ದೇವೇಗೌಡರ ಮೌನ, ಒಕ್ಕಲಿಗರ ಮೌನವೂ ಹೌದು: ಆದರದು ಸಮ್ಮತಿಯಲ್ಲ!
COVER STORY

ದೇವೇಗೌಡರ ಮೌನ, ಒಕ್ಕಲಿಗರ ಮೌನವೂ ಹೌದು: ಆದರದು ಸಮ್ಮತಿಯಲ್ಲ!

ಕ್ಷಮಿಸಿ, ರಾಜ್ಯದ ರಾಜಕೀಯ ಬೆಳವಣಿಗೆಯನ್ನು ಜಾತಿ ಆಧಾರದ ಮೇಲೆ ನೋಡುತ್ತಿರುವುದಕ್ಕೆ. ಆದರೆ ಪ್ರಜಾಪ್ರಭುತ್ವದ ಪ್ರಕ್ರಿಯೆಯೊಂದು ಜಾತಿ ಆಧಾರದ ಮೇಲೆ ನಾಚಿಕೆ ಬಿಟ್ಟು ನಡೆದ ಮೇಲೂ, ಈ ಬಗ್ಗೆ ಮಾತನಾಡದೆ ಇರಲು ಸಾಧ್ಯವೇ ಇಲ್ಲ. 

ಗುರುವಾರ, ಕರ್ನಾಟಕ ವಿಧಾನಸಭೆ ಫಲಿತಾಂಶ ಬಂದ ಎರಡನೇ ದಿನ, ಭಾರಿ ಬೆಳವಣಿಗೆಗಳಿಗೆ ರಾಜ್ಯದ ಜನ ಸಾಕ್ಷಿಯಾಯಿತು. ದಿನದ ಅಂತ್ಯದಲ್ಲಿ ನಿಂತು ನೋಡಿದರೆ, ಈ ಬೆಳವಣಿಗಳು ತೀರಾ ಅನಿರೀಕ್ಷಿತವೇನಲ್ಲ. ಆದರೆ ಆಘಾತಕಾರಿಯಾಗಿ ಕಾಣಿಸುತ್ತಿವೆ.

1947ರ ನಂತರ ಒಂದು ದೇಶವಾಗಿ, ಅದರೊಳಗೆ ಪುಟ್ಟ ರಾಜ್ಯಗಳಾಗಿ ಹಂಚಿಹೋಗಿದ್ದ ಜನರನ್ನು ಕಟ್ಟಿಹಾಕಿದ್ದು ಸಂವಿಧಾನ. ಸದ್ಯ ರಾಜ್ಯದ ರಾಜಕೀಯ ಪ್ರಕ್ರಿಯೆಗಳೂ ಅದೇ ಸಂವಿಧಾನದ ಆಧಾರದ ಮೇಲೆಯೇ ನಡೆಯುತ್ತಿವೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಆಳದಲ್ಲಿ ಸಂವಿಧಾನಕ್ಕೆ ಎದುರಾಗಿರುವ ಸಂಕೀರ್ಣತೆ, ಸಂವಿಧಾನದ ಭವಿಷ್ಯದ ಬಗೆಗಿನ ಅಸ್ಥಿರತೆ ಕಣ್ಣಿಗೆ ರಾಚುತ್ತಿದೆ. ಈ ಹಿನ್ನೆಲೆಯಲ್ಲಿ ಆಘಾತಕಾರಿಯಾಗಿ ಕಾಣಿಸುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಬಯಸುವವರಿಗೆ ರಾಜಕೀಯ ಬಲಾ ಬಲಗಳು, ನ್ಯಾಯಾಂಗ ಪ್ರಕ್ರಿಯೆಗಳು, ರಾಜಕೀಯ ಇತಿಹಾಸದ ಕನಿಷ್ಟ ಮಟ್ಟಿಗಿನ ಜ್ಞಾನದ ಅಗತ್ಯವೂ ಇದೆ.

ಹೀಗೊಂದು ಪೀಠಿಕೆಯೊಂದಿಗೆ ಗುರುವಾರ ನಡೆದ ಬೆಳವಣಿಗೆಗಳ ಸುತ್ತ ಒಮ್ಮೆ ಕಣ್ಣಾಡಿಸಿ. ಬೆಳಗ್ಗೆ ದೇವರ ಆಶೀರ್ವಾದ ಪಡೆದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ, ಹಿರಿಯ ರಾಜಕಾರಣಿ ಬಿ. ಎಸ್. ಯಡಿಯೂರಪ್ಪ 9 ಗಂಟೆಗೆಲ್ಲ ರಾಜ್ಯದ ಮುಖ್ಯಮಂತ್ರಿಯಾದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಾಜೂಬಾಯಿ ವಾಲ ಗೌಪ್ಯತಾ ನೀತಿಗಳ ಪ್ರಮಾಣವಚನ ಭೋಧಿಸಿದರು. ಇದನ್ನು ಓದುವಾಗ ಯಡಿಯೂರಪ್ಪ ನಡುವೆ ತಡವರಿಸಿದರು. ಕೊನೆಯಲ್ಲಿ ‘ರೈತರ ಹೆಸರಿನಲ್ಲಿ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಮೂರನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್‌ವೈ ಹಾಗೂ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ವಾಜೂಬಾಯಿ ವಾಲಾ. 
ಮೂರನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್‌ವೈ ಹಾಗೂ ಪ್ರಮಾಣ ವಚನ ಬೋಧಿಸಿದ ರಾಜ್ಯಪಾಲ ವಾಜೂಬಾಯಿ ವಾಲಾ. 
ಜಿ. ಮೋಹನ್

ಸಹಜವಾಗಿಯೇ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದು ಬಿಜೆಪಿ ಪಾಳಯದಲ್ಲಿ ಸಂತಸವನ್ನು ಉಂಟುಮಾಡಿತು.

ಇದೇ ವೇಳೆಗೆ, ಬಿಡದಿಯ ಈಗಲ್ಟನ್‌ ರೆಸಾರ್ಟ್ (ಹಿಂದೆ ಗುಜರಾತ್ ಕಾಂಗ್ರೆಸ್ ಸದಸ್ಯರು ತಂಗಿದ್ದು, ಐಟಿ ಅಸ್ತ್ರ ಪ್ರಯೋಗವಾಗಿದ್ದು ಇದೇ ರೆಸಾರ್ಟ್‌ನಲ್ಲಿ)ನಿಂದ ಶರ್ಮಾ ಟ್ರಾವೆಲ್ಸ್‌ ವೋಲ್ವೊ ಬಸ್‌ನಲ್ಲಿ ಕಾಂಗ್ರೆಸ್ ಶಾಸಕರು, ಶಾಂಗ್ರೀಲಾ ಹೋಟಲ್‌ನಲ್ಲಿ ಜೆಡಿಎಸ್‌ ಶಾಸಕರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಆರಂಭಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಸಹೋದರ, ಶಾಸಕ ಎಚ್. ಡಿ. ರೇವಣ್ಣ ಸೇರಿದಂತೆ ಎರಡೂ ಪಕ್ಷಗಳ ನಾಯಕರು, ಶಾಸಕರು ಪಾಲ್ಗೊಂಡಿದ್ದರು. ಬಿಜೆಪಿ ಅಧಿಕಾರದ ಬಲದಿಂದ ಸರಕಾರ ರಚನೆ ಮಾಡುತ್ತಿದೆ ಎಂದು ಅವರುಗಳು ಆರೋಪಿಸಿದರು. ವಿಶೇಷ ಅಂದರೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಚ್. ಡಿ. ದೇವೇಗೌಡ ಅವರಿಂದ ಒಂದೇ ಒಂದು ಹೇಳಿಕೆ ಹೊರಬೀಳಲಿಲ್ಲ.

ಗುರುವಾರ ಗಾಂಧಿ ಪ್ರತಿಮೆ ಮುಂದೆ ನಡೆದ ಕಾಂಗ್ರೆಸ್- ಜೆಡಿಎಸ್‌ ಜಂಟಿ ಪ್ರತಿಭಟನೆ. ಘೋಷಣೆಗಳಿಗಿಂತ ಅಲ್ಲಿ ದೇವೇಗೌಡರ ಮೌನವೇ ಹೆಚ್ಚು ಸದ್ದು ಮಾಡುತ್ತಿತ್ತು. 
ಗುರುವಾರ ಗಾಂಧಿ ಪ್ರತಿಮೆ ಮುಂದೆ ನಡೆದ ಕಾಂಗ್ರೆಸ್- ಜೆಡಿಎಸ್‌ ಜಂಟಿ ಪ್ರತಿಭಟನೆ. ಘೋಷಣೆಗಳಿಗಿಂತ ಅಲ್ಲಿ ದೇವೇಗೌಡರ ಮೌನವೇ ಹೆಚ್ಚು ಸದ್ದು ಮಾಡುತ್ತಿತ್ತು. 
ಜಿ. ಮೋಹನ್. 

ಹೀಗೆ, ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಅಧಿಕಾರ ಸ್ವೀಕಾರ, ಪ್ರತಿಭಟನೆಗಳು ನಡೆಯುತ್ತಿದ್ದರೆ ಅತ್ತ ದೇಶದ ರಾಜಧಾನಿಯ ಸುಪ್ರಿಂ ಕೋರ್ಟ್‌ ಆವರಣದಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗಳು ನಡೆದವು.

ಹಿರಿಯ ನ್ಯಾಯವಾದಿ ರಾಮ್‌ ಜೇಠ್ಮಾಲಾನಿ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅತ್ಯಂತ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಬಿಜೆಪಿಗೆ ಅಧಿಕಾರ ರಚಿಸಲು ರಾಜ್ಯಪಾಲರು ತೆಗೆದುಕೊಂಡ ನಿರ್ಧಾರ `ಸಂವಿಧಾನಬಾಹಿರ’ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೂ ವಕೀಲ ಅಮೃತೇಶ್ ಇದೇ ಮಾದರಿಯ ಅರ್ಜಿಯೊಂದನ್ನು ಸಲ್ಲಿಸಿದರು. ‘ಸಮಾಚಾರ’ದ ಜತೆ ಮಾತನಾಡಿದ ಅವರು ಹೇಳಿದ್ದು ಇಷ್ಟು:

ಜನಾದೇಶ ಆಗಿದೆ, ಸರ್ಕಾರ ರಚಿಸಲು ಬೇಕಾದ ಸರಳ ಬಹುಮತ ಬಿಜೆಪಿಯಲ್ಲಿ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸರ್ಕಾರ ರಚಿಸಲು ಮುಂದಾಗಿವೆ ಮತ್ತು ಸರಳ ಬಹುಮತಕ್ಕೆ ಬೇಕಾದ ಸಂಖ್ಯಾಬಲವನ್ನು ಹೊಂದಿವೆ. ಸಂಖ್ಯಾಬಲ ಹೊಂದಿಲ್ಲದಿದ್ದರೂ ವಿವೇಚಾನಾಧಿಕಾರ ಬಳಸಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿರುವುದು ಅಸಂವಿಧಾನಿಕ. ಬೇರೆ ಪಕ್ಷದ ಶಾಸಕರನ್ನು ಸೆಳೆಯಲು ರಾಜ್ಯಪಾಲರು ಅನುವು ಮಾಡಿಕೊಡುತ್ತಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟು ಎದುರಾಗಲು ರಾಜ್ಯಪಾಲರು ಕಾರಣರಾಗುತ್ತಿದ್ದಾರೆ. ರಾಜ್ಯಪಾಲರು ಪೂರ್ವಗ್ರಹಪೀಡಿತರಾಗಿದ್ದಾರೆ.
ಎನ್ ಪಿ ಅಮೃತೇಶ್‌, ವಕೀಲರು

ಇಂತಹ ನ್ಯಾಯಾಂಗ ಬೆಳವಣಿಗೆಗಳ ನಡುವೆಯೇ, ವಿಧಾನಸೌಧ ಪ್ರವೇಶಿಸಿದ ಯಡಿಯೂರಪ್ಪ ಮೂರನೇ ಬಾರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ 'ದೇವರ ಕೆಲಸ’ವನ್ನು ಆರಂಭಿಸಿದರು.

ಮುಖ್ಯಮಂತ್ರಿ ಚೇರ್‌ ಮೇಲೆ ಕೂರವ ಕ್ಷಣ ಮೊದಲು ಯಡಿಯೂರಪ್ಪ. 
ಮುಖ್ಯಮಂತ್ರಿ ಚೇರ್‌ ಮೇಲೆ ಕೂರವ ಕ್ಷಣ ಮೊದಲು ಯಡಿಯೂರಪ್ಪ. 
ಜಿ. ಮೋಹನ್. 

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರ ಸಂಘಗಳಲ್ಲಿನ ಹಾಗೂ ನೇಕಾರರ ಬೆಳೆ ಸಾಲ ಮನ್ನಾ ವಿಚಾರ ಪ್ರಸ್ತಾಪಿಸಿದರು. ಈ ಮೂಲಕ ರೈತಾಪಿ ಸಮುದಾಯದ ಮೂಗಿಗೆ ತುಪ್ಪ ಸವರುವ ಕಸರತ್ತು ಮಾಡಿದರು. ಬಿಜೆಪಿ ಕಚೇರಿಯಲ್ಲಿ ಸಂಜೆ ವೇಳೆಗೆ ನಡೆದ ಸಭೆಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಪ್ರಣಾಳಿಕೆಯನ್ನು ನೀಡಿದ ಘೋಷಣೆಗಳನ್ನು ನೆನಪು ಮಾಡಿಕೊಂಡರು. ಅಹಿಂದ ವರ್ಗಗಳು ತಮ್ಮ ಸರಕಾರಕ್ಕೆ ಸಮ್ಮತಿಸಬೇಕು ಎಂಬ ಇರಾದೆ ಇದ್ದ ಹಾಗಿತ್ತು.

ಇದರ ಜತೆಗೆ ಶಾಸಕರ ಖರೀದಿ, ರೆಸಾರ್ಟ್ ರಾಜಕಾರಣ, ನ್ಯಾಯಾಂಗ ಸಾಧ್ಯತೆಗಳು ಸುತ್ತ ಮಸಾಲೆಯಿಂದ ಕೂಡಿದ ಸುದ್ದಿಗಳಿಗೂ ಬರ ಇರಲಿಲ್ಲ. ಶುಕ್ರವಾರ ಸುಪ್ರಿಂ ಕೋರ್ಟ್ ತೆಗೆದುಕೊಳ್ಳುವ ತೀರ್ಮಾನದೆಡೆಗೆ ಈಗ ಇಡೀ ರಾಜ್ಯದ ಅಧಿಕಾರ ರಾಜಕಾರಣ ತಿರುಗಿ ಕುಳಿತುಕೊಂಡಿತು. ಈ ಮೂಲಕ ದಿನದ ಆಟಕ್ಕೆ ತೆರೆ ಬಿತ್ತು. ಇವು ಮೇಲ್ನೋಟದಲ್ಲಿ ನಡೆದ ಬೆಳವಣಿಗೆಗಳು.

ಕೊಂಚ ಆಳಕ್ಕಿದು ನೋಡಿದರೆ, ಕರ್ನಾಟಕದ ರಾಜಕಾರಣ ಕೇವಲ ಕಾಂಗ್ರೆಸ್- ಜೆಡಿಎಸ್‌ ಅಥವಾ ಬಿಜೆಪಿ ಆಳ್ವಿಕೆಗೆ ಮಾತ್ರವೇ ಸೀಮಿತವಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಈಗಾಗಲೇ ಮಾಯಾವತಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಗೋವಾದಲ್ಲಿ ವಿಧಾನಸಭೆ ‘ಹಂಸ ಕ್ಷೀರ ನ್ಯಾಯ’ವನ್ನು ಕೇಳಲು ಹೊರಟಿದೆ. ಬಿಹಾರದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಆರ್‌ಜೆಡಿ ಕೂಡ ಅಧಿಕಾರಕ್ಕಾಗಿ ದಾಳ ಉರುಳಿಸುವ ಸಾಧ್ಯತೆಗಳಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕುತೂಹಲ ಮೂಡಿಸಿರುವುದು ದೇವೇಗೌಡರ ಮೌನ.

ಬಿಜೆಪಿ ವರ್ಸಸ್‌ ಒಕ್ಕಲಿಗರು:

ಚುನಾವಣೆ ಸಮಯದಲ್ಲಿ ಅಭಿವೃದ್ಧಿ ಸುತ್ತ ಸುತ್ತಿದ ರಾಜಕಾರಣ ಫಲಿತಾಂಶ ಹೊರಬೀಳುತ್ತಲೇ ಅಧಿಕಾರದ ಸುತ್ತ ಸುತ್ತತೊಡಗಿದೆ. ಕರ್ನಾಟಕದ ಜನ ಯಾರಿಗೆ ಸರಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಅವರವರ ಮೂಗಿನ ನೇರಕ್ಕೆ ನ್ಯಾಯಾಲಯದ ಆದೇಶಗಳನ್ನು, ಗಳಿಸಿರುವ ಶೇಕಡವಾರು ಮತಗಳನ್ನು, ಸೀಟು ಲೆಕ್ಕಾಚಾರಗಳನ್ನು ಮಂಡಿಸಲಾಗುತ್ತಿದೆ.

ಚಲಾವಣೆಗಳಾದ ಮತಗಳನ್ನೇ ಆಧಾರವಾಗಿಟ್ಟುಕೊಂಡು ನೋಡಿದರೆ ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರಕಾರಕ್ಕೆ ನ್ಯಾಯಯುತಗಿ ಅಧಿಕಾರ ಸಿಗಬೇಕಿದೆ. ಸೀಟುಗಳ ಲೆಕ್ಕದಲ್ಲಿ ನೋಡಿದರೆ, ರಾಜ್ಯ ಜನ ಬಿಜೆಪಿಯನ್ನು ಸಿಂಗಲ್ ಲಾರ್ಜೆಸ್ಟ್‌ ಪಾರ್ಟಿಯನ್ನಾಗಿ ಒಪ್ಪಿಕೊಂಡಿದ್ದಾರೆ. ಆದರೆ ಒಂದೇ ಪಕ್ಷವಾಗಿ ಇಡೀ ರಾಜ್ಯವನ್ನು ಆಳಲು ಅನುಮತಿ ನೀಡಿಲ್ಲ. ಬಾಕಿ ಉಳಿದಿರುವುದು ಬಿಜೆಪಿ ಸರಳ ಬಹುಮತವನ್ನು ಅಡ್ಡದಾರಿ ಮೂಲಕವೇ ಪಡೆದುಕೊಳ್ಳುವುದು. ಇದು ಅಧಿಕಾರದ ಹಪಾಹಪಿಗೆ ಬಿದ್ದ ಬಿಜೆಪಿ ತೆಗೆದುಕೊಂಡ ನಿರ್ಧಾರದಂತೆ ಕಾಣಿಸುತ್ತಿದೆ. ಆದರೆ ಬಿಜೆಪಿ ಯಡಿಯೂರಪ್ಪರನ್ನು ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿಯಲ್ಲಿ ಪ್ರತಿಷ್ಠಾಪಿಸುವ ಹಿಂದೆ ಬೇರೆಯದೇ ಲೆಕ್ಕಾಚಾರಗಳಿದ್ದಂತಿದೆ.

ಏನೇ ದೇಶ, ಧರ್ಮ ಎಂದು ಮಾತನಾಡಿದರೂ ಅಂತಿಮವಾಗಿ ಬಿಜೆಪಿ ನಡೆಸುತ್ತಿರುವುದು ಕೂಡ ಜಾತಿ ರಾಜಕಾರಣವೇ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಪ್ರಬಲ ವೀರಶೈವ- ಲಿಂಗಾಯತರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ ಖುಷಿಯಲ್ಲಿದೆ. ಒಂದು ವೇಳೆ, ಸುಪ್ರಿಂ ಕೋರ್ಟ್‌ ತೀರ್ಪು ಅಥವಾ ಇನ್ಯಾವುದೇ ಬೆಳವಣಿಗೆಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ಬಂದರೆ ವೀರಶೈವ ಲಿಂಗಾಯರು ರೊಚ್ಚಿಗೇಳುತ್ತಾರೆ, ಅದು ಅನುಕಂಪದ ಅಲೆಯಾಗುವ ಮೂಲಕ ಲೋಕಸಭೆ ಚುನಾವಣೆ ವೇಳೆಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಇದನ್ನು ಬಿಜೆಪಿ ನಾಯಕರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ.

ಆದರೆ, ರಾಜ್ಯದ ಇನ್ನೊಂದು ಪ್ರಬಲ ಜಾತಿಯನ್ನು ಇದೇ ವೇಳೆಯಲ್ಲಿ ಬಿಜೆಪಿ ಮರೆತಂತೆ ವರ್ತಿಸುತ್ತಿದೆ. ಏನೇ ರೈತರ ಪಕ್ಷ ಅಂದರೂ ಜೆಡಿಎಸ್‌ ಬಲ ಇರುವುದು ಒಕ್ಕಲಿಗರ ಮನೆಗಳಲ್ಲಿರುವ ದೇವೇಗೌಡರ ಕುಟುಂಬದ ಬಗೆಗಿನ ಅಭಿಮಾನದಲ್ಲಿ. ಕುಮಾರಸ್ವಾಮಿ ಕೂಡ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿ. ಸಾಮಾಜಿಕ ಜಾಲತಾಣಗಳಿಂದ ಆರಂಭವಾಗಿ, ಪ್ರಚಾರ ಸಭೆಗಳವರೆಗೆ ಕುಮಾರಸ್ವಾಮಿ ಸೆಳೆದ ಜನರ ಸಂಖ್ಯೆ ಗಮನಾರ್ಹವಾದುದು. ಇದೀಗ, ಕುಮಾರಸ್ವಾಮಿ ಅಧಿಕಾರ ವಂಚಿತರಾಗಿರುವುದು ಒಕ್ಕಲಿಗ ಸಮುದಾಯದಲ್ಲಿ ಅಸಮಾಧಾನ ಕ್ರೋಢೀಕರಣಗೊಳ್ಳಲು ಕಾರಣವಾಗಿದೆ. ಕೊಂಚ ಹೆಚ್ಚುಕಡಿಮೆಯಾದರು ಅದು ಬಿಜೆಪಿ ವಿರುದ್ಧ ತಿರುಗುವ ಸಾಧ್ಯತೆಗಳಿವೆ.

ಹಾಸನದಂತಹ ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಖಾತೆಯನ್ನೇನೋ ತೆರೆದಿದೆ, ಆದರೆ ಅದೇ ವೇಳೆಗೆ ಮಂಡ್ಯದ ಏಳೂ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ, ಮಲೆನಾಡಿನ ಸೆರಗಿನಲ್ಲಿದ್ದ ಬಿಜೆಪಿ ಕೈಲಿದ್ದ ಕ್ಷೇತ್ರಗಳಲ್ಲಿ ಜೆಡಿಎಸ್‌ ಯಾಕೆ ಗೆದ್ದಿದೆ, ಅಲ್ಲಿನ ಮತದಾರರು ಬಿಜೆಪಿಯನ್ನು ಯಾಕೆ ತಿರಸ್ಕಾರದಿಂದ ನೋಡಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ.

ಇವತ್ತು ರಾಜ್ಯದ ಒಕ್ಕಲಿಗರ ಯುವಕರಲ್ಲಿ ಒಂದಷ್ಟು ಮಂದಿ ತಮ್ಮ ಹಿರಿಯರು ನಡೆದುಕೊಳ್ಳುತ್ತಿದ್ದ ರಣದ ಬನಗಳು, ಚೌಡಿ ಹರಕೆಗಳು, ಜೈನ ಎಡೆಗಳಂತಹ ಸಂಪ್ರದಾಯಗಳನ್ನು ಕೊಂಚ ಪಕ್ಕಕ್ಕಿಟ್ಟು ಮೋದಿ ಬಿತ್ತಿದ ‘ಅಚ್ಚೆ ದಿನ್’ ಜತೆ ಹೋಗಿದ್ದಾರೆ. ಅದು ಜಾತಿಯನ್ನು ಮೀರಿ, ಬದಲಾವಣೆ ಆಶಯದಿಂದ ಬೆಳೆದ ಅಭಿಮಾನ ಮತ್ತದು ತಾತ್ಕಾಲಿಕ ಅಷ್ಟೆ. ಒಂದು ವೇಳೆ, ತಮ್ಮದೇ ಒಕ್ಕಲುತನದ ಬೇರುಗಳು, ರೈತಾಪಿ ಜತೆಗಿನ ತಂತುಗಳು ನೆನಪಾದರೆ ಒಕ್ಕಲಿಗ ಸಮದಾಯ ಬಿಜೆಪಿ ಜತೆ ಹೊಂದಿಕೊಂಡು ಹೋಗುವುದು ಕಷ್ಟ ಇದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಯಾಕೆ ಸಾಧ್ಯವಾಗಿಲ್ಲ ಎಂಬುದರ ಹಿಂದಿರುವ ಮರ್ಮ ಇಷ್ಟೆ.

ಪ್ರತಾಪ್ ಸಿಂಹನಂತ ಕಟ್ಟರ್ ಹಿಂದುತ್ವವಾದಿ ಎನ್ನಿಸಿಕೊಳ್ಳಲು ಹವಣಿಸುವವರೂ, ಶೋಭಾ ಕರಾಂದ್ಲಾಜೆ ತರಹದ ನಾಯಕಿಯರು, ಸಿ. ಟಿ. ರವಿ, ಆರ್. ಅಶೋಕ್‌ ತರಹದ ದೇಶಪ್ರೇಮಿ ಬಿಜೆಪಿ ನಾಯಕರು ಕೂಡ ಚುನಾವಣೆ ಬಂದರೆ ತಮ್ಮನ್ನು ತಾವು ಒಕ್ಕಲಿಗರು ಎಂದು ಜನರಿಗೆ ನೆನಪು ಮಾಡಿಸುತ್ತಾರೆ. ಇದಕ್ಕೆ ಕಾರಣ, ಚುನಾವಣೆ ವಿಚಾರ, ಅಧಿಕಾರ ಹಂಚಿಕೆ ವಿಚಾರ ಬಂದಾಗ, ಜಾತಿ ಎಲ್ಲವನ್ನೂ ಮೀರಿ ಕೆಲಸ ಮಾಡುತ್ತದೆ ಎಂಬುದು ಅರ್ಥವಾಗಿದೆ. ಅದಕ್ಕೆ ಅಖಂಡತೆಯ ಅಜೆಂಡಾ ಇಟ್ಟುಕೊಂಡಿರುವ ಬಿಜೆಪಿ ಕೂಡ ಹೊರತಾಗಿಲ್ಲ ಅಥವಾ ಜಾತಿ ರಾಜಕೀಯಕ್ಕೆ ಅದಿನ್ನೂ ಪರ್ಯಾಯವನ್ನು ಕಂಡುಕೊಂಡಿಲ್ಲ.

ಈ ಹೊತ್ತಿಗೆ ಇದನ್ನೆಲ್ಲಾ ಖಂಡಿತಾವಾಗಿರುವ ಯೋಚಿಸಿರುವ ಎಚ್. ಡಿ. ದೇವೇಗೌಡರು ಮೌನಕ್ಕೆ ಶರಣಾಗಿದ್ದಾರೆ. ಅವರ ಜತೆಗೆ ಜೆಡಿಎಸ್‌ ಜತೆಗೆ ನಿಂತ ಒಂದು ಸಮುದಾಯ (ಇದರಲ್ಲಿ ಒಕ್ಕಲಿರ ಸಂಖ್ಯೆಯೇ ಹೆಚ್ಚು ಎಂಬುದರಲ್ಲಿ ಯಾವ ಅನುಮಾನವೂ ಬೇಡ) ಕೂಡ ಮೌನವಾಗಿಯೇ ಗಮನಿಸುತ್ತಿದೆ. ಸಿಎಂ ಯಡಿಯೂರಪ್ಪ ಮೊದಲ ದಿನವೇ ಬೆಳೆ ಸಾಲ ಮನ್ನಾ ಎನ್ನುವ ಮೂಲಕ ಈ ವರ್ಗದ ಅಸಮಾಧಾನ ಸಾರ್ವಜನಿಕವಾಗದಂತೆ ತಡೆಯುವ ಪ್ರಯತ್ನವನ್ನೇನೋ ಮಾಡಿದ್ದಾರೆ. ಆದರೆ, ಬೆಳೆ ಸಾಲ ಮನ್ನಾ ಮಾತ್ರವೇ ಒಕ್ಕಲಿಗರನ್ನು ತಣ್ಣಗಾಗಿಲು ಸಾಧ್ಯವಿಲ್ಲ. ಪ್ರಬಲ ಸಮುದಾಯದ ಅಧಿಕಾರದ ಹಪಾಹಪಿ ಕೂಡ ಬಿಜೆಪಿ ವಿರುದ್ಧ ನಿಲ್ಲುವಂತೆ ಮಾಡಲಿದೆ.

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಜೆಡಿಎಸ್‌ ಜತೆಗಿನ ಮೈತ್ರಿ ಮಾಡಿಕೊಳ್ಳದ ಕಾರಣಕ್ಕೆ ಸೀಟು ಗಳಿಕೆಯಲ್ಲಿ ಹೊಡೆತ ತಿಂದಿದೆ. ಇದೀಗ ಚುನಾವಣೆಯ ನಂತರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿಸುವ ಮೂಲಕ ಬಿಜೆಪಿ ಹೊಡೆತ ತಿನ್ನಲಿದೆ. ಈ ಕಾರಣಕ್ಕಾಗಿಯೇ, ದೇವೇಗೌಡರ ಮೌನ, ಒಕ್ಕಲಿಗರ ಮೌನವೂ ಹೌದು. ಆ ಮೌನ ಸಮ್ಮತಿ ಅಲ್ಲ ಎಂಬುದನ್ನು ಈ ಹೊತ್ತಿನಲ್ಲಿ ಬಿಜೆಪಿ ಮರೆತರೆ ಪರಿಣಾಮ ಎದುರಿಸಲೇಬೇಕಾಗುತ್ತದೆ.