‘ಸಂವಿಧಾನದ ಹೆಸರಿನಲ್ಲಿ’: ಅಲುಗಾಡುತ್ತಿವೆ ಇತರೆ ಸಮ್ಮಿಶ್ರ ಬಿಜೆಪಿ ಸರಕಾರಗಳು!
COVER STORY

‘ಸಂವಿಧಾನದ ಹೆಸರಿನಲ್ಲಿ’: ಅಲುಗಾಡುತ್ತಿವೆ ಇತರೆ ಸಮ್ಮಿಶ್ರ ಬಿಜೆಪಿ ಸರಕಾರಗಳು!

ಕರ್ನಾಟಕದ ರಾಜ್ಯಪಾಲ ವಜೂಬಾಯ್ ವಾಲಾ ಅವರು ಬಿಜೆಪಿಯ  ಬಿ. ಎಸ್.ಯಡಿಯೂರಪ್ಪಗೆ ಸರಕಾರ ರಚಿಸಲು ಅನುಮತಿ ನೀಡಿರುವುದು ಮಣಿಪುರ, ಗೋವಾ ಮತ್ತು ಬಿಹಾರ ರಾಜ್ಯಗಳಲ್ಲೂ ಕಂಪನ ಮೂಡಿಸಿದೆ. 

ಕರ್ನಾಟದಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ತನಗೆ ಮಾತ್ರ ಸರಕಾರ ರಚಿಸುವ ಹಕ್ಕಿದೆ ಎಂದು ವಾದಿಸಿದೆ. ಇದು ಬಿಜೆಪಿ ಆಡಳಿತದಲ್ಲಿರುವ ಇತರ ರಾಜ್ಯಗಳ ಸರಕಾರಗಳಿಗೆ ದೊಡ್ಡ ಹೊಡೆತ ನೀಡುವ ಹಂತಕ್ಕೆ ಬಂದಿದೆ. ಈಗ ಆ ರಾಜ್ಯಗಳಲ್ಲಿ ರಾಜಕೀಯ ಪ್ರಕ್ರಿಯೆ ಚುರುಕುಗೊಂಡಿದ್ದು, ಅಲ್ಲಿನ ಸರಕಾರಗಳ ಅಸ್ತಿತ್ವವೇ ಡೋಲಾಯಮಾನವಾಗಿದೆ. ಹಾಗಿದ್ದರೆ ಅವು ಯಾವ ರಾಜ್ಯಗಳು? ಯಾಕೆ ಇಂಥ ಸನ್ನಿವೇಶ ನಿರ್ಮಾಣವಾಗಿದೆ? ಈ ಬಗ್ಗೆ ಒಂದು ರಾಜಕೀಯ ನೋಟ ಇಲ್ಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಗಿಂತ ಕಡಿಮೆ ಸ್ಥಾನಗಳಿಸಿವೆ. ಇದನ್ನೇ ನೆಪ ಮಾಡಿಕೊಂಡ ರಾಜ್ಯಪಾಲ ವಜೂಬಾಯ್ ವಾಲಾ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಸರಕಾರ ರಚಿಸಲು ಅನುಮತಿ ನೀಡಿದ್ದಾರೆ. ಆದರೆ ಮಣಿಪುರ, ಗೋವಾ ಮತ್ತು ಬಿಹಾರದಲ್ಲಿ ಕ್ರಮವಾಗಿ ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಈಗ ಸರಕಾರ ರಚನೆಯ ಕಹಳೆ ಊದಿವೆ. ಅವು ಕರ್ನಾಟಕ ರಾಜ್ಯಪಾಲರ ಅನುಮತಿಯನ್ನೇ ಮುಂದು ಮಾಡಿಕೊಂಡು ಮತ್ತೆ ಸರಕಾರ ರಚನೆಯ ಅವಕಾಶ ಕೇಳುತ್ತಿವೆ. ಇದರೊಂದಿಗೆ ಬಿಜೆಪಿ ಅಧಿಕಾರದ ಬಂಡಾಟಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಚಿಸುವಂತೆ ಮಾಡಿವೆ.

ಮಣಿಪುರದಲ್ಲಿ ಬಿಜೆಪಿ ಸರಕಾರ ರಚಿಸಿದ್ದು ಹೇಗೆ?

ಮಣಿಪುರ ವಿಧಾನಸಭೆಗೆ 2017ರ ಮಾರ್ಚ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಆ ಹೊತ್ತಿಗಾಗಲೇ ಅಸ್ಸಾಂನಲ್ಲಿ ಗೆದ್ದು ಬೀಗುತ್ತಿದ್ದ ಬಿಜೆಪಿ ಈಶಾನ್ಯ ರಾಜ್ಯಗಳನ್ನು ತನ್ನದಾಗಿಸಿಕೊಳ್ಳುವ ಹುಮ್ಮಸಿಲ್ಲಿತ್ತು. ಇದಕ್ಕಾಗಿ ಮಣಿಪುರದಲ್ಲಿ ಭಾರಿ ತಂತ್ರಗಾರಿಕೆಯನ್ನೇ ನಡೆಸಿತ್ತು. ಆದರೆ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಈ ಮೂಲಕ ಬಿಜೆಪಿಗೆ ದೊಡ್ಡ ಹೊಡೆತ ನೀಡಿತ್ತು. ಆ ನಂತರ ಬಿಜೆಪಿ ಮ್ಯಾಜಿಕ್ ನಂಬರ್ ತೋರಿಸಲು ಸಂವಿಧಾನದ ಎಲ್ಲ ವಿಧಿವಿಧಾನಗಳನ್ನು ಗಾಳಿಗೆ ತೂರಿತು.

ತಲಾ 4 ಸ್ಥಾನಗಳನ್ನು ಗೆದ್ದಿದ್ದ ನಾಗಾ ಪೀಪಲ್ ಪಾರ್ಟಿ ( ಎನ್.ಪಿ.ಪಿ) ಹಾಗೂ ನಾಗಾ ಪೀಪಲ್ ಫ್ರಂಟ್ ( ಎನ್.ಪಿ.ಎಫ್) ಬಿಜೆಪಿಗೆ ತಮ್ಮ ಬೆಂಬಲ ಸೂಚಿಸಿದವು. ಇದರೊಂದಿಗೆ ಬಿಜೆಪಿಯ ಬಲ 29 ಸ್ಥಾನಕ್ಕೇರಿತು. ಆದರೂ ಮ್ಯಾಜಿಕ್ ಸಂಖ್ಯೆ 31 ತೋರಿಸಲು ಅದಕ್ಕೆ ಇನ್ನೂ ಎರಡು ಸ್ಥಾನಗಳ ಅಗತ್ಯವಿತ್ತು. ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಶಕ್ತಿ ಪಕ್ಷದ ಏಕೈಕ ಸದಸ್ಯ ಬಿಜೆಪಿ ಬೆಂಬಲಿಸಿದ್ದರು. ಆದರೂ ಬಿಜೆಪಿಗೆ ವಿಶ್ವಾಸ ಮತ ತೋರಿಸಲು ಮತ್ತೊಬ್ಬ ಸದಸ್ಯರ ಅಗತ್ಯವಿತ್ತು.

ಈ ವೇಳೆ ಕಾಂಗ್ರೆಸ್‌ನಿಂದ ಗೆದ್ದು ಶಾಸಕನಾಗಿ ಆರಿಸಿ ಬಂದಿದ್ದ, ಇಬೋಬಿ ಸಂಪುಟದಲ್ಲಿ ಸಚಿವರೂ ಆಗಿದ್ದ ಶ್ಯಾಮ್ ಕುಮಾರ್ ಅವರನ್ನು ಬಿಜೆಪಿ ಸೆಳೆಯಿತು. ವಿಶ್ವಾಸ ಮತಯಾಚನೆ ದಿನ ನೇರವಾಗಿ ಅವರನ್ನು ರಾಜಭವನದಲ್ಲಿ ನಜ್ಮಾ ಹೆಪ್ತುಲ್ಲಾ ಅವರ ಮುಂದೆ ನಿಲ್ಲಿಸಿ ಬಹುಮತ ಮ್ಯಾಜಿಕ್ ಸಂಖ್ಯೆ 31 ಅನ್ನು ಪ್ರದರ್ಶಿಸಿತು. ಇದು ಪ್ರಜಾಪ್ರತಿನಿಧಿ ಕಾಯ್ದೆಯ ನೇರ ಉಲ್ಲಂಘನೆಯಾಗಿತ್ತು. ದೊಡ್ಡ ಪಕ್ಷವಾದರೂ ಕಾಂಗ್ರೆಸ್ ಅನ್ನು ಸರ್ಕಾರ ರಚನೆಗೆ ಆಹ್ವಾನಿಸದ ರಾಜ್ಯಪಾಲರು, ಅನ್ಯ ಪಕ್ಷಗಳಿಂದ ಗೆದ್ದ ಶಾಸಕರನ್ನು ಸೆಳೆದು ಬಹುಮತ ತೋರಿಸಿದ ಪಕ್ಷ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ಕೊಟ್ಟಿದ್ದು ಸಂವಿಧಾನದ ಅಣಕವಾಗಿತ್ತು.

ಆ ನಂತರ ಸರ್ಕಾರ ರಕ್ಷಿಸಿಕೊಳ್ಳಲು ಬಿಜೆಪಿ ಮತ್ತೆ 8 ಕಾಂಗ್ರೆಸ್ ಮತ್ತು ಟಿಎಂಸಿಯ ಒಬ್ಬ ಸದಸ್ಯರನ್ನು ಸೆಳೆದುಕೊಂಡಿದೆ. ಅಷ್ಟೇ ಅಲ್ಲದೆ ಶ್ಯಾಮ್ ಕುಮಾರ್ ಅವರಿಗೆ ಪಿಡಿಎಸ್ ಹಾಗೂ ಗ್ಯಾಹಕ ವ್ಯಹಾರ ಖಾತೆ ನೀಡಿ ಹುಬ್ಬೇರುವಂತೆ ಮಾಡಿದೆ. ಒಂದು ಪಕ್ಷದಿಂದ ಗೆದ್ದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಮತ್ತೊಂದು ಪಕ್ಷದ ಸರ್ಕಾರದಲ್ಲಿ ಮುಂದುವರಿದಿರುವ ಘಟನೆ ದೇಶದಲ್ಲೇ ಪ್ರಥಮ.

ಕರ್ನಾಟಕದ ಬೆಳವಣಿಗೆಗಳಿಂದ ಮಣಿಪುರದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಐಬೋಬಿ ಸಿಂಗ್ ಹಾಗೂ ಮೇಘಾಲಯ ಕಾಂಗ್ರೆಸ್ ನಾಯಕ ಮುಕುಲ್ ಸಂಗ್ಮಾ ಎಚ್ಚೆತ್ತಿದ್ದಾರೆ. ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ದೊಡ್ಡ ಪಕ್ಷವಾಗಿರುವ ತಮ್ಮನ್ನು ಸರಕಾರ ರಚನೆಗೆ ಆಹ್ವಾನಿಸಬೇಕು ಎಂದು ರಾಜ್ಯಪಾಲರನ್ನು ಕೋರಿದ್ದಾರೆ. ಇದು ಬಿಜೆಪಿಯ ರಾಜಕೀಯ ನಡವಳಿಕೆಗಳನ್ನು ಮತ್ತೆ ವಿಮರ್ಶೆ ಮಾಡುವಂತೆ ಮಾಡಿದೆ.

ಗೋವಾ ಕಾಂಗ್ರೆಸ್‌ನಲ್ಲಿ ಚುಗುರಿದ ಆಸೆ

ಇದರಿಂದ ಗೋವಾ ಕಾಂಗ್ರೆಸ್‌ನಲ್ಲೂ ಹೊಸ ಆಸೆ ಚಿಗುರೊಡೆದಿದೆ. ಗೋವಾ ಕಾಂಗ್ರೆಸ್ ಸರಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರನ್ನು ಕೋರಲು ಮುಂದಾಗಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ವಿಶ್ವಾಸ ಮತ ತೋರಿಸಲು 21 ಶಾಸಕರ ಅಗತ್ಯವಿದ್ದು, ಕಾಂಗ್ರೆಸ್ ಇಲ್ಲಿ 17 ಸ್ಥಾನಗಳನ್ನು ಗೆಲ್ಲವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಕಾಂಗ್ರೆಸ್ ಬದಲು 14 ಸದಸ್ಯ ಬಲದ ಬಿಜೆಪಿ ಇತರೆ ಪಕ್ಷಗಳ ಏಳು ಸದಸ್ಯರ ಸಹಾಯ ಪಡೆದು ಸರ್ಕಾರ ರಚಿಸಿದೆ. ಎಂಜಿಪಿ, ಗೋವಾ ಫಾರ್ವರ್ಡ್ ಪಾರ್ಟಿ ಇಲ್ಲಿ ಬಿಜೆಪಿಗೆ ಬೆಂಬಲ ನೀಡಿವೆ.

“ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನ್ಯಾಯ ಇರುವುದಿಲ್ಲ. ಕರ್ನಾಟಕದ ರಾಜ್ಯಪಾಲರು ನಡೆದುಕೊಂಡಂತೆ ದೊಡ್ಡ ಪಕ್ಷವಾದ ಕಾಂಗ್ರೆಸ್ ಅನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು. ಸರಕಾರ ರಚನೆಯಾದ ಮೇಲೆ ಬಹುಮತ ಸಾಬೀತು ಮಾಡುತ್ತೇವೆ” ಎಂದು ಗೋವಾ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ್ ಕಾವ್ಳೇಕರ್ ಹೇಳಿದ್ದಾರೆ. ಇದಕ್ಕೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡೆನ್ ದನಿ ಗೂಡಿಸಿದ್ದಾರೆ.

ಇನ್ನು ಗೋವಾದಲ್ಲಿ ಮುಖ್ಯಮಂತ್ರಿ ಆರೋಗ್ಯ ಸಮಸ್ಯೆಯಿಂದಾಗಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ತಿಂಗಳಿಂದ ರಾಜ್ಯದಲ್ಲಿ ಮುಖ್ಯಮಂತ್ರಿಯೇ ಇಲ್ಲದ ಶೂನ್ಯ ಸ್ಥಿತಿ ನಿರ್ಮಾಣವಾಗಿತ್ತು. ಈಗ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಗೋವಾ ಕಾಂಗ್ರೆಸ್ ನಾಯಕರ ಸರ್ಕಾರ ರಚನೆಯ ಕೂಗಿಗೆ ಹೆಚ್ಚು ಮಹತ್ವ ಬಂದಿದೆ. ಹೀಗಾಗಿ ರಾಜ್ಯಪಾಲರು ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಗೆ ಬಂದಿದ್ದಾರೆ. ಕೆಲ ದಿನಗಳಿಂದ ಗೋವಾ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ ಮುಖ್ಯಮಂತ್ರಿ ಇಲ್ಲದೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಕೂಡಲೆ ಹೊಸ ಮುಖ್ಯಮಂತ್ರಿಯನ್ನು ನೇಮಿಸಿ ಇಲ್ಲ ಸರಕಾರವನ್ನು ವಿಸರ್ಜಿಸಿ ಎಂದು ತರಾಟೆಗೆ ತೆಗೆದುಕೊಂಡಿತ್ತು.

ಮತ್ತೊಂದು ಈಶಾನ್ಯ ರಾಜ್ಯ ಮೇಘಾಲಯದಲ್ಲೂ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಬಂಡಾಯ ಘೋಷಿಸಿದೆ. ಇಲ್ಲಿನ 59 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನಷ್ಟೇ ಗಳಿಸಿದೆ. ಆದರೆ ಅದು ತಾನು ಅಧಿಕಾರ ಪಡೆಯದಿದ್ದರೂ ಸರಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಬೇಕು ಎನ್ನುವ ಉದ್ದೇಶದಿಂದ 19 ಸ್ಥಾನಗಳಿಸಿದ ನ್ಯಾಷನಲ್ ಪೀಪಲ್ ಪಾರ್ಟಿ ( ಎನ್.ಪಿ.ಪಿ.) ಸರ್ಕಾರ ರಚಿಸಲು ಬೆಂಬಲ ನೀಡಿದೆ. ಇದಕ್ಕೆ ಬಿಜೆಪಿಯ 2 ಹಾಗೂ 17 ಪಕ್ಷೇತರರು ಬೆಂಬಲ ನೀಡಿದ್ದಾರೆ. ಕರ್ನಾಟಕದ ರಾಜ್ಯಪಾಲರನ್ನೇ ಅನುಸರಿಸಿ ಮೇಘಾಲಯ ಕಾಂಗ್ರೆಸ್ ನಾಯಕರು ತಮಗೆ ಸರಕಾರ ರಚಿಸಲು ಆಹ್ವಾನ ಕೋರಿ ಗಂಗಾ ಪ್ರಸಾದ್ ಎದುರು ಪೆರೇಡ್ ನಡೆಸಲು ಸಿದ್ಧರಾಗಿದ್ದಾರೆ.

ಕರ್ನಾಟಕದ ರಾಜ್ಯಪಾಲರ ತೀರ್ಮಾನ ಬಿಹಾರದಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಲು ಕಾರಣವಾಗಿದೆ. 2015ರಲ್ಲಿ ನಡೆದ ಚುನಾವಣೆಯಲ್ಲಿ 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚನೆಗೆ 131 ಸಂಖ್ಯಾಬಲದ ಅಗತ್ಯವಿತ್ತು. ಹೀಗಾಗಿ 80 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಆರ್.ಜೆ.ಡಿ. ಈಗ ಎದ್ದು ಕುಳಿತಿದೆ.

ಆರ್.ಜೆ.ಡಿ. ಶಾಸಕರು ಪಕ್ಷದ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ರಾಜ್ಯಪಾಲ ಸತ್ಯಪಾಲ್ ಮಾಲಿಕ್ ಅವರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡನೆಗೆ ಅವಕಾಶ ಕೋರಿದ್ದಾರೆ
ಆರ್.ಜೆ.ಡಿ. ಶಾಸಕರು ಪಕ್ಷದ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ರಾಜ್ಯಪಾಲ ಸತ್ಯಪಾಲ್ ಮಾಲಿಕ್ ಅವರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡನೆಗೆ ಅವಕಾಶ ಕೋರಿದ್ದಾರೆ

ಆಗ 71 ಸ್ಥಾನಗಳನ್ನು ಗಳಿಸಿದ್ದ ಜೆಡಿಯ ಆರ್.ಜೆ.ಡಿ. ಜೊತೆ ಸೇರಿ ಸರ್ಕಾರ ರಚನೆ ಮಾಡಿತ್ತು. ಆದರೆ ಕಳೆದ ವರ್ಷ ಹಲವು ಕಾರಣವೊಡ್ಡಿ ನಿತೀಶ್ ಕುಮಾರ್ ಆರ್.ಜೆ.ಡಿ ತೊರೆದು 53 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಜೊತೆ ಹೋಗಿದ್ದರು.ಇದರಿಂದ ಆರ್.ಜೆ.ಡಿ. ಅಧಿಕಾರ ಕಳೆದುಕೊಂಡಿತ್ತು. ಹೀಗಾಗಿ ಆರ್.ಜೆ.ಡಿ ಶಾಸಕರು ಪಕ್ಷದ ನಾಯಕ ತೇಜಸ್ವಿ ಯಾದವ್ ನೇತೃತ್ವದಲ್ಲಿ ರಾಜ್ಯಪಾಲ ಸತ್ಯಪಾಲ್ ಮಾಲಿಕ್ ಅವರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡನೆಗೆ ಅವಕಾಶ ಕೋರಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಪಕ್ಷ ತಾನು ನೇಮಿಸಿರುವ ರಾಜ್ಯಪಾಲರುಗಳ ಮೂಲಕ ಅಧಿಕಾರಕ್ಕಾಗಿ ನಡೆಸುತ್ತಿರುವ ಸರಕಾರ ರಚನೆ ಸಂಬಂಧ ತೆಗೆದುಕೊಳ್ಳುತ್ತಿರುವ ಗೊಂದಲಕಾರಿ ತೀರ್ಮಾನಗಳು ಪ್ರಜಾಪ್ರಭುತ್ವವನ್ನು ಆತಂಕಕ್ಕೆ ತಳ್ಳುತ್ತಿವೆ. ಕಾಂಗ್ರೆಸ್ ಮುಕ್ತ ಘೋಷಣೆ ಮಾಡಿ ಅಬ್ಬರದ ಚುನಾವಣೆಯ ಮೂಲಕ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಈಗ ತನ್ನ ತೀರ್ಮಾನಗಳಿಂದ ತಾನೇ ನಗೆಪಾಟಲಿಗೀಡಾಗಿದೆ.

ಬಿಜೆಪಿಯ ಈ ಆಕ್ರಮಣ ರಾಜಕೀಯದಿಂದ ಎಲ್ಲ ಪಕ್ಷಗಳೂ ಭೀತಿಗೊಂಡಿವೆ. ಈ ಭೀತಿ 2019ರಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳನ್ನು ಬಿಜೆಪಿ ವಿರುದ್ಧ ಒಟ್ಟುಗೂಡಿಸುವಂತೆ ಮಾಡಿದರೆ ಆಶ್ಚರ್ಯವಿಲ್ಲ. ಮಮತಾ ಬ್ಯಾನರ್ಜಿ, ಕಾಂಗ್ರೆಸ್, ಎಡ ಪಕ್ಷಗಳು ಹಾಗೂ ದಕ್ಷಿಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಟಿ.ಆರ್. ಚಂದ್ರಶೇಖರ ರಾವ್ ಈಗಾಗಲೇ ಈ ಸಂಬಂಧ ಆರಂಭಿಸಿರುವ ರಾಜಕೀಯ ನಡೆಗಳು ಇಂತಹ ಚರ್ಚೆಗೆ ಪುಷ್ಠಿ ಒದಗಿಸುವಂತಿವೆ.