ಡಿ. ಕೆ. ಶಿವಕುಮಾರ್‌ ಮುಂದಾಳತ್ವದಲ್ಲಿ ಕಾಂಗ್ರೆಸ್‌ ಶಾಸಕರ ರೆಸಾರ್ಟ್‌ ಪಯಣ
COVER STORY

ರಾಜ್ಯ ‘ಪ್ರಜಾಪ್ರಭುತ್ವ’ದ ಪರದೆಯ ಮೇಲೆ ರೆಸಾರ್ಟ್‌ ರಾಜಕಾರಣದ ಮರು ಪ್ರದರ್ಶನ!

ರಾಜ್ಯದಲ್ಲಿ ಮತ್ತೆ ರೆಸಾರ್ಟ್‌ ರಾಜಕಾರಣ ಶುರುವಾಗಿದೆ. ತಮ್ಮ ಶಾಸಕರನ್ನು ‘ರಕ್ಷಿಸಿ’ಕೊಳ್ಳಲು ಕಾಂಗ್ರೆಸ್‌ - ಜೆಡಿಎಸ್‌ ರೆಸಾರ್ಟ್‌ ರಾಜಕಾರಣದ ಮೊರೆ ಹೋಗಿವೆ. ರಂಗುರಂಗಿನ ಈ ನಾಟಕವನ್ನು ನೋಡುವ ಭಾಗ್ಯ ಈಗ ರಾಜ್ಯದ ಮತದಾರ ಪ್ರಭುವಿನದ್ದು.

ಮತ್ತೊಂದು ರೆಸಾರ್ಟ್‌ ರಾಜಕಾರಣದ ಪರಿಸ್ಥಿತಿಗೆ ಕರ್ನಾಟಕ ಸಾಕ್ಷಿಯಾಗಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಹತ್ತು ವರ್ಷದ ಹಿಂದಿನ ಆಪರೇಷನ್‌ ಕಮಲದ ನಂತರದಲ್ಲಿ ನಡೆದ ರೆಸಾರ್ಟ್‌ ರಾಜಕಾರಣವನ್ನು ನಾಡಿನ ಜನತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿವೆ. ರಾಜ್ಯದಲ್ಲಿ ನಿರ್ಮಾಣವಾಗಿರುವ ಅತಂತ್ರ ವಿಧಾನಸಭೆಯ ಕಾರಣದಿಂದ ರೆಸಾರ್ಟ್‌ ರಾಜಕಾರಣ ರಂಗುಪಡೆದುಕೊಳ್ಳುತ್ತಿದೆ.

ಕರ್ನಾಟಕದ 15ನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ರಾಜ್ಯದ ಮತದಾರರು ಯಾವ ಪಕ್ಷಗಳಿಗೂ ಬಹುಮತ ನೀಡಿಲ್ಲ. 103 ಸ್ಥಾನಗಳೊಂದಿಗೆ ಗೆದ್ದಿರುವ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಇನ್ನೂ 10 ಶಾಸಕರ ಬೆಂಬಲ ಬೇಕು. ಜೆಡಿಎಸ್‌ – ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಕಸರತ್ತಿಗೆ ತಡೆ ಒಡ್ಡಿರುವ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಸದ್ಯದ ಮಟ್ಟಿಗೆ ತನ್ನದಾಗಿಸಿದೆ.

ತಾವು ಹೇಳಿಕೊಂಡಂತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಶಾಸರನ್ನು ‘ರಕ್ಷಿಸಿಕೊಳ್ಳಲು’ ರೆಸಾರ್ಟ್‌ ಮತ್ತು ಹೋಟೆಲ್‌ಗಳಲ್ಲಿ ಇರಿಸಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಮತ್ತೆ ತಮ್ಮ ಶಾಸಕರನ್ನು ರೆಸಾರ್ಟ್, ಹೋಟೆಲ್‌ಗೆ ಕಳಿಸಿವೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಅಂದುಕೊಂಡಂತೆ ಆಗಿದ್ದರೆ ಗುರುವಾರ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬುಧವಾರ ರಾತ್ರಿ ನಡೆದ ರಾಜಕೀಯ ಬೆಳವಣಿಗೆಗಳು ಹಾಗೂ ಬಿಜೆಪಿಯ ರಾಜ್ಯಪಾಲರ ವಿವೇಚನಾಧಿಕಾರ ಯಡಿಯೂರಪ್ಪ ಅವರನ್ನು ಮೂರನೇ ಬಾರಿಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವಂತೆ ಮಾಡಿವೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದರೂ ಯಡಿಯೂರಪ್ಪ ಮುಖದಲ್ಲಿ ಸಂತೋಷದ ಬದಲು ಒಂದು ಬಗೆಯ ಆತಂಕವೊಂದು ಮನೆ ಮಾಡಿತ್ತು. ಬಹುಮತ ಸಾಬೀತು ಪಡಿಸಲು ಇರುವ ಸವಾಲು ಹಾಗೂ ತಮ್ಮ ಲೆಕ್ಕಾಚಾರಗಳೂ ಕೊನೆಯ ಕ್ಷಣದಲ್ಲಿ ಬುಡಮೇಲಾಗುತ್ತವೇನೋ ಎಂಬ ಆತಂಕ ಯಡಿಯೂರಪ್ಪ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಬುಧವಾರ ಮಧ್ಯಾಹ್ನದ ಹೊತ್ತಿಗೆ ಒಟ್ಟಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್ ಬಿಜೆಪಿ ಆಮಿಷಗಳಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ರೆಸಾರ್ಟ್‌ ಮತ್ತು ಹೋಟೆಲ್‌ನಲ್ಲಿ ಅವರಿಗೆ ವಾಸ್ತವ್ಯ ಕಲ್ಪಿಸಿವೆ. ಕಾಂಗ್ರೆಸ್ ಶಾಸಕರು ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದರೆ, ಜೆಡಿಎಸ್‌ ತನ್ನ ಶಾಸಕರನ್ನು ಬೆಂಗಳೂರಿನ ವಸಂತನಗರದಲ್ಲಿರುವ ಐಷಾರಾಮಿ ಶಾಂಗ್ರಿಲಾ ಹೋಟೆಲ್‌ನಲ್ಲಿರಿಸಿದೆ.

ಸರಕಾರ ರಚನೆಗೆ ರಾಜ್ಯಪಾಲ ವಜುಬಾಯ್‌ ವಾಲಾ ಬಿಜೆಪಿಯನ್ನು ಆಹ್ವಾನಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಪೀಠ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ನೀಡಲು ನಿರಾಕರಿಸಿದೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ನ್ಯಾಯಾಲಯದ ಅಂತಿಮ ಆದೇಶದ ಬದಲಾವಣೆಗಳಿಗೆ ಒಳಪಟ್ಟಿರಲಿದೆ ಎಂದು ನ್ಯಾಯಪೀಠ ಹೇಳಿದೆ. ಹೀಗಾಗಿ ಸುಪ್ರೀಂಕೋರ್ಟ್‌ ಆದೇಶ ಏನಾಗಲಿದೆಯೋ ಎಂಬ ಆತಂಕ ಬಿಜೆಪಿ ಸೇರಿದಂತೆ ಮೂರೂ ಪಕ್ಷಗಳಿಗೂ ಇದೆ.

ಸದ್ಯ ರೆಸಾರ್ಟ್‌ ಮತ್ತು ಹೋಟೆಲ್‌ನಲ್ಲಿರುವ ಶಾಸಕರ ಪೈಕಿ ಹಲವರನ್ನು ಸೆಳೆಯಲು ಬಿಜೆಪಿಯ ಈ ಹಿಂದಿನ ಆಪರೇಷನ್‌ ಕಮಲದ ಸೂತ್ರದಾರ ಜನಾರ್ದನ ರೆಡ್ಡಿ ಆಪ್ತ ಬಿ. ಶ್ರೀರಾಮುಲು ಮುಂದಾಗಿದ್ದಾರೆ. “ಕನಿಷ್ಠ ಹತ್ತು ಜನ ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ” ಎಂದು ಶ್ರೀರಾಮುಲು ಬಹಿರಂಗವಾಗಿಯೇ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರನ್ನು ಇರಿಸಿರುವ ಈಗಲ್‌ಟನ್‌ ರೆಸಾರ್ಟ್
ಕಾಂಗ್ರೆಸ್‌ ಶಾಸಕರನ್ನು ಇರಿಸಿರುವ ಈಗಲ್‌ಟನ್‌ ರೆಸಾರ್ಟ್

80ರ ದಶಕದಿಂದಲೇ ರೆಸಾರ್ಟ್ ರಾಜಕೀಯ!

ಕರ್ನಾಟಕದಲ್ಲಿ ರೆಸಾರ್ಟ್‌ ರಾಜಕೀಯ 80ರ ದಶಕದಿಂದಲೇ ನಡೆಯುತ್ತಿದ್ದರೂ ಅದು ರಾಜ್ಯದ ಗಮನ ಸೆಳೆದಿದ್ದು 2008ರ ಸಂದರ್ಭದಲ್ಲಿ. 80ರ ದಶಕದಲ್ಲಿ ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಆಂತರಿಕ ಸಮಸ್ಯೆಯ ಕಾರಣಕ್ಕೆ ತನ್ನ ಶಾಸಕರನ್ನು ಕರ್ನಾಟಕಕ್ಕೆ ಕರೆತಂದಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷ ತೆಲುಗುದೇಶಂ ಶಾಸಕರಿಗೆ ಆಶ್ರಯ ನೀಡಿತ್ತು.

ಆ ಬಳಿಕ ಕಾಂಗ್ರೆಸ್ ಮತ್ತು ಜನತಾದಳ ಸರ್ಕಾರಗಳ ಅವಧಿಯಲ್ಲಿ ರಾಜಕೀಯ ಅಸ್ಥಿರತೆ ಕಂಡುಬಂದಿದ್ದರೂ ರಾಜ್ಯದ ಮಟ್ಟಿಗೆ ರೆಸಾರ್ಟ್ ರಾಜಕೀಯ ಇರಲಿಲ್ಲ. ಆದರೆ 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗ ರೆಸಾರ್ಟ್ ರಾಜಕೀಯ ತನ್ನದೇ ಆದ ವೇಷದೊಂದಿಗೆ ವಿಜೃಂಭಿಸಿತ್ತು. ಪಕ್ಷಗಳು ತಮ್ಮ ಶಾಸಕರನ್ನು ಒಟ್ಟಾಗಿ ರೆಸಾರ್ಟ್‌ನಲ್ಲಿ ಇರಿಸುವ ಪರಿಪಾಠ ಹೆಚ್ಚಾಯಿತು.

ತಮ್ಮ ಪಕ್ಷದ ಗುರುತಿನಿಂದ ಗೆದ್ದು ಬಂದ ಶಾಸಕರು ಬೇರೆ ಪಕ್ಷದ ಆಮಿಷಕ್ಕೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ರೆಸಾರ್ಟ್‌ ರಾಜಕಾರಣ ಆರಂಭವಾಯಿತು. ಆದರೆ, 2008ರ ಬಿಜೆಪಿ ಸರಕಾರದ ಅವಧಿಯಲ್ಲಿ ಉಂಟಾದ ನಾಯಕತ್ವದ ಒಡಕಿನಿಂದಾಗಿ ಬೇರೆ ಬೇರೆ ಮುಖಂಡರ ಬಣಗಳು ತಮ್ಮ ತಮ್ಮ ಹಿಂಬಾಲಕರನ್ನು ಕರೆದುಕೊಂಡು ರೆಸಾರ್ಟ್‌ಗೆ ಹೋದರು.

2004ರ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರಕಾರದಿಂದ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಹೊರಬಂದು ಬಿಜೆಪಿ ಜತೆಗೆ ಸರಕಾರ ರಚಿಸಲು ಮುಂದಾದ ಸಂದರ್ಭದಲ್ಲಿ ರೆಸಾರ್ಟ್‌ ರಾಜಕಾರಣ ಎಂಬುದು ಬಣ್ಣ ಪಡೆದುಕೊಂಡಿತ್ತು. 2008ರಲ್ಲಿ 110 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಆಗ ಸ್ವತಂತ್ರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದ ಆರು ಮಂದಿ ಶಾಸಕರ ಪೈಕಿ ಮೂರು ಮಂದಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಗೂಳಿಹಟ್ಟಿ ಶೇಖರ್‌, ಶಿವರಾಜ್ ತಂಗಡಗಿ ಮತ್ತು ಡಿ. ಸುಧಾಕರ್‌ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು.

2017ರಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಕುದುರೆ ವ್ಯಾಪಾರದ ಭೀತಿಯಿಂದ ಗುಜರಾತ್‌ನ ತನ್ನ 17 ಶಾಸಕರನ್ನು ಕಾಂಗ್ರೆಸ್‌ ಕರ್ನಾಟಕಕ್ಕೆ ಕಳಿಸಿತ್ತು. ಡಿ.ಕೆ. ಶಿವಕುಮಾರ್‌ ಗುಜರಾತ್‌ ಶಾಸಕರನ್ನು ರೆಸಾರ್ಟ್‌ನಲ್ಲಿಟ್ಟುಕೊಂಡು ಆತಿಥ್ಯ ವಹಿಸಿಕೊಂಡಿದ್ದರು. ತಮಿಳುನಾಡಿನಲ್ಲಿ ರಾಜಕೀಯ ಅತಂತ್ರ ಸ್ಥಿತಿ ಉಂಟಾದ ಸಂದರ್ಭದಲ್ಲಿ ಮಡಿಕೇರಿಯ ರೆಸಾರ್ಟ್‌ನಲ್ಲಿ ತಮಿಳುನಾಡಿನ ಶಾಸಕರನ್ನು ಇರಿಸಲಾಗಿತ್ತು.

2008ರಲ್ಲಿ ಆಪರೇಷನ್ ಕಮಲದ ರೂವಾರಿಗಳಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಜೋಡಿಗೆ ಸುಷ್ಮಾ ಸ್ವರಾಜ್‌ ಆಶೀರ್ವಾದ
2008ರಲ್ಲಿ ಆಪರೇಷನ್ ಕಮಲದ ರೂವಾರಿಗಳಾದ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಜೋಡಿಗೆ ಸುಷ್ಮಾ ಸ್ವರಾಜ್‌ ಆಶೀರ್ವಾದ

ಆಪರೇಷನ್‌ ಕಮಲ

113ರ ಬಹುಮತ ತನಗೆ ಇದ್ದರೂ ಮುಂದೆ ಎದುರಾಗಬಹುದಾಗಿದ್ದ ಸಂಖ್ಯಾಬಲ ಕುಸಿತದ ಭೀತಿಯಿಂದ ಬಿಜೆಪಿ ಆಪರೇಷನ್‌ ಕಮಲಕ್ಕೆ ಮುಂದಾಯಿತು. ಜೆಡಿಎಸ್‌ನ 4 ಮತ್ತು ಕಾಂಗ್ರೆಸ್‌ನ 3 ಮಂದಿ ಶಾಸಕರನ್ನು ಬಿಜೆಪಿ ಆಪರೇಷನ್‌ ಕಮಲದ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಅಂದು ನಡೆದಿದ್ದ ಕುದುರೆ ವ್ಯಾಪಾರಕ್ಕೆ ಹೂಡಿಕೆ ಮಾಡಿದ್ದು ಬಳ್ಳಾರಿಯ ಗಣಿ ಸಹೋದರರು.

ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ್ದ ಹಣವನ್ನು ರಾಜಕಾರಣದ ಮೇಲೆ ‘ಹೂಡಿಕೆ’ ಮಾಡಿದ್ದ ಗಣಿಧಣಿಗಳು ಆಪರೇಷನ್‌ ಕಮಲದ ಮೂಲಕ ಗುಂಪು ಗುಂಪಾಗಿ ಶಾಸಕರನ್ನು ಕೊಂಡುಕೊಳ್ಳುವ ಪರಿಪಾಠಕ್ಕೆ ನಾಂದಿ ಹಾಡಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಜನಾರ್ದನ ರೆಡ್ಡಿ ಈ ಬಾರಿಯೂ ಶ್ರೀರಾಮುಲು ಮೂಲಕ ಆಪರೇಷನ್‌ ಕಮಲಕ್ಕೆ ಕೈ ಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ರಾಜ್ಯದಲ್ಲಿ ಒಂದು ಕಡೆ ರೆಸಾರ್ಟ್‌ ರಾಜಕಾರಣ ನಡೆಯುತ್ತಿದ್ದರೆ, ರೆಸಾರ್ಟ್‌ನಲ್ಲಿರುವ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನಗಳೂ ಬಿಜೆಪಿಯಿಂದ ನಡೆಯುತ್ತಿವೆ. ತಮ್ಮ ಶಾಸಕರನ್ನು ಭದ್ರವಾಗಿಟ್ಟುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್‌ ‘ಶ್ರಮಿಸು’ತ್ತಿದ್ದರೆ, ಬಿಜೆಪಿ ಬಹುಮತಕ್ಕಾಗಿ ಗಾಳ ಹಾಕಿಕೊಂಡು ಕೂತಿದೆ. ಈ ನಡುವೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಕೆಲ ಶಾಸಕರು ಬಿಜೆಪಿಯ ಈ ಗಾಳದ ಸಮೀಪಕ್ಕೆ ಹೋಗುತ್ತಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ.

ರಾಜಕೀಯ ಅನಿಶ್ಚಿತತೆಯ ಸಂದರ್ಭದಲ್ಲಿ ಶಾಸಕರು ತಾವು ಆರಿಸಿಬಂದಿರುವ ಪಕ್ಷಕ್ಕೇ ನಿಷ್ಠರಾಗಿರುತ್ತಾರೆ ಎಂದು ಹೇಳುವುದೂ ಕಷ್ಠ. ಹೀಗಾಗಿಯೇ ಕರ್ನಾಟಕದ ಪ್ರಜಾಪ್ರಭುತ್ವದ ತೆರೆಯ ಮೇಲೆ ರೆಸಾರ್ಟ್‌ ರಾಜಕಾರಣ ರಂಗು ರಂಗಾಗಿ ಪ್ರದರ್ಶನಗೊಳ್ಳುತ್ತಿದೆ, ನೋಡುವ ಭಾಗ್ಯ ‘ಪ್ರಜಾಪ್ರಭು’ವಿನದ್ದು.