿದ್ದು ಚುನಾವಣೆಗೆ ಹತ್ತು ಸಾವಿರ ಕಾರ್ಯಕರ್ತರನ್ನು ಸರಬರಾಜು ಮಾಡಿದ ಸಂಘಪರಿವಾರದಲ್ಲಿ ಚಿಕ್ಕ ಮರುಕವೂ ಕಾಣಿಸುತ್ತಿಲ್ಲ. “ಮುಖ್ಯಮಂತ್ರಿ ಅಗುವ ಯಡಿಯೂರಪ್ಪ ಕನಸು ನೆರವೇರಿತಲ್ಲ. ಬಿಡಿ, ಕಾಂಗ್ರೆಸ್- ಜೆಡಿಎಸ್‌ ಆಡಳಿತವನ್ನು ಜನ ನೋಡಲಿ. ಮುಂದಿನ ಬಾರಿ ಬಿಜೆಪಿ ಪ್ರಚಂಡ ಬಹುಮತ ಪಡೆದು ಗದ್ದುಗೆ ಏರುವುದನ್ನು ನಿರೀಕ್ಷಿಸಿ,’’ ಎಂದರು ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರೊಬ್ಬರು.

ಕೆಲವೊಮ್ಮೆ ಕಣ್ಣಿಗೆ ಕಂಡಿದ್ದು ಸತ್ಯವಾಗಿವುದಿಲ್ಲ. ನಿಜಕ್ಕೂ ಮನಸ್ಸಿನಲ್ಲೇನಿದೆ ಎಂಬುದನ್ನು ತೋರಿಸಲು ಫೊಟೋಗಳಿಗೂ ಸಾಧ್ಯವಿಲ್ಲ. 
ಕೆಲವೊಮ್ಮೆ ಕಣ್ಣಿಗೆ ಕಂಡಿದ್ದು ಸತ್ಯವಾಗಿವುದಿಲ್ಲ. ನಿಜಕ್ಕೂ ಮನಸ್ಸಿನಲ್ಲೇನಿದೆ ಎಂಬುದನ್ನು ತೋರಿಸಲು ಫೊಟೋಗಳಿಗೂ ಸಾಧ್ಯವಿಲ್ಲ. 

ಯಡಿಯೂರಪ್ಪ ‘ದುರಂತ ನಾಯಕ’ನ ಪಟ್ಟಕ್ಕೆ ಏರುವುದು ಎಲ್ಲರಿಗಿಂತಲೂ ಮೊದಲು ಇಬ್ಬರಿಗೆ ಅಗತ್ಯವಾಗಿತ್ತು. ಲೋಕಸಭೆಯನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕ ಚುನಾವಣೆಯನ್ನೂ ನಡೆಸಿದ ಮೋದಿ- ಅಮಿತ್ ಶಾ ಜೋಡಿ ಕೊನೆಯ ಹಂತದಲ್ಲಿ ಶಸ್ತ್ರತ್ಯಾಗ ಮಾಡುವ ಮೂಲಕ ಗಡಿಯಲ್ಲಿ ನಿಂತು ಹೋರಾಟಕ್ಕೆ ಅಣಿಯಾಗಿದ್ದ ಯಡಿಯೂರಪ್ಪರ ಅಧಿಕಾರ ಬಲಿದಾನ ಪಡೆದುಕೊಂಡಿದ್ದಾರೆ.

ಹಾಗೆ ನೋಡಿದರೆ, ಚುನಾವಣೆಯ ಮೊದಲ ದಿನದಿಂದಲೂ ಯಡಿಯೂರಪ್ಪರನ್ನು ಕಡೆಗಣಿಸುತ್ತಲೇ ಬಂದವರು ಪ್ರಧಾನಿ ಮೋದಿ. ಜಾಹೀರಾತುಗಳಲ್ಲಿ ಮೋದಿ- ಯಡಿಯೂರಪ್ಪ ಜೋಡಿ ಎಂದು ಬಿಂಬಿಸಲಾಯಿತಾದರೂ, ಸಂತೆಮರಳ್ಳಿಯ ಸಭೆ ಬಿಟ್ಟರೆ ಮತ್ಯಾವ ಮೋದಿ ಪ್ರಚಾರ ಸಭೆಗಳಲ್ಲಿ ಯಡಿಯೂರಪ್ಪ ಕಾಣಸಿಗಲಿಲ್ಲ.

ಅಮಿತ್ ಶಾ ತಮ್ಮದೇ ಹಾದಿಯಲ್ಲಿ ‘ಶೃಂಗೇರಿ ಯಾತ್ರೆ’ ಮಾಡಿ ಮುಗಿಸಿದರು. ಕೊನೆಯಲ್ಲಿ ಜನ ನೀಡಿದ ತೀರ್ಪನ್ನಾದರೂ ಸಾಂವಿಧಾನಿಕವಾಗಿ ಅರ್ಥೈಸಿಕೊಂಡು, ಯಡಿಯೂರಪ್ಪರ ಹೋರಾಟದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಂಡರಾ ಎಂದು ನೋಡಿದರೆ, ಅಲ್ಲೂ ಷಡ್ಯಂತ್ರವೊಂದರ ಕಮಟು ವಾಸನೆ ಬಡಿಯುತ್ತದೆ.

ಒಟ್ಟಾರೆ, ಸಂಘಪರಿವಾರ ಮತ್ತು ಬಿಜೆಪಿ ಹೈಕಮಾಂಡ್ ಇಬ್ಬರೂ ಪಾತ್ರಧಾರಿಗಳಾದ ಮೂರು ದಿನಗಳ ಕರ್‌-ನಾಟಕದಲ್ಲಿ ಖೆಡ್ಡಾ ತೋಡಿ, ಸ್ಥಳೀಯ ಮಟ್ಟದಲ್ಲಿ ಬಿಜೆಪಿಗೊಬ್ಬ ‘ದುರಂತ ನಾಯಕ’ನೊಬ್ಬನನ್ನು ಸೃಷ್ಟಿಸಿದ್ದಾರೆ. 75 ವರ್ಷದ ಯಡಿಯೂರಪ್ಪರಿಗೆ ಇಂತಹದೊಂದು ಅಂತ್ಯದ ಅಗತ್ಯ ಖಂಡಿತಾ ಇರಲಿಲ್ಲ.

ತಮ್ಮ 22ನೇ ವಯಸ್ಸಿಗೆ ಸಂಘದ ಶಾಖೆ ಸೇರಿ, ಹಿಂದುತ್ವದ ಅಮಲಿನ ನಡುವೆಯೂ ರೈತ ಪರ ಹೋರಾಟಗಳನ್ನು ಮಾಡಿಕೊಂಡು, ಬಿಜೆಪಿಯನ್ನು ಕೇವಲ ನಗರವಾಸಿ ಮೇಲ್ವರ್ಗದ ಜನರ ಪಕ್ಷ ಎಂಬ ಕಳಂಕದಿಂದ ತೊಳೆದಿದ್ದರು. ಅವರ ಇಷ್ಟು ವರ್ಷಗಳ ಶ್ರಮವನ್ನು ಪಕ್ಕಕ್ಕಿಟ್ಟು ಕೇವಲ 28 ಲೋಕಸಭೆ ಸ್ಥಾನಗಳಿಗಾಗಿ ದುರಂತ ನಾಯಕನನ್ನಾಗಿ ಇತಿಹಾಸ ನೆನಪಿಟ್ಟುಕೊಳ್ಳುವಂತೆ ಮಾಡಿದ್ದು ‘ಕುಟುಂಬ ವ್ಯವಸ್ಥೆ’ಯ ಪಾಠವನ್ನು ಜಗತ್ತಿಗೆ ಹೇಳಲು ಹೊರಟ ರಾಜಕೀಯ ಪಕ್ಷ ಹಾಗೂ ಅದರ ಹಿಂದೆ ನಿಂತ ಸೈದ್ಧಾಂತಿಕ ಸಂಘಟನೆ ಆರ್‌ಎಸ್‌ಎಸ್‌, ಇದಕ್ಕೆ ಹೇಳಿದ್ದು ಯಡಿಯೂರಪ್ಪರ ಶತ್ರುಗಳು ಹೊರಗಲ್ಲ, ಒಳಗೇ ಇದ್ದರು, ಇದ್ದಾರೆ.