samachara
www.samachara.com
ಅಂದು ವಾಜಪೇಯಿ, ಇಂದು ಯಡಿಯೂರಪ್ಪ: ಮರುಕಳಿಸಿದ 1996ರ ಮೇ ತಿಂಗಳ ‘ಆ ದಿನ’!
COVER STORY

ಅಂದು ವಾಜಪೇಯಿ, ಇಂದು ಯಡಿಯೂರಪ್ಪ: ಮರುಕಳಿಸಿದ 1996ರ ಮೇ ತಿಂಗಳ ‘ಆ ದಿನ’!

22 ವರ್ಷಗಳ ಹಿಂದಿನ ರಾಷ್ಟ್ರಮಟ್ಟದ ರಾಜಕೀಯ ಘಟನೆಗಳು ಶನಿವಾರ ರಾಜ್ಯದಲ್ಲಿ ಮರುಕಳಿಸಿವೆ. ಇಂದು ಯಡಿಯೂರಪ್ಪ ಇದ್ದ ಸ್ಥಿತಿಯಲ್ಲಿ ಅಂದು ವಾಜಪೇಯಿ ಇದ್ದರು. ಅಂದು ದೇವೇಗೌಡರಿಗೆ ಒಲಿದಿದ್ದ ಅದೃಷ್ಟ ಇಂದು ಅವರ ಮಗ ಕುಮಾರಸ್ವಾಮಿಗೆ ಒಲಿದಿದೆ!

ದಯಾನಂದ

ದಯಾನಂದ

ಅತಂತ್ರ ರಾಜಕೀಯ ಪರಿಸ್ಥಿತಿ ಅಧಿಕಾರವನ್ನು ಕೊಡಲೂಬಹುದು, ಕಸಿದುಕೊಳ್ಳಲೂಬಹುದು ಎಂಬುದು ಇಂದು ಮತ್ತೆ ಋಜುವಾತಾಗಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಶನಿವಾರ ಸಂಜೆಯ ಹೊತ್ತಿಗೆ ಅಧಿಕಾರದಿಂದ ಕೆಳಗಿಳಿದಿದ್ದಾರೆ.

22 ವರ್ಷದ ಹಿಂದಿನ ಮೇ ತಿಂಗಳಲ್ಲಿ ರಾಷ್ಟ್ರಮಟ್ಟದಲ್ಲೂ ಇಂಥದ್ದೇ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 161 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದ್ದ ಬಿಜೆಪಿ ಪಕ್ಷದ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಅಂದು ಸ್ಪಷ್ಟ ಬಹುಮತಕ್ಕೆ ಬೇಕಾಗಿದ್ದು 273 ಸ್ಥಾನಗಳು.

16 ಮೇ 1996ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವಾಜಪೇಯಿ ಮೇ 27ರಂದು ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಬೇಕಿತ್ತು. ಅಂದು ತಮಗೆ ವಿಶ್ವಾಸ ಮತ ಸಾಬೀತು ಪಡಿಸುವುದು ಕಷ್ಟವಿರುವುದನ್ನು ಅರಿತಿದ್ದ ವಾಜಪೇಯಿ ವಿಶ್ವಾಸ ಮತ ಯಾಚನೆಯ ಬದಲಿಗೆ ಅಂದಿನ ರಾಷ್ಟ್ರ ರಾಜಕೀಯ ಸ್ಥಿತಿ ಹಾಗೂ ಬಿಜೆಪಿ ಸ್ಥಿತಿಯ ಬಗ್ಗೆ ದೀರ್ಘವಾಗಿ ಮಾತನಾಡಿದ್ದರು.

“ಅಲ್ಪಮತ, ಬಹುಮತಕ್ಕಿಂತ ದೇಶದ ಹಿತವೇ ಮುಖ್ಯ. ಬಿಜೆಪಿಯ ಸಂಖ್ಯಾಬಲ ಹೆಚ್ಚಾಗಿದೆ. ಪಂಡಿತ್‌ ನೆಹರೂ ಅವರ ಹೆಸರು ಹೇಳಿಕೊಳ್ಳುವ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಹಿತಕ್ಕಿಂತ ಅಧಿಕಾರ ರಾಜಕೀಯವೇ ಮುಖ್ಯವಾಗಿದೆ. ದೇಶದಲ್ಲಿ ವಿದ್ಯುತ್‌ ಕೊರತೆ ಇದೆ. ವಿದ್ಯುತ್‌ ಕೊರತೆಯನ್ನು ನೀಗಿಸಿ, ಅಂಧಕಾರ ಅಳಿಸಿ ಬೆಳಕು ನೀಡುವ ಉದ್ದೇಶ ನನಗಿತ್ತು” ಎಂದು ವಾಜಪೇಯಿ ಸದನದಲ್ಲಿ ಹೇಳಿದ್ದರು.

“ಪಂಡಿತ್‌ ನೆಹರೂ ಅವರಿಗಿದ್ದ ದೂರ ದೃಷ್ಟಿ ಈಗಿನ ಕಾಂಗ್ರೆಸ್‌ನವರಿಗೆ ಇಲ್ಲ. ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಕುಸಿಯುವಂತೆ ಮಾಡಿರುವುದು ಪಿ.ವಿ. ನರಸಿಂಹರಾವ್ ಸರಕಾರದ ಸಾಧನೆ. ಹೊರ ಜಗತ್ತು ನಮ್ಮನ್ನು ಬಿಜೆಪಿ – ಕಾಂಗ್ರೆಸ್‌ ಎಂದು ನೋಡುವುದಿಲ್ಲ. ನಮ್ಮನ್ನೆಲ್ಲಾ ಭಾರತ ಎಂದು ಜಗತ್ತು ನೋಡುತ್ತದೆ” ಎಂದಿದ್ದರು ವಾಜಪೇಯಿ.

“ಚುನಾವಣೆಯಲ್ಲಿ ಕಪ್ಪು ಹಣ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕಿನ್ನುವ ಉದ್ದೇಶ ನನಗಿತ್ತು. ಸಂಖ್ಯಾ ಬಲವನ್ನು ಹೆಚ್ಚಿಸಿಕೊಳ್ಳುವ ಹಲವು ದಾರಿಗಳು ಈಗ ಇವೆ. ಕಾಂಗ್ರೆಸ್ ಆ ದಾರಿಯ ಕಡೆಗೆ ಹೊರಟಿದೆ. ನಮಗೂ ಆ ದಾರಿ ಕಾಣುತ್ತಿದೆ. ಆದರೆ, ಆ ದಾರಿಯಲ್ಲಿ ಹೋಗುವ ಪಾಪವನ್ನು ನಾವು ಮಾಡುವುದಿಲ್ಲ” ಎಂದಿದ್ದ ವಾಜಪೇಯಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಅಂದು ವಾಜಪೇಯಿ, ಇಂದು ಯಡಿಯೂರಪ್ಪ: ಮರುಕಳಿಸಿದ 1996ರ ಮೇ ತಿಂಗಳ ‘ಆ ದಿನ’!

ಆಗ ಎಚ್‌ಡಿಡಿ, ಈಗ ಎಚ್‌ಡಿಕೆ

22 ವರ್ಷಗಳ ಬಳಿಕ ಅಂಥದ್ದೇ ಪರಿಸ್ಥಿತಿಗೆ ರಾಜ್ಯ ವಿಧಾನಸಭೆಯ ಶನಿವಾರದ ಕಲಾಪ ಸಾಕ್ಷಿಯಾಯಿತು. ಅಂದು ವಾಜಪೇಯಿ ರಾಜೀನಾಮೆಯಿಂದ ತೆರವಾಗಿದ್ದ ಪ್ರಧಾನಿ ಹುದ್ದೆ ತೃತೀಯ ರಂಗದ ಎಚ್‌. ಡಿ. ದೇವೇಗೌಡರಿಗೆ ಸಿಕ್ಕಿದ್ದರೆ, ಇಂದು ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಹುದ್ದೆ ದೇವೇಗೌಡರ ಮಗ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಒಲಿಯುತ್ತಿದೆ.

ಅಂದು ವಾಜಪೇಯಿ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದರೆ ಇಂದು ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. “ಸ್ವಾತಂತ್ರ ಬಂದು ಇಷ್ಟು ವರ್ಷವಾಗಿದ್ದರೂ ರೈತರ, ದೀನ ದಲಿತರ ಸ್ಥಿತಿ ಸುಧಾರಿಸಿಲ್ಲ. ಕೇಂದ್ರದಲ್ಲಿ ಮೋದಿ ಸರಕಾರ, ಇಲ್ಲಿ ಯಡಿಯೂರಪ್ಪ ಸರಕಾರ ಇದ್ದಿದ್ದರೆ ಕೇಂದ್ರದಿಂದ ಹೆಚ್ಚುವರಿ ಹಣ ತಂದು ರಾಜ್ಯವನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂಬ ಕನಸು ಕಂಡಿದ್ದೆ” ಎಂದಿದ್ದಾರೆ ಯಡಿಯೂರಪ್ಪ.

ತಮ್ಮ ರಾಜೀನಾಮೆ ವಿಚಾರವನ್ನು ಮೊದಲೇ ನಿರ್ಧರಿಸಿಕೊಂಡಿದ್ದ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸುವ ಪ್ರಸ್ತಾವವನ್ನೇ ಮಂಡಿಸದೆ ತಾವು ಅಂದುಕೊಂಡಿದ್ದನ್ನು ಮಾತನಾಡಿ ಸದನದಲ್ಲೇ ರಾಜೀನಾಮೆ ಘೋ‍ಷಿಸಿ, ವಿಧಾನಸೌಧದಿಂದ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ತಮ್ಮ ಮಾತಿನುದ್ದಕ್ಕೂ ರೈತರ ಸಂಕಷ್ಟಗಳನ್ನು ಉಲ್ಲೇಖಿಸಿದ ಯಡಿಯೂರಪ್ಪ, “ನನಗೆ ಅಧಿಕಾರ ಸಿಕ್ಕಿದ್ದರೆ ನೀರಾವರಿ ಯೋಜನೆಗಳಿಗಾಗಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಮೀಸಲಿಡುತ್ತಿದ್ದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಒಂದು ಲಕ್ಷದವರೆಗಿನ ಬೆಳೆಸಾಲ ಮನ್ನಾ ಮಾಡಬೇಕು, ಸಹಕಾರ ಸಂಘಗಳ ರೈತರ ಸಾಲ ಹಾಗೂ ನೇಕಾರರ ಸಾಲ ಮನ್ನಾ ಮಾಡಬೇಕು ಎಂಬ ಉದ್ದೇಶ ನನಗಿತ್ತು” ಎಂದಿದ್ದಾರೆ.

“3,750ಕ್ಕೂ ರೈತರು ನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೊಂದ ಬೆಂದ ನಾಡಿನ ರೈತರ ಸಮುದಾಯಕ್ಕೆ ನೀರಾವರಿ, ಬೆಂಬಲ ಬೆಲೆ ಕೊಡಿಸಲು ನನ್ನ ಸರ್ವಸ್ವವನ್ನೂ ತ್ಯಾಗ ಮಾಡಬೇಕು ಎಂದು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದೆ. ನನ್ನ ಕೊನೆ ಉಸಿರಿರುವವರಗೂ ರೈತರು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಲು ಹೋರಾಡುತ್ತೇನೆ” ಎಂದು ಭರವಸೆ ಕೊಟ್ಟರು ಬಿಎಸ್‌ವೈ.

ಜೀವನದುದ್ದಕ್ಕೂ ಅಗ್ನಿ ಪರೀಕ್ಷೆ

ತಮ್ಮ ಮಾತಿನ ನಡುವೆ ಅತಿ ಭಾವುಕರಾದ ಯಡಿಯೂರಪ್ಪ, “ನನಗೆ ಜೀವನದುದ್ದಕ್ಕೂ ಅಗ್ನಿ ಪರೀಕ್ಷೆ. ನಾಡಿನ ಜನ ನಮಗೆ 113 ಸ್ಥಾನಕೊಟ್ಟಿದ್ದರೆ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನಗಳನ್ನು ಬಿಜೆಪಿಗೆ ಗೆಲ್ಲಿಸಿಕೊಡುತ್ತೇನೆ. 5 ವರ್ಷ ಅಥವಾ ಯಾವಾಗ ಮತ್ತೆ ನಡುವೆ ಚುನಾವಣೆ ಬರುತ್ತದೋ ಗೊತ್ತಿಲ್ಲ. ಆಗ ಬಿಜೆಪಿ 150 ಸ್ಥಾನ ಗೆಲ್ಲುವ ವಿಶ್ವಾಸವಿದೆ” ಎಂದರು.

“ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆದಿದೆ ಎಂಬುದು ಮುಖ್ಯವಲ್ಲ. ಒಬ್ಬರು ಇಬ್ಬರು ಬಿಜೆಪಿಯ ಶಾಸಕರು ಇದ್ದರು ಇಲ್ಲಿ. 2016ರ ಏಪ್ರಿಲ್‌ 14ರಂದು ನನ್ನನ್ನು ರಾಜ್ಯ ಬಿಜೆಪಿ ಅಧ್ಯಕ್ಷನನ್ನಾಗಿ ನೇಮಿಸಿದ ಮೋದಿ ಮತ್ತು ಅಮಿತ್‌ ಶಾ ನೀನೇ ಮುಂದಿನ ಮುಖ್ಯಮಂತ್ರಿ ಎಂದು ನನಗೆ ಆಶೀರ್ವಾದ ಮಾಡಿದ್ದರು. ನಾಡಿನ ಉದ್ದಗಲ ನಿರಂತರ ಹೋರಾಟ, ಚಳವಳಿ, ಪಾದಯಾತ್ರೆ ಮಾಡಿದೆ. ಎಂದೂ ನಾನು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. 40 ಸ್ಥಾನದಲ್ಲಿದ್ದ ಬಿಜೆಪಿಯನ್ನು 104 ಸ್ಥಾನಕ್ಕೆ ತಂದೆ” ಎಂದು ಯಡಿಯೂರಪ್ಪ ತಮ್ಮ ‘ಸಾಧನೆ’ಯನ್ನು ಹೇಳಿಕೊಂಡರು.

“ಅಧಿಕಾರ ಕೊಡದೇ ಇದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಕೆಲವರು ಹೇಳಿದ್ದರು. ಆದರೆ, ನಾನು ಪ್ರಾಣ ಕಳೆದುಕೊಳ್ಳುವುದಿಲ್ಲ” ಎಂದು ಪರೋಕ್ಷವಾಗಿ ಎಚ್‌.ಡಿ. ಕುಮಾರಸ್ವಾಮಿ ಕಾಲೆಳೆದ ಬಿಎಸ್‌ವೈ, “ನಮ್ಮಪ್ಪನಾಣೆ ನೀನು ಮುಖ್ಯಮಂತ್ರಿಯಾಗಲ್ಲ, ನಮ್ಮಪ್ಪನಾಣೆ ನೀನು ಮುಖ್ಯಮಂತ್ರಿಯಾಗಲ್ಲ ಎಂದು ಪರಸ್ಪರ ನಿಂದಿಸಿಕೊಂಡಿದ್ದವರು ಈಗ ಸರಕಾರ ರಚಿಸಲು ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗಿದ್ದಾರೆ” ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳನ್ನು ಟೀಕಿಸಿದರು.

“ಕೊಳೆಗೇರಿಗಳ ಸ್ಥಿತಿ ತಿಳಿಯಲು ಅಲ್ಲಿ ಒಂದು ದಿನ ಉಳಿದಿದ್ದೆ. ನಮ್ಮ ನಾಡು ಅಪಾರ ಅರಣ್ಯ ಸಂಪತ್ತು, ಖನಿಜ ಸಂಪತನ್ನು ಹೊಂದಿರುವ ರಾಜ್ಯವಾಗಿದ್ದರೂ ಸಹ ಅಭಿವೃದ್ಧಿ ಕಂಡಿಲ್ಲ. ಸ್ವಾತಂತ್ರ ಬಂದು ಇಷ್ಟು ವರ್ಷವಾದರೂ ರೈತನ ನೆಲಕ್ಕೆ ನೀರು ಕೊಡಲು ಸಾಧ್ಯವಾಗಿಲ್ಲ. ನಗರದ ಕೊಳೆಗೇರಿಗಳಲ್ಲಿ, ಗ್ರಾಮೀಣ ಭಾಗದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಲು ಆಗಿಲ್ಲ. ಜನ ಈ ಆಡಳಿತ ವ್ಯವಸ್ಥೆಯ ಬಗ್ಗೆ ಬೇಸತ್ತಿರುವ ಸಂದರ್ಭದಲ್ಲಿ ಚುನಾವಣೆ ನಡೆದಿದೆ. ನಾನು ವಿಶ್ವಾಸ ಮತ ಯಾಚನೆ ಮಾಡುವುದಿಲ್ಲ. ರಾಜ್ಯಪಾಲರಿಗೆ ಹೋಗಿ ರಾಜೀನಾಮೆ ಕೊಡುತ್ತೇನೆ” ಎಂದು ತಮ್ಮ ಮಾತು ಮುಗಿಸಿದರು ಬಿಎಸ್‌ವೈ.

22 ವರ್ಷಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ನಡೆದಂಥದ್ದೇ ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಿ ಈಗ ನಡೆದಿವೆ. ಅಂದು ವಾಜಪೇಯಿ ಅಧಿಕಾರ ಕಳೆದುಕೊಂಡಿದ್ದರೆ, ಇಂದು ಯಡಿಯೂರಪ್ಪ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆಗ ದೇವೇಗೌಡರ ಬೆಂಬಲಕ್ಕೆ ಜನತಾ ಪಕ್ಷದ ಜತೆಗೆ ತೆಲುಗು ದೇಶಂ ಪಕ್ಷ ಜತೆಗಿದ್ದರೆ ಇಂದು ಕಾಂಗ್ರೆಸ್‌ ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದೆ. ರಾಜಕೀಯ ಬೆಳವಣಿಗೆಗಳು ಕಾಲಾನಂತರವೂ ಹೇಗೆ ಮರುಕಳಿಸುತ್ತವೆ ಎಂಬುದಕ್ಕೆ ಶನಿವಾರ ನಡೆದ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ.