ಅಸಮಾಧಾನಿ ಮತದಾರನ ಕೈಯಲ್ಲಿ ‘ನೋಟಾ’ ಎಂಬ ಹಲ್ಲಿಲ್ಲದ ಹುಲಿ!
COVER STORY

ಅಸಮಾಧಾನಿ ಮತದಾರನ ಕೈಯಲ್ಲಿ ‘ನೋಟಾ’ ಎಂಬ ಹಲ್ಲಿಲ್ಲದ ಹುಲಿ!

ಚುನಾವಣಾ ವ್ಯವಸ್ಥೆಯೊಳಗೇ ತಮ್ಮ ಅಸಮಾಧಾನ ಹೊರಹಾಕಲು ಜನಸಾಮಾನ್ಯರಿಗೆ ಸಿಕ್ಕಿರುವ ಆಯ್ಕೆ ನೋಟಾ. ಆದರೆ, ನೋಟಾದ ಮಾನ್ಯತೆ ಹಾಗೂ ಅದರ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಿಲ್ಲ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಅತಂತ್ರವಾಗಿರುವ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ ರಚನೆಯ ಕಸರತ್ತು ನಡೆಸಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ ಶಾಸಕರು ರೆಸಾರ್ಟ್‌ ವಾಸ್ತವ್ಯದಲ್ಲಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ಈ ರಾಜಕೀಯ ನಾಟಕವನ್ನು ಕಂಡಿರುವ ನಾಡಿನ ಜನರ ಮುಂದೆ ಮತ್ತೆ ರಾಜಕಾರಣಿಗಳು ಮೈತ್ರಿ ಸರಕಾರದ ರಿಹರ್ಸಲ್‌ ನಡೆಸುತ್ತಿದ್ದಾರೆ.

ತಾವು ಆಯ್ಕೆ ಮಾಡಿ ಕಳಿಸಿದ ‘ಜನಪ್ರತಿನಿಧಿ’ಗಳು ಎಂಥ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದು ಇವರಿಗೆ ಮತ ಹಾಕಿದ ಜನರು ಅಂದುಕೊಳ್ಳುತ್ತಿದ್ದರೆ, ಚುನಾವಣಾ ಕಣದಲ್ಲಿದ್ದ ಯಾರಿಗೂ ಮತ ಹಾಕದ 3 ಲಕ್ಷ 22 ಸಾವಿರದ 841 ಜನ ತಾವು ನೋಟಾ ಒತ್ತಿದ್ದೂ ಸಾರ್ಥಕವಾಯಿತು ಎಂದುಕೊಳ್ಳುತ್ತಿರಬಹುದು!

ದಾಖಲೆ ನಿರ್ಮಿಸಿದ ಈ ಬಾರಿಯ ವಿಧಾನಸಭಾ ಚುನಾವಣೆಯ ಮತದಾನದ ಪ್ರಮಾಣದ ಜತೆಗೆ ನೋಟಾ ಮತಗಳೂ ದಾಖಲೆ ನಿರ್ಮಿಸಿವೆ. ನೋಟಾ ಮತಗಳು ಮೂರು ಲಕ್ಷ ಮೀರಿರುವುದು ಕಡಿಮೆ ಪ್ರಮಾಣವೇನೂ ಅಲ್ಲ. ನೋಟಾ ಎಂಬುದು ಸದ್ಯಕ್ಕೆ ಮತದಾರ ವ್ಯವಸ್ಥೆಯ ವಿರುದ್ಧ ತನ್ನ ಅಸಮಾಧಾನ ಹೊರ ಹಾಕಲು ಇರುವ ಒಂದು ಆಯ್ಕೆಯಾಗಿ ಕಾಣುತ್ತಿದೆ. ನೋಟಾ ಪ್ರಮಾಣ ಏರುತ್ತಿರುವುದು ಪ್ರಜ್ಞಾವಂತ ಮತದಾರ ತನ್ನ ಅಸಮಾಧಾನವನ್ನು ಚುನಾವಣಾ ವ್ಯವಸ್ಥೆಯ ಮೂಲಕವೇ ತಿಳಿಸಲು ಯತ್ನಿಸುತ್ತಿದ್ದಾನೆ ಎಂಬುದನ್ನು ಸೂಚಿಸುತ್ತಿದೆ.

Also read: ‘NOTA’: ಭಾರತೀಯ ಮತದಾರರ ಬಳಿಯಿರುವ ಕೆಲಸಕ್ಕೆ ಬಾರದ ಅಸ್ತ್ರ

ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ಸೂಕ್ತರಾದವರು ಯಾರೂ ಇಲ್ಲ ಎಂದ ಸಂದರ್ಭದಲ್ಲಿ ಮೊದಲು ಯಾರಿಗೋ ಒಬ್ಬರಿಗೆ ಮತ ಹಾಕಿ ಬರುತ್ತಿದ್ದವರೇ ಹೆಚ್ಚು. ಮತದಾನ ‘ಚಲಾಯಿಸಲೇಬೇಕಾದ’ ಹಕ್ಕು ಎಂದಾಗ, ಆ ಹಕ್ಕನ್ನು ನೋಟಾ ಒತ್ತುವ ಮೂಲಕ ಮೂರು ಲಕ್ಷಕ್ಕೂ ಹೆಚ್ಚು ಜನ, ‘ನೋಟಾ ನಮ್ಮ ಆಯ್ಕೆ’ ಎಂದು ಹೇಳಿದ್ದಾರೆ. ವ್ಯವಸ್ಥೆಯ ವಿರುದ್ಧ ಮನಸ್ಸಿನಲ್ಲಿರುವ ಸಿಟ್ಟನ್ನು ಚುನಾವಣೆಯ ಸಂದರ್ಭದಲ್ಲಿ ಕಾನೂನಾತ್ಮಕ ಪರಿಮಿತಿಯೊಳಗೇ ವ್ಯಕ್ತಪಡಿಸಲು ಇರುವ ವ್ಯವಸ್ಥೆ ನೋಟಾ ಎಂಬುದು ಹಲವರ ಅರಿವಿಗೆ ಬಂದಿದೆ.

ಗುಜರಾತ್‌ ಚುನಾವಣೆಯ ನಂತರ ಕರ್ನಾಟಕದಲ್ಲೂ ನೋಟಾ ಪ್ರಮಾಣ ಹೆಚ್ಚಾಗಿದೆ. ಆದರೆ ನೋಟಾ ಅನ್ನು ಹಲ್ಲಿಲ್ಲದ ಹುಲಿಯಂತೆ ಮಾಡಿಬಿಟ್ಟಿದ್ದಾರೆ. ಅದು ಬದಲಾಗಬೇಕು. ನೋಟಾಗೆ ಯಾವ ರೀತಿಯ ಮಾನ್ಯತೆ ಕೊಡಬೇಕೆಂಬ ಬಗ್ಗೆ ಸ್ಪಷ್ಟತೆ ಬರಬೇಕು.
- ಡಾ. ಹರೀಶ್‌ ರಾಮಸ್ವಾಮಿ, ಹಿರಿಯ ರಾಜಕೀಯ ವಿಶ್ಲೇಷಕ

ನೋಟಾ ಚಲಾಯಿಸುವವರ ಮನಸ್ಥಿತಿ

ನೋಟಾ ಆಯ್ಕೆ ಒತ್ತುವವರ ಮನಸ್ಥಿತಿ ಉಳಿದ ಮತದಾರರ ಮನಸ್ಥಿತಿಗಿಂತಲೂ ಭಿನ್ನವಾಗಿರುತ್ತದೆ ಮತ್ತು ಪರಿಸರದ ಪ್ರಜ್ಞೆಯ ಅರಿವು ಹೆಚ್ಚಾಗಿರುವವರೇ ನೋಟಾ ಚಲಾಯಿಸಲು ಮುಂದಾಗುತ್ತಾರೆ ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ.

“ಇರುವ ಅಭ್ಯರ್ಥಿಗಳ ಪೈಕಿ ಯಾರೂ ಸೂಕ್ತರಲ್ಲ ಎನಿಸಿದರೆ ಮೊದಲೆಲ್ಲಾ ಬಾಯಿ ಮಾತಿನ ಮೂಲಕ ಆ ಅಸಮಾಧಾನವನ್ನು ಹೊರಹಾಕುತ್ತಿದ್ದರು. ಜನ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೆ ಬೇರೆ ಅವಕಾಶಗಳೇ ಇರಲಿಲ್ಲ. ಆದರೆ, ಈಗ ನೋಟಾ ಅದಕ್ಕೆ ಅವಕಾಶ ಒದಗಿಸಿದೆ. ವ್ಯವಸ್ಥೆಯ ವಿರುದ್ಧ ತನ್ನ ಸಿಟ್ಟನ್ನು ಚುನಾವಣಾ ವ್ಯವಸ್ಥೆಯೊಳಗೇ ವ್ಯಕ್ತಪಡಿಸುವ ಆಯ್ಕೆ ಈಗ ಪ್ರಜ್ಞಾವಂತರಿಗಿದೆ” ಎನ್ನುತ್ತಾರೆ ಮನೋವಿಜ್ಞಾನಿ ಡಾ. ಅ. ಶ್ರೀಧರ್‌.

Also read: ‘ನೋಟಾ’ದಾಗೆ ನಗೆಯಾ ಮೀಟಿ: ಕೊನೆಯ ಆಯ್ಕೆ ಒತ್ತಿದವರ ಸಂಖ್ಯೆ 3,22,841!

“ಈ ಬಾರಿಯ ಚುನಾವಣೆಯಲ್ಲಿ ನೋಟಾ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದರೆ ಜನಸಾಮಾನ್ಯರ ಪ್ರಜ್ಞೆ ರಾಜಕೀಯ ವಾತಾವರಣವನ್ನು ಗ್ರಹಿಸಿದೆ ಎಂದರ್ಥ. ತನ್ನ ಭಾವನೆಗಳನ್ನು ನೇರವಾಗಿ ಮತಗಟ್ಟೆಯಲ್ಲಿ ವ್ಯಕ್ತಪಡಿಸಬಹುದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದು ಒಂದು ಮನೋಭಾವದ ಜನರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿಯೇ ನೋಟಾ ಪ್ರಮಾಣ ಜಾಸ್ತಿಯಾಗಿದೆ” ಎಂಬುದು ಅವರ ಮಾತು.

“ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಹತ್ತಾರು ಜನರ ಜನರ ಭಾವನೆಗಳನ್ನು ಪ್ರತಿನಿಧಿಸುತ್ತಿರುತ್ತಾನೆ. ಸಾಮಾನ್ಯವಾಗಿ ತಾವೇ ಮುಂದೆ ಬಂದು ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರ ಸಂಖ್ಯೆ ಕಡಿಮೆ. ಆದರೆ, ಯಾರಾದರೂ ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನು ಅನುಮೋದಿಸುವವರು ಹೆಚ್ಚಾಗಿರುತ್ತಾರೆ. ಅದು ಮನುಷ್ಯ ಸ್ವಭಾವ. ಆಧುನಿಕ ಮನಃಶಾಸ್ತ್ರದಲ್ಲಿ ಇದನ್ನು bystander effect ಎಂದು ಕರೆಯುತ್ತಾರೆ. ಅಂದರೆ ಯಾವುದೇ ಒಂದು ಘಟನೆ ನಡೆದಾಗ ಹಲವು ಜನ ಅಲ್ಲಿ ಸೇರಿ ನೋಡುತ್ತಿರುತ್ತಾರೆ. ಯಾರೂ ಅಲ್ಲಿ ಮುನ್ನುಗ್ಗುವುದಿಲ್ಲ. ಒಬ್ಬ ಮುನ್ನುಗ್ಗಿದರೆ ಉಳಿದರೂ ಮುನ್ನುಗ್ಗುತ್ತಾರೆ. ನೋಟಾ ವಿಚಾರದಲ್ಲಿ ಆಗಿರುವುದೂ ಇದೇ” ಎನ್ನುತ್ತಾರೆ ಶ್ರೀಧರ್‌.

ನೋಟಾ ಪ್ರಮಾಣ ಹೆಚ್ಚುತ್ತಿದೆ ಎಂದರೆ ಸೂಕ್ಷ್ಮ ಮನಸ್ಸಿನ ಕೆಲವೇ ಕೆಲವು ವ್ಯಕ್ತಿಗಳು ದೊಡ್ಡ ಮಟ್ಟದ ಪರಿಣಾಮ ಬೀರುತ್ತಿರುವುದರ ಸಂಕೇತ. ಇದು ಸರಳವಾದ ವಿಚಾರವಲ್ಲ.
- ಡಾ. ಅ. ಶ್ರೀಧರ್‌, ಮನೋವಿಜ್ಞಾನಿ

“ಆಧುನಿಕ ಚುನಾವಣಾ ಪ್ರಕ್ರಿಯೆಯಲ್ಲಿ ತನಗೆ ಸೂಕ್ತ ಅಭ್ಯರ್ಥಿ ಇಲ್ಲ ಎನಿಸಿದರೂ ಅದನ್ನು ವ್ಯಕ್ತಪಡಿಸುವುದಕ್ಕೆ ನೋಟಾ ಎಂಬ ಒಂದು ಆಯ್ಕೆ ಬಂದಿದೆ. ನೋಟಾ ಚಲಾಯಿಸಿದವರು ತಮ್ಮಂಹತ ಹತ್ತಾರು ಜನರ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವ ಪ್ರತಿನಿಧಿಗಳಾಗಿರುತ್ತಾರೆ. ಹೀಗಾಗಿ 3 ಲಕ್ಷಕ್ಕೂ ಹೆಚ್ಚು ನೋಟಾ ಚಲಾವಣೆ ಆಗಿದೆ ಎಂದರೆ ನೋಟಾ ಚಲಾಯಿಸುವ ಕನಿಷ್ಠ 30 ಲಕ್ಷ ಜನರು ಇದ್ದಾರೆ ಎಂಬುದನ್ನು ಇದು ಪ್ರತಿನಿಧಿಸುತ್ತದೆ” ಎಂಬುದು ಅವರ ಅಭಿಪ್ರಾಯ.

“ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಅರಿವು ಈಗ ಜನರಿಗೆ ಬಂದಿದೆ. ಮೊದಲು ಈ ಅಸಮಾಧಾನವನ್ನು ವ್ಯಕ್ತ ಪಡಿಸಲು ಬೇರೆ ಆಯ್ಕೆಗಳು ಕಾಣುತ್ತಿರಲಿಲ್ಲ. ಆದರೂ ಹಿಂದೆ ಕೂಡಾ ಯಾರೂ ಬಾಯಿ ಮುಚ್ಚಿಕೊಂಡು ಕೂರುತ್ತಿರಲಿಲ್ಲ. ಆಗಲೂ ವ್ಯವಸ್ಥೆಯ ವಿರುದ್ಧ ಮಾತನಾಡುತ್ತಿದ್ದರು, ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೆಲ್ಲವೂ ಹಿಂದೆಯೂ ನಡೆಯುತ್ತಿತ್ತು. ಆ ಮಟ್ಟಿಗೆ ಪ್ರಜಾಪ್ರಭುತ್ವದ ಬಲ ಉಳಿದುಕೊಂಡಿತ್ತು. ಆದರೆ, ಆ ಬಲವನ್ನು ದುರ್ಬಲಗೊಳಿಸುತ್ತಿರುವವರು ರಾಜಕೀಯ ಪಕ್ಷಗಳು, ಚುನಾವಣೆಯ ಪ್ರಾಧಿಕಾರಗಳು, ನ್ಯಾಯಾಂಗ. ಇವು ಜನರ ಭಾವನೆಗಳ ಎತ್ತಿ ಹಿಡಿಯುವ ಬದಲು ಅದರ ಬಗ್ಗೆ ಹೆಚ್ಚು ಗಮನ ಕೊಡದೆ ಅದನ್ನು ನಿರ್ಲಕ್ಷಿಸುತ್ತಿವೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

“ಯುವಕರು ಹೆಚ್ಚಾಗಿ ನೋಟಾ ಒತ್ತುತ್ತಿರುವುದು ಪ್ರತಿಭಟನೆಯಿಂದ ಹುಟ್ಟಿದ ಮನಸ್ಥಿತಿಯಿಂದಲ್ಲ, ಈ ಪ್ರತಿರೋಧ ತಮ್ಮೊಳಗಿನ ವಿಚಾರದಿಂದ ಹುಟ್ಟಿರುವುದು. ಯುವಜನರಿಗೆ ತಮ್ಮ ಪರಿಸರದ ಪರಿಸ್ಥಿತಿಯ ಅರಿವಾಗಿದೆ. ಯುವ ಜನರ ಈ ಭಾವನೆ ವಿಸ್ತಾರಗೊಂಡರೆ ನೋಟಾ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು” ಎನ್ನುತ್ತಾರೆ ಅವರು.

Also read: ಚುನಾವಣಾ ರಾಜಕೀಯದ ಬಗ್ಗೆ ‘ಪ್ರಜಾಪ್ರಭು’ವಿನ ನಿರಾಸಕ್ತಿ ಏಕೆ?

“ಈಗಿನ ವ್ಯವಸ್ಥೆಯ ಬಗ್ಗೆ ಜನ ಸಾಕಷ್ಟು ಬೇಸತ್ತು ಹೋಗಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ. ಇದನ್ನು ಚುನಾವಣಾ ವ್ಯವಸ್ಥೆಯೊಳಗೇ ವಿರೋಧಿಸುವ ರೀತಿ ನೋಟಾ ಪ್ರಮಾಣದ ಹೆಚ್ಚಳ. ಯುವಜನರಿಗೆ ಆಯ್ಕೆಗಳ ಕುತೂಹಲ ಹೆಚ್ಚಿದೆ. ಯುವ ಜನರಿಗೆ ಅಭ್ಯರ್ಥಿಗಳ ಆಯ್ಕೆಯ ಕೊರತೆಯಾಗಿ ನೋಟಾ ಒತ್ತುತ್ತಿರಬಹುದು. ಅಥವಾ ರಾಜಕಾರಣಿಗಳ ಭಿತ್ತಿಚಿತ್ರಗಳು, ಚುನಾವಣಾ ಜಾಹೀರಾತುಗಳನ್ನು ಕಂಡು ಬೇಸರ ಉಂಟಾಗಿರಬಹುದು, ರಾಜಕಾರಣಿಗಳ ಮಾತು ಅವರಿಗೆ ಹಿಡಿಸದೆ ಇರಬಹುದು. ತಮ್ಮ ಈ ಅಸಮಾಧಾನವನ್ನು ಅವರು ನೋಟಾ ಮೂಲಕ ವ್ಯಕ್ತಪಡಿಸುತ್ತಿರಬಹುದು” ಎನ್ನುತ್ತಾರೆ ಶ್ರೀಧರ್.

ನೋಟಾದ ಭವಿಷ್ಯ?

ಮತದಾರ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಲು ನೋಟಾ ಎಂಬ ಆಯ್ಕೆ ಒಂದಿದೆ. ಆದರೆ, ಅದರಿಂದ ಪ್ರಯೋಜನವೇನು ಎಂದು ನೋಡಿದರೆ ನಿರಾಸೆ ಉಂಟಾಗುವುದು ಸಹಜ. ನೋಟಾ ಅಸಮಾಧಾನ ಹೊರ ಹಾಕಲು ಇರುವ ಆಯ್ಕೆಯೇ ಹೊರತು, ಆ ಆಯ್ಕೆಯ ಮುಂದೆ ಮತ್ತೊಂದು ಪರ್ಯಾಯ ಪರಿಹಾರ ಕಾಣುವುದಿಲ್ಲ. ಹಾಗೆ ನೋಡಿದರೆ ನೋಟಾ ಹಲ್ಲಿಲ್ಲದ ಹುಲಿ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

“ಗುಜರಾತ್‌ ನಂತರ ಕರ್ನಾಟಕದಲ್ಲಿ ನೋಟಾ ಪ್ರಮಾಣ ಹೆಚ್ಚಾಗಿದೆ. ಆದರೆ, ನೋಟಾದ ಭವಿಷ್ಯ ಏನು ಎಂಬುದು ಸದ್ಯಕ್ಕೆ ಇರುವ ಪ್ರಶ್ನೆ. ನೋಟಾಗೆ ಯಾವ ರೀತಿ ಮಾನ್ಯತೆ ನೀಡಬೇಕು ಎಂಬ ಬಗ್ಗೆ ಚುನಾವಣಾ ಸುಧಾರಣೆ ಆಗಬೇಕು. ಕಣದಲ್ಲಿರುವ ಅಭ್ಯರ್ಥಿಗಳು ಪಡೆದ ಮತಕ್ಕಿಂತ ನೋಟಾಗೆ ಬಂದ ಮತಗಳೇ ಹೆಚ್ಚಾಗಿದ್ದರೆ ಅಭ್ಯರ್ಥಿಗಳನ್ನು ಅನರ್ಹಗೊಳಲಿಸಲು ಸಾಧ್ಯವೇ ಎಂಬ ಬಗ್ಗೆ ಯೋಚಿಸಬೇಕು. ಆಗ ಕಣದಲ್ಲಿರುವ ಅಭ್ಯರ್ಥಿಗಳು ಶ್ರಮ ವಹಿಸಿ ಕೆಲಸ ಮಾಡಲು ಆರಂಭಿಸಬಹುದು” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ.

ಸದ್ಯದ ವ್ಯವಸ್ಥೆಯಲ್ಲಿ ನೋಟಾ ಪ್ರಮಾಣ ಏರಿದರೂ ಇಳಿದರೂ ಅದು ಕಣದಲ್ಲಿರುವ ಅಭ್ಯರ್ಥಿಗಳ ಮೇಲೆ ಹೆಚ್ಚಿನ ಪರಿಣಾಮವನ್ನೇನೂ ಉಂಟು ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಬದಲಿಗೆ ಹೆಚ್ಚಿನ ಮತಗಳು ನೋಟಾಗೇ ಬಂದರೆ ಚುನಾವಣಾ ಆಯೋಗ ನೋಟಾ ಬಗ್ಗೆ ಗಂಭೀರವಾಗಿ ಯೋಚಿಸದೆ ವಿಧಿಯಿಲ್ಲ.